ಕುದ್ರಗೋಡು ಕೇರೀಲಿ ವಿದ್ಯಾ ಬುದ್ಧಿ ವಿಚಾರ... (ಭಾಗ-1)

4.75

ಆ ಊರಿಗೆ ಕುದ್ರಗೋಡೆಂದು ಯಾಕೆ ಹೆಸರು ಬಂತೆಂದು ಯಾರಿಗೂ ಗೋತ್ತಿಲ್ಲ. ಗೆಳೆಯ ಗಜಾನನ 'ನೀ ನೋಡಬೇಕಾದ ಊರು' ಎಂದದ್ದರಿಂದ ಹೊರಟಿದ್ದೆವು. ಸಿರ್ಸಿ ತಾಲೂಕಿನ ಸಾಲ್ಕಣಿಯಿಂದ ಕುದ್ರಗೋಡಿಗೆ ಎಂಟು ಕಿಲೊಮೀಟರ್‌ ದೂರವಂತೆ. ಆದರೆ ಅಷ್ಟೇ ದೂರಕ್ಕೆ ಅಲ್ಲಿ ಏನೂ ಇಲ್ಲ! ಇದ್ದರೆ ಒಂದು ಗುಡಿಸಲು ಮಾತ್ರ. ಅಲ್ಲಿಂದ ಮೈಲು-ಅರ್ಧಮೈಲು-ಮುಕ್ಕಾಲು ಮೈಲು ದೂರಕ್ಕೆ ಒಂದೊಂದರಂತೆ ಮನೆಗಳು. ಅಲ್ಲಲ್ಲಿ ಹುಲ್ಲಿನ ಗುಡಿಸಿಲುಗಳು. ಪ್ರತಿಯೊಂದು ಮನೆಯ ಸುತ್ತ ಕಾಡು ಎಲ್ಲೋ ಕ್ಷೀಣ ನೀರಿನ ಸೆಲೆ, ಮನೆಯೆದುರು ಒಣಗಿಹೋದ ಗದ್ದೆಗಳು, ಕಾಯಿ ಬಿಡದ ತೆಂಗಿನಮರ, ಎಲುಬು ಎಣಿಸಬಹುದಾದ ದನಕರುಗಳು, ಹರಕು ಬಟ್ಟೆಯ, ದೊಡ್ಡ ಹೊಟ್ಟೆಯ ಮಕ್ಕಳು ಒಂದು, ಎರಡು, ಮೂರು, ನಾಲ್ಕು ಐದು.
 
ಕುದ್ರಗೋಡು ಇಷ್ಟೇ. ಇದಕ್ಕಿಂತ ಹೆಚ್ಚಿಗೆ ಅಲ್ಲಿ ಏನೂ ಇಲ್ಲ. ಇದು ಭಾರತದಲ್ಲಿ ಕಾಣುವ ಹಳ್ಳಿಗಳಲ್ಲಿ ಒಂದು. ಅದರಲ್ಲೇನು ವಿಶೇಷ ಎಂದು ಕೇಳುಬಹುದು. ನಿಜ, ದುರವಸ್ಥೆಗಳೇ ಹಳ್ಳಯ ಲಕ್ಷಣಗಳಾದರೆ ಭಾರತದ ಎಲ್ಲಾ ಹಳ್ಳಿಗಳೂ ಒಂದೇ ಎಂಬ ಮಟ್ಟಿಗೆ ಏಕತೆ ಸಾಧಿಸಿದ್ದೇವೆ. ಅಂಥಾ ಎದ್ದು ಕಾಣುವ ವ್ಯತ್ಯಾಸ ಕುದ್ರಗೋಡಲ್ಲಿ ಇಲ್ಲ. ಆದರೂ ಆ ಹಳ್ಳಿಯ ಬಗ್ಗೆ ಬರೆಯಬೇಕಾಗಿದೆ. ಅದುವೇ ಅದರ ವಿಶೇಷ!
 
ಕುದ್ರಗೋಡು ಕರಿಒಕ್ಕಲರ ಊರು-ಕೇರಿ. ನಮ್ಮದಲ್ಲದಿದ್ದರೂ ಅವರ ಕೂಗಳತೆಯ ದೂರದಲ್ಲಿ ಒಂದೊಂದರಂತೆ ಸುಮಾರು ಐವತ್ತು ಮನೆಗಳು ಆ ಕಾಡುಸೀಮೆಯಲ್ಲಿದ್ದಾವೆ. ಆ ಕಾಡಿನಲ್ಲಿ ಹುಡುಕಿದರೆ ಸಿಗುವುದು ಕಾಡುಹಂದಿಗಳು ಮತ್ತು ಕರಿ ಒಕ್ಕಲರು ಮಾತ್ರ ಎಂಬ ಮಟ್ಟಿಗೆ ಅದು ಕರಿಒಕ್ಕಲರದೇ ಸಾಮ್ರಾಜ್ಯ.. ಅಪರಿಚಿತರು ಯಾರೂ ಇಲ್ಲಿಗೆ ಕಾಲೆಳೆದುಕೊಂಡು ಬರುವುದಿಲ್ಲ. ಇವರು ಸಾಮಾನ್ಯವಾಗಿ ಹೋಗುವುದಿಲ್ಲ. ಹೀಗಾಗಿ ಇಲ್ಲಿಯ ಕರಿ ಒಕ್ಕಲರಿಗೆ, ಅದರಲ್ಲೂ ಅವರ ಹೆಂಗಸರು-ಮಕ್ಕಳಿಗೆ ಸಿರ್ಸಿಯೆಂದರೆ ಅಮೇರಿಕಾ ಇದ್ದ ಹಾಗೆ! ಬೆಂಗಳೂರು-ಮೈಸೂರುಗಳಂತೂ ಅವರ ಕಲ್ಪನೆಯ ನಕಾಶೆಯಲ್ಲೇ ಇಲ್ಲ!
 
ಇದು ಕಾರಣ-ಗುಡು ಗುಡು ಶಬ್ದದ ಬೈಕು ಬಂದಾಕ್ಷಣ ಹೆಂಗಸರು ಮೂಲೆ ಸೇರಿದರು. ಮಕ್ಕಳು ಓಡಿದವು-ಸತ್ತೆನೋ ಬದುಕಿದೆನೋ ಎನ್ನುವ ಹಾಗೆ. ಒಳೆಹೊಕ್ಕು ಬಂದ ನಾಲ್ಕಾರು ಮನೆಗಳುಲ್ಲೂ ಪ್ರೀತಿಯಿಂದ ಮಕ್ಕಳನ್ನು ಮಾತಾಡಿಸಬೇಕೆಂದುಕೊಂಡರೆ ಕೆಲವರು ಕಷ್ಟಕ್ಕೆ ಎದುರಿಗೆ ಕಾಣಿಸಿಕೊಂಡರು. ಇನ್ನು ಕೆಲವರು ಬರಲೇ ಇಲ್ಲ. ಹೊರಗೆ-ಸಂದುಗೊಂದುಗಳಲ್ಲಿ ಹೊಕ್ಕ ಇಲಿಗಳ ಹಾಗೆ.
 
ಗೌಡರ ಬಳಿ ಕುಶಲ ಮಾತಾಡಿದೆವು. “ನನಗೇನೋ ಹುಷಾರೈತೆ ಮಾರಾಯ್ರ. ದನಗೋಳಿಗೆ ಮಾತ್ರ ಯಾಕೊ ಸರಿಯಿಲ್ಲ...” ದ್ವಾವ ಬಾಯ್ಬಿಟ್ಟ. ಏನಾಗಿದೆಯೆಂದು ವಿಚಾರಿಸಿದರೆ ವಿಶೇಷವೊಂದು ಹೊರಬಿತ್ತು. ಇಡೀ ಊರಿನ ದನಗಳಿಗೆ ಕೆಲದಿನಗಳಿಂದ ಹೊಸ ರೋಗವೊಂದು ಗಂಟುಬಿದ್ದಿದೆ. ಅದೋ ಕರಿ ಒಕ್ಕಲರು ಕಂಡುಕೇಳರಿಯದ ರೋಗ. ಇಲ್ಲವಾದರೆ ತಾವೇ ಮದ್ದುಮಾಡುತ್ತಿದ್ದರು. ಅದೆಂದರೆ ಒಮ್ಮೆಲೇ ದನಕರುಗಳು ಉಪವಾಸ ಮುಷ್ಕರ ಹೂಡುತ್ತಿದ್ದವು. ಎರಡು-ಮೂರು ದಿನ ಒಟ್ಟೂ ಉಪವಾಸ. ಏನೂ ತಿನ್ನುವುದಿಲ್ಲವೆಂಬ ನಿರ್ಧಾರ. ನಂತರ ಎರಡು ದಿನ ಸರಾಗ ಮೇವು. ಒಂದು ಬೆಳಿಗ್ಗೆ ಮತ್ತದೇ ಸ್ರ್ಟೈಕು. ಆಗಲೇ ಹುಲಿಯಜ್ಜನ ಮನೇಲಿ ಒಂದು ಎತ್ತು ಸತ್ತೊಯ್ತು. ನಮ್ಮಲ್ಲೂ ಎಲ್ಲಾ ಬಡಕಾಗ್ತಾ ಬಂದ...'' ಅವರ ಕೊರಗು.
 
'ಏನು ಮಾಡಿದ್ದೀರಿ ಇದಕ್ಕೆ' ಎಂದು ಹೌಹಾರಿ ಪ್ರಶ್ನಿಸಿದರೆ ದ್ಯಾವ ಅಷ್ಟೇ ಸಮಾಧಾನದಿಂದ ಉತ್ತರಿಸಿದ! ''ನಮ್ಮ ಹುಲ್ದೇವರಿಗೆ ಹರಕೆ ಹೇಳಿಕೊಂಡಾಗಿದೆ. ಅದ್ಕೇ ಸಿರ್ಸಿಂದ ಒಂದು ಹಂದೀನೂ ತಂದಾಗಿದೆ. ಅದೇ ಅಲ್ಲೊಂದು ಗೂಡು ಮಾಡಿ ಹಂದೀನ ಸಾಕ್ಯೇವಿ. ನಾಳ್ಯಲ್ಲ ನಾಡಿದ್ದು ಬಲಿ ಒಪ್ಪಿಸಬೇಕು''
 
ನಾವು ಬಲೇ ಬುದ್ದಿವಂತರ ಹಾಗೆ 'ಬಲಿಕೊಟ್ರೆ ಹುಷಾರಾಗೋದಿಲ್ಲ. ಮೊದ್ಲು ಸಾಲ್ಕಣಿ ಆಸ್ಪತ್ರೆಗೆ ಕಳಿಸಿ ಔಷಧಿ ತರ್ಸಿ' ಅಂತ ಉಪದೇಶ ಮಾಡಿದ್ದು ಎಷ್ಟು ಪ್ರಯೋಜನಕ್ಕೆ ಬಂತೋಗೊತ್ತಿಲ್ಲ. ಮರುದಿನ ಸಾಲ್ಕಣಿಗೆ ಒಬ್ಬ ಹೊರಟಿರುವ ಸುದ್ದಿಯಂತೂ ಬಂದಿತ್ತು.
 
ಜಗತ್ತಿನಲ್ಲಿ ಬಹುಶಃ ಬೇರೆಲ್ಲೂ ಆಗದ ಸಾಧನೆ ಕುದ್ರಗೋಡಲ್ಲಿ ಆಗಿದೆ. ಅನೇನದು? ಮೂವತ್ತು ವರ್ಷಗಳ ಹಿಂದೆಯೇ(೧೯೫೯ರಲ್ಲಿ) ಶಾಲೆ ಆರಂಭವಾದ ದಾಖಲೆಯಿದೆ ಈ ಊರಿಗೆ. ಆದರೆ ಇಡೀ ಊರಲ್ಲಿ ಇಂದಿಗೂ ನಾಲ್ಕನೇ ಕ್ಲಾಸು ಪಾಸುಮಾಡಿದ ಮನುಷ್ಯ ಕೂಡಾ ಯಾರೂ ಇಲ್ಲ. ಹೇಗೆ ಲೆಕ್ಕ ಹಾಕಿದರೂ ಆಗಾದ ಈ ಒಗಟಿನ ಬಗ್ಗ ಸಾಲ್ಕಣಿಯ ಗ್ರಾಮಸ್ಥರನ್ನು ಕೇಳಿದರೆ ಅವರು ಹೇಳುವ ಕತೆ ಮಾತ್ರ ಈ ದೇಶದ ಹಳ್ಳಿ ಶಾಲೆಗಳ ದುರಂತಕ್ಕೊಂದು ವ್ಯಾಖ್ಯೆ .
 
ಆಗಿನಿಂದಲೂ ತಾಲೂಕು ಅಭಿವೃದ್ಧಿ ಮಂಡಲದ ವತಿಯಿಂದ ಶಾಲೆಯೊಂದಿತ್ತು. ಎಂಟು-ಹತ್ತು ಕಿ.ಮೀ. ನಡೆದುಕೊಂಡೇ ಬರಬೇಕು. ಅದೂ ಮಳೆಗಾಲದಲ್ಲಿ ಸಂಪರ್ಕ ಕಷ್ಟವಾದ ಈ ಕಾಡು ಹಳ್ಳಿಗೆ ಯಾವ ಮಾಸ್ತರ ಬರುತ್ತಾರೆ? ಅದೂ ಬರುವವರೆಲ್ಲಾ ಬ್ರಾಹ್ಮಣರು. ಈ ಕರಿಒಕ್ಕಲ ಕೇರಿಯಲ್ಲಿ ಎಲ್ಲಿ ಉಳಿಯುತ್ತಾರೆ? ಹೆಂಡತಿ ಮಕ್ಕಳನ್ನು ಕರೆತಂದು ಸಂಸಾರ ಹೂಡುವುದು ಅವರಿಗೆ ಕನಸಿನ ಮಾತಾದರೆ ಒಬ್ಬನೇ ಉಳಿದರೆ ಊಟಕ್ಕೆ ಗತಿಯಿಲ್ಲ. ಉಪ್ಪು ಖಾರ್ಚಾದರೂ ಹದಿನಾರು ಕಿ.ಮೀ. ಸುತ್ತಿ ಬರಬೇಕಾದ ಸ್ಥಿತಿಯಲ್ಲಿ ಯಾವ ಅಪ್ಪನ ಮಗ ಇಲ್ಲಿ ಬಂದು ವಿದ್ಯೆ ಕಲಿಸಿಯಾನು?
 
ಹೀಗಾಗಿ ಈವರೆಗೂ ಈ ಶಾಲೆಗೆ 'ತಳ್ಳಲ್ಪಟ್ಟ' ಮಾಸ್ತರರುಗಳ ಕತೆ ಏನಾಗಿದೆಯೋ ಊರವರಿಗೆ ಗೊತ್ತಿಲ್ಲ. ಪ್ರತಿವರ್ಷ ಹತ್ತೆಂಟು ದಿನ ಮಾಸ್ತರರು ಬರುತ್ತಾರೆ. ಆಗ ಎಂಕಾ, ಬೀರ, ದ್ಯಾವ, ರಾಮ್ಯಾ ದನಗಳನ್ನು ಅವುಗಳ ಪಾಡಿಗೆ ಬಿಟ್ಟು ಶಾಲೆಗೆ ಹೋಗುತ್ತಾರೆ. ಮತ್ತೆ ಒಂದು ವಾರದ ಬಳಿಕ ಮಾಸ್ತರರೇ ನಾಪತ್ತೆ! ಹೀಗೆ ಶಾಲೆಯ ನಾಟಕ ಶುರುವಾಗುವುದು ಮುಂದಿನ ವರ್ಷವೇ!! ಅದೂ ಬೇರೆ ಮಾಸ್ತರರಿಂದ. ಹೀಗಾಗಿ ಕಲಿಯುವ ಆಸೆಯಿಟ್ಟುಕೊಂಡಿದ್ದ ಇಲ್ಲಿಯ ಹುಡುಗರೆಲ್ಲರೂ ಮೀಸೆ ಬಂದರೂ ಇನ್ನೂ ಒಂದನೇ ಕ್ಲಾಸಿನಲ್ಲಿದ್ದಾರೆ. ಪ್ರತಿವರ್ಷ ಮಾಸ್ತರರು ಬಂದಾಗ ಇವರನ್ನು ಒಂದನೇ ಕ್ಲಾಸೆಂದು ಕೂರಿಸುತ್ತಾರೆ ಮುಂದೆ ಎರಡನೇ ಮೆಟ್ಟಿಲು ಹತ್ತಿಸಲು ಮಾಸ್ತರರು ಇರಬೇಕಲ್ಲ!!!!
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.