`ಕಾವೇರಿ'ದ‌ ಕಾವೇರಿ

4.5

    ಭಾವನಾತ್ಮಕತೆಯನ್ನು ಬದಿಸರಿಸಿ,  ಶತಕದಷ್ಟು  ಹಳೆಯದಾದ ನಮ್ಮ ಕಾವೇರಿ ವಿವಾದದ ವಸ್ತುಸ್ಥಿತಿಯ `ಸಮಗ್ರ' ಚಿತ್ರಣವನ್ನು  ನಮಗೇಕೆ  ಯಾರೂ ನೀಡುತ್ತಿಲ್ಲ? ನಮ್ಮ ಸರ್ಕಾರ, ಕೋರ್ಟಿನ ಮುಂದೊಂದು ಮಾತು, ನಮ್ಮ ಮುಂದೊಂದು ಮಾತನಾಡುತ್ತಿದೆಯಾ? ನಿಜಸ್ಥಿತಿಯನ್ನು ಅನಾವರಣಗೊಳಿಸದೇ ಜನರ  ಭಾವನೆಗಳೊಂದಿಗೆ ಚೆಲ್ಲಾಟವಾಡುವುದಾದರೂ ಏತಕ್ಕೆ? ಶಾಶ್ವತವಾಗಿ  ಇದನ್ನು ವೋಟ್‍ಬ್ಯಾಂಕ್  ಆಗಿಸಿ ಲಾಭ ಪಡೆಯುವ  ರಾಜಕೀಯವೇ? ಇಲ್ಲವಾದಲ್ಲಿ, ಕುಡಿಯುವ  ನೀರಿಗಿಂತ ಬೆಳೆಗೆ ನೀರು ಬಿಡುವುದೇ ಆದ್ಯತೆಯ‌ದ್ದು ಎಂಬ ಬಾಲಿಶ ತೀರ್ಪನ್ನು ಯಾರೂ ನೀಡುತ್ತಿರಲಿಲ್ಲ.
    ನಿಜಸ್ಥಿತಿ ತಿಳಿಸಿಯೂ, ಕೋರ್ಟ್ ಇಂಥಾ ತೀರ್ಪಿನ್ನಿತ್ತಿದೆಯೆಂದಾದರೆ, ನಮ್ಮ ನ್ಯಾಯ ವ್ಯವಸ್ಥೆ ಅಧೋಗತಿ  ತಲುಪಿದೆಯೆನ್ನುವುದರಲ್ಲಿ ಸಂಶಯವಿಲ್ಲ.  ಮಾಧ್ಯ‌ಮಗಳಲ್ಲಿ ಪ್ರಕಟವಾದಂತೆ, ನಮ್ಮಲ್ಲಿಯೇ  ಕುಡಿಯುವ ನೀರಿಗೇ  ತತ್ವಾರ ಅನ್ನುವುದನ್ನು ಕೋರ್ಟ್ ಮುಂದೆ ಸರಿಯಾಗಿ ಮಂಡಿಸಲು ನಾವು ವಿಫಲವಾದೆವೇ? ಅಥವಾ  ನಮ್ಮ ಮಾಹಿತಿ ಅಷ್ಟು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆಯಾ? ಅಥವಾ ನಮ್ಮ ನ್ಯಾಯವ್ಯವಸ್ಥೆಯಲ್ಲಿ ವಸ್ತುಸ್ಥಿತಿಗಿಂತ ಯಾರು ಹೇಗೆ  ವಾದ ಮಾಡಿದರು ಅನ್ನುವುದು ಮುಖ್ಯವಾಗುತ್ತಿದೆಯೋ? ಎಲ್ಲಿ ಎಡವುತ್ತಿದ್ದೇವೆಂದು  ತಿಳಿದೂ ತಿಳಿದೂ, ಅದೇ ತಪ್ಪನ್ನು ಪುನರಾವರ್ತಿಸುತ್ತಿದ್ದೀವಲ್ಲಾ  ಯಾಕೆ?  ನಮಗೆ ಸಮಸ್ಯೆ  ಬಗೆಹರಿಯುವುದು ಬೇಡವೇ?
    ಈ ಪಾಟೀ ಕೋಳಿ ಜಗಳಕ್ಕಾಗಿ  ಸಂಪನ್ಮೂಲವನ್ನು ವ್ಯಯಿಸುವುದನ್ನು ಬಿಟ್ಟು, ಪರ್ಯಾಯ  ಪರಿಹಾರಗಳ ಬಗ್ಗೆ ವ್ಯಯಿಸಿದ್ದಿದ್ದರೆ, ಈವರೆಗೆ ಕಾವೇರಿ ವಿವಾದದಲ್ಲಿರುತ್ತಿರಲಿಲ್ಲ.  ಸಾಕಷ್ಟು  ಇಂಗುಗುಂಡಿಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ, ಕಾವೇರಿಯ ಮೇಲೆ ಇಷ್ಟು  ಅತ್ಯವಲಂಬನೆಯನ್ನು ತಪ್ಪಿಸಬಹುದಾಗಿತ್ತು. ಡ್ಯಾಂ  ಸ್ಟೋರೇಜ್‍ಗಳಲ್ಲಿನ  ಹೂಳೆತ್ತಿಸಿ, ಈಗ ನಾವು ಹೇಳುತ್ತಿರುವ 9 TMC Dead storage ನ್ನು ಉಪಯುಕ್ತ ಸಂಗ್ರಹವನ್ನಾಗಿಸಬಹುದು. ಸರಿಯಾಗಿ ಮಳೆಯಾದ ವರ್ಷವಿರಲಿ, ಸಂಕಷ್ಟದ ವರ್ಷವಿರಲಿ, ಲಭ್ಯವಿರುವ ನೀರನ್ನು ಕುಡಿಯುವ ನೀರು ಹಾಗೂ  ಕಾವೇರಿ ನೀರನ್ನಾಶ್ರಯಿಸಿದ ಎರಡೂ ರಾಜ್ಯಗಳ ಕೃಷಿಭೂಮಿಯ  ಅನುಪಾತದಲ್ಲಿ ನೀರನ್ನು ಹಂಚಿಕೊಂಡಲ್ಲಿ ಯಾರಿಗೂ  ಅನ್ಯಾಯವಾಗದು. ಎಲ್ಲಕ್ಕೂ ಮೊದಲಿಗೆ, ಎರಡೂ ರಾಜ್ಯದ ನಾಯಕರು `ನಿಜಸ್ಥಿತಿ'ಯನ್ನು ಜನತೆಯ ಮುಂದಿಟ್ಟು, ಅವರ ಭಾವನೆಗಳ ಜೊತೆಗೆ ಚೆಲ್ಲಾಟವಾಡದಿದ್ದರೆ ಸಾಕು. ವಿವಾದ ಮಂಜಿನಂತೆ ಕರಗಿ ಹೋಗುತ್ತದೆ.  ಇದಕ್ಕೆ ಇಚ್ಛಾಶಕ್ತಿಯಿದ್ದಿದ್ದರೆ, ಕಾವೇರಿ ಈ ಪಾಟಿ `ಕಾವೇರಿ'ರುತ್ತಿತ್ತಿಲ್ಲ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.