ಕಾಳಪ್ಪನ ಕೈಚಳಕ

5

"ಹ್ವಾಯ್, ಅಮ್ಮಾ, ಒಂದು ತಿಂಗಳಾಯಿತಲೆ, ನೀವು ಹೇಳಿಕಳಿಸುವುದಕ್ಕೆ ಮರೆತದ್ದಾ? ನೀವು ಹೇಳಿ ಕಳಿಸದಿದ್ರೂ, ನಾನೇ ಬಂದೆ ಕಾಣಿ. ನಿಮ್ಗೆ ತೊಂದ್ರೆ ಆಪುಕಾಗ ಅಂತ ನೆನಪ್ ಮಾಡಿಕಂಡೆ ಕಾಣಿ, ನೀವು ಅದಕ್ಕೇ ಒಂದು ಕಾಫಿ ಜಾಸ್ತಿ ಕೊಡ್ಕ್ ನನಗೆ" ಎನ್ನುತ್ತಾ ಮುಂಜಾನೆ ನಸುಕಿನ ಹೊತ್ತು ದೊಡ್ಡ ದನಿಯಲ್ಲಿ ಮಾತನಾಡುತ್ತಾ, ಕಟಿಂಗ್ ಕಾಳಪ್ಪ ಬಂದ ಎಂದರೆ, ಆ ದಿನ ನನಗೆ ಕಟಿಂಗ್ ಖಚಿತ! ಸಾಮಾನ್ಯವಾಗಿ, ಭಾನುವಾರವೇ, ಅಂದರೆ, ಶಾಲೆಗೆ ರಜೆ ಇರುವ ದಿನ ನೋಡಿಕೊಂಡು, ಬೆಳಿಗ್ಗೆ ತಿಂಡಿಯ ಸಮಯಕ್ಕೆ ಸರಿಯಾಗಿ ವಕ್ಕರಿಸುತ್ತಿದ್ದ. ಕಟಿಂಗ್ ಕಾಳಪ್ಪ ಬಂದದ್ದು ಗೊತ್ತಾದರೆ, ನನಗೆ ಒಂದು ರೀತಿಯ ರೇಜಿಗೆ ಶುರು. ಅತ್ತ ಇತ್ತ ಕಣ್ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೆ, ಆದರೆ, ತಪ್ಪಿಸಿಕೊಳ್ಳಲು ಆಗುತ್ತಿರಲಿಲ್ಲ. ಇನ್ನೂ ತಲೆ ಕೂದಲು ಒಂದು ಇಂಚೂ ಬೆಳೆದಿಲ್ಲ, ತಲೆಯ ಮೇಲೆ ಕೈಆಡಿಸಿ, ಕೂದಲನ್ನು ಹಿಂದಕ್ಕೆ ದೂಡಿಕೊಂಡು ಕೆದರಿಕೊಂಡು ಓಡಾಡುವಂತಾಗಿಲ್ಲ, ಆಗಲೇ ಬಂದ ಇವನೊಬ್ಬ ಕಟಿಂಗ್ ಮಾಡಲು ಎಂಬ ಕೋಪ. ಅವನು ಮನೆ ಹತ್ತಿರ ಬಂದ ಎಂದರೆ, ನಾನು ಕಟಿಂಗ್ ಮಾಡಿಸಿಕೊಳ್ಳಲೇಬೇಕಿತ್ತು; ಇಲ್ಲ ಅನ್ನುವ ಸ್ವಾತಂತ್ರ ಇನ್ನೂ ದೊರೆತಿರದ ವಯಸ್ಸು ನನ್ನದು. ತಲೆಯ ಕೂದಲನ್ನು ಹಿಂದೆ ಮುಂದೆ ಬಿಡದೆ ಪೂರ್ತಿಯಾಗಿ ಕತ್ತಿರಿಸಿ ಹಾಕುತ್ತಿದ್ದ ಅವನ ಕಟಿಂಗ್ ಶೈಲಿಯಿಂದ, ನನ್ನ ತಲೆಯ ಅಂದವೇ ಕೆಡುತ್ತದೆನ್ನುವ ಭ್ರಮೆ ನನಗೆ ಅಂಟಿಕೊಂಡಿತ್ತು. , ಅವನ ಈ ಭೇಟಿಯ ಮುಖ್ಯ ಗುರಿ ನಾನಲ್ಲ. ಪ್ರತಿ ತಿಂಗಳೂ ಅವನಿಂದ ಕೇಶಮುಂಡನವನ್ನು ಅದೆಷ್ಟೋ ವರ್ಷಗಳಿಂದ ಮಾಡಿಸಿಕೊಳ್ಳುತ್ತಿದ್ದವರು ನಮ್ಮ ಅಮ್ಮಮ್ಮ. ಅವನು ಕಟಿಂಗ್ ಶುರು ಮಾಡುವ ಮೊದಲು, ಅವನ ತಂದೆಯಿಂದಲೇ ಮಾಸಿಕ ಕೇಶಮುಂಡನ ಮಾಡಿಸಿಕೊಳ್ಳಬೇಕಿತ್ತು ಅವರು. ೨೦ನೆಯ ಶತಮಾನದ ಮೊದಲ ಭಾಗದಲ್ಲಿದ್ದ ಅದೊಂದು ಅನಿಷ್ಟ ಸಂಪ್ರದಾಯಕ್ಕೆ ಒಳಗಾಗಿದ್ದ ಅವರಿಗೆ, ತಿಂಗಳಿಗೊಮ್ಮೆ ಕೇಶಮುಂಡನ ಒಂದು ರಿಚುಅಲ್ ಆಗಿತ್ತು - ಆ ಕ್ರಿಯೆಯ ನಂತರ, ಥೇಟ್ ಚಲನಚಿತ್ರದ ಫಣಿಯಮ್ಮನ ರೀತಿ ಅವರ ತಲೆ ಫಳ ಫಳ ಹೊಳೆಯುತ್ತಿತ್ತು. ನಮ್ಮ ಮನೆಯ ಕೇಶಮುಂಡನದ ಎಲ್ಲಾ ಹಕ್ಕುಗಳೂ ಕಟಿಂಗ್ ಕಾಳಪ್ಪನ ಕುಟುಂಬಕ್ಕೆ ಸೇರಿದ್ದರಿಂದ, ಪ್ರತಿ ತಿಂಗಳೂ ಒಂದು ಬೆಳಗ್ಗೆ ಬಂದು ತನ್ನ ಕರ್ತವ್ಯವನ್ನು ಕಾಳಪ್ಪ ಮಾಡುತ್ತಿದ್ದ. ಮೊದಮೊದಲೆಲ್ಲಾ, ಈ ಕೆಲಸಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಗೌರವಧನವಿತ್ತೆಂದು ಕಾಣುತ್ತದೆ. ಜೊತೆಗೆ, ಚೌತಿ ಹಬ್ಬದ ದಿನ ಇಂತಿಷ್ಟೇ ಸಂಖ್ಯೆಯ ಕಡುಬನ್ನು ಪಡೆಯುವ ಹಕ್ಕೂ ಅವನಿಗಿತ್ತು. ಆದರೆ, ಈಚಿನ ವರ್ಷಗಳಲ್ಲಿ, ಪ್ರತಿ ಕೆಶಮುಂಡನಕ್ಕೆ ನಾಲ್ಕಾಣೆಯೋ, ಅದೆಷ್ಟೋ ಆಗಿನ ದಿನಗಳಲ್ಲಿ ಪ್ರಚಲಿತವಿದ್ದ ಮಜೂರಿಯನ್ನು ವಸೂಲಿ ಮಾಡುತ್ತಿದ್ದ. ಜೊತೆಗೆ, ಬೆಳಗಿನ ತಿಂಡಿ, ಕಾಫಿಯ ಆತಿಥ್ಯ. ಮನೆಯ ಮುಂದಿನ ತೋಟದಲ್ಲಿ, ಮನೆಯಿಂದ ಸ್ವಲ್ಪದೂರ, ಅಡಿಕೆ ಮರಗಳ ಅಡಿಯಲ್ಲಿ, ಅಮ್ಮಮ್ಮನ ಕೇಶಮುಂಡನವಾದ ನಂತರ, ನಾನು ಅಲ್ಲಿ ಕಟಿಂಗ್ ಮಾಡಿಸಿಕೊಳ್ಳಬೇಕಿತ್ತು. ಕಟಿಂಗ್ ಕಾಳಪ್ಪನ ಎದುರು ತಲೆಬಗ್ಗಿಸಿ ಕೂತಾಗ, ಅವನು ತನ್ನ ಪುರಾತನ ಕತ್ತರಿಯ ಸಹಾಯದಿಂದ, ತನ್ನ ಕೈಚಳಕ ತೋರಿ ನನ್ನ ತಲೆಯಲ್ಲಿದ್ದ ಇದ್ದಬದ್ದ ಕೂದಲನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದ ಅವನ ಈ ಕೆಲಸಕ್ಕೆ ಅಮ್ಮಮ್ಮನ ಕುಮ್ಮಕ್ಕೂ ಇತ್ತು."ತಲೆ ಕೂದಲನ್ನು ಬುಡಕಡ್ಚಿ ಹತ್ತ ಕತ್ತರಿಸು, ಜಾಸ್ತಿ ದೊಡ್ಡ ಕೂದಲು ಇಪ್ಪುಕಾಗ. ಜಾಸ್ತಿ ಕೂದಲಾದರೆ, ಈ ಮಕ್ಕಳು ತಲೆಗೆ ಎಣ್ಣೆ ಹಾಕುದಿಲ್ಲೆ, ಜೊತೆಗೆ, ಗರ್ಮಿ ಆತ್." ಎಂದು ನನ್ನ ತಲೆಯಲ್ಲಿ ಉದ್ದನೆಯ ಕೂದಲು ತುಸುವೂ ಇರದಂತೆ ಕತ್ತರಿಸಲು ನಿರ್ದೇಶನ ನೀಡುತ್ತಿದ್ದರು. ಈ ನಿರ್ದೇಶನವನ್ನು ಶಿರಸಾವಹಿಸಿ ಪಾಲಿಸುವ ಕಾಳಪ್ಪನು, ಕೂದಲುಗಳನ್ನು ಸಣ್ಣಗೆ ಕತ್ತರಿಸಿ ಹಾಕುವುದಲ್ಲದೆ, ಕಿವಿಯ ಹತ್ತಿರದ ಸೈಡ್ ವಿಂಗ್ಸ್ ಜಾಗದಲ್ಲಿ, ಕೂದಲನ್ನು ಮೇಲಿನ ತನಕ ಹೆರೆದು, ಒಂದು ರೀತಿ ವಿರೂಪ ಮಾಡಿ ಇಡುತ್ತಿದ್ದ. "ಕಿವಿಯ ಹತ್ತಿರ ಸ್ವಲ್ಪ ಕೂದಲು ಇರಲಿ" ಎಂದು ನಾನು ಸಣ್ಣ ದನಿಯಲ್ಲಿ ಗೋಗರೆದರೆ, "ಎಂತ ಅಯ್ಯಾ,ನಿಮ್ಮಮ್ಮ ಅಲ್ಲಿ ದೊಡ್ಡ ಸ್ವರ ಮಾಡ್ಕಂಡು ಕೂದಲನ್ನೆಲ್ಲಾ ಕತ್ತರಿಸಿ ಹಾಕ್ ಅಂತಿದ್ರು, ನೀವು ಕಂಡ್ರೆ, ಕೂದಲನ್ನು ಸ್ವಲ್ಪ ಬಿಡು ಅಂತಿದ್ರಿ. ನಾನು ಯಾರಮಾತ ಕೇಂಬುದು? ಅಮ್ಮಮ್ಮ ಹೇಳಿದ ಹಾಂಗೆ ಕೆಣ್ ದಿರೆ, ನನಗೆ ಅವ್ರು ಸಮಾ ಬೈತರ್." ಎಂದು ತನ್ನ ಮಾಮೂಲಿ ಉತ್ತರ ನೀಡುತ್ತಾ, ಕಚಕ್ ಕಚಕ್ ಎಂದು ತನ್ನ ಕತ್ತರಿ ಸದ್ದನ್ನು ಮುಂದುವರಿಸುತ್ತಿದ್ದ.

"ಎಂತ ತಲೆ ಬಿಸಿ ಮಾಡ್ಕಣ್ ಬೇಡಿ ಅಯ್ಯ, ಎನ್ನೊಂದೆರಡು ದಿನದಲ್ಲಿ ನಿಮ್ಮ ಕೂದಲು ದೊಡ್ಡ ಆತ್" ಎಂಬ ಸಮಾಧಾನವನ್ನೂ ನೀಡುತ್ತಿದ್ದ. ಕಟಿಂಗ್ ಆದ ನಂತರ, ತುಳಸಿಗಿಡದ ಬುಡದ ಒಂದು ಚಿಟಿಕೆ ಮಣ್ಣಿನಿಂದ ತಲೆಯನ್ನು ಒರೆಸಿ, ಸ್ನಾನ ಮುಗಿಸಿ ಮನೆಯೊಳಗೆ ಪ್ರವೇಶ. , ಗುಮಾನಿ ನನಗೆ. ಆದರೆ ಅಂಥದ್ದೇನೂ ಅಂದುಕೊಂಡ ಮಟ್ಟದ ಅವಮಾನ ಆಗುತ್ತಿರಲಿಲ್ಲ. ಏಕೆಂದರೆ, ನಮ್ಮ ಸಹಪಾಠಿಗಳಲ್ಲಿ ಅನೇಕರಿಗೆ ಖಾಯಂ ಆಗಿ ಕಟಿಂಗ್ ಮಾಡುತ್ತಿದ್ದವನು ಇದೇ ಕಟಿಂಗ್ ಕಾಳಪ್ಪನೇ! ನಮ್ಮ ಹಳ್ಳಿಯಲ್ಲಿ ಆಗಿನ ದಿನಗಳಲ್ಲಿ ಎಬ್ಬರು ಈ ವೃತ್ತಿ ಮಾಡುತ್ತಿದ್ದರು. ಆದ್ದರಿಂದ ಹಳ್ಳಿಯ ಅರ್ಧಕ್ಕರ್ಧ ಭಾಗದ ಮನೆಗಳ ಮಕ್ಕಳೆಲ್ಲರೂ ಕಟಿಂಗ್ ಕಾಳಪ್ಪನ ಕೈಚಳಕ್ಕೆ ಒಳಗಾದವರೇ. ಅವರಲ್ಲಿ ಹೆಚ್ಚಿನವರಿಗೆ, ಈ "ಸಣ್ಣ ತಲೆಕೂದಲಿನ" ಪ್ರಯೋಗ ಆಗುತ್ತಿದ್ದುದರಿಂದ, ಎಲ್ಲರ ತಲೆಗಳೂ ಒಂದೇ ರೀತಿ ಕಾಣುತ್ತಿದ್ದವು ಎನ್ನಬಹುದು. ನಾನು ಹೋಗುತ್ತಿದ್ದ ಆ ಸರಕಾರಿ ಶಾಲೆಯಲ್ಲಿ, ಆಗ ಬಟ್ಟೆಯ ಯುನಿಫಾರಂ ಇಲ್ಲದಿದ್ದರೂ, ಕಟಿಂಗ್ ಶೈಲಿಯಲ್ಲಿ ಯುನಿಫಾರ್ಮಿಟಿ ಇತ್ತು. ಇದಕ್ಕೆ ಮುಖ್ಯ ಕಾರಣ ಕಟಿಂಗ್ ಕಾಳಪ್ಪನ ಕೈಚಳಕ!

ಮಾತಿನಲ್ಲಿ ಪ್ರವೀಣನೆಂದೇ ಹೇಳಬಹುದಾಗಿದ್ದ ಕಟಿಂಗ್ ಕಾಳಪ್ಪ, ನೋಡುವುದಕ್ಕೆ ಅಂದಿನ ಮಾನದಂಡದಲ್ಲಿ, ಸ್ವಲ್ಪ "ಸ್ಮಾರ್ಟ್" ಎಂದೇ ಹೇಳಬಹುದು. ಶುದ್ದ ಬಿಳಿ ಅಂಗಿ, ಬಿಳಿ ಪಂಚೆಯುಟ್ಟು, ತನ್ನ ಪರಿಕರಗಳಿದ್ದ ಪುಟ್ಟ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು, ಬೈಲುದಾರಿಯಲ್ಲಿ ಅವನು ನಡೆದು ಬರುವ ಶೈಲಿಯೇ ಒಂದು ಸೊಗಸು. ತಪ್ಪದೇ ಪ್ರತಿ ತಿಂಗಳೂ ನಮ್ಮ ಮನೆಯಲ್ಲಿ ಎರಡು ಕಟಿಂಗ್ ಮಾಡಿಹೋಗುತ್ತಿದ್ದ. ಬಂಧುಗಳ ಮನೆಯ ಹುಡುಗರು ಯಾರಾದರೂ ಬಂದಿದ್ದರೆ, ಅವರೂ ಒಮ್ಮೊಮ್ಮೆ ಕಾಳಪ್ಪನ ಕೈಚಳಕಕ್ಕೆ ಒಳಗಾಗುತ್ತಿದ್ದುದು ಉಂಟು. ಒಮ್ಮೊಮ್ಮೆ, ಘಟ್ಟದ ಮೇಲೆ ಇದ್ದ ನಮ್ಮ ತಂದೆ ಊರಿಗೆ ಬಂದಿದ್ದಾಗ, ಈ "ಕಟಿಂಗ್ ಮೇಳ" ಇದ್ದರೆ, ಕಟಿಂಗ್ ಕಾಳಪ್ಪನಿಗೆ ಹೆಚ್ಚಿನ ಸ್ಪೂರ್ತಿ ಬರುತ್ತಿತ್ತು. ಮನೆಯ ಅಂಗಳಕ್ಕೆ ಕಾಳಿಡುವಾಗಲೇ, ನಮ್ಮ ತಂದೆಯ ಊರಿಗೆ ಬಂದಿದ್ದನ್ನು ಕಂಡು, " ಹೋಯ್, ಬಾಬಯ್ಯ, ನಮಸ್ಕಾರ. ನೀವು ಬಂದದ್ ಒಳ್ಳೆದಾಯ್ತ್, ಕಾಣಿ. ನಿಮಗೂ ಇವತ್ ಒಂದುಕಟಿಂಗ್ ಮಾಡ್ತೆ." ಎಂದು ಪೀಠಿಕೆ ಹಾಕುತ್ತಿದ್ದ. ಆದರೆ, ಅವರು ಊರಿಗೆ ಬರುವ ಮುಂಚೆಯೇ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದುದೇ ಹೆಚ್ಚು. ಒಮ್ಮೊಮ್ಮೆ ಅವರ ತಲೆಯನ್ನೂ ಕಾಳಪ್ಪನ ಎದುರು ಬಗ್ಗಿಸಿ, ಅವನ ಕೈಚಳಕಕ್ಕೆ ಒಳಗಾಗುತ್ತಿದ್ದರು.

"ನಿಮ್ಮ ಒಂದೆರಡು ಹಳೆಯ ಅಂಗಿ ಇದ್ರೆ, ಕೊಡಿ, ನಿಮ್ಮ ಹೆಸರು ಹೇಳಿ ಹೈಕಂತೆ." ಎಂದು ಕೇಳಿದಾಗ, ಇಲ್ಲವೆನ್ನಲಾಗದೇ, ನಮ್ಮ ತಂದೆ ಅವನಿಗೆ ಒಂದೊ, ಎರಡೊ ಅಂಗಿ ಕೊಡುತ್ತಿದ್ದರು. ಹಳೆಯ ಅಂಗಿಗಳಿಲ್ಲದಿದ್ದರೆ, ಚೆನ್ನಾಗಿರುವುದನ್ನೇ ಕೊಡುವುತ್ತಿದ್ದರು. "ಪಾಪ, ಬಡವ" ಎಂಬ ಕನಿಕರದಿಂದ. ಹಳೆಯ ಅಂಗಿಗಳನ್ನು ಹುಡುಕಿಟ್ಟು, ಊರಿಗೆ ಬರುವಾಗ ತರುತ್ತಿದ್ದರು, ಕಟಿಂಗ್ ಕಾಳಪ್ಪ ಕೇಳಿಯೇ ಕೇಳುತ್ತಾನೆ ಎಂಬ ನಿರೀಕ್ಷೆಯಿಂದ.

ಕಟಿಂಗ್ ಕಾಳಪ್ಪನು ಸ್ವಲ್ಪ ಶೋಕಿ ಮನುಷ್ಯನೂ ಹೌದು ಎಂಬ ಗಾಳಿಸುದ್ದಿಗಳಿದ್ದವು. ಅವನಿಗೆ ಸಾರಾಯಿ ಕುಡಿಯುವ ಅಭ್ಯಾಸ ಉಂಟಂತೆ, ಅಪರೂಪಕ್ಕೆ ಕುಡೀತಾನಂತೆ ಎಂಬ ಗುಸು ಗುಸು ಇತ್ತು. ಅಂದು ಕುಡಿತವೆಂದರೆ ದೊಡ್ಡ ಅಪರಾಧವಾಗಿದ್ದುದರಿಂದ, ಇದೊಂದೇ ಚಟ ಅವನ ಹೆಸರನ್ನು ಕೆಡಿಸಲು ಸಾಕಿತ್ತು. ಸಾಲವಾಗಿ ದುಡ್ಡು ಇಸಿದುಕೊಳ್ಳುವ ಚಟ ಸಹಾ ಅವನಿಗಿತ್ತು. ಆ ಸಾಲವನ್ನು ವಾಪಸು ಮಾಡುತ್ತಿದ್ದುದು ಯಾವಾಗಲೋ. ಸಣ್ಣ ಪುಟ್ಟ ಸಾಲಗಳಾದರೆ, ಸಾಲಕೊಟ್ಟವರ ಮನೆಯವರಿಗೆ ಅದೆಷ್ಟೋ ಸಲ ಕಟಿಂಗ್ ಮಾಡಿ, ಮಾಡಿ ತೀರಿಸಿದ್ದೂ ಉಂಟಂತೆ. ಬಾಕಿ ಶಿಲ್ಕನ್ನು ಸಾಲಕೊಟ್ಟವರು ಮನ್ನಾ ಮಾಡಬೇಕಾಗುತ್ತಿತ್ತು. ಮತ್ತೊಂದು ಘಟನೆಯಿಂದ ಕಟಿಂಗ್ ಕಾಳಪ್ಪನ ಕೈಚಳಕದ ಪರಿಯನ್ನು ಹಳ್ಳಿಯವರೆಲ್ಲರೂ ತಿಳಿಯುಂತಾಯ್ತು.

ಆಗಿನ ದಿನಗಳಲ್ಲಿ, "ಚಿನ್ನದ ಆಭರಣಗಳನ್ನು ಕಡ ನೀಡುವ" ಪದ್ದತಿ ಇತ್ತು! ಅದು ಹೇಗೆಂದರೆ, ಚಿನ್ನದ ಸರ, ಬಳೆಗಳನ್ನು ಸ್ವಂತವಾಗಿ ಮಾಡಿಸಿಕೊಳ್ಳಲು ಅನುಕೂಲ ಇಲ್ಲದವರು, ವಿಶೇಷ ಸಮಾರಂಭಕ್ಕಾಗಿ, ಉಳ್ಳವರ ಮನೆಯಿಂದ ಆಭರಣಗಳನ್ನು ಒಂದು ದಿನದ ಮಟ್ಟಿಗೆ ಸಾಲವಾಗಿ ಪಡೆಯುವ ಪದ್ದತಿ. "ಮಗಳ ಮದುವೆ, ಚಿನ್ನ ಕೊಡಿ" ಎಂದು ಉಳ್ಳವರ ಬಳಿ ಪಡೆದು, ಮದುವೆಯ ದಿನ ಮಗಳ ಕೊರಳಿಗೆ ಸರ ಹಾಕಿ, ಮದುವೆಯಾದ ನಂತರ ಜೋಪಾನವಾಗಿ ಆ ಸರವನ್ನು ಮಾಲಿಕರಿಗೆ ಹಿಂತಿರುಗಿಸುತ್ತಿದ್ದರು. ಈ ರೀತಿಯ ಕೊಡು - ಕೊಳ್ಳುವಿಕೆಯ ವ್ಯವಹಾರವು ಹಳ್ಳಿಯ ಜನರಲ್ಲಿ ಅಂದು ಪರಸ್ಪರ ಇದ್ದ ವಿಶ್ವಾಸದ ಪ್ರತೀಕವೇ ಆಗಿತ್ತು.

ಕಟಿಂಗ್ ಕಾಳಪ್ಪನೂ ಚಿನ್ನದ ಆಭರಣ ಮಾಡಿಸಲು ಅನುಕೂಲ ಇಲ್ಲದ ಮನೆಯವನಾಗಿದ್ದ. ಮಗಳ ಮದುವೆಗೆಂದು, ಸಮೀಪದ ಜಮೀನುದಾರರಾದ ಶೆಟ್ಟರ ಮನೆಯಿಂದ ಎರಡೆಳೆ ಚಿನ್ನದ ಸರವನ್ನು ಸಾಲವಾಗಿ ತಂದ. ಮಗಳಿಗೆ ಚಿನ್ನದ ಸರದ ಅಲಂಕಾರ ಮಾಡಿ, ಮದುವೆಯಾದ ನಂತರ, ಆ ಎರಡೆಳೆ ಚಿನ್ನದ ಸರವನ್ನು ವಾಪಸು ಮಾಡಲೇ ಇಲ್ಲ!

" ಸರ ಎಲ್ಲಿ, ವಾಪಸು ಕೊಡು" ಎಂದು ಸರದ ಮಾಲಿಕರಾದ ಶೆಟ್ಟರು ದಬಾಯಿಸಿದರು.

"ನಿಮ್ಮ ಸರ ಎಲ್ಲೂ ಹೋಗಿಲ್ಲ,ಮಾರಾಯ್ರೆ! ಅದು ಬ್ಯಾಂಕಿನಲ್ಲಿ ಭದ್ರವಾಗಿ ಉಂಟು!" ಎಂದು ಉತ್ತರಿಸಿದ ಆ ಭೂಪ. ಒಂದು ದಿನದ ಮಟ್ಟಿಗೆ ಸಾಲವಾಗಿ ತಂದಿದ್ದ ಚಿನ್ನದ ಸರವನ್ನು ಬ್ಯಾಂಕಿನಲ್ಲಿ ಇಟ್ಟು ಸಾಲ ತೆಗೆದಿದ್ದ! ಸರದ ಮಾಲಿಕರು ಮತ್ತಷ್ಟು ಗಲಾಟೆ ಮಾಡಿದರು.

"ನಿಮ್ಮ ಸರವನ್ನು ನಾನು ಮಾರಿದ್ದೀನಾ? ಇಲ್ಲ! ಅದೇ ನನ್ನ ಸಾಚಾತವನ್ನು ತೋರಿಸುತ್ತದೆ! ಅದನ್ನು ಬ್ಯಾಂಕಿನಲ್ಲಿ ಇಟ್ಟು ಸಾಲ ತೆಗೆದಿದ್ದು ಉಂಟು, ಮಾರಾಯ್ರೆ. ಸಾಲ ತೀರಿಸಿ, ನಿಮ್ಮ ಸರ ವಾಪಸ್ ಕೊಡ್ತೆ. ನಿಮ್ಮ ಸರ ನನಗ್ಯಾಕೆ ಬೇಕು? ಆ ರೀತಿ ನಿಮ್ಮ ಸರವನ್ನು ನಾನು ಹೊಡೆದುಕೊಂಡು ಹೋತಿಲ್ಲೆ. ನೀವೇನು ಚಿಂತೆ ಮಾಡಬೇಡಿ" ಎಂದು ಕಾಳಪ್ಪ ಭಂಡತನದಿಂದ ಸಮಜಾಯಿಷಿ ಹೇಳಿದ. ನಂತರ, ಕೆಲವು ದಿನಗಳಲ್ಲಿ ಬ್ಯಾಂಕಿನ ಸಾಲವನ್ನು ಕಟ್ಟಿ ಚಿನ್ನವನ್ನು ಬಿಡಿಸಿಕೊಟ್ಟು, ನುಡಿದಂತೆ ನಡೆದ!

ಈ ಘಟನೆಯ ಸಮಯಕ್ಕಾಗಲೇ, ನಾವೆಲ್ಲ ಹುಡುಗರು ದೊಡ್ಡವರಾಗಿದ್ದೆವು. ಹೈಸ್ಕೂಲು, ಕಾಲೇಜು ಅಂತ ಬೇರೆ ಬೇರೆ ಶಾಲೆಗಳ ನೀರು ಕುಡಿದು, ಸಾಕಷ್ಟು ಚತುರರಾಗಿದ್ದೆವು. ಪ್ರತಿ ತಿಂಗಳು ಅವನ ಎದುರು ತಲೆಬಗ್ಗಿಸಿ, ಕುಕ್ಕರುಗಾಲಿನಲ್ಲಿ ಕೂರುವ ಬದಲು, ಪೇಟೆಯಲ್ಲಿ ಆ ಕೆಲಸವನ್ನು ಮಾಡಿಸಿಕೊಳ್ಳಲು ಆರಂಭಿಸಿದ್ದೆವು. ಕಟಿಂಗ್ ಶಾಪಿನ ದೊಡ್ದ ಕನ್ನಡಿಯ ಮುಂದೆ ನಮ್ಮ ಮುಖದ "ಅಂದ-ಚಂದ" ನೋಡುತ್ತಾ, "ಇಲ್ಲಿ, ಸ್ವಲ್ಪ ಕತ್ತರಿಸು, ಇಲ್ಲಿ ಜಾಸ್ತಿ ಕೂದಲು ಬಿಡು. ಅಮಿತಾಬ್ ಬಚ್ಚನ್ ಶೈಲಿ ಕೂದಲು ಬಿಡ್ತೇನೆ, ಜಾಸ್ತಿ ಕತ್ತರಿಸಬೇಡ, ಹಿಪ್ಪಿ ಸ್ಟೈಲ್ ಕೂದಲು ಬಿಡುವುದಿಕ್ಕೆ ಏನೇನು ಮಾಡಬೇಕು" ಎಂದು ಕಟಿಂಗ್ ಹುಡುಗನಿಗೆ ಹೇಳುತ್ತಾ, ಪೇಟೆಯ ಸಲೂನುಗಳಲ್ಲೇ ಕಟಿಂಗ್ ಮಾಡಿಸಿಕೊಳ್ಳುತ್ತಿದ್ದೆವು.

ಹಳ್ಳಿಯ ಹುಡುಗರೆಲ್ಲಾ ಹೈಸ್ಕೂಲು, ಕಾಲೇಜು ಸೇರಿ, ಪೇಟೆಯಲ್ಲೇ ಕಟಿಂಗ್ ಮಾಡಿಸಿಕೊಳ್ಳುವ ಕಾಲ ಬಂದಂತೆ, ಕಟಿಂಗ್ ಕಾಳಪ್ಪನ ವ್ಯಾಪಾರವೂ ಕಡಿಮೆಯಾಗುತ್ತಾ ಬಂತು. ಆತನ ಜೀವನ ನಿರ್ವಹಣೆಯೂ ಕಷ್ಟವಾಗತೊಡಗಿತು. ಹಿಂದಿನ ದಿನಗಳಲ್ಲಿ ಅನಿವಾರ್ಯವಾಗಿ ಅವನ ಕೈಚಳಕಕ್ಕೆ ಒಳಗಾಗಿದ್ದವರೆಲ್ಲಾ, ಅವನನ್ನು ಅದೇನೋ ಒಂದು ರೀತಿಯ ನಿರ್ಲಕ್ಷ್ಯದಿಂದ ಕಾಣತೊಡಗಿದರು. ಪೇಟೆಯಲ್ಲಿ ಕಲಿತ ನಮ್ಮಂತಹ ಹುಡುಗರೆಲ್ಲಾ, ಕೆಲಸ ಹುಡುಕಿಕೊಂಡು ಇನ್ನೂ ದೂರದ ಪಟ್ಟಣ, ನಗರಗಳಿಗೆ ವಲಸೆ ಹೋಗಿ, ಅವನ ಖಾಯಂ ಗಿರಾಕಿಗಳ ಸಂಖ್ಯೆಯೂ ಕಡಿಮೆಯಾಯ್ತು. ಕೆಲವು ಸಮಯದ ನಂತರ ಅವನು ಊರು ಬಿಟ್ಟು ಬೇರೆಲ್ಲಿಗೋ ಹೋದನಂತೆ ಎನ್ನುತ್ತಿದ್ದರು ನಮ್ಮ ಹಳ್ಳಿಯವರು.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):