ಕಾಲದ ಗಡಿಯಾರ

4.5

ಕಾಲದ ಗಡಿಯಾರದ ನಿರಂತರ ಓಟ ಮತ್ತೊಂದು ವರ್ಷದತ್ತ ಇಣುಕುತ್ತ ಹೊಸವರ್ಷದ ಕದ ತೆರೆಸಿದೆ. ಕಾಲಕದು ಎಂದಿನ ಸಾಮಾನ್ಯ ಯಾನ, ಬದಲಾಗುವ ಸಹಜ ಋತು ಚಿತ್ರ. ಆ ಕಾಲದ ಬಯಲಲ್ಲಿ ತನ್ನೆಲ್ಲ ನಡುವಳಿಕೆಗಳ ಚೀಲ ಬಿಚ್ಚಿಟ್ಟ ಜೀವ ರಾಶಿಗೆ ಈ ಬದಲಾವಣೆಯ ತುದಿ ಮೊದಲ ಅಂಚುಗಳೆಂದರೆ ಏನೊ ಕುತೂಹಲ, ಅದಮ್ಯ ಉತ್ಸಾಹ. ಒಂದೆಡೆ ಮುಗಿದು ಹೋದ ತುದಿ ಗಳಿಸಿದ್ದೆಷ್ಟು , ಉಳಿಸಿದ್ದೆಷ್ಟು ಎಂಬ ಲೆಕ್ಕಾಚಾರಕ್ಕಿಳಿದರೆ ಹೊಸತಿನ ಆರಂಭದ ತುದಿಗೆ ಮುಂದೇನು ಅಡಗಿದೆಯ ಎಂಬ ಕುತೂಹಲವನ್ನು ಕೆದಕುವ ಹುನ್ನಾರ. ಒಟ್ಟಾರೆ ಮುಗಿಯುತ್ತ ಬಂದ ವರ್ಷ ಹಾಗೂ ಆರಂಭವಾಗುತ್ತಿರುವ ಹೊಸವರ್ಷದ ಸಂಧಿಕಾಲ ಎಲ್ಲರಲ್ಲು ಒಂದಲ್ಲ ಒಂದು ಬಗೆಯ ಸಂಚಲನೆ ಮೂಡಿಸುವುದು ಸುಳ್ಳಲ್ಲ - ಕೆಲವರಲ್ಲಿ ಹೆಚ್ಚು ಮತ್ತೆ ಕೆಲವರಲ್ಲಿ ಕಡಿಮೆಯ ಮಟ್ಟ ಎನ್ನುವುದನ್ನು ಬಿಟ್ಟರೆ.

ಯಾಂತ್ರಿಕ ಬದುಕಿನ ಏಕತಾನತೆಗೆ ತುಸು ಬೆನ್ನು ಹಾಕಿ ಈ ಕಾಲ ಚಲನೆಯ ಪರಿಯನ್ನು ಗಮನಿಸಿದರೆ ಉಂಟಾಗುವ ವಿಸ್ಮಯವೆ ಅದ್ಭುತ. ಯಾರು ಈ ಗಡಿಯಾರಕೆ ಕೀಲಿ ಕೊಟ್ಟು ನಡೆಸುತಿರುವ ವಿಧಾತನೆಂಬ ಪ್ರಶ್ನೆಗೆ ಉತ್ತರದ ಹುಡುಕಾಟ ನಿರಂತರ. ಯಾರ ಸೇವಾರ್ಥದಲಿ ನಡೆದ ಪ್ರಕೃತಿಯ ಕಾರುಬಾರು, ಕರಾರುವಾಕ್ಕು ಲೆಕ್ಕಾಚಾರದಲೆಳೆವ ಈ ಅಗಣಿತ ಶಕ್ತಿಯ ಮೂಲ, ಆಳ ಅಗಲ ಅಳೆಯಲಾಗದ ಕಾಲ ವಿಸ್ತಾರದ ಅನಂತ ಶೂನ್ಯ - ಎಲ್ಲವೂ ಅರಿವು, ತಿಳಿವಿನ ವ್ಯಾಪ್ತಿಯ ಹೊರಗಿನ ಸೋಜಿಗಗಳಾಗಿ ಕಾಡುತ್ತಲೆ ಇರುವ ನಿತ್ಯ ನಿರಂತರ. ಇದೆಲ್ಲದರ ನಡುವಿನ ಸಾಮಾನ್ಯ ಬದುಕಿಗೆ ಈ ವಿಸ್ಮಯ, ತಲ್ಲಣಗಳು ಕಾಡುವ ಬಗೆಯೆ ಬೇರೆ. ಕೆಲವು ವಿಷಾದದ ಕಾರಣಗಳಾದರೆ ಮತ್ತೆ ಹಲವು ಸಂಭ್ರಮದ ನೆಪಗಳಾಗುತ್ತವೆ. ಮೂಲತಃ ನಮ್ಮ ಸಂಸ್ಕೃತಿಯ ಬೇರಿನಿಂದ ಚಿಗುರದಿದ್ದರೂ, ಪ್ರಾಯಶಃ ನಮ್ಮೆಲ್ಲರ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಹಾಸುಹೊಕ್ಕಾಗಿ ಪ್ರಭಾವ ಬೀರುವ ಹೊಸ ವರ್ಷದ ಆಚರಣೆ ಈ ನೆಪಕೊಂದು ಉದಾಹರಣೆ ಮತ್ತು ಈ ಜಾಗತಿಕ ಗೋಮಾಳದ ಜಾಗತೀಕರಣದ ಖದರಿನಲ್ಲಿ ಸಾಗರೋತ್ತರ ಸಂಸ್ಕೃತಿಗಳು ನಮ್ಮ ಬದುಕಿನ ಆಳಕ್ಕೂ ಇಳಿದು ಮಿಳಿತವಾಗುತ್ತಿರುವ ಬಗೆಗೊಂದು ವ್ಯಾಖ್ಯೆ.

ಅದೇನೆ ಇರಲಿ ಸಂಭ್ರಮಾಚರಣೆ ಶುಭ ಹಾರೈಕೆಗೆ ಸಮಯ, ಸಂಸ್ಕೃತಿ, ಪೂರಕತೆ ಇತ್ಯಾದಿಗಳ ಹಂಗಿರಬೇಕಿಲ್ಲ. ಅದಕೆಂದೆ ಈ ಜಾಗತಿಕ ಹೊಸ ವರ್ಷದ ಆಗಮನವನ್ನು ಮುಕ್ತ ಮನದಲ್ಲಿ ಸ್ವಾಗತಿಸೋಣ, ಹೊಸವರ್ಷ ಹೊಸ ಸಾಧನೆ, ಉನ್ನತಿಗೆ ಅಸ್ತಿಭಾರ ಹಾಕುವ ಹರಿಕಾರನಾಗಲೆಂದು ಆಶಿಸೋಣ. ಈ ಸಂಧರ್ಭದ ನೆಪದಲ್ಲೆ ಸಂಪದಿಗರು, ಇತರೆಲ್ಲ ಓದುಗರುಗಳಿಗೆ ಮತ್ತು ಈ ನಾಡಿನ, ರಾಷ್ಟ್ರದ ಜನತೆಗೆ ಹೊಸವರ್ಷದ ಶುಭಾಶಯಗಳನ್ನು ಕೋರುತ್ತ ಕಳೆದ ಸಾಲನ್ನು ಬೀಳ್ಕೊಡುತ್ತ, ಹೊಸತನ್ನು ಸ್ವಾಗತಿಸೋಣ. ಆ ನೆನಪಿನ ಕುರುಹಾಗಿ ಈ ಪುಟ್ಟ ಕವನ ಹೊಸ ವರ್ಷದ ಶುಭಾಶಯದೊಂದಿಗೆ ಸಮರ್ಪಿತ.

ಕಾಲದ ಗಡಿಯಾರ
___________________

ಕಾಲದ ಗಡಿಯಾರಕೆ ಕಿವಿ ಹಿಂಡಿ
ತಾಖೀತು ಮಾಡಿದ ಒಡೆಯ
ನಿಲದೆ ಓಡು ನಿರಂತರ
ಆಗುತಿದ್ದರು ಸರಿ ಪ್ರಳಯ ||

ಎಂಥ ವಿನಮ್ರ ಸೇವಕನಿವ ದೂತ
ಎಲ್ಲ ನಿಯಾಮಕನ ಸೇವಾರ್ಥ
ಗತದಲೆಂದೊ ಹತ್ತಿದ ಬಂಡಿ
ನಿಲ್ಲದೆ ಉರುಳಿ ಸಾಗಿದ ಕಾಲರಥ ||

ಅಚ್ಚರಿ, ಯಾರೆಳೆವರೊ ಬಂಡಿ ಸತತ
ಬರಿ ಸೂರ್ಯನೆಂದರೆ ಅಸಾಧ್ಯ
ರವಿರಥ ಮುನ್ನಡೆಸಿಹರಾರು
ಮೂಲದಿಂದಲೆ ತುಂಬಿ ಅಗಣಿತ ಶಕ್ತಿ ||

ಏನು ಕರಾರುವಾಕ್ಕು ಲೆಕ್ಕಾಚಾರದ ಗಾಲಿ
ತಿರುತಿರುಗಿ ಒಂದೆ ವೇಗದೆ ಖಯಾಲಿ
ತಡೆಯಿರದ ನಿರಂತರ ಪಾಳಿ
ಕಟ್ಟಿ ಕ್ಷಣ ನಿಮಿಷ ಗಂಟೆ ದಿನ ವಾರವುರುಳಿ ||

ತಿಂಗಳು ವರ್ಷಗಳ ಬೆನ್ನು ಋತುವಾಹನವೇರಿ
ಹಿಂದಟ್ಟಿ ಮುನ್ನಡೆಯುವ ಕಾಲ ಸವಾರಿ
ಮರುಕಳಿಸುತ ಪ್ರತಿ ವರ್ಷದ ತೊರೆ
ಬತ್ತಿರಲಿ ಬಿಡಲಿ ತುಂಬಿಸಿ ಕಾಲಮಾನ ಜಾರಿ ||

ಮೊಗಚಿಟ್ಟ ಬೋಗುಣಿ ಕಳಚಿಟ್ಟ ಅಗುಣಿ ಕಾಲ
ವಿಸ್ಮಯ ನಿರಂತರ ನಡೆಸಿ ಜಗ ಜೀವಜಾಲ
ಅದ್ಭುತವನಾಗಿಸುತ ಸಾಧಾರಣ ಕಲೆ
ಕಾಯಗಳನುರುಳಿಸುತ ಸಾಗಿದೆ ಕಾಲಯಾನ ||

ಕಾಲ ಚಕ್ರದ ಆಳ, ಅಳತೆ ಹಿಡಿಯಲೆಲ್ಲಿ ಮೊತ್ತ
ಹೊಸ ಸಾಲಿನ ಹೊಸ ಗಳಿಗೆ ಕಾಣಲಷ್ಟೆ ಶಕ್ಯ 
ಆಚರಣೆಯ ಸಂಭ್ರಮ ಶುಭಾಶಯ ಗಳಿಗೆ
ಅನಿಯಂತ್ರಿತ ಕಾಲನ ಕನಿಷ್ಠ ನಮಿಸುವ ಹವಣಿಕೆ ||

------------------------------------------------------------------------------------
ನಾಗೇಶ ಮೈಸೂರು, ೩೧. ಡಿಸೆಂಬರ. ೨೦೧೩, ಮೈಸೂರು
-------------------------------------------------------------------------------------

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಮೈಸೂರರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಎಂದಿನಂತೆ ಹೊಸತನದ ಕವನ 'ಕಾಲದ ಗಡಿಯಾರ' ಸುಂದರವಾದ ಪದ ಜೋಡಣೆಗಳಿಂದ ಸಶಕ್ತವಾದ ಕವನ. ವ್ಯಾಖ್ಯೆ ಕೂಡ ಚನ್ನಾಗಿದೆ. ಧನ್ಯವಾದಗಳು ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಟ್ನಾಳ ಜೀ ನಮಸ್ಕಾರ. ತಮ್ಮ ಎಂದಿನ ಸಹೃದಯೀ ಪ್ರತಿಕ್ರಿಯೆಯ ತೂಕದ ಮಾತುಗಳು ಕವನದ ಮೌಲ್ಯಕ್ಕೆ ಮತ್ತಷ್ಟು ಮೆರುಗಿತ್ತಿವೆ. ತುಂಬಾ ಧನ್ಯವಾದಗಳು :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
'ಕಾಲದ ಗಡಿಯಾರ' ಕಾಲದ ಮಹತ್ವ ಬಿಂಬಿಸುವ ಒಂದು ಸಮರ್ಥ ವಿವರಣೆಯುಳ್ಳ ಅರ್ಥಗರ್ಭಿತ ಕವನ, ಈ ಕಾವ್ಯಕುಂಜ ನಿರತಂತರವಾಗಿ ಹಬ್ಬಿ ಹರಡಲಿ. ಹೊಸ ವರ್ಷದ ಶುಭಾಶಯಗಳೊಂದಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರಿಗೆ ನಮಸ್ಕಾರ,
.
ನಿಮ್ಮ ಹೊಸವರ್ಷದ ಏಕಾಂಗಿ ಅರುಣೋದಯ ಕವನಕ್ಕೆ ಜತೆಗಾರನಾಗಿರಲಿ ಎಂದು ರಚಿಸಿದ ಗಡಿಯಾರವಿದು. ಕಾಲದ ಎದೆ ಬಡಿತವನ್ನು ದುಡಿಸಿಕೊಂಡು ಬರುವ ಹೊಸ ವರ್ಷಕ್ಕೊಂದು ನಮನ ಹಾಕಿದ್ದು ನಿಮಗೆ ಹಿಡಿಸಿದ್ದು ಖುಷಿಯಾಯ್ತು. ತಮಗೂ ಹೊಸ ವರ್ಷದ ಶುಭಾಶಯಗಳು ಮತ್ತು ವರ್ಷವಿಡೀ ಆರೋಗ್ಯಪೂರ್ಣವಾಗಿರಲೆಂಬ ಹಾರೈಕೆಯ ಹೊನಲು :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕಾಲ ಚಕ್ರ ತಿರುತ್ತಲೇ ಇರುತ್ತದೆ. ಮುಂದೆ ಹೋಗುತ್ತಲೇ ಇರುತ್ತದೆ. ಆದರೆ ಮರಳಿ ಹಿಂದೆ ಹೋಗದು! ಇದನ್ನು ಅರಿತರೆ ಮಾನವ ಅರ್ಥಪೂರ್ಣ ಬಾಳು ಬಾಳಿಯಾನು. ಸುಂದರ ಭಾವ ಮೂಡಿಸಿರುವಿರಿ. ಧನ್ಯವಾದಗಳು, ನಾಗೇಶರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ. ಕಾಲ ಚಕ್ರದ ನಿರಂತರ ಏಕಮುಖಿ ಚಲನೆಯ ನಿಮ್ಮ ಕಿರು ಟಿಪ್ಪಣಿ ಕವನದ ಸಾರಕ್ಕೆಂದು ಬರೆದ ವ್ಯಾಖ್ಯೆಯಂತಿದೆ. ತುಂಬಾ ಧನ್ಯವಾದಗಳು :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಂದರ ಕವನ ನಾಗೇಶ್, ಅರ್ಥಪೂರ್ಣ ಮತ್ತು ಇಟ್ನಾಳರು ಹೇಳಿದಂತೆ ಸಶಕ್ತ ಪದ ಜೋಡಣೆ. ಹೀಗೇ ಬರೆಯುತ್ತಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ವಸಂತ್ ರವರೆ, ತಮ್ಮ ಪ್ರತಿಕ್ರಿಯೆ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.