ಕಾರ್ನಾಡರ ನಿರ್ಗಮನ

4

ಸಾವು ಯಾರದೇ ಆಗಿರಲಿ
ಅದೊಂದು ಬೆಚ್ಚಿ ಬೀಳಿಸುವ ಸಂಗತಿ
ಜಗ ಕಂಡ ಅದ್ಭುತ ನಾಟಕಕಾರ
ಕಾರ್ನಾಡ ನಿರ್ಗಮಿಸಿದ್ದಾರೆ
ಇದೊಂದು ವಿಷಾದದ ಸಂಗತಿ
ತುಂಬಲಾಗದ ಖಾಲಿತನ ಅವರ
ನಾಟಕಗಳ ಪಾತ್ರಗಳು ಅವುಗಳಾಡುವ
ಮಾತುಗಳು ಕತ್ತಲಲಿ ಮಿನುಗುವ
ನಕ್ಷತ್ರ ಸಾಲುಗಳು ನೀರವ ರಾತ್ರಿಯಲಿ
ಸಾಗಿ ಬರುವ ಮಿಂಚುಹುಳ ಸಾಲುಗಳು
ಜ್ಞಾನದ ಬೆಳಕು ಚೆಲ್ಲುವ ಹಣತೆಗಳು
ಕತ್ತಲೆಯ ದಾರಿಯಲಿ ಕನಸುಗಳನರಸಿ
ಪಯಣಿಸಿದವರು ಗಿರೀಶ ಕಾರ್ನಾಡ

ಈ ಸುದ್ದಿ ಕೇಳಿದಾಕ್ಷಣ ಆವರಿಸಿದ್ದು
ತುಂಬಲಾಗದ ಒಂದು ಶೂನ್ಯ
ತಾವು ನಿರ್ಗಮಿಸಿದರೂ ತಮ್ಮ ನಾಟಕಗಳ
ರೂಪದಲಿ ಜೀವಂತವಿರುವವರು ಕಾರ್ನಾಡ
ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು
ತುಘಲಕ ಯಯಾತಿ ಹಯವದನಗಳು ಸಾಕು
ಭಾವನಾತ್ಮಕತೆಗೆ ದಕ್ಕದ ಇವರು
ಆಲೋಚನೆಗಳಿಗೆ ದಕ್ಕಿ ಅರ್ಥವಾಗುವವರು
ಖಚಿತಮಾತು ಸ್ಪಷ್ಟನುಡಿ ಭಾವನೆ
ಸಂಘರ್ಷ ಮಣ್ಣಿನ ಸಂಬಂಧ ವೈಚಾರಿಕತೆ
ಇವರ ನಾಟಕಗಳ ಆಧಾರ ಸ್ಥಂಭಗಳು
ಪ್ರತಿ ಓದಿಗೂ ಭಿನ್ನ ಅರ್ಥ ಕೊಡುವ
ಸತ್ವಪೂರ್ಣ ಕೃತಿಗಳು

ಆಧುನಿಕ ರಂಗ ಪ್ರೀತಿಯ ಭಾರತೀಯರನ್ನು
ಪಾಶ್ಚಾತ್ಯ ರಂಗಭೂಮಿಯ ಗುಂಗಿನಿಂದ
ಹೊರ ತಂದವರು ಪೌರಾಣಿಕ ಜಾನಪದ
ಪ್ರಸಂಗಗಳನ್ನು ವರ್ತಮಾನಕ್ಕೆ
ಮುಖಾಮುಖಿಯಾಗಿಸಿದವರು ಕಾರ್ನಾಡ
ಸಾಮಾಜಿಕ ರಾಜಕೀಯ ವಸ್ತುಸ್ಥಿತಿಗಳ ಮೂಲಕ
ಇಂದಿನ ಬದುಕಿನ ವ್ಯಾಖ್ಯಾನ ಮಾಡಿದವರು
ಅವರ ಕೃತಿಗಳು ಓದಿಗೆ ದಕ್ಕುವ
ರೀತಿ ಒಂದಾದರೆ ರಂಗಭೂಮಿಯ ಮೇಲೆ
ಮಾಡಿಸುವ ದರ್ಶನ ಬೇರೆ

ಕಾರ್ನಾಡರ ಸಾವು ಸೃಷ್ಟಿಸಿದ ಶೂನ್ಯ
ಸದ್ಯಕ್ಕೆ ತುಂಬುವಂತಹುದಲ್ಲ ಅವರು ನಮ್ಮ
ಜೊತೆ ಉಳಿಯುವುದು ಸುತ್ತಲಿನ ಘಟನೆಗಳಿಗೆ
ಸ್ಪಂದಿಸುತ್ತಿದ್ದ ರೀತಿಯಿಂದಾಗಿ ಕೇಳುವ ಕಿವಿ
ಸ್ಪಂದಿಸುವ ಹೃದಯ ಅವರಿಗಿತ್ತು ಎಲ್ಲ
ಚಳುವಳಿಗಳ ಸಂಧರ್ಭಗಳಲ್ಲಿ ಅವರ ನಿಲುವು
ಹೊರಡಿಸುತ್ತಿದ್ದ ಧ್ವನಿಗಳು ಸ್ಪಷ್ಟತೆ ನಿಖರತೆಯುಳ್ಳವು
ಅಗಲಿಕೆಯ ನೋವಿಗಿಂತ ಈ ಸಂಧರ್ಭದಲಿ
ಬಂದ ಪ್ರತಿಕ್ರಿಯೆಗಳು ನೋವುಂಟು ಮಾಡುವಂತಹವು
ಕೆಲವಂತೂ ಉತ್ತರಿಸಲು ಅರ್ಹತೆಯಿಲ್ಲದವು
ಅವರ ಹಾಗೆ ಬರೆಯುವುದಿರಲಿ ಓದಿ ಅರ್ಥ ಮಾಡಿ
ಕೊಳ್ಳಲು ಒಂದು ತರಹದ ಸಿದ್ಧತೆ ಯೋಗ್ಯತೆ ಬೇಕು
ಇವೆಲ್ಲವುಗಳ ಮಧ್ಯೆ ನಮ್ಮನ್ನು ಖಿನ್ನರನ್ನಾಗಿಸುವುದು
ಅವರ ಸಾವು ನಿರ್ಮಿಸಿ ಹೋದ ತುಂಬಲಾಗದ ಖಾಲಿತನ

                   *
ಚಿತ್ರ ಕೃಪೆ :ಅಂತರ್ಜಾಲ

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.