ಕಬ್ಬಿಗ ತೋಟದಲ್ಲರಳಿದ ಡಬ್ಲ್ಯೂ.ಬಿ.ಏಟ್ಸ್ ನ ಕವನ..

5

'ಮೊಂಡಾಟದ ಜೇನಳ ಜತೆ ಪಾದ್ರಿ ಮಾತಾಟ'

('ಕನ್ನಡ ಪ್ರಭ'ದಲ್ಲಿ ಪ್ರಕಟವಾದ ನನ್ನ ಮೊದಲ ಅನುವಾದದ ಯತ್ನದ ಹಿನ್ನಲೆ ಕಥೆ)

ಇದೆ ಜುಲೈ ಹದಿನೆಂಟರ ಬೆಳಗು - ಮಗನನ್ನು ಸ್ಕೂಲಿಗೆ ಬಿಟ್ಟು ಆಫೀಸಿನತ್ತ ಹೊರಟ ಬಸ್ಸು ಹಿಡಿದಿದ್ದೆ. ಗಾಢ ಮೋಡಾವೃತ್ತ ವಾತಾವರಣದಿಂದಾಗಿ ಒಂದು ಬಗೆಯ ಮಬ್ಬಿನ ವಾತಾವರಣ ; ಗುಂಪು ಗದ್ದಲದ ಹೊತ್ತಾದರೂ, ಸಿಕ್ಕ ಸೀಟೊಂದನ್ಹಿಡಿದು ಮಹಡಿಯ ಬಸ್ಸಿನಲ್ಲಿ ಕೂರುತ್ತಿದ್ದಂತೆ ಪೋನಿನ ಜರ್ರೆನ್ನುವ ಕಂಪನನಾದ ಯಾವುದೊ ತುಂಡು ಸುದ್ದಿಯೊ, ಮಿಂಚಂಚೆಯೊ ಬಂದಿರುವ ಸೂಚನೆ ಕೊಟ್ಟಾಗ ಮೊಬೈಲು ತೆರೆದು ನೋಡಿದರೆ ಚೀನದಿಂದ ಗೆಳೆಯ ದೀಪಕ ಕಳಿಸಿದ ಅಂಚೆಯಲ್ಲಿ ಲಗ್ಗತ್ತಿಸಿದ ಕನ್ನಡ ಪ್ರಭ ಪತ್ರಿಕೆಯ ಹತ್ತೊಂಬತ್ತನೆ ಪುಟ. ಆಗಾಗ್ಗೆ ಆಯ್ದ ಬರಹ, ಲೇಖನಗಳನ್ನು ಕಳಿಸುವ ಗೆಳೆಯ ಇಂದೇನು ಕಳಿಸಿರಬಹುದೆಂಬ ಕುತೂಹಲಕ್ಕೆ ಪಿಡಿಎಫ್ ಫೈಲು ತೆರೆದು ನೋಡಿದರೆ - ಗುರುವಾರದ 'ದೋಣಿ' ಅಂಕಣವಿರುವ ಪುಟ, ಮತ್ತು ಶ್ರೀಯುತ ಕೀರ್ತಿಯವರ ಪುಟ್ಟ ಲೇಖನ - ಡಬ್ಯು. ಬಿ. ಏಟ್ಸ್ ನ ಕವನ 'ಕ್ರೇಜಿ ಜೇನ್ ಟಾಕ್ಸ್ ವಿಥ್ ದ ಬಿಷಪ್' ಕುರಿತದ್ದು. ಇಂಗ್ಲೀಷಿನ ಮೂಲ ಕವನವನ್ನು ದಾಖಲಿಸಿದ್ದೂ ಅಲ್ಲದೆ ಅದನ್ನು ಕನ್ನಡಕ್ಕೆ ಭಾಷಾಂತರಿಸಿದ ಎರಡು ಅವತರಣಿಕೆಗಳೂ ಪ್ರಕಟವಾಗಿದ್ದವು. ಮೊದಲನೆಯದು ಶ್ರೀ ಯು. ಆರ್. ಅನಂತ ಮೂರ್ತಿಯವರ ಅನುವಾದ. ಎರಡನೆಯದು ಶ್ರಿ. ಪಿ. ಲಂಕೇಶರ ಮರು ಸೃಷ್ಟಿಯ ಅವೃತ್ತಿ. ಇಂಗ್ಲೀಷ್ ಮೂಲದೊಂದಿಗೆ ಜೋಡಿಸಿ ಓದುತ್ತಿದ್ದರೆ ಈ ಮರುಸೃಷ್ಟಿಯ ಜಗ್ಗಾಟಗಳೆಲ್ಲ ಕಣ್ಮುಂದೆಯೆ ಬಂದು ನಿಂತಂತಾಗುತ್ತಿತ್ತು. ಹಾಗೆಯೆ ಎರಡು ವಿಭಿನ್ನ ಶೈಲಿಗಳು ಹೇಗೆ ಮೂಲದೊಂದಿಗೆ ಸಂವಾದಿಯಾಗಿ ಎಷ್ಟೆಲ್ಲಾ ಹೊಳಹು, ಅರ್ಥವೈವಿಧ್ಯಗಳನ್ನು ಕೊಡುವುದನ್ನು ನೋಡಿ ಸೋಜಿಗವೂ ಆಗುತ್ತಿತ್ತು. ಓದುತ್ತಲೆ ಮೇಳೈಸಿದ ಎಲ್ಲಾ ಭಾವನೆಗಳ ಕಲಸು ಮೇಲೊಗರದಲ್ಲಿ ಕಳುವಾಗಿದ್ದ ಗಳಿಗೆಯಲ್ಲೆ ಇಳಿಯಬೇಕಾದ ಬಿಷಾನ್ ಸ್ಟಾಪ್ ಬಂದಿದ್ದರಿಂದ ಕಾವ್ಯ ಲೋಕದಿಂದಿಳಿದು ಲೌಕಿಕಕೆ ಬಂದೆ.

ಅಲ್ಲಿಂದ ಸುಮಾರು ಹತ್ತದಿನೈದು ನಿಮಿಷ ನಡೆದು, ನಡುವಿನ ಹಸಿರು ತುಂಬಿದ ಉದ್ಯಾನದ ತೋಪಿನ ಮುಖೇನ ಸಾಗಿದರೆ ಸಿಗುವುದು ನನ್ನ ಆಫೀಸು. ಆದರೆ ಆ ಹೊತ್ತಿಗೆ ಸರಿಯಾಗಿ ಹನಿಯುತ್ತಿದ್ದ ಮಳೆ ಜೋರಾಗಿ ಧಾರಾಕಾರವಾಗಿ ಸುರಿಯತೊಡಗಿ ಮಳೆ ನಿಲ್ಲುವ ತನಕ ಬಸ್ಟಾಪಿನಲ್ಲೆ ನಿಲ್ಲುವ ಹಾಗೆ ಮಾಡಿತು. ಹತ್ತಿರದ ಛಾವಣಿಯ ಕಂಬವೊಂದರ ಪಕ್ಕ ನಿಂತು ಸುರಿಯುತ್ತಿದ್ದ ಮಳೆಯನ್ನು ನೋಡುತ್ತ ಎರಚಲು ಹನಿಗೆ ಮುಖವೊಡ್ಡಿದ್ದಾಗ ಮತ್ತೊಮ್ಮೆ ಆ "ಕ್ರೇಜಿ ಜೇನ್ ಟಾಕ್ಸ್ ವಿಥ್ ದ ಬಿಷಪ್" ಕವನ  ಓದಲು ತೆರೆದೆ. ಎರಡು ಅನುವಾದಗಳು ಹೆಚ್ಚು ವಸ್ತುನಿಷ್ಠತೆಗೆ ಒತ್ತು ಕೊಟ್ಟು ಮೂಲಕ್ಕೆ ಧಕ್ಕೆಯಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಅನುವಾದಿಸಿದ್ದಾರೆನಿಸಿತು. ಬಹುಶಃ ಆ ವಸ್ತುನಿಷ್ಠತೆಯ ಒತ್ತಡವಿಲ್ಲದೆ ತುಸು ಭಾವಾನುವಾದದ ನೆಲೆಗಟ್ಟಿನಲ್ಲಿ ಅನುವಾದಿಸಿದರೆ , ಮೂಲದ ಮತ್ತಷ್ಟು ಆಯಮಗಳಿಗೂ ಬೆಳಕು ಚೆಲ್ಲಬಹುದೇನೊ ಅನಿಸಿತು. ಆ ಅನಿಸಿಕೆಯ ಬೆನ್ನಲ್ಲೆ ಮನಃಪಟಲದಲ್ಲಿ ಕೆಲವು ಪದಪುಂಜಗಳೂ ತೇಲಾಡಿದಂತಾಗಿ, ಅದೆ ಲಾಘವದಲ್ಲಿ ನಾನೂ ಒಂದು ಭಾಷಾಂತರಕ್ಕೆ ಯತ್ನಿಸಬಾರದೇಕೆ ಎಂಬ ಹುಡುಗಾಟಿಕೆಯ ಅಲೋಚನೆಯೂ ಬಂತು.  ಮೋಜಿಗಾದರೂ ಹೇಗೆ ಬರುವುದೊ ನೋಡೋಣವೆಂದು ಏಟ್ಸನ ಸಾಲು ಸಾಲನ್ನೆ ಓದುತ್ತ ತುಸು ಭಾವ ಲೇಪಿತ ಸ್ತರದಲ್ಲಿ ಬರೆಯುತ್ತಾ ಹೋದೆ. ನೋಡು ನೋಡುತ್ತಿದ್ದಂತೆ ಹತ್ತೆ ನಿಮಿಷದಲ್ಲಿ ನನ್ನ ಭಾವಾನುವಾದದ ಮೂಲ ಕರಡು ಸಿದ್ದವಾಗಿತ್ತು. ಹಾಗೆ ಆಚೀಚೆ ಒಂದೆರಡು ತಿದ್ದುಪಡಿ ಮಾಡಿದಾಗ ಮೂಲ ಆಶಯಕ್ಕೆ ಧಕ್ಕೆಯಿಲ್ಲದ ಹಾಗೆ ಬಂದಿದೆಯೆನಿಸಿತು. ಅದನ್ನೆ ಕಾಪಿ ಮಾಡಿ ಗೆಳೆಯನಿಗೆ ಮರು ರವಾನಿಸುವ ಹೊತ್ತಿಗೆ ತಹಬಂದಿಗೆ ಬಂದಿದ್ದ ಮಳೆಯೂ ಸಣ್ಣಗೆ ಹನಿಯಲಾರಂಭಿಸಿದಾಗ ಹಿತವಾದ ಹನಿಗಳಲ್ಲೆ ಹೆಜ್ಜೆ ಹಾಕುತ್ತ ನಡೆದಿದ್ದೆ. 

ಅರ್ಧದಾರಿ ಕಳೆಯುವಷ್ಟರಲ್ಲೆ ಗೆಳೆಯನಿಂದ ಮರುಸೂಚನೆ ಬಂದಿತ್ತು  - 'ಪ್ರತಿಕ್ರಿಯೆಯಾಗಿ ಕನ್ನಡ ಪ್ರಭಕ್ಕೆ ಕಳಿಸು, ಈ ಮಿಂಚಂಚೆಗೆ' ಎಂದು ಮೆಯಿಲ್ ಐಡಿಯ ಸಮೇತ. ಕಳಿಸುವಷ್ಟು ಚೆನ್ನಾಗಿದೆಯೆ ಎಂಬ ಅನುಮಾನವಿದ್ದರು ನೋಡುವ ಎಂದುಕೊಂಡು ಕಳಿಸಿಬಿಟ್ಟೆ ; ಹಾಗೆ ಆಮೇಲದನ್ನು ಮರೆತೂ ಬಿಟ್ಟೆ ಕೆಲಸದ ಗಡಿಬಿಡಿಯಲ್ಲಿ. ಆದರೆ ಎರಡು ದಿನ ಕಳೆದ ಮೇಲೆ ಕನ್ನಡ ಪ್ರಭದಿಂದ ಬಂದ ಮಿಂಚಂಚೆಯೊಂದು, ನನ್ನ ಅನುವಾದವೂ ಒಂದು ರೀತಿ ಮೂಲ ಕವನದ ಚೌಕಟ್ಟಿನಲ್ಲೆ ಇರುವುದರಿಂದ ಮುಂದಿನ 'ದೋಣಿ' ಅಂಕಣದಲ್ಲಿ ಇದನ್ನೂ ಪ್ರಕಟಿಸಲಾಗುತ್ತದೆ ಎಂದಾಗ ಅಚ್ಚರಿ ಮತ್ತು ಖುಷಿ ಎರಡೂ ಆಯ್ತು!

ಅಂದ ಮಾತಿನಂತೆ ನಿನ್ನೆ ಅಂದರೆ 01.ಆಗಸ್ಟ್. 2013 ರ ಗುರುವಾರದ 'ದೋಣಿ' ಅಂಕಣದಲ್ಲಿ 'ಕಬ್ಬಿಗರ ತೋಟ'ದಡಿಯಲ್ಲಿ ಈ ಅನುವಾದ ಪ್ರಕಟವಾಗಿತ್ತು. ಅದರ ಯಥಾರೂಪದ ಪುನರಾವರ್ತನೆ ಇಲ್ಲಿ ನಿಮಗಾಗಿ.

ಮೊಂಡಾಟದ ಜೇನಳ ಜತೆ ಪಾದ್ರಿ ಮಾತಾಟ
--------------------------------------------

ನಡುಹಾದಿಯಲೊಬ್ಬ ದಾರಿಹೋಕ ಪಾದ್ರಿ
ಸಿಕ್ಕಿಬ್ಬರ ಕಷ್ಟ ಸುಖ ಮಾತಾಟಕೆಂದ.
'ಪ್ರಸ್ತ ಭೂಮಿ ಸ್ತನ, ಜೋತಾಡಿವೆ ಘನ
ನರನಾಡಿ ಅನಾಡಿ ಶೀಘ್ರ ಸೊರಗಲಿದೆ ಒಣಗಿ;
ಇನ್ನಾದರು ದೇಗುಲವಾಗಿಡು ಮನ,
ಬಿಟ್ಟೆಲ್ಲ ಹೊಲಸಿನ ಧ್ಯಾನ.'

'ಮಂತ್ರದಲೆ ಉಗುಳಿದ್ದಂತೆ ಪಚ್ಚೆ ಕೊಚ್ಚೆಯೊ ಪಾದ್ರಿ,
ಹೊಲಸಿಗೂ ರಸಿಕತೆಗು ತೆಳು ಹಾಳೆಯ ಕಸ', ನಾ ಚೀರಿದ್ದೆ.
'ಸಂಗಾತಿಗಳೆಲ್ಲ ಹೋದರೂ ನಿಜ, ಅದೆ ಬದುಕ ಕಣಜ
ಗೋರಿಯ ಸಜ್ಜೆ ಮಜ್ಜನವೆ ಅಂತಿಮ ಶಯ್ಯೆಯೆಂದೂ ಗೊತ್ತು,
ಸ್ವರ್ಗಸುಖ ಮುಳುಗಿದ ದೇಹ ಕೇಳದು ವೇದಾಂತ
ಸ್ವಂತಿಕೆ ಹಮ್ಮು ಗರ್ವ ಬಿಡದೊ ಹೃದಯ ಕವಾಟ.'

'ಬಿಮ್ಮು ಬಿಗುಮಾನ ಹೆಣ್ಣಿಗೆ ಸಹಜ
ಕೊಳಕು ರತಿಯಾಕಾಂಕ್ಷೆ ಬಳಲಿ;
ಕಾಣೆಯ ಸರಸದರಮನೆ ಪೀಠ ಕೊಳೆಗೇರಿ
ಮಡಿ ಮೈಲಿಗೆ ಸೇರುವ ಒಂದೆ ದಾರಿ;
ಮಸಲ ಯಾವುದಿದೆ ಹೇಳು ಬಿಡಿ ಯಾ ಹಿಡಿ ಸರಕು  
ಎಲ್ಲಾ ಬಾಡಿಗೆಗಿಟ್ಟ ಲೆಕ್ಕ ಸ್ವಾರ್ಥಲೇಪ ಸಾತ್ವಿಕಕು'

ನನ್ನ ಅನುವಾದ ಪ್ರಕಟವಾದ ಕನ್ನಡ ಪ್ರಭದ ಮೂಲ ಕೊಂಡಿ ಇಲ್ಲಿದೆ ನೋಡಿ (ಪುಟ 19ನ್ನು ನೋಡಿ)

http://archives.kann...

ಜುಲೈ. 18 ರಂದು ಪ್ರಕಟವಾಗಿದ್ದ ಡಬ್ಲ್ಯೂ. ಬಿ. ಏಟ್ಸ್ ನ ಕವನದ ಮೂಲ ರೂಪ, ಮತ್ತು ಯೂ.ಆರ್.ಅನಂತಮೂರ್ತಿ ಮತ್ತು ಪಿ. ಲಂಕೇಶರು ಅದನ್ನನುವಾದಿಸಿದ ರೂಪ ಈ ಕೊಂಡಿಯಲ್ಲಿದೆ ನೋಡಿ (ಪುಟ 19ನ್ನು ನೋಡಿ):

http://archives.kann...  

ನನ್ನ ಅನುವಾದದ ಮೊದಲ ಪ್ರಯತ್ನವಾದ್ದರಿಂದ ಹೇಗೆ ಬಂದಿರುವುದೊ ಎಂಬ ಅಳುಕಿದ್ದರೂ, ಸಂಪದದಲ್ಲಿ ಕೂಡ ಹಂಚಿಕೊಳ್ಳುತ್ತಿದ್ದೇನೆ :-)
 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಪದಿಗರೆ, ಅನುವಾದ ಪ್ರಕಟವಾಗಿರುವ ಮೊದಲ ಕೊಂಡಿ ಕೆಲಸ ಮಾಡುತ್ತಿಲ್ಲ. ಅದಕ್ಕೆ ಇಲ್ಲಿ ಸೇರಿಸುತ್ತಿದ್ದೇನೆ, ಕ್ಷಮೆಯಿರಲಿ http://archives.kann...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರೇ ಭಾವಪೂರ್ಣ‌ ಕವನಕ್ಕೆ ಧನ್ಯವಾದಗಳು, ಮತ್ತು ಅಭಿನಂದನೆಗಳು, ಇನ್ನೂ ನಿಮ್ಮ‌ ಮನದಿಂದ‌ ಇಂತಹ‌ ಸಾವಿರ‌ ಕವನಗಳು ಹೊಮ್ಮಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗೋಪಿನಾಥರೆ ಧನ್ಯವಾದಗಳು. ತಮ್ಮ ಹಾರೈಕೆ, ಅಭಿಮಾನಕ್ಕೆ ಚಿರಋಣಿ. 'ಸಾವಿರದ' ಸಾವಿರ ಬರೆಯಲಾಗದಿದ್ದರು, 'ಸಾವಿರಾರು' ಬರೆಯುವ ಪ್ರಯತ್ನ ಸದ್ಯಕ್ಕೆ ಸಾಗುತ್ತ ಇದೆ (ನಿಮ್ಮ ಹಾಗೆ - ವೃತ್ತಿಗಿಂತ ಪ್ರವೃತ್ತಿ ಪ್ರೇರಿತವಾಗಿ, ಆಳದಾಸಕ್ತಿಯ ಇಂಬಿನಲ್ಲಿ, ಕನ್ನಡಮ್ಮನ ಸೇವೆಯ ಹಂಗಿನಲ್ಲಿ) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವನದ ಭಾವವನ್ನಂತೂ ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದೆ ನಿಮ್ಮ ಕವನ. ಏಕೆಂದರೆ ಮೂಲ ಕವನವನ್ನು ಓದದೆಯೂ ಅದರ ಭಾವ ಹೊರಸೂಸುತ್ತಿದೆ ನಿಮ್ಮ ಕವನದಲ್ಲಿ. ನಿಮ್ಮ ಕವನ ಕನ್ನಡಪ್ರಭದಲ್ಲಿ ಪ್ರಕಟವಾಗಿರುವುದಕ್ಕೆ ಅಭಿನಂದೆನಗಳು, ನಾಗೇಶರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರರೆ ಅಭಿನಂದನೆಗೆ ಧನ್ಯವಾದಗಳು. ಮೂಲರೂಪದ ಭಾವ ಬಿಂಬಿತವಾಗಿದೆಯೆಂದನಿಸಿದರೆ ಮೂಲಕ್ಕೆ ಅನ್ಯಾಯ ಮಾಡಿರದ ಸಮಾಧಾನ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.