ಕನ್ನಡ ಜಾಣನ ಪದಗಳು

0

(ಸಂಪದದ ಹತ್ತರ ಸಂಭ್ರಮಕ್ಕೆ ಅಭಿನಂದನೆಯ ರೂಪದಲ್ಲಿ ಮತ್ತೊಂದು ತುಣುಕು - ನಾಗೇಶ ಮೈಸೂರು)

ಬ್ರಹ್ಮಾಂಡದೊಳಬ್ರಹ್ಮಾಂಡ ಜುಟ್ಟಿನ ಜಟಿಲ
ಕೂತು ಕಟ್ಟುವ ಪೀಠ ಮೋಟುದ್ದದ ಬಾಲ
ಯಾವ ಪಾಕದ ಗುಟ್ಟಿಗ್ಹಡೆದೊಡೆಯಿತೊ ಜಗದೊಗಟು ?
ಅದ ಮುರಿದು ಕಟ್ಟುವ ಬಗೆಯರಿತವ ಧನ್ಯ ಕನ್ನಡ ಜಾಣ ||

ಉದ್ದಗಲಾಳಾವಿಸ್ತಾರವ್ಯೋಮ ಅಳೆದು ಹೇಳುವವರಾರ ?
ಹಿಡಿ ಬದುಕಗಲದಲದ ಬೆಸೆದನಾರೊ ಜಾಣ ನೇಕಾರ ?
ಹೆಜ್ಜೆಗಳಲಳೆದ ಜಗವಾಮನ ದೇವನ? ಮನುಜನ?
ತೃಣಬಾಳಿಗದನ್ಹಿಗ್ಗಿಕುಗ್ಗಿಸಲರಿತವನವನೆ ಕನ್ನಡ ಜಾಣ ||

ಗಂಟು ಹಾಕಿದ ವಿಶ್ವಚಿತ್ತ, ಜನ ನೆಂಟಲಡಗಿತ್ತವನಾ ಬೆತ್ತ
ಲಂಗುಲಗಾಮಿರದೋಡಿದಾಶ್ವ ಮುಗ್ಗುರಿಸುತ್ತಾ ಸತತ
ಬಿದ್ದೆದ್ದಾಗಲೊಂದೊಂದ ಕಲಿಯೆ ಬಿಡದ ಹಮ್ಮೆ ಕೆಡುಕೆ
ಸೋತು ಕೆಟ್ಟೂ ಗೆಲುವಿನ್ಹಯವೇರಿ ಗೆಲುವವ ಕನ್ನಡ ಜಾಣ ||

ವ್ಯಾಮೋಹದೆ ಕೆಡಕಿಟ್ಟ ಮಾಯೆ, ಜಿಗುಟಿನ ಮೊತ್ತ
ಮಾಯೆಯಡುಗೆ ಮಾಡಿಟ್ಟವನವನೆ ಬಡಿಸಿದ ತುತ್ತ
ಉಂಡುಂಡವರೆಲ್ಲರವನಾಣತಿಯಂತಾಡಿ ನರಳಾಟ
ತೆತ್ತೆ ರುಚಿಯಡಿಗೆಯಾಸ್ವಾದಿಸಲರಿತವ ಕನ್ನಡ ಜಾಣ || 

ಭೋಗದುಪಯೋಗ ಧರಣಿ, ಧಾರಿಣಿ, ಹೊನ್ನಗಣಿ ತುಟ್ಟಿ
ಪ್ರಲೋಭಗಳೊಡಲೊಳಗಡೆ ಕಂಗಾಣದುಡಿದಾರದೆ ಕಟ್ಟಿ
ಮದ,ಮೋಹ,ಕಾಮನೆ ಲೋಭ ಬಿಡಲೊಲ್ಲದ ಪಂಥಕೆ
ಛಲದೆ ತನುಮನವೊಡ್ಡಿ ಗೆದೆಯಬಲ್ಲವನೆ ಕನ್ನಡ ಜಾಣ ||

ಗರಳವೆಣಿಸದೆ ಗರಳ, ಸರಳ ನಿರಾತಂಕ ನುಂಗಿದವ್ಯಕ್ತಾ
ಭೀತಿ ಹಿಡಿಸಿತೆ ಕೊರಳ, ತಡೆದಿಳಿಯದಂತೆ ಜಾರುತ್ತ
ಜಗನ್ಮಾತಾಪಿತರಲ್ಲವತೀತ, ಆತಂಕ ಶಂಕೆ ಮನುಜರಂತೆ 
ಅಪರಿಮಿತರನೆ ಕಾಡಿದೆಡೆ ಪರಿಮಿತರಾವ ಲೆಕ್ಕ ಕನ್ನಡ ಜಾಣ ||

ಕೋಟಿ ತುಂಬಿದ ಬಯಲಲೆಲ್ಲೊ ಮೀಟಿ ಜೀವತಂತಿಯೆಳೆ
ಹುಲಸಾಗಿ ವಿಕಸಿತ ಏಕಾಣು ನೂರಾರು ಜೀವಜಾಲದಿಳೆ
ಯಾರಿಟ್ಟ ತತ್ತಿ ಪ್ರಥಮ ಜೀವಾಣು ? ಆ ಯಾರನ್ಹಡೆದವರಾರೊ ?
ಯಾವುದೀ ಶೋಧ ಕುತೂಹಲ, ಮೂಲದಾಮೂಲ ಕನ್ನಡ ಜಾಣ? ||

----------------------------------------------------------------------
ನಾಗೇಶ ಮೈಸೂರು, ಸಿಂಗಪುರ
----------------------------------------------------------------------

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಪದದ ಮೂಲದ ಹುಡುಕಾಟ! !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ.. ಬರಿ ಸಂಪದವೇನು? ಎಲ್ಲದರ ಮೂಲದಮೂಲದ ಹುಡುಕಾಟವೆನ್ನಬಹುದೇನೊ? ಅಂದಹಾಗೆ ಎಲ್ಲಾ ಪಂಕ್ತಿಗಳು ಬೇರೆ ಬೇರೆಯಾಗಿ ಬರೆದಂತಹವು - ಆದರೂ ಒಟ್ಟಿಗೆ ಓದಲು ಅಭಾಸವೇನಿಲ್ಲ ಎಂದು ಭಾವಿಸುತ್ತೇನೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.