ಕನ್ನಡಿಯೊಳಗಿನ‌ ಗಂಟು

5

 
ಮೊನ್ನೆ ವಾಟ್ಸಾಪಿನಲ್ಲಿ  ಒಂದು ವಿಡಿಯೋ ನೋಡುತ್ತಿದ್ದೆ.  ಕಪಿಯೊಂದು  ತನ್ನೆದುರಿದ್ದ ಕನ್ನಡಿಯೊಳಗಿದ್ದ ಕಪಿಯಿಂದ ಅದರ `ಕೈಯಲ್ಲಿದ್ದ' ಆಹಾರ ಕಸಿಯಲು  ಹರಸಾಹಸ ಪಡುತ್ತಿದ್ದ ವಿಡಿಯೋ ಅದು.  ಆ ಮರ್ಕಟದ  ಮತಿಗೇಡಿತನಕ್ಕೆ ಮನಸಾರೆ ನಕ್ಕಿದ್ದೇ ನಕ್ಕಿದ್ದು.  ಆದರೆ ನಿಧಾನದಲ್ಲಿ  ಯೋಚಿಸಿದಾಗ, ನನಗನ್ನಿಸಿತು - ನಾವೇನು ಅದಕ್ಕಿಂತ ಭಿನ್ನವೇ?  ಕಿಂಚಿತ್ತೂ ಇಲ್ಲ.  ಅದಕ್ಕೇ ಅಲ್ಲವೇ ಡಾರ್ವಿನ್ ಹೇಳಿದ್ದು - `ಮಂಗನಿಂದ ಮಾನವ' ಎಂದು! ಕನ್ನಡಿಯೊಳಗಿನ ಗಂಟು, ನಮ್ಮೆದುರೇ ತೋರಿದರೂ, ಎಂದಿಗೂ ಸಿಗದು, ಅದು ಬರೀ ಭ್ರಾಮಕ ಎಂಬ ಪ್ರಾಥಮಿಕ  ಅರಿವಿದ್ದರೂ, ನಿಜ ಜೀವನದಲ್ಲಿ ನಾವು ಕನ್ನಡಿಯೊಳಗಿನ ಗಂಟನ್ನು ಪಡೆಯಲು ಹರಸಾಹಸ ಪಡುವ ಮಂದಿಯೇ ಸೈ.
 
ಚಿಕ್ಕವರಿದ್ದಾಗ ನಾವು, ಮೂಳೆ ಕಚ್ಚಿಕೊಂಡ ನಾಯಿಯೊಂದು, ನದಿಯಲ್ಲಿ ತನ್ನದೇ  ಬಿಂಬ ನೋಡಿ, `ಅಲ್ಲಿರುವ' ನಾಯಿಯ ಮೂಳೆಯ ಮೇಲೆ ದುರಾಸೆಪಟ್ಟು, ಬೊಗಳಿ ನಿರಾಸೆ ಹೊಂದಿದ ಕಥೆಯನ್ನು ಕೇಳಿಯೇ ಇರುತ್ತೇವೆ.  ಆದರೆ ಪಾಠ ಕಲಿತೇವೇ? ಖಂಡಿತಾ ಇಲ್ಲ,  ಹರಿದ ಪಾಟೀ ಚೀಲದಿಂದ ಬಳಪ ಬೀಳುತ್ತಿದ್ದಂತೆ, ದೊಡ್ಡವರಾದಂತೆ, ನೀತಿಬೋಧಗಳೂ ನಮ್ಮಿಂದ ದೂರವಾಗುತ್ತವೆ.  (ಆದರೆ, ಬಾಲ್ಯದಲ್ಲಿ ಕಲಿತ ಕೆಟ್ಟ ಚಟಗಳಾವುವೂ ನಮ್ಮನ್ನು ಬಿಡುವುದಿಲ್ಲ ನೋಡಿ – ಎಂಥ ಜೀವಕ್ಕಂಟಿದ ಗೆಳೆತನ!)  ದುರಾಸೆಯಿಂದ, ಕನ್ನಡಿಯೊಳಗಿನ ಗಂಟನ್ನು ಪಡೆದೇ ತೀರಬೇಕೆಂಬ ಜಿದ್ದಿನಿಂದ ಹೋರಾಡುತ್ತೇವೆ ನಾವು.
 
ಆಧ್ಯಾತ್ಮಿಕವಾಗಿ ಯೋಚಿಸಿದರೂ, ನಮ್ಮ ಜೀವನವೇ ಒಂದು ಕನ್ನಡಿಯೊಳಗಿನ ಗಂಟು.  ನಮ್ಮ ಭಾಗ್ಯ (ಕ್ಷಮಿಸಿ, ಸಿದ್ರಾಮಣ್ಣನ  ಭಾಗ್ಯಗಳ ಬಗ್ಗೆ ಇಲ್ಲಿ ಮಾತಾಡುತ್ತಿಲ್ಲ!) ನಮ್ಮ ಮುಂದಿದ್ದರೂ, ನಮ್ಮ ಕರ್ಮಗಳಿಂದ ಅವು ನಮಗೆ  ಕನ್ನಡಿಯ ಗಂಟಾಗುತ್ತವೆ.  ದೈವ ಸಾಕ್ಷಾತ್ಕಾರದಲ್ಲಿ ನಮ್ಮ ನಿಜಭಕ್ತಿ ಹಾಗೂ ತೋರಿಕೆ ಭಕ್ತಿಗಳ ವ್ಯತ್ಯಾಸ  ತಿಳಿಸಲು ಪುರಂದರದಾಸರು ಇದನ್ನೇ  ಉಪಮೆಯಾಗಿ ಬಳಸಿದ್ದಾರೆ –
 
`ಕನ್ನಡಿಯೊಳಗಿನ  ಗಂಟು ಕಂಡು ಕಳ್ಳ
ಕನ್ನವಿಕ್ಕುವನ ವಶವಹುದೇ?'
 
ಆದರೆ, ಈ  ಕನ್ನಡಿಯ ಗಂಟೇ ನಮ್ಮ ಜೀವನದ ಚಾಲಕ ಶಕ್ತಿ ಎನ್ನುವುದೂ ಅಷ್ಟೇ ಸತ್ಯ.  ಕನ್ನಡಿಯ ಗಂಟನ್ನು ನೋಡುತ್ತ, ಅದನ್ನು ಪಡೆಯಲು ಓಡುತ್ತ, ಸವೆಸುವ ದಾರಿಯೇ ನಮ್ಮ ಜೀವನ.  ನಾಯಿಯ ಬಾಲಕ್ಕೊಂದು ಕೋಲು ಕಟ್ಟಿ ಅದರ ಮುಂತುದಿಗೆ  ಮೂಳೆಯನ್ನು ಕಟ್ಟಿ ನೇತು ಬಿಟ್ಟಲ್ಲಿ, ಆ ನಾಯಿಯು  ತನ್ನ ಕಣ್ಣ ಮುಂದೆಯೇ  ಇರುವ ಮೂಳೆಯನ್ನು ಪಡೆಯಲು ಓಡುತ್ತದೆ.  ಸಹಜವಾಗಿ ಮೂಳೆಯೂ  ಅಷ್ಟೇ ಮುಂದೆ `ಹೋಗು'ತ್ತದೆ! ಹೀಗೆ ಆ ನಾಯಿ ಮೂಳೆಗೋಸ್ಕರ, ಓಡುತ್ತಲೇ ಇರುತ್ತದೆ -  Duracel ನ ಜಾಹೀರಾತಿನಂತೆ – ಓಡುತ್ತಲೇ ಇರುವುದು, ನಿಲ್ಲದು ! (ನನ್ನನ್ನು ಕ್ಷಮಿಸಿ, ಮಾನವನನ್ನು ನಾಯಿಯೊಂದಿಗೆ ಹೋಲಿಸಿದ್ದಕ್ಕಾಗಿ  ಮತ್ತು ತನ್ಮೂಲಕ ನಾಯಿಯ ಮರ್ಯಾದೆಗೆ ಧಕ್ಕೆ ತಂದಿದ್ದಕ್ಕಾಗಿ!!) ನಾವೂ ಹಣ, ಅಧಿಕಾರ, ಬಡ್ತಿ ಇತ್ಯಾದಿ ಕನ್ನಡಿಯೊಳಗಿನ ಗಂಟಿಗಾಗಿ ನಮ್ಮಿಡೀ ಜೀವನವನ್ನು ಸವೆಸುತ್ತೇವೆ – ಅದೇ ಜೀವನವಾಗಿ ಬಿಡುತ್ತದೆ. ಈ ಮತಿಗೆಟ್ಟ ಓಟದಲ್ಲಿ ಬುದ್ಧಿಪೂರ್ವಕವಾಗಿ ಓಡಿದ್ದೇ ಆದಲ್ಲಿ, ಜೀವನದಲ್ಲಿ  ಸಾರ್ಥಕ್ಯ ಸಿಕ್ಕೀತು.
 
ನಮ್ಮ ಜೀವನವೆಂಬ  ಪ್ರಯಾಣದಲ್ಲಿ ನಾವು ಬೇಕೆಂದು ಬಯಸುವ ಆದರೆ ಸಾಮಾನ್ಯತಃ ನಮಗೆ ಸಿಗದ `ಹಣ್ಣು'ಗಳನ್ನು ನಾವು ಕನ್ನಡಿಯೊಳಗಿನ ಗಂಟು ಎಂದೆನ್ನಬಹುದು. (ಆದರೆ ನಾವು ಬಯಸದ, ಬೇಡದ ಹಣ್ಣುಗಳು ಹಾರಿ ಹಾರಿ ಬಂದು ನಮ್ಮ ತೆಕ್ಕೆಯಲ್ಲಿ ಬೀಳುತ್ತವೆ!ಆ ವಿಷಯ‌ ಬೇರೆ) ಉದಾಹರಣೆಗೆ,  ಸುಖದಾಂಪತ್ಯವನ್ನೇ ತೆಗೆದುಕೊಳ್ಳಿ.  ಜಗದಲ್ಲಿನ ಎಲ್ಲ ವಿವಾಹಿತರನ್ನು ಒಟ್ಟು ಸೇರಿಸಿ, `ಸುಖದಾಂಪತ್ಯ'ವೆನ್ನುವುದು 'ಲಭ್ಯವೋ ಇಲ್ಲಾ ಕನ್ನಡಿಯೊಳಗಿನ ಗಂಟೋ?' ಎಂಬುದರ ಬಗ್ಗೆ Opinion Poll ನಡೆಸಿದಲ್ಲಿ – ದೇವರಾಣೆಯಾಗೂ ಹೇಳುತ್ತೇನೆ - `ಲಭ್ಯ'  ಅನ್ನುವ ಅಭಿಪ್ರಾಯಕ್ಕೆ ಒಂದು ಓಟೂ ಬೀಳದು! ಎಲ್ಲರ ಅನುಭವದ ಪ್ರಕಾರ ಸುಖದಾಂಪತ್ಯವೆನ್ನುವುದು ಪುಣ್ಯವಂತರಿಗಷ್ಟೇ ಲಭ್ಯ.  ದುರದೃಷ್ಟವಶಾತ್, ಅಂಥ  ಪುಣ್ಯಾತ್ಮರು ಇದುವರೆಗೂ ಹುಟ್ಟಿಲ್ಲ ! ಹಾಗಾಗಿ, ಸುಖ ದಾಂಪತ್ಯವೆನ್ನುವುದು ಕನ್ನಡಿಯೊಳಗಿನ ಗಂಟೇ ಸೈ.  ಒಬ್ಬ ಗ್ರಂಥಾಲಯಕ್ಕೆ ಹೋಗಿ  ಕೇಳಿದನಂತೆ - `ಇಲ್ಲಿ  "ಸುಖಸಂಸಾರಕ್ಕೆ 12 ಸೂತ್ರಗಳು" ಅನ್ನುವ ಪುಸ್ತಕ ಎಲ್ಲಿದೆ?’ ಅಂತ. ಲೈಬ್ರರಿಯವನು ಹೇಳಿದನಂತೆ – ‘ನೋಡಿ, ಅಲ್ಲಿ `ಹಾಸ್ಯ ಪುಸ್ತಕಗಳ' ವಿಭಾಗದಲ್ಲಿ ಇಟ್ಟಿದ್ದೇವೆ!'. ಎಷ್ಟಂದ್ರೂ ಅನುಭವಸ್ಥನಲ್ಲವೇ?
 
ಹೀಗೆಯೇ, ಒಳ್ಳೆಯ ಹೆಂಡತಿ/ ಒಳ್ಳೆಯ ಗಂಡ ಅನ್ನುವ ವಿಚಾರ ಕೈಗೆತ್ತಿಕೊಂಡರೆ,  ಮೊದಲಿಗೆ ನಮಗೆ `ಇದೇನಿದು ವಿರೋಧಾಭಾಸ / Oximorn ಅನ್ನಿಸದೇ ಇರದು! ಇದರಲ್ಲಿ ನಮ್ಮ ತಪ್ಪೇನಿಲ್ಲ ಬಿಡಿ. ನಂನಮ್ಮ ಅನುಭವವಷ್ಟೇ! ಡೈನೋಸಾರಿನಂತೆ ಇದೂ ಒಂದು extinct spicies.   ವಿವಾಹಿತರಲ್ಲಿ ಯಾರನ್ನಾದರೂ ಕೇಳಿ, `ನಿನ್ನ ಗಂಡ/ಹೆಂಡತಿ ಒಳ್ಳೆಯವನೇ/ಳೇ, ಅನುರೂಪನೇ/ಳೇ?'.  ಅವರಿಂದ ಬರುವ ನಿಟ್ಟುಸಿರೇ ನಿಮ್ಮ ಪ್ರಶ್ನೆಗೆ ಉತ್ತರವನ್ನೀಯುತ್ತದೆ.  ಅಷ್ಟೇಕೆ, ಈಗಿನ ಒಪ್ಪಿತ  ಸಂಗತಿಯಾಗಿರುವ  live-in relationship ನಲ್ಲಿಯೂ ದೀರ್ಘಾವಧಿಯಲ್ಲಿ ಇದೇ ಕಥೆ!  (`ಕಾಮ'ಕ್ಕೆ ಕಣ್ಣಿಲ್ಲ ಅಂತ, `full stop'  ಹಾಕೋದು ಬೇಡವೇ?!!)  ಒಟ್ಟಿನಲ್ಲಿ ಅನುರೂಪ ಸಂಗಾತಿ ಕನ್ನಡಿಯೊಳಗಿನ ಗಂಟು ಎಂಬುದು ನನ್ನ ಅನುಭವಾಮೃತದ  ಖಚಿತ ಅಭಿಪ್ರಾಯ.  ನೀವೇನಂತೀರಿ?
 
 
ನನ್ನ ಮೇಲೆ ನಂಬಿಕೆಯಿಲ್ಲದಿದ್ದಲ್ಲಿ, ಪ್ರಾಯದಲ್ಲೇ ಇರುವವರನ್ನು ಕೇಳಿ. ತಾನು ಅಷ್ಟಾವಕ್ರನ ಅಕ್ಷರಶಃ ಕುಲಸ್ಥನಾದರೂ, ಗಂಡಿಗೆ ತನ್ನ ಸಂಗಾತಿಯಾಗಿ ಕತ್ರೀನಾ ಕೈಫೇ ಬೇಕು! ಶೂರ್ಪನಖಿಯ ಅಪರಾವತಾರವಾದರೂ,  ಹೆಣ್ಣಿಗೆ ಶಾರುಖ್ ಖಾನೇ ಬೇಕು!  ಬೇಕು ಸರಿ, ಆದರೆ ಸಿಕ್ಕಾರೆಯೇ? ಇದನ್ನೇ ನಾವು ಹೇಳುವುದು ಕನ್ನಡಿಯೊಳಗಿನ ಗಂಟೆಂದು.  ನಂತರ ಅವರಿಗೆ  ನಿಜ ಜೀವನದಲ್ಲಿ, ಚಂದ್ರನ ಬದಲು ಗ್ರಹಣಕ್ಕೊಳಗಾದ ಚಂದ್ರ ಹಾಗೂ ಜೀವನದಲ್ಲಿ ವೈರಾಗ್ಯ ತರಿಸೋ  ಪಡಪೋಶಿಗಳು ಸಿಗುತ್ತಾರೆ,  ಆ ವಿಷಯ ಬೇರೆ ಬಿಡಿ!
 
ಕನ್ನಡಿಯ ಗಂಟಿಗೆ ಇನ್ನೊಂದು ಉದಾಹರಣೆ – ಒಳ್ಳೆಯ ಬಾಸು ! ಇಡೀ ಭೂಮಂಡಲದಲ್ಲಿ, ಕಛೇರಿಯಲ್ಲಿ ಅಥವಾ ಕಛೇರಿ  ಮಾದರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದುವರೆಗೂ ಒಳ್ಳೆಯ ಬಾಸು ಸಿಕ್ಕಿಲ್ಲ ಎನ್ನುವುದು ದಾಖಲೆಯಾಗಿಯೇ ಉಳಿದಿದೆ. ಹಾಗಾಗಿಯೇ  ಇದೂ ಕನ್ನಡಿಯೊಳಗಿನ  ಗಂಟು!  ಅಬ್ಬಾ ಅಂತೂ ಮುಗೀತು ಅಂತ ನೀವು ನಿಮ್ಮ ಸೀಟು  ಬಿಟ್ಟೇಳುವಷ್ಟರಲ್ಲಿ – ಅದಕ್ಕಾಗೇ ಕಾಯುತ್ತಿದ್ದನೇನೋ  ಎಂಬಂತೆ - ನಿಮ್ಮ ಬಾಸ್ ಪ್ರತ್ಯಕ್ಷವಾಗಿ, ದನಕ್ಕೆ ರೈತ ಮೇವು ಹಾಕಿದಂತೆ - ನಿಮ್ಮ ಮುಂದೆ ಒಂದಿಷ್ಟು ಫೈಲು ಹಾಕಿ "ಅರ್ಜೆಂಟ್ ಇರುವುದರಿಂದ ಇವತ್ತೇ ಮುಗಿಸಬೇಕು" ಅಂತ ಹೇಳಿದರೆ, ನಿಮಗೆ ಯಾವ ಭಾವನೆ ಮೂಡೀತು? ನನಗಂತೂ, ಜೈಲಿಗೆ  ಹೋದರೂ ಅಡ್ಡಿಯಿಲ್ಲ, ಏಕೆ 47 ತೆಗೆದುಕೊಂಡು, 47 ಗುಂಡುಗಳಿಂದ ಬಾಸ್‍ನ  ದೇಹವನ್ನು ಛಿದ್ರಛಿದ್ರಗೊಳಿಸಬೇಕೆಂಬ ಅದಮ್ಯ ಬಯಕೆ ಮೂಡುತ್ತದೆ. ಆದರೇನು ಮಾಡಲಾದೀತು, ಅದು ಕೂಡ `ಕನ್ನಡಿಯೊಳಗಿನ ಗಂಟು'!
 
ಕನ್ನಡಿಯೊಳಗಿನ ಗಂಟಿನಷ್ಟೇ ಅಲಭ್ಯವಾದ ಮತ್ತೊಂದು  ವಿಚಾರವೆಂದರೆ, "ನಿಷ್ಠಾವಂತ ರಾಜಕಾರಣಿ". ರಾಜಕಾರಣಿ ಎಂಬ ಹೆಸರೆತ್ತಿದರೇ ವಾಕರಿಕೆ ಬರುವ ಈ ಸಂದರ್ಭದಲ್ಲಿ, ಅವರು ಹಾಗೆ ಆಗಲು ನಾವೂ ಸಮವಾಗಿ ಕಾರಣರು ಎನ್ನುವುದನ್ನು ಜಾಣತನದಿಂದ ಮರೆತುಬಿಡುತ್ತೇವೆ! ಈ ಕಾರಣಕ್ಕಾಗಿಯೇ  ಚರ್ಚಿಲ್‍ನ ಈ ಮಾತು ನಮಗೆ ಅಪಥ್ಯವಾದರೂ ಸತ್ಯ ಎನಿಸಿಬಿಡುತ್ತದೆ.  ಚರ್ಚಿಲ್ ಅಂದಿದ್ದ – "Indians  are not fit to rule.  Power  will go to the hands of rascals, rogues  and freebooters'  ಹಾಗಾಗಿ, ಒಳ್ಳೆಯ ರಾಜಕಾರಣಿ, ಭಾರತೀಯರ ಪಾಲಿಗೆ ಕನ್ನಡಿಯೊಳಗಿನ ಗಂಟು! ಅಲಭ್ಯ!!
 
ರಾಜಕಾರಣದ ಈಗಿನ ವಿದ್ಯಮಾನದಲ್ಲಿ, ನಮ್ಮ ಮಾನ್ಯ ಮುಖ್ಯಮಂತ್ರಿಯವರ `ಸಾಲಮನ್ನಾ' ಘೋಷಣೆಯೂ ಕೂಡ ರೈತರಿಗೆ ಇದುವರೆಗೂ ‘ಕನ್ನಡಿಯೊಳಗಿನ ಗಂಟಾ'ಗೇ ಉಳಿದಿದೆ.  `ಸಾಲಮನ್ನಾ' ಘೋಷಣೆಯಾಗಿ 3 ತಿಂಗಳಾದರೂ, ಅದರ ಫಲ ಇನ್ನೂ ರೈತರ ಕೈ ಸೇರಿಲ್ಲ.  ರಾಜಕಾರಣಿಗಳ ಎಂದಿನ  ಆಶ್ವಾಸನೆಗಳಂತೆ, ಈ `ಸಾಲಮನ್ನಾ' ಕೂಡ ರೈತರಿಗೆ ಕನ್ನಡಿಯ ಗಂಟಾಗದಿರಲಿ ಅಂತ ನನ್ನ ಆಶಯ.
 
ಕನ್ನಡಿಯ ಗಂಟು ಅಲಭ್ಯವಾದರೂ, ಅದನ್ನು ಉಪಯೋಗಿಸಿಕೊಳ್ಳುವ ವರ್ಗವೊಂದಿದೆಯೆಂದರೆ ನಿಮಗೆ ಅಚ್ಚರಿಯಾಗುತ್ತದಷ್ಟೇ? ಇವರೇ ನಮ್ಮ ಸಾಹಿತಿಗಳು. ಹೇಗಂತೀರೋ? ಸಿಗಲಾರದ ಕನ್ನಡಿಯ ಗಂಟು, ಅಕಸ್ಮಾತ್ ಸಿಕ್ಕೇ ಬಿಟ್ಟರೆ ಏನಾದೀತೆಂಬ ಭರ್ಜರಿ ಕಲ್ಪನೆಯೇ ಸಾಹಿತ್ಯದ ಮೂಲಬೀಜ. ಈ ಬೀಜವನ್ನು ಸಾಹಿತಿಗಳು ತಮ್ಮ ಅನುಭವದ ಮೂಸೆಯಲ್ಲಿ ಎರಕ ಹೊಯ್ದು ಸಾಹಿತ್ಯ ಕೃಷಿ ಮಾಡುತ್ತಾರೆ.  ಕಲ್ಪನೆಯೆಂಬ ಕುದುರೆಯ  ಬೆನ್ನೇರಿ  ಹೊರಟ ಶೂರರಿವರು. ಸಾಹಿತಿಗಳು, ಜೀವನ ಬರೀ ಕನ್ನಡಿಯೊಳಗಿನ ಗಂಟು ಎಂದುಕೊಂಡು ಜೋಲು ಮೋರೆ ಹಾಕಿ ಕುಳಿತಿದ್ದರೆ, ನಮಗೆ ಕಾಳಿದಾಸ, ಭಾಸ, ಬಾಣಭಟ್ಟ, ಶೇಕ್ಸ್ಪಿಯರ್, ಮಾಸ್ತಿ, ಕಾರಂತರು, ಮತ್ತಿತರ  ದಿಗ್ಗಜರು ದೊರಕುತ್ತಿರಲಿಲ್ಲ. ಅಭಾವದಲ್ಲೂ ಭಾವವನ್ನು ಕಾಣುವ ಚೈತನ್ಯ  ಅವರಲ್ಲಿ  ಇದ್ದುದಕ್ಕೇ ಅವರು ಮಹಾನ್ ಸಾಹಿತಿಗಳಾದರು. ಇಲ್ಲವಾದಲ್ಲಿ, ನಾವಿಲ್ಲವೇ?! ಕನ್ನಡಿಯ ಗಂಟು ಎಂದಿಗೂ ಅಲಭ್ಯವೆಂದು ಚಿಂತಿಸದೇ  ಸಕಾರಾತ್ಮಕವಾಗಿ  ಯೋಚಿಸಿ ಇವರು ಮೇರು ಮನುಜರಾದರು. ನಾವೂ ಕನ್ನಡಿಯ ಗಂಟಿನ ಬಗ್ಗೆ ಸಕಾರಾತ್ಮಕವಾಗಿದ್ದಲ್ಲಿ, ನಮಗೇ ಲಾಭವಿದೆ.  
 
ಜೀವನದಲ್ಲಿ ನಮಗೆ `ಸಿಗುವ' ಕನ್ನಡಿಯೊಳಗಿನ ಗಂಟುಗಳ ಬಗ್ಗೆ ನಾವು ಸಕಾರಾತ್ಮಕವಾಗಿರದಿದ್ದಲ್ಲಿ, ಅದು ನಮ್ಮ ಅರಿಷಡ್ವರ್ಗಗಳ ಪೋಷಣೆಗೆ ಕಾರಣವಾಗುತ್ತದೆ.  ಒಬ್ಬನನ್ನು ತುಳಿದು,  ಮೇಲೇರುವ ಹುಚ್ಚು ರೇಸಿಗೆ  ಬಲಿ ಬೀಳುತ್ತೇವೆ.  ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ  ಎಂದರಿಯದೇ, ಅವನೆತ್ತರಕ್ಕೇರುವ ಧಾವಂತ.  ಕೈಗೆ ಸಿಕ್ಕಿದ್ದಕ್ಕೆ ತೃಪ್ತಿಪಡದೇ, ಕೈಗೆಟುಕದ  ಗಂಟಿನಾಶೆಯಲ್ಲಿ, ಅಧಿಕಾರದ ಏಣಿಯಲ್ಲಿ ಮತ್ತಷ್ಟು  ಏರಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇದಕ್ಕೆ ಕೊನೆಯೇ ಇರದು. ನನ್ನ ಜಮಾನದ ಹಿಂದಿಯ  ಚಲನಚಿತ್ರವಾದ `ದೋ ಬೀಘಾ ಜಮೀನ್’ನಲ್ಲಿ ನಾಯಕ ಬಾಲರಾಜ್ ಸಾಹ್ನಿ ತನ್ನ ದುರಾಸೆಗೆ, ತನ್ನ ಪ್ರಿಯವಾದ ಕುದುರೆಯನ್ನು ಕಳೆದುಕೊಳ್ಳುತ್ತಾನೆ.  ನಾವೂ ಅಷ್ಟೇ ಅಲ್ಲವೇ? ಬಡ್ತಿಗಾಗಿ  ದುಡಿಯುತ್ತ `ಇಂದಿನ' ಜೀವನವನ್ನು ಕಳೆದುಕೊಳ್ಳುತ್ತಿದ್ದೇವೆ! ನಮಗೆ ಸುಖಜೀವನ / ತೃಪ್ತ ಜೀವನವೇ ಕನ್ನಡಿಯ ಗಂಟಾಗಿ ಬಿಟ್ಟಿದೆ! ಅದಕ್ಕೇ ಸುಭಾಷಿತವೊಂದು ಹೇಳಿದ್ದು - "ಮನಸಿ ತು ಪರಿತುಷ್ಟೇ | ಕೋsರ್ಥವಾನ್ ಕೋ ದರಿದ್ರಃ||"  ತೃಪ್ತಿಯೊಂದಿದ್ದಲ್ಲಿ ಬಡತನದಲ್ಲಿಯೂ ಸಾರ್ಥಕ ಜೀವನ ಸಾಧ್ಯ ಅಂತ.  
 
ನಮ್ಮೀ ಮನಸ್ಥಿತಿಯನ್ನೇ ಗೋಪಾಲಕೃಷ್ಣ ಅಡಿಗರು ತಮ್ಮ ಪ್ರಸಿದ್ಧ ಗೀತೆಯಾದ `ಯಾವ ಮೋಹನ ಮುರಲಿ ಕರೆಯಿತು' ಪದ್ಯದಲ್ಲಿ ತೋರಿದ್ದಾರೆ.
`ಇರುವುದೆಲ್ಲವ ಬಿಟ್ಟು |
ಇರದುದರೆಡೆಗೆ ತುಡಿವುದೇ ಜೀವನ||'
 
 
 
ಕನ್ನಡಿಯೊಳಗಿನ ಗಂಟಿನ  ಆಶೆಯಲ್ಲಿ ನಮ್ಮಲ್ಲಿರುವ ಗಂಟನ್ನೂ  ಅನುಭವಿಸದೇ  ಜೀವನವನ್ನು ನಾವು ವ್ಯರ್ಥಗೊಳಿಸುತ್ತಿದ್ದೇವೆ.  A bird  in hand is better than two in the bush.   ಸಂತೃಪ್ತ ಭಾವವಿದ್ದಲ್ಲಿ ಕನ್ನಡಿಯ ಗಂಟನ್ನು ಸಕಾರಾತ್ಮಕವಾಗಿ  ತೆಗೆದುಕೊಳ್ಳಲು ಸಾಧ್ಯ.
 
ಆದರೆ, ಇದು ಹೇಳಲು ಸುಲಭ.  ನನ್ನಂಥ ಹುಲುಮಾನವಿಗೆ ಆಚರಣೆಗೆ ಕಷ್ಟ.  ಬ್ಯಾಂಕ್ ನೌಕರರಾದ ನಮಗೆ `ವೇತನ ಪರಿಷ್ಕರಣೆ' ಎಂಬುದು `ಕನ್ನಡಿಯೊಳಗಿನ ಗಂಟಾ'ಗಿ ಪರಿಣಮಿಸಿದೆ!  ನಾವೆಲ್ಲರೂ  ಒಂದು ವರ್ಷದಿಂದ ಇದಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದೇವೆ.  ಏನೇ ಹೇಳಿ, ನಮ್ಮ ಕಷ್ಟ ನಮಗೆ!!  ಏನಂತೀರಾ?!
 
 
 
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.