ಕಥೆ: ಪರಿಭ್ರಮಣ..(67) (ಅಂತಿಮ ಕಂತು)

5

( ಪರಿಭ್ರಮಣ..66ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

' ..ಆದರೆ, ಅದ್ಯಾವ ಸಂಸ್ಕಾರ ಪ್ರೇರಣೆಯೊ, ಅಥವಾ ಪದೇ ಪದೇ ಬಿಡದೆ ಎಚ್ಚರಿಸುತ್ತಿದ್ದ ನನ್ನ ಅಮ್ಮನ ಎಚ್ಚರಿಕೆಯ ನುಡಿಗಳೊ - ನಾನೆಂದು ಸಲಿಗೆಯ ಗಡಿಯಾಚೆಯ ಸ್ವೇಚ್ಛೆಯ ಬಲೆಗೆ ಬೀಳದಂತೆ ಎಚ್ಚರವಾಗಿದ್ದೆ... ಎಲ್ಲಾ ಕಡೆ ಓಡಾಡುತ್ತಿದ್ದೆವು, ಸಿನಿಮಾ ಪಾರ್ಕು ಎಂದೆಲ್ಲಾ ಸುತ್ತಾಡುತ್ತಿದ್ದೆವು ಎನ್ನುವುದು ನಿಜವಾದರು, ಅದು ಕೈ ಕೈ ಹಿಡಿದು ಒತ್ತಾಗಿ ಕೂರುವ ಮಟ್ಟಕ್ಕೆ ಬಿಟ್ಟರೆ, ಅದಕ್ಕು ಮೀರಿದ ಹೆಚ್ಚಿನ ಒಡನಾಟಕ್ಕಿಳಿಯಲು ತಾವೀಯಲಿಲ್ಲ... ಅದೇನಕ್ಕು ಹೋಗಬಾರದು ಎನ್ನುವ ವಿವೇಚನೆಗಿಂತ ಮದುವೆಗೆ ಮೊದಲು ಏನು ಮಾಡಿದರು ನೈತಿಕವಾಗಿ ಸರಿಯಲ್ಲ ಎನ್ನುವ ಭಾವನೆಯೆ ಹೆಚ್ಚು ಪ್ರಬಲವಾಗಿತ್ತು. ಅದು ಎಷ್ಟಿತ್ತೆಂದರೆ ಕೈ ಹಿಡಿದು ಕೂತ ಹೊತ್ತಲು 'ಅದು ತಪ್ಪು..' ಅನಿಸುವಷ್ಟು... ಕೊನೆಗೇನೆಲ್ಲಾ ಆಗಿಹೋಯ್ತು..? ಮದುವೆ ಮುರಿದು ಬಿದ್ದಾಗ ನನ್ನ ಹೃದಯವೇ ಮುರಿದುಹೋಯ್ತು... ಎಷ್ಟೊಂದು ಅವಮಾನ, ಎಲ್ಲರೆದುರು ತಲೆ ತಗ್ಗಿಸಬೇಕಲ್ಲಾ ? ಎಂದು. ಆದರೂ ಆಗ ಸಾಯುವ ಯೋಚನೆಯೇನೂ ಬಂದಿರಲಿಲ್ಲ.. ಅವನಿಗಾಗಿ ಪ್ರಾಣ ಬಿಡುವ, ಸತ್ತು ಗೋಳಾಡುವ ಮಟ್ಟದ ನೈಜ ಪ್ರೀತಿಯೇನು ಅವನ ಮೇಲಿರಲಿಲ್ಲ... ಆದರೆ ಅದೇ ಹೊತ್ತಿಗೆ ಮನೆಯಲ್ಲಿ ನಿನ್ನ ಜತೆಗೆ ಗಂಟು ಹಾಕಿ ಕೈ ತೊಳೆದುಕೊಳ್ಳುವ ಪ್ರಸ್ತಾಪ, ಚರ್ಚೆ ಆರಂಭವಾಗಿತ್ತು - ನನ್ನನ್ನಾಗಲಿ, ನಿನ್ನಾಗಲಿ ಕೇಳದೆಯೆ... ಅದು ಮಾತ್ರ ನನಗೆ ತೀರಾ ಮೋಸವೆನಿಸಿತು - ಅದರಲ್ಲು ನಿನಗೆ...'

'ಹಾಗೇಕನಿಸಿತು..?' ವಿಷಯದ ಹೊಸ ದೃಷ್ಟಿಕೋನದ ಅನಾವರಣವಾಗುತ್ತಿರುವ ಸೋಜಿಗದಲ್ಲಿ ನಡುವೆ ಬಾಯಿ ಹಾಕಿ ಕೇಳಿದ ಶ್ರೀನಾಥ.

'ಶ್ರೀ.. ಸಾರೀ ಇದು ನಿನ್ನ ಪರ್ಸನಲ್ ವಿಷಯ ಅಂತ ಗೊತ್ತು.. ಆದರೆ ನಿನ್ನ ಕಾಲೇಜಿನ ಫ್ರೆಂಡ್ ಸರ್ಕಲ್ಲಿನಲ್ಲಿದ್ದ ಗೌಸಿಯ ತಂಗಿ ಮಮ್ತಾಜ್ ನನ್ನ ಕ್ಲಾಸ್ ಮೇಟ್... ಅವರ ಮನೆಗೂ ಆಗಾಗ ಹೋಗುತ್ತಿದ್ದ ಕಾರಣ, ನಾವು ಮೂರು ಜನ ಸೇರಿದಾಗ ಮಾತಿನ ನಡುವೆ ನಿನ್ನ ಸುದ್ಧಿಯೂ ಬರುತ್ತಿತ್ತು...'

'ಹಾಂ..ನನ್ನ ಸುದ್ಧಿಯೆ..? ಅದೇನು ಸುದ್ಧಿ..?' ಅಚ್ಚರಿಯ ಆಘಾತಕ್ಕೊಳಗಾದ ದನಿಯಲ್ಲಿ ಕೇಳಿದ್ದ ಶ್ರೀನಾಥ.. ತನಗೆ ಗೊತ್ತಿರದಂತೆ ಅಷ್ಟಾಗಿ ಗೊತ್ತಿರದವರೂ ಸಹ ತನ್ನ ವಿಷಯ ಕುರಿತು ಮಾತನಾಡಿಕೊಳ್ಳುತ್ತಿದ್ದರೆನ್ನುವ ಸುದ್ದಿಯೆ ಅವನಿಗೆ ಸೋಜಿಗದ್ದಾಗಿತ್ತು. 

' ಹುಡುಗಿಯರ ಮಾತಲ್ಲಿ ಬರುವ ಎಲ್ಲಾ ತರದ ಸುದ್ಧಿ.. ಆದರೆ ನಾನಿಲ್ಲಿ ಹೇಳುತ್ತಿರುವುದು ನೀನು ಶಾಲಿನಿ ಎಂಬ ನಿನ್ನಕ್ಲಾಸ್ ಮೇಟ್ ಹಿಂದೆ ಬಿದ್ದಿದ್ದ ಸುದ್ಧಿ.. ಜತೆಗೆ ನೀನು ಊರು ಬಿಟ್ಟು ಬೇರೆ ಊರಿಗೆ ಹೋಗಿ ಕೆಲಸ ಹಿಡಿದಿದ್ದು ಅವಳಿಗೋಸ್ಕರವೆ ಮತ್ತು ಅವಳಿದ್ದ ಕಂಪನಿಯಲ್ಲೆ ಕೆಲಸಕ್ಕೆ ಸೇರಿದ್ದು ಅಂತಲೂ ಗೊತ್ತಾಗಿತ್ತು.. ಅದೆಲ್ಲ ಗೊತ್ತಿದ್ದ ಕಾರಣದಿಂದಲೆ, ಮನೆಯಲ್ಲಿ ನಿನ್ನ ಜತೆಗಿನ ಮದುವೆಗೆ ಹವಣಿಸಿದಾಗ, ಬೇಡವೆನ್ನಲು ಪ್ರಯತ್ನಿಸಿದೆ.. ಆದರೆ ಆ ಹೊತ್ತಲ್ಲಿ ನನ್ನ ಮಾತನ್ನಾರು ಕೇಳುವ ಸ್ಥಿತಿಯಲ್ಲಿದ್ದರು...? ನಿನ್ನ ಶಾಲಿನಿಯ ಕುರಿತು ಮನೆಯಲ್ಲಿ ಹೇಳುವಂತಿರಲಿಲ್ಲ.. ಅದು ಇನ್ನೊಂದು ರಾಮಾಯಣಕ್ಕೆ ಕಾರಣವಾಗುತ್ತಿತ್ತು.. ಎಲ್ಲಾ ಅವಸರವಸರವಾಗಿ ನಮ್ಮಿಬ್ಬರನ್ನು ಹಸೆಗತ್ತಿಸಿ ಇಬ್ಬರ ಬಾಳನ್ನು ನರಕಕ್ಕೆ ದೂಡುತ್ತಿರುವರಲ್ಲ ಎಂಬ ಯಾತನೆಯೆ ತೀವ್ರವಾಗಿ, ಅದನ್ನು ತಡೆದಿಟ್ಟುಕೊಳ್ಳಲಾಗದ ಸಂಕಟ, ಅಸಹಾಯಕತೆ, ಏನು ಮಾಡಬೇಕೆಂದರಿವಾಗದ ಗೊಂದಲ - ಎಲ್ಲಾ ಸೇರಿಕೊಂಡ ಅಪಕ್ವತೆ ಆತ್ಮಹತ್ಯೆಯ ರೂಪದಲ್ಲಿ ಕೊನೆಯಾಗಿತ್ತು... ಆದರೆ ವಿಪರ್ಯಾಸವೆಂದರೆ, ಎಲ್ಲರು ಅದು ರಾಮಪ್ರಸಾದನ ಜತೆ ಮುರಿದು ಬಿದ್ದ ಮದುವೆಯ ಕಾರಣದಿಂದಾದ ಆತ್ಮಹತ್ಯೆ ಎಂದು ತಪ್ಪಾಗೆಣಿಸಿ ನಮ್ಮಿಬ್ಬರನ್ನು ಇನ್ನು ಕ್ಷಿಪ್ರವಾಗಿ ಗಂಟು ಹಾಕಲು ಓಡಾಡುವಂತಾಯ್ತು... ನನ್ನ ಸಾವಿಂದ ಪರಿಹಾರವಾಗಬಹುದು ಎಂದುಕೊಂಡಿದ್ದ ಸಮಸ್ಯೆ ಅದರಿಂದಲೆ ಉಲ್ಬಣವಾಗಿ ಹೋಗಿ ಕೊನೆಗೆ, ಅಂದುಕೊಂಡಿದ್ದಕ್ಕಿಂತಲು ಕ್ಷಿಪ್ರವಾಗಿ ನಮ್ಮಿಬ್ಬರ ಗಂಟು ಹಾಕುವಲ್ಲಿಗೆ ಕೊನೆಯಾಯ್ತು....' 

ದಿಗ್ಮೂಢನಂತೆ ಅವಳು ಬಿಚ್ಚಿಡುತ್ತಿದ್ದ ಕಥಾನಕವನ್ನು ಬಿಟ್ಟ ಬಾಯಿ ಬಿಟ್ಟಂತೆ ಕೇಳುತ್ತಿದ್ದ ಶ್ರೀನಾಥ.. ' ಶಾಲಿನಿಯ ಬಗ್ಗೆ ಇವಳಿಗೆ ಮೊದಲೆ ಗೊತ್ತಿತ್ತೆ..? ತನಗದರ ಸುಳಿವೆ ಸಿಕ್ಕಿರಲಿಲ್ಲವಲ್ಲಾ..? ಕಾಲಗರ್ಭದ ಅದೆಷ್ಟು ರಹಸ್ಯಗಳು ಹೀಗೆ ನಮಗೆ ಗೊತ್ತಿರದ ರೀತಿಯಲ್ಲಿ ಇನ್ನೆಲ್ಲೆಲ್ಲಿ ಅವಿತುಕೊಂಡು, ಇನ್ನು ಹೇಗೇಗೆ ಪ್ರಕಟವಾಗುತ್ತಿದೆಯೊ, ಏನೊ - ಯಾರಿಗೆ ಗೊತ್ತು..?' ಎಂದು ದನಿಸುತ್ತಿತ್ತು ಮನದಾಳದ ಆಲೋಚನೆ. ಅದರ ನಡುವಲ್ಲೆ ಮುಂದುವರೆದಿತ್ತು ಲತಳ ಅದ್ಭುತ ಅವಲೋಕನ...

' ಅದೆಲ್ಲದರ ಹಿನ್ನಲೆಯಲ್ಲಿ ನೋಡಿದರೆ, ನಾವಿದ್ದ ರೀತಿ ಹೆಸರಿಗೆ ಮಾತ್ರ ಗಂಡ - ಹೆಂಡತಿಯರ ಹಾಗೆ ಎಂದು ಗೊತ್ತಿದ್ದರು, ಅದನ್ನು ಕದಲಿಸುವ ಸಾಹಸ, ಧೈರ್ಯ ಬರಲಿಲ್ಲ. ಪಾಪು ಹುಟ್ಟಿದ್ದು ಅದೇ ಯಾಂತ್ರಿಕತೆಯ ಇನ್ನೊಂದು ಮಗ್ಗುಲಷ್ಟೆ ಎಂದು ಅರಿವಾಗಿತ್ತು. .. ಅದಕ್ಕೆ ಅಲ್ಲೂ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಿಲ್ಲ.. ಈಗಲೂ ನೀನ್ಯಾರದೊ ಹಿಂದೆ ಹೋದೆಯೆಂದಾಗಲೂ, ನನಗೆ ನಿಜವಾಗಿಯೂ ಬೇಸರವಾಗಲಿಲ್ಲ.. ಯಾಕೆಂದರೆ ನಿನ್ನೊಳಗೆಲ್ಲೊ ಆಳದಲ್ಲಿ ಇನ್ನೂ ಅಡಗಿ ಕೂತಿರುವ ಆ ಶಾಲಿನಿಯ ಛಾಯೆ, ನಿನ್ನನ್ನಿನ್ನು  ಬಿಟ್ಟಿಲ್ಲವೆಂದು ಕಾಣುತ್ತದೆ.. ಅದು ಯಾರ ಮೇಲೊ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವಂತೆ, ನಿನ್ನನ್ನು ಏನೇನನ್ನೊ ಮಾಡಲು ಪ್ರೇರೇಪಿಸಿ ಇದೆಲ್ಲಾ ತರದ ಅಡ್ಡದಾರಿ ಹಿಡಿಸುತ್ತಿರಬೇಕು.. ಬಹುಶಃ ಆ ಸಿಕ್ಕಸಿಕ್ಕವರೆಲ್ಲೆಲ್ಲ ನೀನು ಆ ಶಾಲಿನಿಯ ತುಣುಕನ್ನೆ ಹುಡುಕುತ್ತಿದ್ದೆಯೊ ಏನೊ ? ಬಹುಶಃ ನನ್ನೊಬ್ಬಳಲ್ಲಿ ಬಿಟ್ಟು...'

ಅವಳಾಡುತ್ತಿದ್ದ ಮಾತಿನ ಶಾಕ್ ನಿಂದ ಹೊರಬರಲಾಗದೆ ಅದೇ ಸ್ಥಿತಿಯಲ್ಲಿ ಮಾತನಾಡದೆ ಕೇಳಿಸಿಕೊಳ್ಳುತ್ತಿದ್ದ ಶ್ರೀನಾಥನಿಗೆ ಅದು ಸರಿ- ತಪ್ಪೆಂದು ಹೇಳುವ ಪ್ರಜ್ಞೆಯೂ ಮಾಯವಾಗಿ ಹೋದಂತಿತ್ತು..  ಅದೇ ದಿಗ್ಭ್ರಾಂತ ಸ್ಥಿತಿಯಲ್ಲಿ ಕೂತಿದ್ದಂತೆ ಅವಳ ಮಾತು ಮುಂದುವರೆದಿತ್ತು..

' ನನ್ನಿಂದಲೆ ಅವಳು ತಪ್ಪಿಹೋದ ಕಾರಣ ನೀನು ಅವಳ ಪ್ರತಿರೂಪವನ್ನು ನನ್ನಲ್ಲಿ ಕಾಣಲು, ನೋಡಲೂ ಬಯಸಲಿಲ್ಲವೆಂದು ಅರ್ಥವಾಗಿಯೆ ನಾನು ಇದರ ಕುರಿತು ಮಾತಾಡದೆ 'ಬಂದದ್ದು ಬಂದ ಹಾಗೆ..' ಎಂದು ಬದುಕುತ್ತಿದ್ದೆ.. ಆದರೆ ಈಗ ನೀನೆ ಈ ವಿಷಯ ಎತ್ತಿಕೊಂಡು ಬಂದಿದ್ದಿಯಾ.. ಈಗಲಾದರೂ ನಾನೊಂದು ಕೋರಿಕೆಯಿಡಲಾ..? ನಮ್ಮಿಬ್ಬರಿಗಲ್ಲದಿದ್ದರೂ ಪಾಪುವಿನ ಸಲುವಾಗಿ..?'

' ಅದೇನು..?'

' ನಿನ್ನ ಆ ಹುಡುಕಾಟಕ್ಕಾಗಿ ಎಲ್ಲೆಲ್ಲೊ ಹುಡುಕುವುದನ್ನು ಇನ್ನು ನಿಲ್ಲಿಸಿಬಿಡು.. ನೀನು ಬಯಸಿದ್ದ ಆ ಶಾಲಿನಿಯನ್ನು ನಿನಗೆ ಕೊಡಲು, ನಾನೆ ಅವಳಾಗಿ ನಿನ್ನ ಅಂತರಂಗದೊಳಗೆ ಬೆಳಗುವ ಅವಳದೇ ರೀತಿಯ ಜ್ಯೋತಿಯಾಗಲಿಕ್ಕೆ, ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ...ನೀನೂ ಬೇರೆಲ್ಲಾ ಮರೆತು ನನ್ನಲ್ಲೆ ನಿನ್ನ ಶಾಲಿನಿಯನ್ನು ಕಂಡುಕೊಂಡು ನೆಮ್ಮದಿಯಾಗಿರಬಾರದೆ...? ಇನ್ನೆಷ್ಟು ದಿನ ಈ ತೊಳಲಾಟ? ಒದ್ದಾಟ..? '

ಅವಳು ಕೇಳಿದ ಪ್ರಶ್ನೆ ಸರಳವಾಗಿದ್ದರು ಉತ್ತರ ಸರಳವಾಗಿರುವಂತದ್ದಾಗಿರಲಿಲ್ಲ.. ಆದರೆ ಅದರ ಸತ್ವ ಗಹನವಾದದ್ದಾಗಿತ್ತು... ಅವಳು ಹೇಳಿದ್ದಂತೆ ತನ್ನೆಲ್ಲಾ ತೊಳಲಾಟ, ಅಶಾಂತಿಯ ನೂರೆಂಟು ಹೆದ್ದೊರೆಗಳು ಕಾಡುತ್ತಿದ್ದರೂ, ಅದರೆಲ್ಲರ ಮೂಲ ಕಾರಣ ತನ್ನೊಳಗೆಲ್ಲೊ ತನಗೆ ಕಾಣದಂತೆ ಅವಿತುಕೊಂಡಿರುವ ಕೈ ಸೇರದ ಹೋದ ಶಾಲಿನಿಯ ಯಾತನೆಯ ಮೊತ್ತವೇನಾ ? ಅದೆಂದು ತನ್ನಲ್ಲಿ ಸ್ಪಷ್ಟ ರೂಪದಲ್ಲಿ ಪ್ರಕಟವಾಗಿರದಿದ್ದರು ಅದರ ಮೂಲದಿಂದ ಹೊಮ್ಮಿದ್ದ ಅತೃಪ್ತಿಯ ಭಾವವೆ ಈ ಬಗೆಯ ನಾನಾಕಾರ ತಾಳಿ, ಒಂಟಿತನ, ಏಕಾಂತ, ಬೇಡದವಳ ಜತೆಗಿನ ಸಾಂಗತ್ಯ ಇತ್ಯಾದಿಗಳ ನೆಪದ ಮುಖವಾಡದಲ್ಲಿ ಈ ರೀತಿಯ ತಾಮಸಿಕ ದುರಾಸೆಯಾಗಿ, ಮೋಹವಾಗಿ, ಮಾಯೆಯಾಗಿ ಕಾಡುತ್ತಿತ್ತಾ..? ತನ್ನ ಜೀವನದಲ್ಲಿ ಅದೇ ನೂರಾರು ಬಿರಡೆಯ ರೂಪದಲ್ಲಿ ಹೊರ ಹರಿವಾಗಿ ಸಮತೋಲಿಸಿಕೊಳ್ಳಲು ಯತ್ನಿಸುತ್ತಿದ್ದರೂ, ಅದೆಲ್ಲದರ ಮೂಲ ಕಾರಣದ 'ಕಮಲದ ಬಿರಡೆ'ಯಾಗಿ ಅದೆಲ್ಲಕ್ಕು ಕುಮ್ಮುಕ್ಕೀಯುತ್ತಿದ್ದ ಅದೃಶ್ಯ, ಅಸಂತೃಪ್ತ ಯಾತನೆ - ಈ ಕೈ ಸೇರದ ಶಾಲಿನಿಯ ತಿರಸ್ಕಾರದಿಂದಾಗಿದ್ದ ನೋವಿನ ತಾಮಸಿಕ ರೂಪವೇನಾ..? ಇಂದು ತನಗೇ ಅರಿವಿಲ್ಲದ ಆ ಮೂಲ ಬಿರಡೆಗೆ ಇವಳು ಕೈ ಹಾಕಿ ತಿರುಗಿಸುತ್ತಿದ್ದಾಳೆಯೆ - ಅಂದು ಆ ಬಾಲಭಿಕ್ಷು ಹೊಂಡದ ಕಮಲದ ಬಿರಡೆ ತಿರುಗಿಸಿದಂತೆ..? ಇದು ಬದುಕು ತನಗೀಯುತ್ತಿರುವ ಮತ್ತೊಂದು ಅವಕಾಶವೆ ಅಥವಾ ಕಡಿಮೆಯಾಗುತ್ತಿರುವ ತಾಮಸಿಕ ಶಕ್ತಿಯಿಂದಾಗಿ ಹೆಚ್ಚುತ್ತಿರುವ ಸಾತ್ವಿಕದ ಧನಾತ್ಮಕ ಫಲಿತಾಂಶವೆ..? ಅದೇನೆ ಇದ್ದರೂ ಲತಳ ಮಾತಲ್ಲಿ ಸತ್ಯವಿದೆ.. ತನ್ನೆಲ್ಲಾ ಯಾತನೆಗೂ ಶಾಲಿನಿಯ ನೆನಪಿನ ಬಿರಡೆಯೆ ಮೂಲ ಕಾರಣ ಎನ್ನುವುದು ಸರಿಯೆ, ತಪ್ಪೆ ಎಂದು ಜಿಜ್ಞಾಸಿಸುತ್ತ ಕೂರುವ ಬದಲು ಅದನ್ನು ಸರಿಯಾದ ಅನಿಸಿಕೆಯೆಂದೆ ಭಾವಿಸಿ ಯಾಕೆ ಮುಂದುವರೆಯಲು ಪ್ರಯತ್ನಿಸಬಾರದು? ಕಡೆಯಲ್ಲಿ ಎಲ್ಲವು ಸರಿಯಾದ 'ಅಂತಿಮ'ದಲ್ಲಿ ಕೊನೆಯಾಗುವುದಾದರೆ , ಈ ತಪ್ಪನಿಸಿಕೆಯ ಆಧಾರದಲ್ಲೆ ಮುಂದೆ ಹೆಜ್ಜೆಯಿಟ್ಟರೂ ತಪ್ಪೇನು..? ನಿಜ ಅವಳ ಮಾತಲ್ಲೂ ತಥ್ಯವಿದೆ.. ಬಹುಶಃ ಇದೇ ಸರಿಯಾದ ದಾರಿ...' ಎಂದುಕೊಂಡವನೆ...

' ಶಾಲಿನಿ...' ಎಂದಿದ್ದ.. ಹಾಗನ್ನುತ್ತಲೆ ಲತಳ ಹೆಸರನ್ನೆ ತಪ್ಪಾಗಿ ಕರೆದುಬಿಟ್ಟನಲ್ಲಾ ಎಂದು ತುಟಿ ಕಚ್ಚಿಕೊಳ್ಳುತ್ತ..!

ಆದರೆ ಅತ್ತಕಡೆಯಿಂದ ತಟ್ಟನೆ ಮಾರುತ್ತರ ಬಂದಿತ್ತು ಅವನು ನಿರೀಕ್ಷಿಸದ ರೀತಿಯಲ್ಲಿ..

'ಥ್ಯಾಂಕ್ಸ್ ಶ್ರೀ... ನೀನು ಈಗ ನನ್ನನ್ನೆ 'ಶಾಲಿನಿ' ಎಂದು ಕರೆದದ್ದು, ನನ್ನನ್ನೆ ಅವಳೆಂದು ಭಾವಿಸುವುದರ ಮೊದಲ ಹೆಜ್ಜೆ.. ನೀನು ನನ್ನನ್ನು ಮುಂದಕ್ಕೆ ಹಾಗೆ ಆ ಹೆಸರಲ್ಲೆ ಕರೆದರೂ ಸರಿಯೆ..ನನಗದರ ಪರಿವೆಯಿಲ್ಲ.. ಸದ್ಯಕ್ಕೆ, ಈ ಆರಂಭ ಸಾಕು.. ಅದನ್ನೆ ಇಬ್ಬರು ಮುಂದಕ್ಕೆ ತೆಗೆದುಕೊಂಡು ಹೋಗೋಣ... ನೀನಿನ್ನು ಏನೂ ಹೇಳುವುದು ಬೇಡಾ.. ನಮ್ಮಿಬ್ಬರಿಗು ಇದೆ ಹೊಸ ಹಾದಿಯನ್ನು ಹಾಸುವ ಕೊಂಡಿಯಾಗಲಿ.. ನಿನ್ನ ಪ್ರಾಜೆಕ್ಟ್ ಹೇಗೂ ಮುಗಿದಿದೆಯಲ್ಲಾ.. ನಿನ್ನನ್ನೆ ಎದುರು ನೋಡುತ್ತೇನೆ ಶಾಲಿನಿಯಾಗಿ ಪಾಪುವಿನ ಜತೆಯಲ್ಲೆ
... ಬೇಗ ಬಂದು ಬಿಡು ' ಎಂದುಬಿಟ್ಟಳು...!

ಇನ್ನು ಹೇಳುವುದಕ್ಕೂ ಕೇಳುವುದಕ್ಕೂ ಏನೂ ಉಳಿದಿಲ್ಲವೆಂದು ಇಬ್ಬರಿಗೂ ಅರಿವಾಗಿ ಹೋಗಿತ್ತು.. ಅವಳಾಡಿದ ಮಾತುಗಳಲ್ಲಿನ ಶಕ್ತಿಯ ಗಹನತೆ ಮಿಕ್ಕೆಲ್ಲ ಮಾತುಗಳನ್ನು ಅರ್ಥಹೀನವಾಗಿಸುವಷ್ಟು ಸತ್ವಪೂರ್ಣದ್ದಾಗಿತ್ತು. ಅದರ ಮುಂದೆ ಇನ್ನೆಷ್ಟೆ ಮಾತಾಡಿದರೂ ಅದು ಅದರ ವ್ಯಾಪ್ತಿಯ ಆಳ ಅಗಲದ ವಿವರಣೆ, ವ್ಯಾಖ್ಯೆಯಾಗುವುದೆ ಹೊರತು ಅದನ್ನು ಅಧಿಗಮಿಸಿ ಮತ್ತೇನನ್ನು ಹೇಳದು ಎನಿಸಿಬಿಟ್ಟಿತ್ತು. ಜತೆಗೆ ತಾನು ಕೇವಲ ತಪ್ಪೊಪ್ಪಿಗೆಯಿಂದ ಹಗುರಾಗಲೆಂದೆಣಿಸಿ ಹೊರಟ ಕಾರ್ಯ, ಅದರ ಉದ್ದಗಲದಳತೆಯೆಲ್ಲವನ್ನು ಮೀರಿದ ಮಹತ್ತರ ಸಂಭವವಾಗಿ, ತನ್ನ ಬದುಕಿಗಡ್ಡವಾಗಿ ಬಿದ್ದಿದ್ದ ದೊಡ್ಡದೊಂದು ತೊಡಕನ್ನೆ ಎತ್ತೆಸೆದು ಬಿಟ್ಟಿತೆಂದರೆ ಅವನಿಗದು ನಂಬಲಸಾಧ್ಯವಾದ ಸಂಘಟನೆ ಮಾತ್ರವಲ್ಲದೆ ಯಾವುದೊ ಕಣ್ಗಾಣದ ಮಾಯೆ ಮತ್ತೆ ಪ್ರಕ್ಷೇಪಿಸುತ್ತಿರುವ ಧನಾತ್ಮಕ ಛಾಯೆಯೆ ಇರಬಹುದೇನೊ ಎನಿಸಿಬಿಟ್ಟಿತ್ತು. ಹೇಗಾದರೂ ಸರಿ, ಎಂತಾದರೂ ಸರಿ - ಅಡ್ಡಾದಿಡ್ಡಿಯಾಗಿ ಹೋಗುತ್ತಿರುವ ನಾವೆಗೊಂದು ಸರಿ ದಿಕ್ಕು ಸಿಗುವುದಾದರೆ ಅದನ್ನೇಕೆ ತಿರಸ್ಕರಿಸುವ ಅಹಂಕಾರ ತೋರಬೇಕೆನಿಸಿ, ಅದರ ಕಾರಣ ರೂಪಾಗಿ ಬಂದ ಅವಳ ಜಾಣ್ಮೆಯ ಚಿತ್ರಣ ಮನದಲ್ಲೆಲ್ಲ ಕೃತಜ್ಞತ ಭಾವವನ್ನು ಹುಟ್ಟಿಸಿ ಮೈದುಂಬಿಕೊಂಡಂತಾಗಿ ಮಾತು ಮುಗಿಸಿ ಪೋನಿಡುವ ಮೊದಲ ಕೊನೆಯ ಮಾತಾಗಿ ನುಡಿದಿದ್ದ, ಅದೂ ಮೊಟ್ಟ ಮೊದಲ ಬಾರಿಗೆ - 'ಐ ಲವ್ ಯೂ ಡಿಯರ್' ಎಂದು..!

ನಾಳೆಗೆ ಹೊರಡುವುದೆಂದು ನಿರ್ಧಾರವಾಗಿ ಎಲ್ಲವು ಸಿದ್ದತೆಯಾಗಿ ಕೊನೆಯ ಬಾರಿಗೆಂಬಂತೆ ಆಫೀಸಿನ ಸಹೋದ್ಯೋಗಿಗಳಿಗೆಲ್ಲ 'ಬೈ ಬೈ..' ಹೇಳುವ ಉದ್ದೇಶದಿಂದ ಆ ದಿನ ಬೆಳಿಗ್ಗೆ ಆಫೀಸಿಗೆ ಬಂದಿದ್ದ ಶ್ರೀನಾಥ, ಲಂಚ್ ಹೊತ್ತಿಗೆ ಹೊರಟುಬಿಡುವುದೆಂದು ತೀರ್ಮಾನಿಸಿ. ಅದರಂತೆ ಬೆಳಿಗ್ಗೆಯೆ ಎಲ್ಲರ ಟೇಬಲ್ಲಿನ ಹತ್ತಿರ ಹೋಗಿ ಕೈ ಕುಲುಕಿ ಬರುವ ಕೆಲಸ ಆರಂಭಿಸಿದ್ದ - ಅವರೆಲ್ಲ ಅತ್ತಾ ಇತ್ತಾ ಕೆಲಸದ ಗಡಿಬಿಡಿಯಲ್ಲಿ ಮಾಯವಾಗುವ ಮೊದಲೆ. ಅದಕ್ಕೆರಡು ದಿನ ಮೊದಲೆ ಅವರನ್ನೆಲ್ಲ ಜತೆಯಾಗಿ ಕರೆದುಕೊಂಡು ಆಫೀಸಿನ ಹತ್ತಿರದಲ್ಲೆ ಸಿಲೋಮ್ ರಸ್ತೆಯ ಹತ್ತಿರವೆ ಇದ್ದ ಕಿರು ರಸ್ತೆಯ ಭಾರತೀಯ ರೆಸ್ಟೋರೆಂಟ್ - 'ಹಿಮಾಲಿ ಚಾಚಾ' ದಲ್ಲಿ ಅವರಿಗೆಲ್ಲ ಡಿನ್ನರು ಪಾರ್ಟಿ ಕೊಡಿಸಿಯಾಗಿದ್ದ ಕಾರಣ ಮತ್ತೆ ಕೊನೆ ಗಳಿಗೆಯ ಗಡಿಬಿಡಿ, ಆತಂಕದ ಅಗತ್ಯವಿಲ್ಲದಂತೆ ಆರಾಮವಾಗಿ ಕೊನೆಯ ವಿದಾಯದ ಥ್ಯಾಂಕ್ಸ್ ಹೇಳಲು ಸಾಧ್ಯವಾಗಿತ್ತು. ಅದೆಲ್ಲಾ ಮುಗಿಸಿ, ಕುನ್. ಸೋವೀಗು ಪೋನ್ ಮೂಲಕವೆ ಮತ್ತೊಮ್ಮೆ ಮಾತನಾಡಿ 'ಬೈ' ಹೇಳೋಣವೆಂದು ಸೀಟಿನತ್ತ ನಡೆದರೆ ಅಲ್ಲೊಂದು ಅಚ್ಚರಿ ಕಾದಿತ್ತು - ಟೇಬಲ್ ಮೇಲೆ ಬಿಸಿ ಬಿಸಿ ಹಬೆಯಾಡುತ್ತಿದ್ದ 'ಕಾಫಿ'ಯ ರೂಪದಲ್ಲಿ..!' ಅಂದರೆ ಕುನ್. ಸು ಆಗಲೆ ಕೆಲಸಕ್ಕೆ ವಾಪಸ್ಸು ಬಂದಾಯಿತೆಂದು ಲೆಕ್ಕವೆ ? ಇಷ್ಟು ಬಿಸಿಯಾಗಿರುವುದನ್ನು ನೋಡಿದರಂತೂ ಈಗ ತಾನೆ ಇಟ್ಟು ಹೋದಂತಿದೆ.. ?ಅಂದರೆ ತಾನು ಸುತ್ತಮುತ್ತ ಓಡಾಡುತ್ತಿದ್ದುದನ್ನು ಗಮನಿಸುತ್ತಲೆ ಇದ್ದು, ತಾನು ಬರುವ ಹೊತ್ತಿಗೆ ಸರಿಯಾಗಿ ಹೊಂದಿಕೊಳ್ಳುವಂತೆ ಇಟ್ಟು ಹೋಗಿರಬೇಕು.... ಅದೇ ಚಾಣಾಕ್ಷತೆ, ಚುರುಕುತನ... ಆದರೆ, ಸುತ್ತಮುತ್ತಲೂ ಅವಳ ಸುಳಿವೆಲ್ಲೂ ಕಾಣಿಸಲಿಲ್ಲ... 'ಹೇಗಾದರೂ ಸರಿ, ಸದ್ಯ ಅವಳು ಕೆಲಸಕ್ಕೆ ವಾಪಸ್ಸಾಗಿದ್ದರೆ ಸಾಕು' ಎಂದುಕೊಂಡು ಆ ಕಾಫಿ ಲೋಟವನ್ನು ಎತ್ತಿ ತುಟಿಗಿಡುತ್ತಿದ್ದಂತೆ ಆ ವಾಸನೆ, ರುಚಿಯಿಂದಲೆ ಖಚಿತವಾಗಿ ಹೋಗಿತ್ತು - ಅದು ಅವಳೆ ಮಾಡಿಟ್ಟಿದ್ದ ಕಾಫಿ ಎಂದು. ಅಲ್ಲಿಗವಳು ವಾಪಸ್ಸಾದದ್ದು ನೂರಕ್ಕೆ ನೂರು ಖಚಿತವಾದಂತಾಗಿ, ಮತ್ತೊಂದು ಸಮಾಧಾನದ ನಿಟ್ಟುಸಿರು ಹೊರಬಿದ್ದಿತ್ತು ಶ್ರೀನಾಥನ ಎದೆಯಿಂದ. ಅದರೂ ಅವಳನ್ನು ನೋಡುವ ಅಥವ ಭೇಟಿಯಾಗುವ ವಿಶೇಷ ಪ್ರಯತ್ನವೇನೂ ಮಾಡದೆ ಕಂಪ್ಯೂಟರು ಮುಚ್ಚಿ ಬ್ಯಾಗ್ ಎತ್ತಿಕೊಂಡು ಹೊರಡಬೇಕೆನ್ನುವಷ್ಟರಲ್ಲಿ, ಕುನ್. ಲಗ್ ಸೆಕ್ರೆಟರಿ ಅರ್ಜೆಂಟಾಗಿ ಓಡಿ ಬಂದು, ಮೀಟಿಂಗ್ ರೂಮಿನತ್ತ ಹೋಗಬೇಕೆಂದು ಸುದ್ದಿ ರವಾನಿಸಿ ತೆರಳಿದಾಗ, 'ಓಹ್..ಕುನ್. ಲಗ್ ಗೆ ಹೇಳಿ ಹೋಗುವುದನ್ನೆ ಮತರೆತುಬಿಟ್ಟೆನಲ್ಲಾ ?' ಎನಿಸಿ ಆ ದೊಡ್ಡ ಮೀಟಿಂಗ್ ರೂಮ್ ಬಾಗಿಲು ತೆಗೆದು ಒಳಗಡಿಯಿಟ್ಟವನೆ, ದಿಗ್ಮೂಢನಂತೆ ಮಾತೆ ಹೊರಡದೆ  ನಿಂತುಬಿಟ್ಟಿದ್ದ ಅರೆಗಳಿಗೆ..!

ಅಲ್ಲಿದ್ದ ದೊಡ್ಡ ಟೇಬಲ್ಲಿನ ಮೇಲೆ ಇವನ ವಿದಾಯಕ್ಕೆಂದೆ ತಯಾರಿಸಿದ್ದ ದೊಡ್ಡದೊಂದು 'ಕೇಕ್' ಇವನನ್ನೆ ಎದುರು ನೋಡುತ್ತ ಕಾಯುತ್ತಿತ್ತು.. ಅದರ ಸುತ್ತಲೂ ಮೆಕ್ಡೊನಾಲ್ಡ್ಸ್, ಕೇಯಫ್ಸಿ, ಪೀಜಾಹಟ್ಗಳ ಹಲವಾರು ತರದ ತಿನಿಸಿನ ಪೊಟ್ಟಣಗಳ ಮತ್ತು ಪಾನೀಯಗಳ ಸಮ್ಮೇಳನವೆ ನೆರೆದು ನಿಂತಿತ್ತು... ಅದರ ಸುತ್ತಲೂ ಹೆಚ್ಚು-ಕಡಿಮೆ ಪ್ರಾಜೆಕ್ಟಿನ ಎಲ್ಲಾ ನೇರ ಮತ್ತು ಪರೋಕ್ಷ ಸದಸ್ಯರ ನೆರೆದು ನಿಂತಿದ್ದ ದೊಡ್ಡ ಗುಂಪು... ಬಹುಶಃ ಎಲ್ಲರು ತಮ್ಮ ಕೈಯಿಂದ ಹಾಕಿದ್ದ ಹಣದಲ್ಲಿ ಅದನ್ನೆಲ್ಲ ತರಿಸಿದ್ದಿರಬೇಕು... ಆದರೆ ಶ್ರೀನಾಥನ ಗಮನ ಸೆಳೆದದ್ದು ಅದಾವುದು ಅಲ್ಲ ... ಅವರೆಲ್ಲರ ನಡುವೆ ಯಾವುದೊ ಮೂಲೆಯಲ್ಲವಿತುಕೊಂಡಂತೆ ನಿಂತಿದ್ದ ಕುನ್. ಸು...! ಅವಳ ಕೈಯಲ್ಲಿ ಅವರೆಲ್ಲ ಸೇರಿ ಏನೇನೊ ಸಂದೇಶ ಬರೆದು ಇಟ್ಟಿದ್ದ ದೊಡ್ಡ ಗಾತ್ರದ 'ಗ್ರೀಟಿಂಗ್ ಕಾರ್ಡ್' ಕೂಡ ಕಾಣಿಸಿತ್ತು. ನಂತರ ನಡೆದ ಪುಟ್ಟ ಅನೌಪಚಾರಿಕ ಸಭೆಯಲ್ಲಿ ಒಂದೆರಡು ಮಾತಾಡಿದ ನಂತರ ಕುನ್. ಲಗ್ ಶ್ರೀನಾಥನ್ 'ಚೆಕ್ ಫಂಡ್' ಬಗೆಯೂ ಹೇಳಿ, ಮಿಕ್ಕವರು ಆ ಕೊಡುಗೆಯ ಪ್ರಕ್ರಿಯೆಯನ್ನು ಉತ್ತೇಜಿಸಿ ಅದು ನಿರಂತರವಾಗಿರುವಂತೆ ಮಾಡಬೇಕೆಂದು ಕೋರಿಕೊಂಡಿದ್ದರು. ಮಾತೆಲ್ಲ ಮುಗಿದ ಮೇಲೆ ಕುನ್. ಸು ಕೈಯಲ್ಲೆ ಗ್ರೀಟಿಂಗ್ ಕೊಡಿಸಿ ಇಡೀ ಥಾಯ್ಲ್ಯಾಂಡಿನ ಪ್ರಾಜೆಕ್ಟಿನ ಮುಕ್ತಾಯಕ್ಕೊಂದು ಕಾವ್ಯಾತ್ಮಕ ಮುಕ್ತಾಯ ಹಾಡಿಸಿಬಿಟ್ಟಿದ್ದರು ಕುನ್. ಲಗ್. ಅವರದೆಲ್ಲಾ ಚರ್ಯೆಯಿಂದ ಎದೆ ತುಂಬಿ ಬಂದು, ಕಣ್ಣಾಲಿ ತುಂಬಿಕೊಂಡಂತಾದ ಶ್ರೀನಾಥ, ಆ ದೊಡ್ಡ ಗ್ರೀಟಿಂಗನ್ನು ತೆರೆದು ನೋಡುತ್ತಿದ್ದಂತೆ ಅದರ ತುಂಬೆಲ್ಲ ತರತರದ ಶುಭಾಶಯಗಳು, ಸಂದೇಶಗಳು ಸಹಿಗಳ ಸಮೇತ ಕಾಣಿಸಿಕೊಂಡಿದ್ದವು.. ಅದರ ಜತೆಯಲ್ಲೆ ಕೆಳಗೇನೊ ಚಿಕ್ಕದೊಂದು ಕಾರ್ಡ್ ಇರುವುದನ್ನು ಕಂಡು ಅದೇನೆಂದು ನೋಡಿದರೆ - ಕುನ್. ಸು ಅಕ್ಷರ ಮಾತ್ರವಿದ್ದ ಆ ಪುಟ್ಟ ಕಾರ್ಡಿನಲ್ಲಿ 'ಕಾಪ್ ಕುನ್ ಕಾ - ಕುನ್. ಸು' ಎಂದು ಬರೆದಿತ್ತು. ತಟ್ಟನೆ ತಲೆಯೆತ್ತಿ ಅವಳತ್ತ ನೋಡಿದ ಶ್ರೀನಾಥನ ದೃಷ್ಟಿ, ಅವಳ ಸುಂದರ ಕಣ್ಣೋಟದ ಜತೆ ಅರೆಗಳಿಗೆ ಮಿಳಿತವಾಗಿ ನಡೆದೆಲ್ಲಾ ಸಂಘಟನೆಗಳ ಸಮಷ್ಟಿತ ಸಾರವೆಲ್ಲ ಒಂದೆ ಕ್ಷಣದಲ್ಲಿ ಮಿಂಚಿನಂತೆ ಮನಃಪಟಲದ ಮೇಲೆ ಹಾದು ಹೋಗಿತ್ತು.. ಯಾಕೊ ಇದ್ದಕ್ಕಿದ್ದಂತೆ ಕಣ್ಣು ಮಂಜಾದಂತಾಗಿ, ಜಾರಿದ ಹನಿಯೊಂದು ತನ್ನೆಲ್ಲ ಪಾಪಗಳಿಗೆ ಪ್ರಾಯಶ್ಚಿತವೊ ಅಥವಾ ತನ್ನ ನಲ್ಮೆಯ ಗೆಳೆತನಕ್ಕೆ ಹೇಳಿದ ಕೊನೆಯ ವಿದಾಯವೋ ಎಂಬಂತೆ ಹನಿಗೂಡಿಕೊಂಡು ತುದಿಗಣ್ಣನ್ನು ಒದ್ದೆ ಮಾಡಿತ್ತು.. ಅದು ಯಾರಿಗು ಗೊತ್ತಾಗದಂತೆ ಬೆರಳ ತುದಿಯಿಂದ ಕ್ಷಿಪ್ರವಾಗಿ ಕಣ್ಣೊರೆಸಿಕೊಂಡದ್ದನ್ನು ಯಾರೂ ಗಮನಿಸದಿದ್ದರೂ, ಕುನ್. ಸು ವಿನ ಚಾಣಾಕ್ಷ ಕಣ್ಣುಗಳು ಮಾತ್ರ ಗಮನಿಸಿಬಿಟ್ಟವೆಂದು ಅವಳ ತುಂಬಿ ಬಂದ ಕಣ್ಣಾಲಿಗಳೆ ಹೇಳಿ ಬಿಟ್ಟಿದ್ದವು.. ಯಾಕೋ ಅಲ್ಲಿ ನಿಂತಿರಲಾಗದೆ ಟಾಯ್ಲೆಟ್ಟಿನ ನೆಪದಲ್ಲಿ ತಕ್ಷಣವೆ ಹೊರ ಬಂದಿದ್ದ 'ಪ್ರಾಜೆಕ್ಟ್ ಮ್ಯಾನೇಜರ ಕುನ್. ಶ್ರೀನಾಥ...'

ಏರ್ಪೋರ್ಟಿಗೆ ಹೊರಡಲೆಂದು ಸಿದ್ದ ಮಾಡಿಟ್ಟುಕೊಂಡಿದ್ದ ಕಟ್ಟ ಕಡೆಯ ಸೂಟ್ಕೇಸನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡಿ ಜಿಪ್ ಹಾಕಿ ಬೀಗ ಜಡಿದವನೆ ಮತ್ತೊಮ್ಮೆ ಪ್ಲಾಟಿನ ಒಳಗೆಲ್ಲ ಕೊನೆಯದೊಂದು ಬಾರಿಯ ಸುತ್ತು ಹಾಕಿ ಬಂದ ಶ್ರೀನಾಥ - ಏನಾದರೂ ಮರೆತು ಹೋಗಿದೆಯೆ ಎಂದು ಪರಿಶೀಲಿಸುತ್ತ. ಏನೂ ಬಿಟ್ಟು ಹೋದಂತೆ ಕಾಣಲಿಲ್ಲ.. ಅಲ್ಲದೆ ದೊಡ್ಡ ಸರಕೆಲ್ಲ ಈಗಾಗಲೆ 'ಕಾರ್ಗೋ' ಮೂಲಕ ಕಳಿಸಿಯಾಗಿದ್ದ ಕಾರಣ ಬರಿಯ ಸಣ್ಣಪುಟ್ಟ ದೈನಂದಿನ ಸರಕುಗಳಷ್ಟೆ ಬಾಕಿಯುಳಿದಿತ್ತು. ಕೊನೆಯ ಅವಲೋಕನವೂ ಮುಗಿದ ಮೇಲೆ , ಬಾಗಿಲು ಹಾಕಿ ಬೀಗ ಜಡಿದು ರಿಸೆಪ್ಷನ್ನಿನಲ್ಲಿದ್ದ ಕುನ್. ರತನಳ ಕೈಗೆ ಕೀ ಕೊಟ್ಟವನೆ ಟ್ಯಾಕ್ಸಿ ತರಿಸಲು ಹೇಳಿದ ಏರ್ಪೋರ್ಟಿಗೆ ಹೊರಡಲು... ಬಿಲ್ಲಿಂಗ್ ಎಲ್ಲ ಕಂಪನಿಯ ವತಿಯದಾದ್ದರಿಂದ ಕೊನೆಯಲ್ಯಾವ ಲೆಕ್ಕವನ್ನೂ ಚುಕ್ತಾ ಮಾಡುವ ಅಗತ್ಯವಿರಲಿಲ್ಲ.. ಟ್ಯಾಕ್ಸಿಗೆ ಪೋನ್ ಮಾಡಿದ ಕುನ್. ರತನ ತಾನಾಗಿಯೆ ಎದ್ದು ಬಂದು ದೊಡ್ಡ ಚಾಕೋಲೇಟ್ ಒಂದನ್ನು ಕೈಗಿತ್ತು 'ಹ್ಯಾಪಿ ಜರ್ನೀ, ಸೀ ಯೂ ಎಗೈನ್' ಎಂದು ಹಾರೈಸಿದ್ದಳು. 'ಪಾಪ.. ತುಂಬಾ ಒಳ್ಳೆಯ ಹುಡುಗಿ..' ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಟ್ಯಾಕ್ಸಿ ಬಂದು ನಿಂತಿತ್ತು. ಅದನ್ನು ಏರಿದವನೆ 'ಸುವನ್ನ ಭೂಮಿ ಎರ್ಪೋರ್ಟ್' ಎಂದಿದ್ದ -  ನೀಲಿ ಮತ್ತು ಕೆಂಪು ಬಣ್ಣದ ಹೊಳೆಯುವ ಆ ಟ್ಯಾಕ್ಸಿಯ ಹಿಂದಿನ ಸೀಟಲ್ಲಿ ಕುಳಿತು. ಆ 'ಸುವನ್ನ ಭೂಮಿ' ಹೆಸರೂ ಸಹ  ಭಾರತೀಯ ಮೂಲದ 'ಸುವರ್ಣ ಭೂಮಿಯ' ಅಪಭ್ರಂಶ.. ಅಂತೂ 'ಲ್ಯಾಂಡ್ ಅಫ್ ಸ್ಮೈಲ್' ಎನ್ನುವ ಈ ಸುವರ್ಣ ಭೂಮಿಗೆ ವಿದಾಯ ಹೇಳುತ್ತ ಭಾರತದಲ್ಲಿ ತನಗಾಗಿ ಕಾದಿರುವ ಹೊಸ ' ಸಂಸಾರವೆಂಬ ಸುವರ್ಣ ಪಂಜರದತ್ತ' ಗಿಳಿಯಾಗಿ ಸೇರಿಕೊಳ್ಳುವ ಕಾತರದಲ್ಲಿ ಹೊರಟಂತಾಯ್ತು.. ಇದು ಮತ್ತೊಂದು ರೀತಿಯ ಪರಿಭ್ರಮಣದ ಸುತ್ತು... ಮತ್ತೆ ಹೊರಟು ಬಂದ ಬಿಂದುವಿಗೆ ಪಯಣ .. ಎಂದುಕೊಂಡು ನಕ್ಕು ಹಾಗೆ ತಲೆಯೊರಗಿಸಿ ಕಣ್ಮುಚ್ಚಿದ ಶ್ರೀನಾಥ ಏರ್ಪೋರ್ಟ್ ತಲುಪುವವರೆಗೆ.

ಟ್ಯಾಕ್ಸಿ ಏರ್ಪೋರ್ಟಿನಲ್ಲಿ ತಲುಪಿ ಕೆಳಗಿಳಿಯುತ್ತಿದ್ದಂತೆ ಅನತಿ ದೂರದಲ್ಲಿ ಬಂದ ಸೌರಭ್ ದೇವನ ಟ್ಯಾಕ್ಸೀ ಸ್ವಲ್ಪ ಮುಂದೆ ನಿಂತಿದ್ದು ಕಾಣಿಸಿತು. ದುಡ್ಡು ಎಣಿಸಿ ಕೊಡುತ್ತಿದ್ದ ಸೌರಭ್ ಶ್ರೀನಾಥನತ್ತ ನೋಡಿ ನಕ್ಕ.. ಅವನು ಕೋಲ್ಕತ್ತಾಗೆ ತನ್ನೂರಿನ ಮನೆಗೆ ನೇರ ಹೊರಟಿದ್ದ ಬೆಂಗಳೂರಿಗೆ ಕೆಲಸಕ್ಕೆ ವಾಪಸಾಗುವ ಮೊದಲು.. ಫ್ಲೈಟಿನ ಅಂತರ ತೀರಾ ಹೆಚ್ಚಿರದ ಕಾರಣ ಏರ್ಪೋರ್ಟಿನಲ್ಲೊಮ್ಮೆ ಭೇಟಿಯಾಗುವುದೆಂದು ಮೊದಲೆ ನಿರ್ಧರಿಸಿಕೊಂಡಿದ್ದ ಕಾರಣ ಹೆಚ್ಚು ಕಡಿಮೆ ಒಂದೆ ಹೊತ್ತಿಗೆ ಬಂದು ತಲುಪಿದ್ದರು.. ಥಾಯ್ ಏರ್ವೇಸ್ ಸಾಲಿನಲ್ಲಿ ನಿಂತು ಚೆಕ್ ಇನ್ ಮುಗಿಸಿ, ಇಮಿಗ್ರೇಷನ್ ದಾಟಿ ಬೋರ್ಡಿಂಗ್ ಗೇಟಿನ ಹತ್ತಿರವಿದ್ದ ರೆಸ್ಟೋರೆಂಟಿನಲ್ಲಿ ಕಾಫಿ ಹಿಡಿದು ಕೂತರು - ಇಬ್ಬರು ಆತ್ಮೀಯ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತ.. ಇನ್ನು ಮತ್ತೆ ಭೇಟಿಯಾಗುವುದು ಯಾವ ಪ್ರಾಜೆಕ್ಟಿನಲ್ಲೊ, ಇನ್ನಾವ ಜಾಗದಲ್ಲೊ ? 

' ವಾಟ್ ಏ ಪ್ರಾಜೆಕ್ಟ್ ? ವಾಟ್ ಏ ಕಂಟ್ರಿ ಶ್ರೀನಾಥ ಸಾರ್ ..!' ಎಂದ ತನ್ನ ಎಂದಿನದೆ ವಿಸ್ಮಯದ ಕಣ್ಣಲ್ಲಿ, ಸೌರಭ್ ದೇವ್.

'ಹೌದೆ'ನ್ನುವಂತೆ ತಲೆಯಾಡಿಸುತ್ತ..' ನೋ ಡೌಟ್ ಅಬೌಟ್ ಇಟ್..' ಎಂದ ಶ್ರೀನಾಥ..

' ಐ ಗೆಸ್ ನಾನು ಈ ರೀತಿಯ ವಿಪರ್ಯಾಸವನ್ನು ಎಲ್ಲೂ ನೋಡಲಾಗದು ಎಂದು ಕಾಣುತ್ತದೆ.. ಜಸ್ಟ್ ಲೈಕ್ ಸಿಲೋಮ್ - ಎಷ್ಟೊಂದು ದ್ವಂದ್ವಗಳು ಹೇಗೆ ಕೋ ಎಗ್ಸಿಸ್ಟ್ ಆಗಿವೆ ಇಲ್ಲಿ? 'ಪಾಟ್ ಪೋಂಗ್' ಜತೆಗೆ 'ವಾಟ್ ಪೋ' ಕೂಡ ಇರುವ ಹಾಗೆ.. ಒಳ್ಳೆಯದು ಕೆಟ್ಟದ್ದು ಎಲ್ಲಾ ಕಡೆಯೂ ಇರುತ್ತದೆ, ನಮಗೆ ಒಪ್ಪಿತವಾದದ್ದನ್ನು ಆಯ್ದುಕೊಳ್ಳುವ ಹೊಣೆ ನಮ್ಮದೇ ಎನ್ನುವ ಹಾಗೆ...' ತನಗೆ ತಾನೆ ಎಂಬಂತೆ ಹೇಳಿಕೊಂಡಿದ್ದ ಸೌರಭ್ ದೇವ್..

ನಾನು ಅಷ್ಟು ದಿನ ಆಶ್ರಮದಲ್ಲಿದ್ದು ಅರಿತು ಬಂದ ಸತ್ಯವನ್ನು ಇವನು ಇಲ್ಲಿದ್ದೆ ಕಂಡುಕೊಂಡಂತಿದೆಯಲ್ಲಾ? - ಎನ್ನುವ ವಿಸ್ಮಯದೊಡನೆ ಕಾಫಿ ಹೀರುತ್ತ ' ಅದೇ ಈ ದೇಶದ ವೈಶಿಷ್ಠ್ಯ' ಎಂದ ಶ್ರೀನಾಥ. 

ಆಗ ಇದ್ದಕ್ಕಿದ್ದಂತೆ ಮಾತು ಬದಲಿಸಿದ ಸೌರಭ್ ದೇವ್ ತಾನು ಕುಳಿತಿದ್ದ ಎಡೆಯಿಂದ ಮುಂದೆ ಬಾಗಿ , ' ಸಾರ್ ನಾನು ಇಂಡೋನೇಶಿಯಾ ಪ್ರಾಜೆಕ್ಟಿನ ಕುರಿತು ಏನೊ ಸುದ್ದಿ ಕೇಳಿದೆ..? - ಆ ಪ್ರಾಜೆಕ್ಟ್ ಬರುತ್ತಿರುವುದು ನಿಜವೆ..?' ಎಂದು ಕೇಳಿದ. 

'ಹೌದು ನಿಜವೆ..' 

' ಸಾರ್ ನಾನು ಕೇಳಿದ ಸುದ್ದಿ ನಿಜವಾದರೆ ಇಟ್ ಸೀಮ್ಸ್ ಟು ಬಿ ಯೆ ಡೆಂಜರಸ್ ಪ್ರಾಜೆಕ್ಟ್.. ಬರಿ ಐದಾರು ತಿಂಗಳಲ್ಲಿ ಇಬ್ಬರು ಮಾತ್ರ ಸೇರಿಕೊಂಡು ಮಾಡಿ ಮುಗಿಸಬೇಕಂತೆ.. ನಿಮಗದೇನಾದರೂ ಆಫರ್ ಬಂದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ...' ಎಂದ ಹಿತವಚನ ಹೇಳುವ ಹಾಗೆ. 

ಅವನಿಗೆ ನಾನಾಗಲೆ ಒಪ್ಪಿಕೊಂಡು ಆಗಿದೆಯೆಂದು ತಿಳಿದಂತಿಲ್ಲಾ..ಈಗಲೆ ಹೇಳಿಬಿಡುವುದಾ ? ಹೀ ಈಸ್ ರಿಲಯಬಲ್.. ಹೇಳಿದರೂ ಅಡ್ಡಿಯಿಲ್ಲ ಎನಿಸಿ, ' ಯೂ ಆರ್ ಲೇಟ್ ಸೌರಭ್ ..ಐ ಆಲ್ರೆಡಿ ಅಕ್ಸೆಪ್ಟೆಡ್ ದಿ ಆಫರ್...' ಎಂದ ನಗುತ್ತ. 

ಅವನ ಮಾತು ಕೇಳಿದವನೆ ಬೆಚ್ಚಿ ಬಿದ್ದಂತೆ ಚೀರಿಕೊಂಡಿದ್ದ ಸೌರಭ್,' ಸಾರ್.. ಯೂ ನೋ ಆಲ್ ಅಬೌಟ್ ದಿಸ್ ಪ್ರಾಜೆಕ್ಟ್ ರೈಟ್..?' ಎಂದವನೆ ತಾನು ಕಿರುಚುತ್ತಿದ್ದೇನೆನ್ನುವುದರ ಅರಿವಾಗಿ, ಕೊನೆಯಲ್ಲಿ ದನಿ ತಗ್ಗಿಸಿದ್ದ..

'ಐ ನೋ..'

' ಸಾರ್ ನನಗೆ ಖಂಡಿತ ಗೊತ್ತು.. ಇದು ಪ್ರಭುವಿನ ಗೇಮ್... ನಿಮ್ಮನ್ನ ಹೇಗಾದರೂ ಕೆಳಗೆ ಬೀಳಿಸಲು ಇದರ ಗಂಟು ಹಾಕುತ್ತಿದ್ದಾರೆ.. ನೀವದರ ಬಲೆಗೆ ಬೀಳಬೇಡಿ.. ' ಎಂದ ಕಾಳಜಿಯ ದನಿಯಲ್ಲಿ..

' ನೋ ಸೌರಭ್ .. ಲುಕ್ ಅಟ್ ಇಟ್ ದಿಸ್ ವೇ... ಒಂದು ವೇಳೆ, ಬೈ ಚಾನ್ಸ್ ...ಇದರಲ್ಲಿ ನಾನು ಯಶಸ್ವಿಯಾದರೆ...?'

'ಬೇರೇನಿಲ್ಲದಿದ್ದರೂ ಇಟ್ ವಿಲ್ ಬಿ ಯೇ ಅನ್ ಬಿಲೀವಬಲ್, ಗ್ರೇಟ್ ಅಚೀವ್ಮೆಂಟ್.... ಆ ದಾರಿಯೇನಾದರೂ ಕಂಡುಕೊಂಡಿದ್ದೀರಾ ಹೇಗೆ ?' ಹಳೆಯ ಅನುಭವದ ಮೇಲೆ ಕುತೂಹಲದಿಂದ ಕೇಳಿದ ಸೌರಭ್..

' ಹಾಗೇನೂ ಇಲ್ಲ .. ಸೌರಭ್.. ಆದರೂ ಸಿರಿಯಸ್ಸಾಗಿ ಒಂದು ಟ್ರೈ ಮಾಡಿ ನೋಡೋಣ ಎಂದಷ್ಟೆ... ಯಾವುದಕ್ಕೂ ಒಂದು ರೆಸ್ಯೂಮ್ ಸಿದ್ದ ಮಾಡಿಕೊಂಡು ಇಟ್ಟುಕೊಂಡಿರುತ್ತೇನೆ..' ಎಂದು ನಕ್ಕ ಶ್ರೀನಾಥ.. 

ಧ್ವನಿವರ್ಧಕದಲ್ಲಿ ತನ್ನ ಫ್ಲೈಟಿನ ಬೋರ್ಡಿಂಗ್ ಅನೌನ್ಸ್ ಮೆಂಟ್ ಆಗುತ್ತಿರುವುದನ್ನು ಕೇಳಿದವನೆ, 'ಏನಿ ವೇ..ಗುಡ್ ಲಕ್ ಸಾರ್' ಎಂದು ವಿಶ್ ಮಾಡಿ ತನ್ನ ಬೋರ್ಡಿಂಗ್ ಗೇಟಿನತ್ತ ನಡಿದಿದ್ದ ಸೌರಭ್ ಅವಸರದಲ್ಲಿ ಕೈಯಾಡಿಸುತ್ತ.. 

ತಾನು ತನ್ನ ಗೇಟಿನ ಮೂಲಕ ನಡೆದು ವಿಮಾನದ ಒಳಗೆ ಕೂತ ಶ್ರೀನಾಥನಲ್ಲಿ ಹೇಳಿಕೊಳ್ಳಲಾಗದ ವಿಚಿತ್ರ ಭಾವ; ಭಾವವೆ ಅಲ್ಲವೇನೊ ಎನ್ನುವ ಖಾಲಿಯಾದ ಭಾವ.. ಹಿಂದೆಯೆ ಹೆಂಡತಿ, ಮಗುವನ್ನು ಸೇರಲು ಹೊರಡುತ್ತಿರುವ ಖುಷಿಯ ಲಾಸ್ಯ.. 

' ಸಾರ್ ಆಪಲ್ ಜ್ಯೂಸ್, ಆರೆಂಜ್ ಜ್ಯೂಸ್..?' ಎಂದ ಗಗನಸಖಿಯ ಕೈಯಿಂದ ಗ್ಲಾಸೊಂದನ್ನು ಪಡೆದು ಜ್ಯೂಸ್ ಕುಡಿದವನೆ ನಿರಾಳತೆಯಿಂದ ಕಣ್ಮುಚ್ಚಿದ ಶ್ರೀನಾಥ. ಈ ಬಾರಿಯ ಮನದ ಪರಿಭ್ರಮಣದಲ್ಲಿ ಕೇವಲ ಲತ ಮತ್ತು ಮಗುವಿನ ಮುಖಗಳೆ ನಕ್ಕು, ಬರಿ ಅವರಿಬ್ಬರ ಸದ್ದುಗಳೆ ಪ್ರತಿಧ್ವನಿಸಿದಂತಾಗಿ ಅವನ ತುಟಿಯಲೊಂದು ಆಯಾಚಿತ ನಗುವಾಗಿ ಸುಳಿದು ಹೋಗಿತ್ತು, ಗಾಢ ನಿದ್ದೆಯಾಗಾವರಿಸಿಕೊಳ್ಳುವ ಮೊದಲೆ... ನಿರಾಳತೆಯನ್ನರಸುತ್ತ ಹೊರಟ ಮನ ಅದನ್ನು ಗಳಿಸಿದ ನಂತರ, ಅದನ್ನೆ ನಿರಂತರ ಕಾಯ್ದುಕೊಳ್ಳುವ ಹುನ್ನಾರದಲ್ಲಿ ತನ್ನ ಹೊಸ 'ಶಾಲಿನಿ'ಗಳಿಬ್ಬರನ್ನು ಹುಡುಕಿಕೊಂಡು ಹೊರಡುವಂತೆ ಮಾಡಿತ್ತು ಆ ವಿಚಿತ್ರ ಪರಿಸ್ಥಿತಿ.. ಆದರೆ ಆ ಶಾಲಿನಿಯ ವರ್ಷಾಂತರದ ಹಿಂದಿನ ಮುಖವು ಮಸುಕು ಮಸುಕಾದಂತೆ ಮರೆಯಾಗುತ್ತ, ಅದರ ಜಾಗದಲ್ಲಿ ಮಗಳ ನಗುವ ಚಿತ್ರವೆ ಒಡಮೂಡತೊಡಗಿದಾಗ, ತನ್ನ ಈ ಹೊಸ ಪಯಣ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೆಂಬ ಸಮಾಧಾನವೂ ಉಂಟಾಗಿತ್ತು . ಆ ನಿರಾಳತೆಯೆ ಸಾತ್ವಿಕತೆಯೆ ಸುಂದರ ಅಲೌಕಿಕ ಸ್ವಪ್ನಗಳಾಗಿ ದಟ್ಟೈಸಿಕೊಳ್ಳತೊಡಗಿದ್ದವು - ಮನದ ಕ್ಯಾನ್ವಾಸಿನಲ್ಲಿನ ಅಚ್ಚ ಬಿಳಿಯ ಸ್ವಚ್ಛ ಮೋಡಗಳಾಗುತ್ತ (ಮುಗಿಯಿತು).

ಪರಿಭ್ರಮಣ ಕಾದಂಬರಿ ಮುಗಿಯಿತು - ಎಲ್ಲರಿಗು ದೀಪಾವಳಿಯ ಶುಭಾಶಯಗಳು :-) 
(ಆರಂಭ.11.02.2014, ಮುಕ್ತಾಯ - 24.10.2014 )
_________________________________________________________________________

ಕೊನೆಯ ಎರಡು ನುಡಿ : 

ಇದನ್ನು ಬರೆಯುವ ಹುಮ್ಮಸಿಗೆ ಮೂಲಭೂತ ಕಾರಣವಾದ ಸಂಪದದಂತಹ ವೇದಿಕೆ ನಿರ್ಮಿಸಿಕೊಟ್ಟ ಸಂಪದ ವ್ಯವಸ್ಥಾಪಕ ಮತ್ತು ಆಡಳಿತ ವರ್ಗದ ಸಿಬ್ಬಂದಿಗೆ, ಹಾಗು ಇದುವರೆಗು ಸಹನೆಯಿಂದ ಓದುತ್ತ, ಪ್ರತಿಕ್ರಿಯಿಸುತ್ತ, ತಪ್ಪುಗಳಾದಾಗ ತಿದ್ದುತ ಪ್ರೋತ್ಸಾಹಿಸಿದ ಎಲ್ಲಾ ಸಂಪದಗರಿಗು ಹೃದಯಪೂರ್ವಕ ಕೃತಜ್ಞತೆಗಳು. ' ಎಳ್ಳೊ ಜೊಳ್ಳೊ' ನಾನು ಒಂದು ಕಾದಂಬರಿ ಬರೆದುಬಿಟ್ಟೆ ಎಂದು ಹೇಳಿಕೊಳ್ಳಲು ನೇರವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿ, ಈ ರೀತಿಯ ಒಂದು ಅದ್ಭುತ ಅವಕಾಶ ಸೃಷ್ಟಿಸಿಕೊಟ್ಟ ಎಲ್ಲರಿಗು ನನ್ನ ವಿನಮ್ರ ನಮನಗಳು. 
__________________________________________________________________________

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು ಅಲ್ಲಿ ನೈಜ್ಯವಾಗಿ ಕಂಡವುಗಳ ಪ್ರತ್ಯಕ್ಷ್ಯ ವರ್ಣನೆಯಾದರೆ ಕಥಾನಕದ ಮಿಕ್ಕ ಅಂಶಗಳೆಲ್ಲ ಕಲ್ಪನೆಯ ಮೂಸೆಯಿಂದ ಹೊರಹೊಮ್ಮಿದ್ದು. ಕಥೆಯೊಡನೆ ಅನುಭವ, ಗೊಂದಲ, ತಾಕಲಾಟಗಳ ವಿವಿಧ ಮಜಲುಗಳನ್ನು ಹತ್ತಿ ಇಳಿಯುವ ಕಥಾನಾಯಕನ ಚಿತ್ರಣಕ್ಕನುಗುಣವಾಗಿ, ಕಥೆಯನ್ನು ನಾಲ್ಕು ಪ್ರಮುಖ ಭಾಗಗಳಾಗಿ (ಅವರೋಹಣ...ಆಕ್ರಮಣ...ಅಧಃಪತನ...ಆರೋಹಣ...) ವಿಂಗಡಿಸಿದ್ದರೂ ಇವೆಲ್ಲವೂ ಪರಸ್ಪರಾವಲಂಬಿ ಸರಣಿ ಕೊಂಡಿಯಿಂದ ಬಂಧಿಸಲ್ಪಟ್ಟ "ಪರಿಭ್ರಮಣ" ಕಥಾನಕದ ಪೂರಕ ಅಂಗಗಳೆನ್ನಲು ಅಡ್ಡಿಯಿಲ್ಲ; ಭಾಗಗಳನ್ನೆಲ್ಲ ಬದಿಗೊತ್ತಿ, ಒಂದೇ ನೀಳ ಕಥಾನಕವೆಂದರೂ ಸರಿಯೆ. ಓದುಗರಿಗೆ ಸ್ವಲ್ಪ ಹತ್ತಿರವಾಗಿರಲೆಂದು, ಬ್ಯಾಂಕಾಕಿನಲ್ಲಿ ತಾತ್ಕಾಲಿಕವಾಗಿ ನೆಲೆಸಿದ ಭಾರತೀಯನೊಬ್ಬನ ಕಥೆಯ ಹಂದರವನ್ನು ಆರಿಸಿಕೊಂಡು, ಆ ಪಾತ್ರದ ಮೂಲಕ ಅಲ್ಲಿನ ಕಲೆ, ಆಚಾರ, ವಿಚಾರಗಳನ್ನು ಭಾರತೀಯ ದೃಷ್ಟಿಕೋನದಲ್ಲಿ ಹಿಡಿಯಲು ಯತ್ನಿಸಿದ್ದೇನೆ

ಈ ರೀತಿ ಮುನ್ನುಡಿಯೊಂದಿಗೆ ಪ್ರಾರಂಬವಾದ ನಾಗೇಶ ಮೈಸೂರುರವರ ಕತೆ 'ಪರಿಭ್ರಮಣ' ಸಣ್ಣಕತೆಯಾಗದೆ, ನೀಳ್ಗತೆಯೂ ಆಗದೆ ಬೃಹುತ್ ಕಾದಂಬರಿಯಾಗಿ 67 ಕಂತುಗಳಲ್ಲಿ ಸರಿಸುಮಾರು ಒಂಬತ್ತು ತಿಂಗಳು ಕಾಲ ಹರಿದು ಬಂದಿತು.

ಬ್ಯಾಕಾಂಕಿನಂತಹ ಮಹಾನಗರದ ವಿವಿದ ಬಾಗಗಳ ಪರಿಚಯ, ಒಂದು ಪ್ರವಾಸ ಕಥನ ಎನ್ನುವಂತೆ ಪ್ರಾರಂಭವಾದ ಕಥಾನಕ, ನಂತರ ಶ್ರೀನಾಥನ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ತೋರಿಸುತ್ತ ಸಾಗಿದಂತೆ , ಮನುಷ್ಯನ ಮನಸಿನ ವಿಶ್ವರೂಪದರ್ಶನವಾದಂತೆ ಆಯಿತು. ಮೊದಲಿಗೆ ಅವನು ಕಾಮವಾಂಚಿತನಾಗಿ ರಸ್ತೆಯಲ್ಲಿ ಸಿಗುವ ಹುಡುಗಿಯರ ಹಿಂದೆ ಬೀಳುವುದು, ಹಣಕಳೆದು ಕೊಳ್ಳುವುದು ,ಯಾವುದೋ ಸುಂದರಿಯ ಹಿಂದೆ ಬಿದ್ದು ಕಡೆಗೆ ಅವಳು ಹೆಣ್ಣಲ್ಲ ಗಂಡು ಎಂದು ಅರಿತು ಬೆದರುವುದು. ಕಡೆಗೆ ಅಂತಹ ಬೆಲೆವೆಣ್ಣನ್ನು ತಾನಿದ್ದ ಮನೆಗೆ ಕರೆಸಿಕೊಂಡು ಸುಖಿಸುವ ಯತ್ನ ಇವೆಲ್ಲ ಮನುಷ್ಯನ ಅದಃಪತನದ ಪಯಣವನ್ನು ಚಿತ್ರಿಸಿಕೊಟ್ಟಿತು.

ಶ್ರೀನಾಥನ ಅಂಡಲೆಯುವ ಹಿನ್ನಲೆಯಲ್ಲಿ ಪೂರ್ಣ ಬ್ಯಾಂಕಾಂಕಿನ ಪರಿಚಯವನ್ನೆ ಮಾಡಿಕೊಟ್ಟರು ನಾಗೇಶರು. ಅಲ್ಲಿಯ ರಸ್ತೆಗಳು , ಅಲ್ಲಿಯ ಜನ, ಪಾರ್ಕುಗಳು, ಆಸ್ಪತ್ರೆ, ಸರ್ಕಾರದ ವ್ಯವಸ್ಥೆ ಅಲ್ಲದೆ ಅಲ್ಲಿಯ ಸಂಪ್ರದಾಯಗಳು, ಥಾಯ್ ನ ಭಾಷೆ, ಚೀನಿಯರ ಪ್ರಭಾವ ಹೀಗೆ ಎಲ್ಲವನ್ನು ಅನಾವರಣಗೊಳಿಸಿದರು. ಬಹುಶಃ ಬೃಹತ್ ಕಾದಂಬರಿಯೊಂದು ತಟ್ಟಬಹುದಾದ ಎಲ್ಲ ಮಗ್ಗುಲುಗಳನ್ನು ಪರಿಚಯಿಸಿದರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಾ ಸಾರ್, ನಿಮ್ಮ ಪ್ರತಿಕ್ರಿಯೆ ಇಲ್ಲಿ ಪೂರ್ತಿ ಬಂದಿಲ್ಲ ಅದಕ್ಕೆ ನಿಮ್ಮ ಆ ಪ್ರತಿಕ್ರಿಯೆ-ಲೇಖನದ ಕೊಂಡಿಯನ್ನೆ ಇಲ್ಲಿಗೆ ಸೇರಿಸುತ್ತಿದ್ದೇನೆ. 

http://sampada.net/blog/%E2%80%99%E0%B2%AA%E0%B2%B0%E0%B2%BF%E0%B2%AD%E0...

ನಿಜ ಹೇಳಬೇಕೆಂದರೆ - ನಾನೆ ನನ್ನ ಕಾದಂಬರಿಯ ಸಾರಾಂಶ ಬರೆಯಹೊರಟಿದ್ದರೂ ಇಷ್ಟು ಸೊಗಸಾಗಿ, ಸಂಕ್ಷಿಪ್ತವಾಗಿ, ಪೂರ್ತಿ ಸಾರದ ಒಡಪು ಎಲ್ಲೂ ಕಳೆದುಹೋಗದ ಹಾಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ - ಅಷ್ಟು ಅದ್ಭುತವಾಗಿ ಸಂಕ್ಷಿಪ್ತಿಸಿದ್ದೀರ!. ಮೂರ್ತಿಗಳು ಹೇಳುತ್ತಿದ್ದ ಹಾಗೆ ಉದ್ದದ ಕಾರಣದಿಂದ ಮೂಲ ಕಥೆಯೆ ಮರೆತು ಹೋದಂತಾಗುವ ಸಾಧ್ಯತೆ ಹೆಚ್ಚು ಅನ್ನುವುದು ನಿಜವೆ. ಆದರೆ ಈಗ ಆ ತೊಡಕಿಲ್ಲ ಬಿಡಿ - ಒಮ್ಮೆ ನಿಮ್ಮ ಈ ಸಾರ ಸಂಗ್ರಹ ಓದಿದರೆ ಸಾಕು  - ಎಲ್ಲಾ ಒಂದೆ ಹಿಡಿತದಲ್ಲಿ ನಿಲುಕಿಗೆ ಸಿಕ್ಕಿಬಿಡುತ್ತದೆ. ಇಷ್ಟು ಸಹನೆಯಿಂದ ಸಂಪೂರ್ಣ ಸಾರಾಂಶವನ್ನು ವಿಮರ್ಶಾತ್ಮಕವಾಗಿ , ಕಥೆಗಾರನೊಬ್ವನ ದೃಷ್ಟಿಕೋನದಿಂದ ಇಷ್ಟು ಚೆನ್ನಾಗಿ ಸೆರೆ ಹಿಡಿದಿದ್ದು ಮಾತ್ರವಲ್ಲದೆ, ಮತ್ತಿತ್ತರ ಹಲವು ಸಂಪದಿಗರ ಜತೆ ಸರಣಿಯುದ್ದಕ್ಕು ನಿರಂತರ ಪ್ರತಿಕ್ರಿಯಿಸುತ್ತ ಬರೆಯುವ ಸ್ಪೂರ್ತಿ ಕುಂದಿ ಹೋಗದ ಹಾಗೆ ನೋಡಿಕೊಂಡಿದ್ದೀರಾ. ಎಷ್ಟೊ ಬಾರಿ ಬ್ಲಾಗಿನಲ್ಲೂ ಬಂದು ಕಾಮೆಂಟ್ ಹಾಕಿ ಹೋಗಿದ್ದೀರಾ. ಎಲ್ಲಕ್ಕೂ ಬರಿಯ ಕೃತಜ್ಞತೆ ಹೇಳಿ ಮುಗಿಸಲಾಗದು. ಆದರೂ ಸದ್ಯಕ್ಕೆ ಇಲ್ಲಿಂದ ಅದೊಂದೆ ಸುಲಭದಲ್ಲಿ ಮಾಡಲಾಗುವ ಕೆಲಸ. ನಿಮ್ಮ ಸಂಪೂರ್ಣ ಸಾರ ಸಂಗ್ರಹ ಬರಹ, ನಾನು ಬರೆದಾಗ ಆದದ್ದಕ್ಕಿಂತ ಹೆಚ್ಚಿನ ಖುಷಿ ನೀಡಿದ್ದು ಸತ್ಯ. ಹೀಗಾಗಿ ನನ್ನ ದೀಪಾವಳಿ ಆಚರಣೆಗೆ 'ಪರಿಭ್ರಮಣ'ದ ಮುಕ್ತಾಯದ ಜತೆಗೆ ನಿಮ್ಮ ಸಾರ ಸಂಗ್ರಹದ 'ಸಿಹಿ ಹೋಳಿಗೆಯೂಟ'ವನ್ನು ಆಸ್ವಾದಿಸಿದಂತಾಯ್ತು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರೆ, ದೀಪಾವಳಿಗೆ ಮಾಡಿದ ಹೋಳಿಗೆ ತಿಂದು, ಸಂಪದ ತೆರೆದು ನೋಡಿದಾಗ ಇಲ್ಲೂ "ಸಿಹಿ ಹೋಳಿಗೆಯೂಟ"ದ ಸುದ್ದಿ :). ನನಗೂ ಪಾರ್ಥರ "ಒಂದೆರಡು ಮಾತು" ಒಂದೆರಡು ಹೋಳಿಗೆ ತಿಂದಷ್ಟು ಸಂತೋಷ ನೀಡಿತು. ವಿಮರ್ಶಾತ್ಮಕ ಸಾರ ಸಂಗ್ರಹ ನೀಡುವುದರಲ್ಲಿ ಪಾರ್ಥರದ್ದು ಎತ್ತಿದ ಕೈ(ಹಿಂದೆ ಸಂಪದದಲ್ಲಿ ಬಂದ ತಿಂಗಳ ಬರಹಗಳ ಸಾರಸಂಗ್ರಹ ನೀಡುತ್ತಿದ್ದದ್ದು ನೆನಪಾಯಿತು).
೬೭-೧೩=೫೪ :).... ಇದ್ಯಾವ ಲೆಕ್ಕ? ನಾನಿನ್ನೂ ಓದಲು ಬಾಕಿ ಇರುವುದು :) ಸಿನಿಮಾ ನೋಡುವ ಮೊದಲು, ನೋಡಿದವರಿಂದ/ಪತ್ರಿಕೆಗಳಲ್ಲಿ ಅದರ ವಿವರ ತಿಳಕೊಂಡಂತೆ, ಇಲ್ಲೂ ಕಾದಂಬರಿಯ ಸಾರ ಓದಿ, ಓದಲು ಆಸಕ್ತಿ ಇನ್ನೂ ಜಾಸ್ತಿಯಾಗಿದೆ.
ಉತ್ತಮ ಕಾದಂಬರಿ ನೀಡಿದ ನಿಮಗೂ, ಹೋಳಿಗೆ ನೀಡಿದ ಪಾರ್ಥರಿಗೂ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಜಿ ನಮಸ್ಕಾರ.. ನಿಮ್ಮ ಜತೆಗೆ ಎಲ್ಲಾ ಕಂತುಗಳನ್ನು ನಾನು ಒಂದು ಸರಿ ಓದಿಕೊಂಡು ಬರಬೇಕು - ಎಲ್ಲಾ ಸೂಕ್ತವಾಗಿ, ತಾರ್ಕಿಕವಾಗಿ ಹೊಂದಾಣಿಕೆಯಾಗುತ್ತದೆಯೆ ಎಂದು ನೋಡಲು ಮತ್ತು ಪಾರ್ಥರು ಗಮನಿಸಿದ ಪುನರಾವರ್ತಿತ ಭಾಗಗಳನ್ನು ಗುರುತಿಸಲು :-)

ಹಿಂದೊಮ್ಮೆ ಶ್ರೀಧರರು ಪಾರ್ಥರ ತಿಂಗಳ ವಿಮರ್ಶೆಯ ಬರಹವೊಂದರ ಲಿಂಕ್ ಕೊಟ್ಟಿದ್ದರು. ಈ ಬರಹ ನೋಡುತ್ತಿದ್ದಂತೆ ನನಗೆ ಮೊದಲು ನೆನಪಾಗಿದ್ದೆ ಆ ಕೊಂಡಿ. ಕಥಾ ಹಂದರ, ಸಾರವನ್ನು ಪಾರ್ಥರು ಅದ್ಭುತವಾಗಿ ಹಿಡಿದಿಟ್ಟಿರುವ ಕಾರಣ, ಬೃಹತ್ ಗಾತ್ರದ ನಡುವಲ್ಲು ಅದರ ಒಟ್ಟಾರೆ ಹೂರಣವನ್ನು ಸುಲಭವಾಗಿ ಗ್ರಹಿಸಬಹುದು. ಅದು ಪೂರ್ಣ ಭಾಗವನ್ನು ಓದಿಸಲು ಪ್ರೇರಕವಾದರೆ ಮತ್ತಷ್ಟು ಪ್ರತಿಕ್ರಿಯೆ, ಅಭಿಪ್ರಾಯಗಳು ಬರಲು ಅವಕಾಶವಾಗುತ್ತದೆ - ಮೂಲಪ್ರತಿ ತಿದ್ದಲು ಸಾಧ್ಯವಾಗುತ್ತದೆ. ಆನ್ ಲೈನ್ ಆದ ಕಾರಣ ಯಾವಾಗ ಬೇಕಾದರೂ ಓದಬಹುದೆನ್ನುವ ಅನುಕೂಲವಂತೂ ಸದಾ ಇರುತ್ತದೆ. ನೀವು ಮಿಕ್ಕ ಭಾಗಗಳನ್ನು ನಿಧಾನವಾಗಿ ಸಮಯ ಸಿಕ್ಕಾಗ ಓದಬಹುದು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ನಿಮ್ಮ ಪರಿಭ್ರಮಣ ಕಾದಂಬರಿಯ ಅಂತಿಮ ಕಂತನ್ನು ಓದಿದೆ. ಈ ವರ್ಷದ ಮಾರ್ಚ್, ಮೇ ಮತ್ತು ಅಗಸ್ಟ್ ತಿಂಗಳು ಗಳಲ್ಲಿ ಕೆಲವೊಮ್ಮೆ ಸಂಪದಕ್ಕೆ ಬಂದದ್ದು ಬಿಟ್ಟರೆ ಅನೇಕ ತಿಂಗಳು ಕಾಲ ಸಂಪದದಲ್ಲಿ ಬಂದ ತಮ್ಮ ಈ ಕಾದಂಬರಿಯ ಬಹುತೇಕ ಅನೇಕ ಕಂತುಗಳನ್ನು ಓದಲಾಗಲಿಲ್ಲ. ಕಾದಂಬರಿಯ ಪೂರ್ವಭಾವಿ ಕಂತುಗಳನ್ನು ಓದಿದ ಅಸ್ಪಷ್ಟ ನೆನಪು ಹೀಗಾಗಿ ಕೃತಿಯ ವಿಮರ್ಶೆಗೆ ನಾನು ತೊಡಗುವುದಿಲ್ಲ. ಪಾರ್ಥಸಾರಥಿಯವರ ಅಭಿಪ್ರಾಯಕ್ಕೆ ನಾನು ಸಹಮತ ವ್ಯಕ್ತ ಪಡಿಸುವೆ. ಬಿಟ್ಟು ಹೋದ ಕಂತುಗಳನ್ನು ಖಂಡಿತ ಓದುವೆ. ಈ ಕಾದಂಬರಿಯನ್ನು ಪೂರ್ಣಗೊಳಿಸಿದ್ದಕ್ಕೆ ತಮ್ಮನ್ನು ಅಭಿನಂದಿಸುವೆ. ಇದನವ್ನು ಪುಸ್ತಕ ರೂಪದಲ್ಲಿ ಹೊರ ತಂದರೆ ಚೆನ್ನಾಗಿರುತ್ತದೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರಿಗೆ ನಮಸ್ಕಾರ. ಬಹಳ ದಿನಗಳಿಂದ ನೀವಿಲ್ಲಿ ಕಾಣಿಸಿರಲಿಲ್ಲ, ಈ ಪ್ರತಿಕ್ರಿಯೆಗಳೊಡನೆ ದೀಪಾವಳಿಯ ಆಗಮನ ನಿಜಕ್ಕು ಸಂತಸಮಯ ವಿಷಯ. ನೀವು ಸಮಯ ಸಿಕ್ಕಾಗ ಮಿಕ್ಕಿದ ಕಂತುಗಳನ್ನು ಓದಿ ನಿಮ್ಮನಿಸಿಕೆ ತಿಳಿಸಿದರೆ ನಾನು ನಿಜಕ್ಕೂ ಕೃತಜ್ಞ. ನಿಮಗೀಗಾಗಲೆ ಕೆಲವು ಪುಸ್ತಕಗಳನ್ನು ಪ್ರಕಟಿಸಿದ ಅನುಭವವಿರುವ ಕಾರಣ ಆ ವಿಷಯದಲ್ಲೂ ಕೊಂಚ ಮಾರ್ಗದರ್ಶನ ಬೇಕಾಗಬಹುದು, ಅದಕ್ಕೆ ನೀವು ಓದಿ ಮುಗಿಸುವವರೆಗು ಕಾಯುತ್ತೇನೆ. ತಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.