ಕಥೆ: ಪರಿಭ್ರಮಣ..(37)

0

( ಪರಿಭ್ರಮಣ..36ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಶ್ರೀನಾಥ ಬಂದು ತಲುಪುವಷ್ಟೊತ್ತಿಗಾಗಲೆ ಮಿಕ್ಕೆಲ್ಲರೂ ಆಗಲೆ ಅಲ್ಲಿಗೆ ಬಂದು ಸೇರಿಯಾಗಿತ್ತು. ಆ ಜಾಗದ ಸಮತಟ್ಟಾಗಿದ್ದ ವಿಸ್ತಾರದ ಮಧ್ಯದಲ್ಲಿ ಗುಡ್ಡೆ ಹಾಕಿದ್ದ ಒಣಕಟ್ಟಿಗೆ ತುಂಡನ್ನು ಸಣ್ಣ ಒಣರೆಂಬೆ ಕಡ್ಡಿಗಳ ಜತೆಗೂಡಿಸಿ ಹೊತ್ತಿಸಿ ಫೈರ್ ಕ್ಯಾಂಪಿನ ಬೆಂಕಿಯನ್ನು ಹಾಕಿದ್ದರು. ಚಟಪಟನೆ ಉರಿಯುತ್ತಿದ್ದ ಆ ಬೆಂಕಿಯ ಬೆಳಕಿನ ಸುತ್ತಲು ನೆರೆದಿದ್ದ ಹಲವರು ಚಳಿ ಕಾಯಿಸುವವರಂತೆ ಕುಕ್ಕರುಗಾಲಲ್ಲಿ ಕೂತಿದ್ದರೆ  ಮಿಕ್ಕ ಮತ್ತಲವರು ಬೀಸುತ್ತಿದ್ದ ಗಾಳಿಗೆ ತಡೆಯೊಡ್ಡಿ ಬೆಚ್ಚಗೆ ಮಾಡಿಕೊಳ್ಳಲು ಕೈ ಕಟ್ಟಿಕೊಂಡು ನಿಂತಿದ್ದು  ಕಂಡಾಗ 'ಅರೆ, ಹೌದಲ್ಲ.. ಬೀಸುತ್ತಿರುವ ಈ ಜೋರು ಗಾಳಿಯಿಂದಾಗಿ ತುಸು ಜೋರಾಗಿಯೇ ಚಳಿಯಾಗುತ್ತಿರುವಂತಿದೆಯಲ್ಲ ? ' ಅಂದುಕೊಳ್ಳುತ್ತಲೆ ತಾನೂ ಆ ಗುಂಪಿನಲ್ಲಿ ಸೇರಿಕೊಳ್ಳಲು ನಡೆದಿದ್ದವನಿಗೆ, ಯಾಕೊ ಜೋರು ಗಾಳಿಯ ನಡುವಲ್ಲೂ ಕೊಂಚ ಸೆಕೆಯಾಗಿ ಬೆಚ್ಚಗಿನ ಬಿಸಿಯ ಅನುಭವವೊಂದು ಬಾಹ್ಯಪ್ರಜ್ಞೆಯನ್ನು ನೇವರಿಸಿದಂತಾಗಿತ್ತು. 'ಏನೀ ಗಾಳಿಯಲ್ಲೂ ಬಿಸಿಯಾಗಿಸುವ ವಿಚಿತ್ರ ಅನುಭೂತಿ?' ಎಂದು ಅಚ್ಚರಿಯಲ್ಲೆ ಸುತ್ತಲೂ ಕಣ್ಣು ಹಾಯಿಸುತ್ತಲೆ ತಲೆಯನ್ನು ಮೇಲೆತ್ತಿ ನೋಡಿದವನಿಗೆ, ಯಾಕೆ ಆ ಉಸಿರುಗಟ್ಟಿಸುವ ಅದೃಶ್ಯ ಭಾವವೆಂದು ತಟ್ಟನೆ ಅರಿವಿನ ನಿಲುಕಿಗೆ ಬಂದಿತ್ತು - ಕಪ್ಪಾಗುತ್ತಿದ್ದ ಆಗಸದ ದೃಶ್ಯ ಕಣ್ಣಿಗೆ ಬಿದ್ದಾಗ.  ಮೇಲೆಲ್ಲ ದಟ್ಟವಾಗಿ ಗೂಡು ಕಟ್ಟಿಕೊಳ್ಳುತ್ತಿದ್ದ ಕಪ್ಪು ಮೋಡಗಳು ಸದ್ದಿಲ್ಲದಂತೆ ನೆರೆಯುತ್ತ, ತಂಪು ಬೆಳಕು ಚೆಲ್ಲುತಾ ತಂತಾನೆ ಅನಾವರಣಗೊಳ್ಳುತ್ತಿದ್ದ ಚಂದ್ರಮನ ಕತ್ತು ಕಿವುಚುತ್ತ, ಅವನನ್ನೆ ಕೊಂಚ ಕೊಂಚವಾಗಿ ನುಂಗಿ ತಮ್ಮೊಡಲೊಳಗೆ ಹುದುಗಿಸಿಕೊಳ್ಳುವ ಹವಣಿಕೆಯಲ್ಲಿದ್ದವು. ಆ ಮೋಡದೊಡಲ ಸೇರಿದ್ದ ಸುಧಾಕರನ ಪ್ರಭೆಯಿಂದಾಗಿ, ಹೊಳಪನ್ನೆ ಜಗಿದು ನುಂಗಿದಂತಿದ್ದ ಮೋಡಗಳಿಗೂ ಕಾಂತಿಯ ಸಲೆ ಪಸರಿಸಿದಂತಾಗಿ, ಅವುಗಳಿಂದ ಹೊರಚಾಚಿಕೊಂಡ ಪ್ರಭಾವಳಿಯ ತ್ರಿಜ್ಯ, ತನ್ನದೇ ಆದ ಕಾಂತಿಯ ಪರಿಧಿಯೊಂದನ್ನು ಕಟ್ಟಿ, ಆ ಮೋಡಗಳರಮನೆಯಲ್ಲೆ ಮೃದುಲ ಮಿಂಚಿನ ಲೇಪನವನ್ನು ಹೊದಿಸಿ ಯಾವುದೊ ವಿಚಿತ್ರವಾದ ಮಂದ ಪ್ರಕಾಶದಿಂದ ಹೊಳೆಯುತ್ತ ಲಕಲಕಿಸುವಂತೆ ಮಾಡಿಬಿಟ್ಟಿದ್ದವು. 

ಆ ಮೋಡಗಳು ನಿಧಾನವಾಗಿ ಕುದುರಿಕೊಂಡು ಸುತ್ತೆಲ್ಲ ಪಸರಿಸುತ್ತಿದ್ದ ರೀತಿಯನ್ನು ಗಮನಿಸಿದರೆ ಆ ರಾತ್ರಿಯಲ್ಲಿ ಮಳೆಯಾದರೂ ಅಚ್ಚರಿಯೇನಿಲ್ಲ ಎನಿಸಿತು ಶ್ರೀನಾಥನಿಗೆ - ಆ ಗಾಳಿಯ ಹೊಡೆತ ಮೋಡಗಳನ್ನೆಲ್ಲ ಹೊಡೆದುಕೊಂಡು, ಹೊತ್ತೊಯದಿದ್ದರೆ. ಅದೇ ಆಲೋಚನೆಯಲ್ಲಿ ನಡೆದಿದ್ದಾಗ, ಆ ನಡುವೆಯೆ ಅಲ್ಲಿಗೆ ಬಂದ ತಂಡದ ಗುಂಪೊಂದು ಪ್ರತಿಯೊಬ್ಬರ ಕೈಗಳಿಗೂ ಪೇಪರು ಪ್ಲೇಟುಗಳನ್ನು ಚಾಪ್ ಸ್ಟಿಕ್, ಪ್ಲಾಸ್ಟಿಕ್ ಸ್ಪೂನ್ ಮತ್ತು ಪೋರ್ಕಿನ ಜತೆ ವಿತರಿಸುತ್ತ ಡಿನ್ನರಿನ ವ್ಯವಸ್ಥೆಯನ್ನು ತರಾತುರಿಯಲ್ಲಿ ನಡೆಸತೊಡಗಿದರು. ನಿಭಿಡಗೊಳ್ಳುತ್ತಿದ್ದ ಮೋಡದ ದೆಸೆಯಿಂದಾಗಿ ಮಳೆ ಬಂದರೂ ಬರಬಹುದಾದ ಸಾಧ್ಯತೆ ಎಚ್ಚರಿಸಿದಂತಾಗಿ, ಇದ್ದಕ್ಕಿದ್ದಂತೆ ಅವರಲ್ಲಿ ಎಲ್ಲಿಲ್ಲದ ಅವಸರವನ್ನು ತರಿಸಿಬಿಟ್ಟಿತ್ತು. ಇಡಿ ಗುಂಪಿನ ಆ ಸಂಜೆಯ ಮತ್ತು ಇರುಳಿನ ನಲಿವಿನ ಮತ್ತು ಸಂತಸದ ಒಡನಾಟಕ್ಕೆ ವಿಘ್ನ-ಸಂತೋಷಿ ಮಳೆಯಿಂದ ಪೂರ್ಣ ಭಂಗವುಂಟಾಗುವುದೆಂದು ಅರಿವಿದ್ದರೂ, ಯಾಕೊ ಆ ರಾತ್ರಿ ಮಳೆ ಸುರಿದರೆ ಸೊಗಸೆನಿಸಿತು ಶ್ರೀನಾಥನಿಗೆ. ಕಾಡಿನ ನಡುವೆ, ಪ್ರಶಾಂತವಾದ ಕಾಟೇಜಿನ ವಾತಾವರಣದಲ್ಲಿ, ನಿಸರ್ಗದ ನೈಜ ವಾತಾವರಣದ ಮಧ್ಯೆ ಏಕಾಂತದಲ್ಲಿ ಕುಳಿತು 'ಧೋ'  ಎಂದು ಏಕತಾನದಲ್ಲಿ ಸುರಿಯುವ ಮಳೆಯನ್ನು ಅದರ ಮಿಂಚು ಗುಡುಗುಗಳ ವೈಭೋಗದೊಂದಿಗೆ ನೋಡುವ ಸೊಗದ ಅನುಭೂತಿಯೆ ಅಪರಿಮಿತ ಸುಖದ್ದೆನಿಸಿತಾದರೂ, ಅದರಿಂದ ಉಳಿದವರಿಗಾಗಬಹುದಾದ ನಿರಾಶೆಯ ಅರಿವು ಚುಚ್ಚಿದಂತಾಗಿ 'ಅಯ್ಯೊ ಪಾಪ!' ಎಂದನಿಸದೆಯೂ ಇರಲಿಲ್ಲ. ಹಾಗೇನಾದರೂ ಮಳೆಯ ಕಾಟ ಕಾಡಿದ್ದಲ್ಲಿ ಎಲ್ಲರಿಗಿಂತ ಹೆಚ್ಚು ನಿರಾಶೆಯಾಗುವ ಸಾಧ್ಯತೆಯಿದ್ದುದ್ದು ನದಿಯ ತೀರದಲ್ಲಿ ಟೆಂಟು ಹಾಕಿದ್ದವರಿಗೆ; ಒಂದು ನಿಗದಿತ ಮಿತಿಗಿಂತ ಹೆಚ್ಚು ಮಳೆಯಾದರೆ ಟೆಂಟಿನಲ್ಲಿ ರಾತ್ರಿ ಕಳೆಯಲು ಬಿಡುವುದಿಲ್ಲವಾದ ಕಾರಣ ಅವರೆಲ್ಲಾ ತರಾತುರಿಯಲ್ಲಿ ಗುಳೆ ಎಬ್ಬಿಸಿಕೊಂಡು ಟೆಂಟು ಖಾಲಿ ಮಾಡಿ, ಹತ್ತಿರದಲ್ಲಿದ್ದ ಮತ್ತೊಂದು ಕಾಟೇಜಿಗೆ ಸ್ಥಳಾಂತರಿಸಿಕೊಳ್ಳಬೇಕಾಗುತ್ತಿತ್ತು. ಹೊಳೆಯ ನೀರಿನ ಮಟ್ಟ ಮಳೆಯ ಬಿರುಸಿಂದ ಮಾಮೂಲಿನ ಮಟ್ಟವನ್ನು ದಾಟಿ ಮೇಲೇರಿದಾಗ ಟೆಂಟುಗಳು ನೀರಿನಿಂದಾವೃತಾವಾಗಿಯೊ, ಮುಳುಗಿಯೊ ಹೋಗಬಹುದಾದ ಸಾಧ್ಯತೆಯಿದ್ದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಆ ಷರತ್ತನ್ನು ವಿಧಿಸಿಯೆ ಟೆಂಟನ್ನು ಬಾಡಿಗೆಗೆ ನೀಡುತ್ತಿದ್ದುದ್ದು. ಬರಿಯ ತುಂತುರು ಹನಿಯುವ ಮಳೆಯಾದರೆ ಮಾತ್ರವಷ್ಟೇ ಅಲ್ಲಿರಲು ಅವಕಾಶ ಮಾಡಿಕೊಡುತ್ತಿದ್ದುದು - ಅದೂ ಸನ್ನಿವೇಶದ ತೀವ್ರತೆಯನುಗುಣವಾಗಿ. 

ಎಲ್ಲರೂ ಒಟ್ಟಾಗಿ ಸೇರಿಕೊಂಡು ಪರಸ್ಪರ ಕೈ ಜೋಡಿಸಿದ ಮೇಲೆ ಚಕಚಕನೆ ಎಲ್ಲರಿಗು ಊಟದ ತಟ್ಟೆ ಮತ್ತು ಊಟದ ವಿತರಣೆಯಾಗುತ್ತ ಎಲ್ಲರೂ ತಂತಮ್ಮ ತಟ್ಟೆಗಳನ್ನು ಮುಗಿಸುವತ್ತ ಮಾತಾಡಿಕೊಳ್ಳುತ್ತಲೆ ಮಗ್ನರಾದಂತೆ, ಇಡಿ ವಾತಾವರಣವೆ ಒಂದು ರೀತಿಯ ಮಾತಿನ ಕಲರವ, ಗದ್ದಲ, ಗೊಂದಲ, ಗೋಜಲಿನಿಂದ ತುಂಬಿಹೋಗಿತ್ತು. ಎಲ್ಲರು ಪರಸ್ಪರ ಮಾತನಾಡಿಕೊಂಡೆ ತಿನ್ನುತ್ತಿದ್ದ ಕಾರಣ ಆ ಸದ್ದಿನ ಸಮಷ್ಟಿ ಪರಿಮಾಣದ ಪರಿಣಾಮದಿಂದಾಗಿ ಯಾರಿಗೆ ಯಾರು, ಏನು ಹೇಳುತ್ತಿದ್ದಾರೆಂದೆ ಗೊತ್ತಾಗದ ಹಾಗೆ ಆಗಿ ಹೋಗಿ, ಅಲ್ಲಿನವರೆಗು ನೀರವದಂತಿದ್ದ ಆ ಸುತ್ತಲಿನ ಪ್ರಶಾಂತ ಪರಿಸರವೂ ಕದಡಿಹೋಗಿ, ಇವರೆಲ್ಲರ ಮಾತಿನ ಶಬ್ದ ಮಾಲಿನ್ಯದ ಗದ್ದಲದಿಂದ ತುಂಬಿಹೋಗಿತ್ತು. ಮೊದಮೊದಲಿಗೆ ಯಾವುದೆ ಕ್ರಮಬದ್ಧ ಯೋಜನೆಯಿರದಂತೆ ಅಡ್ಡಾದಿಡಿಯಾಗಿ ಆರಂಭವಾದ ವಿತರಣೆಯ ವ್ಯವಸ್ಥೆಯೂ ತುಸು ಹೊತ್ತಿನ ಬಳಿಕ ಆರಾಜಕತೆಯ ನಡುವಲ್ಲೆ ಹೇಗೊ ನುಸುಳಿಕೊಂಡ ಆಕಸ್ಮಿಕ ಸಂಘಟಿತ ಸುಶಾಸನದಂತೆ, ಅಶಿಸ್ತಿನಲ್ಲಡಕವಾಗಿದ್ದ ಯಾವುದೊ ಅಗೋಚರ ಕ್ರಮಬದ್ದತೆಯನ್ನೆ ಹೊದ್ದುಕೊಂಡ ಸ್ವನಿರ್ದೇಶಿತ ಶಿಸ್ತಾಗಿ ಪರಿವರ್ತಿತವಾಗಿ ಸ್ವಯಂ ನಿಭಾಯಿಸಿಕೊಳ್ಳತೊಡಗಿತು. ಹಸಿದ ಹೊಟ್ಟೆಗಳು ಶಾಂತವಾಗುತ್ತಿದ್ದ ಹಾಗೆ ಗದ್ದಲ, ಗೊಂದಲಗಳ ಅವಸರಗಳು ಸೊರಗಿದಂತಾಗಿ ಕೊಂಚ ಆಲಸಿಕೆ, ವಿರಾಮದ ಬಯಕೆಗೆ ದಾರಿ ಮಾಡಿಕೊಟ್ಟು ಎಲ್ಲಾ ಎಲ್ಲೆಂದರಲ್ಲಿ ತಾವು ಸಿಕ್ಕಿದ ಕಡೆ ಜಾಗ ಹಿಡಿದು ವಿಶ್ರಮಿಸಲೆಂದು ಕೂರತೊಡಗಿದ್ದರು - ಕೈಯಲ್ಲೊಂದೊಂದು ತಣ್ಣನೆಯ ಪಾನೀಯದ ಲೋಟವನ್ನೊ ಅಥವಾ ಅಲ್ಲಿ ಹೇರಳವಾಗಿ ಬೆಳೆಯುವ ರುಚಿಯಾದ ಕಾಡು ಬಾಳೆಹಣ್ಣಿನ ಗೊನೆಯನ್ನೊ ಹಿಡಿದುಕೊಂಡು. ಆ ಬಾಳೆಹಣ್ಣುಗಳು ಮಾತ್ರ ನಿಜಕ್ಕೂ ತೀರಾ ರುಚಿಯಾಗಿದ್ದವು - ಕಾಡಿನಲ್ಲೆ ಬೆಳೆದವಾದರೂ ಸಹ. ನೂಡೆಲ್ಲಿನ ಜತೆಗಿನ ಮಿಕ್ಕೆಲ್ಲ ಆಹಾರಕ್ಕಿಂತ ಆ ಹಣ್ಣೆ ರುಚಿಕರವೆನಿಸಿ ಅದನ್ನೆ ಸಿಪ್ಪೆ ಸುಲಿದು ನಾಲ್ಕಾರು ಹಣ್ಣನ್ನು ತಿಂದು ಮುಗಿಸಿದ್ದ ಶ್ರೀನಾಥ. ಅವನ ಸಸ್ಯಾಹಾರಿ ಸಹೋದ್ಯೋಗಿಗಳಂತೂ ತಾವು ತಂದಿದ್ದ ಎಂಟಿಆರ್ ಪ್ಯಾಕೆಟ್ಟು, ಚಪಾತಿ ಚಟ್ನಿಪುಡಿಗಳ ಕೋಟಾ ಮುಗಿಯುವ ಮೊದಲೆ ಈ ರುಚಿಯಾದ ಹಣ್ಣಿನ ಚಿಪ್ಪನ್ನು ಎಗರಿಸಿಕೊಂಡು ತಲೆಗೊಂದೊಂದರಂತೆ ಕೈಯಲ್ಹಿಡಿದುಕೊಂಡು ಕುಳಿತುಬಿಟ್ಟಿದ್ದರು. ಪಕ್ಕದಲ್ಲೇ ಅದರ ಜತೆಯಲ್ಲೆ ಇಟ್ಟಿದ್ದ ಹಲಸಿನ ಹಣ್ಣು ಕೂಡ ಅಷ್ಟೆ ರುಚಿಯಿದ್ದರೂ ತೀರಾ ತಿಂದು ಹೊಟ್ಟೆಗೆ ಎಡವಟ್ಟು ಮಾಡಿಕೊಳ್ಳದಿರುವ ಮುಂಜಾಗರೂಕತೆ ಕೆಲಸ ಮಾಡಿ ತಮ್ಮ ಆಕ್ರಮಣವನ್ನು ಅಲ್ಲಿದ್ದ ಕಲ್ಲಂಗಡಿ, ಪರಂಗಿ ಮತ್ತು ಬಾಳೆ ಹಣ್ಣಿಗೆ ಸೀಮಿತವಾಗಿಟ್ಟಿದ್ದರು, ಶ್ರೀನಾಥನ ತಂಡದ ಸದಸ್ಯರು . 

ಹೀಗೆ ಎಲ್ಲರ ಊಟ, ಹಣ್ಣು-ಹಂಫಲ, ಉಪಹಾರ ಮುಗಿದು ಎಲ್ಲರಿಗು ತುಸು ಹೊಟ್ಟೆ ಭಾರವಾಗುತ್ತಿದ್ದ ಹಾಗೆಯೆ ತುಂತುರು ತುಂತುರಾಗಿ ಹನಿಯತೊಡಗಿತ್ತು ಆಕಾಶದ ಉದರದಿಂದ ಉದುರತೊಡಗಿದ್ದ ಮಳೆಹನಿ - ತಾನೂ ತನ್ನ ಭಾರವಾದ ಹೊಟ್ಟೆಯನ್ನು ಖಾಲಿಯಾಗಿಸಿಕೊಳ್ಳಲೆಂಬಂತೆ. ಮೋಡದ ಭದ್ರ ಗೂಡುಗಳಲ್ಲಿ ಕಿಂಡಿಗಳನ್ನು ಕೊರೆದು ಧಾರೆಯಾಗಿ ಕೆಳಗಿಳಿದು ಭುವಿಯನ್ನು ಹನಿಸುತ್ತಿದ್ದರೂ ಅಲ್ಲಿದ್ದವರಿಗ್ಯಾರಿಗು ಅದರ ಚಿಂತೆಯಿದ್ದಂತೆ ಕಂಡಿರಲಿಲ್ಲ; ಹಾಗೆ ನೋಡಿದರೆ ಅವರದಕ್ಕೆಲ್ಲ ಸಿದ್ದರಾಗಿಯೆ ಬಂದಿದ್ದಂತೆ ಕಾಣಿಸಿತು. ಮಳೆಯ ರಭಸವೇನು ಜೋರಾಗದಿದ್ದರೂ ಅಲುಗಾಡದೆ ಅಲ್ಲಿ ನೆನೆದುಕೊಂಡೆ ನಿಂತಿರುವಷ್ಟು ಅಳ್ಳಕವಾಗಿಯೂ ಇರದಿದ್ದ ಕಾರಣ ಎಲ್ಲರೂ ಅಲ್ಲಿಂದ ಜಾಗ ಬದಲಿಸುವುದು ಹೇಗೂ ಅನಿವಾರ್ಯವಾಗಿತ್ತು. ಅದಕ್ಕೆಂದೆ ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದ ಯೋಜನೆಯೆಂಬಂತೆ ಮಾರ್ಕೆಟಿಂಗಿನ ಉಸ್ತುವಾರಿ ಗುಂಪಿನವನೊಬ್ಬ ಎಲ್ಲರ ಗಮನ ಸೆಳೆದು ಮುಂದಿನ ಕಾರ್ಯ ಯೋಜನೆಯ ವಿವರವನ್ನಿತ್ತಿದ್ದ. ಮೊದಲಿಗೆ ಅವನ ವಿವರಣೆ ಥಾಯ್ ನಲ್ಲಿದ್ದ ಕಾರಣ ಇವರಿಗೆ ಏನೂ ಗೊತ್ತಾಗದಿದ್ದರೂ ನಂತರ ಮತ್ತೊಬ್ಬ ಬಂದು ಸಾರಂಶವನ್ನು ಇಂಗ್ಲಿಷಿನಲ್ಲಿ ಹೇಳಿದಾಗ, ಅವರ ಯೋಜನೆಯೇನೆಂದು ಸಾಕಷ್ಟು ಸ್ಪಷ್ಟವಾಗಿ ಅರಿಯಲು ಸಾಧ್ಯವಾಗಿತ್ತು. ಮಳೆ ಆರಂಭವಾದ ಕಾರಣ ಎಲ್ಲರೂ ದೊಡ್ಡದಾಗಿದ್ದ ಕಾಟೇಜೊಂದರಲ್ಲಿ ಒಟ್ಟಾಗಿ ಸೇರಬೇಕೆನ್ನುವುದು ಮೊದಲ ವಿಷಯವಾಗಿತ್ತು. ಇನ್ನು ನದಿ ತೀರದ ಕ್ಯಾಂಪಿನವರು ತಮ್ಮ ತಮ್ಮ ಟೆಂಟಿಗೆ ಹೋಗಬಹುದೆಂದು, ಒಂದು ವೇಳೆ ಮಳೆಯೇನಾದರು ಹೆಚ್ಚಾದರೆ, ಸ್ಥಳೀಯ ಅಡಳಿತ ನದಿಯ ತಟದಲ್ಲಿ ಇಟ್ಟಿರುವ ಒಂದು ಜೋರಾದ ಸೈರನ್ ಅನ್ನು ಬಾರಿಸಿ ಸೂಚನೆ ಕೊಡುವುದಾಗಿ, ಆ ಸದ್ದಾದ ಕೂಡಲೆ ರೈನ್ ಕೋಟ್ ಧರಿಸಿ ಬ್ಯಾಟರಿಯ ಲಾಟೀನು ಹಿಡಿದು ಅಲ್ಲಿಂದ ಹೊರಡಲು ಸಿದ್ದರಾಗಿರಬೇಕೆಂಬುದು ಎರಡನೆ ವಿಷಯ. ಇನ್ನು ಕಾಟೇಜಿನಲ್ಲಿ ವಿಶ್ರಾಂತಿ ಪಡೆಯ ಬಯಸುವವರು ತಮ್ಮ ತಮ್ಮ ಕಾಟೇಜಿಗೆ ಹೋಗಿ ವಿಶ್ರಮಿಸಬಹುದೆಂದು ಮೂರನೆ ಸೂಚನೆ. ಶ್ರೀನಾಥ ಮೊದಲ ಸೂಚನೆಯನ್ನನುಸರಿಸಲು ನಿರ್ಧರಿಸಿ ಆ ಮೊದಲ ಗುಂಪಿನ ಜತೆ ದೊಡ್ಡ ಕಾಟೇಜಿನತ್ತ ನಡೆದಿದ್ದ.

ಹೆಚ್ಚು ಕಡಿಮೆ ಯಾರೂ ವಿಶ್ರಮಿಸಿಕೊಳ್ಳಲು ತಂತಮ್ಮ ಕಾಟೇಜಿಗೆ ಹೋಗದೆ ಶ್ರೀನಾಥನ ಗುಂಪಿನ ಜತೆಯೆ ದೊಡ್ಡ ಕಾಟೇಜಿನತ್ತ ನಡೆದಿದ್ದರು, ಹೊಳೆಯ ತೀರದ ಟೆಂಟಿನ ಗುಂಪಿನವರನ್ನು ಬಿಟ್ಟು. ಶ್ರೀನಾಥನಿಗು ತನ್ನ ಕಾಟೇಜಿನ ರೂಮಿಗೆ ಹೋಗಿ ವಿಶ್ರಮಿಸುವ ಮನಸಾದರೂ ಇವರೆಲ್ಲ ಅಲ್ಲಿ ಸೇರಿ ಏನು ಮಾಡಬಹುದೆಂಬ ಕುತೂಹಲವೂ ಇದ್ದ ಕಾರಣ ಅವರ ಜತೆಗೆ ನಡೆದ್ದಿದ್ದ - ಅವರುಗಳ ಜತೆಯಲ್ಲಿ ಒಂದೆರಡು ಗಂಟೆ ಕಳೆದು ಆಮೇಲೆ ವಾಪಸ್ಸಾದರೆ ಆಯ್ತೆಂದು ಆಲೋಚಿಸುತ್ತ. ಅಲ್ಲಿ ಹೋಗಿ ನೋಡಿದರೆ ಅದೊಂದು ತೀರಾ ಹೊಸತಿನ ಜಗವೆ ತೆರೆದುಕೊಂಡಂತಾಗಿತ್ತು ಅವನ ಕಣ್ಮುಂದೆ - ಬಾಸು-ಸಹೋದ್ಯೋಗಿಗಳೆಂಬ ಭೇಧವಿಲ್ಲದೆ ಎಲ್ಲರೂ ತೀರಾ ಸರಳ ಹಾಗೂ ಸಡಿಲವಾದ ರಾತ್ರಿಯುಡುಗೆಯನ್ನುಟ್ಟುಕೊಂಡು ಆರಾಮವಾಗಿ ಮಾತನಾಡಿಕೊಂಡು ಪಟ್ಟಾಗಿ ಕೂತುಬಿಟ್ಟಿದ್ದರು, ಸಣ್ಣ ಸಣ್ಣ ಗುಂಪುಗಳಾಗಿ. ಕೆಲವರು ಗುಂಪುಗಳಲ್ಲಿ ಕಾಡು ಹರಟೆ ಹೊಡೆಯುತ್ತ ಕುಳಿತರೆ ಮತ್ತೊಂದೆರಡು ಗುಂಪು ವೃತ್ತಾಕಾರವಾಗಿ ಕುಳಿತುಕೊಂಡು ಏತಕ್ಕೊ ಸಿದ್ದತೆ ನಡೆಸುತ್ತಿದ್ದಂತ್ತಿತ್ತು. ಅಲ್ಲೇನೊ ಆಟವೊ, ಮತ್ತಿನ್ನೇನೊ ನಡೆಯಲಿದೆಯೆಂದು ಖಾತರಿಯಾಗಿ ಅದೇನೆಂದು ನೋಡಲು ಕುಳಿತ ಶ್ರೀನಾಥನನ್ನು ಹುರಿದುಂಬಿಸುತ್ತ ಆಟದ ಜತೆಗೆ ಸೇರಿಕೊಳ್ಳಲು ಆಹ್ವಾನಿಸಿದರು. ಅದೇನು ಆಟವಿರಬೇಕೆಂದು ಹತ್ತಿರ ಬಂದು ನೋಡಿದ ಮೇಲೆ ಅರಿವಾಗಿತ್ತು ಅವರೆಲ್ಲ ಕಾರ್ಡ್ಸಿನ ಆಟಕ್ಕೆ ಕುಳಿತಿದ್ದರೆಂದು! ಇಸ್ಪೀಟೆಂದರೆ ಮಾರುದ್ದ ಜಿಗಿಯುವ ಶ್ರೀನಾಥ ತನಗದು ಬರದೆಂದು, ಕೇವಲ ಪ್ರೇಕ್ಷಕನಾಗಿಯಷ್ಟೆ ಕುಳಿತು ನೋಡುವೆನೆಂದು ನೆಪ ಹೇಳಿ ತಪ್ಪಿಸಿಕೊಂಡಿದ್ದ. ಅನತಿ ದೂರದಲ್ಲಿದ್ದ ಮತ್ತಿನ್ನೊಂದು ಗುಂಪು ಕಾರ್ಡಿನ ಬದಲು ಮತ್ಯಾವುದೊ ಅವನಿಗೆ ಪರಿಚಿತವಲ್ಲದ ಥಾಯ್ ಸಾಂಪ್ರದಾಯಿಕ ಆಟವೊಂದನ್ನು ಆಡುತ್ತಿದ್ದರು. ಎರಡೂ ಆಟದ ವಿಶೇಷತೆಯೆಂದರೆ ಗಂಡು ಹೆಣ್ಣೆಂಬ ಭೇಧವಿಲ್ಲದೆ, ವಯಸಿನ ಅಂತರವಿಲ್ಲದೆ ಹಿರಿಕಿರಿಯರೆಲ್ಲರು ಒಟ್ಟಾಗಿ ಕಲೆತುಕೊಂಡು ಆಡುತ್ತಿದ್ದುದ್ದು. ಶ್ರೀನಾಥ ಹಾಗೆ ನೋಡುತ್ತಿದ್ದ ಸ್ವಲ್ಪ ಹೊತ್ತಿನ ನಂತರ ಅವರು ಬರಿಯ ಕಾಲಹರಣಕ್ಕೆ ಆಡಿದರೆ ಆಸಕ್ತಿಯಿರದೆಂದು, ಅದಕ್ಕೆ ಪ್ರಲೋಭನೆಯಾಗೆಂಬಂತೆ ಸಣ್ಣ ಪ್ರಮಾಣದಲ್ಲಿ ಹಣವನ್ನು ಪಣವಾಗಿಸಿಟ್ಟು ಆಡುತ್ತಿರುವುದು ಗಮನಕ್ಕೆ ಬಂದಿತ್ತು. ನೋಡನೋಡುತ್ತಿದ್ದಂತೆ ಆಟ ರಂಗೇರತೊಡಗಿ ಎಲ್ಲಾರೂ ಅದರಲ್ಲೆ ಸಂಪೂರ್ಣ ತಲ್ಲೀನರಾಗಿ ಹೋಗಿದ್ದರು - ಸುತ್ತಲಿನ ಪ್ರಪಂಚವನ್ನೆ ಮರೆತವರಂತೆ. ಇಸ್ಪೀಟಿನ ಗುಂಪಿನಲ್ಲಿ ಖದರಿನಿಂದ ಆಡುತ್ತಿದ್ದ ಕುನ್. ಸೋವಿ ಮತ್ತು ಕುನ್. ಲಗ್, ಹತ್ತಿರದಲ್ಲೆ ಕುಳಿತಿದ್ದ ಶ್ರೀನಾಥನನ್ನು ಮತ್ತೆ ಹುರಿದುಂಬಿಸುವ ವಿಫಲ ಯತ್ನ ನಡೆಸಿದರೂ ಪ್ರಲೋಭನೆಗೆ ಒಳಗಾಗದವನನ್ನು, ಮತ್ತೊಂದು ತಂಡದವರೂ ಕೂಡ ಹೊಸ ಥಾಯ್ ಸಾಂಪ್ರದಾಯಿಕ ಆಟ ಕಲಿಸಿಕೊಡುತ್ತೇವೆಂದು ಪ್ರೇರೇಪಿಸಿದರೂ ಜಗ್ಗಿರಲಿಲ್ಲ ಶ್ರೀನಾಥ. ಕೊನೆಗವರು ತಮ್ಮ ಪ್ರಯತ್ನ ನಿಲ್ಲಿಸಿ ಆಟದಲ್ಲಿ ಪೂರ್ತಿ ತಲ್ಲೀನರಾಗಿ ಹೋಗುವಾಗ, ಕುನ್. ಸೋವಿಯಿದ್ದುಕೊಂಡು ಶ್ರೀನಾಥ ಆಟವಾಡದಿದ್ದರೆ ಹೋಗಿ ಮಲಗುವುದು ಉಚಿತವೆಂದು ಸೂಚ್ಯವಾಗಿ ಹೇಳುತ್ತ ಈ ಆಟ ರಾತ್ರಿ ಬಹು ಹೊತ್ತಿನವರೆಗೂ ನಡೆಯುವುದೆಂದು ಎಚ್ಚರಿಸಿದ್ದ. ಕೆಲವೊಮ್ಮೆ ಹಾಗೆ ಆಡುತ್ತ ಬೆಳಗಿನ ಜಾವದವರೆಗು ನಡೆದಿದ್ದುಂಟೆಂದು ಕೇಳಿದಾಗ ಯಾಕೊ ಹೋಗಿ ಮಲಗುವುದೆ ಉಚಿತವೆನಿಸಿದರೂ ಒಂದರ್ಧ ಗಂಟೆಯವರೆಗು ನೋಡುತ್ತಲೆ ಅಡ್ಡಾಡಿದವ, ನಂತರ ಎಲ್ಲರಿಗೂ 'ಬೈ ಬೈ ಗುಡ್ನೈಟ್' ಹೇಳಿದವನೆ ತನ್ನ ಕಾಟೇಜಿನ ರೂಮಿಗೆ ನಡೆದಿದ್ದ - ಹನಿಯುತ್ತಲೆ ಇದ್ದ ಮಳೆಯಲ್ಲೆ, ಅಂದಾಜಿನ ಮೇಲೆ ತನ್ನ ಕಾಟೇಜ್ ನಂಬರನ್ನು ಹುಡುಕಿ ಗುರ್ತಿಸುತ್ತ.

ಆ ಮಬ್ಬುಗತ್ತಲಲ್ಲಿ ದಿಕ್ಕಿನ ಅಂದಾಜಲ್ಲೆ ತನ್ನ ರೂಮಿದ್ದ ಕಾಟೇಜಿನ ಕಡೆ ನಡೆಯುತ್ತಿದ್ದ ಹಾಗೆಯೆ ಮಳೆಯ ಹನಿಗಳು ಇದ್ದಕ್ಕಿದ್ದಂತೆ ದಪ್ಪವಾಗುತ್ತ ತೀವ್ರ ಗತಿಯಾಗುತ್ತಿರುವುದು ಶ್ರೀನಾಥನ ಅನುಭವಕ್ಕೆ ಬಂತು - ಕೈ ಮೇಲೆ ಬೀಳತೊಡಗಿದ ರಭಸದ ಹನಿಗಳಿಂದಾಗಿ. ಮಳೆ ಹೆಚ್ಚುತ್ತಿದೆಯೆಂಬ ಅವಸರ, ತವಕದಲ್ಲೆ ಹೆಜ್ಜೆಯ ವೇಗ ಹೆಚ್ಚಿಸುತ್ತಿದ್ದಂತೆ ದೂರದಿಂದ ಸೈರನ್ನಿನ ದನಿಯೊಂದು ಮೊಳಗಿದ್ದು ಕೇಳಿ ಬಂತು. ಸೈರನ್ನಿನ ಸದ್ದು ಅಂದರೆ, ಮಳೆ ಹೆಚ್ಚಾಗುವುದು ಖಚಿತವಾದ ಕಾರಣ ಹೊಳೆಯ ದಂಡೆಯಲ್ಲಿ ಟೆಂಟು ಹಾಕಿರುವವರಿಗೆ ವಾಪಸು ಬರಲು ಸಿದ್ದರಾಗಿರುವಂತೆ ಸೂಚಿಸುವ ಎಚ್ಚರಿಕೆಯ ಗಂಟೆ ಅದು. ಅಲ್ಲಿಂದ ಇದ್ದ ಸ್ಥಿತಿಯಲ್ಲೇ ಎಲ್ಲಾ ಎತ್ತಂಗಡಿ ಮಾಡಿಕೊಂಡು ಅವರೆಲ್ಲ ಹತ್ತಿರದ ಕಾಟೇಜಿಗೆ ವಾಪಸ್ಸು ಬರಬೇಕಿತ್ತು - ಮೊದಲೇ ನೀಡಿದ್ದ ಸೂಚನೆಯನುಸಾರ. ಅವರಿಗೆ ಮಾರ್ಗದರ್ಶನ ನೀಡಿ ಸ್ಥಳಾಂತರಿಸಲು ಸಹಕರಿಸಲೊ ಎಂಬಂತೆ ಅಲ್ಲಿನ ಸಿಬ್ಬಂದಿಯೊಬ್ಬ ಬ್ಯಾಟರಿಯ ಲಾಟೀನ್ ಒಂದನ್ನು ಹಿಡಿದುಕೊಂಡು ಹೊಳೆಯತ್ತ ನಡೆಯುತ್ತಿರುವುದು ಕಾಣಿಸುತ್ತಿತ್ತು. ತೀರಾ ಒದ್ದೆ ಮುದ್ದೆಯಾಗುವ ಮೊದಲೆ ರೂಮಿನ ಒಳಗೆ ಸೇರಿಕೊಂಡುಬಿಡಬೇಕೆಂದು ಓಡಿದ ಶ್ರೀನಾಥ ಅಂತೂ ಇಂತೂ ಜಾರಿ ಬೀಳದೆ ತನ್ನ ಕಾಟೇಜಿನ ರೂಮು ಸೇರಿಕೊಂಡು ನಿಟ್ಟುಸಿರುಬಿಟ್ಟಿದ್ದ. ಒಟ್ಟಾರೆ ರೂಮಿನೊಳಗೆ ಸೇರಿದ ಮೇಲಂತೂ ಹೊರಗಿನ ವಾತಾವರಣದ ಹೊಡೆತವೆಲ್ಲ ಮಾಯವಾಗಿ ಬೆಚ್ಚಗಿನ ಹಿತವಾದ ಅನುಭವವಾಗತೊಡಗಿತು ಆ ತಂಪು ವಾತಾವರಣದಲ್ಲಿ. ಆ ರೂಮಿದ್ದದ್ದು ತುಸು ಎತ್ತರದಲ್ಲಿಯಾದ ಕಾರಣ ಕಾಟೇಜಿನ ಒಳಗಡೆಯೆ ಅಳವಡಿಸಿದ್ದ ಮರದ ಮೆಟ್ಟಿಲುಗಳನ್ನು ಹತ್ತಿಯೇ ಮೇಲೇರಬೇಕಿತ್ತು. ಆ ಭೂಮಿಯ ಮಾಮೂಲಿನ ಮಟ್ಟದಿಂದೆತ್ತರವಿದ್ದುದ್ದಕ್ಕೊ ಏನೊ ಮಳೆಯ ಹೊತ್ತಿನಲ್ಲಿ ನೆಲ ಮಟ್ಟದಲ್ಲಾಗುವ ಕೊಚ್ಚೆ, ರಾಡಿಯ ಕ್ಲೇಷಗಳೆಲ್ಲ ಕಣ್ಣೋಟದಿಂದ, ಮನಃಪಟಲದಿಂದ ಸಂಪೂರ್ಣ ಮರೆಯಾಗಿ ಹೋಗಿ, ಬರಿಯ ಆಕಾಶಕ್ಕೂ ಭೂಮಿಗೂ ನಡುವಣ ಧಾರೆಯಾಗುವ ಮಳೆಯ ಚಿತ್ರಣವಷ್ಟೆ ಕಣ್ಣಿಗೆ ಕಟ್ಟುವಂತಾಗಿ ಸಂಪೂರ್ಣ ಬೇರೆಯದೆ ಆದ ಅನುಭೂತಿಯುಕ್ಕಿಸುವ ಅನುಭವವನ್ನು ಕೊಡುತ್ತಿರುವಂತೆ ಭಾಸವಾಗತೊಡಗಿತು ಶ್ರೀನಾಥನಿಗೆ. 

ಮಳೆಗೆ ಸಿಕ್ಕಿ ಅದರಲ್ಲೇ ನೆನೆದು ಒದ್ದಾಡುವಾಗಿನ ಸಂಕಟದ ಸನ್ನಿವೇಶಕ್ಕೂ, ಅದೆ ಮಳೆಯನ್ನು ಬೆಚ್ಚಗಿನ ತಾಣವೊಂದರಿಂದ ಒಂದಿನಿತೂ ನೆನೆಯದೆ ಆರಾಮವಾಗಿ ನೋಡುತ್ತ ಕುಳಿತುಕೊಳ್ಳುವ ದಿವ್ಯಾನುಭೂತಿಯ ಸನ್ನಿವೇಶಕ್ಕೂ ಅದೆಷ್ಟು ಅಗಾಧ ವ್ಯತ್ಯಾಸವೆಂದು ಸೋಜಿಗ ಪಡುತ್ತಿರುವಾಗಲೆ ಆಗಸದಲ್ಲಿ ಫಳಾರೆಂದಿತ್ತು ಮಿಂಚು; ಸಿಡಿಲು, ಗುಡುಗಿನಿಂದೊಡಗೂಡಿದ ಸದ್ದು ಮಿಂಚು ಬೆಳಕಿನ ಹಿಂದೆಯೆ ಬಲವಾಗಿ ಅಪ್ಪಳಿಸುತ್ತ ಹನಿಹನಿಗರೆಯುತ್ತಿದ್ದ ಮಳೆ ಇದ್ದಕ್ಕಿದ್ದಂತೆ ತೀವ್ರವಾಗಿ ತನ್ನ ವರ್ಷರೋಧನದ ದನಿಯನ್ನು ಮತ್ತಷ್ಟು ಮೇಲೇರಿಸಿಕೊಂಡು ಧಾರಾಕಾರವಾಗಿ ಸುರಿಯುವ ಜಡಿಮಳೆಯ ದನಿಯಾಗಿ ಸುತ್ತೆಲ್ಲ ವ್ಯಾಪಿಸಿಕೊಂಡುಬಿಟ್ಟಿತ್ತು. ಅಲ್ಲಿಯವರೆಗೂ ಸುತ್ತಲೂ ರಾಜ್ಯವಾಳಿಕೊಂಡಿದ್ದ ಮಿಕ್ಕೆಲ್ಲಾ ಬಗೆಬಗೆಯ ಕ್ರಿಮಿ ಕೀಟ ಜೀವಿಗಳ ಸದ್ದನ್ನೆಲ್ಲಾ ಒಂದೆ ಏಟಿಗೆ ಕಬಳಿಸಿದ ಆ ದನಿ, ಹಿಡಿಸಲಿ, ಬಿಡಲಿ - ಕೇವಲ ತನ್ನ ದನಿಯನ್ನಷ್ಟೆ ಶ್ರಾವ್ಯವಾಗಿಸುವ ಬಲವಂತದ ನಿಸರ್ಗ ರೋಧನವಾಗಿ ಪರಿಣಮಿಸಿಬಿಟ್ಟಿತ್ತು - ಆ ಕೆಲ ಕ್ಷಣಗಳಲ್ಲಿಯೆ. ಆ ಅಘೋರ ಸದ್ದಿನ ರುದ್ರ ರಮಣೀಯತೆ, ಕಾಡಿನ ನಿಸರ್ಗ ಸಹಜ ಪರಿಸರದಲ್ಲಿ ಅಸೀಮ ಬಲ ಪಡೆದ ವರಗರ್ವಿತ ದಾನವನಂತೆ ಭೋರ್ಗರೆಯತೊಡಗಿದಾಗ ತನ್ನ ಪ್ರಾಜೆಕ್ಟು, ನಿತ್ಯದ ಮಾಮೂಲಿ ಕೆಲಸಗಳಂತಹ ದೈನಂದಿನ ಜಂಜಾಟಗಳಲ್ಲಿ ಸಿಲುಕಿ ಯಾವುದೊ ಲೋಕದಲ್ಲಿ ಕಳುವಾಗಿ ಹೋಗುವ ಶ್ರೀನಾಥನ ಮನದ ಮೂಲೆಯ ಅನಾಥಪ್ರಜ್ಞೆಯೊಂದು ಇದ್ದಕ್ಕಿದ್ದಂತೆ ಯಾರೊ ಬಡಿದೆಬ್ಬಿಸಿದಂತೆ ಜಾಗೃತವಾಗಿ, ಲೌಕಿಕ ಜಗದ ಮಿಕ್ಕೆಲ್ಲವನ್ನು ಮರೆತ ದೈವಿ ಅನುಭವವೊಂದರಲ್ಲಿ ಮುಳುಗಿ ಹೋದ ಅನುಭೂತಿಯನ್ನು ಉದ್ದೇಪಿಸತೊಡಗಿತ್ತು, ಅಂತರಾಳದಲ್ಲಿ. ಆ ಹೊತ್ತಿನಲ್ಲೆ ರೂಮಿನ ದೊಡ್ಡ ಕಿಟಕಿಯಂತಿದ್ದ ಭಾಗವನ್ನು ತುಸು ಸರಿಸಿ ನೋಡೋಣವೆಂದು ತೆರೆದರೆ, ಅವನಿಗೆ ಅಚ್ಚರಿಯಾಗುವಂತೆ ಅದೊಂದು ಬರಿಯ ಮಾಮೂಲಿ ಕಿಟಕಿಯಾಗಿರದೆ ಮೇಲ್ಛಾವಣಿ ಹೊದಿಸಿದ ಅಟ್ಟಣೆಯ ರೀತಿಯ ಬಾಲ್ಕಾನಿಯಾಗಿತ್ತು! ಅದನ್ನು ತೆರೆಯುತ್ತಿದ್ದಂತೆ ಅಲ್ಲಿಂದ ಮತ್ತಷ್ಟು ಮುಕ್ತವಾಗಿ ತಂಗಾಳಿಯುಕ್ತ ಎರಚಲು ಸದ್ದಿನ ಸಮೇತ ಹೊಡೆಯಲಾರಂಭಿಸಿದಾಗ ಮನಸೆಲ್ಲ ವಿಚಿತ್ರ ರೀತಿಯಲ್ಲಿ ಉಲ್ಲಸಿತವಾಗಿ, ಅದರಿಂದುಟಾದ ಆಹ್ಲಾದಕರ ಭಾವನೆಯ ಉತ್ಕರ್ಷ ಯಾರೊ ಆಯಾಚಿತವಾಗಿ ಅವನ ಕೈ ಹಿಡಿದೆಳೆದು ಕರೆದುಕೊಂಡು ಹೋದಂತೆ, ಅವನನ್ನು ಆ ಬಾಲ್ಕಾನಿಯೊಳಗೆ ಎಳೆತಂದು ನಿಲ್ಲಿಸಿಬಿಟ್ಟಿತ್ತು !

ಧರಣಿಯ ಪ್ರಣಯೋನ್ಮಾದದ ನಲ್ಮೆಯ ಕರೆಗೊ, ವಸುಂಧರೆ ದೀನ ಮೊಗವೆತ್ತಿ ಬೇಡಿದ ಆರ್ತನಾದದ ಮೊರೆಗೊ, ನಿಸರ್ಗದ ನಿಯಮ ಪಾಲನೆಯ ಕಟ್ಟಾಜ್ಞೆಯ ಬಿರುನುಡಿಗೊ - ಒಟ್ಟಾರೆ, ವಿಧಿಯಿಲ್ಲದೆ ಓಗೊಟ್ಟ ವರುಣನ ವರ್ಷ ಹರ್ಷೋದ್ಗಾರ ಧಾರೆಧಾರೆಯಾಗಿಳಿದಂತೆ, ಭುವಿಯ ಆಲಿಂಗನಕೆ ಹಾತೊರೆದ ಮಳೆರಾಯನ ಮಿಂಚು, ಗುಡುಗು, ಸಿಡಿಲಿನೊಡಗೂಡಿ ಹಠಾತ್ ಸ್ಪೂರ್ತಿಯಲಿ ನಿರಂತರ ಸ್ಪುರಿಸಿದ ಆರ್ಭಟೋದ್ಗಾರವಾಗಿ ಮಾರ್ಪಟ್ಟು ಭೂದೇವಿಯತ್ತ ರಾಚತೊಡಗಿತ್ತು. ಮೋಡಗಳಲ್ಲಿ ಮಡುಗಟ್ಟಿ ನಿಂತು ಕರಗಲ್ಲೊಲ್ಲದ ಹಮ್ಮಿನಲಿ ಮೆರೆದಾಡುತ್ತಿದ್ದ ಘನಜಲ ತರಂಗಿಣಿಯನ್ನು, ಪೊಡಮಡಿಸುವತನಕ ಬಿಡದೆ, ಹೆಡೆಮುರಿ ಕಟ್ಟಿ ಸೆಳೆದು ಇಳೆಗಿಳಿಸುವ ಹಠ ತೊಟ್ಟಂತೆ ತನ್ನೆಲ್ಲ ಗುರುತ್ವ ಬಲವನ್ನು ಒಗ್ಗೂಡಿಸಿ ಸೆಳೆದ ರಭಸಕ್ಕೆ ಯಾವ ಮೋಡದ ಕೋಟೆ ತಾನೆ ಪುಡಿಯಾಗದಿದ್ದೀತು? ಬಿಗುಮಾನದಲಿ ತೆಕ್ಕೆ ಹಿಡಿದಷ್ಟು ಹೊತ್ತು ಗಗನದ ಖಾಲಿ ಬಯಲಿನ ಹಿಡಿತ ತಾತ್ಕಾಲಿಕ ತಡೆಯೊಡ್ಡಿ ನಿಲ್ಲಿಸಿದರೂ, ನಿರಂತರ ಹಿಡಿತಕ್ಕೆ ಶಕ್ತಿ ಸಾಲದೆ ಅದರ ಕೈ ಸೋತಾಗ, ಕೆಳಗಿಳಿದಂತೆ ಜಾರಿದ ಕಲ್ಹನಿಗಳ ಜಾಗದಲ್ಲಿ ಕರಗಿದ ಸಲಿಲಧಾರೆಯಾಗಿ ಹರಿವ ಕಾರಂಜಿಯಾಗಿ ಚಿಮ್ಮಿದಾಗ ಅದರೊಟ್ಟಿನ ತಿಕ್ಕಾಟ, ಸೆಣೆಸಾಟ, ಕೊಸರಾಟ, ಪ್ರತಿರೋಧಗಳೆಲ್ಲ ಮಿಂಚು ಗುಡುಗಿನ ಫಲಿತ ರೂಪದಲ್ಲಿ ಪ್ರತಿಫಲಿತವಾಗುತ್ತಿದ್ದರೂ ಅದನ್ನು ಮೆಟ್ಟಿ ನಿಲ್ಲುವ ಭೂಮಾತೆಯ ಕಸುವಿನ ಗುರುತ್ವ ಬಲದೆದುರು ದುರ್ಬಲವಾಗಿ, ಕಡೆಗೆ ತನ್ನೆಲ್ಲಾ ರಂಪಾಟಗಳನ್ನು ನಿಲ್ಲಿಸಿ ಮಿಂಚು ಗುಡುಗಿನ ಸದ್ದುಗದ್ದಲವಿಲ್ಲದ ಬರಿಯ ಏಕತಾನದ ವರ್ಷೋದ್ಗಾರವಾಗಿ ಪರಿಣಮಿಸಿ ತನ್ನ ಸೋಲನ್ನೊಪ್ಪಿಕೊಂಡುಬಿಟ್ಟಿತ್ತು.

ಅದೇನೊ ಸೋಲೊಪ್ಪಿಕೊಂಡು ಸಡಿಲವಾದರೂ ಅದರ ಜಾರ್ಗರೆಯುವ ಮೊರೆತದ ಹೊಡೆತ ಇಳೆಯ ಗಾಳಿಯ ಕವಚದ ಬಾಹ್ಯಪದರದ ಹತ್ತಿರ ಮುಟ್ಟುತ್ತಿದ್ದಂತೆ, ಭೂ ಕವಚದಂತೆ ಸುತ್ತುವರೆದಿದ್ದ ಅನಿಲ ಗೋಳವನ್ನು ಅಪ್ಪಳಿಸಿ ಕೊರೆದು ರಂಧ್ರ ಮಾಡಿಕೊಂಡು ಒಳಹೊಕ್ಕು, ಕೋನಾಕಾರದ ಅನುಕ್ರಮತೆಯ ಶಿಸ್ತಿನಲ್ಲಿ ವಾಯು ಮಂಡಲವನ್ನು ಪದರ ಪದರವಾಗಿ ಭೇಧಿಸುತ್ತ ನೆಲ ತಲುಪಿ ವಸುಧೆಯ ಸಿರಿ ಮಣ್ಣಲ್ಲಿ ಸೇರಿ ಕರಗಿಹೋಗಲೆಂದೆ ಧಾವಿಸತೊಡಗಿತ್ತು. ಆದರೆ ಅದರ ಸಮಾಗಮವನ್ನು ಪ್ರತಿರೋಧಿಸುವ ಬರಿಯ ವಾಯು ಕವಚ ಮಾತ್ರವಲ್ಲದೆ, ಭೂ ಮೇಲ್ಮೈ ಪದರದಲಿದ್ದ ಅಖಂಡ ಸಸ್ಯ-ಜೀವ-ಜಲರಾಶಿಗಳೂ ಸೇರಿಕೊಂಡು ಆ ಆಕಾಶದಶ್ರುತರ್ಪಣವನ್ನು ನೇರ ಭುವಿಯೊಳಗಿಳಿಯಬಿಡದೆ, ಅದು ಮಣ್ಣೊಳಗೆ ಸೇರುವ ಮೊದಲೆ ತಮ್ಮ ನಾಲಿಗೆ, ಮೈ ಕೈಯನೆಲ್ಲ ಹೊರಚಾಚಿ ತಮಗೆ ಸಾಧ್ಯವಿದ್ದಷ್ಟನ್ನು ಬಾಚಿ ಸೂರೆ ಮಾಡತೊಡಗಿದ್ದವು. ಹಾಗೆ ಅವಸರದಲ್ಲಿ ದೋಚಿದ ವರ್ಷ ಸಂಪತ್ತಲ್ಲಿ ತಿಂದರಗಿ ಮಿಕ್ಕಿದ ಕೊನೆ ಜಲವೆಲ್ಲ ಹನಿಹನಿಗಳಾಗಿ ಎಲೆ ಮರ ಕೊಂಬೆಗಳಿಂದ ತೊಟ್ಟಿಕ್ಕುತ್ತ ಮೂಲ ವರ್ಷಧಾರೆಗೆ ಸಮಾನಾಂತರವಾಗಿ ತೊಟ್ಟಿಕ್ಕಿದಾಗ ಅದನ್ನೆ ಬೊಗಸೆ ಹಿಡಿದು ಮನೆಯ ಮಾಡು, ಛಾವಣಿ, ಕಿಟಕಿಗಳೆಲ್ಲ ತೃಪ್ತರಾಗುತ್ತ ಮಿಕ್ಕುಳಿದುದನ್ನು ಮರು ಸಿಂಪಡಿಸುವ ಎರಚಲಾಗಿಸಿ ಆಚೀಚೆಗೆ ಸಿಡಿಸಿತ್ತು. ಆಗ ಸಿಡಿದ ಹನಿಗಳೆ ನಿರಂತರ ವೃಷ್ಟಿಯಂತೆ ಮೆಲುವಾಗಿ ತಾಡಿಸುತ್ತ, ಜತೆಗೆ ಹದವಾಗಿ ತಂಗಾಳಿಯನ್ನು ಬೆರೆಸುತ್ತ ಮೈ ಕೈಗಳ ಮೇಲೆ ಚೆಲ್ಲುತ್ತಲೆ ಮೆಲುವಾಗಿ ನೇವರಿಸುತ್ತಿದ್ದ ಆ ಮಧುರ ಸುಖಾನುಭವಕ್ಕೆ ಬೆರಗಾಗಿ ಸಂಪೂರ್ಣ ತನ್ಮಯತೆಯಿಂದ ಮೈಮರೆತು ಕಣ್ಮುಚ್ಚಿಕೊಂಡು ಬಾಲ್ಕನಿಯಲ್ಲೆ ಹಾಗೆಯೆ ನಿಂತುಬಿಟ್ಟಿದ್ದ ಶ್ರೀನಾಥ.  

(ಇನ್ನೂ ಇದೆ)
__________________
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಳೆಯ‌ ವರ್ಣನೆ ಅದ್ಬುತವೆನ್ನುವಂತೆ ವರ್ಣಿಸಿದ್ದೀರಿ, ಕನ್ನಡ‌ ಪದಗಳ‌ ಕುಣಿತವನ್ನು ಕಾಣುವಾಗ‌ ಸಂತಸವೆನಿಸಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥ ಸಾರ್, ನಮಸ್ಕಾರ. ಈ ಮಳೆಯ ವಿವರದ ವರ್ಣನೆಯ ಅರ್ಧ ಭಾಗ ಮಾತ್ರ ಈ ಕಂತಿನಲ್ಲಿದೆ. ಮಿಕ್ಕರ್ಧ ಅದು ಶ್ರೀನಾಥನಲ್ಲಿ ಉಂಟುಮಾಡುವ ಭಾವೋನ್ಮೇಷ ಮತ್ತು ಪರವಶತೆಯ ಪರಿಯನ್ನು ಕುರಿತದ್ದು. ಪದಗಳ ಅಸಹನೆಯ ಧಾರೆಯನ್ನು ಸಹನೆಯಿಂದ ಓದಿ ಮೆಚ್ಚುವ ತಮ್ಮ ಅಭಿರುಚಿ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಿಕ್ಕರ್ಧಕ್ಕಾಗಿ ಎದುರು ನೋಡುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ. ಮಿಕ್ಕರ್ಧವಿರುವ ಮುಂದಿನ ಭಾಗ (ಭಾಗ 38) 'ರೀಲೀಸ್' ಮಾಡಿಯಾಗಿದೆ ನೋಡಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.