ಕಗ್ಗ ದರ್ಶನ – 13 (2)

5

ಸುಡುಬೆಸಿಲೊಲೇಂಗೈವೆ ತಿದ್ದುವೆಯ ಸೂರ್ಯನನು
ಕೊಡೆಯ ಪಿಡಿಯುವೆ ನೆರಳ ಸೇರ್ವೆ ನಿಜಮತಿಯಿಂ
ಕೆಡುಕು ಜಗವೆಂದದನು ಹಳಿದೊಡೇಂ ನೀನದಕೆ
ಇಡುಕುವೆಯ ಸೌರಭವ? – ಮರುಳ ಮುನಿಯ
ಸುಡುಬೇಸಿಗೆಯ ಉರಿಬಿಸಿಲಿನಲ್ಲಿ ನಿಂತಾಗ ನಮ್ಮ ಮೈಮನವೆಲ್ಲ ಚಡಪಡಿಕೆ. ಬೆಂಕಿಬಿಸಿಲಿಗೆ ಮೈಯೆಲ್ಲ ಬೆವರು; ಒರಸಿಕೊಂಡಷ್ಟೂ ಒಸರುವ ಬೆವರು. ಇಂತಹ ಸಂಕಟಕ್ಕೆ ಕಾರಣನಾದ ಸೂರ್ಯನನ್ನು ನೀನು ತಿದ್ದುವೆಯಾ? ಎಂದು ಈ ಮುಕ್ತಕದಲ್ಲಿ ಕೇಳುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. “ಸೂರ್ಯನೇ, ನಿನ್ನ ಶಾಖ ಹೆಚ್ಚಾಯಿತು, ಅದನ್ನು ಕಡಿಮೆ ಮಾಡಬೇಕಾಗಿದೆ” ಎಂದು ಬಿಸಿಲಿನ ಬೇಗೆ ತಗ್ಗಿಸಲು ಸಾಧ್ಯವಿಲ್ಲ. ಆಗ, ನಮ್ಮ ಬುದ್ಧಿ ಬಳಸಿ ಬಿಸಿಲಿನ ಬೇಗೆಯಿಂದ ಪಾರಾಗುವ ಉಪಾಯಗಳನ್ನು ಹುಡುಕುತ್ತೇವೆ.
ಸೂರ್ಯನ ಬಿಸಿಲಿಗೆ ಅಡ್ಡವಾಗಿ ಕೊಡೆ ಹಿಡಿಯುತ್ತೇವೆ. ಅಥವಾ ಹತ್ತಿರದ ಮರದ ನೆರಳಿಗೆ, ಕಟ್ಟಡದ ನೆರಳಿಗೆ ಸರಿಯುತ್ತೇವೆ. ಕೊಡೆಯ ಮರೆಯಲ್ಲಿ, ನೆರಳಿನ ತಂಪಿನಲ್ಲಿ ಇರುತ್ತಾ ಸುಡುಬಿಸಿಲಿನಿಂದ ಬಚಾವ್ ಆಗುತ್ತೇವೆ. ಹೊರತಾಗಿ, ಬೆಂಕಿಬಿಸಿಲನ್ನು ಬಯ್ಯುತ್ತಾ ಕೂರೋದಿಲ್ಲ.
ಈ ಜಗತ್ತೂ ರಣಬಿಸಿಲಿನಂತೆ. ಅಲ್ಲಿ ಎಷ್ಟೆಲ್ಲ ಕೆಡುಕು! ಅದರಿಂದಾಗಿ ಎಷ್ಟೆಲ್ಲ ಸಂಕಟ! ಹಾಗಂತ, ಈ ಜಗತ್ತೇ ಕೆಟ್ಟು ಹೋಗಿದೆ ಎಂದು ಅದನ್ನು ಹಳಿಯುತ್ತಾ ಕೂತರೆ ಏನು ಪ್ರಯೋಜನ? ನಾವು ಹಾಳಾದ ಜಗತ್ತಿಗೆ ಎಷ್ಟು ಬಯ್ದರೂ ಅದು ಬದಲಾಗುವುದಿಲ್ಲ. ನಮ್ಮ ಬಯ್ಗಳಿನಿಂದ ಈ ಜಗತ್ತಿನಲ್ಲಿ ಒಳಿತನ್ನು (ಸೌರಭವನ್ನು) ತುಂಬಲು ಸಾಧ್ಯವೇ?
ಈ ನಿಟ್ಟಿನಲ್ಲಿಯೂ ನಾವು ನಮ್ಮ ಬುದ್ಧಿ ಬಳಸಬೇಕು. ಕೆಡುಕು ತುಂಬಿದ ಜಗತ್ತನ್ನು ಬಾಯಿ ನೋಯುವಷ್ಟು ಬಯ್ಯುವ ಬದಲಾಗಿ, ನಮ್ಮಿಂದಾದಷ್ಟು ಒಳಿತನ್ನು ಮಾಡಬೇಕು. ಶಂಕರಾಚಾರ್ಯರಿಂದ ತೊಡಗಿ ವಿವೇಕಾನಂದರ ವರೆಗೆ, ಸಾಕ್ರೆಟೀಸನಿಂದ ತೊಡಗಿ ಮಹಾತ್ಮಾ ಗಾಂಧಿಯ ವರೆಗೆ ಮಹಾಮೇಧಾವಿಗಳೆಲ್ಲರೂ ಮಾಡಿದ್ದು ಇದನ್ನೇ – ಈ ಜಗತ್ತನ್ನು ಹಳಿಯುವ ಬದಲಾಗಿ, ಈ ಜಗತ್ತಿನಲ್ಲಿ ಒಳಿತನ್ನು ಮಾಡಲಿಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿ ಇಟ್ಟದ್ದು. ಒಳಿತು ಜಾಸ್ತಿಯಾದಷ್ಟೂ ಕೆಡುಕು ಕಡಿಮೆಯಾಗುತ್ತದೆ ಎಂಬ ಸೂತ್ರವನ್ನು ನಂಬಿ ಬಾಳಿದ್ದು. ಈ ಜಗತ್ತನ್ನು ಸುಧಾರಿಸುವ ದಾರಿ ಇದೇ ಅಲ್ಲವೇ?  
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):