ಕಗ್ಗ ದರ್ಶನ – 1 (2)

5

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ
ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು?
ಬಗೆಯದೀ ಲೆಕ್ಕವನು ಜಗದುಣಿಸನುಂಬವನು
ಮೃಗ ಮಾತ್ರನಲ್ಲವೇಂ? – ಮರುಳ ಮುನಿಯ
ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವು ಎರಡರಲ್ಲಿ ಹೆಚ್ಚು (ಮಿಗಿಲು) ಯಾವುದು? ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಿ, ತಟಕ್ಕನೆ, ಹಾಗಾದರೆ ನಿನ್ನ ಬೆಲೆ ಏನು? ಎಂಬ ಪ್ರಶ್ನೆಯ ಮೂಲಕ ನಮ್ಮನ್ನು ಚಿಂತನೆಗೆ ಒಡ್ಡುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ಇದು ನಾವು ದಿನದಿನವೂ ಮಲಗುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆ. ಈ ಪ್ರಶ್ನೆಯನ್ನು ಎದುರಿಸಿ, ಅದಕ್ಕೆ ಉತ್ತರ ಕೊಟ್ಟರೆ ಮಾತ್ರ ನೆಮ್ಮದಿಯ ನಿದ್ದೆ ಬಂದೀತು. ಯಾಕೆಂದರೆ ಇಂದಿನ ಬದುಕಿನಲ್ಲಿ ನಾನು ಈ ಜಗತ್ತಿಗೆ ಕೊಟ್ಟದ್ದಕ್ಕಿಂತ ಹೆಚ್ಚು ಪಡೆದಿದ್ದರೆ, ಮಲಗುವಾಗ ನಾನು ಸಾಲಗಾರನಾಗಿರುತ್ತೇನೆ. ಇದರ ಬಗ್ಗೆ ಒಂದು ಕ್ಷಣ ಚಿಂತಿಸಿ ಮಲಗಿದರೆ, ಮರುದಿನ ಏಳುವಾಗ ಮುಂದಿನ ದಿನದ ಸಾಲ ತೀರಿಸುವ ಸಂಕಲ್ಪ ತೊಡಲು ಸಾಧ್ಯವಾದೀತು. ಇಲ್ಲವಾದರೆ, ದಿನದಿಂದ ದಿನಕ್ಕೆ ನನ್ನ ಸಾಲದ ಹೊರೆ ಹೆಚ್ಚೀತು. ಅದರಿಂದಾಗಿ ಬದುಕಿನಲ್ಲಿ ನೆಮ್ಮದಿ ಇಲ್ಲವಾದೀತು.
ಈ ಲೆಕ್ಕಾಚಾರವನ್ನೇ ಮಾಡದೆ, ಈ ಜಗತ್ತಿನಿಂದ ಇನ್ನಷ್ಟು ಮತ್ತಷ್ಟು ಪಡೆಯುವ (ಜಗದ ಉಣಿಸನು ಉಂಬವನು) ಚಟಕ್ಕೆ ಬಿದ್ದವನು, ಒಂದು ಪ್ರಾಣಿಯಲ್ಲವೇ? ಎಂದು ಕೇಳುತ್ತಾರೆ ಮಾನ್ಯ ಡಿ.ವಿ.ಜಿ. ಇಂದಿನ ಜಗತ್ತಿನ ಎಲ್ಲ ಸಂಕಟಗಳಿಗೂ ಹೆಚ್ಚೆಚ್ಚು ಜನರು ಈ ಲೆಕ್ಕಾಚಾರ ಮಾಡದೆ ಬದುಕುತ್ತಿರುವುದೇ ಕಾರಣವಲ್ಲವೇ? ಈ ಲೆಕ್ಕಾಚಾರ ವ್ಯಕ್ತಿಯೊಬ್ಬನ ಸಾವಿನೊಂದಿಗೆ ಮುಗಿಯುತ್ತದೆಯೇ? ಹಲವರ ಬದುಕನ್ನು ಪರಿಶೀಲಿಸಿದರೆ, “ಇಲ್ಲ” ಎಂಬ ಸತ್ಯ ತಿಳಿಯುತ್ತದೆ. ಆದ್ದರಿಂದ “ಸಾಲಗಾರ”ರಾಗದೆ ಬದುಕಲು ಕಲಿಯೋಣ.
ನಿವೃತ್ತರಾದ ಹಲವರು ಮತ್ತೆ ಯಾವುದೋ ಸಂಬಳದ ಕೆಲಸಕ್ಕೆ ಸೇರಿಕೊಂಡು, ಇನ್ನಷ್ಟು ಹಣಕ್ಕಾಗಿ ಆಶೆ ಪಡುವುದನ್ನು ನಾವು ಕಾಣುತ್ತಿದ್ದೇವೆ. ದೀರ್ಘ ಸೇವಾವಧಿಯ ನಂತರ, ಕೊನೆಯ ಸಂಬಳದ ಅರ್ಧ ಹಣವನ್ನು ನಿವೃತ್ತಿ ವೇತನವಾಗಿ ಪಾವತಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಹಾಗಿರುವಾಗ “ಇನ್ನಷ್ಟು ಹಣ ನನಗೆ ಬರಲಿ” ಎಂಬ ಈ ಹಪಾಹಪಿ ಯಾತಕ್ಕೆ? ನಿವೃತ್ತರಾದ ನಂತರವಾದರೂ, ಈ ವರೆಗೆ ಸಮಾಜದಿಂದ ಪಡೆದದ್ದನ್ನು ನೆನೆದು, ಸಮಾಜಕ್ಕೆ ಕಿಂಚಿತ್ ಕೊಡುವ ಪ್ರಯತ್ನ ಯಾಕೆ ಮಾಡುವುದಿಲ್ಲ? ಕೊನೆಗೊಂದು ದಿನ ಪಡೆದ ಎಲ್ಲವನ್ನೂ ಇಲ್ಲಿ ಬಿಟ್ಟು ಹೋಗಬೇಕಾಗುತ್ತದೆ ಎಂಬ ಸತ್ಯವನ್ನು ಒಪ್ಪಿಕೊಂಡರೆ, ಅಂಥವರಿಗೆ ನಿವೃತ್ತಿಯ ನಂತರವಾದರೂ ಸಮಾಜಕ್ಕೆ ಕೊಡುವ ಬುದ್ಧಿ ಬಂದೀತೇನೋ?
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.