ಕಂತಿನ ರಾಜ

3.2

ಇದು ಸಾಲದ ಯುಗ. ಸಾಲದಲ್ಲೆ ತಂದು ತಿಂದು ತಿಂಗಳು ತಿಂಗಳು ಕಂತು ಕಟ್ಟಿಕೊಂಡು ವರ್ಷಾನುಗಟ್ಟಲೆ ಸಾಲ ಮುಗಿಯುವುದನ್ನೆ ಜಾತಕ ಪಕ್ಷಿಯಂತೆ ಕಾಯುತ್ತ ಕೂರುವ ಜಗ - ಹೊಸ ಸಾಲಕ್ಕೆ ನಾಂದಿ ಹಾಕಲು! ಈ ಸಾಲದ ಮಾಯೆ ಎಂತದ್ದೆಂದರೆ ಮೊದಲು ಕಾಸು ಕೂಡಿಟ್ಟು ಆಮೇಲೆ ಕೊಂಡು ತಂದು ಸುಖಿಸುವ ಗೋಜೆ ಇಲ್ಲ. ಮೊದಲೆಂತೊ ಏನೊ ಮಾಡಿ ಸಾಲದಲ್ಲೆ ತಂದು ಸುಖಿಸಿಬಿಡಬೇಕು. ಆಮೇಲೆ ಹೇಗೊ ಕಂತು ಕಟ್ಟಿದರಾಯ್ತು ಎನ್ನುವ ಚಾಣಾಕ್ಷ್ಯ ಕಾಲಧರ್ಮ.

ಇನೂ ಭೌತಿಕ ವಸ್ತುಗಳೇನು - ಬದುಕಿನ ಬಂಧ, ಸಂಬಂಧ ಭಾವಗಳು ಸಾಲಗಳೆ. ಎಲ್ಲರೂ ಸಾಲ ಕೊಟ್ಟವರ - ಕೊಂಡವರ ಹಾಗೆ ತಂತಮ್ಮ ವ್ಯವಹಾರದ ಲಾಭಾನಷ್ಟದ ನಿರೀಕ್ಷೆಯಲ್ಲಿರುವವರೆ. ಕಟ್ಟಿಕೊಂಡವರು, ಮಕ್ಕಳು, ಪೋಷಕರು, ಬಂಧು, ಬಳಗ, ನೆಂಟರಿಷ್ಟರು, ಗೆಳೆಯರು - ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಂತು ಕಟ್ಟಿಕೊಂಡೆ ಹೋಗಬೇಕು, ಭೌತಿಕ ರೂಪದಲ್ಲೊ ಅಥವಾ ಭಾವನಾತ್ಮಕ ಸ್ತರದಲ್ಲೊ. ಕಟ್ಟದಿದ್ದರೂ ಬಿಡದೆ ವಸೂಲು ಮಾಡುವ ಛಾತಿ ಈ ಬದುಕಿಗೆ, ಸುತ್ತುವರಿದು ಜೀವಾಜೀವಗಳಿಗಿರುತ್ತದೆಯೆಂಬುದು ಬೇರೆ ವಿಷಯ. ಹೀಗಾಗಿ ಪ್ರಶ್ನೆ ಕಂತು ಕಟ್ಟುತ್ತಿರೊ, ಬಿಡುತ್ತೀರೊ ಎನ್ನುವುದಲ್ಲ. ವ್ಯವಸ್ಥೆ ಹೇಗೆ ಕಟ್ಟಿಸಿಕೊಳ್ಳುತ್ತದೆ ಮತ್ತು ಅದನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವುದು. 

ಇನ್ನು ಲೌಕಿಕ ಸ್ತರದಿಂದಾಚೆಯ ಅಲೌಕಿಕತೆಯತ್ತ ಇಣುಕಿದರು ಅದೇ ಕಥೆ. ಜನ್ಮಾಂತರ ಸಾಲದ ತೀರುವಳಿಗಾಗಿ ಕಟ್ಟುವ ಕಂತೆ ಈ ಹುಲುಜನ್ಮದ ಬದುಕೆಂದು ಬಿಡುತ್ತದೆ ಆಧ್ಯಾತ್ಮ. ಅಲ್ಲಂತು ಪಡೆದ ಸಾಲವಾದರೂ ಏನು ಎಂದು ಗೊತ್ತಿರದಿದ್ದರೂ ಕಂತು ಕಟ್ಟಿಕೊಂಡು ಹೋಗಬೇಕು; ಕಟ್ಟುವ ರೀತಿ, ಮಾನಕ ಯಾವುದೆಂದು ಖಚಿತವಿರದಿದ್ದರೂ ಮುಂದುವರೆಸಿಕೊಂಡು ಹೋಗಬೇಕು. ಇಲ್ಲದಿದ್ದರೆ ಪುನರ್ಜನ್ಮಗಳು ಹೆಚ್ಚಂತೆ, ಕಟ್ಟಬೇಕಾದ ಮುಗಿಯದ ಕಂತುಗಳೂ ಅಗಣಿತವಂತೆ! ಹೀಗಾಗಿ ಈ ಕಂತೆ ನಮ್ಮ ಜೀವಮಾನವನ್ನಾಳುವ ರಾಜನಿದ್ದಂತೆ ಎನ್ನಬಹುದು. 

ಈ ಇನ್ಸ್ಟಾಲ್ ಮೆಂಟು ಜಗಕೊಂದು ಸಲಾಮು ಹಾಕುತ್ತ ಈ ಪುಟ್ಟ ಲಘುಲಹರಿಯ ಕವನ - ಕಂತಿನ ರಾಜ.

ಕಂತಿನ ರಾಜ
______________________________

ಲೈಫನ್ನೋದೊಂದು, ಇನ್-ಸ್ಟಾಲ್ಮೇಂಟು
ಕಟ್ಬೇಕೂ ಕಂತು, ಎಲ್ಲಾ ಎಡವಟ್ಟು
ತಿಂತಿಂಗುಳ್ ಪೂರ್ತಿ, ಕಟ್ತಾನೆ ಬೇವರರ್ಸಿ
ಅಸಲಿನ್ ಮಾತಿರ್ಲಿ, ಬಡ್ಡೀನೆ ಬಿಕ್ನಾಸಿ ||

ತಾಳಿ ಕಟ್ದೋಳ್, ಮೊದಲ್ನೆ ಸಾಲ
ವರದಕ್ಷಿಣೆ ತಂದೋಳ್, ಸುಮ್ನೆ ಬಿಡ್ತಾಳ?
ಹಿಂಡ್ ಹಿಂಡ್ತಾ ಜೀವ, ಲೈಫೆಲ್ಲಾ ಕಂತೆ
ಕಟ್ಟಿದ್ರೂ ಸಾಲಾ, ಮುಗಿಯಲ್ಲ ಇಂಟ್ರೆಸ್ಟೆ! ||

ಅಸಲೆಲ್ಲಿ ಮುಗಿಯೋದ್, ಬಡ್ಡೀನೆ ರೈಲು
ಮಕ್ಳು ಮರಿ ಹೆತ್ತು, ಹೊಸ ಸಾಲದ ಜೈಲು
ಒಂದ್ರಿಂದರ ಹಿಂದೆ, ಸಾಲಾಗಿತ್ ಹೊಸ ಸಾಲ
ಮುಗಿಯೋಕೆ ಬಿಡಲ್ಲ, ಬಲಿ ಹರಕೆಗೆ ಕಾಲ ||

ಕೋಟ್ಟೋನ್ ಕೋಡಂಗಿ, ಈಸ್ಕೊಂಡೋನ್ ಭದ್ರ
ಅನ್ನೊ ಮಾತು ಬಿಡಣ್ಣ, ರೌಡೀ ಜನ ಕ್ಷುದ್ರ
ಬಡ್ಡಿಗ್ ಚಕ್ರಬಡ್ಡಿ, ಅಸಲಾಗಿದ್ರೂನು ಕವಡೆ
ಕಂತೆಲ್ಲ ತಿಂದಾಕೊ, ಬಡ್ಡಿ ಮುಂದೆ ಮಖಾಡೆ ||

------------------------------------------------------------------------------------
ನಾಗೇಶ ಮೈಸೂರು
-------------------------------------------------------------------------------------

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಂತೆ ಒಗೆಯುವವರೆಗೂ ಕಂತಿನಲ್ಲಿ ಬಾಳುವ ಜೀವ ಋಣಮುಕ್ತನಾಗುವವರೆಗೂ ಮೋಕ್ಷವಿಲ್ಲ! ಕಂತಿನ ರಾಜ ಸೊಗಸಾಗಿದೆ, ನಾಗೇಶರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕಂತು ತೀರುತ್ತಿದೆಯೊ ಇಲ್ಲವೊ ಎಂದು ಗೊತ್ತಿರದೆಯೂ ಕಂತು ಕಟ್ಟುತ್ತಲೆ ಹೋಗುವ ಅನಿವಾರ್ಯದ ಒಂದು ತುಣುಕಷ್ಟೆ . ಧನ್ಯವಾದ ಕವಿಗಳೆ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.