ಎವರೆಸ್ಟ್ ಅಲ್ಲ, ಅದರಾಚೆಯ ಶಿಖರದ ಬೆನ್ನು ಹತ್ತಿ...

4

ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ ಮತ್ತೊಬ್ಬ.     

“ರಾಹಾ ಮುಹರ್ರಕ್” ಸೌದಿ ಅರೇಬಿಯಾದ ವಾಣಿಜ್ಯ ನಗರ ಜೆಡ್ಡಾ ನಗರದವಳು. ಮನದಾಳದಲ್ಲಿ ಅಡಗಿ ಕೂತಿದ್ದ ಆಕಾಂಕ್ಷೆ ಎನ್ನುವ “ಪುಟ್ಟ ರಕ್ಕಸ ಸ್ಫೋಟ ಗೊಂಡಾಗ” ಶಿಖರ ಮಣಿಯಿತು ಈ ನಾರೀಮಣಿಗೆ. ಮಂಗಳವಾರ ಅವರೋಹಣ ಮಾಡಿದ ನಂತರ ಈಕೆಯ ಮೊಬೈಲ್ ರಿಂಗ್ ಗುಟ್ಟುತ್ತಲೇ ಇದೆಯಂತೆ.  

ಸಂಪ್ರದಾಯವಾದಿಗಳ ತಮ್ಮದೇ ಆದ ವ್ಯಾಖ್ಯಾನಕ್ಕೆ ಎದುರು ಉತ್ತರ ನೀಡದ ಸಂಪ್ರದಾಯವಾದೀ ಸೌದಿ ಅರೇಬಿಯಾ, ತನ್ನ ಮಹಿಳೆಯರಿಗೆ ಡ್ರೈವಿಂಗ್ ಮಾಡಲು ಅನುಮತಿಸದ ವಿಶ್ವದ ಏಕೈಕ, ವಿಶ್ವದ ಏಕೈಕ ಮುಸ್ಲಿಂ ದೇಶ. ಯಾವುದೇ ದೇಶದಲ್ಲೂ ಮಹಿಳೆ ವಾಹನ ಚಲಾಯಿಸ ಬಹುದು. ಸೌದಿ ಅರೇಬಿಯಾ ಹೊರತು ಪಡಿಸಿದರೆ ಯಾವುದೇ ಮುಸ್ಲಿಂ ದೇಶದಲ್ಲೂ ಮಹಿಳೆ ವಾಹನ ಚಲಾಯಿಸಬಹುದು. ಆದರೆ ನಮ್ಮ ಸಮಾಜ ಇನ್ನೂ ಪರಿ ಪಕ್ವವಾಗಿಲ್ಲ, ಕಾಲ ಇನ್ನೂ ಪ್ರಶಸ್ತ ವಾಗಿಲ್ಲ ಎನ್ನುವ ನೆಪದ ಕಾರಣ ಮಹಿಳೆ ಕಾಲು ಕಾರಿನ accelerator ಮೇಲೆ ಊರಲು ಆಗಿಲ್ಲ. ಆದರೆ ಇದೇ ಕಾಲುಗಳು ಪರ್ವತವನ್ನು ಮೆಟ್ಟಿ ನಿಂತವು. ಸಾಮಾನ್ಯ ಪರ್ವತವಲ್ಲ. ಅದೇ ಎವರೆಸ್ಟ್ ಶಿಖರ. ಎತ್ತರ, ಭರ್ತಿ ಇಪ್ಪತ್ತೊಂಭತ್ತು ಸಾವಿರದ ಮೂವತ್ತೈದು ಅಡಿಗಳು.   

ಪರ್ವತದಷ್ಟೇ ಸವಾಲಾಗಿತ್ತು ತನ್ನ ಕುಟುಂಬದವರನ್ನು ಒಪ್ಪಿಸುವ ಕೆಲಸ ಎನ್ನುವ ‘ರಾಹಾ’ ಕ್ರಮೇಣ ಮನೆಯವರ ಸಹಕಾರ ಮತ್ತು ಬೆಂಬಲವನ್ನ ಗಳಿಸಿಕೊಂಡಳು. ತನ್ನ ಗುರಿಯೆಡೆ ದೃಢ ಹೆಜ್ಜೆಗಳನ್ನು ಹಾಕಿದಳು. ಸಂಪ್ರದಾಯವಾದೀ ಹಿನ್ನೆಲೆಯಿಂದ ಬಂದ ಯಾವುದೇ ಮಹಿಳೆಯೂ ಸಾಧಿಸಲಾರದ್ದನ್ನು ಸಾಧಿಸಿದಾಗ ಆಗುವ ಅವರ್ಣನೀಯ ಆನಂದ ಈ ಯುವತಿಗೆ ಸಿಕ್ಕಿದ್ದು ಈಕೆಯ ಯಶಸ್ಸಿಗಾಗಿ ಹಾರೈಸುತ್ತಿದ್ದ ಜನರಿಗೆ ಸಂತಸ ತಂದಿತು. ಎವರೆಸ್ಟ್ ಏರುವ ಮೊದಲು ಒಂದೂವರೆ ವರ್ಷಗಳ ಕಾಲ ಎಂಟು ವಿವಿಧ ಪರ್ವತಗಳನ್ನು ಈಕೆ ಏರಿ ತಯಾರಿ ತೆಗೆದುಕೊಂಡಳು.ಸೂರ್ಯನ ಅತ್ಯಂತ ಆಪ್ತ, ಉರಿ ಬಿಸಿಲಿನ ದೇಶದಿಂದ ಬಂದ ಈಕೆಗೆ ಮೂಲೆ ಕೊರೆಯುವ ಚಳಿ ಇಟ್ಟುಕೊಂಡ ಹಿಮಚ್ಛಾದಿತ ಪರ್ವತ ಸಾಕಷ್ಟು ಸವಾಲುಗಳನ್ನೇ ಒಡ್ಡಿರಬಹುದು.  

ಗುರಿಯ ಗಾತ್ರದಷ್ಟೇ ಯಶಸ್ಸಿನ ಗಾತ್ರವೂ ಆಗಿರುತ್ತದೆ ಎನ್ನುವ ರಾಹಾ ತಾನು ಎವೆರೆಸ್ಟ್ ಏರಿದ ಪ್ರಪ್ರಥಮ ಸೌದಿ ಎನ್ನುವ ಹೆಗ್ಗಳಿಕೆಗಿಂತ ತನ್ನ ಯಶಸ್ಸು ಇತರೆ ಮಹಿಳೆಯರಿಗೂ ಸ್ಫೂರ್ತಿಯಾದರೆ ತನಗೆ ಹೆಚ್ಚು ತೃಪ್ತಿ ಎನ್ನುತ್ತಾಳೆ. ಕೇವಲ ಒಂದೂವರೆ ವರ್ಷಗಳ ಹಿಂದೆ ಒಂದೂ ಪರ್ವತವನ್ನು ಏರದೇ ಇದ್ದ ತನಗೆ ಎವರೆಸ್ಟ್ ಒಲಿದಿದ್ದು ಹೊಸ ಚೆತನವನ್ನು ಆಕೆಗೆ ಕೊಟ್ಟಿದೆ. ಅಮೆರಿಕೆಯ ಆಲಾಸ್ಕಾ ರಾಜ್ಯದ ದೆನಾಲಿ ಮತ್ತು ಆಸ್ಟ್ರೇಲಿಯಾದ Kosciuszko (ಉಚ್ಛಾರ ಗೊತ್ತಿಲ್ಲ) ಪರ್ವತಗಳನ್ನು ಏರುವ ಆಸೆ ಇಟ್ಟುಕೊಂಡಿರುವ ಈಕೆ ಹೇಳುವುದು...

“ಯಾವುದನ್ನೂ ನೀವು ಪ್ರಯತ್ನಿಸದೆ ಇದ್ದರೆ ಹೇಗೆ ತಾನೇ ಗೊತ್ತಾಗುವುದು ನಿಮಗೆ ಸಾಧಿಸುವುದಕ್ಕೆ ಆಗೋಲ್ಲ ಎಂದು?”

ಏಕೆಂದರೆ ಹೆಜ್ಜೆ ಕೀಳುವ, ಹೆಜ್ಜೆ ಮುಂದಕ್ಕೆ ಊರುವ, ಅದಮ್ಯ ಆಸೆ, ಹುರುಪು, ಛಲ ಇದ್ದರೆ ಪರ್ವತವೂ, ಕಣಿವೆಯೂ ನಮ್ಮ ಅಧೀನಕ್ಕೆ, ಏನಂತೀರಿ?

ವಯಸ್ಸು ಅಂಕಿ ಅಂಶಗಳ ಕೆಲಸಕ್ಕೆ ಮಾತ್ರ ಸೀಮಿತ ಎಂದು ದೃಢವಾಗಿ ನಂಬಿದ, ನಂಬಿದ್ದನ್ನು ಸಾಧಿಸಿಯೂ ತೋರಿಸಿದ ಜಪಾನ್ ದೇಶದ ಹಿರಿಯ, ವಯಸ್ಸಿನ ನೆಪ ಒಡ್ಡಿ ಮೂಲೆ ಗುಂಪಾಗಲು ಬಯಸುವ ಎಲ್ಲರಿಗೂ ಒಂದು ಸ್ಫೂರ್ತಿ.

‘ಯುಚಿರೋ ಮೂರಾ’ ಎವರೆಸ್ಟ್ ಶಿಖರವನ್ನು ಕೆಣಕಿದ್ದು ಮೂರು ಸಲ. ಎಲ್ಲಾ ಯಶಸ್ಸೂ ಕೈ ಸೇರಿದ್ದು ಸಾಮಾನ್ಯ ಜನರ  ಕೈಗಳು ನಡುಗುವ ವಯಸ್ಸಿನಲ್ಲಿ.  ೭೦ ಮತ್ತು ೭೫ ನೇ ವಯಸ್ಸಿನಲ್ಲಿ ಮತ್ತು ಈಗ ೮೦ ರ ತುಂಬು ಪ್ರಾಯದಲ್ಲಿ ಎವರೆಸ್ಟ್ ಏರಿದ ಈ ತ್ರಿವಿಕ್ರಮ ಬಹುಶಃ ವಿಶ್ವದಾಖಲೆ ಸರದಾರ.

ವಯಸ್ಸು ಎಂಭತ್ತಾದರೆ ವಯೋವೃದ್ಧ ಎನ್ನುತ್ತಾರೆ, ಆದರೆ ಯುಚಿರೋ ರನ್ನು ಕರೆಯಬೇಕಿರೋದು ಹಿರಿಯ ಅಂತ. ನಮ್ಮಲ್ಲಿ ಈ ವಯಸ್ಸಿನವರ್ಯಾರಾದರೂ ತಮ್ಮ ಮನದಾಳದಲ್ಲಿ ಹುದುಗಿ ಕೂತ ಆಸೆಗಳನ್ನು ಸಾಕಾರಗೊಳಿಸುವ ಇಚ್ಛೆ ವ್ಯಕ್ತ ಪಡಿಸಿದರೆ ಮನೆಯವರ, ನೆರೆಹೊರೆಯವರ ಮತ್ತು ಸಮಾಜದ ಪ್ರತಿಕ್ರಿಯೆ ಹೇಗಿರುತ್ತದೆ? ಸ್ವಲ್ಪ ವಯಸ್ಸಾದರೆ ಮುದಿ ಗೂಬೆ ಎಂದು ಮೂದಲಿಸುವ ಸಮಾಜ ಹಿರಿಯರ ಆಸೆಗೆ ಒತ್ತಾಸೆಯಾಗಿ ನಿಂತೀತೆ?

ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿನ ಮೇಲ್ಭಾಗದ (hip) ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡ, ಕಳೆದ ಜನವರಿ ತಿಂಗಳಿನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಯುಚಿರೋ, ೩೦ ಕೇಜೀ ತೂಕವನ್ನು ಬೆನ್ನ ಮೇಲೆ ಹೊತ್ತು ವಾರದಲ್ಲಿ ಮೂರು ದಿನ ನಡೆಯುತ್ತಾರೆ ತನ್ನ ಕನಸಿನ ಬೆನ್ನ್ಹತ್ತಿ. “I have a dream to climb Everest at this age," he said. "If you have a dream, never give up. Dreams come true."  

ಎವರೆಸ್ಟ್ ಪರ್ವತ ಹತ್ತಿದ ಅತ್ಯಂತ ಹಿರಿಯ ಪುರುಷ ಯುಚಿರೋ ಆದರೆ, ಅತ್ಯಂತ ಹಿರಿಯ ಮಹಿಳೆ ಸಹ ಜಪಾನ್ ದೇಶದವರು. ಎರಡನೇ ವಿಶ್ವ ಯುದ್ಧದಲ್ಲಿ ಸೋತು ಸುಣ್ಣವಾಗಿ ಅಮೆರಿಕೆಯ ನಿರ್ದಯ ಧಾಳಿಗೆ ತುತ್ತಾಗಿ, ನುಚ್ಚು ನೂರಾಗಿ ನಲುಗಿ ಹೋದ ದೇಶದ ಪ್ರಜೆಗಳಿಗೆ, ಅದೂ ಇಳಿ ವಯಸ್ಸಿನಲ್ಲಿ ಇರುವ ಛಲ ನೋಡಿ.                              

ಮೊದಲ ಚಿತ್ರ ಕೃಪೆ: www.gadling.com

ಎರಡನೇ ಚಿತ್ರ ಕೃಪೆ: www.cnn.com

 

 

    

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅಬ್ದುಲ್ ರವರೆ, ಒಂದು ವೈಯಕ್ತಿಕ ಸಾಧನೆಯಿಂದ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿಸಿದ ವ್ಯಕ್ತಿತ್ವದ ವಿಜಯ. ಮತ್ತೊಂದು ವಯಸಿನ ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳನ್ನು ಮೀರಿಸಿ ಗೆದ್ದ ಕನಸಿನ ವ್ಯಕ್ತಿತ್ವದ ವಿಜಯ. ಒಟ್ಟಾರೆ, ಕನಸನ್ನು ಬಿಡದೆ ಬೆನ್ನಟ್ಟಬೇಕೆನ್ನುವ ಸಂದೇಶ ಅರ್ಥಪೂರ್ಣ! - ನಾಗೇಶ ಮೈಸೂರು, ಸಿಂಗಪುರದಿಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸ್ಪೂರ್ತಿದಾಯಕ ಲೇಖನ ಸರ್‍. ನಿರೂಪಣೆ ಚೆನ್ನಾಗಿದೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.