ಉಪ್ಪಿಟ್ಟಿನ ಮುಖ ನೋಡಿ ಕಪ್ಪಿಟ್ಟವರು ಯಾರು ?

4

ಚಿತ್ರದಲ್ಲಿರುವ  ಬ್ಯಾಗಿನ ತುಂಬಾ ಉಪ್ಪಿಟ್ಟು  ತುಂಬಿದೆ  ಬೇಕೇ ನಿಮಗೇ ?  ಬೇಡ  ಅನ್ನುವವರೇ ಜಾಸ್ತಿ !!!
 

ಉಪ್ಪಿಟ್ಟು  ಎಂದಾಕ್ಷಣ ಮುಖ  ಸೊಟ್ಟಗೆ  ಮಾಡುವವರೇ ಬಹಳ . ಉಪ್ಪಿಟ್ಟನ್ನು   ಇಷ್ಟಪಟ್ಟು  ತಿನ್ನುವವರು  ಬಹಳ  ವಿರಳ. ಆದರಿಂದಲೇ ನಾನು  ಉಪ್ಪಿಟ್ಟನ್ನು  ತಿಂಡಿಗಳ ರಾಜನಂತೆ  ಗೌರವಿಸಿ ಅದರ ಮೇಲೆ  ಕಿರು  ಪ್ರಬಂದ ಬರೆಯುತ್ತಿರುವುದು. ಹೀಗಾದರೂ  ಉಪ್ಪಿಟ್ಟಿಗೆ  ಕಳೆದು  ಹೋದ  ಮರ್ಯಾದೆ  ಸಿಗಬಹುದೇನೋ !!
 
ಉಪ್ಪಿಟ್ಟು  ಪಾಪ  ಅದಕ್ಕೆ    ಅಡ್ಡ ಹೆಸರು   ಕಾಂಕ್ರೀಟು  ಅಂತ,   ಹೀಗೆ ಕರೆದು   ಅವಮಾನ   ಕೂಡ ಮಾಡಿದ್ದಾರೆ.  ಆದರೂ  ನಮ್ಮ  ಉಪ್ಪಿಟ್ಟು ಸ್ವಲ್ಪವೂ   ಬೇಜಾರು  ಮಾಡಿ ಕೊಳ್ಳದೆ  ಎಲ್ಲರ  ಹಸಿವನ್ನು ಇಂದಿಗೂ   ನೀಗಿಸುತ್ತಿದೆ.    ನೆನದಾಕ್ಷಣ  ಯಾವ  ತಿಂಡಿ  ಬೇಗ  ಮಾಡಬಹುದು ಗೊತ್ತ ?  ಅದೇ ಉಪ್ಪಿಟ್ಟು.  ಐದು ಹತ್ತು   ನಿಮಿಷ ಸ್ವಲ್ಪ  ಎಣ್ಣೆ ಹಾಕಿ  ಘಂ ಅಂತ  ರವೆ  ಹುರಿದು,  ಉದ್ದಿನ ಬೇಳೆ ,ಹಸಿ ಮೆಣಸಿನಕಾಯಿ   ಮತ್ತು ಜೀರಿಗೆ, ಸಾಸಿವೆ,  ಕರಿಬೇವು  ಒಗ್ಗರಣೆ  ಹಾಕಿ .  ಹುರಿದ  ರವೆ  ಕೂಡಿಸಿ  ಬಿಸಿ  ಬಿಸಿ  ನೀರು/ಉಪ್ಪು   ಹಾಕಿ  ಮುಚ್ಚಿಟ್ಟರೆ  ಮುಗಿಯಿತು  ಸ್ವಾದಿಷ್ಟ ಬೆಳಿಗ್ಗೆ  ಉಪಹಾರ  ಸಿದ್ದ.   ಕೊತ್ತಂಬರಿ ಸೊಪ್ಪು,  ತೆಂಗಿನ ತುರಿ  ನಿಂಬೆ ಹಣ್ಣಿನ  ರಸ  ಇದ್ದರೂ  ಸರಿ  ಇಲ್ಲದಿದ್ದರೂ  ಸರಿ    ಉಪ್ಪಿಟ್ಟು  ರುಚಿಸುವುದು   ಹಸಿದ  ಹೊಟ್ಟೆಗೆ    ಮತ್ತು  ನಾಲಿಗೆಗೆ  .
 
ನಮ್ಮ  ಉಪ್ಪಿಟ್ಟು  ಗಂಡು  ಹೆಣ್ಣು  ಸಂಬಂಧಗಳನ್ನು ಪಕ್ಕ  ಮಾಡುವುದರಲ್ಲೂ  ಎತ್ತಿದ  ಕೈ.  ಹೆಣ್ಣು  ಹೇಗಾರು  ಇರಲಿ  ಆದರೆ  ಅವಳು  ಕೊಟ್ಟ  ಉಪ್ಪಿಟ್ಟು  ಮತ್ತು  ಕೇಸರಿಬಾತು  ವರ ಮಹಾಶಯನಿಗೆ  ರುಚಿಸಿತು  ಅಂತ  ಇಟ್ಟುಕೊಳ್ಳಿ,  ಮದುವೆ  ಗ್ಯಾರಂಟೀ.   ಅದೇ  ಉಪ್ಪಿಟ್ಟು   ವರನನ್ನು  ಬರಮಾಡಿಕೊಂಡು  ಮದುವೆ   ಮನೆಯಲ್ಲಿ  ಕೂಡ  ರಾರಾಜಿಸುತ್ತೆ.  ವರಪೂಜೆಗೆ   ಬರುವ  ಎಲ್ಲ  ಮಂದಿಗೆ ಮೊದಲು  ಕೊಡುವುದೇ  ಉಪ್ಪಿಟ್ಟು   ಕಾಫಿ.   ಜನಗಳು  ತಿಂದು  ಪ್ರಸನ್ನರಾಗಿ  ನಂತರ  ತಮ್ಮ  ಬಂಧು  ಮಿತ್ರರನ್ನು  ಭೇಟಿ  ಮಾಡಲು  ತೆರಳುತ್ತಾರೆ .   ಮಾತಿಗೆ   ಸಿಕ್ಕ  ತಕ್ಷಣವೇ  ಕೇಳುವುದು ,  ಆಯಿತೇನಯ್ಯಾ  ಉಪ್ಪಿಟ್ಟು  ಕಾಫಿ??
 
ಇನ್ನು ಮುಂಜಿ   ಗೃಹಪ್ರವೇಶಕ್ಕೆ  ಹೋಗಿ ...   ಅಡಿಗೆಯವರು  ಮಾಡಿದ  ಬನ್ಸಿ ರವೆಯ  ಉಪ್ಪಿಟ್ಟು ,  ಆಹಾ  ನೆನೆಸಿಕೊಂಡರೆ  ಬಾಯಲ್ಲಿ  ನೀರೂರತ್ತೆ.  ಅಷ್ಟು  ಅದ್ಬುತವಾದ  ಪ್ರಮಾಣದಲ್ಲಿ  ಅಷ್ಟು   ದೊಡ್ಡ  ಜನ ಸಮೂಹಕ್ಕೆ  ಒಂದೇ  ರುಚಿ  ಮತ್ತು  ಬಿಸಿ  ಬಿಸಿ ಯಾಗಿ  ಬಡಿಸುತ್ತಾರೆ.    ಅದೇ  ಬನ್ಸಿ  ರವೆ  ಚೆನ್ನಿತ್ತು  ಎಂದು  ಮನೆಯಲ್ಲಿ  ಮಾಡಿದರೆ  ಅದೇನು  ಅಷ್ಟು  ರುಚಿಸುವುದಿಲ್ಲ.  ಮನೆಯಲ್ಲಿ   ಮಾಡಲು  ಬಾಂಬೆ ರವೆ  ಅಥವಾ  ಮೀಡಿಯಂ ರವೆಯೇ  ಸರಿ . ಅಡಿಗೆಯವರ  ಕೈರುಚಿ  ಮನೆಯವಳ  ರುಚಿ  ಒಂದೇನೆ?
 
ದರ್ಶಿನಿ  ಹೋಟೆಲ್ ಗಳಿಗೆ  ಹೋಗಿ ,  ಅಲ್ಲಿ  ಉಪ್ಪಿಟ್ಟು  ಅಂತ  ಕರೆಯುವುದಿಲ್ಲ  ಬೇರೆಯೇ  ನಾಮಕರಣ  " ಖಾರಬಾತ್ "  ಚೌ ಚೌ ಬಾತ್  ಅಂತ  ಹೆಸರಿಟ್ಟುಕೊಂಡು  ಕೇಸರಿಬಾತ್ ಜೊತೆ  ಸದ್ದಿಲ್ಲದೇ ಒಂದೇ ತಟ್ಟೆಯನ್ನು   ಹಂಚಿಕೊಂಡು  ನವ ವಧುವಿನ  ಹಾಗೆ ನಾಚಿ  ಕುಳಿತಿರುತ್ತೆ .   ಮನೆಯಲ್ಲಿ  ಮೂಗು  ಮುರಿಯುವ  ಅದೇ  ಉಪ್ಪಿಟ್ಟನ್ನು ,   ಜನ   ಬಹಳ  ವಿಶ್ವಾಸವಾಗಿ  ಎರಡು  ಮಾತಿಲ್ಲದೆ  ಕಬಳಿಸುವುದನ್ನು  ನಾನೇ  ನೋಡಿದ್ದೇನೆ .   ದರ್ಶಿನಿಯಲ್ಲಿ  ಉಪ್ಪಿಟ್ಟನ್ನು   ಚಟ್ನಿ ಸಮೇತ ಬಡಿಸುವುದು  ಇನ್ನೊಂದು  ಗುಟ್ಟಿರಬಹುದು .  ರಾಧ ಸಮೇತ  ಕೃಷ್ಣ  ಅಂತ ಹಾಡು    ಕೇಳಿದ್ದೀರಾ ?  ಇಲ್ಲಿ   ಚಟ್ನಿ  ಸಮೇತ  ಉಪ್ಪಿಟ್ಟು   ಅಂತ  ಹೇಳಬಹುದೇ ?
 
ಉಪ್ಪಿಟ್ಟು  ಪ್ರಿಯರನ್ನು  ಉಪ್ಪಿಟ್ಟು  ತಯಾರಿಸುವಾಗ  ನೋಡಿದ್ದೀರಾ ? ಅದೇನು  ಶ್ರದ್ದೆ  ಅದೇನು  ಭಕ್ತಿ .  ಎಲ್ಲ  ತರಕಾರಿಗಳನ್ನು  ಸಣ್ಣಗೆ  ಕೊಚ್ಚಿ, ರವೆಯ  ಜೊತೆಗೆ   ಬೆರೆಸುವ   ಸಂಭ್ರಮ,   ಮದುವೆ  ಮನೆ  ಸಂಭ್ರಮಕ್ಕೆ ಸಾಟಿ .   ಹಸಿಮೆಣಸಿನಕಾಯಿ  ಕೊತ್ತಂಬರಿ ಸೊಪ್ಪು , ಕರಿಬೇವು,  ಶುಂಟಿ , ನಿಂಬೆ ಹಣ್ಣು  ಇಲ್ಲದಿದ್ದರೆ ಅವರಿಗೆ  ಕೈ  ಕಾಲೇ ಓಡುವುದಿಲ್ಲ.   ಮೊದಲು    ಅಂಗಡಿಗೆ ಹೋಗಿ  ಎಲ್ಲವನ್ನೂ  ಒಟ್ಟಿಗೂಡಿಸಿಕೊಂಡು  ಆಮೇಲೆ  ಶುರು  ಮಾಡುತ್ತಾರೆ  ಉಪ್ಪಿಟ್ಟಿನ  ಕಾರ್ಯಕ್ರಮ.   ರವೆಯ  ಅಂಶಕಿಂತ  ತರಕಾರಿ  ಒಂದು  ಪಟ್ಟು  ಜಾಸ್ತಿ  ಇದ್ದಾರೆ  ಆರೋಗ್ಯಕ್ಕೂ  ಒಳ್ಳೆಯದು ಮತ್ತು  ರುಚಿಯೂ  ಹೆಚ್ಚುತ್ತದೆ .    
 
ರುಚಿ  ರುಚಿಯಾದ  ಉಪ್ಪಿಟ್ಟನ್ನು  ಮಾಡಲು  ಒಂದೇ  ಮಂತ್ರ.  ಚೆನ್ನಾಗಿ  ಎಣ್ಣೆ   ಜಡಿಯಬೇಕು.  ಈ  ಕಾಲದವರು  ತೀರ್ಥ  ತಗೊಂಡರೆ  ಸೀತ,  ಮಂಗಳಾರತಿ ತಗೊಂಡರೆ ಉಷ್ಣ ಅಂತ  ಪರದಾಡುತ್ತಿರಬೇಕಾರೆ ಹೆಂಗ್ರೀ  ಇವರಿಗೆ  ತಿಳಿ ಹೇಳುವುದು?   ಸಾಕಷ್ಟು  ತರಕಾರಿ  ಎಣ್ಣೆ, ತೆಂಗಿನ ಕಾಯಿ  ತುಪ್ಪ  ಚೆನ್ನಾಗಿ  ಹಾಕಿ   ಮಾಡಿದ್ರೆ  ಉಪ್ಪಿಟ್ಟೇನು  ಅವರ  ಅಪ್ಪಾನೂ  ಚೆನ್ನಾಗಿರುತ್ತೆ .  ತಿನ್ನುವ  ಪ್ರಮಾಣ ಕಡಿಮೆ  ಮಾಡಬೇಕೆ ಹೊರತು  ತಯಾರಿಸುವ  ವಿಧಾನದಲ್ಲೇ  ಕತ್ತರಿ  ಪ್ರಯೋಗ  ಮಾಡಿದ್ರೆ  ಹೆಂಗೆ?   ಉಪ್ಪಿಟ್ಟಿನ  ನೀರು ತರಕಾರಿ  ಜೊತೆಯಲಿ  ಕುಡಿಯುತಿದ್ದಾಗ  ಒಂದು  ಚಿಟಿಕೆ ಇಂಗು  ಮತ್ತು  ಕೊಂಚ ಬೆಲ್ಲ  ಸೇರಿಸಿ ನೋಡಿ  ಅದರ  ಮಹತ್ವ . 
 
ಕಾಟಾಚಾರದ  ಉಪ್ಪಿಟ್ಟು  ಮಾಡುವವರು  ಜಾಸ್ತಿ  ಇದ್ದಾರೆ  ಅದಕ್ಕೆ  ಪಾಪ   ತನ್ನ ನಿಜವಾದ  ಸ್ವಂತಿಕೆಯನ್ನೇ  ಕಳೆದುಕೊಂಡು  ಅನಾಥ ವಾಗಿ  ಹೋಗುತ್ತಿದೆ .  ಉಪ್ಪಿಟ್ಟು  ಎಲ್ಲಾ  ತರಕಾರಿ  ಹಾಕಿ  ಮಾಡಿದರೆ  ಒಂದು ವಿಭಿನ್ನ ರುಚಿ. ಒಂದೇ  ತರಕಾರಿ  ಹಾಕಿ  ಮಾಡಿದರೂ  ಏನೋ  ರುಚಿ. ನನ್ನ  ಅಮ್ಮ  ಮಾಡುತಿದ್ದ  ಸೀಮೆ  ಬದನೇಕಾಯಿ  ಉಪ್ಪಿಟ್ಟು   ನೆನೆಸಿಕೊಂಡರೆ  ನನಗೆ   ಅವಳ  ನೆನಪಾಗುತ್ತೆ .   ಈರುಳ್ಳಿ  ಉಪ್ಪಿಟ್ಟು  ಆಹಾ ಏನು  ಘಮ  ಗೊತ್ತೇನ್ರಿ  ಮೂರು  ಬೀದಿ  ಆಚೆ  ನಡೆದುಕೊಂಡು  ಬರ್ತಿದ್ರೂ  ಯಾರ  ಮನೇಲಿ  ಈರುಳ್ಳಿ  ಉಪ್ಪಿಟ್ಟು  ಅಂತ  ತಿಳಿದು ಬಿಡುತಿತ್ತು.   ಇನ್ನು  ಕೆಲವು  ಮನೆಗಳಲ್ಲಿ  ಉಪ್ಪಿಟ್ಟು  ತಯಾರಿಸುವ  ಸಮಯದಲ್ಲಿ  ದೇವರ  ದೀಪ  ಮಂಗಳಾರತಿ  ಊದುಕಡ್ಡಿ  ಹಚ್ಚಿದ್ದರಂತೂ  ಅಪರಿಮಿತ  ಸುವಾಸನೆಗಳ  ಸಂಗಮ !  
 
ಎಷ್ಟು  ರೀತಿಯ  ಉಪ್ಪಿಟ್ಟುಗಳಿವೆ ,  ಅಕ್ಕಿತರಿ- ಅವರೇಕಾಳು  ಉಪ್ಪಿಟ್ಟು  ಬಹಳಾನೇ  ಪ್ರಖ್ಯಾತಿ ಗಳಿಸಿದೆ.   ಇನ್ನು  ಶಾವಿಗೆ  ಉಪಯೋಗಿಸಿ  ಮಾಡುವುದಕ್ಕೆ  ಶಾವಿಗೆ  ಉಪ್ಪಿಟ್ಟು ,  ಅವಲಕ್ಕಿಯಲ್ಲಿ  ಮಾಡುವ  ಅವಲಕ್ಕಿ ಉಪ್ಪಿಟ್ಟು .. ಹಂಗೆ  ಉಪ್ಪಿಟ್ಟಿನ   ದಾರಿಯಲ್ಲಿ  ಸಾಗಿದರೆ   "  ಆಚೆ  ಮನೆ  ಸುಬ್ಬಮ್ಮನಿಗೆ  ಏಕಾದಶಿ ಉಪವಾಸ ,  ಏನೋ  ಸ್ವಲ್ಪ  ತಿನ್ತಾಳಂತೆ  ಅವಲಕ್ಕಿ  ಉಪ್ಪಿಟ್ಟು ಪಾಯಸ "  ಈ  ಹಾಡು  ನೆನಪಿಗೆ  ಬರುತ್ತೆ . 
 
ಕಟ್ಟ ಕಡೆಯದಾಗಿ    ಹೇಳಬೇಕೆಂದರೆ , ಉಪ್ಪಿಟ್ಟು ಮಾಡಿ  ಗೆದ್ದು   ಇತ್ತೀಚೆಗೆ  MASTER  CHEF   USA  ನಲ್ಲಿ  ಒಂದು  ಮಿಲಿಯನ್ ಡಾಲರ್  ಬಾಚಿದ್ದಾನೆ  ಕಣ್ರೀ !!!  ಇನ್ನೆಷ್ಟು  ಹೊಗಳಿ  ಬರೆಯಲಿ  ಉಪ್ಪಿಟ್ಟಿನ  ವಿಷಯ ?   ವಿಶ್ವಪ್ರಖ್ಯಾತಿ  ಹೊಂದಿಬಿಡ್ತು    ನೋಡಿ !!! 
 
ಇನ್ನಾದರೂ ನಮ್ಮ  ಉಪ್ಪಿಟ್ಟು  ಮಹಾಶಯನನ್ನು  ನಗು ಮುಖದಿಂದ ಸ್ವೀಕರಿಸುತ್ತೀರ ?
 
ಚಿತ್ರದಲ್ಲಿರುವ  ಬ್ಯಾಗಿನ ತುಂಬಾ ಉಪ್ಪಿಟ್ಟು  ತುಂಬಿದೆ  ಬೇಕೇ ನಿಮಗೇ ?
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಉಪ್ಪಿಟಿನ ಬಗ್ಗೆ ನ್ಯಾಶನಲ್ ಕಾಲೇಜಿನ ಪ್ರಿನ್ಸಿಪಲ್ ಹೆಚ್ ನರಸಿಂಹಯ್ಯನವರು ಸಹ ಒಂದು ಜೋಕ್ ಹೇಳುತ್ತಿದ್ದರು, ಅವರು ಓದುವಾಗ ರೂಮಿನಲ್ಲಿದ್ದರು ಆಗ ದಿನವು ಮಾಡುತ್ತಿದ್ದ ಊಟ/ಮತ್ತು ತಿಂಡಿ ಎರಡು ಒಂದೆ ಉಪ್ಪಿಟ್ಟು!! . ಅದೆ ರೀತಿ ಅವರು ಸತತವಾಗಿ ಮೂರುವರ್ಷ ಉಪ್ಪಿಟ್ಟು ತಿಂದಿದ್ದರಂತೆ , ಪ್ರತಿ ದಿನಾ ! ಅವರ ಈ ಮಾತು ಕೇಳಿದ ಒಬ್ಬಾಕೆ ಅದೆ ಕಾಲೇಜಿನಲ್ಲಿ ಓದುತ್ತಿದ್ದ ತನ್ನ ಮಗನಿಗೆ ಬೈದಳಂತೆ, "ನಿಮ್ಮ ಪ್ರಿನ್ಸಿಪಾಲರನ್ನು ನೋಡು ಅವರು ಒಂದೆ ಸಮ ದಿನಾ ಮೂರುವರ್ಷ ಉಪ್ಪಿಟ್ಟು ತಿನ್ನುತ್ತಿದ್ದರಂತೆ, ನೀನು ಒಂದು ದಿನ ಮಾಡಿದರೆ ಗೋಳಾಡುತ್ತಿ, ಅವರು ಹೇಗೆ ತಿನ್ನುತ್ತಿದ್ದರು" ಅದಕ್ಕೆ ಮಗನ ಉತ್ತರ "ಅಮ್ಮ ಆದರೆ ಅವರು ತಿನ್ನುತ್ತ ಇದ್ದಿದ್ದು, ಅವರು ಮಾಡಿದ ಉಪ್ಪಿಟ್ಟು, ನೀನು ಮಾಡಿದ ಉಪ್ಪಿಟ್ಟು ಅಲ್ಲ" ಎಂದು ಅಮ್ಮ ಸುಮ್ಮನಾದಳು ಅಂತಿಟ್ಟುಕೊಳ್ಳಿ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವ್ಹಾ.. ಸ್ಮಿತಾ ಅವರೆ, ಒಂದು ಬ್ಯಾಗ್‌ (PUMA / UPMA) ಮಿಸ್ಟೇಕ್ ನಿಮ್ಮಿಂದ ಸವಿ ಸವಿ ಉಪ್ಪಿಟ್ಟು ಮಾಡಿಸಿತು. :) >>ಚಿತ್ರದಲ್ಲಿರುವ ಬ್ಯಾಗಿನ ತುಂಬಾ ಉಪ್ಪಿಟ್ಟು ತುಂಬಿದೆ ಬೇಕೇ ನಿಮಗೇ ?- ಪಾರ್ಥರು ಹೇಳಿದ ಅಮ್ಮ ಮಾಡಿದ್ದಾದರೆ ಬೇಡ.:) ಉಳಿದಂತೆ ಉಪ್ಪಿಟ್ಟನ್ನು ಕಿವಿಯಿಂದ ಕಿವಿಯವರೆಗೆ ನಗುತ್ತಾ ಸ್ವೀಕರಿಸುವೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉಪ್ಪಿಟ್ಟು ಬಗ್ಗೆ ಬಂದ ಬರಹಗಳು ಇಲ್ಲಿ ಅನೇಕ . ಅವುಗಳಿಗೆ ವೈವಿಧ್ಯಮಯ ಪ್ರತಿಕ್ರಿಯೆಗಳು ಸಹ .. ನನ್ನ ಒಂದು ಎರಡು ಬರಹಗಳಲ್ಲಿ ಉಪ್ಪಿಟ್ಟು ಬಗ್ಗೆ ಪ್ರಸ್ತಾಪ ಇದೆ ನಿಮ್ಮ ಬರಹ ಸೂಪರ್ ಶುಭವಾಗಲಿ \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸ್ಮಿತಾಜಿ, ನಿಮ್ಮ ಉಪ್ಪಿಟ್ಟಾಯಣ ನನಗೆ ತಟ್ಟನೆ ನೆನಪಿಸಿದ್ದು: ನಲ್ಲಾ, ನಿನ್ನ ಮೊಗವೇಕೆ ಹೀಗೆ ಕಪ್ಪುಟ್ಟಿದೆ! ಏನು ಮಾಡಲಿ ಪ್ರಿಯೆ? ಎದುರಿಗೆ ನೀನಿಟ್ಟ ಉಪ್ಪಿಟ್ಟಿದೆ! - ನಾಗೇಶ ಮೈಸೂರು :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.