ಈಗೆಲ್ಲಿ, ಪೋಲಿ ಹೈಕಳ ಹೋಲಿ ?

4.333335

ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು..

ಹೋಳಿಯ ಜತೆಗೆ ಒದ್ದುಕೊಂಡ ಬಂದ ಬಾಲ್ಯದ ನೆನಪು ಇಣುಕುತ್ತಿದೆ... ಜಾರುತ್ತಿದ್ದ ತುಂಡು ಚಡ್ಡಿ ಮೇಲೆತ್ತಿಕೊಂಡು ಓಡುತ್ತಿದ್ದ ಕೇರಿ ಐಕಳ ಜತೆ, ಮೀಸೆ ಹೊತ್ತ ಪಂಚೆ, ಬನೀನಿನ ಪ್ರಾಯದ ಹುಡುಗರು ಕೈಯಲೊಂದೊಂದು ಮೊರ, ಬಾರಿಸಲೊಂದು ಕೋಲು ಹಿಡಿದು ಬೀದಿ ಬೀದಿಯ ಮನೆ ಮನೆಗೆ ಹೋಗುತ್ತಿದ್ದ ದೃಶ್ಯ.. 'ಕಾಮಣ್ಣ ಮಕ್ಕಳು, ಕಳ್ಳ ನನ್ನ ಮಕ್ಕಳು..' ಎಂದು ಕಿರಿಚಿಕೊಂಡೆ ಮನೆಯವರತ್ತ ಕಾಮದಹನದ ಉರುವಲು ಬೇಡುತ್ತಿದ್ದ ಬಂಡಾಟ.. ಹಳೆ ಬಟ್ಟೆ ಬರೆ, ಸೌದೆ, ಬೆರಣಿಯಾದಿಯಾಗಿ ಕೊಟ್ಟದ್ದನ್ನೆಲ್ಲ ತಳ್ಳುಗಾಡಿಯಲ್ಲಿ ಪೇರಿಸಿಕೊಂಡು ನಡೆವುದೊಂದು ಬಗೆಯಾದರೆ,  ಕೊಡಲೊಲ್ಲದ ಮನೆ ಮುಂದಿನ ಬೇಲಿ, ಮರದ ಗೇಟು, ಒಣಗಲಿಕ್ಕೆ ಹಾಕಿದ್ದ ಕಟ್ಟಿಗೆಯಾದಿಯಾಗಿ ಸಿಕ್ಕಿದ್ದನ್ನೆಲ್ಲಿ ಎಗರಿಸಿಕೊಂಡು ಓಡಿ ಹೋಗುತ್ತಿದ್ದುದ್ದು ಮತ್ತೊಂದು ಬಗೆ. ಹೀಗೆಲ್ಲ ಏನೇನೊ ಹುನ್ನಾರ ಮಾಡಿ ಸೇರಿಸಿದ್ದೆಲ್ಲಾ ಉರುವಲನ್ನು ಬೀದಿ ತುದಿಯ ಚೌಕದಲ್ಲಿ ಗುಡ್ಡೆ ಹಾಕಿ, ಬೆಂಕಿ ಹಾಕಿ ಸುಡುವ ಸಿದ್ದತೆ ನಡೆಸಿರುವಾಗಲೆ ಮತ್ತೊಂದೆಡೆ, 'ಪರಮಾತ್ಮನನ್ನು' ಒಳಗೇರಿಸಿ ಆ ಮತ್ತಿನಲ್ಲೆ ಹಾದಿ ಹೋಕರನ್ನು ತಡೆದು ನಿಲ್ಲಿಸಿ ಕಾಸು ಕೊಡದ ಹೊರತು, ದಾರಿ ಬಿಡುವುದಿಲ್ಲವೆಂದು ಅಡ್ಡ ಹಾಕುತ್ತಿದ್ದುದು ಮಾತ್ರವಲ್ಲದೆ, ಕೊಡಲೊಪ್ಪದವರಿಗೆ ಬಣ್ಣ ಎರಚುವುದಾಗಿ ಹೆದರಿಸಿ ಪುಂಡಾಟಿಕೆ ನಡೆಸುತಿದ್ದುದು ಇನ್ನೊಂದು ಬಗೆಯ ದೃಶ್ಯ ವೈವಿಧ್ಯ. ಕೊನೆಗೆ ಎಲ್ಲವನ್ನು ಸುಟ್ಟುಹಾಕಿ, ಕುಣಿದು ಕುಪ್ಪಳಿಸಿ ಹೋಲಿಯಾಚರಣೆ ಮಾಡುತ್ತಿದ್ದ ದಿನಗಳು ಈಗ ಅಪರೂಪವೆಂದೆ ಹೇಳಬೇಕು. ಈಗೆಲ್ಲ ಬರಿ ಬಣ್ಣದೆರಚಾಟವೆ ಪ್ರಮುಖ ಆಚರಣೆಯಾಗಿಬಿಟ್ಟಿದೆ. 

ಆ ಹಳೆಯ ನೆನಪೆಲ್ಲದರ ತುಣುಕುಗಳ ಸಂಕಲಿತ ರೂಪ - ಈ ಪುಟ್ಟ ಕವನ :-)

ಈಗೆಲ್ಲಿ, ಪೋಲಿ ಹೈಕಳ ಹೋಲಿ ?
_____________________

ಕಾಮಣ್ಣ ಮಕ್ಕಳು 
ಕಳ್ಳ ನನ್ನ ಮಕ್ಕಳು
ಸೌದೆ ಬೆಣ್ಣಿ ಕದ್ದದ್ದು ನೆನಪಿದೆಯಾ?
ಮೊರದ ಜತೆ ಕೋಲು
ದಬದಬ ಹೊಡೆ ಡೋಲು
ಮನೆ ಮನೆಗಿಟ್ಟದ್ದು, ದಂಡು ಧಾಳಿಯ? ||

ಕಟ್ಟಿಗೆ, ಬಟ್ಟೆ, ಬೆರಣಿ
ಹಳತೇನೇನಿದೆ ತನ್ನಿ
ಸುಟ್ಟು ಜತೆಗೊಟ್ಟೆ, ಕಾಮನ ದಹನ ;
ಕೊಡದಿರೆ ಬೇಲಿ ಬಾಗಿಲು
ಮನೆ ಮುಂದಿಟ್ಟೆಲ್ಲ ಉರುವಲು
ಕ್ಷಣದಲ್ಲೆ ಮಾಯವಲ್ಲ, ಶಿವನಿಗರ್ಪಣ ! ||

ಬೈದರು ಯಾರಿಗೆ ಲೆಕ್ಕ?
ಪೇರಿಸಿ ಕೂಡುಬೀದಿ ಚೌಕ
ಓಡಾಡುವ ಜನ ತೆರ, ತೆತ್ತರೆ ನಿರಪಾಯ
ಕೊಡದವರಿದ್ದರು ಬಹಳ
ಚೆಲ್ಲಿ ಮೇಲೆ ಬಣ್ಣದ ಕವಳ
ಸುಂಕದವನ ಸುಖ ದುಃಖ, ನ್ಯಾಯಾನ್ಯಾಯ ||

ಪೋಲಿಗಳದೀ ಹೋಲಿ
ಬೀದಿಗೆ ಚೆಲ್ಲಿದ ಓಕುಳಿ
ಹೋಲಿಕಾ ದಹನದ ಜತೆ ಕಾಮನ ಹಬ್ಬ;
ತುಡುಗೊ ಹುಡುಗೊ ಬಿಡಿ
ಒಗ್ಗೂಡಿ ತುಂಟಾಟದ ಕಿಡಿ
ಈಗೆಲ್ಲ ಮಂಗಮಾಯ, ಬರಿ ಬಣ್ಣದ ಜುಬ್ಬಾ ||

Sent from http://bit.ly/hsR0cS

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

sundar nenapugala hekkuva kavana nagesh ji, haleya nenapugalannu mattomme nenapu mAdikottiddakke dhanyavadagalu.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಟ್ನಾಳರೆ ನಮಸ್ಕಾರ ಮತ್ತು ಧನ್ಯವಾದಗಳು. ಹಾಗೆಯೆ ಹೋಲಿಯ ಕುರಿತಾದ (ಮತ್ತೊಂದು ಬಗೆಯ) ಕವನ 'ಪಂಜು' ವಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ, ಈ ಲಿಂಕಿನಲ್ಲಿದೆ ನೋಡಿ : (http://www.panjumagazine.com/?p=10321). ಬಹುಶಃ ವರ್ಣರಂಜಿತ ಹೋಲಿಯ ಸ್ಪೂರ್ತಿ ಚಿಲುಮೆ ಬರಿಯ ಬಣ್ಣದ ಎರಚಾಟಕ್ಕೆ ಮಾತ್ರ ಸೀಮಿತವಲ್ಲವೇನೊ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈಗಲೂ ಕೆಲವಡೆ ಆಚರಿಸುತ್ತಾರೆ. ಕಾಮದಹನ‌ ನಡೆಯುತ್ತದೆ.
ಆದರೆ ಮಾಧ್ಯಮದವರಿಗೆ ಹೋಲಿ ಅಂದರೆ ಕಾಲೇಕು ಕ್ಯಾಂಪಸ್, ಎಂ ಜಿ ರೋಡ್ ಅಥವ‌ ಮತ್ಯಾವುದೋ ಕ್ಲಬ್
ಅಲ್ಲಿ ಹುಡುಗಿಯರು ಮೈತುಂಬಾ ಬಣ್ಣ‌ ಹಾಕಿಕಿಂಡಿರುವದನ್ನು (ಮರೆತು ಹುಡುಗರನ್ನು ತೋರಿಸಲ್ಲ‌)
ತೋರಿಸುತ್ತಾರೆ.
ಬೆಳಗ್ಗೆ ಎದ್ದು ದಿನಪತ್ರಿಕೆಗಳು ಅಷ್ಟೆ ಗಾಂದಿ ಬಜಾರು ಅಥ್ವ‌ ಎಮ್ ಜಿ ರಸ್ತೆಯ‌ ಪೋಟೊ ಪ್ರಕಟಿಸಿ ಸುಮ್ಮನಾಗುತ್ತವೆ .
ನೀವು ಹೇಳುವ‌ ಹೈಕಳ‌ 'ಕಾಮದಹನ‌' ದ‌ ಹಬ್ಬ‌ ಮರೆಯಲ್ಲಿ, ನೆನಪಾಗಿಯೆ ಉಳಿಯುತ್ತದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಾ ಸಾರ್ ನಮಸ್ಕಾರ ಮತ್ತು ಧನ್ಯವಾದಗಳು. ಮಾಧ್ಯಮಗಳ ಪ್ರಚಾರದ ಮಾತು ಬಿಡಿ - ಆಡಂಬರ, ಆಕರ್ಷಣೆಯತ್ತಲೆ ವ್ಯಾಮೋಹ, ನೈಜತೆಯ ಸರಕಿಗಲ್ಲ.

ಬದಲಿಗೆ ಜನ ಸಮನ್ವಯದಲ್ಲಿ ಈ ಆಚರಣೆಗಳು, ಸಂಪ್ರದಾಯದ ಸಂಕೇತವಾಗಿ ಜೀವಂತವಾಗುಳಿದುಕೊಂಡರೂ ಸಾಕು - ಚಿಗುರೊಡೆಯದಿದ್ದರೂ ಹಳೆ ಬೇರಂತೆ ಅಚಲವಾಗಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ಹೋಳಿ ಹಬ್ಬದ ಆಚರಣೆಯ ಕುರಿತ ತ ಮ್ಮ ಅನುಭವಗಳನ್ನು ಬಹಳ ಚೆನ್ನಾ ಗಿ ದಾಖಲಿಸಿದ್ದೀರಿ, ನಾ ವು ಪ್ರಾಥಮಿ ಕ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಶಿವರಾತ್ರಿ ಅಮವಾಸ್ಯೆ ಮುಗಿದ ನಂತರ ಬಾನಿನಲ್ಲಿ ಚಂದ್ರ ದರ್ಶನವಾಗುತ್ತಿದಂತೆ ಸಮಾನ ವಯಸ್ಕರು ಸೇರಿ ಹಲಗೆಗಳನ್ನು ಬಾರಿಸುತ್ತ ಹೋಗುತ್ತಿದ್ದೆವು ಜೊ ತೆಗೆ ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಿ ಹೊಯ್ಕೊಳ್ಳುತ್ತ ಕೆಲವು ಮೆನಗಳ ಮುದುಕಿಯರಿಂದ ಬೈಸಿಕೊಳ್ಳುತ್ತ ಕಾಮಣ್ಣನನ್ನು ಕೂಡಿಸಿದ ದಿನ ಸಕ್ಕರೆ ಸರವನ್ನು ಕೊರಳಲ್ಲಿ ಧರಿಸಿ ಓಕುಳಿಯಾಟ ಮುಗಿದ ನಂತರ ಆ ಸಕ್ಕರೆ ಸರದ ಸ್ವಾಹಾ ಪ್ರಮುಖ ಕೆಲಸವಾಗುತ್ತಿತ್ತು ನಿಮ್ಮ ಬರಹ ಅದನ್ನೆಲ್ಲ ಜ್ಞಾಪಿಸಿತು ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ. ನಮ್ಮೂರ ಕಡೆಯೂ ಕೈಗೆ ಸಿಕ್ಕಿದ ಹಲಗೆ, ಮೊರ, ತಗಡು - ಹೀಗೆ ಕೈಗೆ ಸಿಕ್ಕಿದ್ದೆಲ್ಲವನ್ನು ಹಿಡಿದುಕೊಂಡೆ ಬಡಿದು ಸದ್ದು ಮಾಡುತ್ತ ಎಲ್ಲರಿಗು ತಲೆ ಚಿಟ್ಟು ಹಿಡಿಸುತ್ತಿದ್ದುದ್ದು, ಬೀದಿಯವರಿಂದ ಅದರಲ್ಲೂ ಮನೆ ಮುಂದೆ ಕೂತಿರುತ್ತಿದ್ದ ಮುದುಕಿಯರಿಂದ ಬೈಗುಳ ತಿನ್ನುತ್ತಿದ್ದುದೂ ಸರ್ವೆ ಸಾಮಾನ್ಯ ದೃಶ್ಯಗಳು. ನಿಮ್ಮ ಪ್ರತಿಕ್ರಿಯೆಯಿಂದ ಸಕ್ಕರೆ ಹಾರದಂತಹ ಕೆಲವು ವಿಭಿನ್ನ ಅಂಶವನ್ನು ತಿಳಿದುಕೊಂಡಂತಾಯ್ತು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ್ ಅಣ್ಣಾ- ಹೋಳಿಯ ಹಬ್ಬದ ಹೈಕಳ ಶೈಲಿಯ ಆಚರಣೆ ಕುರಿತ ನಿಮ್ಮ ಬರಹ ನನ್ನ ಕೆಲವು ಹೋಳಿಯ ನೆನಪುಗಳನ್ನು ಅಕ್ಷರಕ್ಕೆ ಇಳಿಸಿತು ....!!

ನಮ್ಮ ಕಡೆ ಹೋಳಿ ಮತ್ತು ಯುಗಾದಿ ದಿನ ಹೋಳಿ ಆಡುವರು ..ಆ ದಿನ ಊರ ಹತ್ತಿರ ಇರುವ ಚಿಕ ಕುರುಚಲು ಕಾಡಲ್ಲಿ(ಅಲ್ಲಿರೋದು ಬರೀ ಕಾಂಗ್ರೆಸ್ಸು ಬೇಲಿ ಗಿಡಗಳು ) ಮೊಲ -ಹಂದಿ ಇತ್ಯಾದಿ ಹೊಡೆದು ಅವನ್ನು ಕೋಲಿಗೆ ಚುಚ್ಚಿ ಕೇಕೆ ಹಾಕುತ್ತಾ ಬರ್ತಿದ್ರು,ಆದರೆ ಈಗೀಗ ಆ ಆಚರಣೆ ಬಿಟ್ಟು ಕೇವಲ ಬಣ್ಣ ಎರಚಿ ಹೋಳಿ ಆಡುವರು -ಕೆಲ ಟೆಕ್ ಸ್ನೇಹಿತರು ಮೊಬೈಲಲ್ಲೇ ಬಣ್ಣ ಕಳಿಸಿ ಶುಭ ಕೋರುವರು ...!! ದೊಡ್ಡ ದೊಡ್ಡ ಬ್ಯಾರೆಲ್ಲುಗಳಲ್ಲಿ ಬಣ್ಣ ತುಂಬಿಸಿ ಹಾದಿ ಗುಂಟ ಇಡ್ತಿದ್ರು .ಕೆಲವರು ಮೊಟ್ಟೆ-ಗಟಾರದ ಕೆಸರು -ವಾರ್ನಿಶ್ ಸಹಾ ಎಸೆದು ವಿಕೃತಾನಂದ ಪಡ್ತಿದ್ರು..!! ಇನ್ನೂ ಪುಂಡ ಹೈಕಳ ಬಗ್ಗೆ ಏನು ಹೇಳೋದು....!! ಒಂದತ್ತು ಜನ ಹುಡುಗರು ದಿನದಲ್ಲಿ (ವಾರದ ಹಿಂದಿನ ದಿನವೇ)ಯಾರ್ಯಾರ ಮನೆಯಲ್ಲಿ ಎಸ್ಟು ಕಟ್ಟಿಗೆ ಉರುವಲು ಇದೆ ಎಂದು ಗೂಢಾಚಾರಿಕೆ ಮಾಡಿ ಹಬ್ಬದ ಹಿಂದಿನ ದಿನ ಯಾವುದೋ ಮಾಯದಲ್ಲಿ ಕಟ್ಟಿಗೆ ಹೊತ್ತೊಯ್ಟಿದ್ರು...!! ಅದು ದೊಡ್ಡ ದೊಡ್ಡ ಕೊರಡು -ಕಟ್ಟಿಗೆ ಏನೇ ಆದರೂ ಸೈ ...!! ಕಟ್ಟಿಗೆ ಕೊಡದವರ -ಬಚ್ಚಿಟ್ತವರ ಮನೆ ಮುಂದೆ ಬಾಗಿಲಿಗೆ -ಗಡಿಗೆಯಲ್ಲಿ ಮಲ ಮೂತ್ರ ತುಂಬಿ ಮನೆ ಮುಂದೆ ಹೊಡೆಯುತ್ತಿದ್ದರು ...:())))) ಮಾರನೇ ದಿನ ಆ ಮನೆಯವರ ಆರ್ತನಾದ -ಶಾಪ ಹಾಕುವಿಕೆ ....!! ಈಗ ಹೋಳಿ ಹಬ್ಬಕ್ಕೆ ಹಿಂದಿನ ಕಲೆ ಕಳೆ ಖಂಡಿತ ಇಲ್ಲ ....ನಾ ಇದ್ವರ್ಗೂ ಬಣ್ಣ ಎರಚಿಲ್ಲ..ಆದ್ರೆ ಎರಚಿಸಿಕೊಂಡಿರುವೆ...!! ನಿಮ್ಮ ಬರಹ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಓದಿದಾಗ ಎಲ್ಲ್ಲೆಡೆಯೂ ಆಚರಣೆ -ಪುಂಡರ ಹಾವಳಿ ಇತ್ಯಾದಿ ಬಹುತೇಕ ಒಂದೇ ತರಹ ಎನ್ಸಿತು..
ನನ್ನಿ

ಶುಭವಾಗಲಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೆ ನಮಸ್ಕಾರ. ನೀವು ಹಂಚಿಕೊಂಡ ಹೋಳಿಯಾಚರಣೆಯ ನೆನಪುಗಳನ್ನು ಗಮನಿಸಿದರೆ, ನಿಮ್ಮ ಮಾತು ನಿಜ - ಹುಡುಗಾಟಾ, ಪುಂಡಾಟ ಎಲ್ಲೆಡೆಯೂ ಒಂದೆ. ಅದರ ಪ್ರಕಟ ರೂಪ ಮಾತ್ರ ಬೇರೆ ಬೇರೆಯಷ್ಟೆ. ಆದರೆ ಆ ಪುಂಡಾಟಿಕೆಗಳೆ ನಮ್ಮ ಹುಡುಗರಲ್ಲಿ ಕೊಂಚ ನಾಯಕತ್ವದ ಗುಣಗಳನ್ನು, ಸ್ವತಂತ್ರ ಮನೋಭಾವವನ್ನು ಮತ್ತು 'ಪುಂಡ' ಚತುರತೆ, ಕ್ರಿಯಾಶೀಲತೆಯನ್ನು ಸ್ವಾಭಾವಿಕವಾಗಿಯೆ ಆರೋಪಿಸುತ್ತಿತ್ತೇನೊ ಅನಿಸುತ್ತದೆ (ಈಗ ಆ ಗುಣಗಳಿಗಾಗಿ ತರಬೇತಿ, ಅಧ್ಯಯನ ಇತ್ಯಾದಿಗಳನ್ನೆಲ್ಲ ಮಾಡಿಯೂ, ಒಂದು ಬಗೆಯ ನಿಯಂತ್ರಿತ ವಾತಾವರಣದಲ್ಲಿಯೆ ಎಲ್ಲವನ್ನು ಕಲಿಯಬೇಕು). ಆದರೆ ಅದರ ಋಣಾತ್ಮಕ ಪರಿಣಾಮವೆಂದರೆ, ಯಾವುದೆ ಹತೋಟಿಯಿಲ್ಲದ ಈ ಗುಣಗಳು ಒಳ್ಳೆಯ ಹಾದಿಯನ್ನು ಹಿಡಿಯಬಹುದು ಇಲ್ಲವೆ ಕೆಟ್ಟ ದಾರಿಯತ್ತಲೂ ತಿರುಗಬಹುದು. ಅದೇನೆ ಇದ್ದರೂ ಅವು ಸಂಸ್ಕೃತಿಯ, ಪರಂಪರೆಯ ಒಂದು ತುಣುಕು ಎನ್ನುವುದಂತು ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ನಾಗೇಶರೇ. ನನ್ನ ಬಾಲ್ಯದ ದಿನಗಳಲ್ಲಿ ಇದನ್ನು ಆನಂದಿಸಿದ್ದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಾನೂ ಕೂಡ  ನನ್ನ ಅದೇ ಬಾಲ್ಯದ ನೆನಪಲ್ಲೆ ಇದನ್ನೂ ಬರೆದದ್ದು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.