ಆ ದಿನ ಈ ದಿನ

4.8

    ಆಗಸ್ಟ್ 20. ಸಾಹಿತಿ ಶೇಷನಾರಾಯಣ ಅವರ 80ನೇ ಹುಟ್ಟುಹಬ್ಬಕ್ಕೆ ನಾವೆಲ್ಲ ಸೇರಿದ್ದೆವು - ಅಂದರೆ ಊಟಕ್ಕೆ. "ಇಂದು ಅಂತರಾಷ್ಟ್ರೀಯ ಸೊಳ್ಳೆ ದಿನ ಎಂದು ನಿಮಗೆ ಗೊತ್ತುಂಟೋ?" ಕೃಷ್ಣ ಸುಬ್ಬರಾವ್ ಕೇಳಿದರು. 
    ನನಗೆ ಯಥಾಪ್ರಕಾರ ಗೊತ್ತಿರಲಿಲ್ಲ.
   ಅಂದರೆ ನನಗೆ ಸೊಳ್ಳೆಯ ಬಗ್ಗೆ ಏನೂ ಗೌರವ ಇಲ್ಲ ಎಂದೇನಿಲ್ಲ. ಹಾಡುತ್ತಾ ಬಂದು, ಒಳ್ಳೆ ಜಾಗ ಆರಿಸಿ, ದೇಹದ ಮೇಲೆ ಕುಳಿತು ಬೋರ್‍ವೆಲ್ ಮಾದರಿ ಕೊರೆಯುವ ಈ ಸೊಳ್ಳೆಯ ಹೆಸರಿನಲ್ಲಿ ಒಂದು ದಿನವೇ ಎಂದು ಬೆಕ್ಕಸಬೆರಗಾಗಿ ಮೂಗಿನ ಮೇಲೆ ಬೆರಳನ್ನಿಟ್ಟಾಗ ಅಲ್ಲಿ ಕುಳಿತಿದ್ದ ಒಂದು ಸೊಳ್ಳೆ ಗುಂಯ್ ಎಂದು ಹಾರಿಹೋಯಿತು.
'ಅಂತರರಾಷ್ಟ್ರೀಯ ಸೊಳ್ಳೆ ದಿನ' ಎಂದಾಗ ಯಾವುದು ಅಂತಾಷ್ಟ್ರೀಯ - ಸೊಳ್ಳೆಯೋ, ದಿನವೋ ಎಂಬುದು ಗೊತ್ತಾಗಲಿಲ್ಲ. ಸೊಳ್ಳೆ ಎಂದಾಗ ಯಾವ ಸೊಳ್ಳೆ? ಮಲೇರಿಯಾ ಬರಿಸುವ ಸೊಳ್ಳೆಯೇ? ಫಿಲೇರಿಯಾ ಬರಿಸುವ ಪ್ರಬೇಧವೇ? ಅಥವಾ ಸಮಸ್ತ ಸೊಳ್ಳೆ ಪ್ರಬೇಧಗಳನ್ನು ಸೇರಿಸಿ ಒಂದು ಕಾಂಪೋಸಿಟ್ ದಿನವೇ ಎಂದು ಗೊತ್ತಾಗಲಿಲ್ಲ. 
    ಆದರೆ ಚಿಂತನೆಗೆ ದೂಡಿತು. 
   ಈಗ ಪ್ಲೇಗ್ ವಿರಳ. ಆದರೂ ಅದನ್ನು ಹರಡುವ ಇಲಿಗಳ ಹೆಸರಿನಲ್ಲಿ 'ಅಂತರರಾಷ್ಟ್ರೀಯ ಇಲಿಗಳ ದಿನ'ವನ್ನೇಕೆ ಆಚರಿಸಬಾರದು? ಇಲಿ ಎಂದಮೇಲೆ ಹೆಗ್ಗಣವನ್ನು ದೂರವಿರಿಸಲು ಸಾಧ್ಯವೆ? ಮೇರಾ ಭಾರತ್ ಮಹಾನ್ ಹೆಗ್ಗಣಗಳು ಗೋಡೋನ್‍ಗಳಲ್ಲಿ, ಚರಂಡಿಗಳಲ್ಲಿ ಮಾತ್ರ ಕಾಣುತ್ತವೆ ಎಂದು ಹೇಳಲಾಗದು. ಪ್ರತಿ ಸರ್ಕಾರಿ ಇಲಾಖೆಯಲ್ಲೂ ವಿವಧ ಗಾತ್ರದ ಹೆಗ್ಗಣಗಳನ್ನು ನೋಡಬಹುದು. 
   ಅಂದಮೇಲೆ 'ಅಂತರರಾಷ್ಟ್ರೀಯ ಹೆಗ್ಗಣ ದಿನ' ಆಚರಿಸದೇ ಇರಲು ಸಾಧ್ಯವೆ? ಅಂದು ಬೇಕಾದರೆ ಸರ್ಕಾರ ನೆಗೋಷಿಯೆಬಲ್ ಇಂಸ್ಟ್ರುಮೆಂಟ್ಸ್ ಕಾಯಿದೆ ಪ್ರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಬಹುದು. ಏಕೆಂದರೆ ಹೆಗ್ಗಣಗಳೂ ಸಾರ್ವತ್ರಿಕ ತಾನೆ? ಈ ಸಮಾರಂಭಕ್ಕೆ ಯಾವುದೇ ರಾಜಕಾರಣಿಗಳನ್ನು ತುಂಬು ಹೃದಯದಿಂದ ಮುಖ್ಯ ಅತಿಥಿಯನ್ನಾಗಿ ಕರೆಸಬಹುದು. 
ಅಂತರರಾಷ್ಟ್ರೀಯ ಹೆಗ್ಗಣ ದಿನದಂತೆ ತಿಗಣೆ ದಿನ ಬೇಡವೆ? ಏಕೆಂದರೆ ಪ್ರಯಾಣ ಮಾಡುವಾಗ ನಮ್ಮನ್ನು ಚುಚ್ಚುವುದು ಬರೇ ಪ್ರಯಾಣದ ದರವಲ್ಲ. ಸೀಟಿನಡಿ ಇರುವ ತಿಗಣೆ ಸಹ. ಜಿರಳೆ ಏನು ಪಾಪ ಮಾಡಿದೆ ಎಂದು ಅದನ್ನು ನಿರ್ಲಕ್ಷಿಸಲು ಸಾಧ್ಯ? ಅದಿಲ್ಲದ ಜಾಗ ಇದೆಯೆ? ಪಂಚತಾರಾ ಹೋಟೆಲಿನಿಂದ ಹಿಡಿದು ಪಂಚೆಯನ್ನೇ ಸೂರು ಮಾಡಿ ಮನೆ ಮಾಡಿಕೊಂಡಿರುವ ಗುಡಿಸಲಿನಲ್ಲಿ ಸಹ ವಿವಿಧ ಗಾತ್ರದ ಜಿರಳೆಗಳು ಸರಸರ ಓಡಾಡಿಕೊಂಡಿರುತ್ತವೆ. ಅಂದ ಹಾಗೆ ಗೌತಮ ಬುದ್ಧ ಆ ದುಃಖಭರಿತ ಮಹಿಳೆ 'ಸಾವಿಲ್ಲದ ಮನೆಯಿಂದ ಉಪ್ಪು ತಾ' ಎನ್ನುವ ಬದಲು 'ಜಿರಳೆ ಇಲ್ಲದ ಮನೆಯಿಂದ ಉಪ್ಪು ತಾ' ಎಂದಿದ್ದರೂ ಆಕೆ ಉಳ್ಳಾಲದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್ ನಂತೆ ಸೋಲುತ್ತಿದ್ದಳು. ಆದುದರಿಂದ 'ಅಂತರರಾಷ್ಟ್ರೀಯ ಜಿರಳೆ ದಿನ' ಆಚರಿಸಬಹುದು.
ಹಾಗೆಯೇ 'ಸರ್ಪ ದಿನ' ಸಹ ಆಚರಿಸಬಹುದು. ಯಾರ ನೆನಪಿನಲ್ಲಿ ಎಂದಿರಾ? ಹಸಿರು ಹಾಸಿನ ನೆಲದಲ್ಲಿರುವ ಹಸಿರು ಹಾವಿನಂತೆ ನಮ್ಮ ಸುತ್ತಮುತ್ತಲಿರುವ 'ಹಿತೈಷಿ ಮಿತ್ರ'ರ ನೆನಪಿನಲ್ಲಿ. ಅಂದರೆ snake in the grass.
   ಅದೋ ನೋಡಿ, ಕತ್ತೆ ಕಿರುಚಿದೆ. ನಾನೂ ಇದ್ದೇನೆ ಎಂದು ಹೇಳಿಕೊಳ್ಳಲು ಎಷ್ಟು ಭಾರ ಹೊರುತ್ತದೋ ಅಷ್ಟೇ ಮೂದಲಿಕೆಗೆ ಒಳಗಾಗಿರುವ ಮೂಕ ಪ್ರಾಣಿ. ಅನೇಕ ಉಗ್ರ ಹೋರಾಟಗಳಲ್ಲಿ, ಕೊಂಡೊಯ್ಯುವ ಭಾರಿ ಮೆವಣಿಗೆಗಳಲ್ಲಿ ಕತ್ತೆಯದೇ ಲೀಡಿಂಗ್ ಪಾತ್ರ. ಅದರ ಹಿಂದೆ ಇತರರು. ಇಷ್ಟು ಬಯೋಡಾಟಾ ಸಾಲದೇ 'ಅಂತರರಾಷ್ಟ್ರೀಯ ಕತ್ತೆ ದಿನ' ಆಚರಿಸಲು?
   ಎಷ್ಟು ಚೆನ್ನಾಗಿ ಬಾಲ ಅಲ್ಲಾಡಿಸುತ್ತಿದೆ ನೋಡಿ ಇದು. ನೋಡಲು ಎರಡು ಕಣ್ಣುಗಳು ಸಾಲದು. ಕನ್ನಡಕವೂ ಬೇಕು. ಅದೇ, ನಾಯಿಯ ಬಗ್ಗೆ ಹೇಳುತ್ತಿದ್ದೇನೆ. ನಿಷ್ಟಾವಂತ ಪ್ರಾಣಿ. ನಮ್ಮ ಹಿರಿಯ, ಕಿರಿಯ ಗೌರವಾನ್ವಿತ ನೇತಾಗಳು ಹೈಕಮಾಂಡ್/ಐ ಕಮಾಂಡ್ ಮುಂದೇ ಹೀಗೇ ಬಾಲ ಅಲ್ಲಾಡಿಸುತ್ತಾರೆ ಎಂದು ಎಲ್ಲ ಬಲ್ಲ ಮೂಲಗಳು ತಿಳಿಸುತ್ತವೆ. ಅವರೆಲ್ಲರ ನೆನಪಿನಲ್ಲಿ ನಾವು 'ಅಂತರರಾಷ್ಟ್ರೀಯ ಶ್ವಾನ ದಿನ' ಆಚರಿಸೋಣ. 'ಅಂತರರಾಷ್ಟ್ರೀಯ ನಾಯಿ ದಿನ' ಎಂದು ಹೇಳಲು ಅದೇಕೋ ಮುಜುಗರ. ಶ್ವಾನ ದಿನಕ್ಕೆ ಹೈ ಕಮಾಂಡ್/ ಐ ಕಮಾಂಡ್ ಖಂಡಿತ ಒಪ್ಪಿಗೆ ನೀಡುತ್ತದೆ. 
  ನೇತಾಳ ಬಗ್ಗೆ ಹೇಳುವಾಗ ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಹಿಂದುಳಿದ/ ಹಿಂದುಳಿಯಲು ಬಯಸುವ/ ತುಳಿಸಿಕೊಂಡಿರುವ ಜನಗಳ ಬಗ್ಗೆ ಈ ಮಂದಿ ಅಪಾರವಾಗಿ ಕಣ್ಣೀರು ಸುರಿಸುತ್ತಾರೆ. ಈ ಕಣ್ಣೀರಿನಿಂದ ಸದಾ ಒದ್ದೆಯಾಗಿರುವ ಇವರ ಗೌರವಾರ್ಥ 'ಅಂತರರಾಷ್ಟ್ರೀಯ ಮೊಸಳೆ ದಿನ' ಆಚರಿಸಬಾರದೇಕೆ?
   ಊಸರವಳ್ಳಿ ಕಾದಿದೆ. 'ಬಣ್ಣ ಬದಲಾಯಿಸುವುದರಲ್ಲಿ ನಾನೇ ಮೊದಲಿಗ ಎಂದುಕೊಂಡಿದ್ದೆ. ಆದರೆ ನಿಮ್ಮ ಅನೇಕ ನೇತಾಗಳನ್ನು ನೋಡಿದ ಮೇಲೆ ನಾನು ಅವರಂತೆ ಬಣ್ಣ ಬದಲಾಯಿಸಿಕೊಳ್ಳಬೇಕೇನೋ ಅನಿಸುತ್ತಿದೆ' ಎಂದು ಅದು ಹೇಳುವಂತಿದೆ. ಅಂತಹ ನೇತಾಗಳ ಗೌರವಾರ್ಥ 'ಅಂತರರಾಷ್ಟ್ರೀಯ ಊಸರವಳ್ಳಿ ದಿನ' ಆಚರಿಸೋಣವೆ?
   Cat has nine lives ಎನ್ನುತ್ತಾರೆ. ಅಂದರೆ ಅದು ಅಷ್ಟು ಸುಲಭವಾಗಿ ಸಿಕ್ಕಿಬೀಳದ ಪ್ರಾಣಿ. ಅದು ಹೇಗೋ ತಪ್ಪಿಸಿಕೊಳ್ಳುತ್ತದೆ. ನಮ್ಮ ರಾಜಕಾರಣಿಗಳು ಹಾಗೆಯೇ ಅಲ್ಲವೆ? ಈ ಪಕ್ಷದಲ್ಲಿ ಸಾಯುವ ಬದಲು ಆ ಪಕ್ಷದಲ್ಲಿ ಸಲ್ಲಲು ಬಯಸುತ್ತಾರೆ. ಅಲ್ಲೂ ಸಾಯುವ ಪರಿಸ್ಥಿತಿ ಬಂದಾಗ ತಮ್ಮದೇ ಆದ ಪಕ್ಷ ಸ್ಥಾಪಿಸಿ ಬದುಕಿ ಉಳಿಯಲು ಪ್ರಯತ್ನಿಸುತ್ತಾರೆ. ಅಂತಹ ಮಹಾತ್ಮರ ನೆನಪಿನಲ್ಲಿ 'ಅಂತರರಾಷ್ಟ್ರೀಯ ಮಾರ್ಜಾಲ ದಿನ' ಆಚರಿಸೋಣವೆ? ಆ ಸಮಾರಂಭಕ್ಕೆ ಮಾರ್ಜಾಲ ಸನ್ಯಾಸಿಗಳನ್ನು ಹೃದಯಪೂರಕವಾಗಿ ಸ್ವಾಗತಿಸಬಹುದು. 
    ಗೋಮಾತೆಯನ್ನು ಮರೆತಿದ್ದೀರಾ ಎಂದಿರಾ? ಅದು ಹೇಗೆ ಸ್ವಾಮಿ ಸಾಧ್ಯ? ಟ್ರಾಫಿಕ್ ಪೋಲೀಸರೀಗ ನೆನಪಿಗೆ ಬರುತ್ತಿದ್ದಾರೆ. ಏನು ಸಂಬಂಧ ಎಂದಿರಾ? ಅಲ್ಲಾ ಸ್ವಾಮಿ, ಬೀಡಾಡಿ ಹಸುವೊಂದು ರಸ್ತೆ ಸಂಚಾರವನ್ನು ನಿಲ್ಲಿಸುವಷ್ಟು ಸುಲಭವಾಗಿ ಬೇರೆ ಯಾರು ನಿಲ್ಲಿಸಬಹುದು? ಆದುದರಿಂದ ಟ್ರಾಫಿಕ್ ಪೋಲೀಸರು 'ಅಂತರರಾಷ್ಟ್ರೀಯ ಬೀಡಾಡಿ ಗೋ ದಿನ' ಆಚರಿಸಬಹುದು. ಆದರೆ ಇಂತಹ ಗೋಗಳು ಭಾರತದಲ್ಲಿ ಮಾತ್ರ ಕಾಣಸಿಗುವುದರಿಂದ ಇದನ್ನು 'ಅಂತರರಾಷ್ಟ್ರೀಯ ದಿನ' ಎಂದು ಸೆಲೆಬ್ರೇಟ್ ಮಾಡಲು ಸಾಧ್ಯವೆ? ಯೋಚಿಸಬೇಕು. ಹಸು ನಂತರ ಎಮ್ಮೆ ಅಲ್ಲವೆ? ದಪ್ಪ ಚರ್ಮದವರಿಗಾಗಿ 'ಅಂತರರಾಷ್ಟ್ರೀಯ ಎಮ್ಮೆ ದಿನ' ಬೇಡವೆ?
   ಇನ್ನು ಕುದುರೆ.
    ರೇಸ್‍ನಲ್ಲಿ ಗೆದ್ದ ತಕ್ಷಣ ಮನೆಯ ನೆನಪು ಮಾಡಿಕೊಂಡು, ಇನ್ನೊಂದು ಈವೆಂಟ್‍ಗೆ ಕಾಯದೆ ದುಡ್ಡು ಎಣಿಸಿಕೊಂಡು ಹೊರ ನಡೆಯುವಂತಹ ಸಮಯಪ್ರಜ್ಞೆ ತೋರುವ ಕುದುರೆ ಪ್ರ್ರಿಯರ ನೆನಪಿಗಾಗಿ 'ಅಂತರರಾಷ್ಟ್ರೀಯ ಜೂಜಿನ ಕುದುರೆ ದಿನ' ಆಚರಿಸಲು ಸಾಧ್ಯ. ಆದರೆ ಜೂಜಿನ ಕುದುರೆಗಳು ಹೇರಳವಾಗಿದ್ದರೂ ಅಂತಹ ಮಂದಿ ತೀರಾ ವಿರಳವಾದ್ದರಿಂದ ಸಮಾರಂಭ ನಡೆದರೆ ಕೋರಂ ಇಲ್ಲದಿರುವ ಸಾಧ್ಯತೆಯೇ ಹೆಚ್ಚು. 
   ಇನ್ನು ಕಾಲ್ ಸೆಂಟರ್ ನಿಶಾಚರರ ಹೆಸರಿನಲ್ಲಿ 'ಅಂತರರಾಷ್ಟ್ರೀಯ ಗೂಬೆ ದಿನ' ಆಗದೆ?
   ಆದರೆ ಇವೆಲ್ಲವೂ ಮನುಷ್ಯರು ಪ್ರಾಣಿಗಳ ಹೆಸರಿನಲ್ಲಿ ಆಚರಿಸಬಹುದಾದ ದಿನಗಳು. ಪ್ರಾಣಿಗಳು ಮನುಷ್ಯನ ಹೆಸರಿನಲ್ಲಿ ಆಚರಿಸಬಹುದಾದ ದಿನಗಳಾದರೆ ಒಂದೇ ದಿನ ಸಾಕು. ಅದೇ 'ಅಂತರರಾಷ್ಟ್ರೀಯ ಅತೀ ಕ್ರೂರ ಪ್ರಾಣಿ ದಿನ'. ಏಕೆಂದರೆ ಅತೀ ಕ್ರೂರ ಪ್ರಾಣಿ ಮಾನವ ತಾನೆ?
 
(ಚಿತ್ರಕೃಪೆ: ಗೂಗಲ್)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.