ಆಲದ ಮರ ಹಾಗೂ ತುಲಸಿ ಗಿಡದ ಸೆಣಸಾಟ.!

2

ಡಾ|| ರಾಜ್ ಕುಮಾರ್ ಕುಟುಂಬಸ್ಥರ ಮಾತಿಗೆ ಮರುಳಾಗುತ್ತಾನಾ ಮತದಾರ.? ಬಿ‌ಜೆ‌ಪಿ ಮತ್ತೆ ಗೆಲುವಿನ ನೆಗೆ ಬೀರುತ್ತಾ.? ಕುಮಾರ್ ಬಂಗಾರಪ್ಪನವರ ಬಂಡಾಯ ಕಾಂಗ್ರೆಸ್ ಗೆ ಮುಳುವಾಗುತ್ತಾ.?

 

ಜಿದ್ದಾಜಿದ್ದಿನ ಕಣ ಈ ಭಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರ. ಕೆ‌ಜೆ‌ಪಿಯಿಂದ ಬಿ‌ಜೆ‌ಪಿ ಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬಿ‌ಜೆ‌ಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ರಾಜ್ಯ ರಾಜಕೀಯದಲ್ಲಿದ್ದರೆ ಸುಮ್ಮನೆ ತಲೆನೋವು ಎಂದು ಅವರನ್ನು ರಾಷ್ಟ್ರ ರಾಜಕೀಯಕ್ಕೆ ಕಲಿಸುವ ಚಿಂತನೆಯಲ್ಲಿದ್ದಾರೆ ಬಿ‌ಜೆ‌ಪಿಯ ರಾಜ್ಯ ನಾಯಕರು. ಇನ್ನು ಜೆ‌ಡಿ‌ಎಸ್ ಭಾರಿ ಹುಡುಕಾಟ ನಡೆಸಿ ಬಂಗಾರಪ್ಪನವರ ಪತ್ನಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಅವರ ಮಗಳು, ಡಾ.ರಾಜ್ ಕುಮಾರ್ ಸೊಸೆ, ಶಿವ ರಾಜ್ ಕುಮಾರ್ ಪತ್ನಿ ಗೀತಾ ಅವರನ್ನು ಕಣಕ್ಕಿಳಿಸಿದೆ. ಒಟ್ಟಾರೆ ರಾಜಕೀಯದಿಂದ ದೂರವಿದ್ದ ರಾಜ್ ಕುಟುಂಬ ಈ ಮೂಲಕ ರಾಜಕೀಯ ಪ್ರವೇಶ ಪಡೆದು ಸಂಸತ್ ಪ್ರವೇಶಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಬಂಗಾರಪ್ಪನವರ ಪುತ್ರ ಕುಮಾರ್ ಬಂಗಾರಪ್ಪನವರಿಗೆ ಬದಲಾಗಿ ಮಂಜುನಾಥ್ ಬಂಡಾರಿಯವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಸಹಜವಾಗಿ  ಕುಮಾರ್ ಅವರು ಬಂಡಾಯವೆದ್ದು, ವರಿಷ್ಟರ ಮಾತಿಗೆ ಮಣಿದು ತಣ್ಣಗಾಗಿ ಬೂದಿ ಮುಚ್ಚಿದ ಕೆಂಡದಂತಿದ್ದಾರೆ.

ಹಾಲಿ ಸಂಸದ, ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರು ತಂದೆಗಾಗಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಗೆದ್ದರೆ, ಖಾಲಿಯಾಗುವ ಶಿಕಾರಿಪುರದಿಂದ ರಾಘವೇಂದ್ರ ಅವರು ಶಾಸಕರಾಗುತ್ತಾರೆ. ಈ ಭಾರಿ ಬಿ‌ಜೆ‌ಪಿ ಯನ್ನು ಸೋಲಿಸಬೇಕೆಂದು ಘಟಾನುಘಟಿಗಳೇ ಶಿವಮೊಗ್ಗದಲ್ಲಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಕುಮಾರ್ ಬಂಗಾರಪ್ಪನವರ ಬಂಡಾಯದಿಂದ ಸಹಜವಾಗಿ ಕಾಂಗ್ರೆಸ್ ಗೆ ನಷ್ಟವಾಗಬಹುದು. ಇದರ ಜೊತೆಗೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆ ಹೇಳಿಕೊಳ್ಳುವಷ್ಟು ಬೆಂಬಲವೇನು ಇರುವಂತೆ ಕಾಣುತ್ತಿಲ್ಲ. ಇನ್ನೇನಿದ್ದರೂ ಗೀತಾ ಶಿವರಾಜ್ ಕುಮಾರ್ ಮತ್ತು ಯಡಿಯೂರಪ್ಪನವರ ಮಧ್ಯೆ ನೇರ ಹಣಾಹಣಿ. ಈಗಾಗಲೇ ಗೀತಾ ಅವರು ನಾನು ನಿಷ್ಠಾವಂತ ರಾಜಕಾರಣಿ(ಕ್ಲೀನ್ ಹ್ಯಾಂಡ್) ನನಗೆ ಶಿವಮೊಗ್ಗದಲ್ಲಿ ಯಾರೂ ಎದುರಾಳಿಯೇ ಇಲ್ಲ ಹಾಗೂ ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆಯೂ ಸಹ ಮಾತನಾಡುವುದಿಲ್ಲ ಎಂದಿದ್ದಾರೆ. ಗೀತಾ ಅವರ ಪರ ಇಡೀ ಡಾ.ರಾಜ್ ಕುಟುಂಬ ಹಾಗೂ ಕನ್ನಡ ಚಿತ್ರರಂಗ ಪ್ರಚಾರ ಮಾಡುವ ನಿರೀಕ್ಷೆ ಇದೆಯಾದರೂ ಪ್ರಚಾರ ಮಾಡುವ ಬಗ್ಗೆ ಪುನೀತ್, ರಾಘಣ್ಣ ಅಥವಾ ಪಾರ್ವತಮ್ಮನವರಾಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ಪ್ರಚಾರ ಮಾಡಿದರು, ಇವರ ಪ್ರಚಾರದ ಮೋಡಿಗೆ ಮತದಾರ ಮರುಳಾಗುತ್ತಾನಾ.? ಕಾದು ನೋಡಬೇಕು. ಡಾ|| ರಾಜ್ ಕುಮಾರ್ ಅವರ ಮನೆಗೆ ಒಮ್ಮೆ ಯಡಿಯೂರಪ್ಪನವರು ಭೇಟಿ ನೀಡಿದ್ದರಂತೆ. ವಾಪಸ್ಸು ಹೋಗುವಾಗ ಗೇಟಿನ ಬಳಿ ರಾಜ್ ಕುಮಾರ್ ಕೇಳಿದ್ದರಂತೆ, “ಯಡಿಯೂರಪ್ಪನವರೆ ಕೇಳುವುದು ಮರೆತುಹೋಗಿದ್ದೆ ನಿಮ್ಮದು ಯಾವ ಪಕ್ಷ.?” ಈ ಮಟ್ಟಿಗೆ ಡಾ.ರಾಜ್ ಕುಮಾರ್ ಅವರು ರಾಜಕೀಯವನ್ನು ದೂರವಿಟ್ಟಿದ್ದರು. ಆದರೆ ಅವರ ಮಕ್ಕಳು ತಂದೆಯ ವಿಚಾರಧಾರೆಯನ್ನು ಅನುಸರಿಸುತ್ತಿಲ್ಲ. ಕುಮಾರ್ ಬಂಗಾರಪ್ಪ ಅವರು ತುಂಬಿದ ರಾಜ್ ಕುಟುಂಬವನ್ನು ನನ್ನ ತಂಗಿ ಗೀತಾ ಅವರೇ ಒಡೆದಿದ್ದು, ಇದಕ್ಕೆ ಶಿವರಾಜ್ ಕುಮಾರ್ ಅವರ ಬೆಂಬಲವೂ ಇತ್ತು. ಎಂದು ಹೇಳಿದ್ದಾರೆ. ಆದ್ದರಿಂದ ಬಹುಶಃ ರಾಜಕೀಯ ಪ್ರವೇಶ ಗೀತಾ ಅವರ ಸ್ವಂತ ಅಭಿಪ್ರಾಯವಾಗಿದ್ದು ಇದಕ್ಕೆ ಶಿವಣ್ಣನ ಬೆಂಬಲ ಇರಬಹುದು.

ರಾಜ್ ಕುಟುಂಬದ ಮೇಲಿನ ಅಭಿಮಾನ ಸಾಕಷ್ಟು ಜನರಿಗೆ ಕಡಿಮೆಯಾಗಬಹುದು. ಆಗೇ ಆಗುತ್ತದೆ ಅದು ಸಾಮಾನ್ಯ. ಉದಾಹರಣೆಗೆ ಚಿರಂಜೀವಿ, ತೆಲುಗು ಚಿತ್ರರಂಗಕ್ಕೆ ಗಾಡ್ ಫಾದರ್ನಂತಿದ್ದವರು ರಾಜಕೀಯ ಪ್ರವೇಶದ ನಂತರ ಲೆಕ್ಕಕ್ಕೇ ಇಲ್ಲದಂತಾಗಿದ್ದಾರೆ. ಎಲ್ಲರೂ ಎನ್.ಟಿ.ರಾಂರಾವ್ ಆಗಲು ಸಾಧ್ಯವೇ.? ಶಿವಣ್ಣನ ಸಿನಿಮಾ ಸಮಾರಂಭಗಳಲ್ಲಿ ಒಂದು ಭಾರಿಯೂ ಮೈಕ್ ನ ಮುಂದೆ ಗೀತಾ ಅವರು ನಿಂತಿದ್ದಿಲ್ಲ. ಆದರೆ ಈ ಏಕಾಏಕೀ ಪ್ರವೇಶದ ಕುರಿತು ಸಾಕಷ್ಟು ಅನುಮಾನಗಳು ಹುಟ್ಟುತ್ತವೆ. ತಂದೆಯ ಮಾತನ್ನೇ ದಿಕ್ಕರಿಸಿ ರಾಜಕೀಯ ಪ್ರವೇಶ ಮಾಡುವಷ್ಟು ಮಟ್ಟಕ್ಕೆ ಶಿವರಾಜ್ ಕುಮಾರ್ ಇಳಿದರಾ.? ಯಾಕೆ ಇವರಿಗೆ ಇಂತಹ ಬುದ್ದಿ.? ಎಚ್.ಡಿ.ಕುಮಾರಸ್ವಾಮಿ ಮತ್ತು ಮಧು ಬಂಗಾರಪ್ಪ ಅವರು ತಲೆಕೆಡಿಸಿರಬಹುದು ಅಥವಾ ಆರ್ಯನ್ ಚಿತ್ರೀಕರಣ ಸಮಯದಲ್ಲಿ ಸಂಸದೆ ರಮ್ಯಾ ಅವರಿಂದ ಶಿವರಾಜ್ ಕುಮಾರ್ ಪ್ರೇರೇಪಿತರಾಗಿರಬಹುದೇನೋ ಗೊತ್ತಿಲ್ಲ. ಬಹುಶಃ ಶಿವರಾಜ್ ಕುಮಾರ್ ಅವರ ನಿರ್ಧಾರವನ್ನು ಸ್ವತಃ ಅವರ ತಾಯಿ ಪಾರ್ವತಮ್ಮನವರೇ ಒಪ್ಪಿರುವ ಹಾಗಿಲ್ಲ. ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿ‌ಜೆ‌ಪಿ ಶಾಸಕರಿರುವುದು ಒಬ್ಬರು ಮಾತ್ರ. 4ರಲ್ಲಿ ಕಾಂಗ್ರೆಸ್, 3ರಲ್ಲಿ ಜೆ‌ಡಿ‌ಎಸ್ ಶಾಸಕರಿದ್ದಾರೆ. ಇದರ ಆಧಾರದ ಮೇಲೆ ನೋಡಿದರೆ ಬಿ‌ಜೆ‌ಪಿಗೆ ಗೆಲ್ಲುವ ದಾರಿಯೇ ಇಲ್ಲ ಎಂದಿನಿಸುತ್ತದೆ. ಯಡಿಯೂರಪ್ಪ ನವರಿಗೆ ಈ ಬಾರಿ ಗೆಲ್ಲುವುದು ಕಷ್ಟವೆನಿಸಿದರೂ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕೇಂದ್ರದಲ್ಲಿ ಕೃಷಿ ಮಂತ್ರಿಯಾಗಬೇಕು ಎಂಬ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ. ಕೆ‌ಜೆ‌ಪಿ ಮತ್ತು ಬಿ‌ಜೆ‌ಪಿಗೆ ಹಂಚಿಹೋಗಿದ್ದ ಮತಗಳು ಒಂದಾಗಿ ಬಿ‌ಜೆ‌ಪಿಗೆ ಗೆಲುವು ಸಿಗಬಹುದು ಎನ್ನುವುದು ಬಿ‌ಜೆ‌ಪಿಯ ಲೆಕ್ಕಾಚಾರ. ಮಾಜಿ ಮುಖ್ಯಮಂತ್ರಿಯ ಸೋಲಿಸಲೇ ಬೇಕೆಂದು ಪಣತೊಟ್ಟಿರುವ ಜೆ‌ಡಿ‌ಎಸ್ ಬಂಗಾರಪ್ಪ ಪುತ್ರಿ ಹಾಗೂ ಡಾ.ರಾಜ್ ಸೊಸೆ ಗೀತಾ ಅವರನ್ನು ಕಣಕ್ಕಿಳಿಸುವ ಮೂಲಕ ಎರಡು ಕಡೆಯಿಂದ ಲಾಭ ಪಡೆಯುವ ಯತ್ನಕ್ಕೆ ಕೈ ಹಾಕಿದ್ದಾರೆ ಎಚ್.ಡಿ.ದೇವೇಗೌಡ. ಕಾಂಗ್ರೆಸ್ ಶಿವಮೊಗ್ಗದಲ್ಲಿ ಗೆಲ್ಲುವಂತೆ ಕಾಣುತ್ತಿಲ್ಲ, ಕುಮಾರ್ ಬಂಗಾರಪ್ಪ ನವರನ್ನು ಕಣಕ್ಕಿಳಿಸಿದರೆ ಮತಗಳು ವಿಭಜನೆಯಾಗಿ ಬಿ‌ಜೆ‌ಪಿ ಗೆಲ್ಲುತ್ತದೆ. ಅದರ ಬದಲು ಜೆ‌ಡಿ‌ಎಸ್ ಗೆಲ್ಲಲಿ ಎಂದು ಭಂಡಾರಿಯವರನ್ನು ಕಣಕ್ಕಿಳಿಸಿರಬಹುದು. ಬಿ‌ಜೆ‌ಪಿ ಸೇರಿ ಎಲ್ಲಾ ಪಕ್ಷಗಳಿಂದ ಸ್ಪರ್ದಿಸಿ ಸೋಲಿಲ್ಲದ ಸರದಾರನೆನಿಸಿಕೊಂಡಿದ್ದ ಬಂಗಾರಪ್ಪನವರು 2009ರ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರ ವಿರುದ್ದ ಸೋತಿದ್ದರು. ಆನಂತರ ನಿಧನ ಹೊಂದಿದರು. ಈ ಅನುಕಂಪದ ಅಲೆ ಸಹ ಗೀತಾ ಅವರಿಗೆ ಲಾಭವಾಗಬಹುದು. ಕಾಂಗ್ರೆಸ್ ನ ಆಡಳಿತ ವಿರೋಧಿ ಅಲೆ ಬಿ‌ಜೆ‌ಪಿಯ ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಎಂದು ಜೆ‌ಡಿ‌ಎಸ್ ಗೆ ಮತ ಹಾಕುವ ಮೂಲಕ ಬೆಂಬಲಿಸಬಹುದು. ಶಿವರಾಜ್ ಕುಮಾರ್ ಅಭಿಮಾನಿಗಳೆಲ್ಲರೂ ಗೀತಾ ಅವರನ್ನು ಬೆಂಬಲಿಸುತ್ತಾರೆಂಬುದು ಸುಳ್ಳು. ಕೆಲವರಷ್ಟೇ ಬೆಂಬಲಿಸಬಹುದು. ಚಿರಂಜೀವಿಯವರ ಉದಾಹರಣೆ ಮೊದಲೇ ಕೊಟ್ಟಿದ್ದೇನೆ.   

ಸಮೀಕ್ಷೆಗಳ ಪ್ರಕಾರ ಯಡಿಯೂರಪ್ಪ ಅವರಿಗೆ ಗೀತಾ ಶಿವರಾಜ್ ಕುಮಾರ್ ಪ್ರಬಲ ಪೈಪೋಟಿ. 50-50 ಇದ್ದಂತೆ ಕಾಣುತ್ತಿದೆ. ಯಾರೆ ಗೆದ್ದರು ಗೆಲುವಿನ ಅಂತರ ಅತ್ಯಂತ ಕಡಿಮೆಯಾಗಿರುತ್ತದೆ. ಆದ್ದರಿಂದ ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ಮೋದಿಯನ್ನು ಕರೆಸಿ ಅಲೆ ಸೃಷ್ಟಿಸೋಣ ಎಂದು ಚಿಂತಿಸುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ಯಡಿಯೂರಪ್ಪನವರನ್ನು ವಿರೋಧಿಸಿ ಮಾತನಾಡುತ್ತಿದ್ದ ಬಿ‌ಜೆ‌ಪಿಯ ಮಾಜಿ ಸಂಸದ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಇಲ್ಲಿ ಯಾರೇ ಕುಣಿದರು,ಹಾಡಿದರೂ ಗೆಲ್ಲುವುದು ಬಿ‌ಜೆ‌ಪಿಯೇ ಎಂದಿದ್ದಾರೆ. ಇದು ರಾಜಕೀಯ ವ್ಯಕ್ತಿಗಳ ವ್ಯಕ್ತಿತ್ವ. ಯಡಿಯೂರಪ್ಪನವರನ್ನು ಗೀತಾ ಅವರ ಜೊತೆ ಹೋಲಿಸುವುದೇ ಒಂದು ರೀತಿಯ ತಪ್ಪು. ಆಲದ ಮರವನ್ನು ತುಳಸಿ ಗಿಡಕ್ಕೆ ಹೋಲಿಸಿದಹಾಗೆ. ಆಲದ ಮರ ಎಷ್ಟೇ ದೊಡ್ಡದಾಗಿದ್ದರೂ, ತುಳಸಿ ಗಿಡಕ್ಕೆ ಇನ್ನೊಂದು ಆಲದ ಮರದ ಆಶ್ರಯವಿರುವುದು ವಿಶೇಷ ಹಾಗು ತುಳಸಿ ಗಿಡ ಅಷ್ಟೇ ಪರಿಶುದ್ದ. ಎಷ್ಟೇ ಆಶ್ರಯವಿದ್ದರೂ ಆಲದ ಮರ ಕೊಡುವ ನೆರಳು, ಪಕ್ಷಿ ಸಂಕುಲಕ್ಕೆ ಸೂರು ತುಳಸಿ ಗಿಡ ಕೊಡುತ್ತದೆಯೇ.? ಶಿವಮೊಗ್ಗದ ಜನತೆಗೆ ಗೀತಾ ಅವರು ಪರಿಚಯವೇ ಇರುವ ಹಾಗಿಲ್ಲ. ಗೀತಾ ಅವರಿಗೆ ಅನುಭವದ ಕೊರತೆ.  ರಾಜಕೀಯ ಕುಟುಂಬದಲ್ಲಿ ಹುಟ್ಟಿ ಬೆಳೆದವರಾದರೂ, ಮದುವೆಯಾದ ನಂತರ ಮನೆಯ ಗೃಹಿಣಿಯಾಗಿ ಇದ್ದವರು. ಕೇವಲ ಕ್ಲೀನ್ ಹ್ಯಾಂಡ್ ಹಾಗಿದ್ದರೆ ಸಾಕೇ.? ಏಕಾ ಏಕೀ ಸಂಸತ್ ಪ್ರವೇಶ ಎಷ್ಟು ಸರಿ.? ಆಗಾದರೆ ಗೆದ್ದರೆ ತಾನೇ ಅನುಭವ ಸಿಗುವುದು ಎಂದು ನೀವೆನ್ನಬಹುದು. ಖಂಡಿತ, ಮೊದಲು ಪಂಚಾಯಿತಿ ಸದಸ್ಯರಾಗಿ, ಶಾಸಕರಾಗಿ ಅನುಭವ ಪಡೆಯಿರಿ. ಒಂದೇ ಸಲ 7-8 ವಿಧಾನಸಭಾ ಕ್ಷೇತ್ರಗಳನ್ನು ನಿಭಾಯಿಸುವುದು ಅಸ್ತು ಸಲೀಸಾ.? ಯಡಿಯೂರಪ್ಪನವರು ಮುಖ್ಯಮಂತ್ರಿಯ ಸ್ಥಾನದಲ್ಲಿದ್ದಾಗಲೇ ಜೈಲು ಸೇರಿದ್ದವರು. ಇದು ರಾಜ್ಯದ ಇತಿಹಾಸದಲ್ಲೇ ಪ್ರಥಮ. ಕರ್ನಾಟಕದಲ್ಲಿ ಬಿ‌ಜೆ‌ಪಿಯನ್ನು ಕಟ್ಟಿ, ಬೆಳೆಸಿ. ಬಿ‌ಜೆ‌ಪಿಗೋಸ್ಕರ  ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿ‌ಜೆ‌ಪಿಯನ್ನು ಅಧಿಕಾರಕ್ಕೆ ತಂದು ಉಳಿಸಿಕೊಳ್ಳುವಲ್ಲಿ ವಿಫಲರಾದರು. ಕೆ‌ಜೆ‌ಪಿಯನ್ನು ಕಟ್ಟಿ ಯಾವುದೇ ಸುಖ ಸಿಗದೆ, ನರೇಂದ್ರ ಮೋದಿ ಹೆಸರಿಟ್ಟುಕೊಂಡು ಮತ್ತೆ ಬಿ‌ಜೆ‌ಪಿಗೆ ವಾಪಸ್ಸಾಗಿದ್ದಾರೆ. ಸುಮಾರು ಕೇಸುಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಯಡಿಯೂರಪ್ಪ ಗೆದ್ದು ದಿಲ್ಲಿಗೆ ಹೋದರೆ ಮಾತ್ರ ರಾಜ್ಯ ಬಿ‌ಜೆ‌ಪಿ ಮತ್ತೆ ಉನ್ನತ ಸ್ಥಾನಕ್ಕೇರಲು ಸಾಧ್ಯ ಇಲ್ಲವಾದಲ್ಲಿ ಅದೇ ರಾಗ, ಅದೇ ತಾಳ. ಅಟಲ್ ಬಿಹಾರಿ ವಾಜಪೇಯಿಯವರು ಮೌನಿಯಾದ ಮೇಲೆ ಬಿ‌ಜೆ‌ಪಿ ನಾಯಕರಿಗೆ ಯಾರ ಭಯವೂ ಇಲ್ಲದಂತಾಗಿದೆ. ಯಾರು ಗೆದ್ದರೆ ನಮಗೇನು.? ಎಂದಿನಂತೆ ಕೆಲಸಕ್ಕೆ ಒಗಲೇಬೇಕು. ಕೆಲಸಕ್ಕೆ ಹೋಗುವ ರಸ್ತೆ, ರಸ್ತೆಯಲ್ಲಿ ಒಗುವ ಬಸ್ಸು ಉತ್ತಮವಾಗಿದ್ದರೆ ಸಾಕು. ಕ್ಷೇತ್ರಕ್ಕೆ ಒಂದಷ್ಟು ವಿಶೇಷ ಅನುದಾನ ಹಾಗೂ ಸಂಸದರ ನಿಧಿ ಬಳಕೆಯನ್ನು ಉತ್ತಮ ಕೆಲಸಗಳಿಗೆ ಬಳಸಿಕೊಂಡರೆ ಸಾಕು. ಸರ್ಕಾರದ ಸಂಸದರ ನಿಧಿಯನ್ನೇ ಬಳಸಿಕೊಳ್ಳದ ಈಗಿನ ಸಂಸದರು ಸಮಾಜ ಸೇವೆ ಹೆಸರಿನಲ್ಲಿ ಏನೇನು ಮಾಡುತ್ತಾರೋ ಆ ದೇವರೇ ಬಲ್ಲ. ಬೇಕೆಂದಾಗ ಸಿಗುವ ಒಳ್ಳೆಯ ನಾಯಕನನ್ನು ಆರಿಸಿ. ತಪ್ಪದೇ ಮತದಾನ ಮಾಡಿ. ಈ ಅವಕಾಶ 5ವರ್ಷಕ್ಕೊಮ್ಮೆ ಮಾತ್ರ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):