ಆಧ್ಯಾತ್ಮ ಸಾಧಕ ಶ್ರೀ ಮುಕುಂದೂರು ಸ್ವಾಮಿಗಳು

5


(ಇದು ಪುಸ್ತಕ ಪರಿಚಯದ ರೂಪದಲ್ಲಿರುವ ಲೇಖನ.


ಮೂಲ ಪುಸ್ತಕದ ಹೆಸರು : ಯೇಗ್ದಾಗೆಲ್ಲಾ ಐತೆ. ಲೇಖಕರು : ಶ್ರೀ ಬೆಳಗೆರೆ ಕೃಷ್ಣ ಶಾಸ್ತ್ರಿ)


 


ಇದು ತುಂಬಾ ಸರಳವಾಗಿ ಓದಿಸಿಕೊಳ್ಳುವ ಪುಸ್ತಕವಾದರೂ, ಸರಳತೆಯೊಡನೆಯೇ, ಗಹನವಾದ ಆಧ್ಯಾತ್ಮಿಕ ಸಾಧನೆಯನ್ನು ಮಾಡಿದ ಓರ್ವ ಸ್ವಾಮಿಗಳ ವಿಚಾರಗಳನ್ನು ತಿಳಿಸುವ ಕೃತಿ. ಹಳ್ಳಿಗಾಡಿನ ಸಾಧಕರೊಬ್ಬರ ವಿಚಾರಗಳನ್ನು ಪರಿಚಯ ಮಾಡಿಕೊಡುವ ಬೆಳಗೆರೆ ಕೃಷ್ಣಶಾಸ್ತ್ರಿಯವರ ಪ್ರಯತ್ನ ಬಹಳ ಅಪರೂಪದ್ದು ಎನ್ನಬಹುದು. ೨೦ನೆಯ ಶತಮಾನದಲ್ಲಿ ಮುಕುಂದೂರು ಸ್ವಾಮಿಗಳನ್ನು ಕಂಡು, ಅವರೊಡನೆ ಒಡನಾಡಿದ ಬೆಳಗೆರೆ ಸ್ವಾಮಿಗಳು, ಆ ಸ್ವಾಮಿಗಳ ಕುರಿತು ಮತ್ತು ಅವರ ಆಧ್ಯಾತ್ಮಿಕ ಸಾಧನೆಗಳ ಕುರಿತು ಓದುಗರು ಕುತೂಹಲ ತಾಳುವಂತೆ ಮಾಡುತ್ತಾರೆ.


ಕನ್ನಡದಲ್ಲಿ ಈ ತೆರನ ಪುಸ್ತಕಗಳು ತುಂಬಾ ಕಡಿಮೆ. ಇಂಗ್ಲಿಷ್ ಮೂಲದಿಂದ ಕನ್ನಡಕ್ಕೆ ಅನುವಾದವಾಗಿರುವ "ಹಿಮಾಲಯಮಹಾತ್ಮರ ಸನ್ನಿಧಿಯಲ್ಲಿ" ಪುಸ್ತಕವನ್ನು ನೆನಪಿಸುವ ಈ ಪುಟ್ಟ ಪುಸ್ತಕವು, ಆಧ್ಯಾತ್ಮಿಕ ಮತ್ತು ಯೋಗದ ಕುರಿತು (ಯೋಗಾಸನ ಅಲ್ಲ) ಆರೋಗ್ಯಕರ ಕುತೂಹಲವನ್ನು ಹುಟ್ಟಿಸಬಲ್ಲದು. ಧ್ಯಾನ, ಆಧ್ಯಾತ್ಮ, ಮೊದಲಾದವುಗಳ ಪರಿಚಯ ಮಾಡಿಕೊಳ್ಳಲು, ಸಾಧಕರ ಆಧ್ಯಾತ್ಮಿಕ ಸಾಧನೆಗಳ ಗಹನತೆಯನ್ನು ಗ್ರಹಿಸಲು, ಆ ರಂಗದಲ್ಲಿ ಸ್ವಲ್ಪ ಪೂರ್ವ ಸಿದ್ದತೆಯೂ ಬೇಕಾಗುತ್ತದೇನೊ - ಶಾಸ್ತ್ರೀಯ ಸಂಗೀತವನ್ನು ಸಂಪೂರ್ಣವಾಗಿ ಆಸ್ವಾದಿಸಲು, ಆ ಕುರಿತು ಸ್ವಲ್ಪ ಪರಿಚಯ ಇದ್ದರೆ ಅನುಕೂಲವಾಗುವ ರೀತಿ.


ಆರಂಭದಿಂದಲೇ ಸರಳವಾಗಿ ಓದಿಸಿಕೊಳ್ಳುವಂತೆ ಕಾಣುವ ಈ ಪುಸ್ತಕದ ವಿಚಾರಗಳು ಪೂರ್ತಿಯಾಗಿ ಅರ್ಥವಾಗಲು ಸಾಕಷ್ಟು ಚಿಂತನೆ ಅಗತ್ಯವೆನಿಸುತ್ತದೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಕಡೂರು ತಾಲೂಕಿನ ದೇವನೂರಿನಲ್ಲಿ ೧೯೪೯ರಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡರು. ಆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪವಾಡ ಸದೃಶ ವಯೋವೃದ್ಧರೊಬ್ಬರು ಆಗಾಗ ಬಂದು ಹೋಗುತ್ತಿರುವರೆಂದು ಸ್ಥಳೀಯರು ಹೇಳುವುದನ್ನು ಕೇಳಿ ಆಶ್ಚರ್ಯಚಕಿತರಾದರು. ಅವರನ್ನು ಭೇಟಿಯಾಗುವ ಹಂಬಲವನ್ನು ಮನದಲ್ಲೇ ಚಿಂತಿಸುತ್ತಿದ್ದಾಗ, ಒಂದು ದಿನ ಇವರ ಮನಸ್ಸಿನ ಆಸೆಯನ್ನು ತಿಳಿದುಕೊಂಡವರಂತೆ, ಸ್ವಾಮಿಗಳು ಬಂದು ಇವರೊಡನೆ ಮಾತನಾಡುತ್ತಾರೆ. ನಂತರ ಅವರ ಶಿಷ್ಯರ ರೀತಿ ವರ್ತಿಸುವ ಕೃಷ್ಣ ಶಾಸ್ತ್ರಿಗಳು, ಆ ಸ್ವಾಮಿಗಳ ಪವಾಡರೂಪಿ ದಿನಚರಿಯನ್ನು ಈ ಪುಸ್ತಕದಲ್ಲಿ ದಾಖಲಿಸಲು ಯತ್ನಿಸುತ್ತಾರೆ.


ಶಾಸ್ತ್ರಿಗಳು ದಾಖಲಿಸಿದಂತೆ, ಮುಕುಂದೂರು ಸ್ವಾಮಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರಲ್ಲ. ಅವರು ಮಾತನಾಡುವ ಶೈಲಿಯೂ ತೀರಾ ಮುಗ್ಧ ಹಳ್ಳಿಯವರ ರೀತಿ. ಯೋಗವನ್ನು ಆ ಸ್ವಾಮಿಗಳು "ಯೇಗ" ಎಂದು ಹಳ್ಳಿಭಾಷೆಯಲ್ಲಿ ಹೇಳಿತ್ತಿದ್ದರಲ್ಲದೆ, ಯೋಗದಲ್ಲಿ ನಮಗೆ ಬೇಕಾದ ಎಲ್ಲವೂ ಇದೆ ಎನ್ನುವದನ್ನು "ಯೇಗ್ದಾಗೆಲ್ಲಾ ಐತೆ" ಎನ್ನುತ್ತಿದ್ದರಂತೆ. ಆ ಶಬ್ದಗಳನ್ನು ಅರ್ಥಪೂರ್ಣವಾಗಿ ಪುಸ್ತಕದ ಹೆಸರಿಗೆ ಬಳಸಿಕೊಂಡಿದ್ದಾರೆ ಬೆಳಗೆರೆ ಕೃಷ್ಣ ಶಾಸ್ತ್ರಿಗಳು. ಹಾಗಿದ್ದೂ, ವಿದ್ವಜ್ಜರು ಕೂಡಿರುವ ಸಭೆಗಳಲ್ಲಿ, ಆಧ್ಯಾತ್ಮಿಕ ವಿಚಾರಗಳ ಕುರಿತು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನ ನೀಡಬಲ್ಲವರಾಗಿದ್ದರು ಎಂದು ಉದಾಹರಣೆ ಸಹಿತ ಶಾಸ್ತ್ರಿಗಳು ದಾಖಲಿಸುತ್ತಾರೆ. ಮುಕುಂದೂರು ಬೆಟ್ಟದಲ್ಲಿ ಸಾಧನೆ ಮಾಡಿದವರಾದ್ದರಿಂದ ಅವರಿಗೆ ಮುಕುಂದೂರು ಸ್ವಾಮಿಗಳುಎನ್ನುವ ಹೆಸರು ಹೊರತು, ಅವರ ನಿಜ ನಾಮ ಯಾರಿಗೂ ಗೊತ್ತಿಲ್ಲ. (ಹೊಳೆನರಸೀಪುರದ ಹತ್ತಿರ ಇರುವ ಹಳ್ಳಿಯೇ ಮುಕುಂದೂರು). ನಂತರದ ದಿನಗಳಲ್ಲಿ ಹಾಸನ ಜಿಲ್ಲೆಯ ಸುತ್ತಮುತ್ತ ಓಡಾಡಿಕೊಂಡಿದ್ದರು ಈ ಸ್ವಾಮಿಗಳು.


ಮುಕುಂದೂರು ಸ್ವಾಮಿಗಳಿಗೆ ವಯಸ್ಸು ಎಷ್ಟು ಆಗಿರಬಹುದು? ಈ ರೀತಿಯ ಜಿಜ್ಞಾಸೆ ಕೃಷ್ಣ ಶಾಸ್ತ್ರಿಗಳನ್ನು ಮತ್ತು ಹಳ್ಳಿಯವರನ್ನು ಆಗಾಗ ಕಾಡಿದ್ದೂ ಉಂಟು. ಎಪ್ಪತ್ತು, ನೂರು, ನೂರ ನಲ್ವತ್ತು - ಈ ರೀತಿಯ ನಾನಾ ಊಹೆಗಳು ಇದ್ದವು. ತಮಗೆ ನೂರ ನಲ್ವತ್ತು ವರ್ಷವಾಗಿರಬಹುದೆ ಎಂದು ಕೇಳಿದರೆ, ಆಗಿರಲೂ ಬಹುದು ಎನ್ನುತ್ತಿದ್ದರು ಸ್ವಾಮಿಗಳು. ಅರಸಿಕೆರೆ ಮತ್ತು ಬಾಣಾವರದ ಮಧ್ಯೆ, ಮಹಾರಾಜರ ಕಾಲದಲ್ಲಿ ರೈಲ್ವೆ ಹಳಿಗಳನ್ನು ಹಾಕುವಾಗ, ಅವರು ಅಲ್ಲಿ ಮಣ್ಣು ಹೊತ್ತು, ಕೂಲಿ ಕೆಲಸ ಮಾಡಿದ್ದರಂತೆ! ಅವರ ವಯಸ್ಸೇ ಒಂದು ಪವಾಡವಾಗಿತ್ತು. ಹಳ್ಳಿಯವರೊಂದಿಗೆ ಆತ್ಮೀಯವಾಗಿ ಬೆರೆತು, ಅವರು ನೀಡಿದ್ದನ್ನು ತಿನ್ನುತ್ತಿದ್ದ ಸ್ವಾಮಿಗಳು, ನಾಲ್ಕಾರು ತಿಂಗಳುಗಳ ಕಾಲ ಸಾಧನೆಗಾಗಿ ಕಣ್ಮರೆಯಾಗುತ್ತಿದ್ದರು. ಒಂದೇ ಸಮಯದಲ್ಲಿ ಹಲವು ಕಡೆ ಕಾಣಿಸಿಕೊಂಡಿದ್ದೂ ಉಂಟು ಎಂದು ಹಳ್ಳಿಗರು ಹೇಳುತ್ತಿದ್ದರಂತೆ. ಮುಕುಂದೂರು ಸ್ವಾಮಿಗಳು ಸಣ್ಣಪುಟ್ಟ ಪವಾಡಗಳನ್ನು ಮಾಡಿದ ಉದಾಹರಣೆಗಳನ್ನು ಬೆಳಗೆರೆ ಕೃಷ್ಣ ಶಾಸ್ತ್ರಿಗಳು "ಯೇಗ್ದಾಗೆಲ್ಲಾ ಐತೆ" ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪ್ರಸವ ವೇದನೆಯಲ್ಲಿದ್ದ ಹಳ್ಳಿಯ ಮಹಿಳೆಗೆ, ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗುವಂತೆ, ಖರ್ಚಿಗಾಗಿ ನೂರು ರೂಪಾಯಿಯ ನೋಟು ದೊರಕಿಸಿದ್ದು, ಕಾಯಿಲೆಯಿಂದ ನರಳುವ ಹುಡುಗನಿಗೆ ಚಿಕಿತ್ಸೆ ನೀಡಲು ಬಂದ ವೈದ್ಯರ ಚೀಲದಲ್ಲಿ, ಆ ಕಾಯಿಲೆಗೆ ಅಗತ್ಯವಾದ ಇಂಜಕ್ಷನ್ ದೊರಕುವಂತೆ ಮಾಡಿದ್ದು, (ಪುಟ ೧೦೯), ದಟ್ಟ ಕಾಡಿನ ಮಧ್ಯೆ ಎಳನೀರು ದೊರಕುವಂತೆ ಮಾಡಿದ್ದು, ಈ ರೀತಿಯ ನಾಲ್ಕಾರು ಉದಾಹರಣೆಗಳು ಇಲ್ಲಿವೆ.


ಸ್ವಾಮಿಗಳು ಬೀಗ ಹಾಕಿದ ಕೊಠಡಿಯಿಂದ ಆರಾಮಾಗಿ ಹೊರಬಲ್ಲವರಾಗಿದ್ದರು. ಈ ರೀತಿಯ ಪವಾಡಗಳು ಪುಸ್ತಕದಲ್ಲಿ ಸಾಂದರ್ಭಿಕವಾಗಿ ಬರುತ್ತವಷ್ಟೇ ಹೊರತು, ಪವಾಡಗಳ ವೈಭವೀಕರಣ ಇಲ್ಲಿ ಇಲ್ಲ. ಇಂತಹ ಚಮತ್ಕಾರಗಳಿಗಿಂತಲೂ, ಅವರು ಆಧ್ಯಾತ್ಮದ ಕುರಿತು ಸರಳ ಭಾಷೆಯಲ್ಲಿ ನೀಡುವ ವಿವರಗಳು ಈ ಪುಸ್ತಕದ ತಿರುಳು. ಆಧ್ಯಾತ್ಮದ ವಿವರಗಳೂ ಸಹಾ ಸರಳ ರೂಪದಲ್ಲೇ ಇವೆ ಎನ್ನಬಹುದೇ ಹೊರತು, ತೀರಾ ಗಹನವೆಂದು ಮೊದಲಿಗೆ ಅನಿಸುವುದಿಲ್ಲ. ಆದರೆ ಆಧ್ಯಾತ್ಮಿಕ ವಿಚಾರಗಳೇ ಹಾಗೆ ಇರಬಹುದು, ಇತ್ತ ಸರಳವೂ ಹೌದು, ಅದರಲ್ಲೇ ಸಂಕೀರ್ಣತೆಯನ್ನೂ ಅಡಗಿಸಿಕೊಂಡಿರಲೂಬಹುದು. ಮುಖ್ಯವಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳು, ತಾವು ಕಂಡಂತೆ ಮುಕುಂದೂರು ಸ್ವಾಮಿಗಳ ಚಿತ್ರಣವನ್ನು ಇಲ್ಲಿ ನೀಡುತ್ತಾರೆ. ದಿನನಿತ್ಯದ ಮಾತುಗಳಲ್ಲೇ ಆಧ್ಯಾತ್ಮದ ತಿರುಳನ್ನು ಜೋಡಿಸಿ, ಹಳ್ಳಿಯ ಜನರಿಗೆ ಸರಳವಾಗಿ ವಿವರಿಸುವ ಸ್ವಾಮಿಗಳ ಶೈಲಿಯನ್ನು ಇಲ್ಲಿ ದಾಖಲಿಸಲಾಗಿದೆ.


೧೯೬೬ರಲ್ಲಿ ಲೇಖಕರು ಬೆಳಗೆರೆಗೆ ಬಂದು ನೆಲಸುತ್ತಾರೆ. ಆ ನಂತರ, ಮುಕುಂದೂರು ಸ್ವಾಮಿಗಳ ದೇಹಾಂತ್ಯವಾಯಿತು. ಅದರ ವಿಚಾರವೂ ಲೇಖಕರಿಗೆ ತಾನಾಗಿಯೇ, ಪ್ರೇರಣೆಯ ಮೂಲಕ ತಿಳಿಯುತ್ತದೆ. ಬಾಣಾವರದ ಸಮೀಪದ ಹೇಮಗಿರಿಯಲ್ಲಿ ಮುಕುಂದೂರು ಸ್ವಾಮಿಗಳ ಸಮಾಧಿಯಾಗುತ್ತದೆ. ಆ ಸಂದರ್ಭದಲ್ಲಿ, ಅವರನ್ನು ನಂಬಿದ್ದ ಓರ್ವ ವೃದ್ಧ ಮಹಿಳೆ ಗೌರಜ್ಜಿ ಎಂಬಾಕೆಯು, ಸ್ವ ಇಚ್ಚೆಯಿಂದ ದೇಹ ತೊರೆಯುವ ಘಟನೆಯನ್ನು ಲೇಖಕರು ದಾಖಲಿಸಿದ್ದಾರೆ. ಮೊದಲಿಗೆ ಭಕ್ತಳ ಸಮಾಧಿ,ನಂತರ ಗುರುಗಳ ಸಮಾಧಿ ಎಂದು ನೆರೆದಿದ್ದ ಹಿರಿಯ ಸಾಧುಗಳು ಅಭಿಪ್ರಾಯಪಟ್ಟು, ಅಂತೆಯೇ ನಡೆಯುತ್ತದೆ. ಮುಕುಂದೂರು ಸ್ವಾಮಿಗಳು ದೇಹ ತೊರೆದರೂ, ಅವರು ಅಮರ ಎಂಬ ಸೂಚನೆಯನ್ನು ನೀಡುವ ಈ ಪುಸ್ತಕ ನಿಜಕ್ಕೂ ಅಪರೂಪದ ವಿಚಾರವನ್ನು ದಾಖಲಿಸುತ್ತಿದೆ ಎನ್ನಬಹುದು.


ಆಧ್ಯಾತ್ಮದಂತಹ ಸಂಕೀರ್ಣಸ್ವರೂಪದ ವಿಚಾರವನ್ನು ಪುಸ್ತಕದಲ್ಲಿ ಹಿಡಿದಿಡುವುದು ಕಷ್ಟವೇನೋ ಅನಿಸಿದರೂ, ಅಂತಹ ಒಂದು ವಲಯಕ್ಕೆ ಪರಿಚಯಾತ್ಮಕ ಪ್ರವೇಶದ ರೂಪದಲ್ಲಿರುವ ಮುಕುಂದೂರು ಸ್ವಾಮಿಗಳ ಕುರಿತಾದ ಈ ಪುಸ್ತಕ ಓದುಗರಿಗೆ ಅಷ್ಟರ ಮಟ್ಟಿಗಿನ ಸಿದ್ಧತೆಯನ್ನು ದೊರಕಿಸುತ್ತದೆ ಎನ್ನಬಹುದು.(ಚಿತ್ರ : "ಯೇಗ್ದಾಗೆಲ್ಲಾ ಐತೆ " ಪುಸ್ತಕದಲ್ಲಿರುವ ಚಿತ್ರ)


 


 


  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ಶಶಿಧರ್ ರವರೇ, ಒಂದು ಒಳ್ಳೆಯ ಪುಸ್ತಕವನ್ನು ಸಂಪದಿಗರಿಗೆ ಪರಿಚಯಿಸಿದ್ದೀರಿ. ಆದ್ಯಾತ್ಮವೆಂದರೆ ಕಬ್ಬಿಣದ ಕಡಲೆಯಲ್ಲ, ಯಾರು ಬೇಕಾದರೂ ಆದ್ಯಾತ್ಮದ ಆಳಕ್ಕೆ ಇಳಿದು ನಮ್ಮ ಜೀವನದ ಅರ್ಥವನ್ನು ತಿಳಿದುಕೊಳ್ಳಲು ಪ್ರಯತ್ನಿಸಬಹುದೆಂಬ ಸರಳವಾದ ನಿರೂಪಣೆ ಇಲ್ಲಿದೆ. ಅತ್ಯಂತ ಸಾತ್ವಿಕ ಬದುಕನ್ನು ಬಾಳಿದ ಮುಕುಂದೂರು ಸ್ವಾಮಿಗಳು ಪುಣ್ಯಾತ್ಮರೇ ಸರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ಹೊತ್ತಗೆಯ ಮಹಿಮೆಯೇ ಅಂಥದು! ಇದಾಗಲೆ ಅನೇಕರು ಈ ಹೊತ್ತಗೆಯ ಬಗ್ಗೆ ಬರೆದಿದ್ದಾರೆ. ಇದನ್ನು ನಾವು ನಾಟಕರೂಪಕ್ಕೆ ತಂದು ಅನೇಕ ಕಡೆ ಪ್ರದರ್ಶನ ಕೊಟ್ಟಿದ್ದೂ ಆಯಿತು. ಬರೆಯುವ ತೆವಲಿರುವವರಿಗೆಲ್ಲ ತನ್ನ ಬಗ್ಗೆ ಬರೆ ಎಂದು ಪ್ರೇರೇಪಿಸುತ್ತದೆ ಈ ಹೊತ್ತಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ನಾಟಕವನ್ನು ನೋಡುವ ಅವಕಾಶ ಇನ್ನೂ ದೊರೆತಿಲ್ಲ. ಮುಂದಿನ ಶೋ ಯಾವಾಗ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ಬಾರಿ ಭಾರತಕ್ಕೆ ಬ0ದಿದ್ದಾಗ 'ಯೇಗ್ದಾಗೆಲ್ಲ ಐತೆ' ಕೈಗೆ ಸಿಕ್ಕಿತು. ಒಳ್ಳೆಯ ಪುಸ್ತಕ. 'ಕೋಡಗನ ಕೋಳಿ ನು0ಗಿತ್ತಾ' ಬಗೆಗಿನ ವಿವರಣೆ ಸೊಗಸಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಬರೆದ ಇನ್ನೊಂದು ಪುಸ್ತಕ "ಮರೆಯಲಾದೀತೆ?" ಸಿಕ್ಕಿತಾ? ಅದರಲ್ಲೂ ಸ್ವಾಮಿಗಳ ಕುರಿತು ಮತ್ತು ಇತರ ವಿಚಾರಗಳ ಕುರಿತು ಸೊಗಸಾಗಿ ಬರೆದಿದ್ದಾರೆ ಶಾಸ್ತ್ರಿಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಪರಿಚಯಾತ್ಮಕ ಲೇಖನ ಶಶಿಧರರೆ, ಆ ಪುಸ್ತಕವನ್ನು ಒಮ್ಮೆ ಓದಲೇಬೇಕೆ೦ದು ಪ್ರೇರೇಪಿಸುವ೦ತಿದೆ. ಸಾಧಕರ ಬದುಕಿಗೆ ಆ ರೀತಿಯ ಚು೦ಬಕಶಕ್ತಿ ಇರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಖಂಡಿತಾ ಓದಿ. ಮುಖ್ಯವಾಗಿ ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಹೊಸ ಆಯಾಮ ದೊರೆತೀತು. ಹಲವು ಪವಾಡಗಳ ವಿವರಗಳೂ ಆ ಪುಸ್ತಕದಲ್ಲಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಂದೊಳ್ಳೆ ಪುಸ್ತಕವನ್ನು ಮತ್ತೆ ಜ್ಞಾಪಿಸಿದ ನಿಮಗೆ ಧನ್ಯವಾದ. ಇದು ಓದಲೇಬೇಕಾದ ಪುಸ್ತಕ. ಬೆಳೆಗೆರೆ ಕೃಷ್ಣಶಾಸ್ರಿಗಳ ನಿಸ್ವಾರ್ಥ ಬದುಕು ಕೂಡ ನಮ್ಮೆಲ್ಲರಿಗೆ ಪ್ರೇರಣೆ ಕೊಡುವಂತದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಯೋಗವನ್ನು ಕೈಗೆಟುಕಿಸಿಕೊಳ್ಳ ಬೇಕಾದರೆ ಯೇಗಲೇಬೇಕು (ಕಷ್ಟ ಪಡಲೇಬೇಕು) ಆದರೆ ನಿರೂಪಣೆಯನ್ನು ಅದರ ಬಗ್ಗೆ ಚೆನ್ನಾಗಿ ಅರಿತವರು ಮಾತ್ರ ಸರಳವಾಗಿ ಕೊಡಬಲ್ಲರು/ಬರೆಯಬಲ್ಲರು. ಒಳ್ಳೆಯ ಪುಸ್ತಕದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಶಶಿಧರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಪುಸ್ತಕದ ಪರಿಚಯ ಮಾಡಿದ್ದೀರಿ, ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಶಿದರ್ ನಿಮ್ಮ ಲೇಕನ ಓದಿ ಮುಗಿಸಿ ಹತ್ತು ನಿಮಿಶವು ಕಳೆದಿರಲಿಲ್ಲ :)) ನನ್ನ ಸ್ನೇಹಿರರೊಬ್ಬರು 'ಯೇಗ್ದಾಗೆಲ್ಲ ಐತೆ' ಪುಸ್ತಕ ತ0ದು ಇದನ್ನು ಓದಿ ಚೆನ್ನಾಗಿದೆ ಅಮ್ತ ಕೊಟ್ಟು ಹೋದರು !!!!! ಪ್ರಾರ0ಬಿಸಿದ್ದೇನೆ . ಮತ್ತೆ ಇದೇ ಪುಸ್ತಕ ಪರಿಚಯ ಕಳೆದ ನವೆಮ್ಬರ್ ನಲ್ಲಿ ಅಭ್ದುಲ್ ರವರು ಮಾಡಿದಮ್ತಿದೆ ಸ್0ಪದದಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಂಪದಕ್ಕೆ ಲಾಗ್-ಇನ್ ಆಗಿ ಸುಮಾರು ತಿಂಗಳುಗಳೇ ಆಗಿದ್ದವು. ಇವತ್ತು ಅಕಸ್ಮಾತಾಗಿ ಲಾಗ್-ಇನ್ ಆದ ತಕ್ಷಣ ಕಂಡ ಲೇಖನ ಇದು. ಎಷ್ಟು ಆಕಸ್ಮಿಕ ಎಂದರೆ ನೆನ್ನೆ ತಾನೆ ನಾನು ಈ ಪುಸ್ತಕವನ್ನು ಓದು ಮುಗಿಸಿದೆ. ಮಹಾಭಾರತದ, ರಾಮಾಯಣದ ಬಗ್ಗೆ ಅಥವಾ ಜೀವನದ ಚಿಕ್ಕ ಚಿಕ್ಕ ಹಂತಗಳಲ್ಲೂ ಆಧ್ಯಾತ್ಮ ಹೇಗೆ ಅಡಗಿದೆ ಎಂಬುವುದರ ಬಗ್ಗೆ ಸರಳವಾಗಿ ವಿವರಿಸಿದ್ದಾರೆ. "ಬಂದಿದ್ದು ಹೋಗತ್ತೆ, ಇಲ್ಲಿದ್ದಿದ್ದು ಹೋಗಲ್ಲ, ಇಲ್ಲೇ ಇರತ್ತೆ" ಅವರು ಹೇಳಿರುವ ಮಾತು "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಅನ್ನೊದನ್ನ ತಿಳಿಸುತ್ತಾರೆ. ಮುಕುಂದೂರು ಸ್ವಾಮಿಗಳನ್ನು ಕಂಡು ಅವರ ಜೊತೆ ಒಡನಾಡಿದವರು ತುಂಬ ಪುಣ್ಯವಂತರು !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಬಳಸಿದ ಶಬ್ದ "ಆಕಸ್ಮಿಕ", ಅದು ಅ0ದರೆ, ಪುಸ್ತಕ ಓದಿದ ತಕ್ಶ್ಹಣ ನಿಮಗೆ ಈ ಲೇಖನ ಓದಲು ದೊರಕಿತದ್ದು, ಕೇವಲ ಆಕಸ್ಮಿಕ ಅಲ್ಲ ಅ0ತಲೇ ನನ್ನ ಅನಿಸಿಕೆ. ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಧಸಾರಥಿಯವರೆ, ನೀವು ನಿಜಕ್ಕೂ ಪುಣ್ಯವನ್ತರು! ನೆನಸಿದಾಗ, ನಿಮಗೆ ಪುಸ್ತಕ ಓದುವ ಭಾಗ್ಯ ದೊರಕಿತು! ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪುಸ್ತಕದ ವಿಶ್ಲೇಷಣೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು. ಯೋಗ - ಆಧ್ಯಾತ್ಮದ - ತರ್ಕದ ಅತಿ ವಿಶಾಲ ವಿವರ, ನೋಟಗಳನ್ನು ಚುಟುಕಾಗಿ ಹಾಗೂ ಯಾರಿಗೂ ಅರ್ಥ ಮಾಡಿಸುವ ಸರಳ ರೀತಿಯಿಂದ ತಿಳಿಗೊಡಿಸುವ ಮುಕುಂದೂರು ಸ್ವಾಮಿಗಳ ಮಹಿಮೆಯನ್ನ ಎಷ್ಟು ಹೊಗಳಿದರೂ ಸಾಲದು. ಅವರ ಇನ್ನೊಂದು ಉಪಮೆ ನೆನಪಾಯ್ತು ಏನೆಂದರೆ ಅವರು ಹಿಮಾಲಯದ ಹಿಮವನ್ನು ನಮ್ಮಲ್ಲಿರುವ ತಮೋಗುಣಗಳು ಅನ್ನೋದು, ಆ ಹಿಮ ಕರಗಬೇಕು, ಶಿವನಂಗೆ / ಲಿಂಗದಂತೆ ಆಗಬೇಕು ಅನ್ನೋದು ! - ಅರವಿಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.