ಆತ್ಮವಿಶ್ವಾಸಕ್ಕೊಂದು ಪುಸ್ತಕ ಹಿಡಿಯಿರಿ....

3.727275

* ನನಗೊಂದು ಅಭ್ಯಾಸವಿದೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ಈ ಅಭ್ಯಾಸ ನನಗೆ ಪಿಯುಸಿಯಿಂದ ಅಂದರೆ 1996ರಿಂದ ಪ್ರಾರಂಭವಾಗಿದೆ. ಸದಾ ಯಾವಾಗಲೂ ಕೈಯಲ್ಲೊಂದು ಪುಸ್ತಕ ಹಿಡಿದಿರುವುದು. ಅದು ದಿನಕ್ಕೊಂದು ಹೊಸದಾಗಿದ್ದರೆ ನನ್ನಲ್ಲಿ ಇನ್ನು ಹೆಚ್ಚಿನ ಚೈತನ್ಯ ಇರುತ್ತದೆ ಎಂದು ಭಾವಿಸಿರುವವನು ನಾನು. 
ನನ್ನ ಕೆಲವು ಗೆಳೆಯರು ಹೇಳುತ್ತಾರೆ ಅಲ್ಲೋ ದಿನಾಲೂ ಯಾವಗಲೂ ಪುಸ್ತಕ ಕೈಯಲ್ಲಿ ಹಿಡಿದಿರುತ್ತಿಯಲ್ಲ ಅದು ಕೊಳಕಾಗಿ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ನದಿಯ ಮಧ್ಯೆಯಲ್ಲಿರುವ ಕಲ್ಲು ನೀರಿನ ಹರಿವಿನ ಸೆಳೆತಕ್ಕೆ ಶಿಲೆಯಂತಾಗುವುದಿಲ್ಲವೇ. ಅದು ಪಾಚಿಗಟ್ಟಿದ ಮಾತ್ರಕ್ಕೆ ಕೊಳಕಾಗುವುದೇ. 
ಸ್ವಚ್ಛ ಮತ್ತು ಸುಂದರವಾಗಿ ನಿರ್ಮಿಸಬೇಕಿರುವುದು ವ್ಯಕ್ತಿತ್ವವೇ ಹೊರತು ಪುಸ್ತಕವಲ್ಲ. ಪುಸ್ತಕ ಕೊಳಕಾಗುತ್ತದೆ (ಹಾಳಾಗದೆ) ಅಂತ ಅದನ್ನು ಹಾಗೆ ಇಟ್ಟಲ್ಲಿ ಅದರಲ್ಲಿನ ಸಂದೇಶವನ್ನು ಅರಿತುಕೊಳ್ಳುವುದು ಹೇಗೆ. ಪುಸ್ತಕ ಮನನವಾಗಬೇಕಿದ್ದಲ್ಲಿ ಅದನ್ನು ನಾವು ಉಪಯೋಗಿಸಲೇಬೇಕು. ಉಪಯೋಗಿಸಬೇಕೆಂದರೆ ಅದು ನಮ್ಮ ಬಳಿಯಲ್ಲಿರಬೇಕಲ್ಲವೇ. 
ಇಂದಿನ ಒತ್ತಡದ ಜೀವನದಲ್ಲಿ ಓದುವುದಕ್ಕಾಗಿಯೇ ಸಮಯ ನಿಗದಿ ಮಾಡಲು ಸಾಧ್ಯವೇ. ಓದುವುದು ನಮ್ಮ ಹವ್ಯಾಸವಾಗಬೇಕೇ ವಿನಹಃ ಅದು ಕರ್ತವ್ಯವಾಗಬಾರದು. ಹಾಗಾಗಿ ಪುಸ್ತಕ ನಮ್ಮ ಬಳಿ ಇರಬೇಕು ಅಂದ ಮೇಲೆ ಅದು ಕೊಳಕಾಗದೆ (ಹಾಳಾಗದೆ)ಇರಲು ಸಾಧ್ಯವೆ. ಅಷ್ಟಕ್ಕೂ ಮಹಾತ್ಮರು ಸುಮ್ಮನೆ ಹೇಳಿದ್ದಾರೆಯೇ ಮೈಮೇಲೆ ಹರಕು ಬಟ್ಟೆ ಧರಿಸಿದ್ದರು ಪರವಾಗಿಲ್ಲ ಕೈಯಲ್ಲೊಂದು ಪುಸ್ತಕ ಇರಲಿ ಅಂತ. 
ಮೊದಲು ಓದಿನ ಆಸಕ್ತಿ ಬೆಳೆಸಿಕೊಳ್ಳಲು ಪುಸ್ತಕ ಹಿಡಿದು ತಿರುಗುವುದನ್ನು ಅಭ್ಯಾಸ ರೂಢಿಸಿಕೊಳ್ಳೋಣ. ತದನಂತರ ಅದು ಜ್ಞಾನದ ಕಣಜವನ್ನು ನಮಗಾಗಿ ನೀಡುತ್ತದೆ. ಆಗ ಅದು ನಮ್ಮ ಏಳ್ಗೆಗೆ ಸಾಕಷ್ಟು ವ್ಯವಸ್ಥೆಯನ್ನು ತನ್ನಿಂತಾನೆ ಕಲ್ಪಿಸುತ್ತಾ ಹೋಗುತ್ತದೆ. ಇದೇ ಅಲ್ಲವೇ ನಿಜಕ್ಕೂ ಆಶ್ಚರ್ಯ ಎನ್ನುವುದು. 
ಭಾರತದ ಜನಸಂಖ್ಯೆಯಲ್ಲಿ ಅಂದಾಜು ಶೇ.1ರಷ್ಟಾದರು ಕುಬೇರರಿದ್ದಾರೆ ಆದರೆ ಅವರ ಆಸ್ತಿ, ಅವರಿಗೆ ಸಿಕ್ಕ ಗೌರವಗಳ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ಮಾಹಿತಿ ಇದೆ. ಆದರೆ ಒಂದಂತು ಸತ್ಯ ಅದೆ ಸಾಹಿತಿ, ಲೇಖಕರ ಕೃತಿಗಳೆಷ್ಟು, ಅವರಿಗೆ ಸಿಕ್ಕ ಪ್ರಶಸ್ತಿ ಗೌರವ ಸನ್ಮಾನಗಳೆಷ್ಟು ಅಂತ ಕೇಳಿದರೆ ಸುಲಭದಲ್ಲಿ ನಮಗೆ ಉತ್ತರ ಸಿಗುತ್ತದೆ. ಈಗ ನಿವೇ ಹೇಳಿ ಇದರಲ್ಲಿ ಯಾವುದು ಶಾಸ್ವತ. 
ಪ್ರತಿಯೊಬ್ಬರು ತಮ್ಮ ಮಕ್ಕಳು ಶಿಕ್ಷಣ ಕಲಿಯಲು ಮೊದಲು ಪ್ರಾರಂಭಿಸಿದಾಗ ಅಥವಾ ಉನ್ನತ ಶಿಕ್ಷಣಕ್ಕೆ ಹೋಗುವಾಗ ಮಕ್ಕಳಿಗೆ ಖುಷಿಯಾಗಲಿ ಅಂಥ ಬೈಕ್, ಕಾರು ಕೊಡಿಸುವ ಸಂಪ್ರದಾಯ ಬೆಳೆಯುತ್ತಿದೆ. ಇದು ಮಕ್ಕಳ ಮೇಲಿನ ವ್ಯಾಮೋಹದಿಂದಲ್ಲ ಬದಲಿಗೆ ನಮ್ಮ ಪ್ರತಿಷ್ಠೆಗೆ ಎನ್ನುವುದು ನನ್ನ ನಂಬಿಕೆ. ಇಂದು ಎಷ್ಟು ಜನ ತಮ್ಮ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಹೋಗಲಿ ಗಣ್ಯ ಮಾನ್ಯರು, ಪ್ರೀತಿಪಾತ್ರರಿಗೆ ಗೌರವ ಕಾಣಿಕೆ ನೀಡುವಾಗ ನಾವೇನು ಮಾಡುತ್ತೇವೆ. ನೂರಾರು ರೂಪಾಯಿ ಖರ್ಚು ಮಾಡಿ ಹೂಗುಚ್ಛ ನೀಡುತ್ತೇವೆ. ಬಲಗೈಯಿಂದ ತೆಗೆದುಕೊಂಡು ಎಡಗೈಗೆ ಕೊಟ್ಟರೆ ಅದರ ಮಹತ್ವ ಮುಗಿಯಿತು. ಆದರೆ ಅದರ ಅರ್ಧ ಬೆಲೆ ನೀಡಿ ಯಾವುದಾದರೊಂದು ಪುಸ್ತಕ ಖರೀದಿಸಿ ನೀಡಿದರೆ. ಅದು ಅವರಿಗೆ ಉಪಯೋಗವಾಗದಿರಬಹುದು. ಅವರನ್ನೆ ನಂಬಿದ ಒಂದು ಗುಂಪಿರುತ್ತದಲ್ಲ ಅವರಿಗಾದರೂ ಪ್ರಯೋಜನಕ್ಕೆ ಬರಬಹುದಲ್ಲವೇ.
ನಾನು ಹೈಸ್ಕೂಲ್ ಸೇರಿದ ಪ್ರಾರಂಭದ ದಿನ ನಮ್ಮ ಹಳ್ಳಿಯಲ್ಲಿ ಆಗ ಹೈಸ್ಕೂಲ್ ಇರಲಿಲ್ಲ. ನಮ್ಮ ತಂದೆಯವರು ನನಗೆ ಕಾಣಿಕೆಯಾಗಿ ನೀಡಿದ್ದು ಏನು ಗೊತ್ತೆ ಎರಡು ಪುಸ್ತಕ ಒಂದು ಸಾಮಾನ್ಯಜ್ಞಾನ(ರಸಪ್ರಶ್ನೆಗಳದ್ದು), ಇನ್ನೊಂದು ವ್ಯಕ್ತಿತ್ವ ವಿಕಾಸದ್ದು . ಆಗ ನನಗೆ ಆಶ್ಚರ್ಯವಾಗಿ ಊರು ಬಿಟ್ಟು 40 ಕಿಲೋ ಮೀಟರ್ ದೂರ ಹೋಗುವವನಿಗೆ ಪುಸ್ತಕ ಕೊಡುತ್ತಿಯಲ್ಲ ಎಂದು ಪ್ರಶ್ನಿಸಿದೆ. ಪಠ್ಯ ಪುಸ್ತಕವೆ ಭಾರವಾಗಿರುವಾಗ ಅದಕ್ಕೆ ಇವೇರಡು ಸೇರಿಸಿದ ಎಂದು ಅಸಮಾಧಾನವ್ಯಕ್ತಪಡಿಸಿದೆ. ಆಗ ನಮ್ಮ ತಂದೆಯವರು ನನಗೆ ಹೇಳಿದ್ದು ಏನು ಗೊತ್ತೆ ! ಜೀವನದಲ್ಲಿ ನೀನು ಯಾರಿಗೂ ಭಾರವಾಗೋದು ಬೇಡ ಅಂದರೆ ಈಗ ನೀನು ಪುಸ್ತಕಗಳ ಭಾರ ಹೊರಲೇಬೇಕು ಅಂದು ಕಳುಹಿಸಿಕೊಟ್ಟಿದ್ದರು. 
ಅವರು ನನಗೆ ಕೇವಲ ತಂದೆಯಾಗಿರಲಿಲ್ಲ ಸ್ನೇಹಿತ, ಗುರುವಾಗಿದ್ದರು. ಅವರ ಒಂದೊಂದು ಸಲಹೆ ಮಾರ್ಗದರ್ಶನ ಈಗ ನನಗೆ ಜೀವನದಲ್ಲಿ ಅತ್ಯುತ್ತಮ ಪಾಠಗಳಂತೆ ಕಂಡು ಬರುತ್ತಿವೆ. ಈಗ ಹೇಳಿ ಎಷ್ಟು ನಾವು ಎಷ್ಟು ಜನ ನಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ದಿನ ಬೆಳಗಿದರೆ ಸಾಕು ನಾವು ನಮ್ಮ ಕೆಲಸ ಬಿಡುವಿದ್ದಾಗ ಪ್ರತಿಷ್ಠೆಯ ಧ್ಯೂತಕವಾಗಿ ಮಕ್ಕಳನ್ನು ಕರೆದುಕೊಂಡು ಮಾರ್ಕೆಟ್‌ಗೆ ತೆರಳಿ ಏನಾದರೂ ಖರೀದಿಸುವುದು. ಅಥವಾ ಒಂದು ಸಣ್ಣ ಪ್ರವಾಸ ಇಲ್ಲವೆ ಒಂದು ಒಳ್ಳೆಯ ಹೊಟೇಲ್‌ನಲ್ಲಿ ಊಟ. ಇದರಿಂದ ನಾವು ನಮ್ಮ ಮಕ್ಕಳನ್ನು ವ್ಯವಹಾರದ ರೂವಾರಿಗಳನ್ನಾಗಿ ತಯಾರು ಮಾಡುತ್ತಿದ್ದೇವೆ. ಅಂದ ಮೇಲೆ ವೃದ್ಧಾಶ್ರಮ ಪದ್ಧತಿ ಹೆಚ್ಚಳವಾದಲ್ಲಿ ಆಶ್ಚರ್ಯವೇನಿಲ್ಲ. ಯಾಕೆಂದರೆ ಅವರಿಗೂ ಮುಂದೆ ಹೀಗೆ ಬಿಡುವಾದಾಗ ತಮ್ಮ ಮಕ್ಕಳ ಜೊತೆ ಕಾಲ ಕಳೆಯಬೇಕಾಗುತ್ತದೆ ವಯಸ್ಸಾದ ಅಪ್ಪ, ಅಮ್ಮಂದಿರ ಕಾಳಜಿಗೆ ಸಮಯವೆಲ್ಲಿರುತ್ತದೆ ಹೇಳಿ. 
ಅದಕ್ಕಾಗಿ ಏನೇನೋ ಖರೀದಿಸಿ ವ್ಯರ್ಥ ಮಾಡುವ ಬದಲು ಪುಸ್ತಕ ಖರೀದಿಸಿ ಸಾಧ್ಯವಾದರೆ ಓದಿ, ಇಲ್ಲದಿದ್ದರೆ ಬೇರೆಯವರಲ್ಲಾದರೂ ಓದುವ ಹವ್ಯಾಸ ಬೆಳೆಸಲು ಇಂದಿನಿಂದ ಪಣತೊಡಿ.
ಜ್ಞಾನ ನಾವು ಸಮಾಜಕ್ಕೆ ಕೊಡುವ ಬಹುದೊಡ್ಡ ಆಸ್ತಿ. ಅದು ಶಾಸ್ವತವಾದದ್ದು, ಪ್ರಪಂಚದಲ್ಲಿ ಶ್ರೇಷ್ಠ ವ್ಯಕ್ತಿಗಳು ಬೆಳೆದು ಬಂದಿದ್ದು ಇದೇ ಹವ್ಯಾಸದಿಂದಲೆ. ಇದರಿಂದಲೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ನಾನೀಗ ಒಂದು ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎನ್ನುವ ನಂಬಿಕೆ ನನ್ನದು ನೀವೇನಂತರಿ. 
- ಮೌನಯೋಗಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):