ಆಡುವ ಕೈಗಳು ಮಾಡಿದ ತೋಟ (ಭಾಗ – 2)

3.666665

ಉಜಿರೆ ಹೈಸ್ಕೂಲಿನ ಹಿಂದಿನ ಹೆಡ್ಮಾಸ್ತರು ಆರ್. ಎನ್. ಭಿಡೆಯವರು ರೂಪಿಸಿದ ರತ್ನಮಾನಸದ ನಿಜ ರೂವಾರಿ ವಾರ್ಡನ್ ಕಾಸ್ಮಿರ್ ಮಿನೇಜಸ್ ಅವರು. ಅವರಿಗೆ ಸಹಾಯಕ ಕೃಷ್ಣ. ಶಾಲೆಯಲ್ಲಿ ಸಮಾಜ ಪಾಠ ಮಾಡುವ ಕಾಸ್ಮಿರ್ ಹಾಸ್ಟೆಲಿನಲ್ಲಿ ಕೃಷಿ ಪಾಠ ಮಾಡುವವರು. ಅನುಭವ – ನಿರಂತರ ಪ್ರಯೋಗದಿಂದ ಕೃಷಿಯಲ್ಲಿ ಪಳಗಿದ ಮಿನೇಜಸ್ ಸ್ವತಃ ರತ್ನಮಾನಸದ ತೋಟದಲ್ಲಿ ದುಡಿಯುತ್ತಾರೆ. ಮಕ್ಕಳು ಅವರನ್ನು ಅನುಕರಿಸುತ್ತಾರೆ. ಅಲ್ಲಿ ನಡೆಯುವ ಕೆಲ ವಿಶಿಷ್ಟ ಪ್ರಯೋಗಗಳನ್ನು ನೋಡಿ.
 
ರೈತರಿಗೆ ಎರೆಹುಳು ಬಹಳ ದೋಸ್ತಿಯಲ್ಲ? ಮಣ್ಣನ್ನು ಫಲವತ್ತಾಗಿ ಮಾಡುವ ಎರೆಹುಳು ಇದ್ದಷ್ಟು ಒಳ್ಳೇದು. ಆದರೆ ಅದನ್ನು ತಿಂಡಿ ಕೊಟ್ಟು ಬೆಳೆಸಲು ಅದೇನು ರೇಶ್ಮೆ ಹುಳುವೇ? ಯಾಕಲ್ಲ – ಯೋಚಿಸಿದರು ಮಿನೇಜಸ್. ಮಕ್ಕಳಿಗೆ ಹೇಳಿ ಗೊಬ್ಬರ ತರಿಸಿದರು. ಗೊಬ್ಬು ಮಣ್ಣಿನ ಜೊತೆ ಸೇರಿಸಿ ರಾಶಿ ಹಾಕಿದರು. ಹಾಗೇ ಮುಚ್ಚಿಟ್ಟರು. ಮಳೆಗಾಲದಲ್ಲಿ ಲಕ್ಷೋಪಲಕ್ಷ ಬೆಳೆದವು. ಈ ವರ್ಷ ಎಲ್ಲಿ ನೋಡಿದರೂ ಅದುವೇ ಎನ್ನುತ್ತಾರೆ ಮಿನೇಜಸ್. ಕಾಂಪೋಸ್ಟಟ್ ಕುಳಿಯೆಂದರೆ ನೆಲದೊಳಗಿರಬೇಕಲ್ಲ? ಅದಾದರೆ ಗೊಬ್ಬರವಾಗಲು ಬಹಳ ದಿನ ಬೇಕು. ಒಂದು ಕೆಲಸ ಮಾಡಿ. ಒಂದು ಪದರು ಸಗಣಿ ಮಣ್ಣು, ಇನ್ನೊಂದು ಪದರು ಗ್ಲೆರಿಸಿಡಿಯಾ ಸೊಪ್ಪು, ಹೀಗೆ ಒಂದರ ಮೇಲೊಂದು ಹರಡುತ್ತಾ ಹೋಗಿ. ಕಾಂಪೋಸ್ಟ್ 'ಗುಡ್ಡೆ ಮಾಡಿ' ಸುತ್ತಲೂ ಮಣ್ಣು ಮೆತ್ತಿದರೆ ಒಂದು ತಿಂಗಳಲ್ಲಿ ಗೊಬ್ಬರ ರೆಡಿ. ನೀರಿಲ್ಲದ ಭೂಮಿಯಲ್ಲಿ ಪಸೆ ಉಳಿಸಿಕೊಳ್ಳಲು ನಡುನಡುವೆ ಬದು ಕಟ್ಟಿ ನೀರು ನಿಲ್ಲಿಸಿಕೊಂಡರೆ ಹೇಗೆ? ಗಂಟು ಬೀಳುವ ಕೀಟಗಳನ್ನು ಗೊಂಡೆ ಹೂವಿಂದ, ಅರಿಶಿನ ಎಲೆಗಳಿಂದ ನಿಯಂತ್ರಿಸಬಹುದೇ? ತೋಟದಲ್ಲಿ ಬೆಳೆಯುವ ಕಳೆ ಕೀಳದದಿದ್ದರೇ ಒಳಿತಲ್ಲವೇ? ಮುಂತಾಗಿ ಪ್ರಯೋಗ ಮಾಡಿ ಸಾಧಿಸಿದವರು ಮಿನೇಜಸ್ ಹಾಗೂ ಅವರ ಶಾಲೆಯ ಮಕ್ಕಳು.
 
ರತ್ನಮಾನಸದಲ್ಲಿ ಖಾಯಂ ಬೆಳೆಯೇ ಇಲ್ಲ. ವಾರ್ಷಿಕ ಬೆಳೆಯೂ ಬಾಳೆ ಮಾತ್ರ. ಇಡೀ ಜಾಗವನ್ನು ಸುಮಾರು 33 ಬಗೆಯ ತರಕಾರಿ - ದವಸ- ಧಾನ್ಯ ಬೆಳೆಯಲಿಕ್ಕೆ ಬಳಸಲಾಗುತ್ತದೆ. ನೀವು ಯಾವುದೇ ಹೇಳಿ. ಪ್ರಾಯೋಗಿಕವಾಗಿ ಅವರು ಬೆಳೆಯಲು ತಯಾರು. ಯಾರೋ ಹೇಳುತ್ತಾರೆ - ಜೋಳ ದಕ್ಷಿಣ ಕನ್ನಡದಲ್ಲಿ ಆಗುವುದೇ ಇಲ್ಲ ಅಂತ. ಒಪ್ಪಿಕೊಳ್ಳಲು ಮಿನೇಜಸ್ ಸಿದ್ಧರಿಲ್ಲ. ಬೇರೆ ಬೇರೆ ಕಾಲದಲ್ಲಿ ಜೋಳ ಹಾಕಿ ನೋಡಿದ ಕಾಸ್ಮಿರ್ ಈಗ ಹೇಳುತ್ತಾರೆ. “ ಜೂನ್ ನಲ್ಲಿ ಜೋಳ ಹಾಕಿ. ಚೆನ್ನಾಗಿ ಬರುತ್ತೆ. ಹಾಗೆಯೇ ತೊಗರಿ, ಸೆಪ್ಟೆಂಬರ್ ನಲ್ಲಿ ಬೀಜ ಹಾಕಿ. ಈ ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಲ್ಲದ ಇವೆರಡನ್ನೂ ಚೆನ್ನಾಗಿ ಬೆಳೆಯಬಹುದು.”
 
ವಾರ್ಡನ್ನರ ಮಾರ್ಗದರ್ಶನದಲ್ಲಿ ತಮ್ಮ ಹಾಸ್ಟೆಲಿನ ಅಂಗುಲಂಗುಲ ನೆಲವನ್ನೂ ಚೆನ್ನಾಗಿ ಉಪಯೋಗಿಸಿಕೊಂಡದ್ದು ರತ್ನಮಾನಸದ ಮಕ್ಕಳ ಹೆಮ್ಮೆ. ತೊಗರಿಯ ಎರಡು ಸಾಲಿನ ನಡುವೆ ಖಾಲಿ ಯಾಕೆ ಬಿಡುವುದು ಎಂದು ಅಲಸಂಡೆ ಬಿತ್ತಿದರು. ಎರಡೇ ತಿಂಗಳಲ್ಲಿ ಬೆಳೆಯಾಯ್ತು. ಗದ್ದೆಯ ಬದುವನ್ನೇಕೆ ಖಾಲಿ ಬಿಡುವುದೆಂದು ಅರಶಿನ, ಬಾಂಬೆ ಹುಳಿ ನೆಟ್ಠರು. ಒಳ್ಳೆ ಬೆಳೆ ಬಂತು. ಕೀಟಗಳೂ ಕಡಿಮೆಯಾದವು. ಎಲ್ಲಾ ಕಡೆ ವೇಸ್ಟ್ ಆಗುವ ಗದ್ದೆ ಬದುಗಳ ಮೇಲೆ ಹಿಂದಿನ ವರ್ಷ ಈ ಮಕ್ಕಳು ಬೆಳೆದ ಕತ್ತಿ ಅವರೆ ಆರು ಕ್ವಿಂಟಾಲ್ ಬೆಳೆಯಿತು! ಈ ಜಾಣ್ಮೆ ನಮ್ಮ ರೈತರಿಗಿದೆಯೇ?
 
 
ಹೀಗೆ ಮೂರು ವರ್ಷ ರತ್ನಮಾನಸದಲ್ಲಿ ಉಳಿಯುವ ಹುಡುಗ ದೈಹಿಕವಾಗಿ ಕೃಷಿಗೆ 'ಫಿಟ್' ಆಗುವುಸಷ್ಟೇ ಅಲ್ಲ, ಮಿನೇಜಸ್ ರವರ ಆರಯಕೆಯಲ್ಲಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವ ಮನಸ್ಸನ್ನೂ ಬೆಳೆಸಿಕೊಳ್ಳುತ್ತಾನೆ. ಅದನ್ನೇ ಮಿನೇಜಸ್ ಹೇಳುತ್ತಾರೆ. “ವಿದ್ಯಾರ್ಥಿಗಳಿಗೆ ರತ್ನಮಾನಸದ ದೊಡ್ಡ ಕೊಡುಗೆಯೆಂದರೆ ಕೃಷಿಯ ಬಗ್ಗೆ ಹೊಸ ತಲೆಮಾರಿನವರಲ್ಲಿ ಕಂಡುಬರುವ ಕೀಳರಿಮೆ ತೊಡೆಯುವುದು. ಹೀಗಾಗಿ ಇಲ್ಲಿ ತರಬೇತಾದವರು ನಿರುದ್ಯೋಗದ ಭೀತಿಯಿಲ್ಲದೇ ಕಲಿಯಬಹುದು.”
 
 
(ಲೇಖನ ಬರೆದ ವರ್ಷ - 1991)
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಆಸಕ್ತಿಕರ ಬರಹ. ಈ ಶಾಲೆಯಲ್ಲಿ ಕಲಿತ ಹುಡುಗರು ಈಗ ಏನಾಗಿದ್ದಾರೆ (ಹಾಗೂ ಇವರ ಇನ್ನಿತರ ಇಂತಹ ಲೇಖನಗಳ ಈಗಿನ ಪರಿಸ್ಥಿತಿ ಕೂಡಾ) ಎಂದು ಯಾರಾದರೂ ವಿಚಾರಿಸಿದರೆ ಅದು ಇನ್ನೊಂದು ಒಳ್ಳೆಯ ಬರಹವೂ, ಸಮಾಜವಿಜ್ಞಾನಿಗಳಿಗೆ ಉತ್ತಮ ಸರಕೂ ಆದೀತು. ಲೇಖಕರು ಮನಸ್ಸು ಮಾಡಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.