ಅಹಲ್ಯಾ ಸಂಹಿತೆ - ೧೨ (ಊರ್ವಶಿಯ ಸೃಷ್ಟಿ)

0

ನೋಡುವವರಿಗೆ ಅದೊಂದು ಸಾಮಾನ್ಯ ಕ್ರಿಯೆಯಂತೆ ಕಂಡರು, ಅದರ ಹಿಂದಿನ ಅದ್ಭುತ ವಿಜ್ಞಾನ ಯಾರಿಗೂ ತಿಳಿಯದ ಮಹಾನ್ ರಹಸ್ಯ..

ತನ್ನ ತೊಡೆಯ ಸ್ನಾಯುಗಳ ಮೂಲಕವೆ ಜೈವಿಕ ವರ್ಣತಂತುಗಳ ತುಣುಕನ್ನು ಸಂಗ್ರಹಿಸುತ್ತ, ತನ್ನ ಕಮಂಡಲದ ಜಲದಲದ್ದಿ, ಅದರ ಮೂಲಕ ತಂತಾನೆ ಎರಡಾಗಿ, ನಾಲ್ಕಾಗಿ, ಎಂಟಾಗಿ, ಹದಿನಾರಾಗಿ, ಮೂವತ್ತೆರಡಾಗಿ, ಅರವತ್ತನಾಲ್ಕಾಗಿ, ನೂರಿಪ್ಪತ್ತೆಂಟಾಗಿ.... ನೋಡ ನೋಡುತ್ತಿದ್ದಂತೆ ಜೀವಿಯೊಂದರ ರೂಪವನ್ನೆ ಪ್ರಕ್ಷೇಪಿಸಿ, ನೈಜ ರೂಪದಲ್ಲಿ ಅನಾವರಣ ಮಾಡಿಬಿಡುವ ಮಹಾನ್ ಸಂಶೋಧನೆಯದು....!

ಕೇವಲ ಏನನ್ನೊ, ಯಾವುದನ್ನೊ ಸೃಜಿಸಲ್ಹೊರಡದೆ, ಅದು ತಮಗೆ ಬೇಕಾದ ರೂಪವನ್ನೆ ಧಾರಣೆಮಾಡುವಂತೆ ಮಾಡುವ ಅಮೋಘ ಸಿದ್ದಿ ಅವರ ಕರಗತವಾಗಿಹೋಗಿತ್ತು...!

ಆ ಪ್ರಯೋಗದ ಮೂಲದಲ್ಲೆ ಮೊದಮೊದಲ ವರ್ಷಗಳಲ್ಲಿ ಅರೆ ಯಶಸ್ಸು ಪಡೆದ ಪ್ರಯೋಗಗಳಲ್ಲಿ ಬೇಡದ ಅಥವಾ ನಿರೀಕ್ಷಿಸದ ಫಲಗಳ ಉತ್ಪನ್ನವೂ ಆಗಿದ್ದುದ್ದು. ಅಂತಹ ಒಂದು ಗಳಿಗೆಯ ಪ್ರಯೋಗದಲ್ಲೆ ಆ ಗಂಢಭೇರುಂಢದ ಮೂಲ ಸಂತತಿಯ ಉತ್ಪನ್ನವಾಗಿದ್ದುದು... ಆ ಕಾರಣಕ್ಕೆ ಏನೊ, ಅದರ ಪೀಳಿಗೆಯ ಸಂತತಿಗಳು ಇನ್ನು ಅಲ್ಲೆ ನೆಲೆ ಹಾಕಿಕೊಂಡು ಕೂತಿರುವುದು...!

ಸೃಷ್ಟಿಕ್ರಿಯೆಯ ಅನೇಕ ಅದ್ಭುತಗಳಲ್ಲಿ ವಿಸ್ಮಯದಿಂದ ಮೈಮರೆತ ಜಗದಲ್ಲಿ, ಆ ಸೃಷ್ಟಿಯ ನಿರ್ದಿಷ್ಠ ಪರಿಧಿಯನ್ನೆ ವಿಸ್ತರಿಸುವ ಅಥವ ಬದಲಿಸುವ ಸವಾಲನ್ನು ಕೈಗೆತ್ತಿಕೊಂಡು , ಅದರಲ್ಲೆ ಅಮೋಘ ಸಾಧನೆಯನ್ನು ಮಾಡಹೊರಟಿದ್ದ ಕೆಲವೆ ಕೆಲವರಲ್ಲಿ ನರನಾರಾಯಣರು ಇಬ್ಬರು. ಅವರ ನಿರಂತರ ಪ್ರಯೋಗಗಳ ಫಲಿತವಿನ್ನು ಅಂತಿಮ ಘಟ್ಟ ತಲುಪಿಲ್ಲವಾದರು, ಬಹುತೇಕ ಕೊನೆಯ ಹಂತವನ್ನು ತಲುಪಿಯಾಗಿದೆ...

ಸಹಸ್ರಕವಚನೊಡನೆಯ ಯುದ್ದವೂ ಒಂದು ರೀತಿಯಲ್ಲಿ ಈ ಪ್ರಯೋಗದ ಭಾಗವೆ ಎಂದರೂ ಸರಿ...

ಅವನ ಜೈವಿಕ ಕವಚದ ವಿನಾಶದ ಜತೆಯಲ್ಲೆ ಅದರ ರಚನೆ, ಹುಟ್ಟು, ಬೆಳವಣಿಗೆಯ ವೈಜ್ಞಾನಿಕ ಹಿನ್ನಲೆ ಅರಿತು ಅದನ್ನೆ ಮೂಲತತ್ವದ ರೂಪದಲ್ಲಿ ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುವ ಯತ್ನ ನಿರಂತರ ಸಾಗಿದೆ...

ಒಂದು ಕವಚದ ವಿನಾಶದ ಬೆನ್ನಲ್ಲೆ ಹೊಸತೊಂದು ಜೈವಿಕ ಕವಚ ತಂತಾನೆ ಹುಟ್ಟುವ, ಹುಟ್ಟಿ ಬೆಳೆಯುತ್ತ ವೃದ್ಧಿಸಿಕೊಳ್ಳುವ ಆ ತತ್ವ, ತಂತ್ರಜ್ಞಾನ ಕರಗತವಾದರೆ, ಅದೇ ತತ್ವವನ್ನು ಬಳಸಿ, ಬಯಸಿದ ಏನನ್ನಾದರೂ ಏಕಾಏಕಿ ಸೃಜಿಸಬಹುದಲ್ಲ ಎನ್ನುವ ಪ್ರಯೋಗವದು...!

ಆದರೆ ಅದು ತಾಮಸಿಶಕ್ತಿಯ ವೈಭವಿಕರಣಕ್ಕೆ ಇಂಬುಗೊಡದ ಹಾಗೆ ಎಚ್ಚರಿಕೆಯನ್ನು ವಹಿಸಬೇಕು - ಇಲ್ಲವಾದಲ್ಲಿ ವ್ಯತಿರಿಕ್ತ ಪರಿಣಾಮದ ಆಘಾತ ಇಂತೆಂದು ಹೇಳಬರುವುದಿಲ್ಲ. ಅದರಲ್ಲು ಇಂತಹ ಫಲಿತ ದುಷ್ಟರ ಕೈ ಸೇರಿಬಿಟ್ಟರಂತು ಮಾತನಾಡುವಂತೆಯೆ ಇಲ್ಲ..

ಆ ಹೊತ್ತಿನಲ್ಲಿ ನರನು ನಿರೂಪಿಸಲು ನಿರ್ಧರಿಸಿದ್ದು ಆ ಪ್ರಯೋಗದ ಮೂರ್ತರೂಪನ್ನೆ... ತನ್ನದೇ ದೇಹದ ತೊಡೆಯ ಬಲಿಷ್ಠ ಸ್ನಾಯುಗಳಲ್ಲಿದ್ದ ಗಟ್ಟಿಮುಟ್ಟಿನ ಕೋಶದ ಕಣಮೂಲಗಳನ್ನೆ, ಕಮಂಡಲದ ಜಲದಲದ್ದಿದ ಹಸ್ತದ ಮೂಲಕ ಸವರುತ್ತ, ಸಾಕಾಗುವಷ್ಟು ಮೂಲಸರಕು ಸಂಗ್ರಹಿತವಾಯ್ತೆಂದೆನಿಸುತ್ತಲೆ ಅದನ್ನು ಮತ್ತೆ ಕಮಂಡಲದ ನೀರಿನೊಳಗದ್ದಿ, ಕಲಕಿ ಮಿಶ್ರ ಮಾಡಿ ಅದನ್ನು ತನ್ನ ಮುಂದಿದ್ದ ಹರಿವಾಣದಂತಹ ಸಲಕರಣೆಯೊಂದಕ್ಕೆ ವರ್ಗಾಯಿಸಿದ....

ಆಗ ನಡೆಯಿತಲ್ಲೊಂದು ಮಹಾನ್ ಅದ್ಭುತ...!

ಎಲ್ಲರ ಕಣ್ಣೆದುರಿನಲ್ಲೆ ಏನೊ ಬುರುಗು ಕಟ್ಟಿದಂತೆ ಶುರುವಾದ ಆ ಪ್ರಕ್ರಿಯೆ ನೋಡನೋಡುತ್ತಿದ್ದಂತೆ ಕೊತಕೊತನೆ ಕುದಿಯುತ್ತಿರುವಂತೆ ಭಾಸವಾಗಿ, ಅದರ ಸುತ್ತ ದಟ್ಟವಾದ ಅಚ್ಚ ಬಿಳಿಯ ಧೂಮ ಮೇಘವೊಂದು ಆವರಿಸಿಕೊಂಡುಬಿಟ್ಟಿತು...

ಅದು ಅಷ್ಟಕ್ಕೆ ನಿಲದೆ ತಂತಾನೆ ಬೆಳೆಯುತ್ತಿದೆಯೊ ಎನ್ನುವಂತೆ ಗಾತ್ರದಲ್ಲಿ ನಿಧಾನವಾಗಿ ವೃದ್ಧಿಸತೊಡಗಿತು. ಹೊರಗಿನವರಿಗೆ ಏನೊ ಕುದಿಯುತ್ತ ನೊರೆಯುಕ್ಕಿಸುತ್ತಿರುವಂತೆ ಕಂಡರೂ, ಒಳಗೆ ಅದು ಜೀವಕೋಶದ ವರ್ಣತಂತುಗಳ ಬೀಜಸೂತ್ರವನ್ನೆ ಬಳಸಿಕೊಂಡು, ಅದನ್ನೆ ವಿಭಜಿಸಿ ಮರುಸೃಷ್ಟಿಸುತ್ತ ಗಾತ್ರದಲ್ಲಿ ವೃದ್ಧಿಸಿಕೊಳ್ಳುತ್ತ ಹೋಗುತ್ತಿತ್ತೆನ್ನುವುದು ಕಣ್ಣಿಗೆ ಕಾಣುತ್ತಿರಲಿಲ್ಲ. ಆ ಗಾತ್ರ ವೃದ್ಧಿಗೆ ಬೇಕಾದ ಸರಕನ್ನು ತನ್ನ ಸುತ್ತಲಿನ ಪಂಚಭೂತ ಮೂಲಗಳಿಂದಲೆ ಹೀರಿಕೊಂಡು ಬೆಳೆಯುತ್ತಿದ್ದರು, ನೋಡುಗರ ಕಣ್ಣಿಗೆ ಮಾತ್ರ ಅದೇನೊ ಶೂನ್ಯದಿಂದ ಸೃಷ್ಟಿಯಾಗುತ್ತಿರುವ ಅದ್ಭುತದಂತೆ ಭಾಸವಾಗುತ್ತಿತ್ತು...!

ಆ ಪ್ರಕ್ರಿಯೆ ನಡೆಯುತ್ತಲೆ ಒಂದು ಅಸಾಧಾರಣ ಗಾತ್ರಕ್ಕೆ ವೃದ್ಧಿಯಾಗಿ ಹೆಚ್ಚುಕಡಿಮೆ ನರನಷ್ಟೆ ಎತ್ತರ-ಗಾತ್ರದ ಸರಕಾದಾಗ ಆ ಬೆಳೆಯುವಿಕೆ ಸ್ತಗಿತವಾಗಿ ಒಂದು ಸ್ತಿಮಿತಕ್ಕೆ ಬಂತು. ಆ ಅದ್ಭುತದ ಅಂತಿಮ ಫಲಿತವೇನು ಎನ್ನುವುದು ಕಾಣದ ಹಾಗೆ ಮುಸುಕಿನ ಛಾಯೆಯಡಿ ಮರೆಯಾಗಿದ್ದರು, ತನ್ನ ಅಂತಿಮ ಘಟ್ಟದಲ್ಲಿ ಅದರ ಸುತ್ತಲಿನ ಮೇಘಾವೃತ್ತ ಪರದೆಯ ತೆರೆ ಕರಗುತ್ತ ಹೋದಂತೆ ಅದರಿಂದೇನೊ ಆಕೃತಿಯೊಂದರ ಹೊರ ರೂಪ ಮೂಡುತ್ತಿರುವುದು ಕಾಣಿಸತೊಡಗಿತು...

ನೋಡನೋಡುತ್ತಿದ್ದಂತೆ ಅದರ ಹೊರ ಪದರವೆಲ್ಲ ಉದುರಿ ಕರಗಿಹೋಗಿ ಅಲ್ಲೊಂದು ಅದ್ಭುತವಾದ ಹೆಣ್ಣಿನ ಮಾನವ ಪ್ರತಿಕೃತಿ ಮಂಡಿಯೂರಿ ಕುಳಿತಂತೆ ಗ್ರಹಿಕೆಗೆ ನಿಲುಕತೊಡಗಿತು. ಹುಟ್ಟುಡುಪಾದ ನಗ್ನತೆಯನ್ನೆ ಹೊದ್ದುಕೊಂಡು ಸೃಜಿತವಾದ ಆ ಆಕೃತಿಯ ಮೈ ಬಣ್ಣವೆ ಅದುವರೆವಿಗು ಅವರಾರು ಕಂಡರಿಯದ ಕೊರೈಸುವ ಅದ್ಭುತ ಹೊಳಪಿನದಾಗಿತ್ತು...!

ಅದನ್ನು ಕಂಡ ಅಪ್ಸರೆಯರೆಲ್ಲ ಆಯಾಚಿತವಾಗೇನೊ ಎಂಬಂತೆ ತಂತಮ್ಮ ಮೇಲ್ವಸ್ತ್ರಗಳಿಂದ ತಮ್ಮ ಮೈ ಬಣ್ಣಗಳನ್ನು ಮರೆಮಾಡಿಕೊಳ್ಳುವವರ ಹಾಗೆ ಮುಚ್ಚಿ ಮುಸುಕು ಹಾಕಿಕೊಳ್ಳುವ ಹೊತ್ತಲೆ, ನಿಧಾನವಾಗಿ ಕಣ್ಬಿಟ್ಟ ಮುನಿವರ ನರ. ಕಣ್ಮುಂದೆಯೇನೊ ಅದ್ಭುತವಾದ, ಪುತ್ಥಳಿಯಂತ ರೂಪೊಂದು ಸಾಕಾರಗೊಂಡು ಕುಳಿತಿತ್ತಾದರು, ಅದು ಚಲನೆಯಿಲ್ಲದ, ಜೀವವಿರುವಂತೆ ಕಾಣಿಸದ ಅಚಲ ಪ್ರತಿಮೆಯ ಹಾಗೆ ತೋರುತ್ತಿತ್ತು. ಅದರ ಸೃಷ್ಟಿಗೊಂದು ಅಂತಿಮ ರೂಪ ನೀಡುವವನಂತೆ ಅದರ ಹತ್ತಿರ ಬಂದವನೆ ಆ ಆಕೃತಿಯನ್ನೆ ತಬ್ಬಿ ಹಿಡಿದು ಅದರ ತುಟಿಗಳ ಮೇಲೆ ತುಟಿಯಿಟ್ಟು, ತನ್ನೊಳಗಿನ ಪ್ರಾಣವಾಯುವಿನ ಅಂತಃಸತ್ವವನ್ನೆಲ್ಲ ಬಸಿದು ಸೆಳೆವವನಂತೆ ಅದರೊಳಕ್ಕೆ ತುಂಬಿಸತೊಡಗಿದ....

ಮುನಿವರನೇಕೆ ಈ ನಿರ್ಜೀವ ಆಕೃತಿಗೆ ಚುಂಬಿಸುತ್ತಿದ್ದಾನೆನ್ನುವ ಚಿಂತನೆಯಲ್ಲಿ ತೊಡಗಿದವರಿಗೆ ಅವನು ನಿಜಕ್ಕು ಅದರೊಳಗಿನ ಜೀವಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯಲು ಬೇಕಾದ ಆರಂಭಿಕ ಸತ್ವವನ್ನು ಆವಾಹಿಸುತ್ತಿದ್ದಾನೆನ್ನುವುದು ಅರಿವಿಗೆ ನಿಲುಕದ ವಿಷಯ... ಹಲವಾರು ಕ್ಷಣಗಳ ಆ ಬಂಧದಲ್ಲಿ ತನ್ನ ಸ್ವನಿಯಂತ್ರಣಕ್ಕೆ ಬೇಕಾದ ಶಕ್ತಿದ್ರವ್ಯ ಅಲ್ಲಿ ಸೇರಿತೆಂದು ಖಚಿತವಾಗುತ್ತಿದ್ದಂತೆ, ಆ ಪ್ರತಿಕೃತಿಯಿಂದ ದೂರಾಗುತ್ತ ತಾನು ಉಟ್ಟುಕೊಂಡಿದ್ದ ವಸ್ತ್ರವನ್ನೆ ಅದರ ಮೇಲೆ ಹೊದಿಸಿ ಪಕ್ಕಕ್ಕೆ ಸರಿದು ನಿಂತ ಆ ತಪಸ್ವಿ.

ಆಗ ಇದ್ದಕ್ಕಿದ್ದಂತೆ ಚಲನೆ ಕಾಣಿಸಿಕೊಳ್ಳತೊಡಗಿತು ಆ ಆಕೃತಿಯಲ್ಲಿ..! ಶಿಶುವೊಂದು ಗರ್ಭದಲ್ಲಿ ಮುದುಡಿ ಕುಳಿತ ರೀತಿಯಲಿದ್ದ ಆ ಆಕೃತಿಯ ಬಾಗಿದ ತಲೆ ನಿಧಾನವಾಗಿ ಮೇಲೆತ್ತಿಕೊಳ್ಳುತ್ತಲೆ ಅದರ ಅದ್ಭುತವಾದ ವಿಶಾಲ ಕಮಲದ ನೇತ್ರಗಳು ನಿಧಾನವಾಗಿ ತೆರೆದುಕೊಳ್ಳತೊಡಗಿದವು. ನೋಡುವವರೆ ಅವಾಕ್ಕಾಗುವಂತಹ ಚಮತ್ಕಾರಿಕ ಸೌಂದರ್ಯದ ಮಹೋನ್ನತ ತುಣುಕೊಂದು ಅಲ್ಲಿ ಅನಾವರಣವಾಗತೊಡಗಿತ್ತು...!

ಆ ಆಕೃತಿ ಪೂರ್ತಿ ಎದ್ದು ನಿಲ್ಲುವ ಹೊತ್ತಿಗೆ ಅಲ್ಲಿ ನಿಂತಿದ್ದವರನ್ನೆಲ್ಲ ದಂಗು ಬಡಿಸುವ ಹಾಗಿದ್ದ ಆ ರೂಪರಾಶಿ ಎಲ್ಲರನ್ನು ಮೂಕವಿಸ್ಮಿತರನಾಗಿಸಿ ಯಾರ ಬಾಯಲ್ಲೂ ಮಾತೆ ಹೊರಡದ ಹಾಗೆ ಎಲ್ಲರ ಬಾಯಿಗಳನ್ನೆ ಕಟ್ಟಿ ಹಾಕಿಬಿಟ್ಟಿತ್ತು, ಆ ಸೌಂದರ್ಯ ಶಿಖರದ ಅತಿಶಯ ರೂಪರಾಶಿ...!

ಅಲ್ಲಿದ್ದ ಅಪ್ಸರೆಯರನ್ನೆ ನಿವಾಳಿಸಿ ಎಸೆದುಬಿಡುವಂತಿದ್ದ ಆ ರೂಪದ ಖನಿಯ ಮುಂದೆ ತಾವೇನು ಅಲ್ಲವೆಂಬ ಸತ್ಯದರಿವಿನಲ್ಲಿ ಅಲ್ಲಿ ನೆರೆದಿದ್ದ ದೇವಕನ್ನಿಕೆಯರ ತಲೆ ತಂತಾನೆ ಬಾಗುತ್ತಿರುವಂತೆ, ಇಂತಹ ಅದ್ಭುತ ಸೃಷ್ಟಿಯ ಸಾಮರ್ಥ್ಯವಿರುವ ತಪಸ್ವಿಯನ್ನೆ ಭಂಗಿಸಹೊರಟೆವಲ್ಲ ಎನ್ನುವ ನಾಚಿಕೆಯೂ ಅಲ್ಲಿ ಕಾಣಿಸಿಕೊಳ್ಳತೊಡಗಿತ್ತು. ಆಗ ನರನ ಬಾಯಿಂದ ಇದ್ದಕ್ಕಿದ್ದಂತೆ ಹೊರಟಿತು ಗುಡುಗಿನಂತ ಸದ್ದು..

ಆ ಸದ್ದಿನ ಜತೆಯಲ್ಲೆ ತನ್ನ ಹಸ್ತದಿಂದ ಬಲವಾಗಿ ತೊಡೆಯನ್ನು ತಟ್ಟಿಕೊಳ್ಳುತ್ತ, " ಊರ್ವಶಿ... ಊರ್ವಶಿ... ಊರು ಮೂಲದಿಂದ ಜನ್ಮಿಸಿದ ಸೌಂದರ್ಯರಾಶಿ ಊರ್ವಶಿ... ಇನ್ನು ನೀನು ಆ ಹೆಸರಿಂದಲೆ ಪ್ರಖ್ಯಾತಳಾಗುತ್ತಿ ಹೋಗು... ಇಲ್ಲಿಂದ ನೇರ ದೇವೇಂದ್ರನ ಆಸ್ಥಾನಕ್ಕೆ ಹೋಗು... ಅವನಿಗೆ ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳು, ನರ ನಾರಾಯಣರು ಮನಸು ಮಾಡಿದರೆ ಅವನ ಆಸ್ಥಾನದೆಲ್ಲ ಗೊಂಬೆಗಳನ್ನು ಮೀರಿಸುವಂತಹ ಸೃಷ್ಟಿ ಮಾಡಬಲ್ಲರೆಂದು.. ಆ ಮೂಲಕ ತಪಭಂಗಿಸುವ ಕ್ಷುಲ್ಲಕ ಪ್ರವೃತ್ತಿ ಬಿಟ್ಟು ಅವನ ಪಾಡಿಗೆ ಅವನಿರುವಂತೆ ನೆನಪಿಸು.. ಅದನ್ನು ಮರೆಯದಿರುವಂತೆ ಇರಲೆಂದೆ ನಿನ್ನನ್ನು ಅವನಿಗೆ ಕಾಣಿಕೆಯಾಗಿ ಕೊಟ್ಟಿದ್ದೇನೆಂದು ಹೇಳಿ ನೀನು ಅವನ ಆಸ್ಥಾನದಲ್ಲೆ ನೆಲೆಸಿಬಿಡು, ಮತ್ತೊಬ್ಬ ಅಪ್ಸರೆಯಾಗಿ..." ಎಂದುಬಿಟ್ಟ..!

(ಇನ್ನೂ ಇದೆ)
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):