ಅಹಲ್ಯಾ ಸಂಹಿತೆ - ೦೨:

5

ಆ ಸಂಜೆ... 
 
ಅಂದೊಂದು ಸುಂದರ ಸಂಜೆ..
 
ಅಹಲ್ಯೆಯ ಬದುಕಿಗೆ ಅದೊಂದು ಮರೆಯಲಾಗದ ಸಂಜೆ...
 
ಅಂದು ಕಾಡಿನ ನದಿ ತಟದಲಿ ಸಖಿಯೊಬ್ಬಳ ಜತೆ ಸೂರ್ಯಾಸ್ತವನ್ನು ವೀಕ್ಷಿಸುತ್ತ ಕುಳಿತಿದ್ದಾಗ, ಸೊಂಟ ಮಟ್ಟದ ನೀರಿನೊಳಗೆ ನಿಂತು ಸಂಧ್ಯಾವಂದನೆಯ ಅರ್ಘ್ಯವನ್ನೀಯುತಿದ್ದ ಯುವಕನೊಬ್ಬನ ಸುಂದರ ದೃಶ್ಯ ಕಣ್ಣಿಗೆ ಬಿದ್ದಿತ್ತು... ಆ ಹೊತ್ತಿನಲ್ಲೂ ತೇಜೋವಂತನಾಗಿದ್ದ ಯುವಕನತ್ತ ಗಮನ ಹರಿಸದೆ ತನ್ನ ಪಾಡಿಗೆ ತಾನು ಸೂರ್ಯೋದಯವನ್ನು ಆಸ್ವಾದಿಸುತ್ತ ಕುಳಿತಿದ್ದ ಅಹಲ್ಯೆಯನ್ನು ಮಾತಿಗೆಳೆದದ್ದು ಸಖಿಯ ನುಡಿ..
 
" ಈ ಸೂರ್ಯಾಸ್ತ ಎಷ್ಟು ಮನೋಹರವಾಗಿದೆಯಲ್ಲವೆ ಅಹಲ್ಯಾ? ನನಗಂತೂ ಸೂರ್ಯೋದಯ, ಸೂರ್ಯಾಸ್ತ ಎರಡೂ ತುಂಬಾ ಪ್ರಿಯವಾದದ್ದು.."
 
"ಸೂರ್ಯೋದಯವೆ ? ಸೂರ್ಯಾಸ್ತಮವೆ ? "
 
- ಕಿಸಕ್ಕನೆ ನಕ್ಕ ಸದ್ದಿನ ಹಿಂದೆಯೆ, ಮೆಲುವಾದ ವೀಣೆ ನುಡಿದಂತಹ ಇಂಪಾದ ಸ್ವರದಲ್ಲಿ ಬಂತು ಹೆಣ್ಣಿನ ದನಿ, ಏನೊ ಅಬದ್ಧವನ್ನು ಕೇಳಿದವಳ ಹಾಗೆ..
 
ಅವಹೇಳದ ದನಿಯಂತೆ ಭಾಸವಾಗಿ ತುಸು ಆಘಾತಗೊಂಡವಳಂತೆ ಕಂಡ ಸಖಿ ಕೇಳಿದಳು, "ಯಾಕೆ ಅಹಲ್ಯಾ? ಏನಾಯಿತು? ನಾನು ಹೇಳಿದ್ದರಲ್ಲಿ ಅಪಹಾಸ್ಯವೆಲ್ಲಿದೆ?"
 
"ಇಲ್ಲಾ ಧಾರಿಣಿ.. ನಾನು ನಕ್ಕದ್ದು ನಿನ್ನ ಮಾತಿಗಲ್ಲ...ಈ ಜಗದ ಸತ್ಯಗಳೆಲ್ಲ ಅವರವರ ಕಣ್ಣಿಗೆ ಬಿದ್ದ ರೀತಿಯಲ್ಲಿ ಅನಾವರಣವಾಗುವುದು ಮಾತ್ರವಲ್ಲದೆ ಅವೇ ಜಗದ ನಿಯಮಗಳಾಗಿಬಿಡುವ ವೈಚಿತ್ರಕ್ಕೆ ಸೋಜಿಗವಾಗಿ ನಕ್ಕೆನಷ್ಟೆ..."
 
"ನನಗರ್ಥವಾಗಲಿಲ್ಲಾ ಅಹಲ್ಯೆ...."
 
"ಅದು ಅರ್ಥವಾಗದಷ್ಟು ಕಠಿಣವೂ ಅಲ್ಲಾ, ಅರ್ಥವಾಗುವಷ್ಟು ಸರಳವೂ ಅಲ್ಲ.."
 
"ಒಗಟನ್ನು ಬಿಟ್ಟು, ನನ್ನಂತಹ ಸಾಮಾನ್ಯಳಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಲಾರೆಯಾ...ಅಹಲ್ಯಾ?"
 
"ನಾನು ಹೇಳಿದ ಮೇಲೆ, ನೀನೂ ಅದನ್ನು ಸರಳವೆನ್ನುವೆ ಧಾರಿಣಿ...! ಈ ಭುವಿಯ ಮೇಲೆಲ್ಲರೂ ಸೂರ್ಯೋದಯ, ಸೂರ್ಯಾಸ್ತವೆಂದಾಗ, ಈ ಸೂರ್ಯ ಭಗವಾನನನ್ನೆ ಚಲಿಸುತ್ತಿದ್ದಾನೆಂದು ಭಾವಿಸುತ್ತಾರಲ್ಲವೆ?"
 
"ಹೌದು...ಅದರಲ್ಲಿ ಅತಿಶಯವಾದರೂ ಏನು? ಅದೇ ತಾನೆ ನಿಜವಾದ ವಿಷಯ?"
 
ಅಹಲ್ಯಾ, ನದಿಯತ್ತ ನೆಟ್ಟ ನೋಟವನ್ನು ತಿರುಗಿಸಿ, ತನ್ನ ಆಹ್ಲಾದಕರ ಮೊಗವನ್ನು ಪೂರ್ಣವಾಗಿ ಧಾರಿಣಿಯತ್ತ ತಿರುಗಿಸಿ ನುಡಿದಳು.. "ಇಲ್ಲಾ ಧಾರಿಣಿ, ನಿಜವಾದ ಸತ್ಯ ಅದಲ್ಲ... ಅದು ಬರಿ ತೋರಿಕೆಗೆ ಕಾಣಿಸುವ ಅಪರಿಪೂರ್ಣ, ಚಮತ್ಕಾರಿಕ ಸತ್ಯವಷ್ಟೆ..."
 
"ಅಹಾ...? ಹಾಗಾದರೆ, ಅದ್ಯಾವುದಾ ಮಹತ್ತರ ನೈಜ, ಪರಿಪೂರ್ಣವಾದ ಸತ್ಯಾ...?"
 
" ಚಲಿಸುತ್ತಿರುವುದು ಸೂರ್ಯನಲ್ಲ, ಬದಲಿಗೆ ಸೂರ್ಯದೇವನ ಸುತ್ತ ಸುತ್ತುತ್ತಿರುವುದು ಭೂಮಿಯೆ ಎಂಬುದು..."
 
"ಆಹ್..?!"
 
- ಒಂದೆರಡು ಗಳಿಗೆ ಅವಾಕ್ಕಾದವಳಂತೆ ಸ್ತಬ್ದಳಾದ ಧಾರಿಣಿ, ನಂತರ ಪಕಪಕನೆ ಬಿದ್ದು ಬಿದ್ದು ನಗತೊಡಗಿದಳು..
 
"ಏನೂ, ಚಲಿಸುತ್ತಿರುವುದು ಭೂಮಿಯೆ? ಸೂರ್ಯನಲ್ಲವೆ? ಚೆನ್ನಾಗಿದೆ, ಚೆನ್ನಾಗಿದೆ.. ನಿನ್ನ ಬಯಲಾದ ಸತ್ಯದ ಹೂರಣ....!" ಎಂದು ಅಣಕಿಸುವವಳಂತೆ ಮುಖ ಮಾಡಿ ಮತ್ತೂ ನಗತೊಡಗಿದಳು...
 
ಆಗ ಇದ್ದಕ್ಕಿದ್ದಂತೆ ಹಿಂದಿನಿಂದ ಗುಡುಗಿನಂತೆ ಬಂದಿತ್ತೊಂದು ದನಿ, "ಅದು ನಗುವ ಮಾತಲ್ಲ ಬಾಲೆ..ಆ ಸೂರ್ಯ ಚಂದ್ರರಷ್ಟೆ ನೈಜ್ಯವಾದ ಅಪ್ಪಟ ಸತ್ಯ !"
 
ಅದು ಸಂಧ್ಯಾವಂದನೆ ಮುಗಿಸಿ ಹೊರಟಿದ್ದ ಯುವಕನ ದನಿ. ಹಾದು ಹೋಗುತ್ತಿದ್ದಾಗ ಕಿವಿಗೆ ಬಿದ್ದ ಅಹಲ್ಯೆಯ ಮಾತಿನಿಂದ ಕುತೂಹಲ ಕೆರಳಿ, ಚಣಕಾಲ ಅಲ್ಲೆ ನಿಂತುಬಿಟ್ಟಿದ್ದ ಅವಳ ಮಾತನ್ನಾಲಿಸುತ್ತ..
 
" ಚಲಿಸುತ್ತಿರುವುದು ಭೂಮಿ.. ಜೀವಸಂಕುಲ ಮೂಲಾಧಾರನಾದ ಸೂರ್ಯ ಭಗವಾನನ ಸುತ್ತ; ಮತ್ತು ಬುಗುರಿಯ ಹಾಗೆ ತನ್ನದೆ ಆದ ಅಕ್ಷದ ಸುತ್ತ.. ಧರಿತ್ರಿಯ ಪರಿಭ್ರಮಣದ ಬುಗುರಿಯಾಟದಲ್ಲಿ ದಿನ ರಾತ್ರಿಗಳ ಉದ್ಗಾರವಡಗಿದ್ದರೆ, ಆದಿತ್ಯನ ಸುತ್ತಲ ಪರಿಕ್ರಮಣದಲ್ಲಿ ಋತುಮಾನಗಳ ಹೆದ್ದೆರೆಗಳೆ ಬಚ್ಚಿಟ್ಟುಕೊಂಡಿವೆ.. ಆ ಸುಂದರಿ ಹೆಣ್ಣು ನುಡಿದದ್ದು ಅಪ್ಪಟ ಬ್ರಹ್ಮಾಂಡ ಸತ್ಯ..." ಎಂದವನೆ ಅಹಲ್ಯೆಯೆಡೆಗೆ ತಿರುಗಿ,
 
" ಚಂದ್ರಿಕೆಯ ಸೌಂದರ್ಯವೆಲ್ಲ ಹೆಣ್ಣಿನ ರೂಪಾಗಿ ಆವಿರ್ಭವಿಸಿ ರೂಪುಗೊಂಡಂತಿರುವ ನೀನಾರು ರಮಣಿ? ನಿನ್ನ ಅನುಪಮ ಸೌಂದರ್ಯದಷ್ಟೆ ಅತಿಶಯವಾದದ್ದು ನಿನ್ನಯ ಜ್ಞಾನ, ತಿಳುವಳಿಕೆಯ ಹರವು.. ಸೌಂದರ್ಯ ಬುದ್ಧಿಶಾಲಿತನಗಳೆರಡರ ಅಪೂರ್ವ, ಅಪರೂಪದ ಸಂಗಮದಂತಿರುವ ನಿನ್ನ ನಾಮಧೇಯವೇನೆಂದು ತಿಳಿಯಬಹುದೆ ?" ಎಂದ ತನ್ನ ಅಧಿಕಾರಯುತವಾದ ಕಂಚಿನ ಕಂಠದಲ್ಲಿ.
 
ಅವನ ಹೊಗಳಿಕೆಗೆ ತುಸು ನಾಚಿ ಕೆಂಪಾದರೂ, 'ಅಪರಿಚಿತನ ಮಾತಿನ ಹಿನ್ನಲೆಯಲ್ಲೇನಿದೆಯೊ ಹೊಂಚು?' ಎಂಬ ಜಾಗೃತ ಭಾವವೂ ಮನದಲುದಿಸಿ ತುಸು ಬಿಗಿಯಾದ ದನಿಯಲ್ಲೆ, "ನೀನಾರೆಂದು ಮೊದಲು ತಿಳಿದುಕೊಳ್ಳಬಹುದ ತಪಸ್ವೀ? ಈ ಚಿಕ್ಕ ವಯಸಿನಲ್ಲೆ ಅಪಾರ ಪಾಂಡಿತ್ಯದ ಒಡೆಯನಾಗಿರುವಂತೆ ಕಾಣುವ ನಿನ್ನ ಹಿನ್ನಲೆಯಾದರೂ ಏನು?" ಎಂದಳು ದಿಟ್ಟತನದಿಂದ.
 
" ನಾನೊಬ್ಬ ಯುವ ಋಷಿ...ಸಾಧನೆಯ ಹಾದಿಯಲಿನ್ನು ಮೊದಲ ಹೆಜ್ಜೆಯಿಕ್ಕುತ್ತಿರುವ ಯೋಗಪಥಿಕ. ನನ್ನನ್ನು ಗೌತಮನೆನ್ನುವರು.."
 
ಗೌತಮ.. 'ಹೆಸರು ಸೊಗಸಾಗಿದೆಯಲ್ಲವೆ?' ಅಂದುಕೊಳ್ಳುತ್ತಲೆ, " ನಾನು ಅಹಲ್ಯೆ...ಇವಳು ನನ್ನ ಸಖಿ ಧಾರಿಣಿ.." ಎಂದಳು.
 
ಆ ವೇಳೆಗಾಗಲೆ ತನ್ನ ಲೋಕೋತ್ತರ ಸೌಂದರ್ಯದಿಂದ ಜಗದ್ವಿಖ್ಯಾತಳಾಗಿದ್ದ ಅಹಲ್ಯೆ ಇವಳೆ ಎಂದು ಅರಿವಾಗಿ ಹೋಗಿತ್ತು, ಚತುರಮತಿ ಗೌತಮನಿಗೆ. ಅವಳ ರೂಪದಷ್ಟೆ, ಗುಣ, ನಡತೆ, ಜ್ಞಾನ, ತಿಳುವಳಿಕೆಗಳೂ ಅಷ್ಟೆ ಪ್ರಸಿದ್ಧವಾದ ಮಾತಾಗಿತ್ತು. ಆದರೂ ಖಚಿತ ಪಡಿಸಿಕೊಳ್ಳಲೆಂಬಂತೆ ಕೇಳಿದ ಗೌತಮ.
 
"ನಿನ್ನ ಹಿನ್ನಲೆ?"
 
"ನಾನು ಪುರು ವಂಶದ ರಾಜ ಸಂತತಿಯ ದೊರೆ ಮುದ್ಗಲನ ಪುತ್ರಿ, ಅಹಲ್ಯಾ.."
 
ರಾಜ ಮುದ್ಗಲನ ಹೆಸರು ಕೇಳುತ್ತಿದ್ದಂತೆ, ಯಾವುದೊ ಅರಿವಾಗದ ಮಂದಹಾಸದ ಎಳೆಯೊಂದು ಮಿಂಚಿ ಮಾಯವಾಯ್ತು, ಯೋಗಿಯ ಮುಖದ ಮೇಲೆ. ಸೂಕ್ಷ್ಮಮತಿ ಅಹಲ್ಯೆಯೂ ಕ್ಷಿಪ್ರ ಗತಿಯಲ್ಲಿ ಮಿಂಚಿ ಮಾಯವಾದ ಆ ನಗೆಯ ಸೆಳಕನ್ನು ಗಮನಿಸಿದಳಾದರೂ, ಅದಾವ ಭಾವನೆಯಿಂದ ಒಡಮೂಡಿದ ಫಲಿತವೆಂಬುದನ್ನು ಅರಿಯಲಾಗದಷ್ಟು ವೇಗವಾಗಿ ಘಟಿಸಿತ್ತು ಆ ಕಂಡೂ ಕಾಣದ ನಗೆಯ ಚಳುಕು.. 'ಬಹುಶಃ ನನ್ನ ತಂದೆ ಮುದ್ಗಲ ಈಗಾಗಲೆ ಈತನಿಗೆ ಪರಿಚಯವಿರಬಹುದೆ?' ಎಂಬ ಅನುಮಾನವನ್ನೂ ಹುಟ್ಟು ಹಾಕುತ್ತ..
 
ಆದರೆ ಗೌತಮರು ನಕ್ಕ ಕಾರಣವೆ ಬೇರೆ..! ಅದನ್ನರಿಯಬೇಕೆಂದರೆ ಕಾಲ ಗಣಿತದ ಲೆಕ್ಕಾಚಾರದಲ್ಲಿ ಕೆಲವು ವರ್ಷ ಹಿಂದಕ್ಕೆ ಹೋಗಬೇಕು, ಹೆಚ್ಚು-ಕಮ್ಮಿ ಅಹಲ್ಯೆ ಹಸುಗೂಸಾಗಿದ್ದ ಕಾಲಮಾನಕ್ಕೆ.. ಅದಾವುದೊ ಗತಕಾಲದ ಹಿನ್ನಲೆಯೇನನ್ನೊ ಮನ ಆಲೋಚಿಸುತ್ತಿರುವ ಆ ಹೊತ್ತಲೆ, ಯಾವುದೊ ನಿರ್ಧಾರಕ್ಕೆ ಬಂದು, ಅಹಲ್ಯೆಯ ಜ್ಞಾನದ ಮತ್ತಷ್ಟು ಆಳ ಕೆದಕಲೆಂಬಂತೆ ಕೇಳಿದರು -
 
"ನಿನ್ನ ಮಾತು ಸತ್ಯವೆಂದು ಅದರ ಅಧ್ಯಯನ ನಡೆಸಿದ ನನಗೇನೊ ಚೆನ್ನಾಗಿ ಗೊತ್ತು.. ಆದರೂ ಕುತೂಹಲಕ್ಕೆ ಕೇಳುತ್ತೇನೆ. ಕಣ್ಣೆದುರಿಗೆ ಕಾಣುವ ಸತ್ಯವನ್ನು ಅದು ಹೇಗೆ ಅಲ್ಲಗಳೆಯುವೆ, ಅಹಲ್ಯೆ? ನಾವಿದ್ದ ನೆಲೆಯಿಂದ ಚಲಿಸುತ್ತಿರುವುದು ಸೂರ್ಯನೆಂದೆ ಕಾಣಿಸುತ್ತದೆಯಲ್ಲವೆ?"
 
" ಈ ಪ್ರಶ್ನೆ ನನ್ನ ಪರೀಕ್ಷಿಸಲೆ ಕೇಳಿದಂತಿದೆಯಲ್ಲಾ? ನಾನೇನು ಅಷ್ಟೊಂದು ತಿಳಿದವಳಲ್ಲವಾದರೂ, ನನ್ನರಿವಿನಳತೆಯ ಪರಿಧಿಯಲ್ಲಿ ತೋಚಿದ ಹಾಗೆ ಹೇಳಬಲ್ಲೆನಷ್ಟೆ.."
 
" ಸರಿ ಸರಿ..ಕೇಳಿಯೆ ಬಿಡುವ ನಿನ್ನನಿಸಿಕೆ...ಹೂಂ..?"
 
" ಸತ್ಯದ ಪರಿಧಿ ಯಾವಾಗಲೂ ತಾನು ನಿಂತ ನೆಲೆಯ ಮೇಲೆ ಮತ್ತು ಜ್ಞಾನ, ತಿಳುವಳಿಕೆಯ ಆಳದ ಮೇಲೆ ಅವಲಂಬಿಸಿದೆ..."
 
"ಬಿಡಿಸಿ ಹೇಳು ಅಹಲ್ಯೆ..."
 
" ಗೌತಮಾ.. ನಾವೀಗಿರುವ ನೆಲೆ ಭೂಮಿ. ಮತ್ತಾವ ಅರಿವೂ ಇರದೆ ಬರಿಯ ಭುವಿ ವ್ಯಾಪಾರವನ್ನೆ ಗಣನೆಗಿಟ್ಟುಕೊಂಡು ನೋಡಿ ಹೇಳುವುದಾದರೆ, ಧಾರಿಣಿಯ ಮಾತು ಪ್ರತಿಶತ ಅಪ್ಪಟ ಸತ್ಯ...ಇಳೆಯನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ, ಇಳೆಯ ಮೇಲಿರುವ ನಾವೆಲ್ಲ ಇಳೆಗೆ ಸಂಬಂಧಿಸಿದಂತೆ ಸಂತುಲಿತ ಸ್ಥಿತಿಯಲ್ಲಿರುವುದರಿಂದ, ಎರಡು ಒಂದೆ ವೇಗದಲ್ಲಿರುವ ಪ್ರಕರಣಗಳಾಗಿವೆ..."
 
"ತರ್ಕದ ಸರಣಿ ಅಮೋಘವಾಗಿದೆ.. ಮುಂದುವರೆಸು ಅಹಲ್ಯಾ..!"
 
".. ಹೀಗಾಗಿ ನಮ್ಮ ಮಟ್ಟಿಗೆ ಭುವಿಯೂ ಸ್ಥಿರ, ಭೂಮಿಯ ಮಟ್ಟಿಗೆ ನಾವೂ ಸ್ಥಿರ ಅಂದ ಹಾಗಲ್ಲವೆ? ನಾವು ಸ್ಥಿರವಾಗಿ ನೆಲೆ ನಿಂತ ನಮ್ಮ ಮತ್ತು ಭೂವಿಯ ಸುತ್ತ ಬೇರೆ ಕಾಯಗಳು ಸುತ್ತುತ್ತಿವೆ ಅಂದರೆ ತಾತ್ವಿಕವಾಗಿ ಸರಿಯಿರದಿದ್ದರೂ, ಪ್ರಾಯೋಗಿಕವಾಗಿ, ಭುವಿಯ ದೃಷ್ಟಿಕೋನದಿಂದ ಸರಿಯೆ.."
 
"ವಾಹ್..ವಾಹ್..ಎಂಥಾ ಸೊಗಸಾದ ತರ್ಕ ವಿಚಾರ? ಎಂತಹ ಅದ್ಭುತ ಮೇಧಾ ಶಕ್ತಿ...!?"
 
ಅವನ ಮೆಚ್ಚುಗೆಯ ನುಡಿಗಳಿಂದ ಮತ್ತಷ್ಟು ಹುರಿದುಂಬಿದಂತವಳಾಗಿ ಮತ್ತಷ್ಟು ಗಟ್ಟಿ ದನಿಯಲ್ಲಿ ಮುಂದುವರೆಸಿದಳು ಅಹಲ್ಯೆ..
 
" ಆದರೆ ಇದೆ ಮಾತನ್ನು ನಾವು ಅನಂತಾಕಾಶದಲ್ಲೊ, ಸೌರಮಂಡಲದ ಮತ್ತೊಂದು ಗ್ರಹದಲ್ಲೊ, ಅಥವಾ ವ್ಯೋಮದ ಮತ್ತಾವುದೊ ಕಾಯದಲ್ಲೊ ಹೇಳಲಾಗದು. ಅಲ್ಲಿನ ಸತ್ಯ, ಅಲ್ಲಿನ ನೆಲೆಯ ಮೇಲೆ ಅವಲಂಬಿತ..."
 
"ಹೂಂ...!"
 
"ಅದಕ್ಕೆ ಸತ್ಯವೆನ್ನುವುದು ಮಿಥ್ಯ, ಮಿಥ್ಯವೆನ್ನುವುದು ಸತ್ಯ - ಎಲ್ಲಾ ಮಾಯೆಯ ಚಳಕದ ಸರಹದ್ದು ಎನ್ನುವುದು. ಪರಮಸತ್ಯವೆನ್ನುವುದು ನಿರಂತರ ಶೋಧನೆಯ ಅವಿರತ ಅನಾವರಣವೆನ್ನುತ್ತಾರೆ.. ಆದರೆ ಇದಕ್ಕೂ ಮೀರಿ ಅಷ್ಟೊಂದು ಆಧ್ಯಾತ್ಮಿಕವನ್ನೆಲ್ಲ ವಿವರಿಸುವಷ್ಟು ಜ್ಞಾನ, ಅರಿವು ನನ್ನಲ್ಲಿಲ್ಲ..."
 
"ಇದಕ್ಕೂ ಮೀರಿದ ವಿವರಣೆ, ಎಷ್ಟೊ ಜ್ಞಾನಿಗಳಿಗೂ ಸಾಧ್ಯವಿಲ್ಲ ಅಹಲ್ಯಾ.. ಸರಳವಾಗೆ, ಭೇಷಾಗಿ ವಿವರಿಸಿದೆ ನೀನು..!" ತನ್ನ ಮೆಚ್ಚುಗೆಯನ್ನು ಮುಚ್ಚಿಡದೆ ಬಹಿರಂಗವಾಗಿ ವ್ಯಕ್ತ ಪಡಿಸುತ್ತ ನುಡಿದ ಗೌತಮ.
 
ಅವನ ಮಾತು ಮುಗಿಯುವ ಮೊದಲೆ ಅವನನ್ನೆ ಚಕಿತನಾಗಿಸುವಂತ ಪ್ರಶ್ನೆಯೊಂದು ಅವಳ ಕಡೆಯಿಂದ ತಟ್ಟನೆ ತೂರಿ ಬಂದಿತ್ತು "ಅಂದಹಾಗೆ ತಾವು ಕಲಿಯುತ್ತಿರುವ ಸಾಧನೆಯಾದರೂ ಏನು ಎಂದು ಕೇಳಬಹುದೆ?"
 
ಅವಳ ಪ್ರಶ್ನೆಗೆ ಅಚ್ಚರಿಗೊಂಡ ಗೌತಮನಿಗೆ ಒಂದು ಘಳಿಗೆ ಮಾತೆ ಹೊರಡಲಿಲ್ಲ. ಸಾಧಾರಣ ವ್ಯಕ್ತಿಗಳಾರು ಅಂತಹ ಪ್ರಶ್ನೆ ಕೇಳುವಷ್ಟು ಪ್ರೌಢಿಮೆಯನ್ನು ತೋರುತ್ತಿರಲಿಲ್ಲ; ಅಥವಾ ಹೆದರುತಿದ್ದರೊ ಏನೊ? ತಾನಿನ್ನು ಬ್ರಹ್ಮಜ್ಞಾನದ ಅಂತಿಮ ಸತ್ಯದ ಶೋಧನೆಯ ಮೊದಲ ಮೆಟ್ಟಿಲನ್ನು ಇನ್ನೂ ಸರಿಯಾಗಿ ಏರಿರದ ವಿಧ್ಯಾರ್ಥಿಯೆಂದು ಅವಳಿಗೆ ವಿವರಿಸುವುದಾದರೂ ಹೇಗೆ?
 
" ಅಂತಿಮ ಗುರಿ ಬ್ರಹ್ಮಜ್ಞಾನವಾದರೂ, ಸದ್ಯಕ್ಕೆ ವೇದಾಂಗಗಳ ಅಭ್ಯಾಸ ಮಾಡುತ್ತಿದ್ದೇನೆ..."
 
"ಬ್ರಹ್ಮಜ್ಞಾನವೆಂದರೆ ಇಡಿ ಜೀವನವೆ ಮುಡಿಪಿಟ್ಟರೂ ಸಾಲದೆಂದು ಕೇಳಿದ್ದೇನೆ...ಕೆಲವೊಮ್ಮೆ ಜನ್ಮಾಂತರ ಕಳೆದರೂ ಸಿದ್ಧಿಯಾಗದ ಸಾಧನೆಯೆಂದು ಕೇಳಿ ಬಲ್ಲೆ..."
 
" ಅದು ನಿಜ.. ಅಂತಿಮವಾಗಿ ಪರಿಪೂರ್ಣ ಸಿದ್ದಿಯಾಗಿ ಅದು ಯಾರ ಪಾಲಾಗುವುದೆಂದು ಹೇಳಬರದು.. ಆದರೆ ಸಾಧಕನಾಗಿ, ಆ ಮಟ್ಟಕ್ಕೇರುವ ಹಂಬಲವಂತೂ ಇದೆ.. ಸದ್ಯಕ್ಕೆ ಷಡ್ದರ್ಶನಗಳಲೊಂದಾದ ನ್ಯಾಯಪದ್ದತಿಯ ಕುರಿತು ಅಭ್ಯಸಿಸುತ್ತಿದ್ದೇನೆ.. ನ್ಯಾಯಶಾಸ್ತ್ರದ ಮೇಲೊಂದು ವೇದಾಂಗ ಭಾಷ್ಯ ಬರೆವ ಹಂಬಲ, ತನ್ಮೂಲಕ ಅದನೆಲ್ಲ ಕಲಿತು ಜೀರ್ಣಿಸಿಕೊಳ್ಳುವ ಬಯಕೆ.. ಜತೆ ಜತೆಯಲ್ಲೆ ಬ್ರಹ್ಮಜ್ಞಾನದ ಆಂಗಿಕ ಭಾಗವಾಗಿ ಸೃಷ್ಟಿರಹಸ್ಯಕ್ಕೆ ಪೂರಕವಾದ 'ಬ್ರಹಾಂಡ ತಳಿ ಶಾಸ್ತ್ರ' ಅಧ್ಯಯನವೂ ನನ್ನ ಅಂತರಂಗಕ್ಕೆ ಹತ್ತಿರವಾದ ಐಚ್ಚಿಕ ವಸ್ತು ವಿಷಯ. ಅದರಲ್ಲು ನಡೆದಿದೆ ನನ್ನ ಸಂಶೋಧನೆ ಸಮಾನಂತರ ಸ್ತರದಲ್ಲಿ.. ಆದರೆ ಅದು ಬ್ರಹ್ಮಜ್ಞಾನಕ್ಕೆ ಸಂಬಂಧಪಟ್ಟ ವಸ್ತು-ವಿಷಯವಾದ ಕಾರಣ ಇದಕ್ಕಿಂತ ಹೆಚ್ಚು ಹೇಳಲಾಗದು ಅಹಲ್ಯಾ.."
 
ಅವನ ಮಾತುಗಳನ್ನು ಕೇಳುತ್ತಿದ್ದಂತೆ, ಅವನಾರೊ ಅಪರಿಚಿತನೆಂಬ ಭಾವ ಮನದಿಂದ ದೂರಾಗಿ ಅವನ ಶ್ರದ್ದೆ, ಪಾಂಡಿತ್ಯಗಳ ಬಗ್ಗೆ ಗೌರವ ಮೂಡತೊಡಗಿತು ಅಹಲ್ಯೆಯ ಮನದಲ್ಲಿ.
 
ಆ ಮೊದಲ ಭೇಟಿಯ ಪರಸ್ಪರ ಗೌರವ ಒಲವಾಗಿ, ಪರಿಣಯದಲ್ಲಿ ಪರ್ಯಾವಸಾನವಾಗಿದ್ದು, ಯಾವ ಸತ್ಯ ಶೋಧನೆಯ ಆಂಗಿಕ ಚರ್ಯೆಯೋ ಇಬ್ಬರಿಗೂ ಅರಿವಾಗುವ ಮೊದಲೆ ಪ್ರೇಮದ ಸುಳಿ ಇಬ್ಬರನ್ನು ಸೆಳೆದು ಬಂಧಿಸಿತ್ತು, ಈ ಕಾಡಿನ ಆಶ್ರಮದ ಕುಟೀರದಲ್ಲಿ. ಸೃಷ್ಟಿಕರ್ತ ಸಾಕ್ಷತ್ ಬ್ರಹ್ಮದೇವನೂ, ದೇವರಾಜ ಇಂದ್ರನೂ ಪಾತ್ರ ನಿರ್ವಹಿಸಿದ ಆ ಭೂಮಿಕೆಯದೆ, ಭವಿತದಲ್ಲಿ ತೆರೆದುಕೊಳ್ಳುವ ಮತ್ತೊಂದು ವಿಚಿತ್ರ ಕಥನ.. 
 
ಪ್ರಸ್ತುತದಲ್ಲೀಗ ಅದರ ಪೀಠಿಕೆಯ ಹೊರತಾಗಿ ಮತ್ತೆಲ್ಲವೂ ಅನಗತ್ಯ -ಮುಂದೊಮ್ಮೆ ಅದೆ ಮತ್ತೊಂದು ದೊಡ್ಡ ಕಥೆಯಾದ ಕಾರಣ..
 
ಆದರೆ ಆ ಹೊತ್ತಿನಲ್ಲಿ ಅವಳಿಗೂ ಗೊತ್ತಿರಲಿಲ್ಲ - ಗೌತಮರು ಅವಳಿಗೆ ಹೇಳಿದ್ದು ಪೂರ್ಣಾಂಶವಲ್ಲ, ಕೇವಲ ಭಾಗಾಂಶ ಸತ್ಯ ಎಂದು.
 
ಅದು ಒತ್ತಟ್ಟಿಗಿರಲಿ - ಅವರು ಕೈಗೊಂಡಿದ್ದ ಮಹಾಕಾರ್ಯಯಜ್ಞದ ಹಂದರದಲ್ಲಿ ತಾನೊಂದು ಪ್ರಮುಖ ಅಂಗ, ತಾನೆ ಅದರ ಮುಖ್ಯ ಸಮಿತ್ತು ಎಂದು ಸಹ.. ಅವಳ ಉತ್ತರವಿಲ್ಲದ ಎಷ್ಟೊ ಪ್ರಶ್ನೆಗಳಿಗೆ, ಉತ್ತರದ ಕೀಲಿ ಅವನ ಕೈಲಿದೆಯೆಂದು.. ಅವನೂ ಸೇರಿದಂತೆ ಸಮಷ್ಟಿಯ ಮಹಾನ್ ಶಕ್ತಿಗಳು ಸೇರಿ ಕೈಗೊಂಡಿದ್ದ ಮಹಾನ್ ಪ್ರಯೋಗವೊಂದರ ಅತಿ ಪ್ರಮುಖ ಸಲಕರಣೆ ತಾನೆಂಬುದು..
 
ಬಹುಶಃ ಅದೆಲ್ಲ ಮೊದಲೆ ಗೊತ್ತಾಗಿದ್ದಿದ್ದರೆ, ಅವನಲ್ಲಿ ಅವಳಿಗೆ ಅಷ್ಟು ಸಹಜ ಪ್ರೇಮ ಹುಟ್ಟಲು ಸಾಧ್ಯವೂ ಇರಲಿಲ್ಲ. ಆ ನಿಸರ್ಗ ಪ್ರೇರಿತ ಪ್ರೇಮ ಭಾವವೂ ಪ್ರಯೋಗದ ಒಂದು ಪ್ರಮುಖ ಅಂಶವೆಂದು ಅರಿತಿದ್ದ ಗೌತಮ, ಅದನ್ನು ಬಾಯಿಬಿಟ್ಟು ಹೇಳುವಂತೆಯೂ ಇರಲಿಲ್ಲ -
 
ಕಾಲ ಪಕ್ವವಾಗುವವರೆಗೆ..!
...ಕಾಲ ಪಕ್ವವಾಗುವವರೆಗೆ...!
......ಕಾಲ ಪಕ್ವವಾಗುವವರೆಗೆ......!
.........ಕಾಲ ಪಕ್ವವಾಗುವವರೆಗೆ.........!
........................................................!
 
********

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):