ಅಶೋಕ್ ಕುಮಾರ್ - ನೆನಪು

4.75

ಸುಮಾರು ಏಳು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಫೋನಿನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. "ನಾನು ಬರೆದುಕೊಂಡು ಹೋಗುತ್ತಿರುತ್ತೇನೆ. ಯಾರು ಓದುತ್ತಾರೆ ಎಂಬುದಿಲ್ಲ. ನಾನು ಬರೆದದ್ದು ಕೆಲವರಿಗೆ ಉಪಯೋಗವೆನಿಸಿದರೂ ಸಾಕು" ಎಂದಿದ್ದರು. 'ತಾನು ಬರೆದದ್ದನ್ನು ಎಲ್ಲರೂ ಓದಬೇಕು, ತನಗೊಂದು ಹೆಸರು ಬರಬೇಕು' ಎಂದು ಎಲ್ಲರೂ ಆಶಿಸುವ ಈ ಕಾಲದಲ್ಲಿ ಇವರ ಮಾತು ನನಗೆ ಆಶ್ಚರ್ಯ ತಂದಿತ್ತು. ಕಾಲಕ್ರಮೇಣ ಅವರು ಅದರಂತೆಯೇ ನಡೆದುಕೊಂಡು ಬಂದದ್ದು ನನ್ನಲ್ಲಿ ಇವರ ಬಗ್ಗೆ ಇದ್ದ ಗೌರವ ಹೆಚ್ಚಿಸಿತು.
ಹಾಗೆ ನೋಡಿದರೆ ಅವರು ಬರೆದದ್ದನ್ನು ಓದುತ್ತಿದ್ದವರು ತುಂಬ ಜನ! ಯಾವುದೇ ಹೆಸರು ಬರಲೆಂದು ಆಶಿಸದೆ ಓದುಗರಿಗೆ ಉಪಯೋಗವಾಗಲೆಂದೇ ಬರವಣಿಗೆ ಶುರು ಮಾಡಿದವರು ಉದಯವಾಣಿಯಲ್ಲಿ ಕೂಡ ಒಂದು ಕಾಲಂ ಬರೆಯಲು ಪ್ರಾರಂಭಿಸಿದರು.  ಅವರ ಉದಯವಾಣಿ ಕಾಲಂ ಓದಿದವರಿಂದ ಬರುತ್ತಿದ್ದ ಪ್ರಶ್ನೆಗಳು ಸಂಖ್ಯೆಯಲ್ಲಿ ಉತ್ತರಿಸಲೂ ಆಗದಷ್ಟು ಇದ್ದವೆಂದು ನಮಗೆಲ್ಲರಿಗೂ ತಿಳಿದಿದ್ದ ಸಂಗತಿಯೇ.  

ಮುಂಜಾನೆ ಎದ್ದು ಸುದ್ದಿಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ, ತಂತ್ರಜ್ಞಾನದ ಸುದ್ದಿಗಳು ಮುಂತಾದವುಗಳನ್ನು ಓದುತ್ತ ಸಮಯ ಕಳೆಯುವುದು ಇವರ ಹವ್ಯಾಸ. ಇಂಜಿನೀಯರಿಂಗ್ ಕಾಲೇಜಿನಲ್ಲಿ ಪಾಠ ಹೇಳುತ್ತಿದ್ದ ಇವರು ಅಲ್ಲಿ ಓದುತ್ತಿದ್ದ ಹುಡುಗರೊಂದಿಗೆ ಮೇಷ್ಟರಿಗಿಂತ ಹೆಚ್ಚಾಗಿ ಸ್ನೇಹಿತನಂತೆ ನಡೆದುಕೊಳ್ಳುತ್ತಿದ್ದರು. ಮೃದು ಸ್ವಭಾವ, ಅಸಾಧಾರಣ ವ್ಯಕ್ತಿತ್ವ ಇವರದು. ಎಂದೂ ತಮ್ಮ ಫೋಟೋ ಎಲ್ಲಿಯೂ ಹಾಕಿಕೊಳ್ಳಲಿಲ್ಲ. ಸಂಪದ ಪ್ರೊಫೈಲಿನಲ್ಲಿ ನಿಮ್ಮ ಫೋಟೋ‌ ಹಾಕಿ ಎಂದಿದ್ದಕ್ಕೆ "ಫೋಟೋ ಯಾತಕ್ಕೆ, ನಾನು ಬರೆದದ್ದು ಯಾರಿಗಾದರೂ ಉಪಯೋಗವಾದರೆ ಸಾಕು. ನನ್ನ ಫೋಟೋ ನೋಡಿ ಏನು ಮಾಡುತ್ತಾರೆ" ಎನ್ನುತ್ತಿದ್ದರು. ಕೊನೆಗೆ ನನ್ನ ಒತ್ತಾಯಕ್ಕೆ ಮಣಿದು ಪ್ರಕಾಶ್ ಶೆಟ್ಟಿ ಅವರಿಗೆ ಬರೆದುಕೊಟ್ಟಿದ್ದ ಅವರದ್ದೊಂದು ವ್ಯಂಗ್ಯಚಿತ್ರವನ್ನೇ ಪ್ರೊಫೈಲ್ ಪುಟದಲ್ಲಿ ಫೋಟೋ‌  ಬದಲು ಹಾಕಿದರು! ತೀರ ಸರಳ ವ್ಯಕ್ತಿ!

ಇಂದು ಇವರು ತೀರಿಹೋದರು ಎಂಬ ಸುದ್ದಿ ಕೇಳಿ ನನಗೆ ಆಘಾತವಾಯಿತು. ಇವರು ಸಂಪದಿಗ ಡಾ. ಅಶೋಕ್ ಕುಮಾರ್. ‍ಉಡುಪಿಯ ಅಂಬಲಪಾಡಿಯಲ್ಲಿದ್ದುಕೊಂಡು ನಿಟ್ಟೆ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಇವರ ಜೀವನಶೈಲಿ ಸರಳವಾಗಿತ್ತು. ಅಂಬಲಪಾಡಿಯಲ್ಲಿ ಅವರು ಕಟ್ಟಿಸಿಕೊಂಡಿದ್ದ ಪುಟ್ಟ ಮನೆಯ ಸುತ್ತ ಕಾಂಪೌಂಡು ಇರಲಿಲ್ಲ. ಪ್ರತಿ ಸಾರಿ ಅಲ್ಲಿ ಹೋದಾಗ ನನಗೆ ಈ ವಿಷಯ ಗಮನಕ್ಕೆ ಬಂದರೂ ಅದರ ಬಗ್ಗೆ ವಿಚಾರಿಸಲು ಹೋಗಿರಲಿಲ್ಲ. ಒಂದು ಸಲ ಅವರ ಮನೆಗೆ ಭೇಟಿ ಕೊಟ್ಟಾಗ ಇವರ ದೊಡ್ಡದಾದ ಕಾಂಪೌಂಡಿನಲ್ಲಿ ಕಾರು ನಿಲ್ಲಿಸಲು ಎಲ್ಲೂ ಜಾಗವಿರಲಿಲ್ಲ. ನಾಲ್ಕೈದು ಕಾರು, ವ್ಯಾನುಗಳು ಆ ಜಾಗವನ್ನು ಆಕ್ರಮಿಸಿಕೊಂಡುಬಿಟ್ಟಿದ್ದವು. ಒಳಗೆ ಹೋಗಿ ನೋಡಿದರೆ ಅಶೋಕ್ ಮನೆಯಲ್ಲಿ ಯಾರೂ ಅತಿಥಿಗಳಿಲ್ಲ. "ಏನಿದು, ಮತ್ತೆ, ಇಷ್ಟೊಂದು ಗಾಡಿಗಳು ಹೊರಗಿವೆ? ಎಂದು ವಿಚಾರಿಸಲಾಗಿ ಕಾಂಪೌಂಡು ಎಬ್ಬಿಸಿಲ್ಲದರ ಹಿಂದಿದ್ದ ರಹಸ್ಯ ಹೊರಬಿತ್ತು. ಅಶೋಕ್ ಇದ್ದದ್ದು ಒಬ್ಬರೇ. ಆಗಾಗ ಅವರ ತಾಯಿ ಮನೆಗೆ ಬಂದು ಹೋಗುತ್ತಿದ್ದರು. ಅಶೋಕ್ ಮನೆ ಕಟ್ಟಿಸುವಾಗ ಮುಂದೆ ಸಾಕಷ್ಟು ಜಾಗ ಉಳಿಯಿತಂತೆ. ಅದನ್ನು ಕಾಂಪೌಂಡು ಹಾಕಿ ಯಾರೂ ಬಳಸದಂತೆ ಮಾಡುವುದ್ಯಾಕೆ? ಮೊದಲೇ ಪುಟ್ಟ ರೋಡು, ಯಾರಾದರೂ ಬಂದರೆ ಜಾಗವಿಲ್ಲದೆ ಎಲ್ಲೆಲ್ಲೋ ಪಾರ್ಕ್ ಮಾಡುತ್ತಾರೆ - ಅವರೆಲ್ಲ ಇಲ್ಲೇ ಪಾರ್ಕ್ ಮಾಡಬಹುದು ಎಂದು ಕಾಂಪೌಂಡು ಎತ್ತಿಸದೇ ಬಿಟ್ಟರಂತೆ! ಅವರ ಮನೆಗೆ ಪೂರ್ಣ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಮಾಡುವ ಉಪಕರಣಗಳನ್ನು ಅಳವಡಿಸಿದ್ದರು. ಒಳ್ಳೆಯದೊಂದು ಕಾರು ಕೊಳ್ಳುವಷ್ಟು ಶಕ್ತರಾದರೂ "ಅಷ್ಟೆಲ್ಲ ಯಾಕೆ? ನನಗೊಂದು ಮಾರುತಿ ಆಮ್ನಿ ಸಾಕು - ಅವಶ್ಯಕತೆಗಿಂತ ಹೆಚ್ಚು ಸವಲತ್ತು ನನಗೆ ಬೇಡ' ಎಂದು ಮಾರುತಿ ಆಮ್ನಿಯನ್ನೇ ಕೊಂಡು ತಂದಿದ್ದರು.

ತಪ್ಪದೆ ಪ್ರತಿ ವಾರ ಬರೆಯುತ್ತಿದ್ದರು. ಪ್ರತಿ ನಿತ್ಯ ತಪ್ಪದೆ ಸುದ್ದಿಪತ್ರಿಕೆಗಳನ್ನು ಓದುತ್ತ ಅದರಲ್ಲಿ ಸಿಕ್ಕ ಉತ್ತಮ ಬರಹಗಳನ್ನು ಉಳಿದವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಇವರು ಸಂಪದದಲ್ಲಿ ಬರೆಯಲು ಪ್ರಾರಂಭಿಸಿದ ಮೊದಲಗಿರಲ್ಲಿ ಒಬ್ಬರು. ಸಂಪದದ ಕುರಿತು ಇವರಿಗೆ ತುಂಬ ಅಭಿಮಾನ. ಉಡುಪಿಯಲ್ಲಿ ಇವರ ಮನೆಗೆ ಭೇಟಿ ಕೊಟ್ಟಾಗ ಹೆಚ್ಚಿನ ಸಮಯ ಸಂಪದ ಕುರಿತು ಚರ್ಚೆಯೇ ನಮ್ಮದು. ತಮ್ಮ ಕಂಪ್ಯೂಟರಿನಲ್ಲಿ ಗ್ನು/ಲಿನಕ್ಸ್ ಹಾಕಿಕೊಂಡು ಹೊಸತುಗಳನ್ನು ಹುಡುಕುತ್ತ ಹೋಗುತ್ತಿದ್ದ ಇವರದ್ದು ಕುಂದದ ಆಸಕ್ತಿ. ತಂತ್ರಜ್ಞಾನ ಹಾಗು ಗ್ನು/ಲಿನಕ್ಸ್ ಕುರಿತು ಆಗ ಆಸಕ್ತಿಯಿಂದ ಬಡಬಡನೆ ಮಾತನಾಡುತ್ತಿದ್ದ ನನಗೆ "ನಾಡಿಗ್, ನೀವೂ ನನ್ನಂತೆಯೇ‌ ಏನೂ ಹೊಗಳಿಕೆ ಬಯಸದೆ ಕೆಲಸ ಮಾಡುತ್ತಿರಬೇಡಿ. ನನ್ನದು ಬೇರೆ ವಿಷಯ. ನೀವಿನ್ನೂ ವಯಸ್ಸಿನಲ್ಲಿ ಚಿಕ್ಕವರು. ನೀವು ಇಷ್ಟೊಂದು ಪರಿಶ್ರಮದಿಂದ ಕನ್ನಡದ ಕೆಲಸ ಮಾಡುತ್ತಿದ್ದೀರಿ. ನಿಮ್ಮನ್ನು ಯಾರಾದರೂ ಗುರುತಿಸಲೇಬೇಕು, ಗುರುತಿಸಿದರೇ ಚೆನ್ನ." ಎನ್ನುತ್ತಿದ್ದರು. ‍ಒಮ್ಮೆ ಅವರೇ ಫಾರ್ಮ್ ಭರ್ತಿ ಮಾಡಿ ಬೆಂಗಳೂರಿನ "ಯಂಗ್ ಅಚೀವರ್ಸ್ ಅವಾರ್ಡ್" ಪ್ರಶಸ್ತಿಗೆ ನನ್ನ ಹೆಸರನ್ನು ಸೂಚಿಸಿಬಿಟ್ಟಿದ್ದರು. "ನಿಮ್ಮ ಹೆಸರು ಈ ಪ್ರಶಸ್ತಿಗೆ ಸೂಚಿಸಿದ್ದೇನೆ. ನಿಮ್ಮ ಬಗ್ಗೆ ಬರೆದೂ ಕಳುಹಿಸಿದ್ದೇನೆ. ಅವರೇನಾದರೂ ಫೋನ್ ಮಾಡಿದರೆ ನಿಮಗೇನೂ ಗೊತ್ತಿಲ್ಲ, ನಾನು ಅಪ್ಲೈ ಮಾಡಿಲ್ಲ ಅಂದುಬಿಟ್ಟೀರಿ ಮತ್ತೆ" ಎಂದು ಎಚ್ಚರಿಸಲು ಅವರು ಫೋನ್ ಮಾಡಿದಾಗಲೇ ನನಗೆ ಇದರ ವಿಷಯ ತಿಳಿದುಬಂದದ್ದು! ತದನಂತರ ಆ ಪ್ರಶಸ್ತಿಗೆ ಕೊನೆಯ ಪಟ್ಟಿಯಲ್ಲಿ ನನ್ನ ಹೆಸರು ಬಂದದ್ದು ನೋಡಿ "ನಾನು ಹೇಳಿರಲಿಲ್ಲವಾ? ನಿಮ್ಮ ಸಾಧನೆ ಕಡಿಮೆಯೇನಿಲ್ಲ!" ಎಂದು ಮತ್ತೆ ನನ್ನಲ್ಲಿ ‍ಆತ್ಮವಿಶ್ವಾಸ ತುಂಬಿದ್ದರು.  

ಒಮ್ಮೆ ಹೀಗೇ ಗ್ನು/ಲಿನಕ್ಸ್ ಕುರಿತು ಮಾತನಾಡುತ್ತ ನಾವು ಸಂಪದಿಗರು ಕೆಲವರು ಬೆಂಗಳೂರಿನಲ್ಲಿ ನಡೆಸಿದ ಗ್ನು/ಲಿನಕ್ಸ್ ಹಬ್ಬದ ಮಾತು ಬಂದು "ನಿಟ್ಟೆಯಲ್ಲೊಂದು ಆ ರೀತಿಯ ಕಾರ್ಯಕ್ರಮ ಯಾಕೆ ಮಾಡಬಾರದು?" ಎಂದು ಕೇಳಿದವರು ಕೆಲವೇ ದಿನಗಳಲ್ಲಿ ಕಾರ್ಯಕ್ರಮಕ್ಕೆ ಎಲ್ಲವನ್ನೂ ಕೂಡಲೆ ಹೊಂದಿಸಿ ನಮ್ಮನ್ನೆಲ್ಲ ಕರೆಸಿಯೇಬಿಟ್ಟರು. ಅಲ್ಲಿ ನಾವು ನಡೆಸಿದ ಕಾರ್ಯಕ್ರಮ ಹಲವು ರೀತಿಯಲ್ಲಿ ನೆನಪಿನಲ್ಲಿ ಅಚ್ಚುಳಿಯುವಂಥದ್ದು - ಅದೇ ಮೊದಲ ಸಾರಿ ಆಪರೇಟಿಂಗ್ ಸಿಸ್ಟಮ್ ಒಂದರಲ್ಲಿ ಸಂಪೂರ್ಣ ಕನ್ನಡ ತರುವ ಪ್ರಯತ್ನ -  "ಚಿಗುರು" ಎಲ್ಲರಿಗೂ ಸಿ.ಡಿ. ರೂಪದಲ್ಲಿ ಹಂಚಿದ್ದೆವು. ರವಿ ಕೆ ಹರನಾಥ್, ಅರವಿಂದ, ವಿನಯ್ ಮತ್ತು ತಂಡ ರೂಪಿಸಿದ್ದ ತಂತ್ರಾಂಶ ಬಳಸಿ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ನಾನು, ಶ್ರೀನಿಧಿ ಎನ್, ಶಶಿ, ಮೊದ್ದುಮಣಿ ಎಲ್ಲರೂ ಜೊತೆಕೊಟ್ಟಿದ್ದೆವು! ನೂರಾರು ಜನ ವಿದ್ಯಾರ್ಥಿಗಳಿಗೆ ಗ್ನು/ಲಿನಕ್ಸ್ ಪರಿಚಯ ಮಾಡಿಕೊಟ್ಟಿದ್ದೆವು! 'ಚಿಗುರು' ಎಂಬ ಹೆಸರೂ ಕೂಡ ಸಂಪದದಲ್ಲೇ ನಡೆದ ಚರ್ಚೆಯೊಂದರಿಂದ ಹೊರಬಂದದ್ದು.

ಮೂರು ವರ್ಷಗಳ ಹಿಂದೆ ಸುಮಳೊಂದಿಗೆ ನಿಶ್ಚಿತಾರ್ಥ ಉಡುಪಿಯ ಪಾಜಕದಲ್ಲೇ ಏರ್ಪಟ್ಟಿದ್ದ ಸಮಯ ಇವರನ್ನು ಆಮಂತ್ರಿಸಿದ್ದೆ. ನನ್ನ ಲ್ಯಾಪ್ಟಾಪ್ ಮತ್ತು ಒಂದಷ್ಟು ಲಗೇಜು ಕೂಡ ಇವರ ಮನೆಯಲ್ಲೇ ಬಿಟ್ಟು ಹೋಗಿದ್ದೆ. ಆಗ "ಹರಿ, ತಪ್ಪು ತಿಳಿಯಬೇಡಿ - ನಾನು ದೇವಸ್ಥಾನಗಳಿಗೆ, ಮದುವೆ - ಮುಂಜಿಗಳಿಗೆ ಹೋಗಿ ತಿಳಿದವನಲ್ಲ. ಬರಲಿ, ಬರದಿರಲಿ ನಿಮಗೆ ಒಳ್ಳೆಯದಾಗಲಿ ಎಂಬುದೇ ನನ್ನ ಬಯಕೆ" ಎಂದಿದ್ದರು. ‍ದೇವರು ಕುರಿತು, ಆಚರಣೆಗಳ ಕುರಿತು ಅವರಿಗೆ ತಮ್ಮದೇ ಆದ ನಿಲುವೊಂದಿತ್ತು. ಅದನ್ನು ನನಗೆ ತಿಳಿದಂತೆ ಅವರು ಬಹಿರಂಗಪಡಿಸುವ ಗೋಜಿಗೆ ಹೋಗಲಿಲ್ಲ. ಅದೇನಿದ್ದರೂ ವೈಯಕ್ತಿಕ ಎಂದು ತಿಳಿದು ನಡೆದವರು ಅವರು.

ತಂತ್ರಜ್ಞನಾಗಿ ದುಡಿಯುತ್ತಿರುವ ನನಗೆ ಇತ್ತೀಚೆಗೆ ಸಮಯದ ಅಭಾವದಿಂದಾಗಿ ತಂತ್ರಜ್ಞಾನ ಕುರಿತು ಸುದ್ದಿಗಳನ್ನು ನೋಡಲೂ ಆಗದಂತಹ ಪರಿಸ್ಥಿತಿ ಎದುರಾದಾಗ ಅಶೋಕ್ ಬರೆದಿಡುತ್ತಿದ್ದ ಸುದ್ದಿ ತುಣುಕುಗಳ ಬರಹವನ್ನೇ ತಪ್ಪದೆ ಓದಿಕೊಳ್ಳುತ್ತಿದ್ದೆ. ಸಾಧಾರಣವಾಗಿ ಯಾವುದೇ ಪ್ರಮುಖ ಸುದ್ದಿಯನ್ನೂ ಅವರು ಬಿಡುತ್ತಿರಲಿಲ್ಲ. ಕೂಲಂಕುಷವಾಗಿ ಅಂತರ್ಜಾಲ ಜಾಲಾಡುತ್ತ ಮೌಲ್ಯಯುತವಾದ ತಂತ್ರಜ್ಞಾನ ಕುರಿತ ಸುದ್ದಿಗಳನ್ನು ಹೆಕ್ಕಿ ತೆಗೆದು ಕನ್ನಡದಲ್ಲಿ ಅನುವಾದ ಮಾಡಿ ಹಾಕುತ್ತಿದ್ದರು. ಕನ್ನಡದಲ್ಲಿ ಓದುವವರಿಗೆ ತಂತ್ರಜ್ಞಾನ ಕುರಿತು ಸುದ್ದಿ ಸಿಗುವುದು ಕಷ್ಟ - ಅದನ್ನು ತಲುಪಿಸುವ ಕೆಲಸ ಮಾಡಬೇಕು ಎನ್ನುವುದು ಅವರ ಉದ್ದೇಶ. ಹೀಗೆ ನಿಸ್ವಾರ್ಥವಾಗಿ ಬರೆದ, ಹೆಸರು ಬರಲೆಂದು ಅಪೇಕ್ಷೆ ಇಟ್ಟುಕೊಳ್ಳದ ಇವರು ಬರಹಗಾರರಾಗಿ, ‍ಕುಂದದ ಆಸಕ್ತಿಯ ಸೆಲೆಯಾಗಿ, ಎಲೆ ಮರೆಯಲ್ಲಿ ನಿಂತು ಕನ್ನಡದ ಕೆಲಸ ಮಾಡುತ್ತಿರುವವರಿಗೆ ಆದರ್ಶದ ಬೆಳಕಾಗಿ ನೆನಪಿನಲ್ಲುಳಿಯುವರು.

ನೋಟ್: ಅವರು ತಮ್ಮ ಯಾವುದೇ ಫೋಟೋ ಆನ್ಲೈನ್ ಹಾಕಕೂಡದೆಂದು ಬಯಸಿದ್ದರಿಂದ ನನ್ನ ಬಳಿ ನಾನೇ ತೆಗೆದ ಅವರ ಫೋಟೋ ಇದ್ದರೂ ‍ಹಾಕಬಾರದೆಂದು ನಿಶ್ಚಯಿಸಿ ಫೋಟೋ ಇಲ್ಲದ ನನ್ನ ನೆನಪುಗಳನ್ನು ಹಂಚಿಕೊಳ್ಳುತ್ತಿರುವೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆಚ್. ಪಿ.ಎನ್, ಬರಿದಿರುವ ಅಶೋಕ್ ಕುಮಾರ್ ಬಗ್ಗೆ ನೆನೆಪುಗಳು, ತುಂಬ ಚೆನ್ನಾಗಿವೆ. ನಮಗೆ ಅವರ ಫೋಟೋ ಇದ್ದಿದ್ದರೆ ಚೆನ್ನಾಗಿತ್ತೇನೋ ಅನ್ನಿಸಿದರೆ ತಪ್ಪೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಾನ್ಯ ನಾಡಿಗ ಸರ್ ನಾನು ಸಂಪದದ ಹೊಸ ಸದಸ್ಯ, ತಾವು ಅಶೋಕ ಕುಮಾರವರ ಕುರಿತು ಬರೆದ ನೆನಪು ಲೇಖನ ತುಂಬಾ ಚೆನ್ನಾಗಿದೆ ನಮಗೆ ಅಶೋಕ ಕುಮಾರವರ ಪರಿಚಯವೇ ಇರಲಿಲ್ಲ ಅವರೂ ಕೂಡಾ ಸಂಪದದ ಒಬ್ಬ ಬರಹಗಾರಾಗಿದ್ದರು ಎನ್ನುವುದು ಅವರ ಕುರಿತು ಲೇಖನದಿಂದ ತಿಳಿಯಿತು ಲೇಖನದಲ್ಲಿ ಅವರ ಕಿರು ಪರಿಚಯವನ್ನು ಸೆರಿಸಿದ್ದರೆ ಚೆನ್ನಾಗಿತ್ತು, ಸರ್ ತಾವುಗಳು ಅವರ ಕುರಿತು ಮುಂದಿನ ಲೇಖನದಲ್ಲಿ ದಿವಂಗತ ಅಶೋಕ ಕುಮಾರವರ ವ್ಯಕ್ತಿ ಪರಿಚಯ ಬರೆಯಿರಿ ಸರಳ ಜೀವಿ,ಕನ್ನಡದ ಅಭಿಮಾನಿ,ತುಂಬು ಹೃದಯದ ಅಶೋಕ್ ಕುಮಾರರವ ಎಲ್ಲೊ ಇರುವ ನನ್ನಂಥವರ ಸಹೃದಯರಿಗೆ ತಂಬಾ ನೋವಾಗಿದೆ,ದೇವರ ಬಗ್ಗೆ ನಂಬಿಕೆ ಇಲ್ಲದ ಅವರಿಗೆ ಸಮಸ್ತ ಸಂಪದ ಓದುಗರ ಪರವಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೆನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೆಚ್ ಪಿ ನಾಡಿಗ್ ರವರಿಗೆ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಪ್ರೊ. ಅಶೋಕಕುಮಾರ ರವರ ವ್ಯಕ್ತಿತ್ವವನ್ನು ಬಹು ಚನ್ನಾಗಿ ಕಟ್ಟಿಕೊಟ್ಟಿರುವಿರಿ, ಇಂತಹ ಒಬ್ಬ ಅಪರೂಪದ ವ್ಯಕ್ತಿ ನಮ್ಮ ಮದ್ಯದಲ್ಲಿದ್ದರು ಎಂಬುದೇ ನಮ್ಮಂತಹವರಿಗೆ ಹೆಮ್ಮೆಯ ವಿಷಯ. ಅವರ ಬಗ್ಗೆ ಏನೊಂದೂ ತಿಳಿಯದ ನಮಗೆ ಅವರ ಕುರಿತು ಗೌರವಾದರಗಳು ಮೂಡಿ,ಅವರ ಅಲಲಿಕೆಯ ನೋವು ಬಾಧಿಸಿತು. ಇಂತಹ ಒಬ್ಬ ಪರಮಮಿತ್ರನನ್ನು ಕೆಳೆದುಕೊಂಡ ಸಂಪದ ನಿಜಕ್ಕೂ ಬಡವಾಗಿದೆ, ಪ್ರೊ. ಆಶೋಕಕುಮಾರ ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಸಂಬಂಧಿಗಳಿಗೆ ನೀಡಲೆಂದು ಅಂತರಾಳದಿಂದ ಪ್ರಾರ್ಥಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹರಿಯವರೆ, ಡಾ| ಅಶೋಕ್ ಸರ್ ಮೇಲಿನ ಶ್ರದ್ದಾಂಜಲಿ ಬರಹಕ್ಕೆ ತುಂಬಾ ಧನ್ಯವಾದಗಳು. ನಾನೂ ನಿಟ್ಟೆಯ ವಿದ್ಯಾರ್ಥಿ, ನಾನು ಸಂಪದ ಸೇರಲಿಕ್ಕೆ ಮೂಲ ಕಾರಣವೆ ಅಶೋಕ್ ಸರ್ ! ಅವರೊಬ್ಬ ಸರಳ, ಸುಸಂಪನ್ನ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವೆಲ್ಲಾ ಹಾರೈಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆಶೋಕರನ್ನು ನೆನೆಯೋಣ ಹಾಗೆಯೆ ತಮ್ಮ ಚಿತ್ರ ಅಂತರ್ಜಾಲದಲ್ಲಿ ಬೇಡ ಎಂಬ ಅವರ ಭಾವನೆ ಗೌರವಿಸೋಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ಬರಹಕ್ಕೆ ಧನ್ಯವಾದಗಳು ನಾಡಿಗರೆ, ನಾನು ಇ ತಾಣಕ್ಕೆ ಹೊಸದಾಗಿ ಬನ್ದಾಗ‌ ಅವರದು ಬರಹ‌ ದಿನವೂ ಬರುತ್ತಿತ್ತು. ನಾನೂ ಓದುತ್ತಿದ್ದೆ. ನನಗೂ ನೀವು ಹೇಳಿದನ್ತೆ ಹತ್ತಾರು ಪೇಪರ್ ಓದಲು ಕಾಲಾವಕಾಷವಿರಲಿಲ್ಲ‌. ಅವರ‌ ಆತ್ಮಕ್ಕೆ ಷಾನ್ತಿ ಸಿಗಲಿ! ಮೀನಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬೆಳದಿಂಗಳ ಬಾಲೆ ಚಿತ್ರದ ಕೊನೆಯ ದೃಶ್ಯ ನೆನಪಾಯ್ತು ಅಶೋಕ್ ಅವರು ನಮ್ಮ ಮನಗಳಲ್ಲಿ ಹೇಗಿದ್ದಾರೋ ಹಾಗೇ ಇರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಡಿಗರೆ, ತುಂಬಾ ಆತ್ಮೀಯವಾಗಿ  ನೆನಪುಗಳನ್ನು ಹಂಚ್ಕೊಂಡ ಲೇಖನ. ಓದಿದ ಮೇಲೆ ಅಶೋಕರ ಮೇಲಿನ ಗೌರವ ದುಪ್ಪಟ್ಟಾಯಿತು. ಏಪ್ರಿಲ್ ಧಾಳಿಯಲ್ಲಿ ಧರೆಗೊರಗಿದ ಮತ್ತೊಂದು ಕನ್ನಡ ಕುಸುಮಕ್ಕೆ ಶ್ರದ್ದಾಂಜಲಿ ಸಲ್ಲಿಸುವ ನಿಮ್ಮ ಲೇಖನಕ್ಕೆ ಧನ್ಯವಾದಗಳು - ನಾಗೇಶ ಮೈಸೂರು, ಸಿಂಗಾಪುರದಿಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಹಳ ಮುಂಚಿನಿಂದ ಸಂಪದದಲ್ಲಿ ಬರೆಯುವ ನನ್ನ ಹಲವು ಗೆಳೆಯರ ಪೈಕಿ, ಹರಿಪ್ರಸಾದ್ ನಾಡಿಗ್, ಶ್ರೀಕಾಂತ ಮಿಶ್ರಿಕೋಟಿ, ಶ್ರೀನಿವಾಸ, ಮೊದಲಾದವರಲ್ಲಿ, ಅಶೋಕ್ ಒಬ್ಬರು ! ನಾನು ಅಮೇರಿಕಕ್ಕೆ ಹೋದಾಗ ಅಲ್ಲಿನ ಜಾಗಗಳಿಗೆ ಭೇಟಿಮಾಡಿದಾಗ ಕಂಡ ಕೆಲವು ಹೊಸ ವಿಷಯಗಳ ಬಗ್ಗೆ, ಹಲವಾರು ಲೇಖನಗಳನ್ನು ಬರೆದಿದ್ದೆ. ಅಶೋಕ್ ಅವಕ್ಕೆ ಸ್ಪಂದಿಸುತ್ತಿದ್ದರು. ತಮ್ಮ ಸಲಹೆ ಗಳನ್ನು ಕೊಡುತ್ತಿದ್ದರು. ಚಿತ್ರದುರ್ಗದ ಪಾಳೇಗಾರರು, ಅನುಭವಾಮೃತ ಮೊದಲಾದ ಪುಸ್ತಕಗಳ ಬಗ್ಗೆ ಮಾತು ಬಂದಾಗ ಅವುಗಳ ಲಿಂಕ್ ಕೊಡುವುದರಲ್ಲಿ ಅವರು ಮೊದಲಿಗರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿದಿನ ಬೆಳಿಗ್ಗೆ ಭೇಟಿ ನೀಡುತ್ತಿದ್ದ ಪುಟಗಳಲ್ಲಿ "ಓಕೆನೋ" ಒಂದು. ಒಂದು ತಿಂಗಳಿಂದ ಈ ಪುಟ ಮತ್ತು ನಿಸ್ತಂತು ಸಂಸಾರ ಅಪ್ಡೇಟ್ ಆಗದಿದ್ದಾಗ ಅಶೋಕರವರು ಆರೋಗ್ಯವಾಗಿಲ್ಲವಾ ಎನ್ನುವ ಅನುಮಾನ ಬಂದಿತ್ತು. ನಿನ್ನೆ ರಾಮಕುಮಾರವರ ಬರಹ ನೋಡಿದಾಗ ಶಾಕ್ ಆಯಿತು. ಕೆಲವೊಂದು ಸಾರಿ ಮಿಂಚಂಚೆಯಲ್ಲಿ ಅವರ ಜೊತೆ ಮಾತನಾಡಿದ್ದುಂಟು. ಅವರ ವಿನಯವನ್ನು ಅವುಗಳಲ್ಲಿ ನೋಡಿ ಬೆರಗಾಗಿದ್ದೆ. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹರಿ ನಾನು ಸಂಪದದಲ್ಲಿ ಓದಲು ಶುರುಮಾಡಿದಾಗ ಇಷ್ಟ ಪಟ್ಟು ಓದುತ್ತಿದ್ದ ಅಂಕಣಗಳಲ್ಲಿ ಓಕೆನೋ ಕೂಡಾ ಒಂದು. ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ ನಿಯಮಿತವಾಗಿ ಅದನ್ನು ಓದುಗರಿಗೆ ನೀಡುವುದರ ಪರಿಶ್ರಮ ಸಣ್ಣದಲ್ಲ. ನನಗೆ ಅವರ ಪರಿಚಯವಿರಲಿಲ್ಲ. ಆದರೂ ಅವರಿನ್ನು ಇಲ್ಲ ಅಂತ ಕೇಳಿ ಬಹಳ ಬೇಸರವಾಯಿತು. ನಾರಾಯಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹರಿ ಅವ್ರೆ ನೀವ್ ಬರೆದಿರುವ ಈ ಬರಹ ಅಶೋಕ್ ಕುಮಾರ್ ಅವರ ಬಗೆಗೆ ನಾವ್ ಅರಿಯದ ಹಲವು ವಿಚಾರಗಳನ್ನು ತಿಳಿಸಿತು , ಹಾಗೆಯೇ ಬಹು ಆಪ್ತವಾಗಿದ್ದು ಅವರ ಆಶಯದಂತೆ ನೀವ್ ಅವರ ನೈಜ ಚಿತ್ರ ಹಾಕದೆ ಕ್ಯಾರಿಕೇಚರ್ ಹಾಕಿದ್ದು ಹಿಡಿಸಿತು . ಅಶೋಕ್ ಕುಮಾರ್ ಅವರ ಕುರಿತು ಬಂದ ಬರಹಗಳಿಗೆ ಓದುಗರು ನೀಡಿದ ಪ್ರತಿಕ್ರಿಯೆಗಳು ಮತ್ತು ಹಿಟ್ಸ್ ಗಮನಿಸಿದಾಗ ಅವರ ಲೇಖನ ಎಲ್ಲೆಡೆ ಬಹು ಜನ ಓದುತ್ತಿದ್ದರು ಎಂದು ತಿಳಿವದು . ಅರ್ಥಪೂರ್ಣ ನುಡಿ ಶ್ರದ್ಧಾಂಜಲಿ .. ಅವರ ಆತ್ಮಕ್ಕೆ ಶಾಂತಿ ಸಿಗಲಿ ,ಅವರು ಬರೆದ ಬರಹಗಳ ಮೂಲಕ ಅವರು ಸದಾ ನಮ್ಮನೆನಪಲ್ಲಿ .. ಅವರನ್ನ ತಂತ್ರಜ್ಞಾನ ಸಂಬಂಧಿ ಸರಳ ಬರಹಗಳನ್ನು ನಾವ್ ಭಲೇ ಮಿಸ್ ಮಾಡ್ಕೊಳ್ತೀವಿ ... \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.