ಅವರವರ ಭಾವಕ್ಕೆ ಅವರವರ ಭಕುತಿಗೆ ........

4.375

ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ  ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ ತಲೆಗೇರಿಸಿಕೊಂಡು ಮನೆಗೆ ಬಂದೆ. ಮನೆಗೆಬಂದು ಮುಖತೊಳೆದು ತಲೆಬಾಚಿದಾಗ ಹಲವು ಅಕ್ಷತೆ ಕಾಳುಗಳು ಕೆಳಗೆ ಬಿದ್ದವು. ಅವು ಕಾಲಿಗೆ ಸಿಕ್ಕುವುದು ಸರಿಯಲ್ಲವೆನಿಸಿ  ಅವನ್ನು ತೆಗೆದು ಪಕ್ಕಕ್ಕೆಹಾಕಿದೆ. ನಂತರ ರಾಯರು, ಅಕ್ಷತೆ , ಮಠ ಎಲ್ಲವೂ ಮರೆತವು .
 
ಸಂಜೆ ಏನೂ ಕೆಲಸವಿರಲಿಲ್ಲ.  ಗಿಡಗಳಿಗೆ ನೀರುಹಾಕಿ, ಕಾರುತೊಳೆದು, ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನೆಲ್ಲಾ ಮುಗಿಸಿದರೂ ಆರೂವರೆ ಆಗಿತ್ತು ಅಷ್ಟೇ. ಏನು ಮಾಡಲೂ ತೋರಲಿಲ್ಲ. ಸುಮ್ಮನೆ ಕೂರಲು ಬೇಜಾರು. ಓದಲು ಯಾವುದೂ ಪುಸ್ತಕ ಸಿಗಲಿಲ್ಲ. ಹಾಗಾಗಿ ಹಜಾಮತಿಯಾದರೂ ಮುಗಿಸಿಕೊಳ್ಳೋಣವೆಂದು ಕ್ಷೌರದ ಅಂಗಡಿಗೆ ಹೋದೆ.
 
"ಬರ್ರೀ  ಸರ್ ಭಾಳದಿನಾತು " ಸ್ವಾಗತಿಸಿದ ಯಜಮಾನ ಶರಣಪ್ಪ.
 
ಕನ್ನಡಿಯ ಮುಂದೆ ಕೂರಿಸಿ, ತಲೆಗೆ ನೀರು ಸಿಂಪಡಿಸಿ ಕೂದಲಿನಮೇಲೆ ಕೈಯಾಡಿಸಿದ.  ಅವನಕೈಗೆ ಎರಡು  ಅಕ್ಷತೆ ಕಾಳು ಸಿಕ್ಕವು.
 
"ಇದೇನ್ರಿಸರ್ ಅಕ್ಕಿಕಾಳು?"
 
ತಲೆಯಲ್ಲಿ ಅಕ್ಕಿಕಾಳು ಹೇಗೆ ಬಂತು? ಯೋಚಿಸಿದೆ. ಹೊಳೆಯಲಿಲ್ಲ.
 
"ಕೆಂಪದಾವ್ರಿ "
 
ಟ್ಯೂಬು ಹೊತ್ತಿಕೊಂಡಿತು.
 
"ಓಹೋ ಅದಾ? ಬೆಳಗ್ಗೆ ಮಠಕ್ಕೆ ಹೋಗಿದ್ದೆ ನೋಡು ಅಕ್ಷತೆ ಕೊಟ್ಟಿದ್ರು ತಲೆಗೆಹಾಕ್ಕೊಂಡಿದ್ದೆ."
 
"ಮಠಕ್ಕೆ ಹೋಗಿದ್ರೇನ್ರಿ? ಯಾವ ಮಠಾರೀ ?"
 
"ರಾಯರ ಮಠ"
 
"ರಾಯರ ಮಠಾಂದ್ರೆ ? ರಾಘವೇಂದ್ರ ಸ್ವಾಮಿ ಮಠ  ಏನ್ರಿ?
 
"ಹೌದಪ್ಪ"
 
ಶರಣಪ್ಪ ತಕ್ಷಣ  ತನ್ನ ಕೈಲಿ ಹಿಡಿದಿದ್ದ ಅಕ್ಷತೆಕಾಳನ್ನು ಕಣ್ಣಿಗೊತ್ತಿಕೊಂಡ.
 
"ಭಾಳ ಛಲೋ ಆತ್ರಿ. ನನ್ನ ಅದೃಷ್ಟ ನೋಡ್ರಿ. ಇವತ್ತು ಅಲ್ಲಿಗೆ ಹೋಗಬೇಕೆಂದು ಭಾಳ ಅನಿಸಿತ್ರಿ. ಆದ್ರ ಅಗವಲ್ಲದಾತ್ರಿ. ಈಗ ನೋಡ್ರಿ ನಿಮ್ಮ ತಲೇದಾಗ ನನಗ ಪ್ರಸಾದ ಸಿಕ್ತಲ್ರಿ ? ಮನಸು ಹಗೂರಾತ್ರಿ. ನನ್ನ ಮನಸಿನಾಗಿದ್ದ ಪ್ರಶ್ನೆಗೆ ಸ್ವಾಮಿಗಳು  ಉತ್ತರ ಕೊಟ್ಟಾರ ನೋಡ್ರಿ. ನಾ ಮತ್ತೇನೂ ವಿಚಾರ ಮಾಡೂದು ಬೇಕಿಲ್ರಿ."
 
ನನ್ನ ತಲೆಯಲ್ಲಿ ಸಿಕ್ಕ ಅಕ್ಕಿಕಾಳಿನಿಂಡ ಅವನಿಗೆ ಬಹಳ ಸಂತೋಷ ವಾಯಿತೆನ್ನುವುದನ್ನು ಬಿಟ್ಟು ನನಗೆ ಮತ್ತೇನೂ ತಿಳಿಯಲಿಲ್ಲ. ನಾನು ಅವನ ಮುಖ ನೋಡಿದೆ.
 
"ಇವನ್ನ ನಾನು ಇಟಗೊಳ್ಳೇನ್ರಿ"?
 
ಆಗಬಹುದೆಂದು  ತಲೆಹಾಕಿದೆ.
 
 ಅಕ್ಷತೆಕಾಳುಗಳನ್ನು ಕಿಸೆಗೆ ಹಾಕಿಕೊಂಡು ವಿವರ ಹೇಳಿದ.  ಅವನ ಮಗಳಿಗೆ ಹುಬ್ಬಳ್ಳಿಯಲ್ಲಿ ಸಂಭಂಧ ಕೂಡಿ ವಿವಾಹ ನಿಶ್ಚಿತ ವಾಗುವಲ್ಲಿಗೆ ಬಂದಿದೆಯಂತೆ. ನಾನು ಅವನಲ್ಲಿಗೆ ಹೋಗಿದ್ದ ಮಾರನೆಯದಿನ ಅವನ ಮನೆಯವರೆಲ್ಲಾ ಹುಬ್ಬಳ್ಳಿಗೆ ಹೋಗಿ ವಿವಾಹ ನಿಶ್ಚಯಮಾಡಿಕೊಂದು ಬರುವುದಿತ್ತಂತೆ. ತನ್ನ ಕೋಮಿನ ಹಿರಿಯ ಮುಖಂಡರೊಬ್ಬರನ್ನು ತಮ್ಮೊಡನೆ ಬರಬೇಕೆಂದು ಕರೆಯಲು ಶರಣಪ್ಪ ಅವರಲ್ಲಿಗೆ ಹೋದನಂತೆ. ಸಂಭಂದದ ಪ್ರಸ್ತಾಪ ಬಂದಾಗ ತಮ್ಮ ಸಲಹೆ ಕೇಳದೆ, ಎಲ್ಲಾ ಮುಗಿದು ನಿಶ್ಚಯವಾಗುವ ಕಾಲಕ್ಕೆ ತಮ್ಮನ್ನು ಕರೆದನೆಂದು ಆ ಹಿರಿಯರ ಅಭಿಮಾನಕ್ಕೆ ಧಕ್ಕೆಬಂದು, ಅವರು ಸಿಟ್ಟಾಗಿ,  ಯದ್ವಾ ತದ್ವಾ ಮಾತನಾಡಿ, ಈ ಸಂಭಂದದಿಂದ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿಬಿಟ್ಟರಂತೆ. (ಆ ಮುಖಂಡರ ಮಗಳಿಗೂ  ಶರಣಪ್ಪ ನೋಡಿದ್ದ ಸಂಭಂದವನ್ನೇ ವಿಚಾರಿಸಿದ್ದು, ಅದು ಆಗಿಬರಲಿಲ್ಲವೆಂದು ನಂತರ ಮತ್ತಾರೋ ತಿಳಿಸಿದರಂತೆ)
 
ಆ ಹಿರಿಯರೇನೂ ಭಗವಂತನ ತುಂಡಾಗಲೀ ಅಥವಾ ನುಡಿದದ್ದು ನಡೆಯುವಂಥ ಅವಧೂತರಾಗಲೀ ಅಲ್ಲವಾದರೂ ಶರಣಪ್ಪನ ಮನಸ್ಸಿಗೆ ಬಹಳ ಕೆಡುಕೆನಿಸಿ ತಳಮಳವಾಯಿತಂತೆ. ನೋಡಿದ್ದ ಸಂಭಂದ ಮುಂದುವರೆಸುವುದೋ ಬೇಡವೋ ತಿಳಿಯದೆ ಶರಣಪ್ಪ ಒದ್ದಾಡಿದನಂತೆ. ನಂತರ ತಾನು ಸದಾ ನಡೆದುಕೊಳ್ಳುವ ಒಂದು ದೇವಸ್ಥಾನಕ್ಕೆ ಹೋಗಿ ಪ್ರಶ್ನೆ ಕೇಳಿದನಂತೆ. ದೇವರನ್ನು ಕೇಳಿದ ಪೂಜಾರಿ, ಪರಮಾತ್ಮನ ಒಪ್ಪಿಗೆಯನ್ನು ತಿಳಿಯಪಡಿಸಿ ಮುಂದುವರೆಯುವಂತೆ ಹೇಳಿದನಾದರೂ ಶರಣಪ್ಪನಿಗೆ ಪೂರ್ತಿ ಸಮಾಧಾನವಿರಲಿಲ್ಲವಂತೆ. ಮಂತ್ರಾಲಯದ ಸ್ವಾಮಿಗಳ ಪಾದಕ್ಕೆ ಬಿದ್ದರೆ ಅವರು ಕಾಯುವರೆಂದು ಯಾರೋ ಹೇಳಿದ್ದರಿಂದ ಊರಿಗೆ ಹೊರಡುವಮುನ್ನ ರಾಯರ ಪಾದಕ್ಕೆ ಬೀಳಬೇಕೆಂದು ಶರಣಪ್ಪ ಆಶಿಸಿದ್ದನಾದರೂ ಹೊರಡುವದಿನ ಹತ್ತಿರಬಂದರೂ ಅದು ಆಗಿರಲಿಲ್ಲವಂತೆ. ನನ್ನ ತಲೆಯಲ್ಲಿ ರಾಯರ ಮಂತ್ರಾಕ್ಷತೆ ಸಿಕ್ಕು ಶರಣಪ್ಪನಿಗೆ ರಾಯರೇ ತನ್ನಲ್ಲಿಗೆ ನಡೆದುಬಂದು ಅವನ ಮಗಳ ವಿವಾಹಕ್ಕೆ ತಮ್ಮ ಒಪ್ಪಿಗೆ ನೀಡಿದಂತೆನಿಸಿ ಬಹಳವೇ ಸಂತೋಷ, ಸಮಾಧಾನವಾಗಿಬಿಟ್ಟಿತಂತೆ. ಇದು ವಿಷಯ.
 
"ಮತ್ತೇನೂ ವಿಚಾರ ಮಾಡೂದು ಬೇಕಿಲ್ಲ  ನೋಡ್ರಿ. ನಾಳೆ ಮುಂಜಾನೆ ಗಾಡಿಗೆ ಹೇಳೀನ್ರಿ. ನನ್ನ ಸಂಸಾರ, ನಮ್ಮ ಅವ್ವಾರು, ನನ್ನ ಭಾವ, ಮಾತ್ತೊಂದೆರಡು ಮಂದಿ ಹೋಗಿ ನಿಶ್ಚಯ ಮಾಡಿ ಬಂದುಬಿಡ್ತೀವ್ರಿ. ದ್ಯಾವ್ರೇ ನಿಮ್ಮನ್ನಿಲ್ಲಿಗೆ ಕಳಿಸಿದ ನೋಡ್ರೀ." ಎಂದು ಮತ್ತೆ ಮತ್ತೆ ಹೇಳುತ್ತಾ ನನ್ನ ತಲೆಯ ಕೆಲಸ ಮುಗಿಸಿದ ಶರನಪ್ಪ.
 
ಮಠಕ್ಕೆ ಹೋದವನು  ನಾನು. ನಮಸ್ಕಾರ ಹಾಕಿದ್ದು ನಾನು. ಅಕ್ಷತೆ ಬಿದ್ದದ್ದು ನನ್ನ ಕೈಗೆ. ಅದು ಏರಿದ್ದು ನನ್ನ ತಲೆಗೆ. ಆದರೆ ನನ್ನ ಮಟ್ಟಿಗೆ ಇದೆಲ್ಲಾ ಯಾಂತ್ರಿಕವಾಗಿ ನಡೆಯಿತು. ನಾನು ಮಠಕ್ಕೆ ಹೋಗಬೇಕೆಂಬ ಭಕ್ತಿಯಿಂದ ಹೋದದ್ದಲ್ಲ. ಹತ್ತಿರ ಹೋಗಿದ್ದೆನಲ್ಲಾ ಎಂದು ಹಾಗೆಯೇ ಒಳ ಹೊಕ್ಕದ್ದು. ಮಿಕ್ಕಿದ್ದೆಲ್ಲಾ ಹಾಗೆಯೇ.  ಅಭ್ಯಾಸಬಲದಿಂದ ಮಾಡಿದ್ದು. ಆದರೆ ಶರಣಪ್ಪ ನನ್ನ ತಲೆಯಲ್ಲಿ ಉಳಿದಿದ್ದ ಎರಡು ಅಕ್ಕಿ ಕಾಳಿನಲ್ಲಿ ರಾಯರನ್ನೇ ಕಂಡ. ಅದನ್ನು ಭಕ್ತಿಯಿಂದ ಕೈಲಿ ಹಿಡಿದು ಅದರ ಮೂಲಕ ತನ್ನನ್ನು ತೊಳಲಾಡಿಸುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಕೊಂಡ. ಮನಸ್ಸು ಹಗುರ ಮಾಡಿಕೊಂಡು ಉತ್ಸಾಹಗೊಂಡ.
 
ಅದಕ್ಕೇ ಅಲ್ಲವೇ ನಮ್ಮ ನಮ್ಮ ಭಕ್ತಿ, ಭಾವನೆಗಳಿಗನುಗುಣವಾಗಿ ಭಗವಂತ ನಮಗೆ ಕಾಣುವನೆಂದು ತಿಳಿದವರು ಹೇಳಿರುವುದು?
 
ನಾನು ಒಂದು ಘಂಟೆ ಕೂತು ತಿಣುಕಿ, ಬರೆದು ತಿಳಿಸಿದ್ದನ್ನು ನಿಜಗುಣ ಶಿವಯೋಗಿಗಳು ನಾಲ್ಕೇಸಾಲಿನಲ್ಲಿ ಅದೆಷ್ಟು ಸುಂದರವಾಗಿ ಬರೆದಿದ್ದಾರೆ ನೋಡಿ,
 
ಅವರವರ ಭಾವಕ್ಕೆ, ಅವರವರ ಭಕುತಿಗೆ
ಅವರವರ ತೆರನಾಗಿ  ಇರುತಿಹನು ಶಿವಯೋಗಿ.
ಹರಿಯಭಕ್ತರಿಗೆ ಹರಿ, ಹರನ  ಭಕ್ತರಿಗೆ ಹರ
ನರರೇನು ಭಾವಿಪರೋ ಅದರಂತೆ ತೋರುವನು.
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.