ಅಮ್ಮಮ್ಮನ ಜೊತೆ ಚಾರಣ

0

ನಿಜ, ಅಮ್ಮಮ್ಮನ ಜೊತೆ ಊರೂರು ತಿರುಗುವುದೆಂದರೆ, ಅದು ಒಂದು ರೀತಿಯ ಚಾರಣವೇ ಸರಿ. ಆಗ ಇನ್ನೂ ಚಾರಣ ಎಂಬ ಪದ ಕನ್ನಡದಲ್ಲಿ ಬಳಕೆಗೆ ಬಂದಿರದಿದ್ದರೂ, "ಚಾರಣ" ಎಂಬ ಪದದ ಅರ್ಥ ನನ್ನ ಅರಿವಿಗೆ ಇನ್ನೂ ಬಾರದಿದ್ದರೂ, ಅವರ ಜೊತೆ ಹೋಗುತ್ತಿದ್ದ, ಆಗಿನ ಕಾಲದ ತಿರುಗಾಟಗಳು ಮಿನಿಚಾರಣದ ರೂಪಗಳು. ನಡೆಯುವ ಶ್ರಮಕ್ಕೆ ಹಿಂದೆ ಮುಂದೆ ನೋಡದೇ, ಅದೆಷ್ಟೇ ದೂರವಾದರೂ ಒಬ್ಬರ ಹಿಂದೆ ಒಬ್ಬರು ಸಾಗುವ ಆಗಿನ ಕಾಲದ ಚಾರಣಗಳನ್ನು ನೆನಪಿಸಿಕೊಳ್ಳುವುದೇ ಒಂದು ರೀತಿಯ ಗಮ್ಮತ್ತು.

ಆ ದಿನ, ಬೆಳಗಿನ ಜಾವ ಐದು ಗಂಟೆಯ ಒಳಗೇ ಅಮ್ಮಮ್ಮ ತಯಾರಾಗಿದ್ದರು. " ಬೇಗ ಏಳು, ಇಲ್ದಿದ್ದ್ರೆ, ಧರ್ಮಸ್ಥಳ ಬಸ್ಸು ತಪ್ಪಿ ಹೋತ್, ಆ ಮೇಲೆ ಕಬ್ಬಿನಾಲೆಗೆ ಬಸ್ ಇಲ್ಲೆ" ಎಂದು ನಾಲ್ಕಾರು ಬಾರಿ ನನ್ನನ್ನು ಕೂಗಿ ಎಬ್ಬಿಸಿ, ಚುರುಕಾಗಿ ತಯಾರಾಗಲು ಹೇಳುತ್ತಿದ್ದರು. ಸ್ನಾನ ಮುಗಿಸಿ, ಬಸ್ ನಿಲ್ದಾಣದತ್ತ ನಡುಗೆ. ಆ ಬೆಳಗಿನ ಹೊತ್ತಿನಲ್ಲಿ ಇನ್ನೂ ಕತ್ತಲು ಕತ್ತಲು ಇರುವುದರಿಂದಾಗಿ, ನಮ್ಮ ಮನೆ ಮುಂದಿನ ಬೈಲುದಾರಿಯಲ್ಲಿ ಸಾಗಲು ಬೆಳಕಿನ ಅವಶ್ಯಕತೆ ಇತ್ತು. ಅದಕ್ಕೆ ಉತ್ತರವಾಗಿ ಅಮ್ಮಮ್ಮನ ಬಳಿ ಒಂದು ಎವರೆಡಿ ಬ್ಯಾಟರಿ ಇತ್ತು! ಅದರ ಮಿಣುಕು ಬೆಳಕಿನ ದೊಂದಿ - "ಮಿಣುಕು" ಏಕೆಂದರೆ, ಅದಕ್ಕೆ ಸೆಲ್ ಭರ್ತಿ ಮಾಡುವುದು ಮೂರು ತಿಂಗಳಿಗೋ, ಆರು ತಿಂಗಳಿಗೋ ಒಂದು ಬಾರಿ ಮಾತ್ರ. ಅದನ್ನು ಬೆಳಕಿಸುವಾಗಲೆಲ್ಲಾ ಮಿತವ್ಯಯದ ಮಂತ್ರ!ಧರ್ಮಸ್ಥಳ ಬಸ್ ಏರಿ, ಬಚ್ಚಪ್ಪು ಎಂಬ ಹಳ್ಳಿಯಲ್ಲಿ ಬಸ್ ಇಳಿಯುವಾಗ ಇನ್ನೂ ಬೆಳಕು ಹರಿಯುವ ಸಂಧಿಕಾಲ. ಎಳೆಬಿಸಿಲು ಮರಗಳ ಸಂದಿಯಿಂದ ಇಣುಕುತ್ತಿರುವಂತೆಯೇ, ನಾವು ಬಚ್ಚಪ್ಪಿನಿಂದ ಒಂದು ಮಣ್ಣುರಸ್ತೆ ಹಿಡಿದು, ಪೂರ್ವಕ್ಕೆ ನಡೆಯತೊಡಗಿದೆವು. ಹೆಬ್ರಿಯಿಂದಾಚೆ ಇರುವ ಬಚ್ಚಪ್ಪು ಎಂಬ ಕುಗ್ರಾಮದಿಂದ ನಾವು ನಡೆಯಲು ಹೊರಟಿದ್ದು ಕಬ್ಬಿನಾಲೆ ಎಂಬ ಹಳ್ಳಿಗೆ. ಕಬ್ಬಿನಾಲೆಯ ಸಾಕಷ್ಟು ಸಮತಟ್ಟಾದ ದಾರಿ ಕ್ರಮಿಸಿ, ಸುಮಾರು ಒಂದು ಸಾವಿರ ಅಡಿ ಎತ್ತರ ಏರಿದರೆ, ಕುಚ್ಚೂರು ಎಂಬ ಒಂದು ಕುಗ್ರಾಮ. ಆಗಿನ ದಿನಗಳಲ್ಲಿ ಅಲ್ಲಿ ವಿದ್ಯುತ್ ಇರಲಿಲ್ಲ, ದೂರವಾಣಿ ಇರಲಿಲ್ಲ, ಅಲ್ಲಿಗ ಒಳ್ಳೆಯ ರಸ್ತೆ ಇರಲಿಲ್ಲ, ಕಾಡಿನ ನಡುವಿನ ಜೀವನ ಅಲ್ಲಿಯದು. " ಓ ಅಲ್ಲಿ ಎತ್ತರದಲ್ಲಿ ತೋರುತ್ತಾ ಇದೆಯಲ್ಲ, ದೊಡ್ಡ ಕಲ್ಲು, ಆಕಲ್ಲಿನ ಹತ್ತಿರವೇ ಕುಚ್ಚೂರು ಮನೆ ಇಪ್ಪುದು. ಬೇಗ ಬೇಗ ನಡಿ!" ಎಂದು ಅಮ್ಮಮ್ಮ ನನ್ನ ನಡೆಯಲು ಪುಸಲಾಯಿಸುತ್ತಾ, ಪೂರ್ವದಲ್ಲಿ ಎತ್ತರಕ್ಕೆ ಕೈಮಾಡಿ ತೋರಿಸಿದರು.

ಅವರು ಕೈ ತೋರಿದತ್ತ ನೋಡಿದರೆ, ಅಲ್ಲೆಲ್ಲಾ ಸುಂದರ ಸಹ್ಯಾದ್ರಿ ತನ್ನ ಸ್ನಿಗ್ದ ಸೌಂದರ್ಯವನ್ನು ಚೆಲ್ಲಿ, ಮೈ ಮರೆತು ಮಲಗಿತ್ತು. ಪರ್ವತ ಶ್ರೇಣಿ ಉದ್ದಕ್ಕೂ ಹಾದು ಹೋಗಿದ್ದು, ಆ ಮಲೆಯ ಮೇಲೆಲ್ಲಾ ಗುಂಗುರು ಗುಂಗುರಾಗಿ ಹರಡಿದ್ದ ದಟ್ಟವಾದ ಕಾಡು. ಆ ಕಾಡಿನ ಮೇಲೆ ನೀಲಾಗಸ. ಅಲ್ಲಲ್ಲಿ ಕಾಣುತ್ತಿದ್ದ ಪುಟ್ಟ ಪುಟ್ಟ ಬೆಟ್ಟಗಳಲ್ಲೂ ಹಸಿರು ತುಂಬಿದ ಅರಣ್ಯ. ತನ್ನಷ್ಟಕ್ಕೇ ದೂರ ದಿಗಂತದತ್ತ ಸಾಗಿರುವ ಸಹ್ಯಾದ್ರಿ ಪರ್ವತಗಳ ಸುಂದರ ದೃಶ್ಯ. ದೂರದಲ್ಲಿ, ಎದುರಿಗೆ, ಗೋಡೆಯಂತೆ ಏರಿರುವ ಪರ್ವತವೊಂದರ ಮಧ್ಯ ಭಾಗದಲ್ಲಿ, ಭಾರೀ ಗಾತ್ರದ ಎರಡು ಬಂಡೆಗಳು - ಹಸಿರು ತುಂಬಿದ ಆ ಪರ್ವತ ಭಿತ್ತಿಯ ನಡುವೆ ಕಪ್ಪಗೆ ಎದ್ದು ಕಾಣುತ್ತಿರುವ ಎರಡು ಕಲ್ಲುಗಳು ಆ ದೂರಕ್ಕೂ ಎದ್ದು ಕಾಣುತ್ತಿದ್ದವು. ಅವುಗಳ ಹೆಸರು "ಸುಳಿಗಲ್ಲು" : ಆ ಪರ್ವತ ಭಿತ್ತಿಗೆ ಅದರ ಹೆಸರು ಬಂದಿದ್ದು ಈ ಕಲ್ಲುಗಳಿಂದಲೇ - ಸುಳಿಗಲ್ಲು ಬರೆ ಎಂಬ ಹೆಸರು ಆ ಬೆಟ್ಟಕ್ಕೆ. ಆ ಕಲ್ಲಿನ ಮಧ್ಯೆ, ಸ್ವಲ್ಪ ಭಾಗ ಉರುಟುರುಟಾಗಿ ಬಿಳಿ ಬಿಳಿ ಗುರುತುಗಳು - ಕಲ್ಲು ಹೂಗಳ ಚಿತ್ತಾರ. "ಸುಳಿಗಲ್ ಬರೆ ಹತ್ರವೇ ಕುಚ್ಚೂರು, ಬೇಗ ನಡೆದ್ರೆ ಹತ್ತು ಗಂಟೆ ಒಳಗೇ ಕುಚ್ಚೂರು ಮನೆ ಸೇರ್ಲಕ್" ಎನ್ನುತ್ತಾ ವೇಗವಾಗಿ ಕಾಲೆಸೆದರು ಅಮ್ಮಮ್ಮ. ಅವರ ಹಿಂದೆ ನಾನು.

ಬಚ್ಚಪ್ಪಿನಿಂದ ಸುಮಾರು ಎಂಟು ಕಿ.ಮೀ. ದೂರವಿರುವ ಕುಚ್ಚೂರಿನ ದಾರಿಯು ನನಗೆ ತುಸು ತ್ರಾಸದಾಯಕವಾಗಿತ್ತೆಂದು ಹೇಳಬಹುದು. ಎಂಟು ವರ್ಷದ ಹುಡುಗನಿಗೆ ಎಂಟು ಕಿ.ಮೀ. ಪರ್ವತದಾರಿಯ ಚಾರಣದ ಅನುಭವ ಅದು! ದಾರಿಯುದ್ದಕ್ಕೂ ಅಲ್ಲಲ್ಲಿ ಮನೆ; ಗದ್ದೆ ಬಯಲು; ಅಡಿಕೆ ತೋಟಗಳು;ಏಲಕ್ಕಿ ಗಿಡಗಳ ಗುಂಪು; ಸುರುಳಿ ಹೂವುಗಳ ಚಲುವು; ದಟ್ಟ ಕಾಡಿನ ನಡುವೆ ಇರುವ ಪುಟ್ಟ ಪುಟ್ಟ ಬಯಲುಗಳಲ್ಲಿ ಚಿತ್ರ ಬರೆದಂತೆ ಅಥವಾ ಶಿಲ್ಪಿ ಕೆತ್ತಿದಂತೆ, ಅಲ್ಲಲ್ಲಿ ಮನೆಗಳು. ನಡುಗೆಯ ದಾರಿಯೆಂದರೆ, ಕೊರಕಲು ಬಿದ್ದ ಮಣ್ಣು ರಸ್ತೆ; ಕಲ್ಲು,ಧೂಳು ಮಿಶ್ರಿತ ಆ ರಸ್ತೆಯನ್ನು ತಯಾರಿಸಿದವರು, ಮರಕಡಿಯುವ ಗುತ್ತಿಗೆದಾರರು! ಸುಳಿಗಲ್ಲು ಬರೆ ಮತ್ತು ಅದರಾಚೆ ಇರುವ ದಟ್ಟವಾದ ಅರಣ್ಯದಿಂದ ಮೆದು ಮರ ಮತ್ತು ಇತರ ಕಾಡುತ್ಪನ್ನಗಳನ್ನು ಸಾಗಿಸಲು ತಯಾರಿಸಿದ ರಸ್ತೆ ಅದು. ಆ ದಾರಿಯ ಇಕ್ಕೆಲಗಳಲ್ಲು ಸಾಕಷ್ಟು ಮರಗಳಿದ್ದು, ಒಮ್ಮೊಮ್ಮೆ ಮರಗಳ ಕೊಂಬೆಗಳ ನಡುವಿನ ಪುಟ್ಟ ಸುರಂಗದಲ್ಲಿ ಸಾಗುವ ಅನುಭವ!

ದಾರಿಗಡ್ಡಲಾಗಿ ಅಲ್ಲಲ್ಲಿ ಹರಿದು ಬರುವ ತೊರೆ, ತೋಡು, ಹಳ್ಳಗಳು ಹಲವು. ಸ್ಪಟಿಕ ಶುದ್ದ ನೀರು ಜುಳು ಜುಳು ಎಂದು ಸದ್ದು ಮಾಡುತ್ತ, ಕಲ್ಲುಗಳ ನಡುವೆ ಹರಿಯುವ ಆ ತೊರೆಗಳಲ್ಲಿ ಕಾಲಾಡಿಸುವ ಅದ್ಭುತ ಅನುಭವವನ್ನು ವರ್ಣಿಸಲು ಈ ಪದಗಳಿಂದ ಅಸಾಧ್ಯವೆಂದೇ ಹೇಳಬಹುದು. ಆ ಪರ್ವತ ಝರಿಗಳಲ್ಲೂ ಅದೆಲ್ಲೋ ಜನಿಸಿ, ಆಟವಾಡುವ ಪುಟ್ಟ ಪುಟ್ಟ ಮೀನುಗಳು! " ಬೇಗ ನಡೆ, ಇನ್ನೂ ದೊಡ್ಡ ದೊಡ್ಡ ತೋಡು, ಹೊಳೆ ಮುಂದೆ ಸಿಗುತ್ತೆ...."ಅಮ್ಮಮ್ಮನ ಅವಸರ. ತೊರೆಯ ನೀರಿನಲ್ಲಿ ಕಾಲಿಟ್ಟು ಕುಳಿತು, ಬೇರೊಂದೇ ಲೋಕದ ಸೂಕ್ಷ್ಮ ಅಮೂರ್ತ ಅನುಭವಗಳನ್ನು ಗ್ರಹಿಸುತ್ತಾ ಕೂತರೆ, ಕುಚ್ಚೂರು ತಲುಪಲು ವಿಳಂಬವಾದೀತೆಂಬ ಕಾಳಜಿ ಅಮ್ಮಮ್ಮನಿಗೆ. ದಾರಿಯ ಮಧ್ಯದಲ್ಲಿ, ಒಂದು ಮನೆಗೆ ಹೋದೆವು - ಬಾಯಾರಿಕೆ ತಣಿಸಲು. ಆ ಮನೆಯವರು ಬಾಯ್ತುಂಬಾ ನಗುತ್ತಾ, ಬೆಲ್ಲ ನೀರು ಕುಡಿಯಲು ಕೊಟ್ಟರು. " ಈ ಮಾಣಿ ಯಾರು?" " ಇವ ನನ್ನ ಮೊಮ್ಮಗ, ರತ್ನನ ಮಗ" " ಹಾಂ, ಇವನು ನಮ್ಮ ರತ್ನನ ಮಗನಾ! ಒಳ್ಳೇದು! ಯಾವ ಕ್ಲಾಸು?" ಎಂದು ನನ್ನನ್ನು ಆ ಮನೆಯವರು "ನಮ್ಮ" ರತ್ನನ ಮಗ ಎಂದು ಗುರುತಿಸಿದರು. ಅವರೊಬ್ಬರೇ ಅಂತಲ್ಲ, ದಾರಿಯುದ್ದಕ್ಕೂ ಸಿಕ್ಕಿದ ಅಮ್ಮಮ್ಮನ ಪರಿಚಯದವರಿಗೆಲ್ಲಾ, ಅದೇರೀತಿ ಭಾವನೆ - "ನಮ್ಮ ರತ್ನನ ಮಗ". ನಮ್ಮ ತಾಯಿಯ ಅಜ್ಜನ ಮನೆ ಅಲ್ಲಿನ ಕಬ್ಬಿನಾಲೆ ಆಗಿದ್ದುದರಿಂದ, ರತ್ನನ ಮಗ ಎಂದು ಅಲ್ಲಿನವರಿಗೆ ಗುರುತಿಸಲು ಸುಲಭವಾಗಿತ್ತು. ಕೇವಲ ಸುಲಭ ಮಾತ್ರವಲ್ಲ, "ನಮ್ಮ" ರತ್ನನ ಮಗ ಎಂದು ಅವರೆಲ್ಲಾ ಅಭಿಮಾನದಿಂದ ಗುರುತಿಸುವಾಗ, ನಾನೂ ಸಹಾ ಅವರ ಬಳಗ ಎಂದು ಸ್ವೀಕರಿಸುವ ಆತ್ಮೀಯತೆಯನ್ನು ತೋರುತ್ತಿದ್ದರು, ಕಬ್ಬಿನಾಲೆಯ ಜನರು.

ಅಮ್ಮಮ್ಮ ಹೇಳಿದಂತೆ, ತೋಡು ಸಿಕ್ಕಿತು, ಹಳ್ಳ ಸಿಕ್ಕಿತು, ನಂತರ ಒಂದು ಪುಟ್ಟ ಹೊಳೆ ಸಿಕ್ಕಿತು. ಅದರಲ್ಲಿ ರಭಸದಿಂದ ಹರಿಯುತ್ತಾ, ನೊರೆಯುಕ್ಕುವ ನೀರು. ಆ ಹೊಳೆಯನ್ನು ದಾಟಲು ಆಗ ಇದ್ದದ್ದು, ಕಾಡಿನ ಬಳ್ಳಿಗಳಿಂದ ಮಾಡಿದ ಒಂದು ಒರಟು ತೂಗು ಸೇತುವೆ - ಸುಮಾರು ಒಂದೆರಡು ಅಡಿ ಅಗಲದ ಆ ಬಳ್ಳಿ ಸೇತುವೆಯ ಮೇಲೆ ನಡೆಯುವಾಗ, ಅದು ಜೋಕಾಲಿಯಂತೆ ಅತ್ತಿತ್ತ ಅಲ್ಲಾಡುತ್ತಿತ್ತು! ಆಚೀಚೆ ರಕ್ಷಣೆಗಾಗಿ ಕೈಹಿಡಿದುಕೊಳ್ಳಲು, ದಪ್ಪನೆಯ ಕಾಡು ಬಳ್ಳಿ-ಬಿಳಲುಗಳ ಆಧಾರ - ನಾಲ್ಕಾರು ಬಿಳಲುಗಳನ್ನು ತಿರುವಿ ತಿರುವಿ ಜೋಡಿಸಿಟ್ಟಿದ್ದರು. ಕಾಲಿನ ಅಡಿಯಲ್ಲಿ, ದಾರಿಯ ರೀತಿ ಮರದ ತುಂಡುಗಳು, ಪುಟ್ಟ ಹಲಗೆಯಂತಹ ಮರದ ಚೂರುಗಳು, ಮರದ ಕಾಂಡಗಳು. ನಿಧಾನವಾಗಿ ನಡೆಯುತ್ತಾ, ಅದರ ಮಧ್ಯೆ ಬಂದಾಗ, ಅದು ಅತ್ತಿತ್ತ ಅಲ್ಲಾಡಿದ್ದರಿಂದ ತುಂಬಾ ಹೆದರಿಕೆ - " ಹೆದರ್ಕಬೇಡ, ನನ್ನ ಕೈ ಹಿಡಿ- ಹೊಳೆ ನೀರನ್ನು ನೋಡಬೇಡ, ಹೆದರಿಕೆ ಆತ್. ಕಾಲಿನ ಅಡಿಯ ಮರದ ಚೂರುಗಳನ್ನೇ ಕಾಂತಾ, ಹೆಜ್ಜೆ ಹಾಕು " ಎಂದು ಮಾರ್ಗದರ್ಶನ ನೀಡಿದ ಅಮ್ಮಮನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಹೆಜ್ಜೆ ಮೇಲೆಹೆಜ್ಜೆ ಇಡುತ್ತಾ, ಆ ಮರದ ಸೇತುವೆಯನ್ನು ಅಂತೂ ದಾಟಿದೆ!

ಆ ನಂತರ ಕಾಡು ಜಾಸ್ತಿ,ದಾರಿಯ ಅಗಲ ಕಡಿಮೆ,ಕೆಲವು ಕಡೆ ಒಳ ದಾರಿಗಳಂತೂ ತೀರಾ ಒರಟು. ಪರ್ವತಗಳನ್ನು ಏರುವಂತಹ ಸುತ್ತು ಬಳಸಿನ ಅಗಲ ಕಿರಿದಾದ ದಾರಿ. ಆ ಮಧ್ಯದಲ್ಲೂ, ಕೆಲವು ಕಡೆ ಅಡಿಕೆ ತೋಟಗಳ ಮೂಲಕ ಸಾಗುವ ಕಡಿದಾದ ಜಾಡು. ಏದುಸಿರು ಬಿಡುತ್ತಾ ಏರುವಾಗ ತುಂಬಾ ಸುಸ್ತು. ದಟ್ಟವಾದ ಕಾಡಿನ ನೆರಳು ಮತ್ತು ಅಡಿಕೆ ತೋಟದ ನೆರಳು ಇದ್ದುದರಿಂದ ಬಿಸಿಲಿನ ತೊಂದರೆ ಇರಲಿಲ್ಲ. ಅಲ್ಲಲ್ಲಿ ತೋಟಗಳ ಮಧ್ಯೆ ಮನೆಗಳು. ಅಂತೂ, ನಡೆದು, ಏರಿ, ಕುಳಿತು, ವಿಶ್ರಮಿಸಿ, ನಡೆದು, ಕೊನೆಯ ತಿರುವನ್ನು ಏರಿ, ಒಂದು ದೊಡ್ಡ ತೋಟ ತಲುಪಿದೆವು. " ಈ ತೋಟದ ದಾರಿಯಲ್ಲಿ ಹತ್ತಿ ನಡೆದರೆ, ಕುಚ್ಚೂರು ಮನೆ".

ಕೊನೆಯ ಆ ಕಡಿದಾದ ಒಂದೆರಡು ಫರ್ಲಾಂಗು ಏರುವಷ್ಟರಲ್ಲಿ ಬಹಳ ಸುಸ್ತು. ಅಂತೂ ಅದನ್ನು ಏರಿದಾಗ, ಇಕ್ಕೆಲಗಳು ಹೂಗಿಡಗಳಿಂದ ತುಂಬಿದ ಒಂದು ದಾರಿ. ಆ ಮುಂದೆ ದೊಡ್ಡದಾದ ಮನೆ; ಹೆಬ್ಬಾಗಿಲನ್ನು ದಾಟಿ ಕುಚ್ಚೂರು ಮನೆ ಪ್ರವೇಶಿಸಿದರೆ, ದೊಡ್ಡದಾಗಿ ಚಪ್ಪರ ಹಾಕಿದ್ದರು. ಒಳಗೆ ತುಂಬಾ ಜನ. ಅಲ್ಲಿ ವಾಸಿಸುತ್ತಿದ್ದ ಹತ್ತಾರು ಕುಟುಂಬಗಳ ಸದಸ್ಯರ ಜೊತೆ, ಮರುದಿನದ ಮದುವೆಗೆಂದು ಸೇರಿದ್ದ ನೆಂಟರಿಷ್ಟರು - ಹಲವು ಮಕ್ಕಳು ಆಟವಾಡುತ್ತಾ ಕುಣಿದಾಡುತ್ತಿದ್ದರು. ಕೆಲವು ಹುಡುಗರು ನನ್ನ ಗೆಳೆಯರಾದರು.

ಕಾಡಿನ ನಡುವೆ ಇರುವ ಕಣಿವೆಯೊಂದರಲ್ಲಿ ಹರಡಿಕೊಂಡಿರುವ ಕಬ್ಬಿನಾಲೆ ಗ್ರಾಮದಲ್ಲಿ ಹತ್ತೈವತ್ತು ಕುಟುಂಬಗಳು ಬೇಸಾಯಮಾಡಿಕೊಂಡು ವಾಸವಾಗಿರುವರು. ಆ ಗ್ರಾಮದ ಭಾಗವಾದ ಕುಚ್ಚೂರು, ಕೊರ್ತಬೈಲು ಮೊದಲಾದ ಮನೆಗಳನ್ನು ತಲುಪಲು, ಪರ್ವತ ಏರಿ, ಚಾರಣ ಮಾಡುವ ಅನಿವಾರ್ಯತೆ ಅಂದು. ಸುತ್ತಲೂ ಹಬ್ಬಿದ ಮಲೆ, ನಡುವೆ ಅಡಿಕೆ ಬೆಳೆ; ನಿಸರ್ಗದ ಗರ್ಭದಲ್ಲಿ ಜನಜೀವನ. ಇಂತಹ ಸುದೂರದ ಹಳ್ಳಿಗಳನ್ನು ನೋಡಿ, ಅನುಭವ ಬೆಳೆಸಿಕೊಳ್ಳಲಿ ಎಂದು ನನ್ನನ್ನು ಅಮ್ಮಮ್ಮ ಅಲ್ಲಿಗೆ ಕರೆತಂದಿದ್ದರು; ಪುಟ್ಟ ಹುಡುಗನ ಅನುಭವ ವಿಸ್ತಾರವಾಗುವುದೇ ಆ ಚಾರಣದ ಗುರಿಯಾಗಿತ್ತು.(ಚಿತ್ರ ಕೃಪೆ : ವಿಕಿಪೀಡಿಯಾ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೆಬ್ಬಾರ, ಚಾರಣ ನೆನಪುಗಳನ್ನು ಚೆನ್ನಾಗಿ ಬರೆದಿದ್ದೀರಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು. ಚಾರಣದ ನೆನಪುಗಳ ಜೊತೆ, ಅಲ್ಲಿ ಹೇಳಿದ ಊರಾದ ಕಬ್ಬಿನಾಲೆ ಮತ್ತು ಕುಚ್ಚೂರು ಕುರಿತು ಇನ್ನಷ್ಟು ಬರೆಯುವುದಿತ್ತು; ಲೇಖನ ಲಂಬಿತವಾಗುತ್ತದೆಂದು ಚುಟುಕುಗೊಳಿಸಿದೆ. ಕಬ್ಬಿನಾಲೆ ಮತ್ತು ಕುಚ್ಚೂರುಗಳಲ್ಲಿ ಮತ್ತೊಂದೇ ಪ್ರಪಂಚವಿತ್ತು ಆ ಕುರಿತು ಇನ್ನೊಮ್ಮೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೆಬ್ಬಾರರೇ, ನಮ್ಮ ಬಯಲು ಸೀಮೆಯವರಿಗೂ ಮಲೆನಾಡಿನ ಪರಿಚಯ ಮಾಡಿಸಿದ್ದೀರ, ಅದಕ್ಕಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೆಬ್ಬಾರರೆ ತುಂಬಾ ಚೆನ್ನಾಗಿ ವರ್ಣಿಸಿದ್ದೀರ. ನಾನು ನಮ್ಮ ಸಹ್ಯಾದ್ರಿನ ನೋಡಿದ್ದೇ ನಾನು ದುಡಿಯೋಕ್ಕೆ ಶುರು ಮಾಡಿದ್ಮೇಲೆ. ಆ ಪ್ರಕೃತಿ ಸೌಂದರ್ಯ ಸವಿಯೋದೆ ಒಂದು ಮಜಾ, ನೀವು ಅದನ್ನ ಸಣ್ಣವರಿದ್ದಾಗಲೇ ನೋಡಿದ್ದೀರಾ ಅಂದ್ರೆ ನಿಜವಾಗಿಯೂ ನೀವು ಭಾಗ್ಯವಂತರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.