Raghavendra B Rao (ಲೇಖನಗಳು)
ನಾಡ ಕೋವಿ
November 18, 2008 - 1:08pm — Raghavendra B Raoಸೀರೆಯ ನೆರಿಗೆಯನ್ನು ಎತ್ತಿ ಹಿಡಿದು ಎರಡೆರಡು ಮೆಟ್ಟಿಲುಗಳನ್ನು ಹಾರಿ ಬಂದು ಏದುಸಿರು ಬಿಡುತ್ತಾ ಕೋಣೆಯ ಬಾಗಿಲನ್ನು ಟಪಾರನೆ ಸರಿಸಿ ಒಳ ಬಂದಳು ಬೆದರಿದ ಹುಲ್ಲೆ ಅಲಕಾ. ಏನು ಮಾಡಬೇಕೆಂದು ತೋಚದೆ ಸ್ನಾನದ ಕೋಣೆಗೆ ನುಗ್ಗಿ ಕನ್ನಡಿ ನೋಡಿಕೊಂಡಳು. ಮೈಯೆಲ್ಲಾ ರಕ್ತ! ಉಟ್ಟ ಬಟ್ಟೆಯನ್ನು ತೋಯಿಸಿದೆ! ಹನಿ ನೀರಿಗೆ ಮೈಯೊಡ್ಡಿದಳು. ಎಷ್ಟೋ ಸಮಯದ ನಂತರ ಉದ್ವೇಗ ಕಡಿಮೆಯಾಗಿ ಮನಸ್ಸು ಸ್ಥಿಮಿತೆಗೆ ಬಂತು. ಮೈ ಒರಸಿ ಹೊರ ಬಂದಾಗ ಇನ್ನೂ ಎಚ್ಚರವಾಗಿಲ್ಲದೆ ಮಲಗೇ ಇದ್ದಳು ವೈಯಾರಿ ನಿಲೀಮಾ!
"ಎಷ್ಟೇ ಹೊತ್ತು ಅದು. ಹೊತ್ತು ಗೊತ್ತು ಇಲ್ಲದ ಕೆಲಸ. ಇನ್ನು ಮುಂದೆ ನಿನ್ನ ಬಾಸಿಗೆ ಸರಿಯಾಗಿ ಹೇಳ್ಬಿಡು. ಸಂಜೆ ಆರರ ನಂತರ ಕೆಲಸ ಮಾಡೋದಿಲ್ಲಾಂತ" ವೈಯಾರಿ ನಿದ್ದೆ ಕಣ್ಣಿನಲ್ಲೆ ಹೇಳಿದಳು.
ಅಲಕಾ ಒಮ್ಮೆಲೆ ವೈಯಾರಿಯ ಮಾತಿಗೆ ಬೆಚ್ಚಿ ಬಿದ್ದು ಸಾವರಿಸಿಕೊಂಡಳು. ಏನೋ ವಸ್ತುಗಳಿಗಾಗಿ ವಾರ್ಡ್ ರೋಬ್, ಮೇಜುಗಳನ್ನು ತಡಕಾಡಿದಳು. ತೂಗು ಹಾಕಿದ ಗಾಳಿ ಚೀಲದಲ್ಲಿ ಬೇಕಿದ್ದ ವಸ್ತುಗಳು ದೊರೆತಾಗ ತಟಕ್ಕನೆ ಬಾಗಿಲು ತೆರೆದು ಹೊರ ಬಂದಳು. ವೈಯಾರಿ ನಿದ್ದೆ ಮಂಪರಿನಲ್ಲಿ ಹೊರಳಿ,
"ಅಲಕಾ ಆ ವ್ಯಕ್ತಿ..." ಅಂದಳು. ಉತ್ತರವಿಲ್ಲ!
ಬೆದರಿದ ಹುಲ್ಲೆ ಮೆಟ್ಟಲಿಳಿದು ಕಾರ್ ಶೆಡ್ಡಿನ ಬಳಿ ಬಂದಳು. ಶೆಡ್ಡಿನ ಬಾಗಿಲು ಕಿರ್ ಸದ್ದಿನೊಂದಿಗೆ ತೆರೆದಾಗ ಉಸಿರು ಬಿಗಿ ಹಿಡಿದು, ಗೋಡೆಗೆ ಅಂಟಿದಂತೆ ನಿಂತಳು. ಯಾರು ಇಲ್ಲದನ್ನು ಗಮನಿಸಿ ಒಳ ಸರಿದು ಬಾಗಿಲು ಸರಿಸಿದಳು. ಹಳೇ ಕಾಲದ ಫೋರ್ಡ್ ಕಾರು ಧೂಳು ತುಂಬಿ ಮಲಗಿತ್ತು. ಬಾನೆಟ್ ಮೇಲೆ ಮಲಗಿಸಿದ್ದ ವ್ಯಕ್ತಿಯ ಮೂಗಿನ ಬಳಿ ಕೈ ಹಿಡಿದಳು. ಇನ್ನೂ ಉಸಿರಾಟವಿದೆ! ತುಂಬು ತೋಳಿನ ಅಂಗಿಯ ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ನೋಡಿದಳು. ರಕ್ತ ಇನ್ನೂ ಜಿನುಗುತಿತ್ತು. ಟಾರ್ಚ್ ಬೆಳಕಿನಲ್ಲಿ ಗಾಯವನ್ನು ನೋಡಿದಳು. ಗುಂಡೇಟಿನಿಂದ ಆದ ಗಾಯ! ಸಧ್ಯ ಅಪಾಯದಿಂದ ಪಾರಾಗಿದ್ದಾನೆ. ನಿಟ್ಟುಸಿರಿಟ್ಟಳು ಅಲಕಾ. ಗಾಯವನ್ನು ಒರಸಿ ಮುಲಾಮು ಹಚ್ಚಿ ಎದೆಯ ಸುತ್ತಾ ಬಟ್ಟೆಯನ್ನು ಬಿಗಿಯಾಗಿ ಕಟ್ಟಿದಳು.
ಆತ ಮೆಲ್ಲನೆ ಮುಲುಗಿದ! ಮುಂದೆ ಓದಿ »

ಬೋಗಿ ಸಂಖ್ಯೆ ಸಾ.೪
November 12, 2008 - 1:01pm — Raghavendra B Rao(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ)
ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ್‍ಗಾಗಿ ಕೈ ತೂರಿಸಿ, ಪಡೆದುಕೊಂಡು ಹಿಂತಿರುಗಿದ ಸ್ವರಳಿಗೆ ಆತ ಮತ್ತೊಮ್ಮೆ ಕಾಣಿಸಿದ!
ಅವಳ ಹಿಂದೆಯೆ ನಿಂತು ಆತ ಟಿಕೇಟು ಖರೀದಿಸಿದ್ದ! ಬಸ್ಸು ಇಳಿದು ರೈಲು ನಿಲ್ದಾಣದವರೆಗೆ ನಡೆದು ಬರುತ್ತಿರುವಾಗಲೂ ಆತ ಹಿಂಬಾಲಿಸಿಕೊಂಡೇ ಬಂದಿದ್ದ!
ಅಪರಿಚಿತ ಅವಳನ್ನು ಕಂಡು ಮುಗಳ್ನಕ್ಕ. ಸ್ವರ ಹೆದರಿ ಮೆಲ್ಲಗೆ ಮೈ ಅದುರಿಸಿದಳು. ರೈಲು ಬರಲು ಇನ್ನೂ ಅರ್ಧ ಗಂಟೆಯಿತ್ತು. ಅವನಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯ. ವೇಗದ ನಡುಗೆಯಲ್ಲಿ ಪ್ಲಾಟ್‍ಫಾರಂನಲ್ಲಿ ಹೆಜ್ಜೆ ಸರಿಸುತ್ತಾ ಪುಸ್ತಕದ ಅಂಗಡಿಯ ಮುಂದೆ ನಿಂತು ಹಿಂತಿರುಗಿದಳು. ಅಪರಿಚಿತ ಕಾಣಿಸದಾದಾಗ ನಿಟ್ಟುಸಿರಿಟ್ಟು ಪುಸ್ತಕಗಳ ಕಡೆಗೆ ಗಮನ ಹರಿಸಿದಳು. ಒಂದೆರಡು ವಾರಪತ್ರಿಕೆಗಳನ್ನು ತೆಗೆದುಕೊಂಡು ಸಿಮೆಂಟ್ ಬೆಂಚಿನ ಕಡೆಗೆ ನಡೆಯುವಾಗ ಆತ ಅವಳ ಹಿಂದೆ ಮುಗುಳ್ನಗುತ್ತಾ ನಿಂತಿದ್ದ!
ಒಂದು ಕ್ಷಣ ಬೆದರಿದ ಹುಡುಗಿ ಸರಸರನೆ ನಡೆದು ಬಾಗಿಲ ಕಡೆಗಿದ್ದ ರೈಲ್ವೆ ಠಾಣೆಯ ಮುಂದಿನ ಬೆಂಚಿನ ಮೇಲೆ ಕುಳಿತು ನೋಡಿದಳು. ಆತ ಕಾಣಿಸಲಿಲ್ಲ. ನೋಡೋದಿಕ್ಕೆ ಸ್ಫುರದ್ರೂಪಿ ಯುವಕ. ದುಂಡು ಮುಖದ ದಪ್ಪ ಮೀಸೆಯ ಬಿಳಿ ಚಹರೆಯ ಯುವಕ ಆಕರ್ಷಕವಾಗಿದ್ದ. ಅಂತಹ ಸುಂದರ ಯುವಕ ತನ್ನ ಹಿಂದೆ ಬಿದ್ದಿದ್ದೇಕೆ? ಸ್ವರಳಿಗೆ ತಿಳಿಯಲಿಲ್ಲ.
ಆತ ಮಲೆಯಾಳಂ ಪತ್ರಿಕೆಯೊಂದನ್ನು ಹಿಡಿದುಕೊಂಡು ಘಳಿಗೆಗೊಮ್ಮೆ ಸ್ವರಳನ್ನು ಗಮನಿಸುತ್ತಿದ್ದ.
ಅಲ್ಲಲ್ಲಿ ನೇತು ಹಾಕಿದ್ದ ಟಿ.ವಿ. ಯಲ್ಲಿ ಯಾವುದೋ ಕನ್ನಡದ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ರೈಲ್ವೆ ನಿಲ್ದಾಣದಲ್ಲಿ ಅಷ್ಟೊಂದು ಜನರಿರಲಿಲ್ಲ. ಇನ್ನರ್ಧ ಗಂಟೆಯಲ್ಲಿ ಶೋರ್‍ನೂರ್‍ಗೆ ಹೊರಡುವ ರೈಲು ಫ್ಲಾಟ್‍ಫಾರಂ ಅನ್ನು ತಲುಪಲಿದೆ ಎಂದು ಉದ್ಗೋಷಕಿ ಹೇಳಿದ್ದರಿಂದ ಸ್ವರ ಅಲ್ಲಿಯೇ ಕುಳಿತಿದ್ದಳು.
ಇದ್ದಕ್ಕಿದ್ದಂತೆ ಟಕ್ ಟಕ್ ಸದ್ದಿನೊಂದಿಗೆ ಧ್ವನಿ ವರ್ಧಕದಲ್ಲಿ ಮಾತುಗಳು ಆರಂಭವಾದವು. ಮುಂದೆ ಓದಿ »

ಖಂಡಿತಾ ಮನುಷ್ಯರನ್ನು ನಂಬಬಹುದು!
November 6, 2008 - 1:29pm — Raghavendra B Raoಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿರೋನಾಮೆಯೆ ಸೂಚಿಸುವಂತೆ ಇಲ್ಲಿಯ ಕಥೆಗಳೆಲ್ಲ ಮನುಷ್ಯ ಸಂಬಂಧಗಳ ಎಳೆಯನ್ನು ಹಿಡಿದು ಸಾಗುವಂಥವುಗಳು. ಬಹಳ ಆತ್ಮೀಯವಾಗಿ ಬಿಡುವ, ನಿನ್ನೆ ಮೊನ್ನೆಯೆಲ್ಲೋ ಕಂಡಂತೆ, ಕೇಳಿದಂತೆ, ಅವು ನಮ್ಮನ್ನು ಆವರಿಸುತ್ತವೆ. ಅಲ್ಲಿಯ ಪಾತ್ರಗಳು ನಿಜಕ್ಕೂ ಜೀವಂತ ಮತ್ತು ನಮಗೆ ಪರಿಚಿತ ಅನ್ನುವಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರುತ್ತವೆ. `ಯಾರನ್ನೂ ನಂಬಬಾರದು' ಅಂದುಕೊಳ್ಳುತ್ತಲೇ ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ನಂಬಲೇ ಬೇಕಾಗುತ್ತದೆ, ಇಲ್ಲಿಯ ಕಥೆಗಳ ಹಾಗೆ.
ಸಂಕಲನದ ಮೊದಲ ಕಥೆ `ಮನುಷ್ಯರನ್ನು ನಂಬಬಹುದು', ಒಬ್ಬ ಮನುಷ್ಯನಿಗೆ, ಒಂದು ಅಪರಿಚಿತ ಸ್ಥಳದಲ್ಲಿ ತನ್ನ ಮುಂದಿನ ಪ್ರಯಾಣಕ್ಕೆ ಅನಾನುಕೂಲವಾಗಿ ಅಲ್ಲಿ ಆತನಿಗೆ ಎದುರಾಗುವ ಪರಿಸ್ಥಿತಿಯನ್ನು ಈ ಕಥೆ ಚಿತ್ರಿಸುತ್ತದೆ. ಅಸಾಹಯಕ ಮನುಷ್ಯ ಗಮ್ಯ ತಲುಪುವಲ್ಲಿ ಅವನಿಗಿರುವ ಆತಂಕ ಮತ್ತು ಆ ಸಮಯದಲ್ಲಿ ಯಾವುದೋ ದೂರದ ಸಂಬಂಧವೊಂದನ್ನು ಹೇಳಿಕೊಂಡು ಸಹಾಯ ಯಾಚಿಸುವ ಸ್ಥಿತಿ, ಅನಾಥರಾಗುವ ಪ್ರಜ್ಞೆ, ಯಾರಾದರೂ ಸಹಾಯ ಮಾಡಿಯಾರೆಂಬ ಧನಾತ್ಮಕ ಚಿಂತನೆ, ಹಾಲಾಡಿಯ ಉಡುಪರ ಮೂಲಕ ತೆರೆದುಕೊಳ್ಳುತ್ತದೆ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಶ್ರೀನಿವಾಸ, ಸಹಾಯವನ್ನು ನಿರಾಕರಿಸುವಾಗ ಕಥಾ ನಾಯಕ, ಮನುಷ್ಯ ಮನುಷ್ಯರನ್ನು ನಂಬಲಿಕ್ಕಾಗದ ಕಾಲದಲ್ಲೂ ಅವನ ಸಹಾಯಕ್ಕೆ ನಿಲ್ಲುತ್ತಾನೆ. ಮುಂದೆ ಉಡುಪರು ಅವನಿಂದ ಪಡೆದ ಎಲ್ಲಾ ಸಹಾಯವನ್ನೂ ಪದೇ ಪದೇ ನೆನಪಿಸಿಕೊಳ್ಳುವ ಮೂಲಕ ಮನುಷ್ಯ ಮನುಷ್ಯನನ್ನು ನಂಬಬಹುದು ಅನ್ನುವುದನ್ನು ದೃಢಪಡಿಸುತ್ತಾರೆ. ಮುಂದೆ ಓದಿ »

ಐವತ್ತನೆ ಕಥೆ
November 3, 2008 - 1:38pm — Raghavendra B Raoರಾತ್ರಿಯ ನೀರವತೆಯನ್ನೂ ಮೀರಿ ಕೇಳುವ ಸಮುದ್ರದ ಬೋರ್ಗರೆತದ ಸದ್ದು, ಟಾರಸಿಯ ಮೇಲೆ ಕುಳಿರ್ಗಾಳಿಗೆ ಮೈ ಚೆಲ್ಲಿ ಕುಳಿತಿದ್ದವನನ್ನು ಎತ್ತಿ ಒಗೆದಂತಾಯಿತು. ಗೋಧಿ ಹಿಟ್ಟಿನ ಬಣ್ಣದ ಮರಳ ದಂಡೆಯ ಮೇಲೆ ಕಣ್ಣುಗಳು ಏಕಾಏಕಿ ಸರಿದಾಡಿ ಗಾಳಿಮರದ ತೋಪಿನ ಕಡೆಗೆ ಅಚಲವಾಗಿ ನಿಂತಿತು.
ಕುರ್ಚಿಯ ಅಂಚಿಗೆ ಹಿಡಿದಿದ್ದ ಅಟ್ಟೆಯ ಜೊತೆಗಿದ್ದ ಕಾಗದಗಳು ಹಾರಿ ಟಾರಸಿಯ ಮೇಲೆ ಬಿದ್ದಾಗ, ಪೆನ್ನು ಜೇಬಿಗೆ ಸೇರಿಸಿ ಎದ್ದ. ಖಾಲಿ ಹಾಳೆಗಳು ಗಾಳಿಯ ಜೊತೆಗೆ ಬೆರೆತು ಅಣಕಿಸಿದಂತಾಯಿತು.
ಮುಂಬೈನ ಕಪ್ಪು ಮರಳ ತೀರ, ಕಲುಷಿತ ನೀರಿನ ಸಮುದ್ರ, ಬರೆಯುವ ಉತ್ಸಾಹವನ್ನು ಜರ್ರನೆ ಇಳಿಸಿತ್ತು. ಬಂಡೆಯ ಮೇಲೆ ಕುಳಿತು ನೀರಿಗೆ ಕಾಲು ಇಳಿಸಿದ್ದ ತನುಹಾ ಚೀರಿದ್ದಳು.
"ನನ್ನಂತ ಒಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದ ನೀನು ಒಂದಲ್ಲ ಒಂದು ದಿನ ಯಾರಿಗೂ ಗೊತ್ತಾಗದ ಹಾಗೆ ಸತ್ತು ಹೋಗ್ತೀಯಾ. ಆಗ ನಿಂಗಾಗಿ ಅಳೋರು ಯಾರು ಇರೋದಿಲ್ಲ ಸಮೀರ. ಬರಿ... ಇಡೀ ದಿನ ಬರಿತಾನೆ ಇರು... ನಿನ್ನ ಕಥೆ"
ಎಲ್ಲಿಂದಲೋ ಹಾರಿ ಬಂದ ದೈತ್ಯ ಅಲೆಯೊಂದು ಬಂಡೆಯ ಮೇಲಿದ್ದವಳನ್ನು ಸೆಳೆದೊಯ್ದಿತ್ತು!
"ಆ ಕಥೆಗಾರನ ಜೊತೆಗೆ ಸುತ್ತಾಡ್ತಾ ಇದ್ಲು. ಅವಳ ಸಾವು ಅಸಹಜಾಂತ್ಲೆ ಬರ್ದು ಬಿಡಿ"
ಪತ್ರಿಕೆಯ ಪ್ರತಿನಿಧಿಗಳ ಮುಂದೆ ತೋಡಿಕೊಂಡಿದ್ದ ತನುಹಾಳ ಚಿಕ್ಕಪ್ಪ ಬಿಷನ್‍ಲಾಲ್. ಮುಂದೆ ಓದಿ »

ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...
October 13, 2008 - 1:39pm — Raghavendra B Raoಕತ್ತಲೆಯಲ್ಲಿ ಹೀಗೆ ನಡೆಯುವಾಗಲೆಲ್ಲಾ ದಾರಿ ತೋರಿಸುತ್ತಿದ್ದ ಕಿರು ದೀಪಗಳ ಸಾಲುಗಳಲ್ಲದ ಸಾಲುಗಳನ್ನು ಎಣಿಸುತ್ತಾ ಸಾಗುವ ಬದುಕಿನ ಅಂತ್ಯ, ಆದಿಯನ್ನೂ ತಿಳಿಯದೆ ಮುಖವೆತ್ತಿದರೆ ಕಾಣುವ, ಕಾಡುವ ನಕ್ಷತ್ರಗಳ ಬೆಳಕೇ ದೊಡ್ಡದೆನಿಸುತ್ತದೆ. ಮುಂದೆ ಓದಿ »








RSS: