ಭರತೇಶ ವೈಭವದಲ್ಲಿ ಕನ್ನಡ ನುಡಿಗಟ್ಟುಗಳು - ಕಲ್ಪು ೮
ಹೇಳಿ ಕೇಳಿ ಭರತೇಶ ವೈಭವ "ಹಾಡುಗಬ್ಬ"(ರತ್ನಾಕರವರ್ಣಿ ಹೇಳುವುದು) = "ಸಾಂಗತ್ಯ, ಸಂಗೀತಕಾವ್ಯ"(ವಿಮರ್ಶಕರು ಹೇಳುವುದು). ರತ್ನಾಕರವರ್ಣಿ ಭರತೇಶ ವೈಭವವನ್ನು ಹಾಡುವುದಕ್ಕಾಗಿಯೇ ಬರೆದಿರುವುದು ಅಂತ ಹೇಳಿದ್ದಾನೆ. ಸರಿ, ಭರತೇಶ ವೈಭವದಲ್ಲಿ "ಸಂಗೀತ ಸವರಣೆ" ಹೇಗಿದೆ ಎಂಬುದನ್ನು ಮುಂದೆ ನೋಡೋಣ. ಈ ದಿನ ಹದಿಹರೆಯದವರ ಪರಿಭಾಷೆಯಲ್ಲಿರುವ ಒಂದು ಸರಸಪದ್ಯವನ್ನು ಗಮನಿಸೋಣ.
ಭರತ ಒಮ್ಮೆ ಹೆಂಡತಿಯ ತವರಿಗೆ ಬಂದಿರುತ್ತಾನೆ. ಅಲ್ಲಿ ಹೆಂಡತಿಯ ತಂಗಿ(ನಾದಿನಿ, ನಾದುನಿ)ಗೆ ಸ್ವಲ್ಪ ಕೀಟಲೆ ಮಾಡುತ್ತಾನೆ. ನಾದಿನಿಯೂ ಕೂಡ ಏನು ಕಮ್ಮಿ ಇಲ್ಲ, ಅವಳೂ ಮಾತಿನ ಮಲ್ಲೆ. ಭರತೇಶ ಹಾಗೆ ಕೀಟಲೆ ಮಾಡುತ್ತಾ, ಇವಳು ಏನು "ಕಾತರೆಯೋ"(=timid, perplexed) ಅಂತ ಆಡಿಕೊಳ್ತಾನೆ. ಆಗ ನಾದಿನಿ ಹೇಳ್ತಾಳೆ.
ಕಾತರಗೀತರವನು ನೀವು ನಿಮ್ಮಂಬು
ಜಾತಾಕ್ಷಿಯರು ಬಲ್ಲಿರೈಸೆ
ಆತಳ್ಳಿಬಳ್ಳಿಯ ನಾವೇನ ಬಲ್ಲೆವು
ಮಾತು ಸಾಕಿನ್ನೇಳು ಭಾವ || ೨೬ ||
"ಕಾತರಗೀತರವನು ನೀವು ನಿಮ್ಮ ಅಂಬುಜಾತಾಕ್ಷಿಯರು ಬಲ್ಲಿರೈಸೆ (ಬಲ್ಲಿರಿ ಅಷ್ಟೇ). ಆ ತಳ್ಳಿಬಳ್ಳಿಯ ನಾವೇನು ಬಲ್ಲೆವು, ಮಾತು ಸಾಕು ಇನ್ನು ಏಳು ಭಾವ".
ಈ ಪದ್ಯದ ಮೂರನೆ ಸಾಲಿನಲ್ಲಿ ಬರುವ "ತಳ್ಳಿಬಳ್ಳಿ" ಎಂಬ ಪದವನ್ನು ಗಮನಿಸಿ. ಈ ಪದಕ್ಕೆ ಅನೇಕ ರೂಪಗಳಿವೆ. ತೆಳ್ಳಂಬೆಳ್ಳ, ತೆಳ್ಳಗೆಬೆಳ್ಳಗೆ, ತ(ಥ)ಳುಕುಬಳುಕು ಹೀಗೆ. ನಮ್ಮಮ್ಮ ಮತ್ತು ನಮ್ಮ ದೊಡ್ಡಮ್ಮನವರು ಮಾತನಾಡುವಾಗ ಈ "ತಳ್ಳಿಬಳ್ಳಿ" ಪದವನ್ನು ನಾನು ಕೇಳಿದ್ದಿದೆ. ತಳ್ಳಿಬಳ್ಳಿಗಿಂತ ಹೆಚ್ಚಾಗಿ "ತೆಳ್ಳುಗ್ ಬೆಳ್ಳುಗ್ ಮಾತಾಡೋದು" ಎನ್ನುವ ಪದವಂತೂ ಅಬ್ಬಬ್ಬಾ!!!
೧. ಸುಮ್ಮನೆ ಕೀಟಲೆ ಮಾಡಲು ನಮ್ಮಮ್ಮನ್ನೇ ಕೇಳೋಣ ಅಂತ, "ಏನಮ್ಮ ತಳ್ಳಿಬಳ್ಳಿಮಾತು ಅಂದ್ರೆ", ಅಂತ ಕೇಳಿದ್ದಕ್ಕೆ ಸ್ವಲ್ಪ ಹೊತ್ತು ನಗುವಿಗೆ ಮಿಕ್ಕು ಮುಗುಳ್ನಕ್ಕ ನಂತರ, "ಜಾಣತನದ ಮಾತೂ ಅಂತ, ಅದೇ ಹೇಳ್ತಾರಲ್ಲ ಮೊಸರಲ್ಲಿ ಕೂದಲು ತೆಗೆಯುವಂತಹ ಮಾತು ಅಂತ
, ಮರುಳು ಮಾಡುವಂತಹ, ಸುಮ್ಸುಮ್ನೆ ಏನೇನೋ ಹೇಳುವ, ಒಯ್ಯಾರದ ಮಾತು ಅಂತ" ಎಂಬ ಉತ್ತರ ಸಿಕ್ಕಿತು.
೨. ಸರಿ ಸಾಗುತ್ತಾ, "ತಳ್ಳಿ" ಎಂದರೇನು ತಿಳಿದುಕೊಳ್ಳಲು ದ್ರಾವಿಡ ನುಡಿಕೋಶವನ್ನು ತಡಕಾಡಿದೆ. ಆಗ ಈ ಪದದ ವಿಸ್ತಾರ ಅರಿವಿಗೆ ಬಂತು. ಇಲ್ಲಿ ಚಿಟುಕಿ
(ಅನಿವಾಸಿಯವರಿಗೆ ನನ್ನಿ). ಅರ್ಥ ೧, ಅರ್ಥ ೨
೩. ಪಂಡಿತ ಕವಲೀಯವರ ಕಸ್ತೂರೀ ಕೋಶದಲ್ಲಿ "ತಳ್ಳಿ" ಎಂಬುದಕ್ಕೆ ತಂಟೆ, ಗೊಡವೆ, ಸಂಬಂಧ, ಉಪದ್ರವ, ಚಾಡಿ ಎಂಬರ್ಥಗಳಿವೆ.
೪. ಇಗೋ ಕನ್ನಡ, ಜಿ.ವಿಯವರ ನಿಘಂಟಿನಲ್ಲಿ ಸಂಬಂಧ, ಒಡನಾಟ , ಗೊಡವೆ, ಗೋಜು, ನಿಂದೆ, ಅಪವಾದ, ಕಟ್ಟು, ಬಂಧನ, ಹೋರಾಟ, ಕಣದಲ್ಲಿ ತೆನೆ ತುಳಿಸಲು ಎತ್ತುಗಳನ್ನು ಸಾಲಾಗಿ ಕಟ್ಟುವುದು.
೫. ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಅಚ್ಚಕನ್ನಡ ನುಡಿಕೋಶದಲ್ಲಿ ಹೊಂದಿಕೆ, ಕೂಡಿಕೆ, ಒಡನಾಟ, ಹೋಱಾಟ ಎಂಬ ಅರ್ಥಗಳಿವೆ.
ಗಮಿನಿಸಿ ನೋಡಿ ಬೇಕಿದ್ದರೆ, ಈ ತಳ್ಳಿಬಳ್ಳಿ, ತೆಳ್ಳಗೆಬಳ್ಳಗೆ ಮುಂತಾದ ಪದಗಳನ್ನು ನಮ್ಮಂತಹ ಹದಿಹರೆಯದವರನ್ನು ಉದ್ದೇಶಿಸಿ ಮಾತನಾಡುವಾಗಲೇ ಹೆಚ್ಚಾಗಿ ಬಳಸುತ್ತಾರೆ ![]()

- Login or register to post comments
- 498 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: