ಪುಸ್ತಕ ವಿಮರ್ಶೆ
ಅಶೋಕ ಹೆಗಡೆ ಕಥಾಲೋಕ - ಹಸಿರು ಸೀರೆ
August 3, 2008 - 11:51pm — narendraಅಶೋಕ ಹೆಗಡೆಯವರ ಮೂರನೆಯ ಕಥಾಸಂಕಲನ, "ವಾಸನೆ, ಶಬ್ದ, ಬಣ್ಣ ಇತ್ಯಾದಿ" ಹೊರಬಂದಿದೆ. ಮೊದಲ ಸಂಕಲನ `ಒಂದು ತಗಡಿನ ಚೂರು' ಬಹುತೇಕ ಬಹುಮಾನಿತ ಕಥೆಗಳನ್ನೇ ಹೊತ್ತು ಬಂದ ಸಂಕಲನವಾದರೂ ಕಥನಕ್ಕಿಂತ ಕಾವ್ಯಾತ್ಮಕ ಚಿತ್ರಕ ವಿವರಗಳಲ್ಲೇ ಮುಳುಗಿರುವುದನ್ನು ಕಾಣುತ್ತೇವೆ. ಎರಡನೆಯ ಕಥಾಸಂಕಲನ `ಒಳ್ಳೆಯವನು' ನಿಜಕ್ಕೂ ಕೆಲವು ಒಳ್ಳೆಯ ಕಥೆಗಳನ್ನು ಕನ್ನಡಕ್ಕೆ ನೀಡಿದ ಸಂಕಲನ. ಈ ಸಂಕಲನದ ಬಗ್ಗೆ ಮತ್ತೆ ವಿವರವಾಗಿಯೇ ಬರೆಯುತ್ತೇನೆ. ಈ ನಡುವೆ ಅಶೋಕರ ಕಾದಂಬರಿ `ಅಶ್ವಮೇಧ' ಬಂತು. ಕಾದಂಬರಿ ಎಷ್ಟು ಚೆನ್ನಾಗಿತ್ತೆಂದರೆ ಬಹಳಷ್ಟು ಮಂದಿ ಬರಹಗಾರರೂ ವಿಮರ್ಶಕರೂ ಅಶೋಕರ ನಿಜವಾದ ಕ್ಷೇತ್ರ ಸಣ್ಣಕತೆಯಲ್ಲ, ಕಾದಂಬರಿಯೇ ಎನ್ನುವಂತಾಯಿತು! ಈ ಕಾದಂಬರಿಯ ನಂತರ ಬಂದ ಸಂಕಲನದ ಎಲ್ಲ ಕಥೆಗಳು ವೈಶಿಷ್ಟ್ಯಪೂರ್ಣವಾಗಿದ್ದು ಅವರ ಇದುವರೆಗಿನ ಕಥನಗಾರಿಕೆಯನ್ನು ಬಿಟ್ಟು ಹೊಸದೇ ಮಾರ್ಗದಲ್ಲಿರುವುದನ್ನು ಕಾಣಿಸುತ್ತದೆ. ಹಾಗಾಗಿ, ಇಲ್ಲಿನ ಕಥೆಗಳ ಒಟ್ಟಾರೆ ಪ್ರಯೋಗಶೀಲತೆಯನ್ನು, ಕಥೆ ಹೇಳುವ ಧಾಟಿಯನ್ನು, ಆಶಯವನ್ನು ಮತ್ತು ಕಥೆಗಾರನ ನಿಲುವನ್ನು ಹೊಸದಾಗಿ ವಿಮರ್ಶಿಸಿ ನೋಡಬೇಕಾಗಿದೆ. ಅಶೋಕರ ಹಿಂದಿನ ಸಂಕಲನಗಳನ್ನು, ಕಾದಂಬರಿಯನ್ನು ಗಮನಿಸಿ ಹೇಳುವುದರಿಂದ ಇಲ್ಲಿನ `ಹೊಸತು' ಹೊಸಬನ ಪ್ರಯತ್ನವಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ರಿಯಾಯಿತಿ ಇಲ್ಲದೇ ಇದನ್ನು ಕಾಣಬಹುದಾಗಿದೆ. ಮುಂದೆ ಓದಿ »

- Login or register to post comments
- 122 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು
July 22, 2008 - 10:53pm — narendra`ಚಂದ್ರಶಾಲೆ' ಕತೆ ಈ ಸಂಕಲನದ ಮೊದಲ ಕತೆ. ತೇರಿನ ದಿನ ಬಳೆಯಂಗಡಿಯ ಬಸವಣ್ಣಿಯ ಜತೆಗೆ ಕುಂಕುಮದಂಗಡಿಯ ವಿಶ್ವೇಶ್ವರಯ್ಯ ನಡೆಸುವ ಪ್ರೇಮ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಾಬಲನ ಮನಸ್ಸು ತುಂಬಿಕೊಂಡ ಸರಸ್ವತಿ, ತೇರು ಎಳೆಯುವ ಸಂಭ್ರಮದ ಗದ್ದಲ, ಗಡಿಬಿಡಿಗಳು, ತೇರನ್ನೆ ಮನೆ, ಗಂಡ ಎಲ್ಲವೂ ಮಾಡಿಕೊಂಡಿರುವ ಕಾಯಕ್ಕನ ವಿಪರೀತಗಳು ಎಲ್ಲ ಸೇರಿ ನೀಡುವ ಚಿತ್ರ ಗಾಢವಾಗಿ ಕಾಡುವಂತಿದ್ದರೂ ಕತೆಯಾಗಿ ಈ ಎಲ್ಲ ನೋಟಗಳು ಕೂಡಿಕೊಳ್ಳುವ ಏಕಸೂತ್ರದ ಪ್ರತಿಮೆ ತೇರು. ತೇರು ಹಬ್ಬದ ಸಂಭ್ರಮವನ್ನು ತರುವುದರ ಜೊತೆಗೇ, ಊರಿನ ಜನರ ಸುಪ್ತ ಅಥವಾ ಅದುಮಿ ಹಿಡಿಯಲ್ಪಟ್ಟ ಉನ್ಮಾದ, ಹುಚ್ಚು, ಸುಖದ, ಸಂಭ್ರಮದ ಅಪೇಕ್ಷೆ, ಕಳ್ಳ ಪ್ರೇಮದ ನಿರೀಕ್ಷೆ ಎಲ್ಲಕ್ಕೂ ಕಾರಣವಾಗುತ್ತಿರುತ್ತದೆ. ಕರ್ತವ್ಯದ ನೊಗವನ್ನು ಸ್ವಲ್ಪ ಸಡಿಲಿಸಿ ನಗಲು ಕಾರಣ ಹುಡುಕುತ್ತಿರುವ ಮನುಷ್ಯನಿಗೆ ತೇರು ಒದಗಿಬರುವುದು ಹೀಗೆ. ಚಂದ್ರಶಾಲೆಯ ಚಿತ್ರ ಮತ್ತು ತೇರಿನೊಂದಿಗಿನ ಕಾಯಕ್ಕನ ಸಂಬಂಧ ಸೂಕ್ಷ್ಮವಾಗಿ ಇಣುಕಿ ನೋಡುವ ಅಂಶಗಳು ಅಮೂರ್ತವಾಗಿಯೇ ಉಳಿಯುವುದು ಈ ಕತೆಯ ವಿಶೇಷ. ಮುಂದೆ ಓದಿ »

- ೧ ಪ್ರತಿಕ್ರಿಯೆ
- 192 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್
July 17, 2008 - 10:58pm — narendraರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.
ಒಂದು ಘಳಿಗೆ ಈ ಅಂಶವನ್ನು ಮರೆತು ನೋಡಿದರೆ ಜಯಂತರು ಸೃಷ್ಟಿಸುವ ಪಾತ್ರಗಳು, ಅವರು ನಿರ್ಮಿಸುವ ಊರು, ಕೇರಿಗಳು, ಸನ್ನಿವೇಶಗಳು ಯಾವುದೂ ಇಂದಿನ, ನಮ್ಮ ಸುತ್ತಮುತ್ತಿನ ಜನಜೀವನಕ್ಕೆ ಪ್ರಸ್ತುತವೇ ಅಲ್ಲ ಎನಿಸಿ ಅವೆಲ್ಲ ಒಂದು ಅಸಂಗತ ಲೋಕದ ಚಿತ್ರಗಳು ಎನಿಸಬಹುದು. ನಮಗೆ ಒಬ್ಬ ಇಂದ್ರನೀಲ, ಒಬ್ಬಳು ಮಧುಬನಿ, ಭಾಮಿನಿ, ರೂಪಕ್ ರಾಥೋಡ್ ಕಣ್ಣಿಗೆ ಬೀಳುವುದೂ ಕಷ್ಟವಾಗಿರುವ ಈ ಸುಡುಬಿಸಿಲಿನಂಥ ದಿನಗಳಲ್ಲಿ ಜಯಂತ್‌ಗೆ ಹೇಗೆ, ಎಲ್ಲಿ ಈ ತಂಪಾದ ಮಂದಾನಿಲದಂಥ ಮಂದಿ ಸಿಕ್ಕರು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಸರಳವಿಲ್ಲ. ಕತೆಗಾರನ ಸಂವೇದನೆಯ ಸ್ತರಗಳು, ಆತನ ಜೀವನದೃಷ್ಟಿ ಮತ್ತು ಮನುಷ್ಯನ ಮೂಲಭೂತ ಸತ್ ನಲ್ಲಿ ಕತೆಗಾರನಿಗಿರುವ ಅಚಲ ನಂಬುಗೆ ಬಹುಷಃ ಇಂಥ ಪಾತ್ರಗಳ ಸೃಷ್ಟಿಗೆ ಕಾರಣವಾಗುತ್ತಿರಬೇಕು. ಅದಿಲ್ಲದೆ ಬದುಕಿನ ಕಹಿ ಅನುಭವಗಳ ಪಾದಧೂಲಿಯನ್ನು ಮತ್ತೆ ಮತ್ತೆ ಅಳಿಸಿ ಹಾಕಿ ಸಿಹಿಯನ್ನು ಮೆಲುಕು ಹಾಕುವುದು ಜಯಂತರಂಥ ಜಯಂತರಿಗೆ ಮಾತ್ರ ಸಾಧ್ಯವಾದೀತು! ಮುಂದೆ ಓದಿ »

- 4 ಪ್ರತಿಕ್ರಿಯೆಗಳು
- 271 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮನಸುಖರಾಯನ ಮನೋಲೋಕ
July 13, 2008 - 1:34pm — narendraಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ. ಅಷ್ಟೇ ಗಾಢವಾಗಿ ಭಾವನಾತ್ಮಕವಾಗಿ ಕೂಡ ನಮ್ಮನ್ನು ಕಲಕುವ ಬರಹಗಳಿವೆ ಇಲ್ಲಿ. ಬರಹಗಾರ ಬರೆಯುತ್ತ ಬರೆಯುತ್ತ ಕಣ್ಣು ಹನಿಗೂಡಿದಲ್ಲೆಲ್ಲ ನಮ್ಮ ಮೂಗಿನಲ್ಲೂ ಅದರ ಲಕ್ಷಣಗಳೆಲ್ಲ ಜಿನುಗುತ್ತವೆ! ಮುಖ್ಯ ನಾನು ಈ ಪುಸ್ತಕದ ಬಗ್ಗೆ ಬರೆಯ ಹೊರಟಿದ್ದೇ ಇಲ್ಲಿನ ತ್ರಯಸ್ಥ ಎಂಬ ಕತೆ ನನ್ನನ್ನು ಅಲ್ಲಾಡಿಸಿದ ಬಗೆಯಿಂದಾಗಿ.
ಪ್ರತಿಯೊಬ್ಬ ಸೂಕ್ಷ್ಮಮನಸ್ಸಿನ ಮನುಷ್ಯನನ್ನೂ ಈ ಕತೆ ಗಾಢವಾಗಿ ಕಲಕುತ್ತದೆ. ನಿಮ್ಮ ಬಾಲ್ಯವನ್ನು ಮುಟ್ಟಿ ಹದಿಹರಯದ, ತಾರುಣ್ಯದ ಹಳೆಯ ಗಾಯವನ್ನು ಮೃದುವಾಗಿ ಸವರಿ ಮಾತನಾಡುವ ಈ ಕತೆಯಲ್ಲಿ ಶ್ರೀನಿವಾಸ ವೈದ್ಯರು ಪ್ರತಿಯೊಬ್ಬನ ಬಾಲ್ಯವನ್ನೂ ಮುಟ್ಟಿದ ರೀತಿ ಅವರಿಗೇ ವಿಶಿಷ್ಟವಾದದ್ದು. ಕನ್ನಡದಲ್ಲಿ ಆತ್ಮರತಿಯ ಅಥವಾ ನಾಸ್ಟಾಲ್ಜಿಯಾದ ಸ್ಪರ್ಶವಿಲ್ಲದೆ ಹೀಗೆ ಯಾರಾದರೂ ಬಾಲ್ಯ, ತಾರುಣ್ಯ, ಯೌವನ ಮತ್ತು ನಡುವಯಸ್ಸಿನ ವರೆಗೆ ಒಂದು ಕತೆಯನ್ನು ಹಾಯಿಸಿ ತಂದಿದ್ದಾರೆಯೇ ಎನ್ನುವಂತಿದೆ ಈ ಕತೆ. ಈ ಕತೆಯನ್ನು ನೀವೆಲ್ಲರೂ ಓದಬೇಕು ಎಂದು ನನಗೆ ತೀವೃವಾಗಿ ಅನಿಸುತ್ತಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಇವತ್ತು ಮಾನವನ ಹೃದಯದ ಆಳದ ಸತ್ ಅನ್ನು ಮುಟ್ಟಿ ಅವನನ್ನು ಇನ್ನಷ್ಟು ಇನ್ನಷ್ಟು ಮನುಷ್ಯನನ್ನಾಗಿಸುವ ಪ್ರತಿಯೊಂದು ಕತೆ, ಕಾದಂಬರಿ, ಬರಹ ಎಲ್ಲರನ್ನೂ ತಲುಪಬೇಕು. ಇದರ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಚಿತ್ತಾಲರು ಒಮ್ಮೆ ಹೇಳಿದ್ದರು, ಹೆಚ್ಚು ಹೆಚ್ಚು ಮನುಷ್ಯನಾಗುವುದಕ್ಕೆ ಸಾಹಿತ್ಯ ಬೇಕು ಎಂದು. ಅದು ನಿಜ, ಸಾಹಿತ್ಯದ ಮೂಲ ಸೆಲೆಯೇ ಅದು. ಆದರೆ, ಮೂಲದಲ್ಲೂ ಫಲದಲ್ಲೂ ಅದು ಸಫಲವಾಗುತ್ತಿರುವುದು ಕಡಿಮೆಯೇ. ಅಷ್ಟರಮಟ್ಟಿಗೆ ಸರಿ ಸುಮಾರು ನೂರಿಪ್ಪತ್ತು ಪುಟಗಳ ಈ ಪುಟ್ಟ ಪುಸ್ತಕ ಹಲವು ಬಾರಿ ನಮ್ಮ ಕಣ್ಣುಗಳನ್ನು ಒದ್ದೆಯಾಗಿಸುತ್ತದೆ, ಹೃದಯವನ್ನು ಆರ್ದ್ರಗೊಳಿಸುತ್ತದೆ. ಮುಂದೆ ಓದಿ »

- Login or register to post comments
- 124 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪ್ರಹ್ಲಾದ ಅಗಸನಕಟ್ಟೆಯವರ `ಕಾಯಕ್ಕೆ ನೆಳಲಾಗಿ'
June 1, 2008 - 3:14pm — narendraಪ್ರಹ್ಲಾದ ಅಗಸನಕಟ್ಟೆಯವರ ಆರನೆಯ ಕಥಾಸಂಕಲನ, `ಕಾಯಕ್ಕೆ ನೆಳಲಾಗಿ' ಹೊರಬಂದಿದೆ. ಹಿಂದಿನ `ಮನದ ಮುಂದಣ ಮಾಯೆ'ಗೆ ಸಾಹಿತ್ಯ ಅಕಾಡಮಿ ಬಹುಮಾನ ದಕ್ಕಿದ ನಂತರ ಹೊರಬರುತ್ತಿರುವ ಮೊದಲ ಸಂಕಲನ ಇದು. ಸರಳವಾಗಿ, ಸಹಜವಾಗಿ ಕಥಾನಕವನ್ನು, ಪಾತ್ರಗಳನ್ನು, ಸನ್ನಿವೇಶವನ್ನು ಚಿತ್ರಿಸುತ್ತ ಸಾಗುವ ಅಗಸನಕಟ್ಟೆಯವರದು ನವ್ಯೋತ್ತರ ಮತ್ತು ಹೊಸ ತಲೆಮಾರಿನ ಕತೆಗಾರರ ನಡುವೆ ವಿಶಿಷ್ಟ ದನಿ. ಅದಕ್ಕೆ ಅದರದೇ ಆದ ಒಂದು ಸೊಗಡು, ಸ್ವಾತಂತ್ರ್ಯ ಮತ್ತು ಸೌಂದರ್ಯ ಇದೆ.
ಅಗಸನಕಟ್ಟೆಯವರದು ಸಹಜ ಕತೆಗಾರಿಕೆ. ಗ್ರಾಮ್ಯ ಭಾಷೆ, ದೈನಂದಿನಗಳ ಸಾಮಾನ್ಯ ವಿವರಗಳ ಸೂಕ್ಷ್ಮ ಅಳವಡಿಕೆ ಮತ್ತು ಜೀವಂತ ಪಾತ್ರಗಳ ನೈಜ ಚಿತ್ರಣದ ಮೂಲಕ ಒಂದು ಸಹಜ ವಿದ್ಯಮಾನವನ್ನು ಕಥಾನಕದ ಚೌಕಟ್ಟಿನಲ್ಲಿ ಕಟ್ಟಿಕೊಡಬಲ್ಲ ಕಲೆಗಾರಿಕೆ ಅಗಸನಕಟ್ಟೆಯವರ ಹೆಚ್ಚುಗಾರಿಕೆ. ಮನೆಯೊಳಗಣ ಕಿಚ್ಚು, ತೇಲಲೀಯದು ಗುಂಡು, ಕಾಯಕ್ಕೆ ನೆಳಲಾಗಿ, ಕಂದನಲ್ಲಿ ಕುಂದನರಸುವರೆ ಮತ್ತು ಊರಾಗಿನ ಆ ಮರ ಕತೆಗಳಲ್ಲಿ ಬಳಸಿದ ಭಾಷೆ ಮತ್ತು ಇಲ್ಲಿ ಬರುವ ಗ್ರಾಮ್ಯ ಪರಿಸರದ ಜೀವಂತ ವಿವರಗಳು ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತಿವೆ. ಅದೇ ರೀತಿ ಅಹಿಂಸೋ ಪರ...ಧರ್ಮ, ಒಂದು ಇನ್ಸ್‌ಪೆಕ್ಷನ್, ಚಿಕ್ಕೂನ್ ಗುನ್ಯಾ, ಹೆಣವೆದ್ದು ನಗುತಿರೆ, ನಾನೇಕೆ ಪರದೇಶಿ ಕತೆಗಳಲ್ಲಿ ವೃತ್ತಿಪರ ಜಗತ್ತು ಸಶಕ್ತ ವಿವರಗಳಲ್ಲಿ ಮೈತುಂಬಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಅಗಸನಕಟ್ಟೆಯವರ ಭಾಷೆ ಎರಡು ಜಗತ್ತಿನಲ್ಲೂ ತನ್ನ ಮಾಯಕವನ್ನು ಮೆರೆಯುತ್ತದೆ. ಸೀನಾಯ ನಮಃದ ಶಂಕರ ಶಿಂಧೆ, ಅಹಿಂಸೋ ಪರ...ಧರ್ಮದ ಜಮೀರುಲ್ಲಾಖಾನ್, ಚಿಕ್ಕೂನ್ ಗುನ್ಯಾದ ಅರಳಿಕಟ್ಟಿ ಕೂಡಾ ಸಿದ್ಧಪ್ಪ, ನಾಗ, ಕುಬಸದ ಮುಂತಾದವರಂತೆಯೇ ಮನಸ್ಸಿನಲ್ಲುಳಿಯುತ್ತವೆ. ಮುಂದೆ ಓದಿ »

- Login or register to post comments
- 175 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: