ಲೇಖಕರು: ಹಂಸಾನಂದಿ.
ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.
ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂ ನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ( ಕ್ರಿ.ಶ. ರಿಂದ ಕ್ರಿ.ಶ. ) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.
ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂಡಿಗಳನ್ನೂ ಕೊಡುವ ಇರಾದೆ ನನ್ನದು. ನವರಾತ್ರಿ ಆದ್ದರಿಂದ, ದೇವಿಯ ವಿವಿಧ ರೂಪಗಳ ( ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಇರುವ ಕೃತಿಗಳಿವು ಅನ್ನುವುದನ್ನು ಬಿಟ್ಟರೆ, ಯಾವುದೇ ಕ್ರಮವನ್ನು ನಾನು ಅನುಸರಿಸುತ್ತಿಲ್ಲ.
ಮೊದಲ ದಿವಸ ನಾನು ಆಯುತ್ತಿರುವ ಕೃತಿ ಕಲ್ಯಾಣಿ ರಾಗದ ತ್ಯಾಗರಾಜರ ಕೃತಿ - ಸುಂದರಿ ನೀ ದಿವ್ಯರೂಪಮುನು ಎಂಬುದು. ತ್ಯಾಗರಾಜರು ತಮಿಳುನಾಡಿನ ಮದ್ಯಭಾಗದಲ್ಲಿ, ತಂಜಾವೂರಿನ ಬಳಿ ತಿರುವಾರೂರಿನಲ್ಲಿದ್ದವರು. ಒಮ್ಮೆ ತಮ್ಮ ಶಿಷ್ಯರಾದ ವೀಣಾ ಕುಪ್ಪಯ್ಯರ್ ಅವರ ಮನೆಗೆ ಅಹ್ವಾನಿತರಾಗಿ ಅವರಿದ್ದ ಚೆನ್ನಪಟ್ಟಣಂ (ಚೆನ್ನೈ, ಮದ್ರಾಸು) ಗೆ ಪ್ರವಾಸ ಕೈಗೊಂಡಿದ್ದರು. ಆಗ, ಅಲ್ಲೇ ಬಳಿಯಿರುವ ತಿರುವೊಟ್ಟ್ರಿಯೂರ್ ಎಂಬ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಈ ಊರು, ಈಗ ಮದ್ರಾಸಿಗೇ ಸೇರಿಕೊಂಡಂತೆ, ಊರಿನ ಉತ್ತರಭಾಗದಲ್ಲಿದೆ. ಅಲ್ಲಿರುವ ತ್ರಿಪುರಸುಂದರಿಯ ಮೇಲೆ ಐದು ಕೃತಿಗಳನ್ನು ರಚಿಸಿದರು. ಇವು ತಿರುವೊಟ್ಟ್ರಿಯೂರ್ ಪಂಚರತ್ನ ಕೃತಿಗಳು ಎಂದೇ ಹೆಸರುವಾಸಿಯಾಗಿವೆ.
ಕಲ್ಯಾಣಿ ರಾಗ ೧೫-೧೬ನೇ ಶತಮಾನಗಳಲ್ಲಿ ಪ್ರಚಲಿತದಲ್ಲಿದ್ದರೂ, ಅದಕ್ಕೆ ಅಷ್ಟಾಗಿ ಪಂಡಿತರ ಪ್ರಶಸ್ತಿ ದೊರಕಿರಲಿಲ್ಲವೆಂದು ತೋರುತ್ತದೆ. ಹಾಗೆಂದೇ, ವೆಂಕಟಮಖಿಯಂತಹ ಶಾಸ್ತ್ರಜ್ಞರು ಈ ರಾಗವನ್ನು ಮುಸಲ್ಮಾನರಿಗೆ ಪ್ರಿಯವಾದ ರಾಗ -ಎಂದು ಅದಕ್ಕೆ ಇರುವ ಉತ್ತರಾದಿ ಮತ್ತು ಪರ್ಶಿಯನ್ ಸಂಗೀತದ ಸಂಬಂಧಗಳನ್ನು ಹೇಳಿ ತೋರಿಸಿದ್ದಾರೆ. ಆದರೆ, ಕಾಲಾನುಕ್ರಮದಲ್ಲಿ ಅದು ಕರ್ನಾಟಕ ಸಂಗೀತದ ವಾಗ್ಗೇಯಕಾರರಿಗೆ ಬಹಳ ಪ್ರೀತಿಯ ರಾಗವೇ ಆಗಿಹೋಯಿತು. ತ್ಯಾಗರಾಜರೊಬ್ಬರೇ ಸುಮಾರು ಮೂವತ್ತಕ್ಕೂ ಹೆಚ್ಚು ರಚನೆಗಳನ್ನು ಕಲ್ಯಾಣಿ ರಾಗದಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಒಂದು ಉತ್ತಮ ರಚನೆ ಸುಂದರಿ ನೀ ದಿವ್ಯ ರೂಪಮುನು. ಆದಿತಾಳದಲ್ಲಿ ನಿಬದ್ಧವಾಗಿರುವ ಈ ಕೃತಿಯ ಸಾಹಿತ್ಯ ತೆಲುಗಿನಲ್ಲಿದೆ. ಈ ರಚನೆಯಲ್ಲಿ ತ್ಯಾಗರಾಜರು ತಿರುವೊಟ್ಟ್ರಿಯೂರಿನ ತ್ರಿಪುರ ಸುಂದರಿಯನ್ನು ನೋಡಿದ ತಮ್ಮ ಭಾಗ್ಯವನ್ನು ಬಡವನಿಗೆ ಸಿರಿಬಂದಂತೆ ಎಂದು ವರ್ಣಿಸಿದ್ದಾರೆ.
ಈ ರಚನೆಯನ್ನು ನೀವು ಇಲ್ಲಿ ಕೇಳಬಹುದು:
ಬಾಲಮುರಳಿ ಅವರ ಕಂಠದಲ್ಲಿ ಸುಂದರಿ ನೀ ದಿವ್ಯ ರೂಪಮುನು
ಆರಂಭದಲ್ಲಿ ಕಲ್ಯಾಣಿ ರಾಗಾಲಾಪನೆಯೂ ಇದೆ. ಕೊನೆಯಲ್ಲಿ ಸೊಗಸಾದ ಕಲ್ಪನಾಸ್ವರಗಳು ಇವೆ. ಕೇಳಿ ಆನಂದಿಸಿ.
ಮತ್ತೆ, ನಾಳೆ ಇನ್ನೊಂದು ಕೃತಿಯೊಂದಿಗೆ ಮರಳಿ ಸಿಗುವೆ.
-ಹಂಸಾನಂದಿ
ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.
ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ.
ಇವತ್ತು ನಾನು ಕೇಳಿಸುವ ರಚನೆ - ಭುವನೇಶ್ವರಿಯ ನೆನೆ ಮಾನಸವೆ; ಮೋಹನ ಕಲ್ಯಾಣಿ ರಾಗ, ಆದಿತಾಳದಲ್ಲಿದೆ. ಈ ರಾಗದಲ್ಲಿ ಸಂಗೀತರಚನೆ ಮಾಡಿದವರಲ್ಲಿ ಮುತ್ತಯ್ಯಭಾಗವತರೇ ಮೊದಲಿಗರು. ಅತಿ ಪ್ರಸಿದ್ಧ ವಾದ ಮೋಹನ, ಹಾಗೂ ಕಲ್ಯಾಣಿ ಈ ಎರಡು ರಾಗಗಳನ್ನು ಮೇಳೈಸುವುದರಿಂದ ಈ ರಾಗ ಉಂಟಾಗಿದೆ. ಕೃತಿಯ ಸಾಹಿತ್ಯ, ಸ್ವಲ್ಪ ಸಂಸ್ಕೃತ ಹೆಚ್ಚಾಗೇ ಇರುವಂತಹ ಕನ್ನಡಭಾಷೆಯಲ್ಲಿದೆ.
ಈಗ ಇದನ್ನು ಎಸ್.ರಾಜಮ್ (ವೀಣಾ ಬಾಲಚಂದರ್ ಅವರ ಅಣ್ಣ) ಅವರ ದ್ವನಿಯಲ್ಲಿ ನೀವು ಸಂಗೀತಪ್ರಿಯ.ಅರ್ಗ್ ನಲ್ಲಿ ಈ ಕೆಳಗಿನ ಕೊಂಡಿಯಲ್ಲಿ ಕೇಳಬಹುದು:
ರಾಜ್ಂ ಅವರ ಧ್ವನಿಯಲ್ಲಿ - ಭುವನೇಶ್ವರಿಯ ನೆನೆ ಮಾನಸವೇ
ಮರೆಯದ ಹಾಡು ಎಂಬ ಕನ್ನಡ ಚಲನಚಿತ್ರದಲ್ಲಿ ಈ ರಚನೆಯನ್ನು ಎಸ್.ಜಾನಕಿ ಅವರು ಸೊಗಸಾಗಿ ಹಾಡಿರುವುದನ್ನೂ ನೀವು ಕೇಳಿರಬಹುದು.
ಅಂದಹಾಗೆ, ತಿರುವನಂತಪುರದ ನವರಾತ್ರಿ ಮಂಡಪಂ ನಲ್ಲಿ, ಇಂದು ಹಾಡುವ ಸ್ವಾತಿ ತಿರುನಾಳ್ ಅವರ ನವರಾತ್ರಿ ಕತಿ, ಕಲ್ಯಾಣಿ ರಾಗದಲ್ಲಿ, ಆದಿತಾಳದಲ್ಲಿರುವ ಪಾಹಿಮಾಂ ಶ್ರೀ ವಾಗೀಶ್ವರೀ ಎಂಬುದು.
ನಾಳೆ, ದಸರೆಯ ಮತ್ತೊಂದು ವಿಶೇಷ ರಚನೆಯೊಂದಿಗೆ ಸಿಗೋಣ.
-ಹಂಸಾನಂದಿ
ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು. ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದೇ ಹೆಸರಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ಅವರು ಬಾಳಿದ್ದು ತಂಜಾವೂರು ರಾಜ್ಯದಲ್ಲೇ. ಅದರಲ್ಲಿಯೂ ಶಾಮಾಶಾಸ್ತ್ರಿ ಅವರು ಇದ್ದದ್ದಂತೂ ತಂಜಾವೂರು ನಗರದಲ್ಲೇ.
ಶಾಮಾಶಾಸ್ತ್ರಿ ಅವರ ನಿಜವಾದ ಹೆಸರು ವೆಂಕಟಕೃಷ್ಣ. ಆದರೆ, ಹೆಚ್ಚಾಗಿ ಅವರು ಶಾಮಾಶಾಸ್ತ್ರಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದಾರೆ.ತಮ್ಮ ರಚನೆಗಳಲ್ಲಿ ಶಾಮಕೃಷ್ಣ ಎಂಬ ಅಂಕಿತವಿಟ್ಟಿದ್ದಾರೆ. ಇವರು ತಮ್ಮ ರಚನೆಗಳಲ್ಲಿ ದೇವಿಯನ್ನು, ಸಾಧಾರಣವಾಗಿ ಶಾಮಕೃಷ್ಣಸೋದರಿ ಎಂದು ಕರೆಯುತ್ತಾರೆ. ಇವರು ತಂಜಾವೂರಿನ ಬಂಗಾರು ಕಾಮಾಕ್ಷಿಯ ಅರ್ಚಕರಾಗಿದ್ದರು. ಹೆಚ್ಚಾಗಿ ಇವರ ರಚನೆಗಳು ಈ ಬಂಗಾರು ಕಾಮಾಕ್ಷಿಯ ಮೇಲೇ ರಚಿತವಾಗಿವೆ. ಸಂಗೀತ ತ್ರಿಮೂರ್ತಿಗಳಲ್ಲಿ, ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇವರು ಎಲ್ಲರಿಗಿಂತ ಕಡಿಮೆ ರಚನೆಗಳನ್ನು ಮಾಡಿದ್ದಾರೆ. ಆದರೆ, ಒಂದೂಂದೂ ಅನರ್ಘ್ಯ ರತ್ನವೆಂದು ಹೇಳಬಹುದು.
ಶರಭೋಜಿ (ಕ್ರಿ.ಶ.1777-1832) ತಂಜಾವೂರಿನ ರಾಜನಾಗಿದ್ದಾಗ, ಬೊಬ್ಬಿಲಿ ಕೇಶವಯ್ಯ ಎಂಬ ಸಂಗೀತಗಾರರು ಅವನ ಆಸ್ಥಾನಕ್ಕೆ ಬಂದರಂತೆ. ಎಲ್ಲಿ ಹೋದರೂ, ಅಲ್ಲಿ ಸಂಗೀತಗಾರರನ್ನು ತನ್ನ ಸಂಗೀತಚತುರತೆಯಿಂದ, ಸವಾಲು ಹಾಕಿ ಸೋಲಿಸುತ್ತಿದ್ದರಂತೆ. ಹಾಗಾಗೆ ಆತನು ತಂಜಾವೂರಿನ ರಾಜಾಸ್ತಾನಕ್ಕೆ ಬಂದಾಗ, ಅವನ ಸವಾಲನ್ನು ಎದುರಿಸಲು ಯಾರೂ ತಯಾರಿರಲಿಲ್ಲವಂತೆ. ಆಗ, ರಾಜ ಶರಭೋಜಿ ಶಾಮಾಶಾಸ್ತ್ರಿಗಳನ್ನು ತನ್ನ ರಾಜ್ಯದ ಮಾನ ಉಳಿಸಲು ಕೇಳಿಕೊಂಡನಂತೆ. ಈ ಸವಾಲುಗಳು ಹೇಗೆ ನಡೆಯುತ್ತಿದ್ದವೆಂದರೆ, ಒಬ್ಬ ಸಂಗೀತಗಾರ ಮೊದಲಿಗೆ ಒಂದು ರಾಗದಲ್ಲಿ, ಕ್ಲಿಷ್ಟವಾದ ತಾಳಪ್ರಸ್ತಾರದಲ್ಲಿ ಪಲ್ಲವಿಯೊಂದನ್ನು ಹಾಡಬೇಕು. ಎದುರಾಳಿ, ಅದನ್ನು ಆ ಕ್ಷಣದಲ್ಲೇ ಗ್ರಹಿಸಿ ಅದನ್ನು ಮತ್ತೆ ಹಾಡಬೇಕು. ಅದು ಆಗದಿದ್ದರೆ, ಅವನು ಸೋತಂತೆ.
ಬೊಬ್ಬಿಲಿ ಕೇಶವಯ್ಯ ಶಾಮಾಶಾಸ್ತ್ರಿಯರ ಮುಖಾಮುಖಿಯಾದದ್ದೂ ಹೀಗೆಯೇ. ಕೇಶವಯ್ಯ ಸಿಂಹನಂದನ ತಾಳದಲ್ಲಿ ಕ್ಲಿಷ್ಟವಾದ ಪಲ್ಲವಿಯನ್ನು ಹಾಡಿದ್ದಾಯಿತು. ಅದನ್ನು ಶಾಮಾಸಾಸ್ತ್ರಿ ಮರಳಿ ಹಾಡಿದ್ದೂ ಆಯಿತು. ಮರುದಿನ ಶಾಮಾಶಾಸ್ತ್ರಿಗಳ ಸರದಿ. ಅಂದು ರಾತ್ರಿ, ತಮಗೆ ಸ್ಪರ್ಧೆಯಲ್ಲಿ ಜಯ ಲಭಿಸಲಿ, ರಾಜ್ಯದ ಮಾನ ಉಳಿಯಲಿ ಎಂದು ಯೋಚಿಸುತ್ತಾ ದೇವಿಯನ್ನು ಪೂಜಿಸುವಾಗ ಹೊಸತೊಂದೇ ರಾಗದ ಸೃಷ್ಟಿ ಆಯಿತಂತೆ. ಇಂತಹ ಕಷ್ಟಕಾಲದಲ್ಲಿ ಆ ದೇವಿಯೇ ತಮ್ಮನ್ನು ಕಾಯಬೇಕು, ತನ್ನ ವ್ಯಥೆಯನ್ನು ಹೋಗಿಸಿ ಕಾಪಾಡಬೇಕೆಂದು ಮೊರೆಯಿಡುತ್ತಾ ಹಾಡಿದ್ದು ಹೊಸ ಕೃತಿಯಾಗಿ ಹೊರಹೊಮ್ಮಿತಂತೆ. ಅದೇ ಚಿಂತಾಮಣಿ ರಾಗ, ಆದಿತಾಳದಲ್ಲಿರುವ ದೇವೀ ಬ್ರೋವ ಸಮಯಮಿದೇ.
ಡಾ. ರಾಮನಾಥನ್ ಅವರು ಹಾಡಿರುವ ದೇವೀ ಬ್ರೋವ ಸಮಯಮಿದೇ - ರಾಗ ಚಿಂತಾಮಣಿ. (ಸಂಗೀತಪ್ರಿಯ.ಆರ್ಗ್ ನಿಂದ)
ಮರುದಿನ, ಶಾಮಾಶಾಸ್ತ್ರಿ ಶರಭನಂದನವೆಂಬ ತಾಳದಲ್ಲಿ ಹಾಡಿದ ಪಲ್ಲವಿಯನ್ನು, ಕೇಶವಯ್ಯ ಮತ್ತೆ ಹಾಡಲಾರದೆ, ಸೋಲೊಪ್ಪಿ, ತನಗೆ ಸಿಕ್ಕಿದ್ದ ಮರ್ಯಾದೆಗಳನ್ನೆಲ್ಲ ಶಾಮಾಶಾಸ್ತ್ರಿಗಳಿಗೇ ಕೊಟ್ಟು ಹೋದನೆಂಬುದು ಐತಿಹ್ಯ. ಇದು ಬರೀ ದಂತಕತೆಯೇ ಆಗಿರಬಹುದು - ಆದರೂ, ಈ ರಾಗದಲ್ಲಿ ಮೊದಲು ಕೃತಿ ರಚನೆ ಮಾಡಿದ್ದಂತೂ ಶಾಮಾಶಾಸ್ತ್ರಿಗಳೇ ಅನ್ನುವುದಂತೂ ನಿಜ. ಮತ್ತೆ ಬಹಳ ವಾಗ್ಗೇಯಕಾರರೂ ಈ ರಾಗದಲ್ಲಿ ಹೆಚ್ಚಾಗಿ ರಚನೆಗಳನ್ನು ಮಾಡಿಲ್ಲ.
ದಸರಾ ಹಬ್ಬದ ಮೂರನೆಯ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಕೃತಿ ಸ್ವಾತಿ ತಿರುನಾಳ್ ಮಹಾರಾಜ ಸಾವೇರಿ ರಾಗದಲ್ಲಿ ರಚಿಸಿರುವ ದೇವಿ ಪಾವನಿ ಎನ್ನುವುದು. ಅದನ್ನು, ಬಾಂಬೆ ಸಹೋದರಿಯರ ಕಂಠದಲ್ಲಿ ನೀವು ಇಲ್ಲಿ ಕೇಳಬಹುದು.
-ಹಂಸಾನಂದಿ
ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.
ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ ಸಿಕ್ಕಿತು ನನಗೆ- ಹಾಗಾಗಿ ನನ್ನ ಬರೀ ಮಾತುಗಳಲ್ಲೂ ಸ್ವಲ್ಪ ಅರ್ಥ ಕೂಡಿದಂತಾಯಿತು ನನಗೆ. ನನ್ನ ಬಾಲ್ಯದಲ್ಲಿ, ನನ್ನ ಊರಿನಲ್ಲಿ ನಡೆಯುತ್ತಿದ್ದ ನವರಾತ್ರಿ-ಗಣೇಶೋತ್ಸವದ ನೆನಪು ಮರುಕಳಿಸಿತು.
ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ ೨೦ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.

ಜಿ.ಎನ್.ಬಿ. (೧೯೧೦- ೧೯೬೫) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು ಕಳಿಸಲಾಯಿತಂತೆ. ಅಂದು ತಮ್ಮ ಶೈಲಿಯಿಂದ ಇವರು ಎಲ್ಲ ರಸಿಕರ ಮನಗೆದ್ದುಬಿಟ್ಟ ಜಿ.ಎನ್.ಬಿ. ಮತ್ತೆ ಹಿಂತಿರುಗಿ ನೋಡಲಿಲ್ಲ.
ಕೇವಲ ಐವತ್ತೈದು ವರ್ಷದ ಕಿರಿಯ ವಯಸ್ಸಿನಲ್ಲೇ ರಸಿಕರು ಇವರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಇವರ ಹಲವಾರು ಶಿಷ್ಯರು ಇವರ ಪರಂಪರೆಯನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಪ್ರಸಿದ್ಧ ಸಂಗೀತಗಾರರಾದ ಎಮ್.ಎಲ್.ವಸಂತಕುಮಾರಿ, ತ್ರಿಶೂರು ರಾಮಚಂದ್ರನ್, ರಾಧಾ-ಜಯಲಕ್ಷ್ಮಿ ಇವರೆಲ್ಲ ಜಿ.ಎನ್.ಬಿ. ಪರಂಪರೆಯವರೇ.
ಜಿ.ಎನ್.ಬಿ. ಅವರು ಸುಮಾರು ಐವತ್ತಕ್ಕೂ ಹೆಚ್ಚು ರಚನೆಗಳನ್ನು ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ಹಿಂದೆ ಕೇಳಿಲ್ಲದ ಹೊಸ ರಾಗಗಳನ್ನು ಸೃಷ್ಟಿಸಿ, ಅದರಲ್ಲಿ ಕೃತಿಗಳನ್ನು ಮಾಡಿದ್ದಾರೆ. ಆದರೆ, ಇವರು ತಮ್ಮ ಕಚೇರಿಗಳಲ್ಲಿ ತಮ್ಮ ಕೃತಿಗಳನ್ನು ಹೆಚ್ಚಾಗಿ ಹಾಡುತ್ತಿರಲಿಲ್ಲ ಎಂದು ಕೇಳಿದ್ದೇನೆ.
ಈಗ ಇವತ್ತು ನವರಾತ್ರಿಯ ನಾಲ್ಕನೇ ದಿನ ಕೇಳಿ. ಜಿ.ಎನ್.ಬಿ. ಅವರು ರಚಿಸಿದ, ಅಮೃತಬೇಹಾಗ್ ರಾಗದ ಕಮಲಚರಣೇ ಕನಕಾರುಣೇ ಎಂಬ ಕೃತಿ. ಹಾಡಿರುವವರು ಜಿ.ಎನ್.ಬಿ. ಪರಂಪರೆಯ ಹಾಡುಗಾರ್ತಿಯರಾದ ಪ್ರಿಯ ಸಹೋದರಿಯರು:ಷಣ್ಮುಖಪ್ರಿಯ ಮತ್ತು ಹರಿಪ್ರಿಯ.
ಅಮೃತಬೇಹಾಗ್ ರಾಗ ಜಿ.ಎನ್.ಬಿ. ಅವರ ಹೊಸ ಕಲ್ಪನೆಯೇ. ಆ ಮೊದಲೇ ಪ್ರಸಿದ್ಧವಾಗಿದ್ದ ಅಮೃತ ವರ್ಷಿಣಿ ಮತ್ತು ಬೇಹಾಗ್ ರಾಗಗಳಿಂದ ಕೆಲವು ಅಂಶಗಳನ್ನು ಹೆಕ್ಕಿ ತೆಗೆದುಕೊಂಡು, ಈ ರಾಗಕ್ಕೊಂದು ರೂಪಕೊಟ್ಟಿದ್ದಾರೆ. ರಾಗದ ಸ್ವರೂಪ ತಿಳಿಯುವಂತಹ ಉತ್ತಮ ಚಿಟ್ಟೆಸ್ವರವನ್ನೂ ಹೊಸೆದಿದ್ದಾರೆ.
ಕೃತಿಯ ಸಾಹಿತ್ಯ ಸಂಸ್ಕೃತದಲ್ಲಿದೆ. ಕೊನೆಯ ಸಾಲಿನಲ್ಲಿ ಬರುವ ವಿಮರ್ಶಾನಂದ ಎಂಬುದು ಜಿ.ಎನ್.ಬಿ. ಅವರ ಅಂಕಿತ.
-ಹಂಸಾನಂದಿ
ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ. ಈ ರಚನೆಯನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಬಾಂಬೇ ಸಹೋದರಿಯರ ಧ್ವನಿಯಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.
ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ.
-ಹಂಸಾನಂದಿ
ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು
ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ
ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ
ಏಳನೆಯ ದಿನ ಬರುತ್ತದೆ.
ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಕೃತಿ ಕಾಮವರ್ಧಿನಿ ರಾಗದಲ್ಲಿರುವ
ಸರೋರುಹಾಸನ ಜಾಯೇ ಎಂಬುದು. ಅದನ್ನು ನೀವು ಮ್ಯೂಸಿಕ್ ಇಂಡಿಯಾ ತಾಣದಲ್ಲಿ, ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.
ಈ ರಾಗವನ್ನು ತಮಿಳುನಾಡಿನಲ್ಲಿ ಹೆಚ್ಚಾಗಿ ಪಂತುವರಾಳಿ ಎಂಬ ಹೆಸರಿಂದ ಕರೆಯುತ್ತಾರೆ.
ಸರಸ್ವತಿಯನ್ನು ಕಲಿಕೆಯ ಅಧಿದೇವತೆ ಎಂದು ನಂಬುವವರು ನಾವು. ಹಾಗಾಗೇ, ವಿದ್ಯಾರಂಭದಲ್ಲಿ ಸರಸ್ವತಿಯ ಪೂಜೆ
ಗೈಯುವುದು ರೂಢಿ. ಲಲಿತಕಲೆಗಳಾದ ಸಂಗೀತ ನೃತ್ಯ ಮೊದಲಾದುವುಗಳನ್ನು ಕಲಿಯಲಾರಂಭಿಸುವಾಗಲಂತೂ
ಕಡ್ಡಾಯವೇ ಎನ್ನಬಹುದು.
ಸಂಗೀತಾಭ್ಯಾಸಿಗಳು ಮೊದಲಿಗೆ ಕಲಿಯುವುದು ಮಾಯಾಮಾಳವಗೌಳ ರಾಗದಲ್ಲಿ ಸರಳೆವರಸೆ-ಜಂಟೀವರಸೆ
-ಅಲಂಕಾರ ಮೊದಲಾದ ಸರಳವಾದ ಸ್ವರ ಚಿತ್ತಾರಗಳನ್ನು. ನಂತರ, ಸರಳ ಸ್ವರ ಸಾಹಿತ್ಯ ಸಂಯೋಜನೆ ಇರುವ
ಗೀತೆಗಳನ್ನು ಹೇಳಿಕೊಡಲಾಗುತ್ತೆ. ಈ ಪದ್ಧತಿಯನ್ನು ಹಾಕಿಕೊಟ್ಟವರು ಪುರಂದರದಾಸರೇ ಎಂಬ ನಂಬುಗೆ
ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿದೆ.
ಇದರ ನಂತರ ಹೇಳಿಕೊಡಲಾಗುವ ರಚನೆಗಳು ಸ್ವರಜತಿಗಳು ಅಥವಾ ಜತಿಸ್ವರಗಳು. ಇದರ ನಂತರ ಬರುವ
ರಚನೆಗಳೇ ವರ್ಣಗಳು.
ವರ್ಣ ಎಂಬುದರ ಅರ್ಥ ಬಣ್ಣ ಎಂದಲ್ಲವೇ? ಹಾಗೇ, ಈ ವರ್ಣಗಳು ರಾಗಗಳ ಬೇರೆಬೇರೆ ಛಾಯೆಗಳನ್ನು ತೋರುವ
ಚಿತ್ರಪಟಗಳೆಂದರೆ ಅಡ್ಡಿಯಿಲ್ಲ. ವರ್ಣಗಳು ಅವು ನಿಯೋಜಿತವಾಗಿರುವ ರಾಗಗಳ ವೈಶಿಷ್ಟ್ಯಗಳನ್ನು ಎತ್ತಿ ತೋರುವಂತೆ
ಮಾಡಿರುವ ರಚನೆಗಳು. ಒಂದು ಸಂಗೀತ ಕಚೇರಿಗೆ ನೀವು ಹೋದರೆ, ಹೆಚ್ಚೆಂದರೆ ಒಂದು ವರ್ಣವನ್ನು, ಕಚೇರಿಯ
ಪ್ರಾರಂಭದಲ್ಲಿ ಕೇಳಬಹುದು. ಪ್ರತೀಸಲ, ಕೇಳುತ್ತೀರಿ ಎಂದೇನಿಲ್ಲ. ಆದರೆ, ಸಂಗೀತದ ವಿದ್ಯಾರ್ಥಿಗಳಿಗೆ ಮಾತ್ರ,
ಇವು ಬಹಳ ಮಹತ್ವದ ರಚನೆಗಳು. ಹೇಗೆ ಉತ್ತಮವಾದ ಪ್ರಬಂಧವನ್ನು ರಚಿಸಲು ಒಳ್ಳೆಯ ವ್ಯಾಕರಣದ ಬುನಾದಿ
ಬೇಕೋ, ಹಾಗೆ, ಉತ್ತಮ ಸಂಗೀತಗಾರರಾಗಲು ಈ ವರ್ಣಗಳ ಅಭ್ಯಾಸ ಅತ್ಯವಶ್ಯಕ.
ಇಷ್ಟೆಲ್ಲ ಏಕೆ ಹೇಳಿದೆನೆಂದರೆ, ಇವತ್ತು ನಾನು ಆರಿಸಿಕೊಂಡು, ನಿಮಗೆ ಕೇಳಿಸುತ್ತಿರುವ, ದೇವೀಪರವಾದ ರಚನೆ,
ಒಂದು ವರ್ಣ. ವರ್ಣಗಲ್ಲಿ ಸಾಹಿತ್ಯ (= ಮಾತು) ಕಡಿಮೆ. ಸಂಗೀತ (=ಧಾತು) ಹೆಚ್ಚು. ಒಂದು ಸಾಲಿನ ಪಲ್ಲವಿ,
ಒಂದು ಸಾಲಿನ ಅನುಪಲ್ಲವಿಯ ನಂತರ ಚಿಟ್ಟೆಸ್ವರಗಳು ಇರುತ್ತವೆ. ನಂತರ ಒಂದು ಸಾಲಿನ ಚರಣವನ್ನು, ಹಲವು
ಎತ್ತುಗಡೆ ಸ್ವರಗಳನ್ನು ಹಾಡುವ ನಡುವೆ ಮತ್ತೆ ಮತ್ತೆ ಹಾಡಲಾಗುತ್ತೆ.
ಇವತ್ತಿನ ವರ್ಣ ಅಮೃತವರ್ಷಿಣಿ ರಾಗದಲ್ಲಿ, ಆದಿತಾಳದಲ್ಲಿದೆ. ರಚಿಸಿರುವವರು ಡಾ. ಎಂ. ಬಾಲಮುರಳಿಕೃಷ್ಣ.
ಸಾಹಿತ್ಯದ ಭಾಗ ಎಷ್ಟು ಕಡಿಮೆ ಇದೆ ಎಂಬುದನ್ನು ಗಮನಿಸಿ. ಇದು ತೆಲುಗು ಭಾಷೆಯಲ್ಲಿದೆ.

ಇಲ್ಲಿ ಕ್ಲಿಕ್ಕಿಸಿ, ಈ ವರ್ಣವನ್ನು ನೀವು ಕೇಳಬಹುದು.
ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.
ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.
ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್
ಇದನ್ನು ಹಾಡಿರುವುದನ್ನು ಇಲ್ಲಿ ಕೇಳಬಹುದು.
http://boomp3.com/m/841f5e96fb86
ಅಂದ ಹಾಗೆ, ಈ ವಲಜಿ ರಾಗವೂ, ಕರ್ನಾಟಕ ಸಂಗೀತಕ್ಕೆ, ಮುತ್ತಯ್ಯ ಭಾಗವತರ ಕೊಡುಗೆಯೇ. ಅವರ ಬಗ್ಗೆ ಕೆಲವು ದಿನಗಳ ಹಿಂದೆ ಬರೆದಿದ್ದೆ.
ಈಗ, ಎರಡನೆಯದಾಗಿ, ಒಂದು ಷಟ್ಪದಿ. ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯಿಂದ ಸರಸ್ವತಿಯ ಪ್ರಾರ್ಥನೆ:
ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನ ರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೇ
ಶೌರಿ ಸುರಪತಿ ಸಕಲ ಮುನಿವರ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆಮ್ಮ ಜಿಹ್ವೆಯಲಿ
ಇದನ್ನು, ಕರ್ನಾಟಕದ ಸಾಂಪ್ರದಾಯಿಕ ಗಮಕ ಕಲಾಶೈಲಿಯಲ್ಲಿ ಕೇಳಿ:
ಮೂರನೆಯದಾಗಿ, ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ದೇವರನಾಮ:
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವೀ || ಪಲ್ಲವಿ||
ಶಶಿಮುಖದ ನಸುನಗೆಯ ಬಾಲೇ!
ಎಸೆವ ಕರ್ಣದ ಮುತ್ತಿನ ಓಲೇ
ನಸುವ ಸುಪಲ್ಲ ಗುಣಶೀಲೇ ದೇವೀ
ಬಿಸಜಾಕ್ಷಿ ಎನ್ನ ಹೃದಯದಲಿ ನಿಂದು ||ಚರಣ ೧||
ರವಿ ಕೋಟಿ ತೇಜ ಪ್ರಕಾಶೇ ಸದಾ
ಕವಿ ಜನ ಹೃತ್ಕಮಲ ವಾಸೇ
ಅವಿರಳಪುರಿ ಕಾಗಿನೆಲೆಯಾದಿ ಕೇ-
ಶವನ ಸುತನಿಗೆ ಸನ್ನುತ ರಾಣಿವಾಸೇ || ಚರಣ ೨||
ಇದನ್ನು ನೀವು ಇಲ್ಲಿ ಕೇಳಬಹುದು:
ವರವ ಕೊಡು - ಕನಕದಾಸರ ರಚನೆ - ರಾಗ: ರಂಜನಿ
ಇಷ್ಟು ದಿವಸದ ಸಂಪ್ರದಾಯವನ್ನು ಮುರಿಯದೆ, ಇವತ್ತಿನ ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿ ಯಾವುದು ಎನ್ನುವುದನ್ನೂ ಹೇಳಿಬಿಡುತ್ತೇನೆ. ಅದು ಶುದ್ಧಸಾವೇರಿ ರಾಗದಲ್ಲಿರುವ ಜನನಿ ಪಾಹಿ ಸದಾ ಎಂಬ ರಚನೆ. ಅದನ್ನು ನೀವು ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.
-ಹಂಸಾನಂದಿ
ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.
ನೆನ್ನೆ ವಾಸುದೇವಾಚಾರ್ಯರ ಬಗ್ಗೆ ಹೇಳುವಾಗ, ಅವರ ಪ್ರಸಿದ್ಧ ಶಿಷ್ಯರೊಬ್ಬರನ್ನು ಹೆಸರಿಸಿದ್ದೆ. ಹೌದು, ಇವತ್ತು ಆ ಶಿಷ್ಯರ ರಚನೆಯನ್ನೇ ನಾನು ಕೇಳಿಸುವುದು. ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ ಆಗಿದ್ದರೆಂಬುದು ಹೆಚ್ಚಾಗಿ ಜನಕ್ಕೆ ತಿಳಿದಿಲ್ಲದಿರುವುದು ದೌರ್ಭಾಗ್ಯವೇ ಸರಿ.
ಜಯಚಾಮರಾಜೇಂದ್ರ ಒಡೆಯರು ಮೊದಲು ಕಲಿತದ್ದು ಪಾಶ್ಚಾತ್ಯ ಸಂಗೀತ. ಲಂಡನ್ನಿನ್ಸ್ ಟ್ರಿನಿಟಿ ಕಾಲೇಜಿನಲ್ಲಿ ಪಿಯಾನೋ ವಿದ್ಯಾರ್ಥಿಗಳಿಗೆ ದೊರೆಯಬಹುದದ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ಅವರು ಹೊರಬಂದರು. ಪಟ್ಟವೇರಿದ ಮೇಲೆ, ಸುಮಾರು ಆರು ವರ್ಷ ಕಾಲ ವಾಸುದೇವಾಚಾರ್ಯರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು. ೧೯೪೫ ರಿಂದ ೧೯೪೭ರ ವರೆಗೆ ಸುಮಾರು ಎರಡುವರ್ಷಗಳ ಅವಧಿಯಲ್ಲಿ ತೊಂಬತ್ತನಾಕು ಕೃತಿಗಳನ್ನು ರಚಿಸಿದ್ದಾರೆ ಒಡೆಯರು. ತಮ್ಮ ರಚನೆಗಳನ್ನು ಇವರು ಮೊದಲು ಪಿಯಾನೋದಲ್ಲೇ ನುಡಿಸಿ, ಅದನ್ನು ತಿದ್ದಿ ತೀಡಿ, ನಂತರ ತಮ್ಮ ಗುರುಗಳಿಗೂ, ಹಾಗೂ ಅರಮನೆಯ ಇತರ ವಿದ್ವಾಂಸರಿಗೂ ಕೇಳಿಸಿ, ಅವರ ಅಭಿಪ್ರಾಯವನ್ನು ಕೇಳಿ, ನಂತರ ತಮ್ಮ ಕೃತಿಗಳಿಗೆ ಪೂರ್ಣಸ್ವರೂಪವನ್ನು ಕೊಡುತ್ತಿದ್ದ ವಿಷಯವನ್ನು ಇವರನ್ನು ಹತ್ತಿರದಿಂದ ನೋಡಿದ ಸಂಗೀತವಿದ್ವಾಂಸರು ಹೇಳಿದ್ದಾರೆ.
ಇವರ ಕೃತಿಸಮೂಹದಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಒಂದು ರಾಗದಲ್ಲಿ ಕೇವಲ ಒಂದೇ ರಚನೆ ಮಾಡಿದ್ದಾರೆ. ಅಂದರೆ ೯೪ ರಚನೆಗಳಿಗೂ ಬೇರೆ ಬೇರೆ ರಾಗಗಳನ್ನೇ ಬಳಸಿದ್ದಾರೆ. ಇನ್ಯಾವ ವಾಗ್ಗೇಯಕಾರರೂ ಈ ಮೊದಲು ಹಾಗೆ ರಚಿಸಿರುವುದು ದಾಖಲಾಗಿಲ್ಲ.
ಒಡೆಯರ ರಚನೆಗಳನ್ನಾಧರಿಸಿದ ಆಕಾಶವಾಣಿ ಕಾರ್ಯಕ್ರಮದಿಂದ ಸ್ಬಲ್ಪ ವಿವರಣೆ ಇಲ್ಲಿ ಕೇಳಿ: