ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ
ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.
- ಓ ಎಲ್ ಎನ್
೨೦೦೭
ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.
ಕ್ರೂಟ್ಸರ್ ಸೊನಾಟಾ ಎಂಬುದು ಸಂಗೀತಕಾರ ಬೆಥೊವೆನ್‌ನ ಒಂದು ರಚನೆ. ತೀರ ಉದ್ದೀಪಕವಾದ, ನುಡಿಸಲು ಕಷ್ಟವಾದ ರಚನೆ ಅನ್ನುತ್ತಾರೆ. ಟಾಲ್ಸ್‌ಟಾಯ್ ಮದುವೆಯ ಸಂಬಂಧದಲ್ಲಿ ಹುಟ್ಟುವ ಅಸೂಯೆ, ಪ್ರೀತಿಯ ಸಾವು, ಮನುಷ್ಯಮನಸ್ಸಿನ ಸುಪ್ತ ಆಲೋಚನೆ ಇವನ್ನೆಲ್ಲ ಅಚ್ಚರಿಯಾಗುವಷ್ಟು ಅದ್ಭುತವಾಗಿ ಹಿಡಿದಿರುವ ಲೇಖಕ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಇರುವವರು ದಯವಿಟ್ಟು ತಾಳ್ಮೆಯಿಂದ ಈ ಕಥೆಯನ್ನು ಓದಿ ಪ್ರತಿಕ್ರಿಯೆ ತೋರಬೇಕೆಂದು ಕೋರಿಕೆ. ಇಗೋ ಮೊದಲನೆಯ ಅಧ್ಯಾಯ:
ಅಧ್ಯಾಯ ೧
ಬೇಸಗೆ ಕಾಲ ಶುರುವಾಗಿಬಿಟ್ಟಿತ್ತು. ನಾನು ರೈಲು ಹತ್ತಿ ಆಗಲೇ ಒಂದು ದಿನ ಕಳೆದುಹೋಗಿತ್ತು. ರೈಲು ಯಾವ ಯಾವುದೋ ಸ್ಟೇಷನ್ನಿನಲ್ಲಿ ನಿಂತಾಗಲೆಲ್ಲ ಯಾರು ಯಾರೋ ಹತ್ತುತ್ತಿದ್ದರು, ಇಳಿಯುತ್ತಿದ್ದರು. ಮೂರು ಜನ ಮಾತ್ರ ನನ್ನ ಹಾಗೇನೇ ಕೊನೆಯ ಸ್ಟೇಷನ್ನಿನವರೆಗೂ ಹೋಗುವವರು ಇದ್ದರು. ಅವರಲ್ಲಿ ಒಬ್ಬಳು ಹೆಂಗಸು. ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿ ಕಾಣುತ್ತಾ ಇರಲಿಲ್ಲ. ತೆಳ್ಳನೆ ಮುಖ, ಗಂಡಸರ ಥರ ಡ್ರೆಸ್ಸುಮಾಡಿಕೊಂಡು ಸಿಗರೇಟು ಸೇದುತ್ತಾ ಇದ್ದಳು. ತಲೆಯ ಮೇಲೆ ಕ್ಯಾಪು ಹಾಕಿಕೊಂಡಿದ್ದಳು. ಅವನ ಜೊತಗೆ ಒಬ್ಬ ಇದ್ದ. ಲಾಯರು. ತುಂಬ ಮಾತಾಡುತ್ತಾ ಇದ್ದ. ಸುಮಾರು ನಲವತ್ತು ವರ್ಷ ಇರಬಹುದು. ಹೊಸಾ ಸೂಟುಕೇಸು, ಬ್ಯಾಗುಗಳನ್ನ ತಂದಿದ್ದ. ಇನ್ನು ಮೂರನೆಯವನು ಅಷ್ಟು ಎತ್ತರ ಇರಲಿಲ್ಲ. ಕೂದಲು ಗುಂಗುರುಗುಂಗುರಾಗಿತ್ತು. ಬೆಳ್ಳಗಾಗಿತ್ತು. ಕಣ್ಣಿನಲ್ಲಿ ಒಂದು ಥರಾ ಹೊಳಪು ಇತ್ತು. ಯಾವಾಗಲೂ ಆ ಕಡೆ ಈ ಕಡೆ ನೋಡುತ್ತಾ ಇದ್ದ. ಓವರ್ ಕೋಟು ಹಾಕಿಕೊಂಡಿದ್ದ. ನೋಡಿದರೆ ಯಾರೋ ಒಳ್ಳೆಯ ಟೈಲರನ ಕೈಯಲ್ಲಿ ಹೊಲಿಸಿದ್ದು ಅನ್ನುವ ಹಾಗೆ ಕಾಣುತ್ತಿತ್ತು. ಅದಕ್ಕೆ ಅಸ್ಟ್ರಾಖಾನ್ ಕಾಲರಿತ್ತು. ತಲೆಗೆ ಅಸ್ಟ್ರಾಖಾನ್ ಕ್ಯಾಪು. ಒಂದೊಂದು ಸಾರಿ ಯಾವಾಗಲಾದರೂ ಓವರ್‌ಕೋಟಿನ ಗುಂಡಿ ತೆಗೆದಾಗ ಒಳಗೆ ತೋಳಿಲ್ಲದ ರಶಿಯನ್ ಕೋಟು, ಕಸೂತಿ ಹಾಕಿದ ಅಂಗಿ ಕಾಣುತ್ತಾ ಇದ್ದವು. ಗಂಟಲು ಸರಿಮಾಡಿಕೊಳ್ಳುವವನ ಹಾಗೆ ಶ್ಬದಮಾಡುತ್ತಿದ್ದ. ಸುಮ್ಮಸುಮ್ಮನೆ ನಗುವುದಕ್ಕೆ ಶುರುಮಾಡಿ ತಟಕ್ಕನೆ ನಿಲ್ಲಿಸಿಬಿಡುತ್ತಿದ್ದ.
ಅವನದೇ ಲೋಕದಲ್ಲಿದ್ದವನ ಹಾಗೆ ಕೂತಿದ್ದ. ಯಾರ ಜೊತೆಯಲ್ಲೂ ಮಾತಾಡಬಾರದು, ಯಾರ ಪರಿಚಯವೂ ಬೇಡ ಅನ್ನುವ ಹಟ ತೊಟ್ಟಿದ್ದನೋ ಏನೋ. ಮಾತಾಡಿಸಿದರೆ ಒಂದು ಮಾತಿನಲ್ಲಿ ಹೌದು ಅಂತಲೋ ಇಲ್ಲ ಅಂತಲೋ ಅಂದು ಕಿಟಕಿಯಾಚೆ ನೋಡುತ್ತ ಕೂತುಬಿಡುತ್ತಿದ್ದ. ಏನಾದರೂ ಓದುತ್ತಾ ಇದ್ದ, ಅಥವಾ ಸಿಗರೇಟು ಸೇದುತ್ತಾ ಇದ್ದ. ಇಲ್ಲಾ ಪಕ್ಕದಲ್ಲಿದ್ದ ಹಳೆಯ ಚೀಲದಲ್ಲಿ ಏನಾದರೂ ಹುಡುಕಿ ತೆಗೆದು ತಿನ್ನುತ್ತಾ, ಆಗಾಗ ಟೀ ಕುಡಿಯುತ್ತಾ ಕೂತಿರುತ್ತಿದ್ದ.
ಒಂಟಿತನದ ಭಾರ ಹೊತ್ತು ನಲುಗಿಹೋಗಿದ್ದನೋ ಏನೋ. ನನಗೆ ಹಾಗನ್ನಿಸಿತು ಎಂದು ಅವನಿಗೆ ತಿಳಿಯಿತೋ ಏನೋ. ಯಾವಾಗಲಾದರೂ ಒಮ್ಮೆ ಅವನ ಮುಖ ಕೊಂಚ ಹೊತ್ತು ದಿಟ್ಟಿಸಿದರೆ ತಟ್ಟನೆ ಕಣ್ಣು ಹೊರಳಿಸಿ, ಪುಸ್ತಕ ತೆಗೆದು ಹಾಳೆ ತಿರುವಿಹಾಕುತ್ತಿದ್ದ.
ಪ್ರಯಾಣದ ಎರಡನೆಯ ದಿನ ಸಂಜೆ. ಕತ್ತಲಿಳಿಯುತ್ತಿತ್ತು. ಯಾವುದೋ ದೊಡ್ಡ ಸ್ಟೇಶನ್ನು ಬಂದಿತ್ತು. ರೈಲು ಬಹಳ ಹೊತ್ತು ನಿಂತಿತ್ತು. ಅವನು ಎದ್ದು ಹೋಗಿ ಬಿಸಿ ನೀರು ತಂದು ಟೀ ಮಾಡಿಕೊಂಡ. ಲಾಯರು ಟೀ ಕುಡಿಯಲು ಹೆಂಗಸಿನ ಜೊತೆ ಇಳಿದು ಹೋದ.
ಅವರು ಇಳಿದು ಹೋಗಿದ್ದಾಗ ಎಷ್ಟೋ ಹೊಸಬರು ನಮ್ಮ ಬೋಗಿಗೆ ಹತ್ತಿಕೊಂಡರು. ಅವರಲ್ಲಿ ಒಬ್ಬ, ನೀಟಾಗಿ ಕ್ಷೌರ ಮಾಡಿಕೊಂಡಿದ್ದ ಎತ್ತರವಾಗಿದ್ದ ಮುದುಕ. ಮುಖದ ತುಂಬ ಗೆರೆಗಳಿದ್ದವು. ನೋಡಿದರೆ ಬ್ಯುಸಿನೆಸ್ ಮ್ಯಾನ್ ಅಂತ ನೋಡಿದರೇ ತಿಳಿಯುತ್ತಿತ್ತು. ಫರ್ ಕೋಟು ಹಾಕಿಕೊಂಡು ತಲೆಗೆ ದೊಡ್ಡ ಕ್ಯಾಪು ಹಾಕಿಕೊಂಡಿದ್ದ. ಲಾಯರು ಮತ್ತು ಅವನ ಗೆಳತಿ ಕುಳಿತಿದ್ದ ಸೀಟುಗಳಿಗೆ ಎದುರಿಗೆ ಇದ್ದ ಖಾಲಿ ಸೀಟಿನಲ್ಲಿ ಕೂತುಕೊಂಡ. ಕೂತವನೇ ತನ್ನ ಜೊತೆಯಲ್ಲೇ ರೈಲು ಹತ್ತಿದ್ದ, ಸೇಲ್ಸ್‌ಕ್ಲಾರ್ಕ್‌ನನ ಹಾಗೆ ಕಾಣುತ್ತಿದ್ದ ಯುವಕನ ಜೊತೆ ಮಾತಿಗೆ ಶುರುಹಚ್ಚಿಕೊಂಡ.
ನಾನು ಇವರಿಗೆ ಓರೆಯಾಗಿ ಎದುರಾದ ಸೀಟಿನಲ್ಲಿದ್ದೆ. ರೈಲು ನಿಂತಿತ್ತು. ನಮ್ಮ ನಡುವೆ ಯಾರೂ ಅತ್ತ ಇತ್ತ ಓಡಾಡದೆ ಇದ್ದಾಗ ಅವರ ಮಾತು ಕೇಳಿಸುತ್ತಿತ್ತು. ‘ಆ ಸೀಟಿನಲ್ಲಿ ಯಾರೋ ಇದ್ದಾರೆ ಅಂತ ಕಾಣುತ್ತದೆ’ ಎಂದ ಯುವಕ. ಅದಕ್ಕೆ ಮುದುಕ ‘ನಾನು ಮುಂದಿನ ಸ್ಟೇಷನ್ನಿನಲ್ಲೇ ಇಳಿಯುತ್ತೇನೆ’ ಅಂದ. ಹೀಗೆ ಶುರುವಾಗಿ. ಮಾಮೂಲಾಗಿ ಬೆಲೆಗಳ ಬಗ್ಗೆ ಮಾತನಾಡಿದರು. ಮಾಸ್ಕೊ ಮಾರ್ಕೆಟ್ಟಿನ ಬಗ್ಗೆ ಮಾತನಾಡಿದರು. ನಿಜಿನಿ ನೊವೊಗೊರೊಡ್ ಫೇರ್ ಬಗ್ಗೆ ಮಾತು ಹೊರಳಿತು. ಅವರಿಬ್ಬರಿಗೂ ಪರಿಚಯ ಇದ್ದ ಮತ್ತೊಬ್ಬ ಬ್ಯುಸಿನೆಸ್‌ಮ್ಯಾನು ಅಲ್ಲಿ ಹೇಗೆ ಮಜಾ ಉಡಾಯಿಸುತ್ತಿದ್ದಾನೆ ಎಂದು ಕ್ಲಾರ್ಕು ಹೇಳಿದ. ಅವನು ಮಾತು ಮುಂದುವರೆಸಲು ಬಿಡದೆ ಮುದುಕ ವ್ಯಾಪಾರಿ ಕಳೆದ ವರ್ಷ ಕುನಾವಿನೊದಲ್ಲಿ ನಡೆದ ಎಕ್ಸಿಬಿಶನ್ನು, ಅಲ್ಲಿದ್ದ ಸಂಭ್ರಮ, ಅಲ್ಲಿ ಕ್ಲಾರ್ಕಿಗೂ ಗೊತ್ತಿರುವ ಆ ಅವನೂ ತಾನೂ ಕುಡಿದು ಟೈಟಾಗಿ ಎಂತೆಂಥ ಪೋಲಿ ಕೆಲಸ ಮಾಡಿದ್ದೆವು ಅವನ್ನು ಗುಟ್ಟಾಗಿ ಕಿವಿಯಲ್ಲಷ್ಟೆ ಹೇಳಬೇಕು ಅಂದ. ಅವನ ಮುಖದಲ್ಲಿ ಲಂಪಟತನದ ಜಂಬ ಹೊಳೆಯುತ್ತಿತ್ತು.
ಕ್ಲಾರ್ಕಿನ ನಗು ರೈಲಿನ ಬೋಗಿಯನ್ನೆಲ್ಲ ತುಂಬಿತು. ಮುದುಕನೂ ನಗುತ್ತಿದ್ದ. ನಕ್ಕಾಗ ಎರಡು ಹಳದಿ ಹಲ್ಲುಗಳು ಕಾಣುತ್ತಿದ್ದವು. ಅವರ ಮಾತು ಇಷ್ಟ ಆಗಲಿಲ್ಲ. ರೈಲು ಹೊರಡುವವರೆಗೆ ಇಳಿದು ಕೊಂಚ ಕಾಲಾಡಿಸೋಣವೆಂದು ಎದ್ದೆ. ನಮ್ಮ ಬೋಗಿಯ ಬಾಗಿಲಲ್ಲಿ ಲಾಯರು ಮತ್ತು ಅವನ ಗೆಳತಿ ಎದುರಾದರು. ಗಟ್ಟಿಯಾಗಿ ಮಾತಾಡುತ್ತಿದ್ದರು.
“ಇಳಿಯುವುದಕ್ಕೆ ಟೈಮಿಲ್ಲ, ಇನ್ನೇನು ಎರಡನೆಯ ಬೆಲ್ಲು ಆಗುತ್ತದೆ” ಎಂದ ಲಾಯರು.
ರೈಲಿನ ತುದಿ ಮುಟ್ಟುವುದರೊಳಗೆ ಮತ್ತೆ ಬೆಲ್ಲು ಆಯಿತು. ವಾಪಸ್ಸು ಬಂದೆ. ಬಂದಾಗ ಲಾಯರು ಹೆಂಗಸಿಗೆ ಉತ್ಸಾಹದಿಂದ ಹೇಳುತ್ತಿದ್ದ. ಅವನೆದುರು ಕುಳಿತಿದ್ದ ವ್ಯಾಪಾರಿ ಮೌನವಾಗಿದ್ದ.ಅವರ ಮಾತು ಹಿಡಿಸಲಿಲ್ಲವೆಂಬಂತೆ ಹಲ್ಲು ಕಡಿಯುತ್ತಾ ನೆಟ್ಟಗೆ ಎದುರಿಗೇ ದೃಷ್ಟಿ ನೆಟ್ಟು ಕೂತಿದ್ದ.
“ಆಮೇಲೆ ಏನಾಯಿತೆಂದರೆ,” ಲಾಯರನ್ನು ದಾಟಿ ಹೋಗುವಾಗ ಮುಗುಳ್ನಗುತ್ತಾ ಹೇಳುತ್ತಿದ್ದದ್ದು ಕೇಳಿಸಿತು “ಆಮೇಲೆ ಏನಾಯಿತೆಂದರೆ, ನಿನ್ನ ಜೊತೆ ಬದುಕುವುದಕ್ಕೆ ನನಗೆ ಇಷ್ಟವಿಲ್ಲ, ನಿನ್ನ ಜೊತೆ ಇರುವುದೂ ಇಲ್ಲ ಎಂದು ಗಂಡನಿಗೆ ಹೇಳಿಬಿಟ್ಟಳು. ಯಾಕೆಂದರೆ...”
ಅವನು ಮಾತು ಮುಂದುವರೆಸಿದ್ದ. ಟಿಟಿ ಬಂದಿದ್ದ. ನನ್ನ ಹಿಂದೆಯೇ ಕೆಲವರು ಪ್ರಯಾಣಿಕರು ಹತ್ತಿದ್ದರು. ಪೋರ್ಟರು ಆತುರಾತುರವಾಗಿ ನುಗ್ಗುತ್ತಿದ್ದ. ಗಲಾಟೆಯಲ್ಲಿ ಅವರ ಮಾತು ಕೇಳಿಸಲಿಲ್ಲ. ಸದ್ದಡಗಿದಮೇಲೆ ಮತ್ತೆ ಲಾಯರನ ಧ್ವನಿ ಕೇಳಿಸಿತು. ಈಗ ಲೋಕಾಭಿರಾಮವಾಗಿ ಮಾತಾಡುತ್ತಿದ್ದ.
“ಯೂರೋಪಿನಲ್ಲಿ ಎಲ್ಲ ಕಡೆಯೂ ಡೈವೋರ್ಸಿನ ವಿಷಯ ಮಾತಾಡುತ್ತಿದ್ದಾರೆ, ಈಗ ರಶಿಯಾದಲ್ಲೂ ಅಂಥ ಕೇಸುಗಳು ಜಾಸ್ತಿಯಾಗಿವೆ” ಅನ್ನುತ್ತಿದ್ದ. ಒಬ್ಬನೇ ಮಾತಾಡುತ್ತಿದ್ದೇನೆ ಅನ್ನಿಸಿ ಮುದುಕನನ್ನೂ ಮಾತಿಗೆಳೆಯಲು ಬಯಸಿದ. “ಹಿಂದಿನ ಕಾಲದಲ್ಲಿ ಹೀಗೆ ಆಗುತ್ತಿರಲಿಲ್ಲ ಅಲ್ಲವೇ?” ಅಂತ ನಗುತ್ತಾ ಕೇಳಿದ.
ಅವನು ಉತ್ತರಕೊಡುವಷ್ಟರಲ್ಲಿ ರೈಲು ಹೊರಟಿತು. ಮುದುಕ ಕ್ಯಾಪನ್ನು ತೆಗೆದು, ಎದೆಯ ಮೇಲೆ ಶಿಲುಬೆಯ ಆಕಾರ ಬರೆದುಕೊಂಡು, ಪ್ರಾರ್ಥನೆ ಹೇಳಿಕೊಳ್ಳಲು ಶುರುಮಾಡಿದ. ಲಾಯರು ಸಭ್ಯತೆಯಿಂದೆಂಬಂತೆ ಬೇರೆಯ ಕಡೆ ನೋಡುತ್ತಾ ಉತ್ತರಕ್ಕಾಗಿ ಕಾಯುತ್ತಿದ್ದ. ಪ್ರಾರ್ಥನೆ ಮುಗಿಸಿ, ಎದೆಯ ಮೇಲೆ ಮೂರು ಬಾರಿ ಶಿಲುಬೆಯ ಆಕಾರದಲ್ಲಿ ಕೈ ಆಡಿಸಿ, ತಲೆಯ ಮೇಲಿನ ಕ್ಯಾಪು ಸ್ವಲ್ಪ ಹಣೆಯನ್ನು ಮುಚ್ಚುವ ಹಾಗೆ ಎಳೆದುಕೊಂಡು, ಕೂತಿದ್ದ ಭಂಗಿ ಒಂದು ಚೂರು ಬದಲಾಯಿಸಿ ಮಾತು ಶುರು ಮಾಡಿದ.
“ಹೌದು ಸಾರ್. ಹಿಂದಿನ ಕಾಲದಲ್ಲೂ ಆಗುತ್ತಾ ಇತ್ತು. ಬಟ್, ಅಪರೂಪ. ಇವತ್ತಿನ ಕಾಲದಲ್ಲಿ ಜಾಸ್ತಿ ಆಗಿದೆ. ಜನ ಎಜುಕೇಟೆಡ್ ಆಗಿಬಿಟ್ಟಿದಾರೆ” ಎಂದ.
ರೈಲಿನ ಸ್ಪೀಡು ಜಾಸ್ತಿ ಆಗಿತ್ತು. ಕೊಂಚ ಓಲಾಡುತ್ತಿತ್ತು. ಹಳಿಗಳ ಜಾಯಿಂಟು ಬಂದಾಗೆಲ್ಲ ಸದ್ದು ಹೆಚ್ಚಾಗುತ್ತಿತ್ತು. ಮುದುಕನ ಮಾತುಗಳು ಸ್ಪಷ್ಟವಾಗಿ ಕೇಳಲಿಲ್ಲ. ಅವನ ಮಾತು ಆಸಕ್ತಿ ಕೆರಳಿಸಿದ್ದರಿಂದ ಕೊಂಚ ಅತ್ತ ಸರಿದೆ. ನನ್ನ ಪಕ್ಕದಲ್ಲಿದ್ದ ಒಂಟಿ ಮನುಷ್ಯನಿಗೂ ಆಸಕ್ತಿ ಹುಟ್ಟಿದ್ದಂತಿತ್ತು. ಕುಳಿತ ಭಂಗಿ ಬದಲಾಯಿಸದೆ ಅವನೂ ಕಿವಿಕೊಟ್ಟಿದ್ದ.
“ಎಜುಕೇಶನ್ನಿನದು ಏನು ತಪ್ಪು?” ಹೆಂಗಸು ಕೇಳಿದಳು. ಅವಳ ಮುಖದ ಮೇಲೆ ಕಂಡೂ ಕಾಣದಂತೆ ನಗು ಸುಳಿಯುತ್ತಿತ್ತು. “ಹಿಂದಿನ ಕಾಲದಲ್ಲಿ ಗಂಡು ಹೆಣ್ಣು ಒಬ್ಬರನ್ನೊಬ್ಬರು ನೋಡದೆಯೇ ಮದುವೆ ಆಗುತ್ತಿದ್ದರು. ಈಗಲೂ ಹಾಗೆಯೇ ಆಗುವುದು ಒಳ್ಳೆಯದಾ?” ಎದುರಿಗಿರುವವರು ಆಡಿದ ಮಾತಿಗೆ ಉತ್ತರ ಕೊಡುವುದಕ್ಕಿಂತ ಅವರು ಆಡಬಹುದು ಅನ್ನಿಸಿದ ಮಾತಿಗೆ ಹೆಂಗಸರು ಉತ್ತರ ಕೊಡುತ್ತಾರಲ್ಲ ಹಾಗೆಯೇ ಆಕೆಯೂ ಮಾತಾಡಿದಳು. “ಹೆಂಗಸರಿಗೆ ಗಂಡ ತಮ್ಮನ್ನು ಲವ್ ಮಾಡುತ್ತಾನೋ, ಗಂಡನ ಬಗ್ಗೆ ತಮ್ಮಲ್ಲಿ ಪ್ರೀತಿ ಹುಟ್ಟುತ್ತದೋ ಯಾವುದೂ ಗೊತ್ತಿಲ್ಲದೆ ತಮ್ಮನ್ನು ಒಪ್ಪಿದ ಮೊದಲ ಗಂಡನ್ನು ಮದುವೆ ಆಗಿಬಿಡುತ್ತಿದ್ದರು. ಹಾಗಿದ್ದಿದ್ದರೆ ಚೆನ್ನಾಗಿರುತಿತ್ತೋ?” ಮುದುಕನ ಮಾತಿಗೆ ಉತ್ತರ ಕೊಡುತ್ತಿದ್ದರೂ ಲಾಯರನ್ನೂ ನನ್ನನ್ನೂ ಉದ್ದೇಶಿಸಿ ಕೇಳಿದಹಾಗಿತ್ತು.
ಅವಳ ಮಾತು ಕೇಳಿಸಿಕೊಳ್ಳದವನ ಹಾಗೆ “ಜನಾ ಅತೀ ಬುದ್ಧಿವಂತರಾಗಿಬಿಟ್ಟಿದಾರೆ” ಎಂದು ಮುದುಕ ತಿರಸ್ಕಾರದಿಂದ ಹೇಳಿದ.
“ಎಜುಕೇಶನ್ನಿಗೂ ಗಂಡ ಹೆಂಡತಿಯರ ನಡುವೆ ಹುಟ್ಟುವ ಡಿಫರೆನ್ಸುಗಳಿಗೂ ಏನು ಸಂಬಂಧ?” ಹೌದೋ ಅಲ್ಲವೋ ಅನ್ನುವ ಹಾಗೆ ನಗುತ್ತಾ ಲಾಯರು ಕೇಳಿದ.
ಮುದುಕ ಏನೋ ಹೇಳಬೇಕೆಂದಿದ್ದ. ಆದರೆ ಹೆಂಗಸು ನಡುವೆಯೇ “ಇಲ್ಲ. ಆ ಕಾಲ ಎಲ್ಲಾ ಹೊರಟು ಹೋಯಿತು” ಅಂದಳು.
ಲಾಯರು ಅವಳ ಮಾತನ್ನು ತಡೆಯುತ್ತಾ “ತಾಳಿ. ಅವರ ಅಭಿಪ್ರಾಯ ಹೇಳಲಿ” ಅಂದ.
“ಯಾಕೆ ಅಂದರೆ, ಈಗ ಯಾರಲ್ಲೂ ಭಯ ಇಲ್ಲಾ” ಎಂದ ಮುದುಕ.
“ಪರಸ್ಪರ ಪ್ರೀತಿ ಇಲ್ಲದವರ ಮದುವೆ ಹೇಗೆ ಮಾಡಿಸುತ್ತೀರಿ? ಪ್ರಾಣಿಗಳನ್ನು ಮಾತ್ರ ಓನರು ತನ್ನ ಇಷ್ಟ ಬಂದ ಹಾಗೆ ಜೋಡಿ ಮಾಡಬಹುದು. ಮನುಷ್ಯರಿಗೆ ಆಸೆಗಳಿರುತ್ತವೆ, ಇಷ್ಟ ಅನಿಷ್ಟಗಳು ಇರುತ್ತವೆ” ಎಂದು ಹೇಳುತ್ತಾ ಹೆಂಗಸು ಲಾಯರಿನತ್ತ, ನನ್ನತ್ತ, ಮತ್ತು ಎದ್ದು ನಿಂತು ಸೀಟಿನ ಮೇಲೆ ಮೊಳಕೈ ಊರಿ, ಬಗ್ಗಿ ನಿಂತು, ನಸುನಗುತ್ತಾ ಮಾತನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಕ್ಲಾರ್ಕಿನತ್ತ ಕೂಡ ದೃಷ್ಟಿ ಹಾಯಿಸಿದಳು. ಮುದುಕ ಕೆರಳಬೇಕು ಎಂದು ಅವಳು ಬಯಸಿದ ಹಾಗಿತ್ತು.
“ನೀವು ಹೇಳುವುದು ತಪ್ಪು ಪ್ರಾಣಿಗಳು ಎಷ್ಟೆಂದರೂ ಪ್ರಾಣಿಗಳು. ಮನುಷ್ಯರು ಕಾನೂನಿನ ಪ್ರಕಾರ ಬದುಕಬೇಕು” ಅಂದ ಮುದುಕ.
“ಆದರೂ ಪ್ರೀತಿಯಿಲ್ಲದ ಗಂಡನ ಜೊತೆಗೆ ಬದುಕುವುದು ಹೇಗೆ?” ಎಲ್ಲರೂ ತಾನಾಡುವ ಮಾತು ಗಮನಕೊಟ್ಟು ಕೇಳುತ್ತಿದ್ದಾರೆ ಎಂದು ಗೊತ್ತಾಗಿ ಉತ್ತೇಜಿತಳಾಗಿ ಕೇಳಿದಳು. ತನಗೇ ಹೊಸ ಹೊಸ ವಿಚಾರಗಳು ಹೊಳೆಯುತ್ತಿವೆ ಎಂಬಂತೆ ವಾದಮಾಡಲು ತೊಡಗಿದ್ದಳು.
“ಮುಂಚೆ ಇದೆಲ್ಲಾ ಇರಲಿಲ್ಲ” ಮುದುಕ ಗಂಭೀರವಾಗಿ ಹೇಳಿದ. “ಪ್ರೀತಿ ಗೀತಿ ಅಂತೆಲ್ಲ ಈಗ ಕೇಳುತಾ ಇದೇವೆ. ಸಣ್ಣ ಮನಸ್ತಾಪ ಆದರೂ ಸಾಕು, ‘ನಾನು ಮನೆ ಬಿಟ್ಟು ಹೋಗತೀನಿ’ ಅನ್ನುತ್ತಾಳೆ ಹೆಂಡತಿಯಾದವಳು. ರೈತರೂ ಹಳ್ಳಿಯವರೂ ಇದನ್ನೇ ಕಲಿತುಬಿಟ್ಟಿದಾರೆ. ‘ನಿನ್ನ ಸಹವಾಸ ಸಾಕಾಯಿತು, ಹೊರಟೆ; ಇನ್ನು ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ; ವಾನ್ಕಾ ಜೊತೆ ಹೋಗುತಿದೀನಿ, ಅವನು ನಿನಗಿಂತ ಸಾವಿರಪಾಲು ವಾಸಿ’ ಅನ್ನುತಾಳೆ ಹೆಂಡತಿಯಾದವಳು. ಬೇಕಾದರೆ ಹೋಗಿ ಮಾತಾಡಿಸಿ ನೋಡಿ. ಏನಾದರೂ ಆಗಲಿ, ಹೆಂಡತಿಯಾದವಳಿಗೆ ಮೊದಲು ಭಯ ಇರಬೇಕು.”
ಕ್ಲಾರ್ಕು ಲಾಯರತ್ತ ನೋಡಿದ, ಹೆಂಗಸಿನತ್ತ ನೋಡಿದ, ನನ್ನತ್ತ ನೋಡಿದ. ಕಷ್ಟಪಟ್ಟು ನಗು ತಡೆದುಕೊಂಡಿದ್ದ. ಮಿಕ್ಕವರನ್ನು ನೋಡಿಕೊಂಡು ವ್ಯಾಪಾರಿಯ ಮಾತನ್ನು ವಿರೋಧಿಸುವುದಕ್ಕೂ ಸಮರ್ಥಿಸುವುದಕ್ಕೂ ಸಿದ್ಧನಾಗಿದ್ದ.
“ಎಂಥಾ ಭಯ?” ಹೆಂಗಸು ಕೇಳಿದಳು.
“ಎಂಥಾ ಭಯ ಅಂದರೆ--ಹೆಂಡತಿಗೆ ಗಂಡನ ಬಗ್ಗೆ ಭಯ ಇರಬೇಕು.”
“ಆ ಕಾಲ ಈಗಿಲ್ಲ ಅಜ್ಜಾ” ಎಂದು ಕಹಿಯಾಗಿ ನುಡಿದಳು.
“ಇಲ್ಲಮ್ಮಾ, ಕಾಲದ ಪ್ರಶ್ನೆ ಅಲ್ಲ ಇದು. ದೇವರು ಈವ್‌ಳನ್ನು ಗಂಡಸಿನ ಪಕ್ಕೆಲುಬು ತೆಗೆದು ಸೃಷ್ಟಿಮಾಡಿದ. ಈ ಲೋಕ ಇರುವವರೆಗೂ ಅವಳು ಗಂಡಿಗೆ ಅಧೀನವಾಗಿಯೇ ಇರಬೇಕು” ಎಂದು ಅಧಿಕಾರವಾಣಿಯಿಂದ ತಲೆದೂಗುತ್ತ ವ್ಯಾಪಾರಿ ನುಡಿದ್ದನ್ನು ಕಂಡು, ಗೆಲುವು ಅವನದೇ ಎಂದು ನಿರ್ಧರಿಸಿ ಕ್ಲಾರ್ಕು ಜೋರಾಗಿ ನಕ್ಕುಬಿಟ್ಟ.
“ಹೌದು, ನೀವು ಗಂಡಸರು ಹಾಗಂದುಕೊಳ್ಳುತ್ತೀರಿ” ಅವಳು ಸೋಲೊಪ್ಪದವಳಂತೆ ನಮ್ಮತ್ತ ತಿರುಗಿ ಹೇಳಿದಳು. “ನಿಮಗೆ ನೀವೇ ಸ್ವಾತಂತ್ರ್ಯ ಕೊಟ್ಟುಕೊಂಡಿದ್ದೀರಿ. ಹೆಂಗಸನ್ನ ನಿಮ್ಮ ಅಧೀನದಲ್ಲಿಟ್ಟುಕೊಳ್ಳಬೇಕು ಅನ್ನುತ್ತೀರಿ. ಗಂಡಸು ಮಾತ್ರ ಏನು ಬೇಕಾದರೂ ಮಾಡಬಹುದು, ಅನ್ನುವಂತೆ ಎಲ್ಲಾ ವಿಚಾರದಲ್ಲೂ ಸ್ವತಂತ್ರ ಕೊಟ್ಟುಕೊಳ್ಳುತ್ತೀರಿ.”
“ಗಂಡಸು,--ಗಂಡಸಿನ ಮಾತು ಬೇರೆ.”
“ಹಾಗಾದರೆ ನಿಮ್ಮ ಪ್ರಕಾರ ಗಂಡಸು ಏನು ಬೇಕಾದ್ದು ಮಾಡಬಹುದಾ?”
“ನಮಗೆ ಯಾರೂ ಪರ್ಮಿಶನ್ನು ಕೊಡುವುದಿಲ್ಲ. ಒಂದು ವೇಳೆ ಗಂಡಸು ಫ್ಯಾಮಿಲಿಯ ಆಚೆ ಕೆಟ್ಟದಾಗಿ ನಡೆದುಕೊಂಡರೆ ಅದರಿಂದ ಫ್ಯಾಮಿಲಿಗೇನೂ ತೊಂದರೆ ಇಲ್ಲ. ಆದರೆ, ಹೆಂಗಸು, ಹೆಂಡತಿ ಅಂದರೆ ಒಡೆದು ಹೋಗುವ ಗಾಜಿನ ಪಾತ್ರೆ ಇದ್ದಹಾಗೆ” ವ್ಯಾಪಾರಿ ಕಠಿಣವಾಗಿ ಹೇಳಿದ.
ಅವನ ಅಧಿಕಾರವಾಣಿ ಕೇಳುತ್ತಿದ್ದವರನ್ನೆಲ್ಲ ಮರುಳುಮಾಡಿತು. ಹೆಂಗಸು ಕೂಡ ಮೆತ್ತಗಾದಳು. ಆದರೂ ಸೋಲೊಪ್ಪದೆ “ಸರಿ, ಹೆಂಗಸು ಕೂಡ ಮನುಷ್ಯಳು, ಅವಳಿಗೂ ಗಂಡನಿಗೆ ಇರುವ ಹಾಗೆಯೇ ಫೀಲಿಂಗುಗಳು ಇರುತ್ತವೆ ಅನ್ನುವುದನ್ನು ಒಪ್ಪುತ್ತೀರಲ್ಲಾ. ಅವಳಿಗೆ ಗಂಡನ ಬಗ್ಗೆ ಪ್ರೀತಿ ಇರದಿದ್ದರೆ ಏನು ಮಾಡಬೇಕು?”
“ಗಂಡನ ಬಗ್ಗೆ ಪ್ರೀತಿ ಇರದಿದ್ದರೆ ಏನು ಮಾಡಬೇಕು!” ಮುದುಕ ಬಿರುಗಾಳಿಯಂತೆ ಅವಳ ಮಾತನ್ನೇ ತಿರುಗಿಸಿ, ಹುಬ್ಬೇರಿಸಿ, ಇರುವ ಎರಡು ಹಲ್ಲು ಕಚ್ಚಿ ಕೇಳಿದ. “ಏನು ಮಾಡಬೇಕು, ಗಂಡನನ್ನು ಪ್ರೀತಿಸುವಹಾಗೆ ಮಾಡಬೇಕು. ಪ್ರೀತಿ ಮಾಡೇ ಮಾಡುತಾಳೆ.”
ಈ ಅನಿರೀಕ್ಷಿತವಾದ ವಿವಾದ ಕ್ಲಾರ್ಕಿಗೆ ಸಂತೋಷ ತಂದಿತ್ತು. ಅವನು ಹೌದೆನ್ನುವಂತೆ ಗೊಣಗುಟ್ಟಿದ.
“ಇಲ್ಲಾ ಇಲ್ಲಾ. ಬಲವಂತ ಮಾಡಬಾರದು. ಪ್ರೀತಿ ಇರದಿದ್ದರೂ ಪ್ರೀತಿಸುವಂತೆ ಒತ್ತಾಯ ಮಾಡಬಾರದು” ಅಂದಳು ಹೆಂಗಸು.
“ಒಂದುವೇಳೆ ಹೆಂಡತಿ ಗಂಡನಿಗೆ ಮೋಸಮಾಡಿದರೆ ಏನು ಮಾಡಬೇಕು?” ಲಾಯರು ಕೇಳಿದ.
“ಹಾಗಾಗುವುದಕ್ಕೆ ಬಿಡಬಾರದು. ಗಂಡನಾದವನು ಹುಷಾರಾಗಿರಬೇಕು” ಎಂದ ವ್ಯಾಪಾರಿ.
“ಹುಷಾರಾಗಿದ್ದರೂ ಮೋಸ ಮಾಡಿದರೆ? ಹಾಗಾಗುತ್ತದಲ್ಲವೇ ಎಷ್ಟೋ ಸಾರಿ?”
“ಅದೇನಿದ್ದರೂ ಶ್ರೀಮಂತರ ಮನೆಗಳಲ್ಲಿ ನಡೆಯುತ್ತದೆ. ನಮ್ಮಲ್ಲಿ ಅಲ್ಲ.” ಮುದುಕ ಹೇಳಿದ. “ಗಂಡನಾದವನು ಹೆಂಡತಿಯನ್ನು ಆಳಲಾರದಷ್ಟು ಪೆದ್ದನಾಗಿದ್ದರೆ ಏನೂ ಮಾಡುವುದಕ್ಕಾಗುವುದಿಲ್ಲ. ಆದರೆ ಹಾದಿಮಾತು ಬೀದಿಮಾತು ಆಗಿ ಮರ್ಯಾದೆ ಹೋಗಬಾರದು. ಪ್ರೀತಿ ಇದೆಯೋ ಇಲ್ಲವೋ, ಮನೆ ಮಾತ್ರ ಮುರಿಯಬಾರದು. ಗಂಡನಾದವನು ಹೆಂಡತಿಯನ್ನು ಆಳಬೇಕು. ಅವನಿಗೆ ಅಂಥ ಶಕ್ತಿ ಇದೆ. ಆಳುವುದಕ್ಕೆ ಆಗದಿದ್ದವನು ನಾಮರ್ದ.”
ಎಲ್ಲರೂ ಮೌನವಾಗಿದ್ದರು. ಕ್ಲಾರ್ಕು ಕೊಂಚ ಮುಂದೆ ಬಂದ. ಮಿಕ್ಕವರಿಗಿಂತ ಮಾತಿನಲ್ಲಿ ಹಿಂದೆ ಬೀಳಬಾರದೆಂದು, ಹೇಳಿದ. ಅವನ ಮುಖದಮೇಲೆ ಯಾವಾಗಲೂ ನಗು ಇದ್ದೇ ಇರುತ್ತಿತ್ತು: “ನಮ್ಮ ಬಾಸ್‌ನ ಮನೆಯಲ್ಲಿ ಒಂದು ಗುಲ್ಲಾಯಿತು. ಸರಿ ತಪ್ಪು ಕರೆಕ್ಟಾಗಿ ಹೇಳುವುದು ಕಷ್ಟ. ಬಾಸ್ ಮಗನ ಹೆಂಡತಿ ಬಹಳ ಚಾಲೂ. ದಾರಿ ತಪ್ಪುವುದಕ್ಕೆ ಶುರುಮಾಡಿದಳು. ಗಂಡ ತುಂಬ ಏಬಲ್ಲು. ಗಂಭೀರ ಸ್ವಭಾವದವನು. ಕಲ್ಚರ್ಡು. ಮೊದಲು ಅಕೌಂಟೆಂಟಿನ ಜೊತೆ ವ್ಯವಹಾರ ಇಟ್ಟುಕೊಂಡಿದ್ದಳು. ಗಂಡ ಒಳ್ಳೆಯ ಮಾತಿನಲ್ಲಿ ಬುದ್ಧಿ ಹೇಳಿ ನೋಡಿದ. ಆದರೆ ಅವಳು ನಡತೆ ಬದಲಾಯಿಸಿಕೊಳ್ಳಲಿಲ್ಲ. ದುಡ್ಡು ಕದ್ದಳು. ಗಂಡ ಅವಳನ್ನು ಹೊಡೆದ. ಹಟ ಜಾಸ್ತಿ ಆಯಿತು. ಮೊದಲು, ಹೇಳಬಹುದೋ ಬೇಡವೋ, ಆದರೂ... ಚರ್ಚಿನ ಸಂಸ್ಕಾರವೇ ಆಗಿರದಿದ್ದವನ ಜೊತೆ, ಆಮೇಲೆ ಕ್ರಿಶ್ಚಿಯನ್ನೇ ಅಲ್ಲದವನ ಜೊತೆ ಮತ್ತೆ ಒಬ್ಬ ಯಹೂದಿ ಜೊತೆ ಸಂಬಂಧ ಬೆಳೆಸಿದಳು. ಗಂಡ ಏನು ಮಾಡಬೇಕು? ಅವಳ ಕೈಬಿಟ್ಟುಬಿಟ್ಟ.ಈಗ ಬ್ಯಾಚಲರ್ ಥರಾ ಬದುಕಿದ್ದಾನೆ. ಅವಳು ಪೂರಾ ಹಾಳಾಗಿಹೋಗಿದ್ದಾಳೆ.”
“ಅವನು ನಾಮರ್ದ” ಮುದುಕ ಹೇಳಿದ, “ಮೊದಲಿನಿಂದಲೇ ಬಿಗಿಯಾಗಿದ್ದಿದ್ದರೆ ಸರಿಯಾಗುತ್ತಿತ್ತು. ಅವಳು ಗರತಿಯಾಗಿ ಇರೋಳು. ಏನೂ ಆಗತಾ ಇರಲಿಲ್ಲ. ಮೊದಲೇ ಲೂಸು ಬಿಡಬಾರದು. ಮೈದಾನದಲ್ಲಿ ಕುದುರೆಯನ್ನ ಮನೆಯಲ್ಲಿ ಹೆಂಡತಿಯನ್ನು ನಂಬಬಾರದು.”
ಆ ಹೊತ್ತಿಗೆ ಟಿಟಿ ಬಂದ. ಸ್ಟೇಶನ್ನು ಹತ್ತಿರವಾಗುತ್ತಿತ್ತು. ಮುದುಕ ತನ್ನ ಟಿಕೆಟ್ಟು ತೋರಿಸಿದ.
“ಹೆಂಗಸರನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲಾ ಹಾಳಾಗಿಹೋಗುತದೆ.”
“ನೀವು ಸಂಸಾರಸ್ಥ ಗಂಡಸರು, ಕುನಾವಿನೊಗೆ ಹೋದಾಗ ಹೆಂಗಸರ ಜೊತೆ ಮಜಾ ಮಾಡಿದ್ದು ಹೇಳುತ್ತಿದ್ದಿರಲ್ಲಾ?” ಕೇಳದೆ ಸುಮ್ಮನಿರಲು ಆಗಲಿಲ್ಲ ನನಗೆ.
ಕಠಿಣವಾದ ದನಿಯಲ್ಲಿ “ಅದು ಬೇರೆಯದೇ ವಿಷಯ” ಅನ್ನುತ್ತಾ, ಮೈಮೇಲೆ ಗೌನು ಎಳೆದುಕೊಳ್ಳುತ್ತಾ, ಸೀಟಿನ ಕೆಳಗೆ ಇಟ್ಟಿದ್ದ ಚೀಲ ತೆಗೆದುಕೊಂಡು, ಕ್ಯಾಪು ತೆಗೆದು “ಹೋಗಿ ಬರ್ತೇನೆ” ಎಂದೆನ್ನುತ್ತಾ ಇಳಿದು ಹೋಗಿಬಿಟ್ಟ.
(ಮುಂದುವರೆಯುವುದು)
ಮುದುಕ ಆ ಕಡೆ ಹೋಗುತ್ತಿದ್ದ ಹಾಗೆಯೇ ಇಲ್ಲಿ ಒಟ್ಟಿಗೆ ಬೇರೆ ಬೇರೆ ಥರದ ಮಾತು ಹುಟ್ಟಿದವು.
“ಹಳೇ ಜಮಾನಾದ ಮುದುಕ!” ಎಂದ ಕ್ಲಾರ್ಕು.
“ಇವಾನ್ ದಿ ಟೆರಿಬಲ್ ಕಾಲದ ಮದುವೆ ನಿಯಮಗಳನ್ನೇ ಫಾಲೊ ಮಾಡಬೇಕು ಅನ್ನುವವನು ಇವನು. ಹೆಂಗಸರ ಬಗ್ಗೆ, ಮದುವೆಯ ಬಗ್ಗೆ ಎಂಥ ಹಾರಿಬಲ್ ಒಪಿನಿಯನ್ನು!” ಎಂದಳು ಹೆಂಗಸು.
“ಹೌದು. ಯೂರೋಪಿನಲ್ಲಿರುವಂಥ ಮದುವೆಯ ಐಡಿಯಾಗಳು ನಮ್ಮಲ್ಲಿ ಬರುವುದಕ್ಕೆ ಇನ್ನೂ ಬಹಳ ಕಾಲ ಬೇಕು” ಎಂದ ಲಾಯರು.
“ಇಂಥಾ ಜನಕ್ಕೆ ಅರ್ಥವಾಗುವುದೇ ಇಲ್ಲ. ಪ್ರೀತಿ ಇಲ್ಲದ ಮದುವೆ ಮದುವೆನೇ ಅಲ್ಲ. ಪ್ರೀತಿ ಇದ್ದರಷ್ಟೆ ಮದುವೆಗೆ ಪಾವಿತ್ರ್ಯ” ಎಂದಳು ಹೆಂಗಸು.
ಮುಂದೆ ಕೆಲಸಕ್ಕೆ ಬಂದೀತೆಂದು ತಾನು ಕೇಳಿದ ಜಾಣ ಮಾತುಗಳನ್ನೆಲ್ಲ ನೆನಪಿಟ್ಟುಕೊಳ್ಳುವವನ ಹಾಗೆ ಅವಳ ಮಾತು ಕೇಳುತ್ತ ಕ್ಲಾರ್ಕು ಮುಗುಳ್ನಕ್ಕ.
ಆ ಹೆಂಗಸಿನ ಮಾತಿನ ನಡುವೆ ನನ್ನ ಬೆನ್ನ ಹಿಂದೆ ಯಾರೋ ಕಷ್ಟಪಟ್ಟು ಬಿಕ್ಕಳಿಕೆ ತಡೆದುಕೊಂಡ ಹಾಗೆ ಅಥವಾ ನಗು ತಡೆದುಕೊಂಡ ಹಾಗೆ ಶಬ್ದ ಕೇಳಿಸಿತು. ತಿರುಗಿ ನೋಡಿದೆ. ಅವನೇ, ಹೊಳಪು ಕಣ್ಣಿನ, ನೆರೆಗೂದಲ ಒಂಟಿ ಪ್ರಯಾಣಿಕ. ಮಾತಿನಲ್ಲಿ ಮೈಮರೆತ ನಮಗೆ ಗೊತ್ತೇ ಆಗದಂತೆ ಹತ್ತಿರಕ್ಕೆ ಸರಿದಿದ್ದ. ನಮ್ಮ ಮಾತಿನಲ್ಲಿ ಅವನಿಗೆ ಆಸಕ್ತಿ ಹುಟ್ಟಿತ್ತು. ಕೇಳಿದ: “ಅದೇನದು, ಪ್ರೀತಿ ಮತ್ತೆ ಪಾವಿತ್ರ್ಯದ ಮಾತು?”
ಸೀಟಿನ ಮೇಲೆ ಕೈಯೂರಿ ನಿಂತಿದ್ದ. ಮನಸ್ಸಿನಲ್ಲಿ ಗೊಂದಲವಿತ್ತು. ಮುಖ ಕೆಂಪಾಗಿತ್ತು. ಹಣೆಯ ನರವೊಂದು ಉಬ್ಬಿತ್ತು. ಕೆನ್ನೆಗಳು ಅದುರುತ್ತಿದ್ದವು.
“ಮದುವೆಗೆ ಪಾವಿತ್ರ್ಯ ತಂದುಕೊಡುವ ಪ್ರೀತಿ, ಯಾವುದದು?” ತಡವರಿಸುತ್ತಾ ಕೇಳಿದ.
ಅವನ ಸ್ಥಿತಿಯನ್ನು ಗಮನಿಸಿದ ಹೆಂಗಸು ಮೃದುವಾಗಿ, ಆದರೆ ಗಂಭೀರವಾಗಿ “ಯಾವ ಪ್ರೀತಿ? ಮತ್ತೆ ಇನ್ಯಾವುದು? ಗಂಡ ಹೆಂಡತಿಯರ ನಡುವೆ ಇರುವ ನಿಜವಾದ ಪ್ರೀತಿ” ಅಂದಳು.
“ನಿಜವಾದ ಪ್ರೀತಿಯನ್ನ ಹೇಗೆ ಅರ್ಥಮಾಡಿಕೊಳ್ಳುವುದು?” ಅವನ ಕಣ್ಣು ಹೊಳೆಯುತ್ತಿದ್ದವು. ತಪ್ತನಾಗಿದ್ದ. ಸಣ್ಣ ದನಿಯಲ್ಲಿ ಮಾತಾಡುತ್ತಿದ್ದ. ಮುಖದ ಮೇಲೆ ವಿಚಿತ್ರವಾದ ನಗುವಿತ್ತು.
“ಹೇಗೆ ಅಂದರೆ...ನಿಜವಾದ ಪ್ರೀತಿ ಏನೆಂದು ಎಲ್ಲರಿಗೂ ಗೊತ್ತು” ಎಂದಳು. ಅವನೊಡನೆ ಮಾತು ನಿಲ್ಲಿಸಬೇಕು ಅನ್ನಿಸಿದಹಾಗಿತ್ತು ಅವಳಿಗೆ.
“ನನಗೆ ಗೊತ್ತಿಲ್ಲ. ಪ್ರೀತಿ ಅಂದರೆ ನೀವು ಹೇಗೆ ವಿವರಿಸುತ್ತೀರೋ ಹೇಳಿ.”
“ಹೇಗೆ? ತುಂಬ ಸುಲಭ, ಸಿಂಪಲ್ಲು” ಎಂದಳು. ಮಾತು ನಿಲ್ಲಿಸಿದಳು. ಯೋಚನೆಮಾಡಿದಳು. ಆಮೇಲೆ “ಪ್ರೀತಿ...ಪ್ರೀತಿ...ಮಿಕ್ಕ ಎಲ್ಲರನ್ನೂ ಬಿಟ್ಟು ಈ ಒಬ್ಬ ಗಂಡಸು, ಈ ಒಬ್ಬ ಹೆಂಗಸು ಬೇಕು ಅನ್ನುವ ಅಪೇಕ್ಷೆ, ಆಸೆ...”
“ಹಾಗೆ ಬೇಕು ಅನ್ನುವುದು ಎಷ್ಟು ಕಾಲ?...ಒಂದು ತಿಂಗಳು, ಎರಡು ದಿನ, ಅಥವಾ ಅರ್ಧ ಗಂಟೆ?” ಅವನು ನಗುತ್ತಿದ್ದರೂ ರೇಗಿದ ಹಾಗಿತ್ತು.
“ಇಲ್ಲಾ, ನೀವು ಅಂದುಕೊಂಡಿರುವುದೇ ಬೇರೆ, ನಾನು ಹೇಳುತ್ತಿರುವುದೇ ಬೇರೆ.”
“ಇಲ್ಲ. ನಾನೂ ಅದೇ ಹೇಳುತ್ತಿದ್ದೇನೆ.”
“ಇವರು ಹೇಳುವುದೇನೆಂದರೆ” ಹೆಂಗಸಿನ ಕಡೆಗೆ ಕೈತೋರುತ್ತಾ ಲಾಯರು ಹೇಳಿದ, “ಮೊದಲು ಅಟ್ಯಾಚ್‌ಮೆಂಟು ಇರಬೇಕು, ಅಥವಾ ಪ್ರೀತಿ ಇರಬೇಕು ಅನ್ನಿ. ಪ್ರೀತಿ ಇದ್ದರೆ, ಪ್ರೀತಿ ಇದ್ದಾಗ ಮಾತ್ರವೇ, ಮದುವೆ ಅನ್ನುವುದು ಪವಿತ್ರ ಬಂಧನವಾಗಿರುತ್ತದೆ. ನಿಜವಾದ ಪ್ರೀತಿ ಇಲ್ಲದೆ ಆದ ಮದುವೆಗಳು ನೈತಿಕವಾದ ಮದುವೆಗಳಲ್ಲ. ಇದು ನಿಮ್ಮ ಅಭಿಪ್ರಾಯ ಅಲ್ಲವೇ?” ಎಂದು ಆಕೆಯನ್ನು ಕೇಳಿದ.
ಹೆಂಗಸು ತಲೆದೂಗುತ್ತಾ ತನ್ನ ಆಲೋಚನೆಗಳನ್ನು ಲಾಯರು ಹೇಳಿದ ರೀತಿಗೆ ಒಪ್ಪಿಗೆ ತೋರಿದಳು.
“ಆದ್ದರಿಂದ..” ಲಾಯರು ಮಾತು ಮುಂದುವರೆಸಿದ. ನೆರೆಗೂದಲ ಪ್ರಯಾಣಿಕ ನಡುವೆಯೇ ಅವನ ಮಾತು ಕತ್ತರಿಸಿದ. ಅವನ ಕಣ್ಣು ಕೆಂಡದ ಉಂಡೆಗಳಾಗಿದ್ದವು. ಸಂಭಾಳಿಸಿಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದ.
“ನಾನೂ ಹೇಳುತ್ತಿರುವುದೂ ಅದೇ. ಬೇರೆ ಎಲ್ಲರನ್ನೂ ಬಿಟ್ಟು ಈ ಗಂಡಸು ಅಥವಾ ಈ ಹೆಂಗಸು ಮಾತ್ರ ಬೇಕು ಅನ್ನುವ ಆಸೆ, ಅಪೇಕ್ಷೆ. ಅದು ಎಷ್ಟು ಕಾಲ ಇರುತ್ತದೆ?”
“ಎಷ್ಟು ಕಾಲವೆಂದರೆ? ದೀರ್ಘಕಾಲ, ಜೀವಮಾನ ಪರ್ಯಂತ ಇರುತ್ತದೆ.” ಹೆಂಗಸು ಭುಜ ಹಾರಿಸುತ್ತಾ ಹೇಳಿದಳು.
“ಅದೆಲ್ಲ ಏನಿದ್ದರೂ ಕಾದಂಬರಿಗಳಲ್ಲಿ. ಜೀವನದಲ್ಲಿ ಯಾವತ್ತೂ ಇಲ್ಲ. ಬೇರೆ ಎಲ್ಲರನ್ನೂ ಬಿಟ್ಟು ಈ ವ್ಯಕ್ತಿ ಮಾತ್ರ ಬೇಕು ಅನ್ನುವ ಅಪೇಕ್ಷೆ ಬದುಕಿನಲ್ಲಿ ತೀರ ಅಪರೂಪಕ್ಕೆ ಕೆಲವು ವರ್ಷ ಇರಬಹುದು, ಸಾಮಾನ್ಯವಾಗಿ ಕೆಲವು ತಿಂಗಳು, ಅಥವಾ ವಾರ, ದಿನ, ಕೆಲವು ಗಂಟೆಗಳು ಮಾತ್ರ ಇದ್ದೀತು...” ಅವನ ಮಾತಿನಿಂದ ನಮಗೆಲ್ಲ ಶಾಕ್ ಆಯಿತು. ಅದು ಅವನಿಗೂ ಗೊತ್ತಾಯಿತು. ಅದರಿಂದ ಸಂತೋಷವೂ ಆದಹಾಗಿತ್ತು.
“ಸಾರ್”, “ಅಲ್ಲಾ..” “ಇಲ್ಲಿ ನೋಡಿ”--ನಾವು ಮೂವರೂ ಒಟ್ಟಿಗೆ ಮಾತಾಡಿದೆವು. ಕ್ಲಾರ್ಕು ಜೋರಾಗಿ ತಲೆ ಆಡಿಸುತ್ತಾ ನೋ ಅಂದ. “ನನಗೆ ಗೊತ್ತು,” ಆತ ನಮ್ಮೆಲ್ಲರಿಗಿಂತ ಗಟ್ಟಿಯಾಗಿ ಹೇಳಿದ, “ನನಗೆ ಗೊತ್ತು, ಪ್ರೀತಿ ಹೇಗಿರಬೇಕು ಅಂತ ಅಂದುಕೊಂಡಿದ್ದೀರೋ ಅದರ ಬಗ್ಗೆ ಹೇಳುತ್ತಿದ್ದೀರಿ ನೀವು. ಪ್ರೀತಿ ಅನ್ನುವುದು ನಿಜವಾಗಿ ಹೇಗಿದೆ ಅನ್ನುವುದನ್ನ ಹೇಳುತ್ತಿದ್ದೇನೆ ನಾನು. ನೀವು ಪ್ರೀತಿ ಅನ್ನುತ್ತೀರಲ್ಲ ಅದು ಕಣ್ಣಿಗೆ ಕಂಡ ಪ್ರತಿ ಸುಂದರ ಹೆಂಗಸಿನ ಬಗೆಗೂ ಗಂಡಸಿನ ಮನಸ್ಸಿನಲ್ಲಿ ಹುಟ್ಟುತ್ತದೆ. ಆದರೆ ಹೆಂಡತಿಯ ಬಗ್ಗೆ ಮಾತ್ರ ಹುಟ್ಟುವುದೇ ಇಲ್ಲ. ಅದಕ್ಕೇ ‘ಬೇರೆಯವರ ಹೆಂಡತಿ ಹಂಸ, ನನ್ನ ಹೆಂಡತಿ ಕಾಗೆ’ ಅನ್ನುವ ಗಾದೆ ಹುಟ್ಟಿದ್ದು.”
“ಹಾರಿಬಲ್! ಪ್ರೀತಿ ಎಂದು ಕರೆಯುವ ಫೀಲಿಂಗು ಮನುಷ್ಯರಲ್ಲಿ ಇದ್ದೇ ಇರುತ್ತದೆ. ಅದು ಕೇವಲ ತಿಂಗಳು, ವರ್ಷ ಅಲ್ಲ, ಜೀವನ ಪರ್ಯಂತ ಇದ್ದೇ ಇರುತ್ತದೆ.”
“ಇಲ್ಲ. ಇರುವುದಿಲ್ಲ. ಮೆನುಲಾಸನು ಜೀವನ ಪರ್ಯಂತ ಹೆಲನಳನ್ನು ಇಷ್ಟಪಟ್ಟ ಎಂದು ಒಪ್ಪಿಕೊಂಡರೂ ಹೆಲನಳಿಗೆ ಜೀವನ ಪರ್ಯಂತ ಪ್ಯಾರಿಸ್ ಇಷ್ಟವಿದ್ದಿರಬಹುದು. ಇದ್ದದ್ದೂ ಹಾಗೇ, ಯಾವಾಗಲೂ ಇರುವುದೂ ಹಾಗೇ. ಬೇರೆ ಥರ ಇರಲು ಸಾಧ್ಯವೇ ಇಲ್ಲ”. ಅವನು ಸಿಗರೇಟು ಹಚ್ಚಿಕೊಂಡ.
“ಆದರೆ ಪರಸ್ಪರ ಫೀಲಿಂಗು ಇರುತ್ತದೆ” ಎಂದ ಲಾಯರು.
“ಇಲ್ಲ. ಒಂದು ರಾಶಿ ಬಟಾಣಿ ಕಾಳಿನಲ್ಲಿ ಸ್ಪೆಶಲ್ಲಾಗಿರುವ ಎರಡು ಬಟಾಣಿಗಳು ಮಾತ್ರ ಪಕ್ಕ ಪಕ್ಕ ಬಿದ್ದು ಜೊತೆಯಾಗಿರುತ್ತವೆ ಅನ್ನುವುದು ಅಸಾಧ್ಯ. ಅಸಾಧ್ಯ ಅಷ್ಟೇ ಅಲ್ಲ. ಆಸೆ ತೃಪ್ತಿಯಾದಮೇಲೆ ಆಗುವ ಬೇಜಾರಿನ ಹಾಗೇನೆ ಅನಿವಾರ್ಯ. ಒಬ್ಬರಿಗೆ ಬೇಗ ಹಾಗನ್ನಿಸಬಹುದು, ಇನ್ನೊಬ್ಬರಿಗೆ ಲೇಟಾಗಿ ಅನಿಸಬಹುದು. ಮೂರ್ಖ ಕಾದಂಬರಿಗಳು ಮಾತ್ರ ‘ಅವರು ಜೀವಮಾನ ಪರ್ಯಂತ ಪ್ರೀತಿಸುತ್ತಾ ಸುಖವಾಗಿದ್ದರು’ ಅನ್ನುತ್ತವೆ. ಏನೂ ಗೊತ್ತಿಲ್ಲದ ಮಕ್ಕಳು ಮಾತ್ರ ಅದನ್ನು ನಂಬುತ್ತಾರೆ. ಗಂಡಸೇ ಆಗಲಿ, ಹೆಂಗಸೇ ಆಗಲಿ ಜೀವಮಾನ ಪರ್ಯಂತ ಪ್ರೀತಿಸುತ್ತಾರೆ ಅನ್ನುವುದೂ ಒಂದೇ ಇವತ್ತು ಹಚ್ಚಿಟ್ಟಿರುವ ಮೋಂಬತ್ತಿ ಯಾವಾಗಲೂ ಉರಿಯುತ್ತಲೇ ಇರುತ್ತದೆ ಅನ್ನುವುದೂ ಒಂದೇ”. ಅವನು ಜೋರಾಗಿ ಸಿಗರೇಟಿನ ಹೊಗೆಯನ್ನು ಎಳೆದುಕೊಳ್ಳುತ್ತಿದ್ದ.
“ನೀವು ದೈಹಿಕವಾದ ಪ್ರೀತಿಯ ಬಗ್ಗೆ ಹೇಳುತ್ತಿದ್ದೀರಿ. ಆದರ್ಶಗಳನ್ನು ಆಧಾರವಾಗಿಟ್ಟುಕೊಂಡ ಪ್ರೀತಿ, ಆಧ್ಯಾತ್ಮಿಕ ಪ್ರೀತಿ, ಆತ್ಮ ಸಂಗಾತ ಅನ್ನುವುದು ಇರಬಹುದು. ಅಲ್ಲವೇ?”
“ಆದರ್ಶ! ಆತ್ಮ ಸಂಗಾತ! ಆಧ್ಯಾತ್ಮಿಕ ಪ್ರೀತಿ!” ವಿಚಿತ್ರವಾಗಿ ಸದ್ದುಮಾಡುತ್ತ ಮಾತನಾಡಿದ. “ಹಾಗಿದ್ದರೆ ಮದುವೆಯಾಗಿ ಮಕ್ಕಳನ್ನು ಹೆರುವುದೇಕೆ? ಸಾರಿ. ಮಾತು ಒರಟಾಯಿತೋ ಏನೋ. ಆಧ್ಯಾತ್ಮಿಕ ಆದರ್ಶಕ್ಕಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರಾ? ಈ ಆದರ್ಶಗಳ ಸಾಮರಸ್ಯದ ಮಾತು ಸುಂದರವಾದ ಯುವಕ ಯುವತಿಯರು ಆಡುತ್ತಾರೆ ಅಷ್ಟೇ. ವಯಸ್ಸಾದವರಲ್ಲ” ಅನ್ನುತ್ತಾ, ನಮ್ಮ ಮಾತು ಒಪ್ಪದೆ, ನರ್ವಸ್ ಆಗಿ ನಗತೊಡಗಿದ. “ನಿಜ. ಪ್ರೀತಿ, ನಿಜವಾದ ಪ್ರೀತಿಯಿಂದ, ನಾವಂದುಕೊಂಡಂತೆ ಮದುವೆ ಸಕ್ಸಸ್ ಆಗುವುದಿಲ್ಲ, ಹಾಳಾಗುತ್ತದೆ.”
“ಆದರೆ, ಸ್ವಾಮೀ, ವಾಸ್ತವ ಸಂಗತಿಗಳು ನಿಮ್ಮ ವಾದಕ್ಕೆ ವಿರುದ್ಧವಾಗಿವೆ. ಮದುವೆಗಳು ಆಗುತ್ತಲೇ ಇವೆ. ಮನುಷ್ಯ ಕುಲ, ಅಥವ ಮನುಷ್ಯರಲ್ಲಿ ಹೆಚ್ಚಿನವರು ಒಟ್ಟಾಗಿ ಬದುಕುತ್ತಲೇ ಇದ್ದಾರೆ, ಎಷ್ಟೋ ಗಂಡ ಹೆಂಡಿರು ಕೊನೆಯವರೆಗೂ ಪ್ರಾಮಾಣಿಕವಾಗಿ, ಗೌರವದಿಂದ ಒಟ್ಟಿಗೆ ಬದುಕುತ್ತಾರೆ” ಎಂದ ಲಾಯರು.
ನೆರೆಗೂದಲ ಮನುಷ್ಯ ಒಂದು ಥರಾ ನಕ್ಕ.
“ಅಲ್ಲಾ! ಮೊದಲು ನೀವು ಪ್ರೀತಿಯೇ ಮದುವೆಗೆ ಆಧಾರ ಅಂದಿರಿ. ದೇಹದ ಪ್ರೀತಿ ಬಿಟ್ಟರೆ ಬೇರೇನೂ ಇರಲಾರದೋ ಏನೋ ಎಂದು ನಾನು ಅನುಮಾನ ಪಟ್ಟಾಗ ಮದುವೆಯ ಆಧಾರದಿಂದ ಪ್ರೀತಿ ಅನ್ನುವುದು ಇದೆ ಎಂದು ಹೇಳುತ್ತಿದ್ದೀರಿ. ಆದರೆ, ನಮ್ಮ ಕಾಲದಲ್ಲಂತೂ ಮದುವೆಯೆಂದರೆ ಬರೀ ಹಿಂಸ, ಬರೀ ಮೋಸ.”
“ಸಾರಿ. ಅಲ್ಲ. ನಾನು ಹೇಳಿದ್ದು ಮದುವೆಗಳು ಇದ್ದವು, ಇದ್ದೇ ಇರುತ್ತವೆ ಅಂತ” ಎಂದ ಲಾಯರು.
“ನಿಜ, ಇವೆ. ಯಾಕೆ ಇವೆ ಹೇಳಿ? ಯಾಕೆ ಅಂದರೆ ಜನ ಮದುವೆ ಅಂದರೆ ಪವಿತ್ರ ಎಂದು ತಿಳಿದಿದ್ದಾರೆ. ಮದುವೆ ಅಂದರೆ ದೇವರ ಸಾಕ್ಷಿಯಾಗಿ ನಡೆಯುವ ಪವಿತ್ರ ಕಾರ್ಯ ಅಂದುಕೊಂಡಿದ್ದಾರೆ. ಅಂಥವರ ಪಾಲಿಗೆ ಮದುವೆಗಳು ಇರುತ್ತವೆ. ಆದರೆ ಸಮಾಜದಲ್ಲಿ ನಮ್ಮ ವರ್ಗದರಿಗೆ, ಮದುವೆ ಅಂದರೆ ಬರೀ ಸಂಭೋಗ. ಆದ್ದರಿಂದಲೇ ಮದುವೆಯೆಂದರೆ ಬರೀ ಮೋಸ ಅಥವಾ ಬರೀ ಹಿಂಸೆ. ಮೋಸವಾಗಿದ್ದರೆ ಎಷ್ಟೋ ಪರವಾಗಿಲ್ಲ. ಗಂಡ ಹೆಂಡತಿಯರು ನಾವು ಸಾಚಾ ಅಂತ ಹೇಳಿಕೊಂಡು ಹಲವು ಸಂಬಂಧ ಇಟ್ಟುಕೊಳ್ಳಬಹುದು. ತಪ್ಪು, ಆದರೂ ವಾಸಿ. ಆದರೆ ಸಾಮಾನ್ಯವಾಗಿ ಏನಾಗುತ್ತದೆ ನೋಡಿ. ಸಾಯುವವರೆಗೂ ಒಟ್ಟಿಗೆ ಇರುವ ಪ್ರತಿಜ್ಞೆ ಮಾಡಿದ ಗಂಡ ಹೆಂಡಿರು ಒಂದು ತಿಂಗಳಾಗುವಷ್ಟರಲ್ಲಿ ಒಬ್ಬರನ್ನ ಒಬ್ಬರು ದ್ವೇಷ ಮಾಡಲು ಶುರುಮಾಡುತ್ತಾರೆ, ಆದರೂ ಒಟ್ಟಿಗೆ ಇರುತ್ತಾರೆ, ಬಲವಂತವಾಗಿ. ಬದುಕು ನರಕ ಆಗುತ್ತದೆ. ಮೈಮರೆಯುವಷ್ಟು ಕುಡಿಯಬೇಕು ಅನಿಸುತ್ತದೆ, ಕೊಲ್ಲುವ ಅಸೆ ಹುಟ್ಟುತ್ತದೆ, ಶೂಟ್‌ಮಾಡಬೇಕು ಅಥವಾ ನಾನೇ ಶೂಟ್ ಮಾಡಿಕೋಬೇಕು ಅನಿಸುತ್ತದೆ, ವಿಷ ಹಾಕಬೇಕು ಅಥವಾ ನಾನೇ ವಿಷಕುಡೀಬೇಕು ಅನಿಸುತ್ತದೆ. ಹಾಗಂತಲೇ ಮುಕ್ತ ಪ್ರೀತಿ, ಫ್ರೀ ಲವ್ ಅಂತ ಏನೇನೋ ಉಪದೇಶಮಾಡುತ್ತೇವೆ. ಮುಕ್ತ ಪ್ರೀತಿಯ ಬಗ್ಗೆ ಮಾತನಾಡುವುದು ಅಂದರೆ ಗಂಡು ಹೆಣ್ಣುಗಳಲ್ಲಿ ಲಪಂಟತನವನ್ನು ಬೆಳೆಸುವುದು ಅಷ್ಟೆ. ಮನೆಯ ಹಳೆಯ ತಳಪಾಯವೇ ಕುಸಿದಿದೆ. ಹೊಸದನ್ನು ಕಟ್ಟಿಕೊಳ್ಳಬೇಕಾಗಿದೆ. ಆದರೆ ಹಾಗಂತ ಲಂಪಟತನವನ್ನು ಹೇಳಬಾರದು ನಾವು.” ಅವನು ಕಾವೇರಿದ್ದ. ಯಾರಾದರೂ ಮಾತಾಡಿ ಅಡ್ಡಿ ಮಾಡುತ್ತಾರೋ ಎಂದು ಆತಂಕಗೊಂಡವನಹಾಗೆ ಒಂದೇ ಉಸಿರಿಗೆ ಮಾತಾಡುತ್ತಿದ್ದ. ನಾವೆಲ್ಲ ಸುಮ್ಮನಾಗಿಬಿಟ್ಟೆವು. ಆಶ್ಚರ್ಯದಿಂದ ಅವನನ್ನೇ ನೋಡುತ್ತಿದ್ದೆವು. ವಿಚಿತ್ರವಾದ ಮೌನ ಇತ್ತು.
“ನಿಜ. ಮ್ಯಾರೀಡ್ ಲೈಫಿನಲ್ಲಿ ಇಂಥ ಬಿಕ್ಕಟ್ಟಿನ ಗಳಿಗೆಗಳು ಬರುತ್ತವೆ. ಉದಾಹರಣಗೆ ಪಾಸ್‌ಡ್ನಿಶೆವ್ ನ ಕೇಸನ್ನೇ ನೋಡಿ” ಎಂದ ಲಾಯರು. ಉದ್ರೇಕಕಾರಿಯಾದ ವಿಷಯವನ್ನು, ಕಸಿವಿಸಿ ಹುಟ್ಟಿಸುವ ಮಾತನ್ನು ಬದಲಾಯಿಸುವ ಆಸೆ ಅವನಿಗೆ. “ಅವನು ಅಸೂಯೆಯಿಂದ ಹೆಂಡತಿಯನ್ನು ಹೇಗೆ ಕೊಂದ ನೋಡಿ. ಓದಿದ್ದೀರಲ್ಲವೇ?”
ಹೆಂಗಸು ನಾನು ಓದಿಲ್ಲ ಅಂದಳು. ನರ್ವಸ್ ಆಗಿದ್ದ ಮನುಷ್ಯ ಏನೂ ಹೇಳಲಿಲ್ಲ. ಅವನ ಮುಖದ ಬಣ್ಣ ಬದಲಾಯಿಸಿತು.
“ನಾನು ಯಾರು ಎಂದು ನಿಮಗೆ ಗೊತ್ತಾಗಿರಬೇಕು” ತೋರಿಕೆಯ ಸಮಾಧಾನದಲ್ಲಿ, ತೋರಿಕೆಯ ಮೃದು ದನಿಯಲ್ಲಿ ತಟ್ಟನೆ ಹೇಳಿದ ಅವನು.
“ನಿಮ್ಮ ಪರಿಚಯ ಭಾಗ್ಯವಿಲ್ಲ ನನಗೆ” ಎಂದ ಲಾಯರು.
“ನನ್ನ ಪರಿಚಯದಿಂದ ಯಾವ ಭಾಗ್ಯವೂ ಇಲ್ಲ. ನಾನು ಪಾಸ್‌ಡ್ನಿಶೆವ್. ನೀವು ಹೇಳಿದಂಥ ಬಿಕ್ಕಟ್ಟು ನನ್ನ ಲೈಫಿನಲ್ಲೂ ಬಂತು. ನನ್ನ ಹೆಂಡತಿಯನ್ನು ಕೊಂದುಬಿಟ್ಟೆ” ಅನ್ನುತ್ತಾ ನಮ್ಮೆಲ್ಲರನ್ನೂ ನೋಡಿದ.
ಏನು ಹೇಳಬೇಕೆಂದು ತಿಳಿಯದೆ ಎಲ್ಲರೂ ಸುಮ್ಮನಿದ್ದೆವು.
ಅವನ ಮುಖ ಕೆಂಪಾಯಿತು. ಮತ್ತೆ ಬೆಳ್ಳಗಾಯಿತು.
“ನಾನು ಯಾರಾದರೇನು? ಎಕ್ಸ್‌ಕ್ಯೂಸ್ ಮಿ. ನಿಮಗೆ ಡಿಸ್ಟರ್ಬ್ ಮಾಡಲು ಇಷ್ಟವಿಲ್ಲ.:
“ಇಲ್ಲ, ಹಾಗೇನಿಲ್ಲ. ಏನೆಂದರೆ...” ಲಾಯರು ಹೇಳಿದ. ‘ಆದರೆ ಏನೆಂದರೆ’ ಎಂಬುದು ಏನೆಂದು ಅವನಿಗೂ ತಿಳಿಯದೆ ಸುಮ್ಮನಾಗಿಬಿಟ್ಟ.
ಪಾಸ್‌ಡ್ನಿಶೆವ್ ಅವನ ಮಾತು ಕೇಳಿಸಿಕೊಳ್ಳದೆ ತಟ್ಟನೆ ತಿರುಗಿ ತನ್ನ ಮೊದಲಿನ ಜಾಗಕ್ಕೆ ಹೋಗಿ ಕುಳಿತುಬಿಟ್ಟ. ಲಾಯರು ಮತ್ತು ಹೆಂಗಸು ಏನೋ ಪಿಸುಮಾತಾಡಿಕೊಂಡರು. ನಾನು ಪಾಸ್‌ಡ್ನಿಶೆವ್ ನ ಪಕ್ಕದಲ್ಲಿ ಮಾತಾಡದೆ ಕೂತುಕೊಂಡೆ. ಏನು ಹೇಳಬೇಕೆಂದು ಹೊಳೆಯಲಿಲ್ಲ. ಏನಾದರೂ ಓದೋಣವೆಂದರೆ ಬೆಳಕು ಕಡಮೆ ಇತ್ತು. ಕಣ್ಣು ಮುಚ್ಚಿಕೊಂಡು ನಿದ್ದೆ ಬಂದವನಹಾಗೆ ಸುಮ್ಮನಿದ್ದುಬಿಟ್ಟೆ. ಮುಂದಿನ ಸ್ಟೇಷನ್ನಿನವರೆಗೂ ಹೀಗೆಯೇ ಇದ್ದೆವು.
ಸ್ಟೇಷನ್ನು ಬಂದಾಗ ಲಾಯರು ಮತ್ತು ಹೆಂಗಸು ಟಿಟಿಯೊಡನೆ ಮಾತಾಡಿ ಬೇರೆ ಬೋಗಿಗೆ ಹೋದರು. ಕ್ಲಾರ್ಕು ಉದ್ದಕ್ಕೆ ಮೈಚಾಚಿ ಮಲಗಿಬಿಟ್ಟ. ಪಾಸ್‌ಡ್ನಿಶೆವ್ ಒಂದಾದಮೇಲೆ ಒಂದು ಸಿಗರೇಟು ಸೇದುತ್ತಾ, ಹಿಂದಿನ ಸ್ಟೇಷನ್ನಿನಲ್ಲಿ ಮಾಡಿಕೊಂಡಿದ್ದ ಟೀ ಕುಡಿಯುತ್ತಾ ಕೂತಿದ್ದ.
ನಾನು ಕಣ್ಣು ತೆರೆದು ಅವನತ್ತ ನೋಡಿದಾಗ ರೇಗಿಕೊಂಡ ದನಿಯಲ್ಲಿ, “ನಾನು ಯಾರು ಎಂದು ಗೊತ್ತಾದಮೇಲೆ ನನ್ನ ಜೊತೆ ಕೂತಿರುವುದಕ್ಕೆ ನಿಮಗೆ ಕಷ್ಟವಾಗಬಹುದು. ಹಾಗಿದ್ದರೆ ಬೇರೆ ಕಡೆಗೆ ಹೋಗುತ್ತೇನೆ” ಎಂದ.
“ಇಲ್ಲ, ಇಲ್ಲ. ಹಾಗೇನೂ ಇಲ್ಲ” ಎಂದೆ.
“ಹಾಗಿದ್ದರೆ ಸ್ವಲ್ಪ ಟೀ ಕೊಡಲೇ? ತುಂಬಾ ಸ್ಟ್ರಾಂಗಾಗಿದೆ.”
ಲೋಟಕ್ಕೆ ಟೀ ಬಗ್ಗಿಸಿ ಕೊಟ್ಟ.
ಅವನು ಮುಂದೆ ಬಗ್ಗಿ, ಮೊಳಕಾಲುಗಳ ಮೇಲೆ ಮೊಳಕೈ ಇಟ್ಟುಕೊಂಡು, ತಲೆಯನ್ನು ಎರಡೂ ಕೈಗಳಲ್ಲಿ ಒತ್ತಿಕೊಂಡ.
“ಮಾತು, ಮಾತು. ಬರೀ ಮಾತು. ಎಲ್ಲಾ ಸುಳ್ಳು...” ಎಂದ.
“ಯಾವ ವಿಚಾರಕ್ಕೆ ಹೇಳುತ್ತಿದ್ದೀರಿ?” ಎಂದೆ.
“ಪ್ರೀತಿಯ ಬಗ್ಗೆ ಏನೇನೋ ಹೇಳುತ್ತಿದ್ದರಲ್ಲಾ, ಅದೇ ವಿಚಾರ! ಪ್ರೀತಿ, ಮದುವೆ, ಫ್ಯಾಮಿಲಿ-ಎಲ್ಲಾ ಸುಳ್ಳು, ಸುಳ್ಳು, ಸುಳ್ಳು.” ಸ್ವಲ್ಪ ಹೊತ್ತು ಸುಮ್ಮನಿದ್ದು “ನಿದ್ರೆ ಬರುತ್ತಿಲ್ಲವೇ?” ಅಂದ.
“ಇಲ್ಲ.”
“ಹಾಗಿದ್ದರೆ ಪ್ರೀತಿಯ ಕಾರಣದಿಂದಲೇ ಹೇಗೆ ಇಂಥ ಕೆಲಸ ಮಾಡಿದೆ ಹೇಳಲೆ? ಕೇಳುತ್ತೀರಾ?”
“ನಿಮ್ಮ ಮನಸ್ಸಿಗೆ ನೋವಾಗುತ್ತದೇನೋ?”
“ಇಲ್ಲ. ಮಾತಾಡದೆ ಸುಮ್ಮನಿದ್ದರೆ ನೋವಾಗುತ್ತದೆ. ಟೀ ಕುಡಿಯಿರಿ. ತುಂಬಾ ಸ್ಟ್ರಾಂಗಾಗಿದೆಯಾ?”
ಬಿಯರ್‌ನಷ್ಟು ಕಹಿಯಾಗಿತ್ತು ಟೀ. ಆದರೂ ಒಂದು ಲೋಟ ಪೂರ್ತಿ ಕುಡಿದೆ. ಆಗ ಟಿಟಿ ನಮ್ಮ ಪಕ್ಕದಲ್ಲಿ ಹಾದು ಹೋದ. ಅವನು ಮಾತು ನಿಲ್ಲಿಸಿದ. ಟಿಟಿ ಹೋದ ದಿಕ್ಕಿನಲ್ಲೇ ಕೆಕ್ಕರಿಸಿಕೊಂಡು ನೋಡುತ್ತಿದ್ದ. ಟಿಟಿ ವಾಪಸ್ಸು ಬಂದು ನಮ್ಮನ್ನು ದಾಟಿ ಹೋಗುವವರೆಗೂ ಸುಮ್ಮನೆ ನೋಡುತ್ತಲೇ ಇದ್ದ. ಆಮೇಲೆ ಒಮ್ಮೆ ಶುರುಮಾಡಿದವನು ಕಥೆ ಮುಗಿಯುವವರೆಗೆ ಎಲ್ಲೂ ಮಾತು ನಿಲ್ಲಿಸಲಿಲ್ಲ. ಹೊಸ ಪ್ರಯಾಣಿಕರು ಬಂದರೂ ಅದು ಅವನ ಮಾತಿಗೆ ಅಡ್ಡಿಯಾಗಲಿಲ್ಲ.
ಕಥೆ ಹೇಳುತ್ತ ಹೇಳುತ್ತ ಅವನ ಮುಖ ಅದೆಷ್ಟೋ ಬಾರಿ ಪೂರಾ ಎಂದರೆ ಪೂರಾ ಬದಲಾಯಿತು, ಮೊದಲು ಕಂಡದ್ದಕ್ಕೂ ಈಗ ಕಾಣುತ್ತಿರುವುದಕ್ಕೂ ಸಂಬಂಧವೇ ಇಲ್ಲವೇನೋ ಅನ್ನುವಹಾಗೆ. ಅವನ ಕಣ್ಣು, ಬಾಯಿ, ಮೀಸೆ, ಗಡ್ಡ ಕೂಡ ಹೊಸದಾದಹಾಗೆ ಅನ್ನಿಸುತ್ತಿತ್ತು. ಅದೆಲ್ಲ ಛಾಯಾಮಾತ್ರವೆಂಬಂತೆ, ಐದು ನಿಮಿಷಗಳ ಕಾಲ ನನಗೆ ಕಂಡ ಮುಖ ಐದು ನಿಮಿಷದ ಹಿಂದೆ ನಾನು ಕಂಡ ಮುಖವೇ ಅಲ್ಲ ಅನಿಸಿಬಿಡುತ್ತಿತ್ತು. ಹೇಗಾಗುತ್ತಿತ್ತೊ ಏನೋ ಮತ್ತೆ ಬದಲಾಗುತ್ತಿತ್ತು. ಗುರುತೇ ಸಿಕ್ಕುತ್ತಿರಲಿಲ್ಲ.
(ಮುಂದುವರೆಯುವುದು)
“ಹೇಳುತ್ತೇನೆ. ನಿಜವಾಗಿಯೂ ಕೇಳುತ್ತೀರಾ?”
“ಖಂಡಿತ” ಅಂದೆ.
ಸ್ವಲ್ಪಹೊತ್ತು ಸುಮ್ಮನಿದ್ದ. ಮುಖ ಉಜ್ಜಿಕೊಂಡ. ಶುರುಮಾಡಿದ.
“ಸರಿಯಾಗಿ ಹೇಳಬೇಕು ಅಂದರೆ ಮೊದಲಿನಿಂದ ಹೇಳಬೇಕು. ಹೇಗೆ ಮದುವೆಯಾದೆ, ಯಾಕೆ ಮದುವೆಯಾದೆ, ಮದುವೆಗೆ ಮೊದಲು ಹೇಗಿದ್ದೆ ಎಲ್ಲಾ ಹೇಳಬೇಕು.
“ಮದುವೆಗೆ ಮೊದಲು ಎಲ್ಲರ ಹಾಗೇ ಇದ್ದೆ. ನಮ್ಮಂಥ ಶ್ರೀಮಂತವರ್ಗದವರು ಇರುತ್ತಾರಲ್ಲ ಹಾಗೆ. ಉಡಾಳ. ನಮ್ಮದು ಜಮೀನುದಾರೀ ಮನೆ. ಯೂನಿವರ್ಸಿಟಿಯಲ್ಲಿ ಲಾ ಓದಿ ಡಿಗ್ರಿ ತೆಗೆದುಕೊಂಡೆ. ಮಾರ್ಷಲ್ ಆಫ್ ನೊಬಿಲಿಟಿ ಪದವಿ ಇತ್ತು. ಮೂವತ್ತನೆಯ ವಯಸ್ಸಿನಲ್ಲಿ ಮದುವೆಯಾದೆ. ಮದುವೆಗೆ ಮೊದಲು ಮಿಕ್ಕವರ ಹಾಗೇ ಲಂಪಟನಾಗಿದ್ದೆ. ಇರಬೇಕಾದದ್ದೇ ಹಾಗೆ ಅಂದುಕೊಂಡಿದ್ದೆ. ಲಂಪಟನಾಗಿದ್ದುಕೊಂಡು, ನಾನು ತುಂಬಾ ಪರಿಶುದ್ಧ, ತೂಂಬಾ ಆಕರ್ಷಕ, ತುಂಬಾ ನೈತಿಕತೆ ಇರುವವ ಅಂದುಕೊಂಡಿದ್ದೆ. ಜೊತೆಯ ಶ್ರೀಮಂತ ಹುಡುಗರು ತಾವೂ ಕೂಡಾ ಹಾಗೆಯೇ ಅಂದುಕೊಂಡಿದ್ದರು. ತಕ್ಕಮಟ್ಟಿಗೆ ಕಂಟ್ರೋಲ್ ಮಾಡಿಕೊಂಡು ಬ್ಯಾಚಲರ್ ಆಗಿದ್ದೆ. ನನ್ನ ಗೆಳೆಯರೊಂದಿಗೆ ನನ್ನನ್ನು ಹೋಲಿಸಿಕೊಂಡು, ‘ನನ್ನ ವಯಸ್ಸಿನ ಇತರರು ಪೋಲಿಬಿದ್ದು ಕುಲಗೆಟ್ಟುಹೋಗಿದ್ದರೂ ನಾನು ಮಾತ್ರ ಹಾಗಲ್ಲ’ ಎಂದು ನನ್ನ ಬಗ್ಗೆ ನಾನೇ ಹೆಮ್ಮೆಪಡುತ್ತಿದ್ದೆ. ಹೆಣ್ಣುಗಳನ್ನು ಮರುಳು ಮಾಡುತ್ತಿರಲಿಲ್ಲ. ಅಸಹಜವಾದ ಅಭಿರುಚಿಗಳೂ ಇರಲಿಲ್ಲ. ಲಂಪಟತನವೇ ನನ್ನ ಬದುಕಿನ ಪರಮಗುರಿಯೂ ಆಗಿರಲಿಲ್ಲ. ಆದರೆ ಸಮಾಜದ ನಿಯಮಗಳ ಪರಿಮಿತಿಯೊಳಗೆ, ನನ್ನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು, ಲಂಪಟತನವನ್ನು ಎಂಜಾಯ್ ಮಾಡುತ್ತಾ ನಾನು ಅತ್ಯಂತ ನೈತಿಕ ವ್ಯಕ್ತಿ ಎಂದು ಮುಗ್ಧವಾಗಿ ನಂಬಿಕೊಂಡಿದ್ದೆ. ನನ್ನೊಡನೆ ಸಂಬಂಧ ಬೆಳೆಸಿಕೊಂಡ ಹೆಂಗಸರು ನನಗೊಬ್ಬನಿಗೇ ಮೀಸಲಾದವರೂ ಅಲ್ಲ. ಆ ಕ್ಷಣದ ಸುಖವನ್ನು ಬಿಟ್ಟು ಬೇರೆ ಏನನ್ನೂ ನಾನು ಕೋರಲಿಲ್ಲ. ಇದೆಲ್ಲ ಅಸಹಜ ಅಂದು ಕೊಂಡಿರಲಿಲ್ಲ. ಯಾರಿಗೂ ಮನಸ್ಸು ಕೊಡದೆ ಕೇವಲ ದುಡ್ಡು ಮಾತ್ರ ಕೊಡುತ್ತಿದ್ದುದರಿಂದ ನಾನು ಪ್ರಾಮಾಣಿಕನೆಂದೇ ತಿಳಿದಿದ್ದೆ. ನನಗೇ ಅಂಟಿಕೊಳ್ಳಲು ಬಯಸುವ, ಅಥವ ನನ್ನ ಮಗುವನ್ನು ಹೆರುವ ಹೆಂಗಸರನ್ನು ದೂರ ಇಡುತ್ತಿದ್ದೆ. ನನ್ನ ಭವಿಷ್ಯ ಅವರ ಕೈಯಲ್ಲಿ ಸಿಕ್ಕಿ ಬೀಳಬಾರದು ಅಂತ. ಅಥವಾ, ಮಕ್ಕಳೂ ಆಗಿದ್ದ, ನನಗೇ ಅಂಟಿಕೊಳ್ಳಬೇಕು ಅಂತ ಇದ್ದ ಹೆಂಗಸರೂ ಇದ್ದಿರಬಹುದು. ಆದರೆ ನನಗೆ ಅದು ತಿಳಿಯದಂತೆ ಎಚ್ಚರವಹಿಸುತ್ತಿದ್ದೆ.
“ನಮ್ಮ ಕಡೆಯ ಜಮೀನ್ದಾರರೆಲ್ಲ ಲಂಪಟರಾಗಿದ್ದರೂ ನಮ್ಮ ಮನೆಯಲ್ಲಿ ಯಾರೂ ವಿಶೇಷವಾದ ಲಂಪಟರು ಇರಲಿಲ್ಲ. ನಮ್ಮ ಅಪ್ಪ ಅಮ್ಮ ಒಬ್ಬರಿಗೊಬ್ಬರು ಮೋಸ ಮಾಡಿಕೊಂಡವರಲ್ಲ. ಹೀಗಾಗಿ ಮದುವೆಯ ಬಗ್ಗೆ ಚಿಕ್ಕಂದಿನಿಂದಲೂ ನಾನು ಒಂದು ಥರಾ ಕಾವ್ಯಾತ್ಮಕ ಕಲ್ಪನೆ ಬೆಳೆಸಿಕೊಂಡಿದ್ದೆ. ನನ್ನ ಹೆಂಡತಿ ಪರಿಪೂರ್ಣಳಾಗಿರಬೇಕು, ನನ್ನ ಅವಳ ಪ್ರೇಮ ಅನುಪಮವಾಗಿರಬೇಕು, ಅಪೂರ್ವವಾಗಿರಬೇಕು, ನಿಷ್ಕಳಂಕ ಪರಿಶುದ್ಧ ವೈವಾಹಿಕ ಜೀವನ ನಡೆಸಬೇಕು ಎಂದು ಕನಸು ಕಂಡಿದ್ದೆ. ನನ್ನ ಉದಾತ್ತ ಆಲೋಚನೆಗಳ ಬಗ್ಗೆ ನನಗೇ ಆಶ್ಚರ್ಯ ಆಗುತ್ತಿತ್ತು. ಹಾಗೆಯೇ ನಾನು ವಯಸ್ಸಿಗೆ ಬಂದು ಹತ್ತು ವರ್ಷವಾದರೂ ಮದುವೆಗೆ ಆತುರಪಡಲಿಲ್ಲ”. ಕೊಂಚ ಹೊತ್ತು ಸುಮ್ಮನಿದ್ದು ವಿಚಿತ್ರವಾದ ಸದ್ದು ಮಾಡಿದ. ಅವನಿಗೆ ಹೊಸ ಐಡಿಯಾ ಹೊಳೆದಾಗಲೆಲ್ಲ ಹಾಗೆ ಮಾಡುವುದು ಅಭ್ಯಾಸವಾಗಿತ್ತೆಂದು ಕಾಣುತ್ತದೆ.
“ಹೀಗೆ ಬದುಕುತ್ತಾ ನಾನು ಸಂಪೂರ್ಣ ಪ್ರಾಮಾಣಿಕನೆಂದೇ ನಂಬಿಕೊಂಡಿದ್ದೆ. ಲಂಪಟತೆ ಅನ್ನುವುದು ಮೈಗೆ ಮಾತ್ರ ಸಂಬಂಧಿಸಿದ್ದಲ್ಲ; ದೈಹಿಕವಾಗಿ ಎಂಥ ಅಪಮಾನಕರ ಸಂಬಂಧವೂ ಲಂಪಟತನವಲ್ಲ; ಹೆಂಗಸಿನೊಡನೆ ಮೈಯ ಅಂಟು ಇಟ್ಟುಕೊಂಡೂ ಅವಳ ಬಗ್ಗೆ ಯಾವುದೇ ನೈತಿಕ ಬಂಧನ ಇಲ್ಲದಂತೆ ಇರುವುದು ನಿಜವಾದ ಲಂಪಟತನ ಎಂದು ನನಗೆ ತಿಳಿದಿರಲಿಲ್ಲ. ಹಾಗೆ ನೈತಿಕ ಬಂಧನ ಇಲ್ಲದಿರುವುದನ್ನೇ ಸ್ವಾತಂತ್ರ್ಯವೆಂದೂ ಸದ್ಗುಣವೆಂದೂ ಭಾವಿಸಿಕೊಂಡಿದ್ದೆ. ಒಮ್ಮೆ ಒಬ್ಬ ಹೆಂಗಸಿಗೆ, ಅವಳು ನನ್ನನ್ನು ಪ್ರೀತಿಯಿಂದಲೇ ಕೂಡಿದ್ದಳೋ ಏನೋ, ದುಡ್ಡು ಕೊಡುವುದು ಮರೆತುಹೋದೆ ಅಂತ ಬಲು ಹಿಂಸೆಪಟ್ಟಿದ್ದೆ. ಅವಳಿಗೆ ದುಡ್ಡು ಕೊಟ್ಟು ಕಳಿಸಿದಮೇಲಷ್ಟೇ ನಾನಿನ್ನು ಆಕೆಗೆ ನೈತಿಕವಾಗಿ ಬದ್ಧನಲ್ಲ ಎಂದು ಸ್ಪಷ್ಟಮಾಡಿದ ಸಮಾಧಾನವಾಗಿತ್ತು. ಓಹೋ, ಹಾಗೆ, ನನ್ನ ಮಾತನ್ನು ಒಪ್ಪಿಕೊಳ್ಳುವವರ ಹಾಗೆ ತಲೆದೂಗಬೇಡಿ (ಇದ್ದಕ್ಕಿದ್ದಂತೆ ಅವನು ಆವೇಶ ತುಂಬಿದವರಂತೆ ಹೇಳಿದ). ಇಂಥ ಉಪಾಯಗಳು ನನಗೆ ಗೊತ್ತು. ತೀರ ಅಪರೂಪದ ವ್ಯಕ್ತಿಗಳಲ್ಲದಿದ್ದರೆ ಎಲ್ಲರಿಗೂ, ನಿಮಗೂ ಕೂಡ, ನನಗೆ ಆಗ ಇದ್ದ ಐಡಿಯಾಗಳೇ ಇರುತ್ತವೆ. ನೀವು ಒಪ್ಪಿಕೊಳ್ಳುತ್ತಾ ಇದ್ದರೆ ಅದು ಈಗ, ನಾನು ಹೇಳಿದ ಮೇಲೆ ಮಾತ್ರ. ಮೊದಲು ನಿಮಗೆ ಹೀಗನ್ನಿಸಿರಲಿಲ್ಲ. ನನಗೂ ಅನ್ನಿಸಿರಲಿಲ್ಲ. ನಿಮಗೆ ಈಗ ನಾನು ಹೇಳಿದ ಮಾತನ್ನು ಆಗ ನನಗೆ ಯಾರಾದರೂ ಹೇಳಿದ್ದಿದ್ದರೆ ಈ ಕಥೆಯೆಲ್ಲ ನಡೆಯುತ್ತಲೇ ಇರಲಿಲ್ಲ. ಇರಲಿ ಬಿಡಿ. ಎಲ್ಲಾ ಒಂದೇನೆ. ಕ್ಷಮಿಸಿ. ಹಾರಿಬಲ್.”
“ಏನು ಹಾರಿಬಲ್?” ಎಂದೆ.
“ನಮಗೂ ಹೆಂಗಸರಿಗೂ ಇರುವ ಸಂಬಂಧ...ಎಂಥಾ ಅಪದ್ಧಗಳ ಪ್ರಪಾತದಲ್ಲಿ ಬಿದ್ದು ಒದ್ದಾಡುತ್ತಿದ್ದೇವಲ್ಲ, ಅದು ಭಯಂಕರ. ಸಮಾಧಾನವಾಗಿ ಮಾತಾಡುವುದಕ್ಕೆ ಆಗುವುದೇ ಇಲ್ಲ ನನಗೆ. ಹೀಗಾಗುವುದಕ್ಕೆ ಆ ಮನುಷ್ಯ ‘ಬಿಕ್ಕಟ್ಟು’ ಅಂದನಲ್ಲ, ಅದು ಎದುರಾದಾಗ ನಾನು ಮಾಡಿದ ಕೆಲಸ ಕಾರಣವಲ್ಲ. ಆ ಬಿಕ್ಕಟ್ಟು ಉಂಟಾದ ಕ್ಷಣದಿಂದ ನನ್ನ ದೃಷ್ಟಿಯೇ ಬದಲಾಗಿದೆ. ಎಲ್ಲಾ ತಲೆಕೆಳಗಾಗಿ, ಬೇರೆ ಥರ ಕಾಣುತ್ತಿದೆ.”
ಮತ್ತೆ ಒಂದು ಸಿಗರೇಟು ಹಚ್ಚಿಕೊಂಡು, ಮುಂದಕ್ಕೆ ಬಗ್ಗಿ ಮಾತಾಡತೊಡಗಿದ. ಮುಖ ಕಾಣದಷ್ಟು ಕತ್ತಲಾಗಿತ್ತು. ರೈಲಿನ ಸದ್ದನ್ನೂ ಮೀರಿ ಅವನ ಪ್ರಾಮಾಣಿಕವಾದ ಧ್ವನಿ ಕೇಳಿಸುತ್ತಿತ್ತು. (ಮುಂದುವರೆಯುವುದು)
“ಹೌದು. ಉದಾತ್ತ ಪ್ರೇಮದ ಕನಸು ಕಾಣುತ್ತಾ, ಪ್ರೀತಿಯ ಹೆಸರು ಹೇಳಿಕೊಂಡು ಹತ್ತು ವರ್ಷ ಅಸಹ್ಯವಾಗಿ ಬದುಕಿದೆ. ನನ್ನ ಹೆಂಡತಿಯನ್ನು ಹೇಗೆ ಕೊಂದೆ--ಹೇಳಬೇಕು. ಅದಕ್ಕೆ ನಾನೆಂಥ ಲಂಪಟ ಎಂದು ತಿಳಿಯಬೇಕು. ನನಗೆ ಅವಳು ಗೊತ್ತಾಗುವ ಮೊದಲೇ ಕೊಂದುಬಿಟ್ಟೆ. ಪ್ರೀತಿ ಕಿಂಚಿತ್ತೂ ಇಲ್ಲದೆ ಮೈಯ ಸುಖವನ್ನು ಮೊದಲ ಬಾರಿಗೆ ಉಂಡಾಗಲೇ ‘ಹೆಂಡತಿ’ಯನ್ನು ಕೊಂದುಬಿಟ್ಟೆ. ಆಮೇಲೆ ‘ನನ್ನ’ ಹೆಂಡತಿಯನನ್ನು ಕೊಂದೆ. ಹೌದು. ನರಳಿ ನರಳಿ, ನನಗೇ ಹಿಂಸೆ ಕೊಟ್ಟುಕೊಂಡು, ಕೆಡುಕಿನ ಬೇರು ಬುಡ ತಿಳಿದುಕೊಂಡೆ. ಹೇಗೆ ಬದುಕಬೇಕು, ಹೇಗೆ ಬದುಕಿದ್ದೇವೆ ಅಂತ ಗೊತ್ತಾಗಿದೆ. ನನ್ನ ದುರಂತಕ್ಕೆ ಕಾರಣವಾದ ನಾಟಕ ಹೇಗೆ ಶುರುವಾಯಿತೆಂದರೆ...
“ನನಗೆ ಆಗ ಹದಿನೈದು ವರ್ಷ. ಇನ್ನೂ ಸ್ಕೂಲಿಗೆ ಹೋಗುತ್ತಿದ್ದೆ. ಅಣ್ಣ ಕಾಲೇಜು ಸೇರಿದ್ದ. ನನಗೆ ಹೆಣ್ಣಿನ ಪರಿಚಯ ಆಗಿರಲಿಲ್ಲ. ಆದರೆ ನಮ್ಮ ಸಮಾಜದ ಎಲ್ಲ ನತದೃಷ್ಟ ಮಕ್ಕಳ ಹಾಗೆಯೇ ನಾನೂ ಮುಗ್ಧನಾಗಿರಲಿಲ್ಲ. ನೂರರಲ್ಲಿ ತೊಂಬತ್ತೊಂಬತ್ತೂ ಮುಕ್ಕಾಲು ಹುಡುಗರ ಹಾಗೆಯೇ ನನ್ನ ಮನಸ್ಸೂ ಬಲು ಬಲು ಹಿಂಸೆಪಡುತ್ತಿತ್ತು. ಜೊತೆಯ ಹುಡುಗರ ಸಹವಾಸದಿಂದ ನನ್ನ ಕಲ್ಪನೆ ಆಗಲೇ ವಿಕೃತವಾಗಿತ್ತು. ಯಾವ ಹೆಂಗಸಿನ ಸಹವಾಸವೂ ಆಗಿರಲಿಲ್ಲ. ಆದರೂ ಹೆಣ್ಣು ಅನ್ನುವ ಕಲ್ಪನೆಯೇ ಕಾಡಿಸುತ್ತಿತ್ತು. ಹೆಣ್ಣು ಅಂದರೆ ಆಸೆ ಹುಟ್ಟುತ್ತಿತ್ತು, ಕಂಡ ಎಲ್ಲ ಹೆಂಗಸರ ಬತ್ತಲೆ ಮೈಯ ಚಿತ್ರವನ್ನು ಊಹೆಮಾಡಿಕೊಳ್ಳುತ್ತಿದ್ದೆ. ಕಂಡ ಚಿತ್ರ ಕಾಡುತ್ತಿತ್ತು. ಹಾಗೆ ಕಾಡಿದ್ದು ಸವಿ, ಸಿಹಿ ಅನಿಸುತ್ತಿತ್ತು. ಏಕಾಂತದ ಗಳಿಗೆಗಳು ಶುದ್ಧವಾಗಿರಲಿಲ್ಲ. ಭಯವಾಗುತ್ತಿತ್ತು, ನರಳುತ್ತಿದ್ದೆ. ದೇವರೇ ಅಂತ ಪ್ರಾರ್ಥನೆ ಮಾಡುತ್ತಿದ್ದೆ. ಸೋತುಬಿಡುತ್ತಿದ್ದೆ. ನಿಜವಾಗಿ ಯಾವ ಹೆಣ್ಣನ್ನೂ ಮುಟ್ಟಿರದಿದ್ದರೂ ಕಲ್ಪನೆಗಳಲ್ಲೂ ನಿಜದಲ್ಲೂ ಭ್ರಷ್ಟನಾಗಿದ್ದೆ. ಕೊನೆಯ ಹೆಜ್ಜೆ ಇಡುವುದು ಬಾಕಿ ಇತ್ತು ಅಷ್ಟೆ. ತಪ್ಪಿಸಿಕೊಳ್ಳಬಹುದಾಗಿತ್ತೋ ಏನೋ. ನನ್ನ ಅಣ್ಣನ ಗೆಳೆಯ, ರಸಿಕ ಶ್ರೇಷ್ಠ ಎಂದು ಕರೆಯತ್ತಾರಲ್ಲ ಅಂಥವನು, ನಮಗೆಲ್ಲ ಕುಡಿಯುವುದು, ಇಸ್ಪೀಟು ಆಡುವುದು ಕಲಿಸಿದ್ದಾತ, ಒಂದು ದಿನ, ನಮಗೆಲ್ಲ ಚೆನ್ನಾಗಿ ಮತ್ತೇರಿದ್ದಾಗ, ‘ಅಲ್ಲಿಗೆ’ ಕರೆದುಕೊಂಡು ಹೋದ. ಶುರುಮಾಡಿಕೊಂಡೆವು. ನನ್ನಷ್ಟೇ ಮುಗ್ಧನಾಗಿದ್ದ ಅಣ್ಣನ ಪತನ ಅವತ್ತು ಆಯಿತು. ಅವತ್ತೇ ರಾತ್ರಿ ನಾನು, ಬರೀ ಹದಿನಾರು ವರ್ಷದ ಹುಡುಗ, ಸ್ವತಃ ಕೆಟ್ಟು ಹೋದೆ, ಏನು ಮಾಡುತ್ತಿದ್ದೇನೆಂದು ಗೊತ್ತಿಲ್ಲದೆ, ನನ್ನ ತಂಗಿಯಂಥ ಒಬ್ಬ ಹುಡುಗಿಯನ್ನೂ ಕೆಡಿಸಿಬಿಟ್ಟೆ. ನಾನು ಮಾಡಿದ್ದು ಕೆಟ್ಟ ಕೆಲಸವೆಂದು ದೊಡ್ಡವರು ಯಾರೂ ಹೇಳಲಿಲ್ಲ. ಈಗಲೂ ದೊಡ್ಡವರು ಇಂಥದರ ಬಗ್ಗೆ ಹೇಳುವುದಿಲ್ಲ. ಬೈಬಲ್ಲಿನಲ್ಲಿ ಟೆನ್ ಕಮಾಂಡ್‌ಮೆಂಟುಗಳಿವೆ ಅನ್ನುವುದು ನಿಜ. ಅದು ಪರೀಕ್ಷೆಗಳಲ್ಲಿ ಪಾದರಿಗಳ ಎದುರು ಪಾಠ ಒಪ್ಪಿಸುವುದಕ್ಕೆ ಅಷ್ಟೆ. ಅಲ್ಲೂ ಅದು ತೀರ ಮುಖ್ಯವಲ್ಲ. ಲ್ಯಾಟಿನ್ ವ್ಯಾಕರಣದಲ್ಲಿ ut ಅನ್ನುವ ಪ್ರತ್ಯಯ ಹೇಗೆ ಬಳಸಬೇಕು ಎಂದು ಪಾಠ ಕಲಿಯುತ್ತೇವಲ್ಲ, ಅದರಷ್ಟೂ ಮುಖ್ಯವಲ್ಲ.
“ದೇಹಕ್ಕೆ ತೃಪ್ತಿಯಾದಮೇಲೆ ಮನಸ್ಸಿನ ಹಿಂಸೆ, ಒದ್ದಾಟಗಳು ಕಡಮೆಯಾಗುತ್ತವೆ ಎಂದು ನಾನು ಗೌರವ ಕೊಡುತ್ತಿದ್ದ ಹಿರಿಯರು ಹೇಳಿದ್ದು ಕೇಳಿದ್ದೇನೆ. ದೊಡ್ಡವರ ಪ್ರಕಾರ ಅದು ದೇಹದ ಆರೋಗ್ಯಕ್ಕೆ ಒಳ್ಳೆಯದು. ಗೆಳೆಯರ ಪ್ರಕಾರ ಅದು ಗಂಡಸುತನದ ಲಕ್ಷಣ. ಹಾಗೆಂದರೇನೆಂದು ನನಗೆ ಗೊತ್ತಿರಲಿಲ್ಲ. ಒಟ್ಟಿನಲ್ಲಿ ನಾನು ಮಾಡಿದ್ದು ಮೆಚ್ಚುವಂಥ, ಎಲ್ಲರೂ ಮಾಡುವಂಥ ಕೆಲಸವೇ ಆಗಿತ್ತು. ಇನ್ನು ಕಾಯಿಲೆಯ ಅಪಾಯ, ಸರ್ಕಾರ ಅದಕ್ಕೆ ವ್ಯವಸ್ಥೆ ಮಾಡುತ್ತದಲ್ಲವೇ? ವೇಶ್ಯೆಯರ ಮನೆಯ ಮೇಲೆ ಸರಿಯಾಗಿ ನಿಗಾ ಇಟ್ಟು ಸ್ಕೂಲು ಹುಡುಗರು ಕೂಡ ಕ್ಷೇಮವಾಗಿ ಮೈಚಟ ತೀರಿಸಿಕೊಳ್ಳುವ ವ್ಯವಸ್ಥೆ ಮಾಡಿದೆ. ಅದಕ್ಕಾಗಿಯೇ ಡಾಕ್ಟರಿಗೆ ಸಂಬಳ ಕೊಟ್ಟು ಇಟ್ಟಿದೆ. ಲಂಪಟತನವು ಆರೋಗ್ಯವನ್ನು ಕಾಪಾಡುತ್ತದೆ, ಆದ್ದರಿಂದ ಶುಭ್ರವಾದ, ಸ್ವಚ್ಛವಾದ ಪರಿಸರದಲ್ಲಿ ಲಂಪಟರಾಗಿ ಎಂದು ಹೇಳುತ್ತಾರೆ. ಕೆಲವು ತಾಯಂದಿರೂ ತಮ್ಮ ಗಂಡು ಮಕ್ಕಳ ಆರೋಗ್ಯದ ಸಲುವಾಗಿ ಇಂಥದಕ್ಕೆ ಸಹಾಯಮಾಡಿದ್ದು ನೋಡಿದ್ದೇನೆ. ವಿಜ್ಞಾನವೇ ಯುವಕರನ್ನು ಸೂಳೆಯರ ಹತ್ತಿರ ಕಳಿಸಿ ನಮ್ಮನ್ನು ಭ್ರಷ್ಟಗೊಳಿಸುತ್ತಿದೆ.”
“ವಿಜ್ಞಾನ? ಅದು ಹೇಗೆ?” ಎಂದು ಕೇಳಿದೆ.
“ಡಾಕ್ಟರುಗಳಿಲ್ಲವೆ? ಅವರು ವಿಜ್ಞಾನದ ಪೂಜಾರಿಗಳಲ್ಲವೆ? ಲೈಂಗಿಕತೆ ಆರೋಗ್ಯಕ್ಕೆ ಅಗತ್ಯ ಎಂದು ಹೇಳುತ್ತಾ ಯುವಕರನ್ನು ವಿಕೃತಗೊಳಿಸುವುದಿಲ್ಲವೆ? ಆಮೇಲೆ ಮುಖ ಬಿಗಿದುಕೊಂಡು ಸಿಫಿಲಿಸ್‌ಗೆ ಔಷಧಿ ಕೊಡುವುದಿಲ್ಲವೆ? ಮಕ್ಕಳಾಗದಂತೆ ನೋಡಿಕೊಳ್ಳುವ ಉಪಾಯಗಳನ್ನು ಕಂಡುಹಿಡಿದು, ಹೆಂಗಸರಿಗೆ ಅದನ್ನು ಹೇಳಿಕೊಟ್ಟು ಅವರನ್ನೂ ವಿಕೃತಮಾಡಿಲ್ಲವೆ?
“ಹೌದು. ಸಿಫಿಲಿಸ್ ವಾಸಿಮಾಡುವುದಕ್ಕೆ ಮಾಡುವ ಪ್ರಯತ್ನಗಳಲ್ಲಿ ನೂರರಲ್ಲಿ ಒಂದು ಪಾಲಿನಷ್ಟಾದರೂ ಲಂಪಟತನವನ್ನು ವಾಸಿಮಾಡುವುದಕ್ಕೆ ಬಳಸಿದ್ದಿದ್ದರೆ ಅಂಥ ಕಾಯಿಲೆಗಳು ಎಂದೋ ಮಾಯವಾಗಿರುತ್ತಿದ್ದವು. ಈಗ ಲಂಪಟತನವನ್ನು ನಿವಾರಿಸುವುದಕ್ಕಲ್ಲ, ನಿರಪಾಯಕಾರಿಯಾಗಿ ಲಂಪಟತನವನ್ನು ಅನುಭವಿಸುವುದು ಹೇಗೆ ಅಂತ ಕಂಡುಹಿಡಿದು ತಿಳಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಪ್ರಶ್ನೆ ಅದಲ್ಲ, ನಾನು ಹೇಗೆ ಕೆಟ್ಟುಹೋದೆ ಅನ್ನುವುದು ಪ್ರಶ್ನೆ. ನನಗೆ ಆದ ಗತಿಯೇ ಹತ್ತರಲ್ಲಿ ಒಂಬತ್ತು ಹುಡುಗರಿಗೆ ಆಗುತ್ತದೆ. ನಮ್ಮ ಶ್ರೀಮಂತ ಸಮಾಜದ ಹುಡುಗರಿಗೆ ಮಾತ್ರವಲ್ಲ, ಎಲ್ಲ ಹುಡುಗರಿಗೂ, ಹಳ್ಳಿಯ ರೈತ ಹುಡುಗರಿಗೂ ಹೀಗಾಗುತ್ತದೆ. ಭಯಂಕರವಾದ ಸಂಗತಿ ಏನೆಂದರೆ ಯಾವ ಹೆಂಗಸೂ ನನ್ನ ಕೆಡಿಸಲಿಲ್ಲ. ನಾನೇ ಕೆಟ್ಟೆ. ನನ್ನ ಸುತ್ತಮುತ್ತಲೂ ನಡೆಯುತ್ತಿರುವುದನ್ನು ನೋಡಿದೆ. ಈ ಅಸಹ್ಯವು ಸಹಜವಾದದ್ದು, ಎಲ್ಲರೂ ಹೀಗೆ ಮಾಡುತ್ತಾರೆ ಅಂದುಕೊಂಡೆ. ಹುಡುಗರು ಹೀಗೆ ಮಾಡುವುದು ಆರೋಗ್ಯಕ್ಕೆ ಅಗತ್ಯ ಎಂದು ಹಿರಿಯರು ಭಾವಿಸಿದ್ದರು. ನಾನು ಮಾಡಿದ ಕೆಲಸ ಕೇವಲ ಕ್ಷಮೆಗೆ ಅರ್ಹವಾದದ್ದು ಮಾತ್ರವಲ್ಲ ಮುಗ್ಧ ಯುವಕನೊಬ್ಬನ ಸಹಜ ಮನರಂಜನೆ ಇದು ಎಂದು ಮಿಕ್ಕವರೂ ತಿಳಿದಿದ್ದರಿಂದ ನಾನು ಪತನಗೊಂಡಿದ್ದೇನೆ ಅನ್ನುವುದೇ ತಿಳಿಯಲಿಲ್ಲ. ಕುಡಿಯುವ ಸಿಗರೇಟು ಸೇದುವ ಖುಶಿಯನ್ನೂ ಅನುಭವಿಸತೊಡಗಿದೆ. ಅದಕ್ಕೆ ಕೊಂಚ ಮಟ್ಟಿಗೆ ಆಸೆಯೂ ಕಾರಣ, ಇನ್ನು ಕೊಂಚ ಮಟ್ಟಿಗೆ ಅವು ಅಗತ್ಯವೂ ಆಗಿದ್ದವು. ನನ್ನ ವಯಸ್ಸಿಗೆ ತಕ್ಕ ಲಕ್ಷಣ ಇದು ಎಂದೇ ತಿಳಿದೆ.
“ಆದರೂ ಮೊದಲು ಎಡವಿ ಬಿದ್ದಾಗ ವಿಚಿತ್ರವಾಗಿ ಅನ್ನಿಸಿತ್ತು, ಮನಸ್ಸು ಬೆಂದು ಕರಗಿಹೋಗಿತ್ತು. ಜ್ಞಾಪಕ ಇದೆ ನನಗೆ. ಅವಳ ರೂಮಿನಿಂದ ಹೊರಕ್ಕೆ ಬರುವ ಮೊದಲೇ ಮನಸ್ಸಿನ ತುಂಬ ದುಃಖ ತುಂಬಿಕೊಂಡಿತ್ತು. ಅಳಬೇಕು ಅನ್ನಿಸಿತ್ತು. ಹೆಂಗಸರೊಡನೆ ನನ್ನ ಸಂಬಂಧ ಕಳೆದೇ ಹೋಯಿತು ಅನ್ನಿಸಿತು. ಹೌದು. ನಾನು ಎಡವಿದ ಆ ಕ್ಷಣದಿಂದ ಹೆಂಗಸರೊಡನೆ ಇದ್ದ ನನ್ನ ಸಂಬಂಧ ಪೂರಾ ಹಾಳಾಯಿತು. ಯಾವುದೇ ಹೆಂಗಸಿನೊಡನೆ ಶುದ್ಧವಾದ ಸಂಬಂಧ ಅಂದಿನಿಂದ ಅಸಾಧ್ಯವಾಯಿತು. ನಾನು ಕಾಮುಕನಾಗಿಬಿಟ್ಟಿದ್ದೆ. ಕಾಮುಕನಾಗುವುದೊಂದು ದೈಹಿಕ ಸ್ಥಿತಿ. ಮಾರ್ಫೀನು, ಮದ್ಯ, ತಂಬಾಕುಗಳಿಗೆ ಬಲಿಯಾಗುವುದಂಥದೇ ದೈಹಿಕ ಸ್ಥಿತಿ.
“ಮಾರ್ಫೀನು, ಕುಡಿತ, ಸಿಗರೇಟುಗಳಿಗೆ ಬಲಿಯಾದವನು ಸಹಜ ಸಾಮಾನ್ಯ ಮನುಷ್ಯ ಅಲ್ಲ. ಹಾಗೆಯೇ ತನ್ನ ಸುಖಕ್ಕೆ ಹಲವು ಹೆಣ್ಣುಗಳನ್ನು ಬಯಸುವವನೂ ಸಹಜ, ಸಾಮಾನ್ಯ ಅಲ್ಲ, ಅಲ್ಲವೆ? ಅವನು ಆಸೆಬುರುಕ ಕಾಮುಕ. ಕುಡಿತಕ್ಕೆ ಬಿದ್ದವರನ್ನೂ ಮಾರ್ಫೀನು ಚಟ ಇರುವವರನ್ನೂ ಮುಖ ನೋಡಿ ಗುರುತಿಸಬಹುದು, ವರ್ತನೆ ನೋಡಿ ಗುರುತಿಸಬಹುದು. ಹಾಗೆಯೇ ಕಾಮುಕನನ್ನೂ ಕೂಡ. ಕಾಮುಕತನವನ್ನು ಬಚ್ಚಿಟ್ಟುಕೊಳ್ಳಲು ಟ್ರೈ ಮಾಡಬಹುದು, ಹೋರಾಡಬಹುದು. ಆದರೆ ಸರಳವಾದ, ಶುದ್ಧವಾದ ತಂದೆ-ಮಗಳ ಪ್ರೀತಿಯಂಥ ಪ್ರೀತಿಯನ್ನು ಎಂದೆಂದಿಗೂ ಅನುಭವಿಸಲಾರ. ಅವನು ಹುಡುಗಿಯರನ್ನು ನೋಡುವ ರೀತಿಯಲ್ಲಿಯೇ ಕಾಮುಕತನವನ್ನು ಗುರುತುಹಿಡಿಯಬಹುದು. ನಾನು ಕಾಮುಕನಾದೆ, ಕಾಮುಕನಾಗಿಯೇ ಇದ್ದೇನೆ. ಹಾಳಾಗಿದ್ದೇನೆ.”
(ಮುಂದುವರೆಯುವುದು)
“ಹೌದು. ಕಾಮುಕತನದಲ್ಲಿ ತುಂಬ ದೂರ ಹೋದೆ. ಎಲ್ಲಾ ವೆರೈಟಿಗಳನ್ನೂ ಅನುಭವಿಸಿದೆ. ದೇವರೇ! ಅವೆಲ್ಲ ಹೇಡಿ, ಹೀನ ಕೃತ್ಯಗಳನ್ನು ಈಗ ನೆನೆದುಕೊಂಡರೆ ಭಯವಾಗುತ್ತದೆ. ಆದರೂ ಆ ಕಾಲದ ‘ನಾನು’ ಗೆಳೆಯರೆಲ್ಲರ ಪಾಲಿಗೆ ಬರಿಯ ಮುಗ್ಧ ಎಂಬ ಲೇವಡಿಗೆ ಒಳಗಾಗಿದ್ದೆ.
“ನಾವು, ಜನ ಬಂಗಾರದಂಥ ಯುವಕರು ಎಂದು ಕರೆಯುವಂಥವರು, ಆಫೀಸರುಗಳು, ಪ್ಯಾರಿಸಿನ ಶೋಕಿಲಾಲರು, ಸಭ್ಯರು, ನನ್ನಂಥವರು, ಹೆಣ್ಣುಗಳ ಮೇಲೆ ನೂರಾರು ಬಗೆಯ ಅತ್ಯಾಚಾರಮಾಡಿ, ಬಗೆಬಗೆಯ ಅಪರಾಧಗಳ ಭಾರವನ್ನು ಮನಸ್ಸಿನಲ್ಲಿ ಹೊತ್ತವರು, ಮೂವತ್ತರ ಅಂಚಿನಲ್ಲಿರುವವರು, ಪಾರ್ಟಿಗೆ ಹೋದಾಗ, ಅಚ್ಚುಕಟ್ಟಾಗಿ ಸ್ನಾನಮಾಡಿಕೊಂಡು, ಕ್ಲೀನಾಗಿ ಶೇವು ಮಾಡಿಕೊಂಡು, ಪರ್‌ಫ್ಯೂಮು ಹಚ್ಚಿಕೊಂಡು, ಅಚ್ಚ ಬಿಳಿಯ ಡ್ರೆಸ್ಸು ತೊಟ್ಟು, ಅಥವ ಸೂಟು ಧರಿಸಿ, ಇಲ್ಲ ಯೂನಿಫಾರಂ ಹಾಕಿಕೊಂಡು ಪ್ರತ್ಯಕ್ಷರಾದಾಗ ಶುಭ್ರತೆ, ಸ್ವಚ್ಛತೆ, ಪರಿಶುದ್ಧತೆಗಳ ಸಂಕೇತವೆಂಬಂತೆ ಇರುತ್ತೇವೆ. ಥೂ, ಅಸಹ್ಯ!
“ನಾವು ಹೇಗಿರಬೇಕು, ಹೇಗಿದ್ದೇವೆ ನೋಡಿ! ನಮ್ಮ ಸಮಾಜದಲ್ಲಿ ಇಂಥ ಒಬ್ಬ ಜಂಟಲ್‌ಮ್ಯಾನು ನನ್ನ ತಂಗಿಯನ್ನೋ ಮಗಳನ್ನೋ ನೋಡಲು ಬಂದರೆ, ಅವನು ಎಂಥವನು ಅಂತ ಗೊತ್ತಿರುವುದರಿಂದ, ನಾನು ಅವನ ಹತ್ತಿರ ಹೋಗಿ, ಸ್ವಲ್ಪ ಪಕ್ಕಕ್ಕೆ ಕರೆದು, ‘ನೋಡಿ, ನೀವು ಎಂಥಾವರು ಅಂತ ಗೊತ್ತಿದೆ, ರಾತ್ರಿಗಳನ್ನು ಎಲ್ಲಿ ಕಳೆಯುತ್ತೀರಿ ಅಂತ ಗೊತ್ತಿದೆ. ಇದು ನೀವು ಬರಬಹುದಾದ ಜಾಗ ಅಲ್ಲ; ಇಲ್ಲಿ ಮುಗ್ಧವಾದ ಹೆಣ್ಣುಮಕ್ಕಳಿದ್ದಾರೆ, ದಯವಿಟ್ಟು ಹೊರಟು ಹೋಗಿ’ ಅನ್ನಬೇಕು. ಆದರೆ ಏನಾಗುತ್ತದೆ ಅಂದರೆ ಅಂಥವರು ಪಾರ್ಟಿಗಳಿಗೆ ಬರುತ್ತಾರೆ, ನನ್ನ ಮಗಳನ್ನೋ ತಂಗಿಯನ್ನೋ ಅಪ್ಪಿಕೊಂಡು ಡ್ಯಾನ್ಸು ಮಾಡುತ್ತಾರೆ, ಇಂಥಾ ಶ್ರೀಮಂತ, ಇಷ್ಟು ಒಳ್ಳೊಳ್ಳೆಯ ಇನ್ಫ್ಲುಯೆನ್ಸು ಇರುವವನು ನಮ್ಮ ಮನೆಗೆ ಬಂದಿದ್ದಾನೆ. ನಮ್ಮ ಹುಡುಗಿಯನ್ನು ರಿಗೊಲ್‌ಬೊಷೆಗೆ ಕರೆದುಕೊಂಡು ಹೋದರೂ ಹೋಗಬಹುದು ಅಂದುಕೊಳ್ಳುತ್ತೇವೆ. ರೋಗದ ಚಿಂತೆ ಬೇಡ, ಅವನ್ನೆಲ್ಲ ವಾಸಿಮಾಡುವ ಜಾಣತನ ನಮಗೀಗ ಗೊತ್ತಿದೆ. ನಮ್ಮ ಉನ್ನತ ಸಮಾಜದ ಜನ ಇಂಥ ಕಾಯಿಲೆ ಮನುಷ್ಯರಿಗೆ ಉತ್ಸಾಹದಿಂದ ಹೆಣ್ಣು ಕೊಟ್ಟು ಮದುವೆಮಾಡಿದ್ದು ಗೊತ್ತಿದೆ. ಅಸಹ್ಯ! ಥೂ! ಖಂಡಿತ ಒಂದು ಕಾಲ ಬರುತ್ತದೆ, ಒಂದು ಯುಗ ಬರುತ್ತದೆ, ಆಗ ಇಂಥ ಬದುಕಿನ ಹೇಡಿತನದ ಮುಸುಕು ಕಳಚಿಹೋಗುತ್ತದೆ!”
ಅವನು ವಿಚಿತ್ರವಾದ ಸದ್ದು ಮಾಡುತ್ತಾ ಮತ್ತೆ ಟೀ ಕುಡಿದ. ಬಹಳ ಸ್ಟ್ರಾಂಗಾಗಿತ್ತು. ನಾನು ಕುಡಿದ ಎರಡು ಲೋಟ ಟೀ ಒಂದು ಥರ ಮತ್ತು ಬರಿಸಿತ್ತು ನನಗೆ. ಅವನ ತಲೆಗೂ ಏರಿತ್ತು ಎಂದು ಕಾಣುತ್ತದೆ. ಅವನ ಉದ್ವೇಗ ಹೆಚ್ಚಾಯಿತು. ಅವನ ಧ್ವನಿ ಮೃದುವಾಗುತ್ತಹೋಯಿತು. ಭಾವತುಂಬಿದವನ ಹಾಗೆ ಮಾತಾಡುತ್ತಿದ್ದ. ಮತ್ತೆ ಮತ್ತೆ ಕೂತಿದ್ದ ಭಂಗಿ ಬದಲಾಯಿಸುತ್ತಿದ್ದ. ಟೋಪಿ ತೆಗೆಯುತ್ತಿದ್ದ, ಹಾಕಿಕೊಳ್ಳುತ್ತಿದ್ದ. ರೈಲು ಬೋಗಿಯ ಅರೆಕತ್ತಲಲ್ಲಿ ಅವನ ಮುಖ ವಿಚಿತ್ರವಾಗಿ ಹೊಳೆಯುತ್ತಿತ್ತು.
“ಹೀಗೇ ನಾನು ಮೂವತ್ತನೆಯ ವಯಸ್ಸಿನವರೆಗೂ ಬದುಕಿದೆ. ಆದರೆ ಮದುವೆಯಾಗಿ ಉನ್ನತಮಟ್ಟದ ಕೌಟುಂಬಿಕ ಜೀವನ ಸಾಗಿಸಬೇಕೆಂಬ ಕನಸು ಒಂದೇ ಒಂದು ಕ್ಷಣದ ಮಟ್ಟಿಗಾದರೂ ಮಾಯವಾಗಿರಲಿಲ್ಲ. ಇದೇ ಉದ್ದೇಶದಿಂದ ಎದುರಾದ ಎಲ್ಲ ಹುಡುಗಿಯರನ್ನೂ ಗಮನವಿಟ್ಟು ನೋಡುತ್ತಿದ್ದೆ. ನಾನು ಕೊಳೆತಿದ್ದೆ. ಆದರೆ ನನಗೆ ಯೋಗ್ಯಳಾದ ಅಪ್ಪಟ, ಪರಿಶುದ್ಧ ಕನ್ಯೆಗಾಗಿ ಹುಡುಕುತ್ತಿದ್ದೆ. ಎಷ್ಟೋ ಜನ ಹುಡುಗಿಯರನ್ನು ತಿರಸ್ಕಾರಮಾಡಿದೆ, ಅವರು ನನಗೆ ತಕ್ಕವರಲ್ಲ, ಪರಿಶುದ್ಧರಲ್ಲ ಎಂದು!
“ಕೊನೆಗೆ ನನಗೆ ತಕ್ಕವಳೊಬ್ಬಳು ದೊರೆತಳು. ಪೆನ್ಝಾದ ಜಮೀನುದಾರನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳು. ಒಂದು ಕಾಲದಲ್ಲಿ ಬಹಳ ಶ್ರೀಮಂತರಾಗಿದ್ದು, ಈಗ ಕಷ್ಟಕ್ಕೆ ಸಿಕ್ಕಿರುವವರು. ಜಂಬವಿಲ್ಲದೆ ನಿಜ ಹೇಳಬೇಕೆಂದರೆ ಹೆಣ್ಣಿನ ಮನೆಯವರೇ ನನ್ನ ಬೆನ್ನು ಹತ್ತಿ ವಶಮಾಡಿಕೊಂಡರು. ತಂದೆ ದೂರ ದೇಶಕ್ಕೆ ಹೋಗಿದ್ದರಿಂದ ಹುಡುಗಿಯ ತಾಯಿಯೇ ನನ್ನನ್ನು ವಶಮಾಡಿಕೊಳ್ಳುವುದಕ್ಕೆ ಬಗೆ ಬಗೆಯ ಬಲೆಗಳನ್ನು ಒಡ್ಡಿದಳು. ಅವುಗಳಲ್ಲಿ ಒಂದು ಬೋಟಿಂಗ್ ಬಲೆ. ಅದೇ ನನ್ನ ಭವಿಷ್ಯವನ್ನು ನಿರ್ಧರಿಸಿತು.
“ಒಂದು ದಿನ ರಾತ್ರಿ, ಬೆಳುದಿಂಗಳಲ್ಲಿ ಬೋಟಿಂಗ್ ಮುಗಿಸಿ ಮನೆಗೆ ವಾಪಸ್ಸುಬರುತ್ತಿದ್ದೆವು. ಅವಳ ಪಕ್ಕದಲ್ಲಿ ಕೂತಿದ್ದೆ. ಅವಳ ತೆಳ್ಳನೆಯ ಮೈಕಟ್ಟು, ಗುಂಗುರು ಕೂದಲು, ತೊಟ್ಟಿದ್ದ ಟೈಟಾದ ಜೆರ್ಸಿ ಮೆಚ್ಚಿಕೊಳ್ಳುತ್ತಾ ಕೂತಿದ್ದೆ. ತಟ್ಟನೆ ‘ಇವಳೇ ಅವಳು’ ಎಂದು ಡಿಸೈಡುಮಾಡಿಬಿಟ್ಟೆ! ಆ ಸುಂದರವಾದ ಸಂಜೆಯಲ್ಲಿ ‘ಇವಳು ನನ್ನ ಎಲ್ಲ ಆಲೋಚನೆಗಳನ್ನೂ ಫೀಲಿಂಗುಗಳನ್ನೂ ಅರ್ಥಮಾಡಿಕೊಳ್ಳುತ್ತಾಳೆ’ ಅನ್ನಿಸಿಬಿಟ್ಟಿತು. ಆಗ ನನ್ನ ಮನಸ್ಸಿನಲ್ಲಿ ಉನ್ನತವಾದ ಭಾವಗಳಿದ್ದವು. ನಿಜವಾಗಿಯೂ ಅವಳಿಗೆ ಒಪ್ಪುತ್ತ ಇದ್ದದ್ದು ಜೆರ್ಸಿ ಮತ್ತೆ ಗುಂಗುರು ಕೂದಲು ಮಾತ್ರವೇ. ಇಡೀ ದಿನ ಅವಳ ಪಕ್ಕದಲ್ಲೆ ಕಾಲ ಕಳೆದಿದ್ದೆ. ಅವಳೊಡನೆ ನಿಕಟವಾದ ಸಂಬಂಧ ಬೇಕು ಅನ್ನುವ ಆಸೆ ಹುಟ್ಟಿತ್ತು.
“ನೆನೆದರೆ ಆಶ್ಚರ್ಯವಾಗುತ್ತದೆ. ಸುಂದರವಾದದ್ದೆಲ್ಲ ಒಳ್ಳೆಯದೇ ಎಂಬ ಭ್ರಮೆ ಎಷ್ಟೊಂದು ಅಮರಿಕೊಳ್ಳುತ್ತದೆ. ಸುಂದರವಾದ ಹುಡುಗಿ ನಾನ್‌ಸೆನ್ಸ್ ಮಾತಾಡಿದರೂ ನಮಗೆ ಅವಳ ಮಾತಿನಲ್ಲಿ ಎಷ್ಟೊಂದು ಜಾಣತನ ಇದೆ ಅನ್ನಿಸುತ್ತದೆ. ಕೆಟ್ಟ, ಅಸಹ್ಯ ಕೆಲಸಗಳನ್ನು ಮಾಡಿದರೂ ಅವಳ ಚೆಲುವಷ್ಟೇ ಕಾಣುತ್ತಿರುತ್ತದೆ. ಅಕಸ್ಮಾತ್ತಾಗಿ ಆ ಸುಂದರ ಹುಡುಗಿ ಪೆದ್ದು ಮಾತಾಡದಿದ್ದರೆ, ಮುಟ್ಠಾಳ ಕೆಲಸ ಮಾಡದಿದ್ದರೆ, ಅವಳು ಎಷ್ಟು ವಿವೇಕಿ, ಒಳ್ಳೆಯವಳು, ನೀತಿವಂತೆ ಅಂದುಕೊಳ್ಳುತ್ತೇವೆ.
“ಉತ್ಸಾಹದಿಂದ ಮನೆಗೆ ವಾಪಸ್ಸು ಬಂದೆ. ಅವಳು ಪರಿಪೂರ್ಣಳಾದ ಹೆಣ್ಣು, ನೈತಿಕತೆಯ ಉತ್ತುಂಗ ಶಿಖರ ಏರಿರುವವಳು, ನನ್ನ ಹೆಂಡತಿಯಾಗಲು ಯೋಗ್ಯಳು ಅವಳೇ ಅಂತ ನನ್ನನ್ನೆ ನಂಬಿಸಿಕೊಂಡೆ. ಮಾರನೆಯ ದಿನ ಅವರಲ್ಲಿಗೆ ಹೋಗಿ ಮದುವೆಯ ಇಚ್ಛೆ ಹೇಳಿಕೊಂಡೆ.
“ನೀವು ಏನು ಬೇಕಾದರೂ ಹೇಳಿ. ನಾವು ಎಂಥ ಸುಳ್ಳಿನ ಕೂಪದಲ್ಲಿ ಬದುಕುತ್ತಾ ಇದ್ದೇವೆ. ನಮ್ಮ ತಲೆಗೆ ದೊಡ್ಡ ಪೆಟ್ಟು ಬೀಳದಹೊರತು ಎಚ್ಚರವಾಗುವುದೇ ಇಲ್ಲ. ಎಂಥಾ ಕನಫ್ಯೂಶನ್ನು! ನಮ್ಮಂಥ ಶ್ರೀಮಂತರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಇದೆ ಇದು. ಮದುವೆಗೆ ಮೊದಲೇ ಹತ್ತಾದರೂ ಮದುವೆ ಆಗಿರದ ಗಂಡಸು ಒಬ್ಬನೂ ಇಲ್ಲ. ಡಾನ್ ಜುಆನ್‌ನಂತೆ ನೂರು, ಸಾವಿರ ಮದುವೆ ಆಗಿದ್ದವರೂ ಇದ್ದಾರೆ. ಇದು ಜೋಕಲ್ಲ ಎಂದು ತಿಳಿಯುವ ಶುದ್ಧವಾದ ಕೆಲವರಾದರೂ ಯುವಕರು ಇದ್ದಾರೆ ಎಂದು ಕೇಳಿದ್ದೇನೆ. ದೇವರು ಅವರನ್ನು ಕಾಪಾಡಲಿ! ನಮ್ಮ ಕಾಲದಲ್ಲಿ ಮದುವೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡವರು ಹತ್ತುಸಾವಿರಕ್ಕೆ ಒಬ್ಬರೂ ಇರಲಿಲ್ಲ.
“ಎಲ್ಲರಿಗೂ ಇದು ಗೊತ್ತು. ಆದರೆ ಗೊತ್ತಿಲ್ಲದವರಹಾಗೆ ನಟನೆ ಮಾಡುತ್ತಾರೆ. ನಮ್ಮ ಕಾದಂಬರಿಗಳು ಎಷ್ಟೊಂದು ವಿವರವಾಗಿ ನಾಯಕ ನಾಯಕಿಯರ ಭಾವನೆಗಳನ್ನು ಚಿತ್ರಿಸುತ್ತವಲ್ಲಾ, ಯಾವ ಕೊಳದ ಹತ್ತಿರ, ಯಾವ ಪೊದೆಯ ಸಮೀಪ, ಎಂಥ ಮರದ ಕೆಳಗೆ ಅವರಲ್ಲಿ ಎಂತೆಂಥ ಭಾವನೆ ಮೂಡಿವು ಎಂದು ಹೇಳುತ್ತವಲ್ಲಾ, ಅವು ನಾಯಕ ನಾಯಕಿಯರ ಗ್ರೇಟ್ ಲವ್ ಅನ್ನು ವಿವರಿಸಿದರೂ, ಅವನು, ನಾಯಕ, ಹೀಗೆ ಪ್ರೀತಿಸುವ ಮೊದಲು ಏನು ಮಾಡಿದ್ದ, ಎಂತೆಂಥ ಮನೆಗಳಿಗೆ ಕದ್ದು ಹೋಗಿದ್ದ, ಕೆಲಸದವಳು, ಅಡಿಗೆಯವಳು, ಮತ್ತೆ ಬೇರೆಯವರ ಹೆಂಡಿರೊಡನೆ ಹೇಗಿದ್ದ ಅಂತ ಒಂದು ಮಾತೂ ಹೇಳುವುದಿಲ್ಲ.
“ಅಕಸ್ಮಾತ್ತಾಗಿ ಯಾವುದಾದರೂ ಕಾದಂಬರಿ ಅದೆಲ್ಲ ಹೇಳಿದರೆ ಅವು ಹೆಣ್ಣು ಮಕ್ಕಳು ಓದಬಾರದ ಅಯೋಗ್ಯ ಬುಕ್ಕುಗಳು ಅಂತ ಅವರ ಕೈಗೆ ಸಿಗದ ಹಾಗೆ ಮಾಡುತ್ತೇವೆ. ಹೆಂಗಸರು ಎದುರಿಗೆ ಇರುವಾಗ ಎಲ್ಲರೂ ಅನುಭವಿಸುವ ಇಂಥ ಭ್ರಷ್ಟ ಖುಷಿಗಳು ಜಗತ್ತಿನಲ್ಲಿ ಇಲ್ಲವೇ ಇಲ್ಲ, ಇದ್ದರೂ ಅಪರೂಪ ಎಂಬಂತೆ ಗಂಡಸರು ನಟಿನೆ ಮಾಡುತ್ತಾರೆ. ಎಷ್ಟು ಚೆನ್ನಾಗಿ ಅಂದರೆ ಅದು ನಿಜ ಅಂತಲೇ ನಂಬಿಬಿಡುತ್ತಾರೆ. ಬಡಪಾಯಿ ಹೆಣ್ಣುಮಕ್ಕಳು ಕೂಡ ಭ್ರಷ್ಟ ಖುಷಿಗಳು ಜಗತ್ತಿನಲ್ಲಿ ಇಲ್ಲ ಅಂತಲೇ ತಿಳಿಯುತ್ತಾರೆ. ನನ್ನ ಹೆಂಡತಿಯೂ ಹಾಗೆಯೇ ನಂಬಿದ್ದಳು.
“ಜ್ಞಾಪಕ ಇದೆ. ನಮ್ಮ ಮದುವೆ ನಿಶ್ಚಯವಾದಮೇಲೆ ಅವಳಿಗೆ ನನ್ನ ಡೈರಿಯನ್ನು ತೋರಿಸಿದೆ. ನನ್ನ ಬದುಕು ಹೇಗಿತ್ತೆಂದು ಅದರಿಂದ ಅವಳು ತಿಳಿಯಲಿ ಅನ್ನುವ ಆಸೆ. ವಿಶೇಷವಾಗಿ ಆಗ ನಾನು ನಡೆಸಿದ್ದ ಅಫೇರ್‌ನ ವಿವರಗಳೂ ಇದ್ದವು. ಬಹುಶಃ ಆ ಬಗ್ಗೆ ಅವಳು ಯಾರೋ ಮಾತಾಡುವುದನ್ನು ಕೇಳಿದ್ದಿರಬಹುದು. ಹಾಗೆ ಕೇಳಿದ್ದಿರಬಹುದು ಅಂತ ಅನಿಸಿದ್ದರಿಂದಲೇ ಡೈರಿಯನ್ನು ಅವಳಿಗೆ ತೋರಿಸಿದೆ. ಅವಳಿಗೆ ಭಯವಾಗಿ, ಹತಾಶೆಯಾಗಿ, ದಿಗ್ಭ್ರಾಂತಿಯಾಗಿ, ತಬ್ಬಿಬ್ಬಾದ್ದು ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಮದುವೆ ಕ್ಯಾನ್ಸಲ್ ಮಾಡಬೇಕು ಎಂದು ಕೂಡ ಅವಳಿಗೆ ಅನಿಸಿತ್ತು. ಹಾಗಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!”
ಪಾಸ್‌ಡ್ನಿಚೆಫ್ ಕೊಂಚ ಹೊತ್ತು ಸುಮ್ಮನೆ ಇದ್ದ. ಮತ್ತೆ ವಿಚಿತ್ರವಾಗಿ ಸದ್ದುಮಾಡಿದ. ಮತ್ತೆರಡು ಗುಟುಕು ಟೀ ಹೀರಿದ.
(ಮುಂದುವರೆಯುವುದು)
“ಆಗಿದ್ದೆಲ್ಲ ಆಗಿಹೋಯಿತು. ನನಗೆ ಹಾಗೇ ಆಗಬೇಕಾಗಿತ್ತು! ಇಂಥ ವಿಷಯಗಳಲ್ಲಿ ಪಾಪದ ಹೆಣ್ಣುಗಳೇ ಯಾವಾಗಲೂ ಮೋಸಹೋಗುವುದು. ಅಮ್ಮಂದಿರು, ಅದರಲ್ಲೂ ಹೆಣ್ಣುಮಕ್ಕಳ ಅಮ್ಮಂದಿರು, ತಮ್ಮ ಗಂಡಂದಿರಿಂದ ಪಾಠ ಕಲಿತಿರುತ್ತಾರೆ, ಅವರಿಗೆ ಎಲ್ಲಾ ಗೊತ್ತಿರುತ್ತದೆ. ಆದರೂ ಮದುವೆಯಾಗಲಿರುವ ವರ ಪರಿಶುದ್ಧನೆಂದೇ ನಂಬಿದವರಹಾಗೆ ನಟನೆಮಾಡುತ್ತಾರೆ. ಮಗಳಿಗಾಗಿ ಗಂಡನ್ನು ಹಿಡಿಯುವುದಕ್ಕೆ, ಮತ್ತೆ ತಮ್ಮನ್ನೂ ನಂಬಿಸಿಕೊಳ್ಳುವುದಕ್ಕೆ, ಗಾಳ ಹೇಗೆ ಹಾಕಬೇಕು ಎಂದು ಗೊತ್ತು ಅವರಿಗೆ.
“ಗೊತ್ತಿಲ್ಲದೆ ಇರುವುದು ನಮಗೆ, ಗಂಡಸರಿಗೆ. ಗೊತ್ತು ಮಾಡಿಕೊಳ್ಳುವ ಇಷ್ಟ ಇಲ್ಲ ನಮಗೆ. ಆದರೆ ಹೆಂಗಸರಿಗೆ ಚೆನ್ನಾಗಿ ಗೊತ್ತು. ನಾವು ಯಾವುದನ್ನು ಅತ್ಯಂತ ಉನ್ನತವಾದ, ಕಾವ್ಯಾತ್ಮಕವಾದ, ಆದರ್ಶ ಪ್ರೀತಿ ಅನ್ನುತ್ತೇವೆಯೋ ಅದು ಕೇವಲ ನೀತಿಗೆ ಸಂಬಂಧಿಸಿದ್ದಲ್ಲ, ಮೈಗೆ ಮೈ ತಗಲುವಷ್ಟು ಹತ್ತಿರ ಇರಬೇಕು ಅನ್ನುವ ಆಸೆ, ಹೆಂಗಸರು ತಲೆಗೂದಲು ಕಟ್ಟಿಕೊಳ್ಳುವ ಸ್ಟೈಲು, ಮೈ ಬಣ್ಣ, ಆಕಾರ ಇಂಥವುಗಳನ್ನು ಕುರಿತ ಮೋಹ ಇವುಗಳಿಗೆ ಸಂಬಂಧಿಸಿದ್ದು ಅವರಿಗೆ ಗೊತ್ತು. ಗಂಡಸನ್ನು ಮರುಳು ಮಾಡಲು ಹೊರಟಿರುವ ಅನುಭವಸ್ಥೆ ಬಣ್ಣದ ಬೀಸಣಿಗೆಯನ್ನು ಕೇಳಿನೋಡಿ- ಅಳತೆಗೆ ಹೊಂದದ ಮ್ಯಾಚ್ ಆಗದೆ ಇರುವ ಡ್ರೆಸ್ಸು ಹಾಕಿಕೊಂಡು ಗಂಡಸಿನೆದುರು ಕಾಣಿಸಿಕೊಂಡದ್ದಕ್ಕೆ ಶಿಕ್ಷೆ ಅನುಭವಿಸುತ್ತೀಯೋ ಅಥವಾ ನಿನ್ನ ಸುಳ್ಳು, ಕಪಟ, ಕ್ರೌರ್ಯ ಗಂಡಸಿಗೆ ಗೊತ್ತಾಯಿತೆಂದು ಶಿಕ್ಷೆ ಅನುಭವಿಸುತ್ತೀಯೋ ಎಂದು. ಆಕೆ ಖಂಡಿತವಾಗಿ ಮೊದಲ ಕಾರಣಕ್ಕೇ ಶಿಕ್ಷೆ ಆದರೆ ಆಗಲಿ ಅನ್ನುತ್ತಾಳೆ. ನಾವು ಗಂಡಸರು ಉದಾತ್ತ ಭಾವನೆಗಳ ಬಗ್ಗೆ ಮಾತಾಡುವುದೆಲ್ಲ ಸುಳ್ಳು ಎಂದು ಅವಳಿಗೆ ಗೊತ್ತು. ನಮಗೇನಿದ್ದರೂ ಅವಳ ಮೈಯನ್ನು ಪಡೆದುಕೊಳ್ಳುವ ಆಸೆಯಷ್ಟೇ ಇರುತ್ತದೆ. ಮಿಕ್ಕ ಎಲ್ಲ ಕೀಳುಸಂಗತಿಗಳನ್ನೂ ಕ್ಷಮಿಸಿಬಿಡುತ್ತೇವೆ. ಆದರೆ ಕೆಟ್ಟ ಬಣ್ಣದ, ಟೇಸ್ಟ್ ಇಲ್ಲದ, ಅವಳಿಗೆ ಒಪ್ಪದ ಅಲಂಕಾರವನ್ನು ಸಹಿಸುವುದಿಲ್ಲ.
“ಬಣ್ಣದ ಚಿಟ್ಟೆಗೆ ಇವೆಲ್ಲ ಅನುಭವದಿಂದ ಗೊತ್ತು. ಮದುವೆಯಾಗದ ಎಳೆಯ ಕನ್ಯೆಯರಿಗೆ, ಪ್ರಾಣಿಗಳಿಗೆ ತಿಳಿಯುವಂತೆಯೇ ಸ್ವಭಾವತಃ ಇವೆಲ್ಲ ತಿಳಿದಿರುತ್ತವೆ.
“ಆದ್ದರಿಂದಲೇ ಭಯಂಕರವಾದ ಜೆರ್ಸಿಗಳು, ಕೃತಕವಾದ ಉಬ್ಬುಗಳು, ಬತ್ತಲೆ ತೋಳುಗಳು, ಕೈಗಳು, ಇತ್ಯಾದಿಗಳೆಲ್ಲ. ಗಂಡಸರಿಂದ ಪಾಠಕಲಿತು ಪಾಸಾಗಿ ಬಂದಿರುವ ಹೆಂಗಸರಿಗೆ ಗೊತ್ತು, ಉದಾತ್ತ ಸಂಗತಿಗಳ ವಿಚಾರವೆಲ್ಲ ಕೇವಲ ಮಾತುಕತೆಗೆ ಮಾತ್ರ, ಗಂಡಸಿಗೆ ಏನಿದ್ದರೂ ಅವಳ ಮೈ, ಮೈಯ ಅಲಂಕಾರ ಮಾತ್ರ ಇಷ್ಟ ಎಂದು. ಅದಕ್ಕೇ ಹಾಗೆ ನಡೆದುಕೊಳ್ಳುತ್ತಾರೆ. ವಿವರ ಎಲ್ಲಾ ಬಿಟ್ಟು ಸುಮ್ಮನೆ ನೋಡಿದರೆ ಮೇಲುವರ್ಗದ ಹೆಂಗಸರೂ ಅಷ್ಟೆ, ನಾಚಿಕೆ ಇಲ್ಲದ ಕೆಳವರ್ಗದ ಹೆಂಗಸರೂ ಅಷ್ಟೆ. ಎಲ್ಲ ಹೆಂಗಸರಲ್ಲೂ ಈ ವಿಕೃತಿ ಇದ್ದೇ ಇದೆ. ನೀವು ಒಪ್ಪುವುದಿಲ್ಲವೇ? ತಾಳಿ, ನಿಮಗೆ ತಕ್ಕ ಪ್ರೂಫು ಕೊಡುತ್ತೇನೆ.” ನನ್ನ ಮಾತನ್ನು ತಡೆದು ಹೇಳಿದ.
“ಮೇಲುವರ್ಗದ ಹೆಂಗಸರು ಬೇರೆ ಆಸಕ್ತಿಗಳನ್ನು ಇಟ್ಟುಕೊಂಡಿರುತ್ತಾರೆ, ಸಾಮಾನ್ಯ ಹೆಂಗಸರಹಾಗೆ ಬಿದ್ದು ಹಾಳಾಗಿಹೋದವರಲ್ಲ ಅನ್ನುತ್ತೀರೇನು? ಖಂಡಿತ ಸುಳ್ಳು. ಜೀವಿತದ ಉದ್ದೇಶದ ಕಾರಣದಿಂದ ಮನುಷ್ಯರು ಬೇರೆ ಬೇರೆಯಾಗಿ ಕಾಣುತ್ತಾರೆ, ಅವರ ಅಂತರಂಗದ ಬದುಕು ಬಹಿರಂಗದಲ್ಲಿ ಗೊತ್ತಾಗುತ್ತದೆ ಅನ್ನುವುದು ನಿಜವಾದರೆ ಸಾಮಾನ್ಯ ಹೆಂಗಸನ್ನೂ ಮೇಲುವರ್ಗದ ಹೆಂಗಸನ್ನೂ ಹೋಲಿಸಿ ನೋಡಿ. ಇಬ್ಬರಲ್ಲೂ ಅದೇ ಸ್ಟೈಲಿನ ಉಡುಪು, ಅದೇ ಫ್ಯಾಶನ್ನು, ಅದೇ ಪರ್‌ಫ್ಯೂಮುಗಳು, ಅದೇ ಒಡವೆ, ಬೆಳ್ಳಿ ಬಂಗಾರಗಳ ಬಯಕೆ, ಅದೇ ಬರಿತೋಳು, ಅದೇ ಅರೆತೆರೆದ ಎದೆ, ಅದೇ ಕೃತಕವಾಗಿ ಉಬ್ಬಿದ ಹಿಂಬದಿ, ಅದೇ ಮನರಂಜನೆ, ಅದೇ ಸಂಗೀತ, ಅವೇ ಹಾಡುಗಳು. ಮೇಲುವರ್ಗದ ಹೆಂಗಸು ಏನೇನೆಲ್ಲ ಮಾಡಿ ಗಂಡನ್ನು ಆಕರ್ಷಿಸಲು ಟ್ರೈಮಾಡುತ್ತಾಳೆ. ಸಾಮಾನ್ಯ ಹೆಂಗಸು ಕೂಡ ಅದನ್ನೇ ಮಾಡುತ್ತಾಳೆ. ಕೆಲಕಾಲ ನಮ್ಮೊಡನೆ ಇರುವ ಸೂಳೆಯನ್ನು ಕೀಳಾಗಿ ಕಾಣುತ್ತೇವೆ, ಮದುವೆಯಾಗಿ ನಮ್ಮ ಜೊತೆ ದೀರ್ಘಕಾಲ ಇರುವವಳನ್ನು ಗೌರವಿಸುತ್ತೇವೆ. ಇಬ್ಬರಿಗೂ ಏನೂ ವ್ಯತ್ಯಾಸವಿಲ್ಲ, ಏನೇನೂ!”
(ಮುಂದುವರೆಯುವುದು)
“ಹೌದು. ಅವಳು ಧರಿಸಿದ್ದ ಜರ್ಸಿಗೆ, ಅವಳ ಉಡುಪಿನ ನಿರಿಗೆಗಳಿಗೆ, ಅವಳ ಗುಂಗುರುಕೂದಲಿಗೆ ಮರುಳಾದೆ, ಸೆರೆಯಾದೆ.
“ನನ್ನನ್ನು ಸೆರೆಹಿಡಿಯುವುದು ಸುಲಭವಾಗಿತ್ತು. ಕೃತಕವಾದ ಪರಿಸರದಲ್ಲಿ, ಹಾಟ್ ಹೌಸಿನಲ್ಲಿ ಬೆಳೆಯುವ ಸೌತೆಕಾಯಿಯ ಹಾಗೆ ಬೆಳೆದಿದ್ದೆ. ಅತಿ ಸಮೃದ್ಧವಾದ ಊಟ ಉಪಚಾರ, ಮೈಮುರಿಯುವಂಥ ಕೆಲಸ ಇಲ್ಲ, ಮನಸ್ಸನ್ನು ಕ್ರಮಬದ್ಧವಾಗಿ ಕೆರಳಿಸಿಕೊಳ್ಳುವುದೇ ಕೆಲಸ. ನನಗೆ ಇತ್ತೀಚಿನವರೆಗೂ ಇದು ಗೊತ್ತಾಗಿರಲಿಲ್ಲ. ಈಗ ಗೊತ್ತಾಗಿದೆ. ಬೇರೆಯವರಿಗೆ ಗೊತ್ತಾಗುತ್ತಿಲ್ಲವಲ್ಲ ಎಂದು ಹಿಂಸೆಯಾಗುತ್ತದೆ. ಸ್ವಲ್ಪ ಹೊತ್ತಿನ ಮೊದಲು ಆ ಹೆಂಗಸು ಮಾತಾಡುತ್ತಿದ್ದಳಲ್ಲ ಹಾಗೆ ನಾನ್‌ಸೆನ್ಸ್ ಮಾತಾಡುತ್ತಾರೆ ಎಲ್ಲರೂ.
“ಈ ಬೇಸಗೆಯಲ್ಲಿ, ನಮ್ಮ ಎಸ್ಟೇಟಿನಿಂದ ಸ್ವಲ್ಪ ದೂರದಲ್ಲಿ, ರೈತರು ರೇಲ್ವೆ ಹಳಿ ಹಾಕುತಿದ್ದರು. ರೈತರರ ಊಟ ಗೊತ್ತಲ್ಲ, ಬ್ರೆಡ್ಡು, ಕ್ವಾಸ್, ಮತ್ತೆ ಈರುಳ್ಳಿ. ಇಷ್ಟು ತಿಂದು ಚುರುಕಾಗಿರುತ್ತಾರೆ, ಬಯಲಲ್ಲಿ ಮೈಮುರಿದು ದುಡಿಯುತ್ತಾರೆ. ಆರೋಗ್ಯವಾಗಿ, ನಗುನಗುತ್ತಾ ಬದುಕುತ್ತಾರೆ. ಅದೇ ರೈತ ರೇಲು ಕೆಲಸಕ್ಕೆ ಬಂದರೆ ಪಾರಿಡ್ಜು, ಮತ್ತೆ ಒಂದು ಪೌಂಡು ಮಾಂಸ ಸಿಗುತ್ತದೆ. ಮಾಂಸ ತಿಂದದ್ದಕ್ಕೆ ಪ್ರತಿಯಾಗಿ ದಿನಕ್ಕ ಹದಿನಾರು ಗಂಟೆ ದುಡಿಯುತ್ತಾನೆ, ಸಾವಿರದಿನ್ನೂರು ಪೌಂಡು ಭಾರ ಎಳೆಯುತ್ತಾನೆ, ಎತ್ತುತ್ತಾನೆ, ಇಳಿಸುತ್ತಾನೆ. ಅವನ ಕೆಲಸಕ್ಕೆ ಅಷ್ಟು ಊಟ ಬೇಕು.
“ಮತ್ತೆ ನಾವು, ದಿನಾ ಎರಡು ಪೌಂಡು ಮಾಂಸ ತಿನ್ನುತ್ತೀವಿ, ಮೀನು, ಹಣ್ಣು, ಎಲ್ಲ ಥರದ ಡ್ರಿಂಕು ತೆಗೆದುಕೊಳ್ಳುತ್ತೀವಿ. ಹೇಗೆ ಕರಗಿಸುತ್ತೀವಿ ಅದನ್ನು? ಮೈ ಸುಖದ ಲೋಲುಪತೆಯಲ್ಲಿ. ವಾಲ್ವು ತೆರೆದಿದ್ದರೆ ಸರಿ. ಇಲ್ಲ ಮದುವೆಗೆ ಕೆಲವು ದಿನ ಮೊದಲು ನನ್ನ ವಾಲ್ವು ಮುಚ್ಚಿದ್ದ ಹಾಗೆ ಮುಚ್ಚಿಬಿಟ್ಟಿದ್ದರೆ, ತಕ್ಷಣವೇ ಉದ್ರೇಕ ಹುಟ್ಟುತ್ತದೆ. ಕಾದಂಬರಿ, ಕಾವ್ಯ, ಸಂಗೀತ, ಸೋಮಾರಿ ಶ್ರೀಮಂತ ಬದುಕು ಎಲ್ಲ ಸೇರಿಕೊಂಡು ಆಕಾರಗೆಟ್ಟ ಪ್ರೀತಿಯ ಕನಸು ಹುಟ್ಟುತ್ತದೆ. ನಾನೂ ಪ್ರೀತಿಗೆ ಬಿದ್ದೆ. ಆ ಪ್ರೀತಿಯಲ್ಲಿ ಫೀಲಿಂಗಿತ್ತು, ಕಾವ್ಯ ಇತ್ತು, ಪರವಶತೆ ಇತ್ತು. ಆದರೆ ಇವೆಲ್ಲ ಹುಟ್ಟಿದ್ದು ಹೆಣ್ಣಿನ ಅಮ್ಮನ ಕಾರಣದಿಂದ. ಹೆಣ್ಣಿನ ತೆಳ್ಳನೆ ಸೊಂಟ, ಉಬ್ಬಿದ ಎದೆ ಎದ್ದು ಕಾಣುವ ಹಾಗೆ ಚೆಲುವಾದ ಬಟ್ಟೆಗಳನ್ನು ಹೊಲಿದುಕೊಟ್ಟ ದರ್ಜಿಗಳ ಕಾರಣದಿಂದ. ಹೆಣ್ಣಿನ ಅಮ್ಮ ಏರ್ಪಾಡು ಮಾಡಿದ ಬೋಟಿಂಗ್ ಇರದಿದ್ದರೆ, ಹೆಣ್ಣು ಚೆಲುವಾದ ಬಟ್ಟೆ ತೊಡದೆ ಯಾವಾಗಲೂ ಮನೆಯಲ್ಲಿರುವಾಗ ತೊಡುವಂಥ ಆಕಾರವಿಲ್ಲದ ಗೌನು ತೊಟ್ಟು ಓಡಾಡುತ್ತಿದ್ದಾಗ ಅವಳನ್ನು ನೋಡಿದ್ದಿದ್ದರೆ, ನಾನು ಮರುಳಾಗುತ್ತಲೇ ಇರಲಿಲ್ಲ. ಹೀಗೆಲ್ಲ ಆಗುತ್ತಲೇ ಇರಲಿಲ್ಲ.”
(ಮುಂದುವರೆಯುವುದು)
“ಎಲ್ಲವೂ ಕರೆಕ್ಟಾಗಿ ಸೆಟ್ಟಾಗಿತ್ತು-ನನ್ನ ಪರಿಸ್ಥಿತಿ, ಅವಳ ಡ್ರೆಸ್ಸು, ನಮ್ಮ ಬೋಟಿಂಗು. ಬೋನಿಗೆ ಬಿದ್ದೆ. ಹಿಂದೆ ಇಪ್ಪತ್ತು ಸಾರಿ ತಪ್ಪಿಸಿಕೊಂಡಿದ್ದೆ, ಈಗ ಬಿದ್ದೆ. ಜೋಕು ಮಾಡುತ್ತಿಲ್ಲ. ಈಗಿನ ಕಾಲದ ಮದುವೆ ಅಂದರೆ ಬೋನು. ರೆಡೀ ಮಾಡಿಟ್ಟಿರುತ್ತಾರೆ. ಸಹಜವಾದ ಮದುವೆ ಹೇಗಿರುತ್ತದೆ? ಹುಡುಗಿ ವಯಸ್ಸಿಗೆ ಬಂದಳು, ಮದುವೆ ಮಾಡಬೇಕು. ಅಪ್ಪ ಅಮ್ಮ ಅರೇಂಜು ಮಾಡುತ್ತಾರೆ. ಸಿಂಪಲ್ಲು. ಈಗಲೂ ಮನುಷ್ಯರೆಲ್ಲ ಹಾಗೇ ಮಾಡುತ್ತಾರೆ. ಚೀನೀಯರು, ಹಿಂದೂಗಳು, ಮುಸಲ್ಮಾನರು, ಸಾಮಾನ್ಯ ಜನ, ಎಲ್ಲರೂ. ಇಡೀ ಮನುಷ್ಯ ಕುಲದ ಕುಟುಂಬಗಳಲ್ಲಿ ಶೇಕಡಾ ತೊಂಬತ್ತೊಂಬತ್ತು ಪಾಲು ನಡೆಯುವುದೇ ಹೀಗೆ. ಇನ್ನು ಶೇಕಡಾ ಒಂದಕ್ಕಿಂತ ಕಡಮೆ ಇದ್ದೇವಲ್ಲ, ನಾವು, ಆಧುನಿಕರು, ಕ್ರಾಂತಿಯ ಪಿತ್ಥ ಕೆದರಿದವರು, ಇದೆಲ್ಲ ತಪ್ಪು ಹೊಸ ಪದ್ಧತಿ ತರಬೇಕು ಅಂದುಕೊಂಡೆವು. ಅದೇನದು ಹೊಸ ಪದ್ಧತಿ? ಮದುವೆಗೆ ಬಂದ ಹುಡುಗಿಯರೆಲ್ಲ ಸಾಲಾಗಿ ಕೂತಿರಬೇಕು, ನಾವು ಮಾರ್ಕೆಟ್ಟಿನಲ್ಲಿ ಓಡಾಡುವವರ ಥರಾ ಒಬ್ಬೊಬ್ಬರನ್ನೇ ನೋಡುತ್ತಾ ನಮಗೆ ಬೇಕಾದವರನ್ನು ಆರಿಸಿಕೊಳ್ಳಬೇಕು. ಹುಡುಗಿಯರು ಕಾಯುತ್ತಾ, ಚಡಪಡಿಸುತ್ತಾ ಇರುತ್ತಾರೆ. ಜೋರಾಗಿ ಹೇಳುವುದಕ್ಕೆ ಧೈರ್ಯವಿಲ್ಲದೆ ಮನಸ್ಸಿನಲ್ಲೇ ‘ನನ್ನನ್ನು ಆರಿಸಿಕೊಳ್ಳೋ ಹುಡುಗಾ, ನನ್ನನ್ನ. ಅವಳನ್ನ ಬೇಡ. ಈ ತೋಳು ನೋಡು, ಈ ಸೊಂಟ ನೋಡು..’ ಅಂದುಕೊಳ್ಳುತ್ತಾ ಇರುತ್ತಾರೆ. ನಮಗೆ ಭಾರೀ ಖುಷಿಯಾಗುತ್ತದೆ. ನಮಗಾಗಿಯೇ ಇದೆಲ್ಲ ಏರ್ಪಾಡು ಅಂತ ಬೀಗುತ್ತಾ ಇರುತ್ತೇವೆ. ಆ ಕಡೆ ಈ ಕಡೆ ಓಡಾಡುತ್ತೇವೆ, ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆಮಾಡುತ್ತೇವೆ, ಮಹಿಳೆಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಹೇಳುತ್ತೇವೆ. ಒಂದು ಕ್ಷಣ ಮೈಮರೆತಾಗ ತಟಕ್ಕನೆ ಬೋನಿಗೆ ಬಿದ್ದಿರುತ್ತೇವೆ!”
“ಮತ್ತೇನು ಮಾಡಬೇಕು? ಹುಡುಗಿಯರೇ ಮುಂದೆ ಬರಬೇಕೇನು?” ನಾನು ಕೇಳಿದೆ.
“ಗೊತ್ತಿಲ್ಲ. ಮದುವೆ ಅನ್ನುವುದು ಸಮಾನತೆಯ ಪ್ರಶ್ನೆಯಾದರೆ ಆ ಸಮಾನತೆ ಸಂಪೂರ್ಣವಾಗಿರಬೇಕು. ಅರೇಂಜ್‌ಮಾಡಿದ ಮದುವೆ ಅಪಮಾನಕರವಾದರೂ ನಮ್ಮ ಪದ್ಧತಿಗಿಂತ ಸಾವಿರಪಾಲು ವಾಸಿ. ಅಲ್ಲಿ ಹಕ್ಕುಗಳು ಅವಕಾಶಗಳು ಸಮಾನವಾಗಿರುತ್ತವೆ. ಹೆಣ್ಣು ತೋರಿಸುವ ನಮ್ಮ ಪದ್ಧತಿಯಲ್ಲಿ ಅವಳು ಬರೀ ಗುಲಾಮಳು, ಪ್ರದರ್ಶನಕ್ಕೆ ಇಟ್ಟ ವಸ್ತು, ಅಥವಾ ಗಂಡನ್ನು ಹಿಡಿಯಲು ಒಡ್ಡಿದ ಬೋನು. ಹೆಣ್ಣು ತಾನೇ ಗಂಡನ್ನು ಆರಿಸಿಕೊಳ್ಳುವ ಪರಿಸ್ಥಿತಿ ಇಲ್ಲದಿರುವಾಗ ಇನ್ನೊಂದು ಅಸಹ್ಯಕರ ಅಭ್ಯಾಸ ಹುಟ್ಟಿಕೊಂಡಿದೆ. ಅದನ್ನ ಗೋಯಿಂಗ್ ಇನ್ ಟು ಸೊಸೈಟಿ ಅಂತ ಕರೀತೇವೆ. ನಿಜವಾಗಿ ಅದು ಗಂಡನ್ನು ಬೇಟೆ ಆಡುವುದರ ಇನ್ನೊಂದು ರೂಪ ಅಷ್ಟೆ.
“ಹೆಣ್ಣಿಗೋ ಅವಳ ಅಮ್ಮನಿಗೋ ‘ನೀವು ಗಂಡಿನ ಬೇಟೆಯಾಡುತ್ತಿದ್ದೀರಿ’ ಎಂದು ಹೇಳಿ ನೋಡಿ. ದೇವರೇ! ಹಾಗೆ ಹೇಳಿದವರುಂಟೆ! ಆದರೂ ಅವರು ಬೇಟೆ ಆಡುವುದು ಬಿಟ್ಟು ಬೇರೆ ಏನೂ ಮಾಡಲಾರರು, ಅದು ಬಿಟ್ಟು ಬೇರೆ ಕೆಲಸವೂ ಇಲ್ಲ. ಹಾರಿಬಲ್ ಅಂದರೆ ಎಳೆಯ, ಬಡತನದ, ಮುಗ್ಧ ಹೆಣ್ಣುಮಕ್ಕಳೂ ಇಂಥ ವಿಚಾರ ತಲೆಗೆ ತುಂಬಿಕೊಂಡಿದ್ದಾರೆ. ಇದನ್ನಾದರೂ ಪ್ರಾಮಾಣಿಕವಾಗಿ ಮಾಡುತ್ತಾರೋ. ಇಲ್ಲ. ಇದರಲ್ಲೂ ಬರೀ ಸುಳ್ಳು, ಬರೀ ಬೊಗಳೆ. ‘ನಮ್ಮ ಹುಡುಗಿ ಭಾಳಾ ಚೆನ್ನಾಗಿದಾಳೆ!’ ‘ಆರಿಜನ್ ಆಫ್ ಸ್ಪೀಸೀಸ್? ಬಹಳಾ ಇಂಟರೆಸ್ಟಿಂಗು. ಆದರೆ ನಮ್ಮ ಲಿಲೀಗೆ ಪೇಂಟಿಂಗ್ ಅಂದರೆ ಭಾಳಾ ಇಷ್ಟ!’ ‘ನೀವು ಪ್ರದರ್ಶನಕ್ಕೆ ಹೋಗಲ್ಲವಾ? ಎಷ್ಟು ಚೆನ್ನಾಗಿದೆ ಅಂತ!’ ‘ಅಲ್ಲಿಗೆ ಬರುವ ಟ್ರೊಯ್ಕಾಗಳು, ನಾಟಕ, ಸಂಗೀತ. ಅಬ್ಬಾ, ಅದ್ಭುತ!’ ‘ನಮ್ಮ ಲಿಸ್ಸೀಗೆ ಸಂಗೀತ ಅಂದರೆ ಪ್ರಾಣ.’ ಇಂಥ ಎಲ್ಲ ಮಾತುಗಳ ಹಿಂದೆ ಇರುವುದು ಒಂದೇ ಐಡಿಯಾ: ‘ನನ್ನ ತಗೊ. ನಮ್ಮ ಲಿಸ್ಸೀನ ಆರಿಸಿಕೊ. ಅವಳು ಬೇಡ, ನನ್ನ ಒಪ್ಪಿಕೋ. ಒಂದು ಸಾರಿ ಟ್ರೈ ಮಾಡಿ ನೋಡು!’ ಎಂಥಾ ಸುಳ್ಳು, ಎಷ್ಟು ಅಸಹ್ಯ!” ಟೀ ಮುಗಿಸಿ, ಟೀ ಮಾಡುವ ಸರಂಜಾಮುಗಳನ್ನೆಲ್ಲ ಎತ್ತಿಡಲು ತೊಡಗಿದ.
(ಮುಂದುವರೆಯುವುದು)
“ನಿಮಗೆ ಗೊತ್ತಾ” ಪಾಸ್‌ಡ್ನಿಶೆವ್ ಟೀಪುಡಿಯನ್ನೂ ಸಕ್ಕರೆ ಡಬ್ಬಿಯನ್ನೂ ಚೀಲಕ್ಕೆ ಹಾಕುತ್ತ ಕೇಳಿದ, “ನಿಮಗೆ ಗೊತ್ತಾ, ಜಗತ್ತನ್ನು ನರಳುವ ಹಾಗೆ ಮಾಡುವ ಹೆಣ್ಣಿನ ಶಕ್ತಿ ಈಗ ನಾನು ಹೇಳಿದ ಸಂಗತಿಗಳಿಂದಲೇ ಹುಟ್ಟಿದ್ದು.”
“ಹೆಂಗಸಿನ ಶಕ್ತಿ ಅಂದರೇನು? ಹೆಣ್ಣಿಗೆ ಹಕ್ಕುಗಳಿಲ್ಲ, ದಮನಕ್ಕೆ ಒಳಗಾಗಿದ್ದಾಳೆ ಅನ್ನುತ್ತಾರೆ. ಕಾನೂನುಗಳೆಲ್ಲ ಗಂಡಸರ ಪರವಾಗಿಯೇ ಇವೆಯಲ್ಲ?” ನಾನು ಕೇಳಿದೆ.
“ಕರೆಕ್ಟು. ಅದೇ, ಈ ಅಸಾಮಾನ್ಯವಾದ ಶಕ್ತಿಗೆ ಅದೇ ಕಾರಣ. ಅತ್ಯಂತ ಕೀಳು ಮಟ್ಟದ ಅಪಮಾನಕ್ಕೆ ಗುರಿಯಾಗಿರುವುದರಿಂದಲೇ ಹೆಣ್ಣಿಗೆ ಇಡೀ ಜಗತ್ತನ್ನು ಆಳುವ ಶಕ್ತಿ ಬಂದುಬಿಟ್ಟಿದೆ. ಯಹೂದಿಗಳನ್ನು ನೋಡಿ, ಹೆಂಗಸರ ಹಾಗೆಯೇ ಅವರೂ ಅಪಮಾನಕ್ಕೆ ಒಳಗಾದವರು. ತಮ್ಮ ದುಡ್ಡಿನ ಶಕ್ತಿಯಿಂದ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ‘ನಾವು ಬರೀ ವ್ಯಾಪಾರಿಗಳು ಅನ್ನುತ್ತೀರಾ? ಸರಿ, ನಾವು ಬರೀ ವ್ಯಾಪಾರಿಗಳಾಗಿದ್ದೇ ನಿಮ್ಮನ್ನು ವಶಮಾಡಿಕೊಳ್ಳುತ್ತೇವೆ’ ಅನ್ನುತ್ತಾರೆ ಯಹೂದಿಗಳು. ‘ನಾವು ಬರೀ ಭೋಗ ವಸ್ತುಗಳು ಅನ್ನುತ್ತೀರಾ? ಸರಿ, ಆ ಭೋಗದ ಬಲದಿಂದಲೇ ನಿಮಗೆ ಲಗಾಮು ಹಾಕುತ್ತೇವೆ’ ಅನ್ನುತ್ತಾರೆ ಹೆಣ್ಣುಗಳು.
“ಹೆಣ್ಣಿಗೆ ಹಕ್ಕುಗಳಿಲ್ಲ, ಅಂದರೆ ಅವಳಿಗೆ ಓಟು ಮಾಡುವ ಹಕ್ಕಿಲ್ಲ, ನ್ಯಾಯಾಧೀಶಳಾಗುವ ಹಕ್ಕಿಲ್ಲ, ಇತ್ಯಾದಿಗಳು ಮುಖ್ಯವಲ್ಲ. ಪ್ರೀತಿ ಪ್ರಣಯ ಸಂಬಂಧಗಳಲ್ಲಿ ಅವಳು ಗಂಡಿಗೆ ಸಮಾನಳಲ್ಲ ಅನ್ನುವುದು ಮುಖ್ಯ. ಬೇಡದಿದ್ದರೆ ಮದುವೆಯಾಗದಿರುವ, ಬೇಕಾದ ಗಂಡನ್ನು ಆರಿಸಿಕೊಳ್ಳುವ ಅವಕಾಶ ಅವಳಿಗಿಲ್ಲ. ಗಂಡು ಅವಳನ್ನು ಆಯ್ಕೆ ಮಾಡಿಕೊಳ್ಳಬೇಕು, ಅಷ್ಟೆ. ಅಸಹಜವಲ್ಲವೇ! ತನ್ನ ಜೊತೆಗಾತಿಗೆ ಇಲ್ಲದಿರುವ ಹಕ್ಕು ಅವಕಾಶಗಳು ಗಂಡಸಿಗೆ ಯಾಕಿರಬೇಕು? ಆಯ್ಕೆಯ ಅವಕಾಶ, ಹಕ್ಕು ಇಲ್ಲದಿರುವುದರಿಂದಲೇ ಹೆಣ್ಣು ಬಿನ್ನಾಣ ವೈಯ್ಯಾರಗಳ ಮೂಲಕ ಗಂಡನ್ನು ಆಳುತ್ತಾಳೆ. ಗಂಡು ಹೆಣ್ಣನ್ನು ಆಯ್ಕೆಮಾಡಿಕೊಳ್ಳುವಂತೆ ತೋರುತ್ತದೆ, ಆದರೆ ನಿಜವಾಗಿ ಗಂಡನ್ನು ಆಯ್ಕೆಮಾಡಿಕೊಳ್ಳುವುದು ಹೆಣ್ಣೇ. ಒಂದು ಸಾರಿ ಅವಳ ವಶನಾದರೆ ಮುಗಿಯಿತು. ಅವನನ್ನು ಬೇಕಾದ ಹಾಗೆ ಬಳಸಿಕೊಳ್ಳುತ್ತಾಳೆ, ದುರುಪಯೋಗಮಾಡಿಕೊಳ್ಳುತ್ತಾಳೆ, ಗಂಡಸರ ಮೇಲೆ ತನ್ನ ಹಿರಿಮೆಯನ್ನು ಸ್ಥಾಪಿಸಿಬಿಡುತ್ತಾಳೆ.”
“ಹೆಂಗಸಿನ ಈ ವಿಶೇಷವಾದ ಶಕ್ತಿ ಎಲ್ಲಿಯಾದರೂ ಕಣ್ಣಿಗೆ ಬೀಳುವುದುಂಟೇ?”
“ಯಾಕೆ, ಕಾಣುತ್ತಿಲ್ಲವಾ? ಎಲ್ಲಾ ಕಡೆಯಲ್ಲೂ, ಎಲ್ಲದರಲ್ಲೂ. ದೊಡ್ಡ ಸಿಟಿಗಳಲ್ಲಿರುವ ಅಂಗಡಿಗಳಿಗೆ ಹೋಗಿ ನೋಡಿ. ಲಕ್ಷಾಂತರ ಅಂಗಡಿಗಳು. ಅಲ್ಲಿರುವ ಸಾಮಗ್ರಿಗಳನ್ನು ತಯಾರುಮಾಡುವುದಕ್ಕೆ ಬೇಕಾದ ಶ್ರಮ ಎಷ್ಟೆಂಬುದನ್ನು ಊಹೆ ಮಾಡುವುದಕ್ಕೂ ಆಗುವುದಿಲ್ಲ. ಸಿಟಿಯಲ್ಲಿರುವ ಹತ್ತು ಅಂಗಡಿಗಳಲ್ಲಿ ಒಂಬತ್ತರಲ್ಲಿರುವ ವಸ್ತುಗಳಿಂದ ಗಂಡಸರಿಗೇನಾದರೂ ಉಪಯೋಗವಿದೆಯೆ? ಲಕ್ಷುರಿಯನ್ನು ಬಯಸಿ ಉಳಿಸಿಕೊಂಡಿರುವವರು ಹೆಂಗಸರು. ಫ್ಯಾಕ್ಟರಿಗಳನ್ನು ಎಣಿಸಿ ನೋಡಿ. ಅವುಗಳಲ್ಲಿ ಬಹು ಸಂಖ್ಯೆಯವು ಹೆಂಗಸರಿಗೆ ಬೇಕಾದ ಆಭರಣ, ಉಡುಪು, ಅಲಂಕಾರ ವಸ್ತುಗಳನ್ನ ತಯಾರು ಮಾಡುತ್ತವೆ. ಕೋಟಿಗಟ್ಟಲೆ ಜನ, ಅದೆಷ್ಟೋ ತಲೆಮಾರುಗಳಿಂದ, ತಮ್ಮ ಜೊತೆಗಾತಿಯರ ಚಪಲ, ಬಯಕೆಗಳನ್ನು ತೀರಿಸಲು ದುಡಿಯುತ್ತಲೇ ಬಂದಿದ್ದಾರೆ.
“ಹೆಂಗಸರು, ರಾಣಿಯರ ಹಾಗೆ, ಹತ್ತರಲ್ಲಿ ಒಂಬತ್ತು ಭಾಗ ಗಂಡಸರನ್ನು ಯುದ್ಧ ಖೈದಿಗಳ ಹಾಗೆ ಅಥವ ಕಠಿಣ ಸಜೆಗೆ ಗುರಿಯಾದ ಖೈದಿಗಳ ಹಾಗೆ ಹಿಡಿದಿಟ್ಟುಕೊಂಡಿದ್ದಾರೆ. ಹೆಣ್ಣನ್ನು ದೀನಳನ್ನಾಗಿ ಮಾಡಿದ್ದರಿಂದ, ಅಪಮಾನಮಾಡಿದ್ದರಿಂದ, ಗಂಡಸಿಗೆ ಇರುವಂಥದೇ ಸಮಾನ ಹಕ್ಕುಗಳನ್ನು ಹೆಣ್ಣಿಗೆ ಕೊಡದೆ ಇರುವುದರಿಂದ ಹೆಂಗಸು ಹೀಗಾಗಿದ್ದಾಳೆ. ನಮ್ಮಲ್ಲಿರುವ ಮೈಯಾಸೆಯನ್ನೇ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳುತ್ತಾರೆ ಹೆಂಗಸರು. ಅವರ ಬಲೆಯಲ್ಲಿ ನಮ್ಮನ್ನು ಹಿಡಿದು ಕೆಡವುತ್ತಾರೆ.
“ನಮ್ಮ ಇಂದ್ರಿಯಗಳ ಮೇಲೆ ದಾಳಿ ಮಾಡುವುದಕ್ಕೆ ಹೆಂಗಸರು ಎಂಥ ಆಯುಧ ತಯಾರುಮಾಡಿಕೊಂಡಿದ್ದಾರೆ! ಹೆಣ್ಣಿನ ಎದುರಲ್ಲಿ ಯುವಕನಾಗಲೀ ಮುದುಕನೇ ಆಗಲಿ ಸಮಾಧಾನವಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ. ಯಾವುದೇ ಹಬ್ಬ ನೋಡಿ, ಅಥವಾ ನಮ್ಮ ಬಾಲ್-ರೂಮುಗಳನ್ನೇ ನೋಡಿ. ಅಲ್ಲೆಲ್ಲ ತನಗೆ ಎಂಥ ಪ್ರಭಾವ ಬೀರುವ ಶಕ್ತಿ ಇದೆ ಎಂದು ಹೆಣ್ಣಿಗೆ ಗೊತ್ತು. ಅವಳ ಮುಖದ ಮೇಲಿರುವ ಲೋಕವನ್ನೇ ಗೆದ್ದಂಥ ನಗುವೇ ಅದನ್ನು ತೋರಿಸುತ್ತದೆ.
“ಯುವಕನೊಬ್ಬ ಹೆಣ್ಣಿನತ್ತ ಹೆಜ್ಜೆ ಹಾಕಿದರೆ ಸಾಕು, ಹಾಗೇ ಅಫೀಮಿನಂಥ ಪ್ರಭಾವಕ್ಕೆ ಸಿಕ್ಕಿಬೀಳುತ್ತಾನೆ. ತಲೆ ಕೆಟ್ಟು ಹೋಗುತ್ತದೆ. ತುಂಬ ಅಲಂಕಾರ ಮಾಡಿಕೊಂಡ ಹೆಂಗಸರನ್ನು ನೋಡಿದಾಗ ಮೊದಲೆಲ್ಲ ನನಗೆ ಕಸಿವಿಸಿಯಾಗುತ್ತಿತ್ತು, ಭಯವಾಗುತ್ತಿತ್ತು. ತಲೆಗೆ ಕೆಂಪು ವಸ್ತ್ರ ಸುತ್ತಿಕೊಂಡು ಉಬ್ಬಿದ ನಿರಿಗೆಯ ಲಂಗ ಹಾಕಿಕೊಂಡ ಸಾಮಾನ್ಯ ಹೆಂಗಸೇ ಆಗಲಿ, ಬಾಲ್ ರೂಮ್ ಡ್ರೆಸ್ಸು ತೊಟ್ಟ ನಮ್ಮ ಶ್ರೀಮಂತ ವರ್ಗದ ಹೆಂಗಸೇ ಆಗಲಿ, ಮನಸ್ಸೆಲ್ಲ ಗಲಿಬಿಲಿಯಾಗುತ್ತಿತ್ತು. ಈಗ ಅಪಾಯ, ಅಪಾಯ, ಹೆಲ್ಪ್, ಹೆಲ್ಪ್ ಅಂತ ಕೂಗಿಕೊಳ್ಳಬೇಕು ಅನಿಸುತ್ತದೆ.”
“ನಗುತ್ತಾ ಇದ್ದೀರಿ. ಇದು ಜೋಕಲ್ಲ, ಸೀರಿಯಸ್ಸು” ಸಿಟ್ಟುಮಾಡಿಕೊಂಡು ಹೇಳಿದ. “ನನಗೆ ನಂಬಿಕೆ ಇದೆ. ಆ ಕಾಲ ಬರುತ್ತದೆ, ಇಡೀ ಜಗತ್ತಿಗೆ ಗೊತ್ತಾಗುವ ಕಾಲ-ಈಗ ನಮ್ಮ ಹೆಂಗಸರು ಮಾಡಿಕೊಳ್ಳುತ್ತಾರಲ್ಲ ಹಾಗೆ, ಮೈಯಾಸೆಯನ್ನು ಮೈಸುಖದ ಚಪಲವನ್ನು ಕೆರಳಿಸುವಂಥ ಅಲಂಕಾರ ಮಾಡಿಕೊಳ್ಳಲು ಅವಕಾಶಮಾಡಿಕೊಟ್ಟ ಸಮಾಜವೊಂದು ಇರಲು ಹೇಗೆ ಸಾಧ್ಯ ಎಂದು ಆಶ್ಚರ್ಯ ಪಡುವ ಕಾಲ, ಬೇಗ ಬಂದೇ ಬರುತ್ತದೆ. ಜೂಜಾಟಕ್ಕೆ ನಿಷೇಧ ಇದೆ, ಆದರೆ ಹೆಂಗಸರು ಗಂಡಸರ ಮನಸ್ಸನ್ನು ಕೆರಳಿಸುವಹಾಗೆ ಡ್ರೆಸ್ಸು ತೊಟ್ಟು ಓಡಾಡುವುದಕ್ಕೆ ನಿಷೇಧ ಇಲ್ಲ.ಇದು ಪ್ರಾಣಿಗಳನ್ನು ಹಿಡಿಯಲು ಬೋನು ಒಡ್ಡುವುದಕ್ಕಿಂತ ಕೆಟ್ಟದ್ದು.”
(ಮುಂದುವರೆಯುವುದು)
“ನಾನು ಹೀಗೆ ಸೆರೆಗೆ ಸಿಕ್ಕಿಬಿದ್ದೆ. ಜನ ಅದನ್ನು ಪ್ರೀತಿಯಲ್ಲಿ ಸಿಕ್ಕಿಬೀಳುವುದು ಅನ್ನುತ್ತಾರೆ. ಅವಳು ನನಗೆ ಪರಿಪೂರ್ಣ ಹೆಣ್ಣಿನಂತೆ ಕಂಡಳು. ಅವಳೆದುರು ನಾನು ಪರಿಶುದ್ಧ ಕಾಗೆಯಂತಿದ್ದೆ. ಈ ಲೋಕದಲ್ಲಿ ತನಗಿಂತ ಕೀಳಾದ ಹಾಳಾದ ಮನುಷ್ಯರು ಕಣ್ಣಿಗೆ ಬೀಳದಷ್ಟು ಪತಿತನಾದ ಮನುಷ್ಯ ಯಾರೂ ಇಲ್ಲ ಅನ್ನುವುದು ಪರಮ ಸತ್ಯ. ಆದ್ದರಿಂದಲೇ ಪತಿತನಾದವನು ತನಗಿಂತ ಕೀಳಾದವನ್ನು, ಹಾಳಾದವನನ್ನು ಕಂಡು ಆತ್ಮ ತೃಪ್ತಿಯಿಂದಲೂ ಜಂಬದಿಂದಲೂ ಬೀಗುತ್ತಾನೆ. ನಾನೂ ಹಾಗೆಯೇ ಇದ್ದೆ. ನಾನು ಮದುವೆಯಾಗಿದ್ದು ದುಡ್ಡಿಗಾಗಿ ಅಲ್ಲ. ನನ್ನ ಅನೇಕ ಗೆಳೆಯರು ಸಂಬಂಧದ ಹಿರಿತನಕ್ಕಾಗಿಯೋ, ಶ್ರೀಮಂತಿಕೆಯ ಆಸೆಗಾಗಿಯೋ ಮದುವೆಯಾಗಿದ್ದರು. ಆದರೆ ನನಗೆ ಅಂಥ ಆಸಕ್ತಿ ಇರಲಿಲ್ಲ. ಮೊದಲನೆಯದಾಗಿ ನಾನು ಶ್ರೀಮಂತ, ಆಕೆ ಬಡವಿ. ಎರಡನೆಯದಾಗಿ, ನನ್ನ ಗೆಳೆಯರು ಮದುವೆಯಾದದ್ದು ಮದುವೆಗೆ ಮುನ್ನ ಇದ್ದ ತಮ್ಮ ಅಫೇರುಗಳನ್ನೆಲ್ಲ ಮುಂದುವರೆಸುವುದಕ್ಕೆ, ಮತ್ತೊಂದು ಹೊಸ ಹೆಣ್ಣಿನ ರುಚಿ ನೋಡುವುದಕ್ಕೆ ಮದುವೆಯಾಗುತ್ತಿದ್ದರು. ಆದರೆ ನಾನಾದರೋ ಮದುವೆಯಾದ ಕೂಡಲೇ ಹೊರಚಾಳಿಗಳನ್ನೆಲ್ಲ ಬಿಟ್ಟು ಏಕ ಪತ್ನ