ಝೆನ್ ಕತೆಗಳು
ಕರ್ತೃ: ಓ ಎಲ್ ಎನ್ ಸ್ವಾಮಿ
ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು.
ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ ತರುವಾಯ ಈ ಪಂಥವು ಜಪಾನನ್ನು ಪ್ರವೇಶಿಸಿತು. ಹನ್ನೆರಡನೆಯ ಶತಮಾನದ ಜಪಾನಿನನಲ್ಲಿ ಸಮೃದ್ಧವಾಗಿ ಬೆಳೆಯಿತು.
ಸಮಾಧಾನ ಚಿತ್ತ, ನಿರ್ಭಯತೆ, ಸಹಜಸ್ಫೂರ್ತತೆಯ ಗುಣ ಇವೆಲ್ಲ ಪ್ರಬುದ್ಧ ಮನಸ್ಸಿನ ಲಕ್ಷಣಗಳು. ಇವು ಧ್ಯಾನದ ಉಪ ಲಾಭಗಳಾಗಿ ದೊರೆಯುವುದೆಂದು ಕಂಡುಕೊಂಡ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯಿತು.
ಪ್ರತಿಯೊಬ್ಬರಲ್ಲೂ ಬೋಧಿಯು ಸತ್ವವಾಗಿ ಇದ್ದೇ ಇರುತ್ತದೆ. ಮೌಢ್ಯದ ಕಾರಣದಿಂದ ಈ ಸತ್ವವು ಸುಪ್ತವಾಗಿಯೇ ಉಳಿದುಬಿಡುತ್ತದೆ. ಸೂತ್ರಗಳ ಪಠಣ, ಪುಣ್ಯಕಾರ್ಯಗಳನ್ನು ಮಾಡಬೇಕೆಂಬ ಹಟ, ಪೂಜೆ, ಆರಾಧನೆ, ಧಾರ್ಮಿಕ ಆಚರಣೆ ಇಂಥವನ್ನೆಲ್ಲ ಮಾಡುವ ಮೂಲಕ ಯಾರೂ ತಮ್ಮಲ್ಲಿರುವ ಈ ಬೋಧಿ-ಸತ್ವವನ್ನು ಅರಳಿಸಿಕೊಳ್ಳುವುದು ಸಾಧ್ಯವಿಲ್ಲ. ದಿನ ನಿತ್ಯದ ವ್ಯವಹಾರದ ತಾರ್ಕಿಕ ಸೀಮೆಗಳನ್ನು ಉಲ್ಲಂಘಿಸಿ ಝೆನ್ ಎಂಬ ಬೋಧಿ-ಸತ್ವ ತಟ್ಟನೆ ಮೈದೋರಿಬಿಡುತ್ತದೆ. ಹಾಗಾಗುವುದೇ ಸಾಕ್ಷಾತ್ಕಾರ.
ಇಂಥ ಸಾಕ್ಷಾತ್ಕಾರವನ್ನು, “ಕಂಡವರಿಗಲ್ಲ, ಕಂಡವರಿಗಷ್ಟೆ ಕಾಣುವ” ಸಹಜ ಅಚ್ಚರಿಯನ್ನು, ಚೀನೀ ಭಾಷೆಯಲ್ಲಿ ವೂ ಎಂದು, ಜಪಾನೀ ಭಾಷೆಯಲ್ಲಿ ಸತೋರಿ ಎಂದು ಕರೆಯುತ್ತಾರೆ. ಅಭ್ಯಾಸದ ಮೂಲಕವೂ ಸಾಕ್ಷಾತ್ಕಾರವನ್ನು ಪಡೆಯಬಹುದೆಂಬುದು ಝೆನ್‌ನ ವಿಶ್ವಾಸ. ಹಾಗಾಗುವುದಕ್ಕೆ ತಕ್ಕ ಗುರುವಿನ ಮಾರ್ಗದರ್ಶನ ದೊರೆಯಬೇಕು.
ಸಾಕ್ಷಾತ್ಕಾರಕ್ಕೆ, ಸಾಕ್ಷಾತ್ಕಾರ ಕ್ಷಣದ ಸತೋರಿಯನ್ನು ಅನುಭವಕ್ಕೆ ತಂದುಕೊಳ್ಳುವುದಕ್ಕೆ ದಾರಿಗಳು ಇವೆಯೆ? ಇವೆ ಎಂದು ಝೆನ್ ನಂಬುತ್ತದೆ. ಇಂಥದೇ ದಾರಿ ಸರಿಯಾದ ದಾರಿ ಎಂಬ ಹಟದಲ್ಲಿ ಝೆನ್ ನಲ್ಲಿ ಕೂಡ ಅನೇಕ ಪಂಥಗಳು ಹುಟ್ಟಿಕೊಂಡವು.
ಇವುಗಳಲ್ಲಿ ರಿನ್‌ಝಾಯ್ (ಚೀನೀ ಭಾಷೆಯಲ್ಲಿ ಲಿನ್-ಚೀ), ಸೊಟೋ (ಚೀನೀ ಭಾಷೆಯಲ್ಲಿ ತ್ಸ ಒ-ತುಂಗ್) ಒಬಕು (ಚೀನೀ ಭಾಷೆಯಲ್ಲಿ ಹುವಾಂಗ್-ಪೊ) ಎಂದು ಕರೆಯಲಾಗುವ ಪಂಥಗಳು ಮುಖ್ಯವಾದ ಪಂಥಗಳು.
ರಿನ್‌ಝಾಯ್ ಪಂಥವು ಎನ್‌ಸಾಯಿ ಎಂಬ ಗುರುವಿನ ಮೂಲಕ ಜಪಾನಿನಲ್ಲಿ ೧೧೯೧ರಲ್ಲಿ ಪ್ರಚಾರಕ್ಕೆ ಬಂದಿತು. ಕೋನ್‌ಗಳು ಮನಸ್ಸಿಗೆ ಉಂಟುಮಾಡುವ ಆಘಾತ, ಕೋನ್‌ನಲ್ಲಿರುವ ವಿರೋಧಾಭಾಸಗಳನ್ನು ಕುರಿತ ಧ್ಯಾನ, ಇವುಗಳ ಮೂಲಕ ಸಾಕ್ಷಾತ್ಕಾರದ ದಾರಿ ಸುಗಮವಾಗುತ್ತದೆ ಎಂಬುದು ಈ ಪಂಥದ ನಂಬಿಕೆ. ಕೋನ್ ಎಂದರೆ ಒಂದು ಬಗೆಯ ಒಗಟು ಕಥೆ. ಕನ್ನಡದ ಬೆಡಗಿನ ವಚನಗಳು, ಕನಕ ದಾಸರ ಮುಂಡಿಗೆಗಳು ಇತ್ಯಾದಿಗಳಂತೆ ಕೋನ್ ಕೂಡ ವಿರೋಧಾಭಾಸವನ್ನು ಒಳಗೊಂಡ ಕಿರು ಕಥೆಗಳು. ಈ ವಿರೋಧಾಭಾಸವನ್ನು ಕುರಿತು ಧ್ಯಾನಿಸುವುದು ಕೂಡ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ.
ತಾವೊ, ದಾವ್ ದೆ ಚಾಂಗ್ ಎಂದೆಲ್ಲ ಕನ್ನಡದಲ್ಲಿ ಬರೆಯಲಾಗುವ ತ್ಸಾ ಒ-ತುಂಗ್ ಜಪಾನಿನನ್ಲಿ ಸೊಟೊ ಎಂಬ ಹೆಸರನ್ನು ಪಡೆಯಿತು. ಚೀನಾದಿಂದ ೧೨೨೭ರಲ್ಲಿ ಜಪಾನಿಗೆ ಹಿಂದಿರುಗಿದ ದಾಗೆನ್ ಎಂಬಾತ ಇದನ್ನು ಬೆಳೆಸಿದ. ಈ ಪಂಥದವರು ಝಾಝೆನ್ ಎಂದು ಕರೆಯಲಾಗುವ ಧ್ಯಾನ ಪದ್ಧತಿಗೆ ಪ್ರಾಮುಖ್ಯ ನೀಡುತ್ತಾರೆ.
ಜಪಾನಿನಲ್ಲಿ ಇನ್‌ಜೆನ್ ಎಮದು ಪ್ರಸಿದ್ಧನಾಗಿರುವ ಚೀನೀ ಸಂತ ಇನ್-ವುವಾನ್ ೧೬೫೪ರಲ್ಲಿ ಒಬುಕು ಎಂಬ ಝೆನ್ ಪಂಥವನ್ನು ಸ್ಥಾಪಿಸಿದ. ಇದನ್ನು ಚೀನೀ ಭಾಷೆಯಲ್ಲಿ ಹುವಾಂಗ್-ಪೊ ಎನ್ನುತ್ತಾರೆ. ಇದು ರಿನ್‌ಝಾಯ್ ಪಂಥದಂತೆ ಕೋನ್‌ಗಳನ್ನೂ ಅಮಿತಾಭ ಬುದ್ಧನನ್ನು (ಅಮಿತ-ಅಪರಿಮಿತ, ಆಭ-ಬೆಳಕು) ಕುರಿತ ಪ್ರಾರ್ಥನೆಯನ್ನೂ ಅಳವಡಿಸಿಕೊಂಡಿದೆ.
ಹದಿನಾರನೆಯ ಶತಮಾನದ ಜಪಾನಿನಲ್ಲಿ ರಾಜಕೀಯ ತಳಮಳ ತುಂಬಿತ್ತು. ಆ ಅವಧಿಯಲ್ಲಿ ಝೆನ್ ಗುರುಗಳು ತಮ್ಮ ಕೌಶಲವನ್ನು ಬಳಸಿಕೊಂಡು ರಾಯಭಾರಿಗಳಾಗಿ, ಅಧಿಕಾರಿಗಳಾಗಿ, ಸಂಸ್ಕೃತಿಯ ಸಂರಕ್ಷಕರಾಗಿ ಕೆಲಸ ಮಾಡಿದರು. ಕಲೆ, ಸಾಹಿತ್ಯ, ಚಹಾಪಾನದ ಸಂಸ್ಕೃತಿ, ನೋ ರಂಗಭೂಮಿ ಇವೆಲ್ಲ ಬೆಳೆದು ಸಮೃದ್ಧಗೊಂಡದ್ದಕ್ಕೆ ಝೆನ್ ಗುರುಗಳೆ ಮುಖ್ಯ ಕಾರಣ. ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ, ತೊಕಗುವಾ ವಂಶದ ಆಳ್ವಿಕೆಯಲ್ಲಿ ನವ ಕನ್‌ಫೂಶಿಯನ್ ವಾದವು ಜಪಾನಿನ ಜನರ ಬದುಕಿನ ಮೇಲೆ ದೊಡ್ದ ಪರಿಣಾಮವನ್ನು ಬೀರಿತು. ಈ ತತ್ವ ಮತ್ತು ಸಿದ್ಧಾಂತಗಳು ಜಪಾನಿನಲ್ಲಿ ಪ್ರಚುರಗೊಳ್ಳುವುದಕ್ಕೂ ಝೆನ್ ಗುರುಗಳೇ ಕಾರಣ.
ಆಧುನಿಕ ಜಪಾನಿನಲ್ಲಿ ಸುಮಾರು ಒಂದು ಕೋತಿ ಝೆನ್ ಪಂಥೀಯರಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಝೆನ್‌ನ ವಿವಿಧ ಅಂಶಗಳ ಬಗ್ಗೆ ಪಾಶ್ಚಾತ್ಯ ಜಗತ್ತಿನಲ್ಲೂ ಆಸಕ್ತಿ ಹೆಚ್ಚಿತು. ಉತ್ತರ ಅಮೆರಿಕ ಮತ್ತು ಯೂರೋಪುಗಳಲ್ಲಿ ಝನ್ ಅಭ್ಯಾಸದಲ್ಲಿ ತೊಡಗಿರುವ ಅನೇಕ ಸಣ್ಣ ದೊಡ್ಡ ಗುಂಪುಗಳು ಇವೆ.
ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಶ್ರೀ ಕೆ.ವಿ. ಸುಬ್ಬಣ್ಣ ಅವರ ಝೆನ್ ಕಥೆಗಳು ಒಳಗೊಂಡಂತೆ ಅನೇಕರ ಮುಖಾಂತರ ಝೆನ್ ಕತೆಗಳು ಕನ್ನಡಕ್ಕೆ ಬಂದಿವೆ. ಶ್ರೀ ಯು. ಆರ್. ಅನಂತಮೂರ್ತಿಯವರು ದಾವ್ ದ ಜಿಂಗ್ ಎಂಬ ಹೆಸರಿನಲ್ಲಿ ತಾವೊ ತತ್ವಗಳನ್ನು ಪರಿಚಯಿಸಿದ್ದಾರೆ.
ಇಲ್ಲಿ ಇದುವರೆಗೂ ಪರಿಚಯಗೊಂಡಿರದ ಕಥೆಗಳಿಗೆ ಪ್ರಾಮುಖ್ಯ ನೀಡಿ ಸುಮಾರು ನೂರು ಕತೆಗಳನ್ನು ನೀಡುವ ಉದ್ದೇಶವಿದೆ. ತಬ್ಬಿಬ್ಬುಮಾಡುವ, ಕೆಣಕುವ, ಕಚಗುಳಿ ಇಡುವ ಈ ಕತೆಗಳನ್ನು ಮೆಲುಕು ಹಾಕಿದರೆ ಹೊಸ ಬೆಳಕು ಹೊಳೆದಂತೆ ಆಗುತ್ತದೆ.
ಶೋಹಿಚಿ ಒಕ್ಕಣ್ಣ ಝೆನ್ ಗುರು. ಅವನಲ್ಲಿ ಜ್ಞಾನದ ಪ್ರಭೆ ಇತ್ತು. ಅವನು ತನ್ನ ಶಿಷ್ಯರಿಗೆ ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ.
ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ.
ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ.
ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅವನು ಅನುಮತಿ ನೀಡುತ್ತಿರಲಿಲ್ಲ.
ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನೂ ಮಾಡಬೇಕಿರಲಿಲ್ಲ.
ಒಂದು ದಿನ ದೇವಾಲಯದ ಸಮೀಪದಲ್ಲಿದ್ದ ಹೆಂಗಸು ಗಂಟೆಗಳ ಸದ್ದು ಕೇಳಿಸಿಕೊಂಡಳು. ಶಿಷ್ಯರು ಗಟ್ಟಿಯಾಗಿ ಸೂತ್ರಗಳನ್ನು ಪಠಿಸುತ್ತಿರುವುದನ್ನು ಕೇಳಿಸಿಕೊಂಡಳು. ಗುರು ತೀರಿ ಹೋದ ಎಂದು ಆಕೆಗೆ ತಿಳಿಯಿತು.
ಗುರು ಹೇಳಿದ್ದನ್ನು ನಮ್ಮ ಅನುಕೂಲಕ್ಕೆ, ಅಭ್ಯಾಸಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತ,ದಾರಿ ತಪ್ಪುತ್ತ ಕೊರಗುತ್ತ ಇರುವುದೆ ವಿಧಿಯೆ!
ಝೆನ್ ವಿದ್ಯಾರ್ಥಿಗಳು ಕನಿಷ್ಠಪಕ್ಷ ಹತ್ತು ವರ್ಷ ಶಿಷ್ಯವೃತ್ತಿ ಮಾಡಿದ ಮೇಲಷ್ಟೆ ಇತರರಿಗೆ ಬೋಧಿಸುವ ಗುರುಗಳಾಗುತ್ತಾರೆ. ತೆನೋ ಎಂಬಾತ ತನ್ನ ಶಿಷ್ಯವೃತ್ತಿ ಮುಗಿಸಿ ಗುರುವಾಗಿ ಹಿರಿಯ ನಾನ್ ಇನ್ ಬಳಿಗೆ ಬಂದಿದ್ದ. ಅಂದು ಬಹಳ ಮಳೆ. ತೆನೋ ಹೊರ ಕೋಣೆಯಲ್ಲಿ ತನ್ನ ಮರದ ಚಪ್ಪಲಿಗಳನ್ನೂ ಕೊಡೆಯನ್ನೂ ಇಟ್ಟು ಒಳಬಂದು ನಾನ್ ಇನ್‌ಗೆ ನಮಸ್ಕರಿಸಿದ. “ನಿನ್ನ ಚಪ್ಪಲಿ ಮತ್ತು ಕೊಡೆ ಹೊರಗೆ ಬಿಟ್ಟು ಬಂದಿದ್ದೀಯೆ. ನಿನ್ನ ಕೊಡೆ ಚಪ್ಪಲಿಗಳ ಎಡಗಡೆಗೆ ಇದೆಯೋ, ಬಲಗಡೆಗೋ?” ಎಂದು ನಾನ್ ಇನ್ ಕೇಳಿದ.
ತೆನೋ ಗೊಂದಲಗೊಂಡ. ಪ್ರತಿಕ್ಷಣವೂ ಝೆನ್ ಎಚ್ಚರವನ್ನಿಟ್ಟುಕೊಳ್ಳುವುದು ತನಗೆ ಸಾಧ್ಯವಾಗಿಲ್ಲ ಎಂದು ಅರಿತ. ನಾನ್ ಇನ್ ಬಳಿ ಇನ್ನೂ ಆರು ವರ್ಷವಿದ್ದು ಪ್ರತಿಕ್ಷಣ ಝೆನ್ ಸಾಧಿಸಿದ.
[ಸಾಕ್ಷಾತ್ಕಾರ ಎಂದೋ ಒಮ್ಮೆ ಆಗಿ ಮುಗಿದುಬಿಡುವುದಲ್ಲ, ಪ್ರತಿಕ್ಷಣವೂ ಸಂಭವಿಸುತ್ತಿರಬೇಕು, ಅಲ್ಲವೇ?]
ಯಮಕೊಅ ತೆಶ್ಶು ಒಬ್ಬ ಕಿರಿಯ ವಿದ್ಯಾರ್ಥಿ. ಅನೇಕ ಗುರುಗಳನ್ನು ಭೇಟಿ ಮಾಡಿದ್ದ. ಒಮ್ಮೆ ಆತ ಶೊಕೊಕು ಊರಿನ ದುಕೌನ್ ನನ್ನು ಕಾಣಲೆಂದು ಹೋದ.
ತನ್ನ ಜ್ಞಾನವನ್ನು ತೋರಿಸಿಕೊಳ್ಳಬೇಕು ಅನ್ನಿಸಿತು. “ಮನಸ್ಸು ಎಂಬುದಿಲ್ಲ, ಬುದ್ಧ ಎಂಬುದು ಇಲ್ಲ, ಸಚರ, ಅಚರ ಇವೆಲ್ಲವೂ ಇಲ್ಲವೇ ಇಲ್ಲ. ಸುಖವಿಲ್ಲ, ದುಃಖವಿಲ್ಲ, ಶೂನ್ಯವೊಂದೇ ಸತ್ಯ. ಸಾಕ್ಷಾತ್ಕಾರವೂ ಇಲ್ಲ. ಗುರುವೂ ಇಲ್ಲ, ಶಿಷ್ಯನೂ ಇಲ್ಲ. ಕೊಡುವುದೆಂಬುದಿಲ್ಲ, ಸ್ವೀಕರಿಸುವುದೆಂಬುದಿಲ್ಲ.”
ಗುರು ದುಕೌನ್ ಹೊಗೆ ಬತ್ತಿ ಸೇದುತ್ತಿದ್ದ. ಕೊಂಚ ಹೊತ್ತು ಏನೂ ಮಾತನಾಡಲಿಲ್ಲ. ತಟ್ಟನೆದ್ದು ಅವನ ಕೆನ್ನೆಗೆ ಬಾರಿಸಿದ. ವಿದ್ಯಾರ್ಥಿಗೆ ಕೋಪ ಬಂದುಬಿಟ್ಟಿತು.
“ಏನೇನೂ ಇಲ್ಲ ಅನ್ನುವುದಾದರೆ ಈ ಕೋಪ ಎಲ್ಲಿಂದ ಬಂತು?” ಗುರು ಕೇಳಿದ.
[ನಮಗೆಲ್ಲ ಬಾಯಿ ಮಾತಿನ ವೇದಾಂತ ಗೊತ್ತು, ಅದು ಅನುಭವವಾಗಿ ಬಂದಿರುವುದಿಲ್ಲ, ಅಲ್ಲವೇ?]
ಝೆನ್‌ನ ಮಹಾನ್ ಗುರು ಚುಆಂಗ್ ತ್ಸು ಗೆ ಒಮ್ಮೆ ಕನಸು ಬಿತ್ತು. ಕನಸಿನಲ್ಲಿ ಅವನೊಂದು ಚಿಟ್ಟೆಯಾಗಿಬಿಟ್ಟಿದ್ದ. ಅತ್ತಿತ್ತ ಹಾರಾಡುತ್ತಿದ್ದ. ಕನಸು ಇದ್ದಷ್ಟು ಹೊತ್ತೂ ಅವನಿಗೆ ತಾನು ಚುಆಂಗ್ ಎಂಬುದು ಗೊತ್ತೇ ಇರಲಿಲ್ಲ. ಎಚ್ಚರವಾಯಿತು. ತಾನು ತನ್ನ ಕೋಣೆಯಲ್ಲಿ ಮಲಗಿರುವ ಚುಆನ್ ಎಂಬುದು ಮನಸ್ಸಿನಲ್ಲಿ ಮೂಡಿತು. ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಇದು: “ಚಿಟ್ಟೆಯಾದಂತೆ ಕನಸು ಕಂಡವನು ನಾನೋ ಅಥವ ಚಿಟ್ಟೆ ಈಗ ನಾನು ಚುಆನ್ ಎಂಬ ಕನಸು ಕಾಣುತ್ತಿದೆಯೋ?”
[ನಾವು ಕಾಣುತ್ತಿರುವುದು ಕನಸನ್ನೋ, ನಿಜವನ್ನೋ, ಯಾರಿಗೆ ಗೊತ್ತು!]
ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ.
ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು.
ಕೊಸೆನ್‌ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ ಪರಿಣತಿ ಪಡೆದಿದ್ದ. ಕೊಸೆನ್ ಮೊದಲ ಬಾರಿಗೆ ಅಕ್ಷರಗಳನ್ನು ಹಾಳೆಯ ಮೇಲೆ ಬರೆದಾಗ ಅವನೂ ಅಲ್ಲೇ ಇದ್ದ.
"ಗುರುವೇ, ಇದು ಚೆನ್ನಾಗಿಲ್ಲ" ಅಂದ.
ಗುರು ಮತ್ತೊಮ್ಮೆ ಬರೆದು "ಹೇಗಿದೆ?" ಎಂದು ಕೇಳಿದ.
"ಕೆಟ್ಟದಾಗಿದೆ, ಮೊದಲಿನದೇ ಎಷ್ಟೋ ವಾಸಿ" ಅಂದ ಶಿಷ್ಯ.
ಗುರು ತಾಳ್ಮೆಯಿಂದ ಮತ್ತೆ ಬರೆದ. ಶಿಷ್ಯನಿಗೆ ಅದೂ ಇಷ್ಟವಾಗಲಿಲ್ಲ. ಮತ್ತೆ ಬರೆದ. ಮತ್ತೆ ಚೆನ್ನಾಗಿಲ್ಲ ಅನ್ನುವ ಮಾತು ಕೇಳಿದ. ಹೀಗೇ ಎಂಬತ್ತನಾಲ್ಕು ಪ್ರಥಮ ಸೂತ್ರಗಳು ರಾಶಿಯಾಗಿ ಬಿದ್ದವು. ಶಿಷ್ಯ ಯಾವುದನ್ನೂ ಒಪ್ಪಲಿಲ್ಲ.
ವಿಮರ್ಶಕ ಶಿಷ್ಯ ಕೊಂಚ ಹೊತ್ತು ಹೊರಗೆ ಹೋಗಬೇಕಾಗಿ ಬಂತು. "ಅವನ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸಮಯ" ಎಂದುಕೊಂಡ ಗುರು ನಿರಾಳವಾದ ಮನಸ್ಸಿನಿಂದ ಸರಸರನೆ "ಪ್ರಥಮ ಸೂತ್ರ" ಬರೆದ.
ವಾಪಸ್ಸು ಬಂದ ಶಿಷ್ಯ "ಅದ್ಭುತ ಕಲಾಕೃತಿ" ಎಂದು ಉದ್ಗರಿಸಿದ.
[ಸದಾ ದೋಷಗಳನ್ನು ಹುಡುಕುವುದಲ್ಲ; ಎಲ್ಲವೂ ಹೀಗೇ ಇರತಕ್ಕದ್ದು ಎಂಬುದೂ ಅಲ್ಲ; ಇನ್ನೊಬ್ಬರ ಮೆಚ್ಚುಗೆ ಬಯಸುವುದೂ ಅಲ್ಲ; ನಿರಾಳವಾಗಿರುವುದು ಝೆನ್]
ಕೆನಿನ್ ದೇವಾಲಯದಲ್ಲಿದ್ದ ಝೆನ್ ಗುರುವಿನ ಹೆಸರು ಮೊಕೌರಿ. ಮೊಕೌರಿ ಎಂದರೆ ಸದ್ದಿಲ್ಲದ ಗುಡುಗು ಎಂದರ್ಥ. ಹನ್ನೆರಡು ವಯಸ್ಸಿನ ಪ್ರತಿಭಾವಂತ ಹುಡುಗ ಟೊಯೊ ಎಂಬಾತ ಅವನ ಬಳಿ ಶಿಷ್ಯನಾಗಿದ್ದ.
ಸ್ವಲ್ಪ ವಯಸ್ಸಾದ ಶಿಷ್ಯರು ದಿನವೂ ಬೆಳಗ್ಗೆ ಸಂಜೆ ಗುರುವಿನ ಬಳಿ ಬಂದು ಸಾನ್‌ಝೆನ್ ಪಡೆದುಕೊಳ್ಳುವುದನ್ನು ನೋಡುತ್ತಿದ್ದ. ಸಾನ್‌ಝೆನ್ ಎಂದರೆ ವೈಯಕ್ತಿಕ ಮಾರ್ಗದರ್ಶನ. ಗುರು ಒಬ್ಬರಿಗೂ ಅವರಿಗೆ ತಕ್ಕ ಮುಂಡಿಗೆಯನ್ನು ನೀಡುತ್ತಿದ್ದ. ಈ ಬೆಡಗಿನಂಥ ಮಾತುಗಳ ಮುಂಡಿಗೆಯನ್ನು ಕೋನ್ ಎನ್ನುತ್ತಾರೆ. ಟೊಯೊ ತನಗೂ ಇಂಥ ಒಂದು ಕೋನ್ ಹೇಳಿ ಎಂದು ಗುರುವನ್ನು ಕೇಳಿದ.
"ಸ್ವಲ್ಪ ಕಾಲ ತಾಳು, ನೀನಿನ್ನೂ ಚಿಕ್ಕವನು" ಎಂದ ಗುರು.
ಆದರೆ ಟೊಯೊನ ಒತ್ತಾಯ ಜಾಸ್ತಿಯಾಯಿತು. ಗುರು ಒಪ್ಪಿದ.
ಅವತ್ತು ಸಂಜೆ ಗುರುವಿನ ಕೋಣೆಯ ಹೊಸ್ತಿಲಲ್ಲಿ ನಿಂತು, ತಾನು ಬಂದಿರುವುದರ ಸೂಚನೆಯಾಗಿ ಗಂಟೆಯನ್ನು ಬಾರಿಸಿ, ಹೊಸ್ತಿಲಲ್ಲೇ ಮೂರು ಬಾರಿ ನಮಸ್ಕರಿಸಿ, ಒಳಗೆ ಬಂದು ಕುಳಿತ ಟಾಯೊ.
"ಎರಡು ಕೈ ತಟ್ಟಿದರೆ ಚಪ್ಪಾಳೆಯ ಸದ್ದು ಕೇಳುತ್ತದೆ. ನನಗೆ ಒಂದೇ ಕೈಯ ಚಪ್ಪಾಳೆ ಸದ್ದನ್ನು ತೋರಿಸು" ಎಂದ ಗುರು.
ಟೊಯೊ ಗುರುವಿಗೆ ನಮಸ್ಕಾರ ಮಾಡಿ ತನ್ನ ಕೋಣೆಗೆ ಹಿಂದಿರುಗಿದ. ಧ್ಯಾನಕ್ಕೆ ಕುಳಿತ. ಅವನ ಕೋಣೆಗೆ ಸಮೀಪದಲ್ಲಿದ್ದ ಗೇಶಾ ಗಣಿಕೆಯರ ಮನೆಯಿಂದ ಸಂಗೀತ ಕೇಳಿಸುತ್ತಿತ್ತು. "ಆಹಾ, ಒಂದು ಕೈ ಚಪ್ಪಾಳೆಯ ಸದ್ದು ಸಿಕ್ಕಿತು" ಎಂದುಕೊಂಡ ಟೊಯೊ.
ಮಾರನೆಯ ಒಂದು ಕೈಯ ಚಪ್ಪಾಳೆ ಸದ್ದು ಹೇಗಿರುತ್ತದೆ ಎಂದ ಗುರು. ಟೊಯೊ ಗೇಶಾ ಸಂಗೀತದ ಅನುಕರಣೆ ಮಾಡಿ ತೋರಿಸಿದ.
"ಅಲ್ಲ, ಅದು ಒಂದು ಕೈ ಚಪ್ಪಾಳೆ ಸದ್ದಲ್ಲ. ನಿನಗೆ ಏನೂ ಗೊತ್ತಿಲ್ಲ" ಎಂದ ಗುರು.
ಈ ಸಂಗೀತ ಧ್ಯಾನಕ್ಕೆ ತೊಂದರೆ ಮಾಡುತ್ತದೆಂದು ಟೊಯೊ ನಿಶ್ಶಬ್ದವಾದ ಜಾಗ ಹುಡುಕಿಕೊಂಡು ಹೊರಟ. "ಒಂದೇ ಕೈಯ ಚಪ್ಪಾಳೆ ಸದ್ದು ಹೇಗಿರಬಹುದು" ಎಂದು ಚಿಂತಿಸಿದ. ಎಲ್ಲೋ ನೀರು ತೊಟ್ಟಿಕ್ಕುವ ಸದ್ದು ಕೇಳಿಸಿತು. "ಉತ್ತರ ಸಿಕ್ಕಿತು" ಎಂದುಕೊಂಡ ಟೊಯೊ.
ಅಂದು ಗುರುವಿನ ಬಳಿ ಹೋದಾಗ ತೊಟ್ಟಿಕ್ಕುವ ನೀರಿನ ಸದ್ದನ್ನು ಅನುಕರಿಸಿ ತೋರಿಸಿದ.
"ಇದು ನೀರಿನ ಹನಿಗಳ ಸದ್ದು, ಒಂದು ಕೈ ಚಪ್ಪಾಳೆಯ ಸದ್ದಲ್ಲ. ಪ್ರಯತ್ನಪಡಬೇಕು ಇನ್ನೂ" ಎಂದ ಗುರು.
ಒಂದು ಕೈ ಚಪ್ಪಾಳೆಯ ಸದ್ದನ್ನು ಸಾಕ್ಷಾತ್ಕರಿಸಿಕೊಳ್ಳಲು ಧ್ಯಾನಕ್ಕೆ ಕೂತ ಟೊಯೊ. ಬೀಸುವ ಗಾಳಿಯ ಸದ್ದು ಕೇಳಿಸಿತು.
ಗುರು ಅಲ್ಲ ಎಂದ.
ಗೂಗೆಯ ಕೂಗಿನಂತೆ ಇದ್ದೀತೆ? ಅಲ್ಲ ಎಂದ ಗುರು.
ಮಿಡತೆಗಳ ಜಿಟಿ ಜಿಟಿ? ಅಲ್ಲ.
ಹತ್ತಿಪ್ಪತ್ತು ಬಾರಿ ಬೇರೆ ಬೇರೆ ಸದ್ದುಗಳನ್ನು ಕೇಳಿಸಿಕೊಂಡು, ಅದನ್ನೆಲ್ಲ ಮಾಡಿ ತೋರಿಸಿ ಅಲ್ಲ ಅನ್ನಿಸಿಕೊಂಡ.
ಒಂದು ಕೈಯ ಚಪ್ಪಾಳೆ ಸದ್ದನ್ನು ಆಲಿಸಲು ಧ್ಯಾನ ಮಾಡುತ್ತಾ ಒಂದು ವರ್ಷವೇ ಕಳೆಯಿತು. ಧ್ಯಾನಿಸುತ್ತಾ ಧ್ಯಾನಿಸುತ್ತಾ ಆಳಕ್ಕೆ ಇಳಿದು ಸದ್ದಿಲ್ಲದ ಸ್ಥಿತಿಗೆ ತಲುಪಿದ ಟೊಯೊ.
"ನಿಮಗೆ ತೋರಿಸುವುದಕ್ಕೆ ಯಾವ ಸದ್ದುಗಳೂ ಇಲ್ಲ. ಸದ್ದಿಲ್ಲದ ಸದ್ದಿನ ಸ್ಥಿತಿಗೆ ಹೋಗಿಬಿಟ್ಟಿದ್ದೇನೆ" ಎಂದ ಟೊಯೊ.
ಟೊಯೊಗೆ ಒಂದು ಕೈ ಚಪ್ಪಾಳೆಯ ಸಾಕ್ಷಾತ್ಕಾರವಾಗಿತ್ತು.
ಹಿಂದಿನ ಕಾಲದ ಜಪಾನಿನ ಜನ ರಾತ್ರಿಯ ಹೊತ್ತಿನಲ್ಲಿ ಬಿದಿರಿನ ಬುಟ್ಟಿಗೆ ತೆಳ್ಳನೆಯ ಹಾಳೆಯನ್ನು ಸುತ್ತಿ, ಅದರೊಳಗೆ ಒಂದು ದೀಪವಿಟ್ಟುಕೊಂಡು ಓಡಾಡುತ್ತಿದ್ದರು. ಕುರುಡನೊಬ್ಬ ತನ್ನ ಗೆಳೆಯನನ್ನು ನೋಡಲೆಂದು ಹೋಗಿದ್ದ. ರಾತ್ರಿಯಾಯಿತು. ಗೆಳೆಯ ಅವನ ಕೈಗೆ ಬಿದಿರು ಹಾಳೆಯ ದೀಪವನ್ನು ಕೊಟ್ಟ.
“ದೀಪ ನನಗೇಕೆ? ಹೇಗಿದ್ದರೂ ಕುರುಡ. ಹಗಲು ಇರುಳು ಎರಡೂ ಒಂದೇ ನನಗೆ.”
“ನಿನಗೆ ದೀಪ ಬೇಡವೆಂದು ಗೊತ್ತು. ಆದರೆ ಕತ್ತಲಲ್ಲಿ ಯಾರಾದರೂ ಬಂದು ನಿನಗೆ ಡಿಕ್ಕಿ ಹೊಡೆಯುವುದು ತಪ್ಪುತ್ತದೆ, ಇಟ್ಟುಕೋ” ಎಂದ ಗೆಳೆಯ.
ಕುರುಡ ಒಪ್ಪಿದ. ದೀಪ ಹಿಡಿದು ಹೊರಟ.
ಸ್ವಲ್ಪ ದೂರ ನಡೆಯುವಷ್ಟರಲ್ಲಿ ಯಾರೋ ಅಪರಿಚಿತ ಬಂದು ಡಿಕ್ಕಿ ಹೊಡೆದೇ ಬಿಟ್ಟ.
“ಸರಿಯಾಗಿ ನೋಡಿಕೊಂಡು ನಡೆಯಬಾರದೆ? ಕೈಯಲ್ಲಿರುವ ದೀಪ ಕಾಣಲಿಲ್ಲವೆ” ಎಂದು ಕುರುಡ ರೇಗಿದ.
“ನಿನ್ನ ಕೈಯಲ್ಲಿ ದೀಪವೇನೋ ಇದೆ. ಆದರೆ ಗೆಳೆಯಾ ಅದು ಆರಿಹೋಗಿದೆ” ಎಂದ ಅಪರಿಚಿತ.
ನಾವು ತಿಳಿವಳಿಕೆ ಎಂದು ತಿಳಿದಿರುವುದೆಲ್ಲ ಕುರುಡನ ಕೈಯಲ್ಲಿರುವ ಆರಿಹೋದ ದೀಪದಂಥದೇ?
ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.
ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.
ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.
ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.
ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ ಉತ್ತರ.
“ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?” ಎಂದು ಆ ಗುರು ಮತ್ತೆ ಕೇಳಿದ.
ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.
ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ.
"ಒಂದೇ ಕೈಯಿಂದ ಹುಟ್ಟುವ ಸದ್ದನ್ನು ಕೇಳಿಸಿಕೊ" ಎಂಬ ಮುಂಡಿಗೆಯನ್ನು ಗುರು ಅವನಿಗೆ ನೀಡಿದ. ಧ್ಯಾನದ ಮೂಲಕ ಉತ್ತರವನ್ನು ಕಂಡುಕೋ ಎಂದ.
ಶಿಷ್ಯ ಮೂರು ವರ್ಷಗಳನ್ನು ಗುರುವಿನೊಡನೆ ಕಳೆದ. ಆದರೂ ಅವನಿಗೆ ಉತ್ತರ ದೊರೆಯಲಿಲ್ಲ, ಗುರು ನೀಡಿದ್ದ ಪರೀಕ್ಷೆಯನ್ನು ದಾಟಲಿಲ್ಲ.
ಅವತ್ತು ರಾತ್ರಿ, ಕಣ್ಣಿನ ತುಂಬ ನೀರು ತುಂಬಿಕೊಂಡು, ನಾಚಿಕೆಯಿಂದ ತಲೆ ತಗ್ಗಿಸಿಕೊಂಡು, ಗುರುವಿಗೆ ಹೇಳಿದ-"ಗುರುವೇ, ನೀವು ಇತ್ತ ಸಮಸ್ಯೆಯನ್ನು ಪರಿಹರಿಸಲು ಆಗಲಿಲ್ಲ. ಸೋತು ನಮ್ಮೂರಿಗೆ ಹಿಂದಿರುಗುತ್ತಿದ್ದೇನೆ".
"ಇನ್ನೊಂದು ವಾರ ಇರು. ಸತತವಾಗಿ ಧ್ಯಾನ ಮಾಡು" ಎಮದ ಸುಯಿಒ.
ಅದೂ ಆಯಿತು. ಆದರೂ ಶಿಷ್ಯನಿಗೆ ಯಾವ ಸಾಕ್ಷಾತ್ಕಾರವೂ ಆಗಲಿಲ್ಲ.
"ಇನ್ನೊಂದು ವಾರ ಇರು" ಎಂದ ಗುರು.
ವಿಧೇಯತೆಯಿಂದ ಇನ್ನೂ ಒಂದು ವಾರ ಕಳೆದ ಶಿಷ್ಯ. ಫಲವೇನೂ ಸಿಗಲಿಲ್ಲ.
"ಇನ್ನೂ ಒಂದು ವಾರ ನೋಡು" ಎಂದ ಗುರು. ಮತ್ತೆ ಅದೇ ವಿಫಲತೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ಕಳಿಸಿಬಿಡಿ ಎಂದು ಶಿಷ್ಯ ಗೋಗರೆದ.
ಇನ್ನೈದು ದಿನ ಧ್ಯಾನಮಾಡಿ ನೋಡು ಎಂದ ಗುರು. ಮತ್ತೆ ಅದೇ ಹಾಡು.
ಗುರು ಹೇಳಿದ. "ಇನ್ನು ಮೂರು ದಿನ ಧ್ಯಾನಮಾಡು. ನಿನಗೆ ಸಾಕ್ಷಾತ್ಕಾರವಾಗದಿದ್ದರೆ ಹೋಗಿ ಪ್ರಾಣಕಳೆದುಕೋ".
ಎರಡನೆಯ ದಿನ ಶಿಷ್ಯನಿಗೆ ಸಾಕ್ಷಾತ್ಕಾರವಾಗಿತ್ತು.
ಅದೊಂದು ಝೆನ್ ದೇವಾಲಯ. ಅಲ್ಲಿನ ನಿವಾಸಿಗಳನ್ನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಸೋಲಿಸಿದ ಸಂನ್ಯಾಸಿಗೆ ಅಲ್ಲಿರಲು ಅವಕಾಶ ದೊರೆಯುತ್ತಿತ್ತು.
ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗಳಿದ್ದರು. ದೊಡ್ಡವನು ತುಂಬ ಓದಿಕೊಂಡಿದ್ದ, ಚಿಕ್ಕವನು ಮೂರ್ಖ. ಅವನಿಗೆ ಇದ್ದದ್ದು ಒಂದೇ ಕಣ್ಣು.
ಅಲೆಮಾರಿ ಸನ್ಯಾಸಿಯೊಬ್ಬ ಅಲ್ಲಿಗೆ ಬಂದ. ದೇವಾಲಯದಲ್ಲಿ ಉಳಿಯಲು ಅವಕಾಶ ಕೇಳಿದ. ದೊಡ್ಡ ಸನ್ಯಾಸಿ ಅಂದು ದಿನವೆಲ್ಲ ಓದಿ, ಬರೆದು, ವಾದ ಮಾಡಿ ಸುಸ್ತಾಗಿದ್ದ. ಆದ್ದರಿಂದ ಚಿಕ್ಕವನನ್ನು ಕರೆದು ನೀನೇ ವಾದ ಮಾಡು ಎಂದ. ಹುಷಾರು, ಮೌನ ವಾಗ್ವಾದವನ್ನು ಮಾಡುತ್ತೇನೆ ಎಂದು ಮೊದಲೇ ಹೇಳಿಬಿಡು ಎಂದು ಎಚ್ಚರಿಕೆಯನ್ನೂ ನೀಡಿದ.
ಚಿಕ್ಕ ಸನ್ಯಾಸಿ ಮತ್ತು ಅಲೆಮಾರಿ ಸನ್ಯಾಸಿ ಇಬ್ಬರೂ ದೇವಾಲಯದೊಳಗೆ ಹೋಗಿ ಮೌನ ವಾಗ್ವಾದಕ್ಕೆ ಕುಳಿತರು.
ಕೊಂಚ ಹೊತ್ತಿನ ನಂತರ ಅಲೆಮಾರಿ ಸನ್ಯಾಸಿ ವಾಪಸ್ಸು ಬಂದು ಹೇಳಿದ, “ನಿಮ್ಮ ದೇವಾಲಯದ ಚಿಕ್ಕ ಸನ್ಯಾಸಿ ಬಹಳ ಅದ್ಬುತವಾದ ಮನುಷ್ಯ, ನನ್ನನ್ನು ವಾದದಲ್ಲಿ ಸೋಲಿಸಿಬಿಟ್ಟ” ಎಂದು ಹೇಳಿದ.
“ಹೌದೆ? ನಿಮ್ಮ ಮೌನ ವಾಗ್ವಾದದಲ್ಲಿ ಯಾವ ವಿಚಾರವನ್ನು ಚರ್ಚಿಸಿದಿರಿ?” ಎಂದು ಹಿರಿಯ ಸನ್ಯಾಸಿ ಕೇಳಿದ.
ಅಲೆಮಾರಿ ಹೇಳಿದ: “ನಾನು ಮೊದಲು ಒಂದು ಬೆರಳು ತೋರಿಸಿದೆ. ಅದು ಪರಮಜ್ಞಾನವನ್ನು ಪಡೆದ ಬುದ್ಧನ ಅಖಂಡತೆಯ ಸಂಕೇತ. ಅದಕ್ಕೆ ಅವನು ಎರಡು ಬೆರಳು ತೋರಿಸಿದ. ಅದು ಬುದ್ಧ ಮತ್ತು ಅವನ ಬೋಧನೆಗಳನ್ನು ಸೂಚಿಸಿತು. ನಾನು ಮೂರು ಬೆರಳು ತೋರಿಸಿದೆ. ಅಂದರೆ ಬುದ್ಧ, ಅವನ ಚಿಂತನೆಗಳು ಮತ್ತು ಬುದ್ಧನ ಅನುಯಾಯಿಗಳು ಒಟ್ಟು ಮೂರು ಸಂಗತಿಗಳು ಎಂಬುದು ನನ್ನ ಅರ್ಥವಾಗಿತ್ತು. ಅವನು ತನ್ನ ಮುಷ್ಠಿ ಬಿಗಿಹಿಡಿದು ತೋರಿಸಿದ. ಅಂದರೆ ನಾನು ಹೇಳಿದ ಮೂರೂ ಸಂಗತಿಗಳು ಒಂದೇ ಆತ್ಮಜ್ಞಾನದ ಮೂಲದಿಂದ ಬಂದವು ಎಂದು ಸೂಚಿಸಿಬಿಟ್ಟ. ನಾನು ಸೋತೆ. ಇಲ್ಲಿರಲು ನನಗೆ ಹಕ್ಕಿಲ್ಲ. ಹೋಗುತ್ತೇನೆ” ಎಂದು ಹೇಳಿ ಅಲೆಮಾರಿ ಹೊರಟುಹೋದ.
“ಎಲ್ಲಿ ಆ ದುಷ್ಟ” ಎಂದು ಕಿರುಚುತ್ತಾ ಚಿಕ್ಕ ಸನ್ಯಾಸಿ ಬಂದ.
“ಯಾಕೆ, ಏನಾಯಿತು? ನೀನೇ ವಾದದಲ್ಲಿ ಗೆದ್ದೆಯಂತಲ್ಲ” ಎಂದು ಹಿರಿಯ ಸನ್ಯಾಸಿ ಕೇಳಿದ.
“ಗೆದ್ದದ್ದೂ ಇಲ್ಲ, ಎಂಥ ಮಣ್ಣೂ ಇಲ್ಲ. ಎಲ್ಲಿ ಅವನು? ಅವನನ್ನು ಹಿಡಿದು ಬಾರಿಸಬೇಕು” ಎಂದ ಚಿಕ್ಕ ಸನ್ಯಾಸಿ.
“ಮೌನವಾಗ್ವಾದದಲ್ಲಿ ಏನಾಯಿತು ಹೇಳು” ಎಂದ ಹಿರಿಯ ಸನ್ಯಾಸಿ.
ಚಿಕ್ಕ ಸನ್ಯಾಸಿ ಹೇಳಿದ: “ಅವನು ದೇವಾಲಯದಲ್ಲಿ ಕುಳಿತ ಕೂಡಲೆ ಒಂದು ಬೆರಳು ಎತ್ತಿ ತೋರಿಸಿದ. ನನಗೆ ಒಂದೇ ಕಣ್ಣು ಇದೆ ಎಂದು ಅಪಮಾನ ಮಾಡಿದ. ಅವನು ಅಪರಿಚಿತನಾದ್ದರಿಂದ, ಸೌಜನ್ಯ ತೋರಬೇಕೆಂದು ನನ್ನ ಎರಡು ಬೆರಳು ತೋರಿಸಿದೆ. ‘ನಿನಗೆ ಎರಡೂ ಕಣ್ಣು ಇವೆಯಲ್ಲ ಸಂತೋಷ’ ಎಂದು ಅದರ ಅರ್ಥ. ಅದಕ್ಕೆ ಆ ದುಷ್ಟ ಮೂರು ಬೆರಳು ತೋರಿಸಿದ. ‘ನಮ್ಮಿಬ್ಬರಿಗೂ ಸೇರಿ ಒಟ್ಟು ಮೂರೇ ಕಣ್ಣು’ ಎಂದು ಹೇಳಿದಂತೆ ಇತ್ತು. ನನಗೆ ಸಿಟ್ಟು ಬಂದು ಮುಷ್ಠಿ ತೋರಿಸಿದೆ. ಅವನು ಓಡಿ ಹೋದ. ಇಷ್ಟೇ ಆದದ್ದು ಎಂದ.
ಯಾವುದೇ ವಾದ ವಿವಾದ ಇರಲಿ. ಇನ್ನೊಬ್ಬರ ಮಾತನ್ನು ನಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳುತ್ತೇವೆ ಅಲ್ಲವೆ? ನಮ್ಮ ಅರ್ಥಕ್ಕೆ ತಕ್ಕಂತೆ ಸೋಲು, ಗೆಲುವು ಎಂದು ನಿರ್ಧಾರ ಮಾಡಿಕೊಳ್ಳುತ್ತೇವೆ. ವಾದ, ಸೋಲು, ಗೆಲುವು ಎಲ್ಲ ಅರ್ಥಹೀನವೇ!
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು.
ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.
ಸಂನ್ಯಾಸಿ ಮೀನು ತಿನ್ನುವಂತಿರಲಿಲ್ಲ. ಆದರೆ ಅಮ್ಮನಿಗೆ ಮೀನು ಎಂದರೆ ಆಸೆ. ಶೌನ್ ತಾಯಿಗೆಂದು ಮೀನು ತರುತ್ತಿದ್ದ. ಅದನ್ನು ಕಂಡು ಜನ ಹಾಸ್ಯಮಾಡುತ್ತಿದ್ದರು. ಶೌನ್ ಅದನ್ನು ಲೆಕ್ಕಕ್ಕೇ ಇಡುತ್ತಿರಲಿಲ್ಲ.
ತನ್ನ ಮಗನನ್ನು ಜನ ಲೇವಡಿ ಮಾಡುವುದು ಕಂಡು ತಾಯಿಗೆ ಬೇಸರವಾಯಿತು. “ನಾನೂ ಸಂನ್ಯಾಸಿನಿ ಆಗುತ್ತೇನೆ. ಸಸ್ಯಾಹಾರವನ್ನೇ ತೆಗೆದುಕೊಳ್ಳುತ್ತೇನೆ” ಎಂದಳು. ಸರಿ. ತಾಯಿ ಮಗ ಇಬ್ಬರೂ ಒಟ್ಟಿಗೇ ಅಧ್ಯಯನ ಮಾಡತೊಡಗಿದರು.
ಶೌನ್‌ಗೆ ಸಂಗೀತವೆಂದರೆ ಪ್ರಾಣ. ಬಹಳ ಚೆನ್ನಾಗಿ ವಾದ್ಯಗಳನ್ನು ನುಡಿಸುತ್ತಿದ್ದ. ಕೆಲವೊಮ್ಮೆ ಅವನ ತಾಯಿ ಕೂಡ ದನಿಗೂಡಿಸುತ್ತಿದ್ದಳು. ಹುಣ್ಣಿಮೆಯ ರಾತ್ರಿಗಳಂದು ಇಬ್ಬರೂ ಹಾಡುತ್ತಾ, ವಾದ್ಯ ನುಡಿಸುತ್ತಾ ಇದ್ದರು.
ಅಂಥ ಒಂದು ರಾತ್ರಿ ಅವರ ಮನೆಯ ಮುಂದೆ ಹೋಗುತ್ತಿದ್ದ ಹೆಂಗಸೊಬ್ಬಳು ಇವರ ಸಂಗೀತ ಕೇಳಿ ಮರುಳಾದಳು. ತನ್ನ ಮನೆಗೆ ಬಂದು ಹಾಡುವಂತೆ ಶೌನ್‌ನನ್ನು ಬೇಡಿಕೊಂಡಳು. ಅವನೂ ಒಪ್ಪಿದ.
ಕೆಲವು ದಿನಗಳಾದಮೇಲೆ ಆ ಹೆಂಗಸು ರಸ್ತೆಯಲ್ಲಿ ಎದುರಾದಳು. ಅವಳು ತೋರಿಸಿದ ಪ್ರೀತಿ, ವಿಶ್ವಾಸ, ಆತಿಥ್ಯಗಳಿಗೆ ಹೃದಯತುಂಬಿ ಕೃತಜ್ಞತೆ ಹೇಳಿದ ಶೌನ್. ಅದನ್ನ ಕಂಡು ಬೀದಿಯಲ್ಲಿ ಓಡಾಡುವ ಜನ ನಕ್ಕರು. ಆ ಹೆಂಗಸೊಬ್ಬ ವೇಶ್ಯೆ. ಅವಳಿಗೆ ಕೃತಜ್ಞತೆ ಹೇಳುವುದೇ ಎಂದು ಆಡಿಕೊಂಡರು.
ಒಮ್ಮೆ ಶೌನ್ ದೂರದ ಊರಿಗೆ ಉಪನ್ಯಾಸ ನೀಡಲು ಹೋಗಿದ್ದ. ಹಿಂದಿರುಗುವುದಕ್ಕೆ ಕೆಲವು ತಿಂಗಳೇ ಬೇಕಾದವು. ಅವನು ವಾಪಸ್ಸು ಬರುವ ಹೊತ್ತಿಗೆ ತಾಯಿ ತೀರಿಕೊಂಡಿದ್ದಳು. ಸುದ್ದಿ ತಿಳಿಸುವ ಬಗೆ ತಿಳಿಯದೆ ಅವನ ಗೆಳೆಯರು ಅಂತ್ಯಸಂಸ್ಕಾರಕ್ಕೆ ಸಿದ್ಧಮಾಡಿದ್ದರು. ಶವವನ್ನು ಆಗಲೇ ಪೆಟ್ಟಿಗೆಯಲ್ಲಿ ಇಟ್ಟಿದ್ದರು.
ಶೌನ್ ಸೀದಾ ಶವಪೆಟ್ಟಿಗೆಯ ಹತ್ತಿರಕ್ಕೆ ಹೋಗಿ, ಕೈಯಲ್ಲಿದ್ದ ದಂಡದಿಂದ ಒಮ್ಮೆ ಅದನ್ನು ತಟ್ಟಿ, “ಅಮ್ಮಾ ನಾನು ಬಂದಿದ್ದೇನೆ” ಎಂದ.
“ತುಂಬಾ ಸಂತೋಷವಪ್ಪಾ” ಎಂದಳು ತಾಯಿ.
“ನನಗೂ ಅಷ್ಟೇ ಅಮ್ಮಾ” ಎಂದ ಮಗ. ಸೇರಿದ್ದ ಜನರತ್ತ ತಿರುಗಿ “ಅಂತ್ಯಕ್ರಿಯೆಗಳು ಮುಗಿದವು, ನೀವಿನ್ನು ಮಣ್ಣುಮಾಡಬಹುದು” ಅಂದ.
ಶೌನ್‌ಗೆ ವಯಸ್ಸಾಯಿತು. ಕೊನೆಗಾಲ ಸಮೀಪಿಸಿತು ಎಂದವನಿಗೆ ತಿಳಿಯಿತು. ಅಂದು ಬೆಳಗ್ಗೆ ತನ್ನ ಶಿಷ್ಯರನ್ನೆಲ್ಲ ಕರೆದ. “ಇವತ್ತು ಮಧ್ಯಾಹ್ನ ನಾನು ಹೋಗುತ್ತೇನೆ” ಎಂದ. ಒಂದು ಪದ್ಯ ಬರೆದ.
ವರ್ಷ ಐವತ್ತಾರು ಹೋದವು
ಲೋಕದಲ್ಲಿ ನನ್ನ ದಾರಿ ನಾನೇ ಮಾಡಿಕೊಂಡು ಬದುಕಿದೆ
ಮಳೆ ನಿಂತಿದೆ ಮೋಡ ಕರಗಿದೆ
ನೀಲಿಯಾಕಾಶದಲ್ಲಿ ಹೊಳೆದಿದ್ದಾನೆ ಚಂದ್ರ.
ಶಿಷ್ಯರು ಅವನ ಸುತ್ತ ಸೇರಿ ಸೂತ್ರಗಳನ್ನು ಪಠಿಸತೊಡಗಿದರು. ಅವರು ಹಾಗೆ ಸೂತ್ರಗಳನ್ನು ಹೇಳುತ್ತಲಿದ್ದಾಗಲೇ ಶೌನ್ ಸತ್ತುಹೋದ.
ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:
ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.
ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.
ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ ಧೋರಣೆ ಇರುತ್ತದೆಯೋ ಅದೇ ಧೋರಣೆಯಲ್ಲಿ ಸ್ವಾಗತಿಸು. ಒಬ್ಬನೇ ಇರುವಾಗ ಅತಿಥಿ ಇದ್ದರೆ ಹೇಗೆ ಇರುತ್ತೀಯೋ ಹಾಗೆಯೇ ಇರು.
ಆಡುವ ಮಾತಿನ ಮೇಲೆ ನಿಗಾ ಇರಲಿ. ಏನು ಆಡುತ್ತೀಯೋ ಹಾಗೆಯೇ ನಡೆದುಕೋ.
ಅವಕಾಶ ಸಿಕ್ಕಿದಾಗ ಅದನ್ನು ಕಳೆದುಕೊಳ್ಳಬೇಡ. ಆದರೆ ಏನೇ ಮಾಡುವ ಮೊದಲು ಎರಡು ಬಾರಿ ಆಲೋಚಿಸು.
ಆಗಿ ಹೋದದ್ದರ ಬಗ್ಗೆ ಚಿಂತಿಸಬೇಡ. ಭವಿಷ್ಯವನ್ನು ನೋಡು.
ನಾಯಕನ ಹಾಗೆ ನಿರ್ಭಯವಾಗಿರು, ಮಕ್ಕಳ ಹಾಗೆ ಮನತುಂಬಿ ಪ್ರೀತಿಸು.
ಮಲಗುವಾಗ ಇದೇ ಕೊನೆಯ ನಿದ್ರೆ ಎಂಬಂತೆ ಮಲಗು. ಎದ್ದಾಗ ಹಳೆಯ ಚಪ್ಪಲಿ ಎಸೆದುಬಿಡುವ ಹಾಗೆ ತಟ್ಟನೆ ಹಾಸಿಗೆ ಬಿಟ್ಟೇಳು.
ಝೆನ್ ಸಂನ್ಯಾಸಿನಿ ಎಶುನ್ ಅರುವತ್ತು ವರ್ಷ ದಾಟಿದ್ದಳು. ಈ ಲೋಕವನ್ನು ಬಿಡುವ ಕಾಲ ಬಂದಿತ್ತು. ಶಿಷ್ಯರನ್ನೆಲ್ಲ ಕರೆದು ಅಂಗಳದಲ್ಲಿ ಸೌದೆಗಳನ್ನು ಜೋಡಿಸುವಂತೆ ಹೇಳಿದಳು.
ಸೌದೆಗಳ ನಡುವೆ ಸ್ಥಿರವಾಗಿ ಕುಳಿತು ಕಟ್ಟಿಗೆ ರಾಶಿಗೆ ಬೆಂಕಿ ಇಕ್ಕುವಂತೆ ಹೇಳಿದಳು. ಬೆಂಕಿ ಉರಿಯಿತು.
"ಬೆಂಕಿ ಸುಡುತ್ತಿಲ್ಲವೇ?" ಎಂದು ಸಂನ್ಯಾಸಿಯೊಬ್ಬ ಕೂಗಿ ಕೇಳಿದ.
"ನಿನ್ನಂಥ ಮೂರ್ಖನಿಗೆ ಮಾತ್ರ ಇಂಥ ಪ್ರಶ್ನೆ ಹೊಳೆಯುತ್ತದೆ" ಎಂದಳು ಎಶುನ್.
ಜ್ವಾಲೆ ಎದ್ದಿತು. ಎಶುನ್ ತೀರಿಹೋದಳು.
ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.
“ಅಯ್ಯೋ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ವೀಕಾಗಿದ್ದಳು. ಅವಳಿಗೆ ಸಿಗಬೇಕಾದ ಪುಣ್ಯವನ್ನು ಬೇರೆಯವರು ಕಿತ್ತುಕೊಂಡುಬಿಡುತ್ತಾರೆ. ಕೇವಲ ಅವಳಿಗಷ್ಟೇ ಲಾಭವಾಗುವಂಥ ಮಂತ್ರ ಹೇಳಿ” ಎಂದ ರೈತ.
“ಹಾಗಲ್ಲ, ಎಲ್ಲ ಜೀವಿಗಳಿಗೂ ಲೇಸು ಬಯಸುವುದು ಬೌದ್ಧ ಧರ್ಮದ ಉದ್ದೇಶ, ಅದಕ್ಕೇ ನಾವು ಮಂತ್ರಗಳನ್ನು ಹೇಳುತ್ತೇವೆ” ಎಂದು ಸಂನ್ಯಾಸಿ ವಿವರಿಸಿದ.
“ಉದ್ದೇಶವೇನೋ ಚೆನ್ನಾಗಿದೆ. ಆದರೆ ದಯವಿಟ್ಟು ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ. ನಮ್ಮ ಪಕ್ಕದ ಮನೆಯವನಿದ್ದಾನಲ್ಲ ಅವನು ಬಹಳ ದುಷ್ಟ, ನನಗೆ ತುಂಬ ತೊಂದರೆ ಕೊಟ್ಟಿದ್ದಾನೆ. ಅವನೊಬ್ಬನನ್ನು ಬಿಟ್ಟು ಉಳಿದ ಜೀವರಾಶಿಗಳಿಗೆಲ್ಲ ಒಳ್ಳೆಯದಾಗಲಿ ಎಂದು ಮಂತ್ರ ಹೇಳಿ” ಎಂದು ರೈತ ಕೋರಿಕೊಂಡ.
ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು ಟೆಕಿಸುಇ ಎಂದು ಬದಲಾಯಿಸಿಕೊಂಡ. ನೀರಿನ ಹನಿ ಎಂಬುದು ಈ ಮಾತಿನ ಅರ್ಥ. ಏನನ್ನೂ ವ್ಯರ್ಥ ಮಾಡದಿರುವುದು ಕೂಡ ಝೆನ್.