ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
ಸಂಸ್ಕೃತ ಭಾಷೆಯು ಪ್ರಾಚೀನವೂ, ವಿಸ್ತೃತವೂ, ಪರಿಷ್ಕೃತವೂ ಆಗಿರುವ ಭಾಷೆ. ಇದರಲ್ಲಿರುವ ವೈದಿಕ, ಲೌಕಿಕ, ಆಧ್ಯಾತ್ಮಿಕ, ಖಗೋಳ, ಆಯುರ್ವೇದ, ಮನೋವೈಜ್ಞಾನಿಕ ಹಾಗೂ ಮಾನವೀಯ ಸಾಹಿತ್ಯ ಭಂಡಾರವು ಅಪಾರ.
ಇದೆಲ್ಲಾ ಇರ್ಲಿ ಸ್ವಾಮಿ, ಹಳೇದು, ಶುದ್ಧ ಅಂತೆಲ್ಲಾ ಒಪ್ಪಿಕೊಳ್ಳೋಣ. ಆದರೆ ಇಂದು ಈ ಸಂಸ್ಕೃತ ಎಷ್ಟು ಪ್ರಸ್ತುತವಾಗಿದೆ? ಸಂಸ್ಕೃತದಲ್ಲಿರುವ ಎಲ್ಲ ಜ್ಞಾನವೂ ಈಗ ಎಲ್ಲ ಭಾಷೆಗಳಲ್ಲಿಯೂ ಲಭ್ಯ. ಹೀಗಿದ್ದೂ ಕಬ್ಬಿಣದ ಕಡಲೆಯಂತಿರುವ, ಶುಷ್ಕ ವ್ಯಾಕರಣ, ಕ್ಲಿಷ್ಟ ಪದಗಳಿಂದ ಕೂಡಿರುವ, ಸಂಧಿ ಸಮಾಸ ಛಂದಸ್ಸುಗಳಿಂದ ನಿಬಿಡವಾಗಿರುವ ಇದು ನಮಗೆ ಯಾಕೆ ಬೇಕು? ಭಾಷೆ ಎಂದರೆ ಅಭಿಪ್ರಾಯ, ಮಾಹಿತಿ ವಿನಿಮಯಕ್ಕೆ ಮಾಧ್ಯಮವಾಗಿ ಬಳಸುವ, ಅರ್ಥವುಳ್ಳ ವಾಕ್ಯ ಸಮುದಾಯ ತಾನೆ? ಅದಕ್ಕೆ ಕನ್ನಡ, ಹಿಂದಿ, ಇಂಗ್ಲೀಷ ಇವೆಲ್ಲಾ ಇರುವಾಗ ಮತ್ತೊಂದು ಭಾಷೆಯ ಹೊರೆ ಏಕೆ? ಎಂದು ಕೇಳುವವರು ಬಹಳ ಮಂದಿ. ಅಲ್ಲದೆ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮಾತ್ರ ಪ್ರಾಶಸ್ತ್ಯ, ಸ್ಥಾನ, ಸಂಸ್ಕೃತ ಕಲಿತರೆ ಉಪಯೋಗವಿಲ್ಲ, ಕೆಲಸ ಸಿಗುವುದಿಲ್ಲ, ಅಲ್ಲದೆ ಇದು ಒಂದು ವರ್ಗದ ಜನರಿಗೆ ಮಾತ್ರ ಅನುಕೂಲವಾಗುವ, ಒಂದು ವರ್ಗದವರು ಬಳಸುವ ಭಾಷೆ ಎನ್ನುವವರಿಗೇನು ಕಡಿಮೆಯಿಲ್ಲ.
ಆದರೆ ಈ ವಿಷಯ ಗಮನದಲ್ಲಿ ಇಟ್ಟುಕೊಳ್ಳಬೇಕು. ಸಂಸ್ಕೃತದ ಪ್ರಭಾವ, ಹಿಡಿತ ಅನೇಕ ಭಾರತೀಯ, ವಿದೇಶೀ ಭಾಷೆಗಳ ಮೇಲೂ ಇರುವುದರಿಂದ ಸಂಸ್ಕೃತ ಪದಗಳ ಪದಚ್ಛೇದ, ಅರ್ಥ , ಸಂಧಿ, ಸಮಾಸ ಇತ್ಯಾದಿಗಳನ್ನು ಕಲಿತವರು ಅವರವರ ಭಾಷೆಯನ್ನು ಸರಿಯಾಗಿ ನುಡಿಯುತ್ತಾರೆ, ಓದುತ್ತಾರೆ ಮತ್ತು ಬರೆಯುತ್ತಾರೆ ಎಂಬುದರಲ್ಲಿ ಇನ್ನೊಂದು ಮಾತಿಲ್ಲ. ಅವರ ಮಾತು, ಓದು, ಬರಹದಲ್ಲಿ ಒಂದು ಆಕರ್ಷಣೆ, ಮಾಧುರ್ಯ, ಸ್ವಷ್ಟತೆ ಇರುತ್ತದೆ. ಸಂಸ್ಕೃತವನ್ನು ಕಲಿಯಲು ಹಿಂದೇಟು ಹಾಕುವವರು ಮೊದಲು ಕೊಡುವ ಕಾರಣವೆಂದರೆ ಅದು ಕಷ್ಟ ಎಂದು. ಆದರೆ ಅದನ್ನು ಕಲಿಯಲು ಹಿಂಜರಿಯುವವರು ಅನಿವಾರ್ಯವಾಗಿ ಕನ್ನಡದಲ್ಲಿ ಹೇರಳವಾಗಿರುವ ಸಂಸ್ಕೃತ ಪದಗಳನ್ನು ತಪ್ಪಾಗಿ ಬಳಸುತ್ತಾರೆ. ಅದರಿಂದ ಕನ್ನಡವನ್ನು ಹಾಳುಗೆಡವುತ್ತಾರೆ.
ನಮ್ಮ ಮದುವೆಗೆ ’ಸಕುಟುಂಬ ಸಮೇತ’ ಬನ್ನಿ ಎಂದು ಬರೆಯುತ್ತರೆ. ಸಕುಟುಂಬ ಎಂದರೆ ಕುಟುಂಬ ಸಮೇತವೆಂದೇ ಅರ್ಥ. ಅದೇ ರೀತಿ ಜಯಂತ್ಯೋತ್ಸವ(ಜಯಂತ್ಯುತ್ಸವ), ಅನುಸೂಯಮ್ಮ(ಅನಸೂಯಮ್ಮ), ಗಾಯಿತ್ರಿ(ಗಾಯತ್ರಿ), ಶುಭಾಷಯ(ಶುಭಾಶಯ), ಕೋಟ್ಯಾಂತರ(ಕೋಟ್ಯಂತರ) ಇತ್ಯಾದಿ. ಅಜೀವ ಸದಸ್ಯ ಎಂದರೆ ಜೀವವಿಲ್ಲದ ಸದಸ್ಯ ಎಂದಾಗುತ್ತದೆ, ಆಜೀವ ಸದಸ್ಯ ಎಂದರೆ ಜೀವವಿರುವವರೆಗೂ ಸದಸ್ಯ ಎಂದಾಗುತ್ತದೆ. ಅನುಕೂಲ ಇಲ್ಲದಿರುವುದು ಅನನುಕೂಲವೇ ಹೊರತು ಅನಾನುಕೂಲವಲ್ಲ. ಇದೇ ರೀತಿ ಅ(ಆ)ಜಾನುಬಾಹು, ಜನಾರ್ದ(ರ್ಧ)ನ. ಹೀಗೆ ದಿನಬಳಕೆಯ ನೂರಾರು ಪದಗಳು ಸಂಸ್ಕೃತದಾಗಿದ್ದು ಅದನ್ನು ತಪ್ಪು ಬಳಸುವ ಬದಲು ಕನ್ನಡ ಪದಗಳನ್ನೇ ತದ್ಭವಗಳನ್ನೇ ಬಳಸಬಹುದು ಎಂಬ ಪ್ರಶ್ನೆಗೆ ಉತ್ತರವೇನೆಂದರೆ ಅಂತಹ ಪದಗಳನ್ನು ಅರ್ಥೈಸುವುದು ಇನ್ನೂ ಕಷ್ಟವಾಗುತ್ತದೆ ಎಂಬುದು. ಉದಾಹರಣೆಗೆ ಗೋಪಾಲಕೃಷ್ಟನನ್ನು ಗೋವಳಕಣ್ಣನೆಂದೂ , ಸಂಸ್ಕೃತಕ್ಕೆ ಸಕ್ಕದವೆಂದೂ ಹೇಳಬೇಕಾಗುತ್ತದೆ.
ಇನ್ನು ಸಂಸ್ಕೃತದಲ್ಲಿ ಪ್ರತಿಯೊಂದು ಪದವೂ ಕೂಡ ಅರ್ಥಬಾಹುಳ್ಯದಿಂದ ಕೂಡಿದೆ. ಅಷ್ಟು ಮಾತ್ರವಲ್ಲ ಆ ಪದಗಳನ್ನು ಕೇಳಿದ ಕೂಡಲೇ ಆ ಪದದ ಅಥವಾ ಹೆಸರುಳ್ಳವನ ದೇಶ, ವಂಶ, ಗುಣ, ಸ್ವಭಾವ ಎಲ್ಲಾ ಗೊತ್ತಾಗುತ್ತದೆ. ಉದಾ: ರಮಯತೇ ಇತಿ ರಾಮಃ(ರಮಿಸುವನೇ ರಾಮ), ಕೃಷ್ ಧಾತುವಿನಿಂದ ವ್ಯುತ್ಪನ್ನವಾದುದು ಕರ್ಷಯತಿ, ಅಂದರೆ ಆಕರ್ಷಿಸುವವನು ಕೃಷ್ಟ, ಶತ್ರುಘ್ನ ಶತ್ರುಗಳನ್ನು ನಾಶಮಾಡುವವನು, ದ್ರುಪದನ ಮಗಳು ದ್ರೌಪದಿ, ಅದೇ ರೀತಿ ಪಾಂಚಾಲಿ, ಸೌಮಿತ್ರಿ, ವೈನತೇಯ ಇತ್ಯಾದಿ. ’ಪಕ್ಷ’ ಅಂದರೆ ರೆಕ್ಕೆ ಇರುವಂತಹುದು ಪಕ್ಷಿ.
ಸಂಸ್ಕೃತದ ಕ್ಲಿಷ್ಟ ಪದಗಳ ಉಚ್ಛಾರಣೆಯಿಂದ ನಾಲಗೆ ಹರಿತವಾಗುತ್ತದೆ.
ಉದಾ: ಪ್ರಜ್ಞಾ, ಪ್ರದ್ಯುಮ್ನ, ವಾಂಛಿತ, ಸಂಜ್ಞಾ ಇತ್ಯಾದಿ.
ಒಂದು ಭಾಷೆಯ ಜ್ಞಾನ ಇನ್ನೊಂದು ಭಾಷೆಯ ಸ್ವಷ್ಟತೆಗೆ , ಸೊಗಡಿಗೆ, ಶುದ್ಧತೆಗೆ , ಬೆಳವಣಿಗೆಗೆ ಸಹಾಯಕವಾಗುವುದಾದಲ್ಲಿ, ನಾವು ನಮ್ಮ ಕನ್ನಡವನ್ನು ತಪ್ಪಿಲ್ಲದೆ ಬಳಸುವುದಕ್ಕೆ ಸಹಾಯಕವಾಗುವುದಾದಲ್ಲಿ ಸಂಸ್ಕೃತದ ಬಗ್ಗೆ ತಾತ್ಸಾರ, ಮಡಿವಂತಿಕೆ ತೋರಬೇಕೆ?
ಸಂಸ್ಕೃತವು ನಮ್ಮ ಭಾರತೀಯರ ಅಮೂಲ್ಯ ನಿಧಿ. ಇದನ್ನು ಉಳಿಸುವುದು, ಬೆಳೆಸುವುದು, ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಲಿ.
ಲೇಖನ, ಮಾಹಿತಿ ಕೃಪೆ: ಕೆ.ಜಿ.ಬಿ ಮೇಸ್ಟ್ರು

- vikashegde ರವರ ಬ್ಲಾಗ್
- Login or register to post comments
- 477 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
ವಿಕಾಸ್,
ಲೇಖನ ಓದಿ ತುಂಬಾ ಸಂತೋಷವಾಯಿತು. ಕನ್ನಡದ ನಂತರ ನನಗೆ ಬಹಳ ಪ್ರಿಯವಾದ ಭಾಷೆ ಸಂಸ್ಕೃತ. ಸಂಸ್ಕೃತ ಕಲಿತವರಿಗೆ ಯಾವ ಭಾಷೆಯು ಬಹಳ ಸುಲಭವಾಗಿ ಅರ್ಥವಾಗುತ್ತದೆ. ಯಾಕೆಂದರೆ ಬಹಳಷ್ಟು ಭಾಷೆಗೆ ಮೂಲ ಸಂಸ್ಕೃತವೇ. ಇಂಗ್ಲೀಷ್ ಭಾಷೆಯ ಅನೇಕ ಶಬ್ದ ಕೂಡ.........ಪಿತಾ- ಫಾದರ್, ಮಾತಾ- ಮದರ್ ಭ್ರಾತಾ- ಬ್ರದರ್, ಇತ್ಯಾದಿ.....
ಹೊಸವರುಷದ ಶುಭಾಶಯಗಳು.
ಶೀಲಾ.
ಉ: ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
adbhuta lekhana vikaas.
samskruta kalitare jnaanodayavaaguttade.
ಉ: ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
1. ಸಕ್ಕದದಲ್ಲಿರುವ ಅರಿವು, ವಿಚಾರಗಳಿಗೆ ಅದನ್ನು ಕಲಿಯೋಣ. ಮತ್ತು ಅದರಲ್ಲಿರುವ ಒಳ್ಳೆ ತಿರುಳುಗಳನ್ನು ಕನ್ನಡಕ್ಕೂ ಬೇಕಾದರೂ ತರೋಣ ಆದರೆ ಕನ್ನಡ ಯಾವುದು, ಸಕ್ಕದ ಯಾವುದು ಅದನ್ನ ಬಳಸುವುದು ಹೇಗೆ ಎಂಬುದನ್ನು ಅರಿತು ಬಳಸೋಣ.
೨. ಸಕ್ಕದ ಹಲವು ನುಡಿಗಳಿಗೆ ತಾಯಿಯಾಗಿರಬಹುದು ಆದರೆ ಕನ್ನಡಕ್ಕೆ ಅದು ತಾಯಿ ಅಂತಾ ಯಾರು ಇದುವರೆವಿಗೂ ತೋರಿಸಿಲ್ಲ.
೩. ನಮ್ಮ ಕವಿರಾಜಮಾರ್ಗದ ಸಿರಿವಿಜಯನು ಕೂಡ ಕನ್ನಡ, ಸಕ್ಕದ ಕೂಡಿ ಜೋಡುಪದಗಳನ್ನು( ಸಮಾಸಗಳನ್ನು) ಮಾಡಬಾರದು ಎಂದು ಹೇಳಿದ್ದಾನೆ, ಮಾಡಿದರೆ ಬಿಸಿಹಾಲಿಗೆ ಮಜ್ಜಿಗೆ ಹನಿಗಳನ್ನು ಹಾಕಿದಾಗೆ ಅಂತ ಹೇಳಿದ್ದನೆ.
ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್
ಹಲವು ಮಂದಿಗೆ ಕನ್ನಡವು ಸಕ್ಕದದಂತೆ ಇರ್ಬೇಕು ಇಲ್ಲದಿದ್ದರೆ ಅದು ಕನ್ನಡದ ಕೊರತೆ ಎಂದು ಬಗೆಯುತ್ತಾರೆ. ಇದು ದೊಡ್ಡ ತಪ್ಪು. ಕನ್ನಡದಲ್ಲಿರುವ ಕೆಲವು ನುಡಿ ಮೇಲ್ಮೆಗಳು ಸಕ್ಕದದಿಲ್ಲ ಹಾಗಂತ ಸಕ್ಕದ ಕೀಳು ಅಂತ ಹೇಳಕಾಗುತ್ತಾ? ಇಲ್ಲ. ಕನ್ನಡವೇ ಬೇರೆ, ಸಕ್ಕದವೇ ಬೇರೆ . ಅವಕ್ಕೆ ಅವುಗಳದೇ ಆದ ಮೇಲ್ಮೆ, ಕೊರತೆಗಳು ಇವೆ. ಅವುಗಳನ್ನು ಅರಿತು ಮಟ್ಟವಾದ ಮನಸ್ಸಿನಿಂದ ಉಂಕಿಸೋಣ.
ಇನ್ನೊಂದು ತಪ್ಪು ತಿಳುವಳಿಕೆ, ಕನ್ನಡದಲ್ಲಿ ಒರೆಸಿರಿ( ಶಬ್ದ ಸಂಪತ್ತು) ಸಕ್ದದದಶ್ಟು ಇಲ್ಲ ಅಂತ ಕನ್ನಡವನ್ನು ಸರಿಯಾಗಿ ತಿಳಿಯದ/ಓದಿರದ ಮಂದಿ ಹೇಳ್ತಾರೆ. ಆದರೆ ಕನ್ನಡದ ಕಬ್ಬಗಳನ್ನು ಮತ್ತು ಜನಪದವನ್ನು ಓದುವುದರಿಂದ ನಮಗೆ ಹಲವು ಕನ್ನಡದೇ ಆದ ಸಲೀಸಾದ ಒರೆಗಳು ಸಿಗುತ್ತವೆ. ನಮಗೆ ಅದನ್ನು ಹುಡುಕುವ ಮನಸ್ಸು ಬೇಕು. ಅಶ್ಟೆ
ಸಕ್ದದ ಉಲಿಯುವುದರಿಂದ ನಾಲಿಗೆ 'ಶುದ್ದ'ವಾಗುತ್ತದೆ ಎಂಬ ಬ್ರಮೆಗಳನ್ನು ಬಿಡೋಣ. ಮತ್ತು ಸಕ್ಕದದಲ್ಲಿರುವ ಒಳ್ಳೆ ವಿಶ್ಯಗಳನ್ನು ( ಯೋಗ, ಅಲಂಕಾರ, ಧರ್ಮ) ಬರಮಾಡಿಕೊಳ್ಳೋಣ.
ನನ್ನ ಹೇಳಿಕೆಯ ತಿರುಳಿಶ್ಟೆ. ಸಕ್ಕದದ ಅರಿವು ಹೇಗೆ ಪಡೆದು ಹೇಗೆ ಅದನ್ನ ಕನ್ನಡವನ್ನು ಕಬ್ಬಿಣದ ಕಡಲೆ ಮಾಡದೆ ಬಳಸಬಹುದು ಎಂಬುದರ ಬಗ್ಗೆ ಉಂಕಿಸಿ ಬಳಸೋಣ.(ಈ ದೆಸೆಯಲ್ಲಿ ಸಂಪದದಲ್ಲಿ ಒಂದಿಶ್ಟು ಮಂದಿ ಬರೆದಿದ್ದಾರೆ).
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
"ಶುದ್ಧ ಅಂತೆಲ್ಲಾ ಒಪ್ಪಿಕೊಳ್ಳೋಣ"
ಹೌದೌದು ಸಾಗರದಷ್ಟೇ ಶುದ್ಧ!
ಸಂಸ್ಕೃತ ಕಲಿತರೆ, ಕನ್ನಡಕ್ಕಿಂತ ಸಂಸ್ಕೃತಕ್ಕೇ ಒಳ್ಳೇದು... ಪಾಪ ಹೆಣಕ್ಕೆ ಜೀವ ಬರ್ತದೆ!
ಇನ್ನು ಇಲ್ಲಿ ಮಂತಿಖ್ ಮಾತುಗಳಿಗೆ zರಾ ಕೂಡ ಬೆಲೆ ಇರಲ್ಲ...
ಇನ್ನು ಕುಟುಂಬ ಒರೆ ಹುಟ್ಟು ಸಂಸ್ಕೃತ ಮೂಲದ್ದೇ ಅಲ್ಲ.. ಅಂತ ಪಾಪಾ.. ಈ ದೊಡ್ಡ ಮನ್ಸರ ಮಾತು...
http://dsal.uchicago.edu/cgi-bin/philologic/getobject.pl?c.0:1:1662.burr...
ಹೇಗೆ ನಮ್ಮ ಸನ್ಮಾನ್ಯ ವಿಕಾಸ ಹೆಗಡೆಯವರಿಗೆ ಊ "ಲೇಖನ, ಮಾಹಿತಿ ಕೃಪೆ: ಕೆ.ಜಿ.ಬಿ ಮೇಸ್ಟ್ರು" ಇವರ ಮಾತುಗಳ ಮೇಲೆ ಗೌರವವೋ, ಹಾಗೇ ಪ್ರಪಂಚದಲ್ಲೀ ದ್ರಾವಿಡ ನುಡಿ ಬಗ್ಗೆ ನಡೆದ ಆರಯ್ಯಲ್ಲಿ ಪೆಂಪಾಂತರಾದ Burrow ಮತ್ತು Emenau ಮೇಲೆ ಲೋಕದ ನಂಬಿಕೆ..
ಹಾಗೆ ಪಾಪಾ Cadwellನ ವಾದವನ್ನು ಉಗಿಯಲು ಹೋಗಿ ಮುಗ್ಗರಿಸಿದ, ಮಹಾತ್ಮರ ಪಡೆ, ಇನ್ನು ತಮ್ಮ ಸತತ ಪರಿಶ್ರಮದಿಂದ ಕೃಷ್ಣನೀತಿ ಅನುಸರಿಸಿದರೂ...
ವಿಕಾಸ ಹೆಗೆಡೆಯವರ ಮಹಾಲ್ಲೇಖನ, "ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು" ಈ ಮಾತನು ತೋರಿಸಿವಲ್ಲಿ ಸಪ್ಪೆಯಾಗಿದೆ... ಎರವಲು-ಒರೆಗಳ ಬಗ್ಗೆ ಹೇಳುವುದಾದರೆ...
ಕನ್ನಡಕ್ಕೆ ದಾಸ್ತಾನು, ತಾಹಶೀಲ್ದಾರ, ತಾಲ್ಲೂಕು, ಜಿಲ್ಲೆ, ಮಹಬ್ಬತ್, ಖದ್ದು, ತಯಾರು, ಜಲ್ದಿ, ಜಾಸ್ತಿ ಕೊಟ್ಟು "ಪಾರಸೀ ಕಲಿತರೆ ಕನ್ನಡಕ್ಕೇ ಒಳ್ಳೆಯದು" ಅಂತ ಒಂದು ಮಾಹಾಲ್ಲೇಖನ ಕೊರೆಯಬೋದು!
ಇರಲಿ! ಗಾಳಿಬುಗ್ಗೆಯನ್ನು ನೋಡಿ, ಹಾರುವ ದೊಡ್ಡಬೆಟ್ಟ ಎಂದಂತಾಯ್ತು!
ಉ: ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
ಯಾವುದೇ ಭಾಷೆ , ಒಳ್ಳೆಯದು, ಕೆಟ್ಟದ್ದು, ಸತ್ತದ್ದು , ಬದುಕಿದ್ದು ಅಂತ ಇಲ್ಲ . ಅದು ಕೇವಲ ಅವರವರ ಅಭಿಪ್ರಾಯ . ಎಲ್ಲರಿಗೂ ಹುಟ್ಟುತ್ತಲೇ ಒಂದು ಹುಟ್ಟು ಭಾಷೆ ನಿಸರ್ಗದತ್ತವಾಗಿ ಇದ್ದೇ ಇದೆ . ಅವರಿಗೆ ಅದು ತಾಯಿ ಭಾಷೆ . ಅದು ಆಯಾ ಭಾಷಿಕರಿಗೆ ಸಹಜವೂ ಹೌದು , ಸುಲಭವೂ ಹೌದು . ಕಲಿಯಲು ಆಸಕ್ತಿ ,ಶಕ್ತಿ ಇದ್ದರೆ ಯಾವುದೇ ಭಾಷೆಯನ್ನು ಕಲಿತರೂ ನಷ್ವವಂತೂ ಇಲ್ಲ , ಕಲಿತ ಭಾಷೆಯ ಸಾಹಿತ್ಯ ಜ್ಝಾನ ಇವೆಲ್ಲಾ ಕರಗತವಾಗುತ್ತವೆ . ಪ್ರತಿಯೊಂದು ಭಾಷೆಗೂ ಅದರದೇ ಆದ ಚಂದ , ಲಯ , ಮಾಧುರ್ಯ, ಶಿಷ್ಟತೆ, ಶಕ್ತಿ ಎಲ್ಲ ಇರುತ್ತದೆ .ಕಲಿಯಲು ಇಷ್ಟವಿಲ್ಲದಿದ್ದರೆ ಅವರವರ ಮಾತೃ ಭಾಷೆ ಅವರವರಿಗೆ ಇದ್ದೇ ಇದೆಯಲ್ಲ .