ನೆಲದ ಮೇಲೆ ಮಲಗುವುದು
ಬ್ಲಾಗಿಸಿ ಬಹಳ ದಿನಗಳಾಗಿದ್ದವು. ಏನಪ್ಪಾ ಬ್ಲಾಗೋದು (ವೈಯಾಕರಣಿಗೆ ಏನನಪ್ಪಾ ಬ್ಲಾಗ್ಸೋದು) ಅಂತಿರುವಾಗ ಹೊಳೆಯಿತು ನೋಡಿ ಒಂದು ಒಳ್ಳೆಯ ವಿಷಯ. ಮೊನ್ನೆ ಅಂದರೆ ಮಂಗಳವಾರ ಹೀಗೊಂದು ಪ್ರಸಂಗ ನಡೆಯಿತು ನಮ್ಮನೆಯಲ್ಲಿ.
ನಮ್ಮಮ್ಮ "ಪ್ರೀತಿ ಇಲ್ಲದ ಮೇಲೆ" ನೋಡುತ್ತಿದ್ದಾಗ ನಾನು ಮಲಗಲು ಅಣಿಯಾಗುತ್ತಿದ್ದೆ. ಆಗ ಯಪ್ಪಾ ಸಖತ್ ಸೆಖೆ ನಾನಂತು ನೆಲದ ಮೇಲೆ ಮಲಗುತ್ತೇನೆ ಎಂದದ್ದಕ್ಕೆ ನಮ್ಮಮ್ಮ, ನೆಲದ ಮೇಲೆ ಮಲಗಬೇಡ, ನೆಲದ ತನ್ಸು ಮೈಗ್ಹತ್ತತ್ತೆ. ಚಾಪೆ ಮೇಲೆ ಮಲಗು ಅಂದರು.
ಅರೆ ತನ್ಸು ಏನಿದು ತನ್ಸು ಅಂತ ತಲೆ ಕೆರೆದುಕೊಳ್ಳುತ್ತಿದ್ದೀರಾ..ತನ್ಸು ಅಂದರೆ ಏನು ಅಂತ ನಂಗೂ ಗೊತ್ತಿಲ್ಲ. ತನ್ಸು ಎಂಬ ಪದವನ್ನು ನಾನು ಕೇಳಿದ್ದು ಅಂದೇ ಮೊದಲು. ಏನು ಏನದು ತನ್ಸು ಅಂತ ಕೇಳಿದ್ದಕ್ಕೆ ನಮ್ಮಮ್ಮ ನೆಲದ ಮೇಲೆ ಮಲಗಬೇಡ ತಾಮಸ ಗುಣ ಬರತ್ತೆ, ಮೈ ದಪ್ಪ ಆಗತ್ತೆ ಅಂದ್ರು. ಆದರೆ ತನ್ಸು ಪದದ ಮೂಲ ತಿಳಿಯಲಿಲ್ಲ. ಬಹುಶಃ ನಮ್ಮಮ್ಮ ಚಿಕ್ಕವರಿದ್ದಾಗ ಈ ತನ್ಸು ಪದವನ್ನು ಯಥೇಚ್ಛವಾಗಿ ಎಲ್ಲರೂ ಬಳಸುತ್ತಿದ್ದರು ಎನಿಸುತ್ತದೆ. ಕನ್ನಡವಲ್ಲದೇ ಬೇರೆ ಯಾವ ಭಾಷೆಯೂ ತಿಳಿಯದ(ಪ್ರಶ್ನಾರ್ಥಕ) ನಮ್ಮಮ್ಮನ ಬಾಯಿಂದ ಅದ್ಹೇಗೆ ಆ ಪದ ಬಂತು ಅಂತ ಇನ್ನೂ ತಿಳಿದಿಲ್ಲ. ನಿಮಗಾರಿಗಾದರು ಈ ತನ್ಸು ಪದ ತಿಳಿದಿದ್ದರೆ ನಮಗೂ ತಿಳಿಸಿಕೊಡಿ.
ಈ ತನ್ಸು ಪದ ನಮ್ಮಮ್ಮನ ಬಾಯಿಂದ ಬಂದ ತಪ್ಪು ಪದ ಅಂತ ನನಗನಿಸುತ್ತಿಲ್ಲ. ಕನ್ನಡ ವ್ಯಾಕರಣದ ಮೇಲೆ ಹಿಡಿತವಿರುವವರು ದಯವಿಟ್ಟು ಹೆಚ್ಚಿನ ಮಾಹಿತಿ ಕೊಡಿ.

- Sunil Jayaprakash ರವರ ಬ್ಲಾಗ್
- Login or register to post comments
- 989 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ತಣಿಸು = ತನ್ಸು
ನೆಲದ ಮೇಲೆ ಮಲಗಿದರೆ ಮೈ ದಪ್ಪ ಆಗೋದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಥಂಡಿ ಆಗೋದಂತೂ ಗ್ಯಾರಂಟಿ. ಇದರ ಅನುಭವ ನನಗೆ ಆಗಿದೆ. ಸೆಖೆಗಾಲದಲ್ಲೂ ಥಂಡಿ ಆಗೋದು ಗೊತ್ತಲ್ವಾ?
ನಾನೂ ತನ್ಸು ಪದ ಕೇಳಿರಲಿಲ್ಲ. ಅದು ತಣಿಸು ಅನ್ನುವುದರ ರೂಪ ಇರಬಹುದೇನೋ. ಅದೂ ಅಲ್ಲದೇ ನೆಲದ ಮೇಲೆ ಮಲಗಿದರೆ ಮೈ ಕೈ ನೋವು ಬರತ್ತೆ. ಚಾಪೆ ಮೇಲೆ ಅಥವಾ ಒಂದು ಬಟ್ಟೆಯ ಮೇಲೆ (ಬೆಡ್‍ಶೀಟ್) ಮಲಗಿದರೆ ಒಳಿತು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಬರಿನೆಲದ ಮೇಲೆ ಮಲಗುವುದು.
ನನಗೆ ತಿಳಿದಂತೆ, ಮೈಸೂರಿನ ಕಡೆ(ಕಾವೇರಿ ಸೀಮೆ, ದಕ್ಷಿಣ ಕರ್ನಾಟಕದ ಬಯಲು ಸೀಮೆ) ನೆಲದ ಮಲಗಿದರೆ ಸೆಳೆತ ಬರುವುದು. "ಸೆಳೆತ" ಇದು ಒಂದು ವಾಯುದೋಷ. ಈ ಪ್ರದೇಶದಲ್ಲಿ ರಾತ್ರಿಹೊತ್ತು ತಾಪಮಾನ, ದಿನದ ತಾಪಮಾನಕ್ಕಿಂತ ಅತಿಕಡಮೆ ಇರುವುದು.
"ಸೆಳೆತಕ್ಕೆ" ಆಂಗ್ಲಪದವು ನನಗೆ ತಿಳಿಯದು.
ನಾನು ಬಳ್ಳಾರಿಗೆ ನನ್ನ ಗೆಳಯೆನ ಮನೆಗೆ ಹೋದಾಗ, ನಾನು ಗಮನಿಸಿದ್ದು, ಮಲಗುವ ಮೊದಲು ನೆಲವನ್ನು ಸಾರಿಸಿ ಎಲ್ಲರು ನೆಲದ ಮೇಲೆ ಮಲಗಿದರು.
ನನ್ನ ಪ್ರಕಾರ ಇದು ವಾತಾವರಣಗೆ(ವಾತ+ಆವರಣ, ಸುತ್ತಲಿನ ಹವೆ) ಸಂಬಂಧಪಟ್ಟಿದ್ದು.
ಈ ರೀತಿಯೆ, ಮಲೆನಾಡಿನಲ್ಲಿ ಕೂಡ ಜನರು ಬರಿನೆಲದ ಮೇಲೆ ಮಲಗರು, ಎಂದು ನಾನು ತಿಳಿದಿರುವೆನು.
ಬ್ಲಾಗಿಸು, ಬ್ಲಾಗು.
blog : a shared on-line journal where people can post diary entries about their personal experiences and hobbies.
ಇದಕ್ಕೆ ಸಮಾನವಾದ ಕನ್ನಡಪದ ಮಾಡಲಾಗದೆ?..
"ಸ್ವವಿಷಯಲೇಖ(ನ)" ಎಂದು ಸಂಸ್ಕೃತಪದವು ನನಗೆ ಹೊಳೆಯಿತು.
Re: ನೆಲದ ಮೇಲೆ ಮಲಗುವುದು
ಬ್ಲಾಗಿಸಿ ಬಹಳ ದಿನಗಳಾಗಿದ್ದವು. ಏನಪ್ಪಾ ಬ್ಲಾಗೋದು (ವೈಯಾಕರಣಿಗೆ ಏನನಪ್ಪಾ ಬ್ಲಾಗ್ಸೋದು) ಅಂತಿರುವಾಗ ...
ಸುನೀಲ್,
ಬ್ಲಾಗು, ಬ್ಲಾಗೋದು, ಬ್ಲಾಗಿ... ಪ್ರಯೋಗಗಳೇ ಸರಿಯೆನಿಸುತ್ತದೆ. ನೀವು ಬ್ಲಾಗುವುದು, ನೀವು ಬ್ಲಾಗಿದ್ದನ್ನು ಓದಿ ಮೆಚ್ಚಿ ಟೀಕೆ ಟಿಪ್ಪಣಿ ಬರೆದು ತಿಳಿಸಿ ನಿಮ್ಮಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿ ನಾವೆಲ್ಲ ನಿಮ್ಮಿಂದ ಬ್ಲಾಗಿಸುವುದು! ಈಗ ಬಹುಶಃ ನಿಮಗೆ ಬ್ಲಾಗು/ಬ್ಲಾಗಿಸು ಗಳ ವ್ಯತ್ಯಾಸ ಸ್ಪಷ್ಟವಾಗಿರಬಹುದು.
'ಬ್ಲಾಗುವಿಕೆಗಿಂತನ್ಯ ತಪವು ಇಲ್ಲ... ಸ್ವಂತ ಅನುಭವಕಿಂತ ಬೇರೆ ನೆಪವು ಇಲ್ಲ...' (personal experiences, anecdotes are best contents for blogs)
'ಬ್ಲಾಗಿ, ಬಳುಕಿ, ತುಂಬಿ ತುಳುಕಿ!'
- ಇವು ಬ್ಲಾಗುವಿಕೆಯ ಬಗ್ಗೆ ನನ್ನ ಹೊಸ ಚಾಟೋಕ್ತಿಗಳು.
ಇತಿ
ಶ್ರೀವತ್ಸ ಜೋಶಿ
Re: ನೆಲದ ಮೇಲೆ ಮಲಗುವುದು
ಬ್ಲಾಗು, ಬ್ಲಾಗೋದು, ಬ್ಲಾಗಿ... ಪ್ರಯೋಗಗಳೇ ಸರಿಯೆನಿಸುತ್ತದೆ. ನೀವು ಬ್ಲಾಗುವುದು,
ಇತಿ
ಶ್ರೀವತ್ಸ ಜೋಶಿ
ನೀವು ಬ್ಲಾಗಿಸಿ, ನಾವು ಭಾಗಿಸ್ತೀವಿ. ಜೋಶಿ ಪನ್‍ಡಿತರ ಮಾತುಗಳಿಗೆ ತಲೆಬಾಗಿಸೋಣ.
ಬ್ಲಾಗ: ಬ್ಲಾಗೌ, ಬ್ಲಾಗಾ:
Re: ನೆಲದ ಮೇಲೆ ಮಲಗುವುದು
ಸ್ವಾಮೀ, 'ತಲೆ ಬಾಗೋಣ' ಅಂದರೆ ನೀವೇ ನಿಮ್ಮ ತಲೆಯನ್ನು ಬಾಗುವುದು. 'ತಲೆ ಬಾಗಿಸೋಣ' ಅಂದರೆ ಇನ್ನೊಬ್ಬರ ತಲೆಯನ್ನು ಬಾಗಿಸುವುದು!
ಈ ಅರ್ಥದಲ್ಲೇ ನಾನು ಸುನೀಲ್ ಅವರಿಗೆ ಬ್ಲಾಗು/ಬ್ಲಾಗಿಸು ಗಳನ್ನು ವಿವರಿಸಿದ್ದೆ
- ಶ್ರೀವತ್ಸ ಜೋಶಿ