ಅಲೆಮಾರಿ ಬದುಕು
ಕನಸುಗಳ ಮರಳದಂಡೆಯಲಿ
ನೋವ ಹೊತ್ತು ನಡೆವೆವು
ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು
ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ
ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು
ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ
ಅಲೆಮಾರಿಗಳು ನಾವು,
ಬದುಕ ಅಲೆ ಸುಳಿಗೆ ಸಿಕ್ಕಿದರೂ
ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ
ಸಾಗುವೆವು ಇನ್ನೂ ಮುಂದೆ ಮುಂದೆ
ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ
ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು
ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ
ಎದೆಗೂಡಿನೊಳು ಚಿಗುರೊಡೆದ ನೆನಪುಗಳ
ಒರೆಸಿಟ್ಟ ಮುಗ್ದ ಬೆರಳು
ಬೆಳಕು ಸಾಯುವ ಮುನ್ನ ಬೀಡು ಸೇರುವ
ತವಕ, ಗೆಜ್ಜೆ ದನಿಗಳ ನಡುವೆ ಸರಿದ ನೆರಳು
ಹೃದಯದಲಿ ಅದುಮಿಟ್ಟ ನೋವಿನಾ ಸೆಲೆಯು
ಹಾಡಾಗಿ ಉಕ್ಕಿ ಕಪ್ಪು ತುಟಿಗಳಲಿ
ಉಸಿರ ಬಿಗಿ ಹಿಡಿದು ಬಿಕ್ಕಿ
ಅತ್ತಾಗ, ಬಾಹು ಬಲವಿಲ್ಲದೆ
ಬಾಹುಬಲಿಗಳಾದೆವು ಒಂದೆಡೆ
ಇನ್ನೊಂದೆಡೆ ಭವಿಷ್ಯ ನುಡಿಯುವ
ಮಂಡ ಕಪ್ಪೆಗಳಾಗಿ
ಸುಖದ ರೂಪದ ಬಯಕೆ ದುಃಖದಲಿ
ದಿನರಾತ್ರಿ ಹದವಾಗಿ ಹರಿಯುತಿರೆ
ಗುರಿಯಿರದ ದಾರಿಯೊಳು ತೆವಳುವೆವು
ನಿಡುಸುಯ್ವ ಕ್ಷಿತಿಜದಂಚಿಗೆ.

- rashmi_pai ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಅಲೆಮಾರಿ ಬದುಕು
"ಬಾಹು ಬಲವಿಲ್ಲದೆ ಬಾಹುಬಲಿಗಳಾದೆವು ಒಂದೆಡೆ"
ಅಲೆಮಾರಿಗಳ ಬದುಕಿನ ಈ ಚಿತ್ರಣ ತುಂಬ ಮನೋಘ್ಙವಾಗಿದೆ. ಹಣದ ಹಿಂದೆ ಓಡುವ ನಾವೂ ಕೂಡ ಅಲೆಮಾರಿಗಳಲ್ಲವೇ? ಆಧ್ಯಾತ್ಮಕ್ಕಾಗಿ ತನ್ನ ರಾಜ್ಯವನ್ನೇ ತ್ಯಾಗ ಮಾಡಿದ ಬಾಹುಬಲಿಯ ಆದರ್ಶ ಹೊಟ್ಟೆಗೆ ಹಿಟ್ಟಿಲ್ಲದವರಿಗಾ ಅಥವಾ ಹಣ ಹೆಚ್ಚಾಗಿರುವವರಿಗಾ ನೀವೇ ಹೇಳಿ.
ಮನಸ್ಸು ಬಿಚ್ಛಿ ಬರೆಯಿರಿ ಹಾಗೆ ಸುಮ್ನೆ...