" ಇವ ನಮ್ಮವ ಇವ ನಮ್ಮವನೆಂದೆಣಿಸಯ್ಯಾ"
"ಅರಿತೂ ಅರಿಯೆನೆಂದೆಂಬವರನೆಚ್ಚರಿಸಿ"
ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್
ಪದ ಬಿಡಿಸುವಿಕೆ
ಜಲಜಲನೆ = ಕಲರವ ಮಾಡುತ್ತ, ಒೞ್ಕುತಿರ್ಪ = ಹರಿಯುತ್ತಿರುವ ಪರಿಕಾಲ್ =ಕಾಲುವೆ, ಪರಿಕಾಲೊಳ್= ಕಾಲುವೆಯಲ್ಲಿ ಅಳುರ್ಕೆಗೊಂಡ =ಹರಡಿದ, ನೆಯ್ದಿಲ ಪೊಸಪೂ ಪೊದಳ್ದ =ನೈದಿಲೆಯ ಹೊಸ ಹೂವು ಬೀರಿದ, ಪೊಸನೆಯ್ದಿಲ ಕಂಪನೆ ಬೀಱಿ= ನೈದಿಲೆಯ ಅಚ್ಚಗಂಪನ್ನು ಹರಡಿರಲು, ಕಾಯ್ತ ಕೆಂಗೊಲೆಯೊಳೆ ಜೋಲ್ವ ಶಾಳಿ = ಬಿಸಿಲಿನಲ್ಲಿ ಕಾದಿರುವ ಕೆಂಪು ತೆನೆಯಲ್ಲಿ ತೂಗಾಡುವ ಬತ್ತ(ದ ಗದ್ದೆ), [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ= ಹೊಸ ಬತ್ತಕ್ಕೆ ಮುತ್ತುತ್ತಿರುವ ಗಿಳಿವಿಂಡು (ಕಾಣುತ್ತಿರಲು),ಕಯ್ವೊಲಗಳಿನೊಪ್ಪಿ ತೋಱೆ = ಬತ್ತದ ಗದ್ದೆಗಳಿಗೆ ಅಂದವಾಗಿ ಕಾಣುತ್ತಿರಲು, ಆ ವಿಷಯಾಂತರದೊಳ್ = ಆ ನಾಡಿನಲ್ಲಿ (ಅದರ) ಸಿರಿ ನೋಡುಗುಂ= ಬೆಡಗು ನೋಡಬೇಕು!!
(ಈ ಪದ್ಯದ ಕೊನೆಯಲ್ಲಿನ ಅರ್ಥೈಕೆಯ ಬಗ್ಗೆ ಅಷ್ಟು ಸಮಾಧಾನವಿಲ್ಲ)
ಒಟ್ಟರ್ಥ:-
ಜುಳುಜುಳು ಹರಿಯುತ್ತಿರುವ ನೀರಿನ ಕಾಲುವೆಗಳಲ್ಲಿ ಹೊಸ ನೈದಿಲೆ ಹೂಗಳು ಅಚ್ಚಗಂಪು ಬೀರುತ್ತಿವೆ. ಬಿಸಿಲಿಗೆ ಕಾದ ಕೆಂಪು ತೆನೆಯ ಬತ್ತದ ಗದ್ದೆಗಳು ಗಾಳಿಗೆ ತುಯ್ಯುತ್ತಿವೆ. ಈ ಬತ್ತದ ತೆನೆಗೆ ಹಾಯುವ (ದಾಳಿಯಿಡುವ) ಗಿಳಿಗಳ ಹಿಂಡು,ಅವುಗಳಿಗೆ ಅಂದ ನೀಡುತ್ತಿರಲು ಆ ಕನ್ನಡನಾಡಿನ ಸೊಬಗು ನೋಡಬೇಕು.
ಸ್ವಲ್ಪ ಇದೇ ಬಗೆಯ ಬಣ್ಣನೆ ಆಂಡಯ್ಯನಲ್ಲೂ ಕಾಣಬಹುದು.
ಉಱೆಕಾಯ್ವ ಬಿಸಿಲೊಳೆಮ್ಮಂ
ಮಱೆದುಂ ಕೊರಗಿಸದೆ ಪೊರೆದುದೆಂದೊಲವಿಂ ಬಂ
ದೆಱಗುವವೋಲ್ ತೆನೆಯಿಂ ಕಾ
ಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ
ಪದವಿಭಾಗ:-
ಉಱೆಕಾಯ್ವ ಬಿಸಿಲೊಳ್= ಬಹುವಾಗಿ ಬಳಲಿಸುವ ಬಿಸಿಲಿನಲ್ಲೂ, ಎಮ್ಮಂ= ನಮ್ಮನ್ನು, ಮಱೆದುಂ ಕೊರಗಿಸದೆ = ತಪ್ಪಿಯೂ ನೋಯಿಸದೆ ಎಂದೂ= ಎಂದಿಗೂ ಒಲವಿಂ ಪೊರೆದು = ಒಲವಿನಿಂದ ಕಾಪಿಟ್ಟು, ತೆನೆಯಿಂ ಕಾಲ್ಗೆರಗುವ = ತಮ್ಮ ಕದಿರಿನಿಂದ ನಮಸ್ಕಾರ ಮಾಡುವ (ವಿನಯ ತೋರುವ, ಕೞವೆಗಳವೆಲ್ಲಿಯುಂ ಸೊಗಯಿಸುಗುಂ = ಬತ್ತದ ಗದ್ದೆಗಳು ಎಲ್ಲಿಲ್ಲಿಯೂ ಬೆಡಗುಸೂಸುತ್ತವೆ.
ಭಾವ:-
ನೆತ್ತಿಸುಡುವ ಬಿಸಿಲಿನಲ್ಲಿ ಓಡಾಡುವ ಹಾದಿಹೋಕರನ್ನು ಅಪ್ಪಿತಪ್ಪಿಯೂ ಮನನೋಯಿಸದೆ ಪ್ರೀತಿಯಿಂದ ಪೊರೆಯುತ್ತ, (ಗಾಳಿಗೆ ತೂಗಿ ಬಾಗುವ) ತಮ್ಮ ಕದಿರುಗಳಿಂದ ಕಾಲಿಗೆರಗುವ ಬತ್ತದ ಗದ್ದೆಗಳು ಎಲ್ಲೆಲ್ಲಿಯೂ ಕಂಗೊಳಿಸುತ್ತಿವೆ.
(ಸಂಸ್ಕೃತ ಕವಿಗಳು ಮಾಡಿದ ತಪ್ಪನ್ನೇ ಕನ್ನಡ ಕವಿಗಳೂ ಮಾಡಿರುವುದನ್ನು ಇಲ್ಲಿ ಗಮನಿಸಬೇಕು. ತಾವರೆ, ನೈದಿಲೆಗಳಂಥ ನೀರಿನ ಹೂಗಳು ಮಲೆತ ನೀರುನಲ್ಲಿ ಬೆಳೆಯುತ್ತವೆಯೇ ಹೊರತು ಹರಿಯುವ ನೀರಿನಲ್ಲಲ್ಲ. ಈ ವಿಷಯ ಕನ್ನಡದ ಕವಿಗಳ ಗಮನಕ್ಕೂ ಬಾರದೆ ಹೋಯಿತೆ?!"

- rameshbalaganchi ರವರ ಬ್ಲಾಗ್
- Login or register to post comments
- 650 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ರಮೇಶ್,
ನೀವು ಈ ಪದ್ಯಗಳನ್ನು ಇಲ್ಲ ಹಾಕಿದ್ದಕ್ಕೆ ಮತ್ತು ಅದನ್ನು ಬಿಡಿಸಿರುವುದಕ್ಕೆ ನನ್ನಿಗಳು.
--> "...ತೆನೆಯಿಂ ಕಾಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ"
ಇದರ ಅರ್ತ ಹೀಗಿರಬಹುದೆ:-?
ಎಲ್ಲೆಲ್ಲಿಯೂ ಬತ್ತದ ಪಯಿರುಗಳು(ಕೞಮೆ) ತಮ್ಮ ತುದಿಗಳಿಂದ/ತೆನೆಗಳಿಂದ(ಇದರ ಮೂಲಕ) ಕಾಲ್ಗೆ ಎರಗುತ್ತಿದ್ದವು. ಇದು ಸೊಗಸಾದುದು
--> "...ಸಂಸ್ಕೃತ ಕವಿಗಳು ಮಾಡಿದ ತಪ್ಪನ್ನೇ ಕನ್ನಡ ಕವಿಗಳೂ ಮಾಡಿರುವುದನ್ನು ಇಲ್ಲಿ ಗಮನಿಸಬೇಕು. ತಾವರೆ, ನೈದಿಲೆಗಳಂಥ ನೀರಿನ ಹೂಗಳು ಮಲೆತ ನೀರುನಲ್ಲಿ ಬೆಳೆಯುತ್ತವೆಯೇ ಹೊರತು ಹರಿಯುವ ನೀರಿನಲ್ಲಲ್ಲ. ಈ ವಿಷಯ ಕನ್ನಡದ ಕವಿಗಳ ಗಮನಕ್ಕೂ ಬಾರದೆ ಹೋಯಿತೆ?! ..."
ಈ ಮಾತು ಸಿರಿವಿಜಯ(ಕವಿರಾಜಮಾರ್ಗಕ್ಕೆ) ಹೊಂದುವುದಿಲ್ಲ. ಕವಿರಾಜಮಾರ್ಗದ ಪರಿಚ್ಚೇದ - ೩, ೧೬೬ ನೆ ಕಂದಪದ್ಯ ಹೀಗಿದೆ.
ಬೆಳೆದೊಱಗಿದ ಕೞಮೆಗಳುಂ
ತಿಳಿಗೊಳದೊಳಗಲರ್ದ ಸರಸಿಜಪ್ರತತಿಗಳುಂ
ಕಳಹಂಸೆಗಳ್ಗೆ ಕೋಮಳ
ವಿಳಾಸವತಿಗಳ್ಗೆ ಪಡೆಗುಮೊಸಗೆಯನಾಗಳ್
ತಿರುಳು(ಎಮ್.ವಿ.ಸೀತಾರಾಮಯ್ಯನವರ 'ಕವಿರಾಜಮಾರ್ಗಂ" ಹೊತ್ತಿಗೆಯಿಂದ):
"ಬೆಳೆದು ಒಱಗಿದ (=ಬಾಗಿದ) ಕೞಮೆಗಳುಂ(=ಬತ್ತದ ಪಯಿರು) ತಿಳಿಗೊಳದೊಳಗೆ ಅಲರ್ದ(=ಅರಳಿದ) ಸರಸಿಜಪ್ರತತಿಗಳು(= ತಾವರೆಗಳ ಗುಂಪೂ), ಕಳಹಂಸೆಗಳ್ಗೆ ಕೋಮಳ ವಿಳಾಸವತಿಗಳ್ಗೆ (=ಇಂಪಾದ ಸ್ವರವುಳ್ಳ ಹೆಣ್ಣು ಹಂಸಗಳಿಗೂ ಕೋಮಲೆಯರಾದ ವಿಲಾಸವತಿಯರಿಗೂ), ಆಗಳ್ ಒಸಗೆಯಂ ಪಡೆಗುಂ(= ಆಗ ಸಂತೋಶವನ್ನು ಕೊಡುತ್ತಿದ್ದವು).
ಗಮನಿಕೆ:
೧) ಸಿರಿವಿಜಯನಿಗೆ ತಾವರೆಗಳು ತಿಳಿಗೊಳದಲ್ಲೇ ಬೆಳೆಯುತ್ತವೆ ಅಂತ ಗೊತ್ತಿತ್ತು
೨) ಆಂಡಯ್ಯ(ಎಱಗಿದ ಕೞಮೆ), ಸಿರಿವಿಜಯ (ಬೆಳೆದು ಒಱಗಿದ ಕೞಮೆ) ಬಗ್ಗೆಯೇ ಮಾತಾಡಿರುವುದು ಸೋಜಿಗ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
"...ತೆನೆಯಿಂ ಕಾಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ"
ಇದರ ಅರ್ತ ಹೀಗಿರಬಹುದೆ:-?
ಎಲ್ಲೆಲ್ಲಿಯೂ ಬತ್ತದ ಪಯಿರುಗಳು(ಕೞಮೆ) ತಮ್ಮ ತುದಿಗಳಿಂದ/ತೆನೆಗಳಿಂದ(ಇದರ ಮೂಲಕ) ಕಾಲ್ಗೆ ಎರಗುತ್ತಿದ್ದವು.
ಇದು ಸೊಗಸಾದುದು"
ವೈಭವ್, ಕಾವ್ಯವನ್ನು ಅರ್ಥೈಸುವ ಶಿಸ್ತಿನಲ್ಲಿ, ಪದವಿಭಾಗ ಮತ್ತು ಜೋಡಣೆ ಮುಖ್ಯವಲ್ಲವೆ? ವಾಕ್ಯದಲ್ಲಿ ಪದಗಳು ನಿರ್ದಿಷ್ಟ ಜಾಗದಲ್ಲಿದ್ದುಕೊಂಡು ಅರ್ಥಕೊಡುತ್ತವೆ. ಅವುಗಳನ್ನು ಸ್ವತಂತ್ರವಾಗಿ (ಅಂದರೆ ಅವುಗಳ ಜೋಡಣೆಯ ಚೌಕಟ್ಟಿನಿಂದ ಹೊರತಂದು) ಅರ್ಥೈಸುವುದೆ ಹೇಗೆ?
"ಅವು ಎಲ್ಲಿಯುಂ ಸೊಗಯಿಸುಗುಂ"- ಅವು ಎಂದರೆ ಯಾವುವು? -ಕೞವೆಗಳು. ಎಂಥ ಕೞವೆಗಳು? -ಕಾಲ್ಗೆಱಗುವ ಕೞವೆಗಳು. ಇಲ್ಲಿ ತೆನೆಯಿಂ ಕಾಲ್ಗೆಱಗುವ ಎನ್ನುವ ಪದಗಳು ಕೞವೆ ಎಂಬ ಪದಕ್ಕೆ ವಿಶೇಷಣವಾಗಿವೆ. "ಅವೆಲ್ಲಿಯುಂ ಸೊಗಯಿಸುಗುಂ" ಎಂಬುದಕ್ಕೆ ನೀವು ಹೇಳುವಂತ ಅರ್ಥೈಸಿದರೆ ಆಗ " ತೆನೆಯಿಂ ಕಾಲ್ಗೆಱಗುವ ಕೞವೆಗಳ್... ಎಂದು ಶುರುವಾಗುವ ವಾಕ್ಯ ಅಪೂರ್ಣವಾಗೇ ಉಳಿದುಕೊಳ್ಳುತ್ತದೆ.
ಎರಡನೆಯದಾಗಿ, ನಾನು "ಸಂಸ್ಕೃತ ಕವಿಗಳು ಮಾಡಿದ ತಪ್ಪನ್ನೇ ಕನ್ನಡ ಕವಿಗಳೂ ಮಾಡಿರುವುದನ್ನು ಇಲ್ಲಿ ಗಮನಿಸಬೇಕು." ಎಂದಾಗ ಸಾಂದರ್ಭಿಕವಾಗಿ ಹೇಳಿದ್ದು, ಮತ್ತು ಪಂಪನನ್ನು ಕುರಿತಾಗಿ ಮಾತ್ರ ಹೇಳಿದ್ದು. "ಕನ್ನಡಕವಿಗಳು" ಎಂಬಲ್ಲಿ ನಾನು ಬಳಸಿರುವುದು ಗೌರವ ಬಹುವಚನ ಅಷ್ಟೆ.
ಆದರೂ ಇದರಿಂದ ನನಗೆ ಒಂದು ಉಪಯೋಗವಂತೂ ಆಯಿತು. ನಾನು ಕೇಳಿಲ್ಲದ ಶ್ರೀವಿಜಯನ ಪದ್ಯವೊಂದನ್ನು ನೀವು ಅರ್ಥೈಸಿದ್ದೇ ಅಲ್ಲದೆ ಕನ್ನಡಕವಿಯೊಬ್ಬನು ಸರಸಿಜವನ್ನು (ಹರಿವ ನೀರಿನಲ್ಲಲ್ಲದೆ) ತಿಳಿಗೊಳದಲ್ಲೇ ಅರಳಿಸಿದ್ದು ತಿಳಿದು ಸಂತೋಷವಾಯಿತು.
ನಿಮಗೂ ಧನ್ಯವಾದಗಳು.
"ಏರಿದವನು ಚಿಕ್ಕವನಿರಬೇಕು"
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ಬಡಗಣದ ಕಡೆ ಹೊಲ-ಗದ್ದೆಗಳ ಬದುಗಳ ಗುಂಟ ಕಾಲುವೆ ಮಾಡಿರುತ್ತಾರೆ. ಆ ಕಾಲುವೆಯ ಪಕ್ಕದಲ್ಲಿ ದಾರಿ ಇರುತ್ತದೆ. ಬೆಳಗಾವಿ ಸೀಮೆ ಕಡೆ ಹೊಲ-ಗದ್ದೆ ಇರುವ ಕಡೆ ಇದು ಮಾಮೂಲಾಗಿ ಕಾಣ ಬರುವ ನೋಟ. ಈ ಕಾಲುವೆಯ ನೀರು ಮೇಲ್‍ನೋಟಕ್ಕೆ ನಿಂತಂತೆ ಕಾಣುವಸ್ಟು ಮೆಲ್ಲಗೆ ಹರಿಯುತ್ತಿರುತ್ತದೆ. ಅದರ ತುಂಬ ಜೊಂಡು ಹುಲ್ಲು ಬೆಳೆದಿರುತ್ತದೆ. ಅದು ನೀರಿನ ಹರಿವನ್ನು ಇನ್ನಸ್ಟು ಮೆಲ್ಲಗೊಳಿಸಿರುತ್ತದೆ. ಹೀಗಾಗಿ ಅಂತ ನೀರು ನೈದಿಲೆ, ತಾವರೆಗಳಿಗೆ ಮಲಿತ ನೀರಿನಸ್ಟೇ ಬೆಳೆಯಲು ಒಪ್ಪು ಒದಗಿಸಿರುತ್ತದೆ. ನೀವು ಬರೆದಿರುವ ಪಂಪನ ಮೊದಲ ಪದ್ಯ ಇಂತದೇ ಒಂದು ನೋಟವನ್ನು ತಿಳಿಸುತ್ತಿರಬೇಕು, ಏಕೆಂದರೆ ಪಂಪನ ಬನವಾಸಿ ಬರುವದು ಬೆಳಗಾವಿಯ ಕಡೆ.
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ಚೆ೦ದಾಗೈತೆ - ನಮ್ಮ ಕನ್ನಡ ನಾಡು ಅ೦ದರೆ ಆಯ್ತಾ ? ನಮ್ಮ ನಾಡಿನ ಸೊಬಗನ್ನು ಬರೀ ಹಳೆ ಕಾಲದ ಕವಿಗಳ್ ಕಾವ್ಯದಾಗೆ ಕಾಣ್ ಬೇಕೇನು.
ಈಗ ಮೊನ್ನೆ ಸೊರಬ ಕಡೆ ಹೋಗಿದ್ದೆ, ಸಣ್ಣವ ನಾಗಿದ್ದಾಗ ಬನವಾಸಿ ತಿ೦ಗಳಿಗೆ ಒ೦ದ್ಸಾರಿ ಆದ್ರೂ ಹೋಗ್ತಿದ್ದೆ.
ಈಗ ನಮ್ಮ ನೆಲ ತು೦ಬಾ ಹಾಳಾಗ್ತಿದೆ. ಒಟ್ಟಾರೆ ನಮ್ಮ ಪ್ರಜ್ಞೆ ಕೆಟ್ಟರೆ ನಮ್ಮ ನಾಡು ಕೆಟ್ಟ೦ಗೆ.
ನಾವು ನಮ್ಮ ನಾಡಿನ ಚೆಲುವನ್ನು ಹೆಚ್ಚಿಸಿ - ಮು೦ದೆ ಪ೦ಪ ನ೦ತಹ ಕವಿಗಳು ಬ೦ದರೆ ಹಾಡಿ ಕುಣಿಯೋದಕ್ಕಾದರೂ ನಾಡನ್ನು ಉಳಿಸ್ ಬೇಕು.
ಏನೇ ಆಗಲಿ - ನಾನ೦ತೂ ಆಗಾಗ ನಮ್ಮ್ ದೇಶ ಸುತ್ತಿ ಸುತ್ತಿ - ನನ್ನ್ ಆತ್ಮಕ್ಕೆ ಸಿಕ್ಕಾಪಟ್ಟೇ ಆನ೦ದ ಕೊಟ್ಟಿದ್ದೇನೆ.
ಹಾಗೆ ಕನ್ನಡ + ಕನ್ನಡ ನಾಡು ನನ್ನ ಆತ್ಮಕ್ಕೆ ಸಿಕ್ಕಾಪಟ್ಟೆ ಆನ೦ದ ಕೊಟ್ಟಿದೆ.
ಇವೆರಡು ಗ೦ಡಾ - ಹೆ೦ಡ್ತಿ (ಕನ್ನಡ್ + ಕನ್ನಡ ನಾಡು ) ಇದ್ದ್ ಹ೦ಗೆ. ಇವೆರಡರ್ ಮಕ್ಕಳೇ ಈ ಕಾವ್ಯ + ನಾಟಕ + ಕಲೆ.
ಹೆ೦ಡ್ತಿ ಚೆಲುವು ಕಳ್ಕೊ೦ಡ್ರೇ - ಗ೦ಡಾ ಸ್ಪೂರ್ತಿ ಕಳ್ಕೋತ್ತಾನೆ.
ಗ೦ಡಾ ಕುಡುಕ ನಾದ್ರೇ ಹೆ೦ಡ್ತಿ ಸ೦ಸಾರ ಎರಡು ಕೆಟ್ಟ ಹ೦ಗೇ ..
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ಯಾರೂ ಒಪ್ಪುವಂಥ ಮಾತಾಡಿದ್ದೀರಿ ಮುರಳಿ. ಎರಡು ಮಾತಿಲ್ಲ.
ಸಂಗನಗೌಡರ ಪ್ರತಿಕ್ರಿಯೆಗೆ ಬರೆದ ಮಾರುತ್ತರ ನಿಮ್ಮ ಪ್ರತಿಕ್ರಿಯೆಯ ಕೆಳಗೆ ತಪ್ಪಿನಿಂದ ಬಂದುಬಿಟ್ಟಿದೆ. ದಯವಿಟ್ಟು ಗಮನಿಸಿ.
"ಏರಿದವನು ಚಿಕ್ಕವನಿರಬೇಕು"
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
"...ನಮ್ಮ ನಾಡಿನ ಸೊಬಗನ್ನು ಬರೀ ಹಳೆ ಕಾಲದ ಕವಿಗಳ್ ಕಾವ್ಯದಾಗೆ ಕಾಣ್ ಬೇಕೇನು..."
ಅದು ಹಾಗಲ್ಲ. ಪಂಪನ ಪದ್ಯ್ಗಳನ್ನು ಓದಿ ಬನವಾಸಿಗೆ ಹೋದರೆ ಇನ್ನು ಅಲ್ಲಿನ ತಾಣದ ಚೆಂದವನ್ನು(ಪದಗಳ ಅಂದದ ಜೊತೆಗೆ) ಹೆಚ್ಚು ಅರ್ತಪೂರಣವಾಗಿ ಸವಿಯಬಹುದಲ್ಲವೆ? ಪಂಪನ ಬನವಾಸಿಗೆ ಬಂದಾಗ ಅವನಿಗೆ ಎಶ್ಟು ಕುಸಿಯಾಗಿತ್ತು ಅಂತ ಅವನ ಪದ್ಯಗಳನ್ನು ಓದಿ ನೋಡಿದರೆ ಗೊತ್ತಾಗುತ್ತದೆ. ಮುಂದೊಮ್ಮೆ ಆ ಪದ್ಯ್ಗಳನ್ನು ಇಲ್ಲಿ ಹಾಕುವೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ಮುರಳಿ, ಈ ಮಾತನ್ನು ನೀನು ಕಾವ್ಯಾತ್ಮಕವಾಗಿ ಅಥವಾ ಭಾವನಾತ್ಮಕವಾಗಿ ಹೇಳಿದ್ದರೆ ಅದು ಒಪ್ಪುವಂತಹ ಮಾತು. ಆದರೆ ಅಸಲಿಗೆ "ಕನ್ನಡ" ಎಂಬುದು ಭಾಷೆಯಲ್ಲ, ಅದು ಮೂಲತಃ "ನಾಡು" ಎಂದೇ ಆಗಿತ್ತು. "ಕನ್ನಡ" ಪದದಲ್ಲಿಯೇ "ನಾಡು" ಎಂಬುದು ಇದೆ. "ಕನ್ನಡ ನಾಡು" ಎಂದು ಎಕ್ಸಪ್ಲಿಸಿಟ್ಟಾಗಿ ಹೇಳಬೇಕಿಲ್ಲ.
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
" ಪಂಪನ ಬನವಾಸಿ ಬರುವದು ಬೆಳಗಾವಿಯ ಕಡೆ."
ನಾನು ತಿಳಿದಂತೆ ಬನವಾಸಿ ಇರುವುದು ಶಿವಮೊಗ್ಗ ಮತ್ತು ಉತ್ತರಕನ್ನಡಗಳ ಗಡಿಯಲ್ಲಿ. ಸೊರಬ, ಆನವಟ್ಟಿಯ ಸಮೀಪದಲ್ಲಿ. ನೀವೆಲ್ಲೋ ಬೆಳಗಾವಿಯ ಕಡೆಯವರಿರಬೇಕು. ಅದಕ್ಕೆ ಸಲೀಸಾಗಿ ಬನವಾಸಿಯನ್ನುಬೆಳಗಾವಿಯ ಕಡೆ ಅಂದುಬಿಟ್ಟಿರಿ. "ಕಡೆ" "ಹತ್ತಿರ" ಅನ್ನುವುದೆಲ್ಲ ಸಾಪೇಕ್ಷ (relative) ಪದಗಳು. ಬನವಾಸಿ ಬೆಳಗಾವಿಗೆ ಹೋಲಿಸಿದರೆ ಶಿವಮೊಗ್ಗಾ ಜಿಲ್ಲೆಗೇ ಬಹಳ ಸಮೀಪವಿದೆ. ನೀವು ಬನವಾಸಿಯನ್ನು ನೋಡಿದ್ದೀರಾ?
"ಅಂತ ನೀರು ನೈದಿಲೆ, ತಾವರೆಗಳಿಗೆ ಮಲಿತ ನೀರಿನಸ್ಟೇ ಬೆಳೆಯಲು ಒಪ್ಪು ಒದಗಿಸಿರುತ್ತದೆ"
ನೀವು ಗದ್ದೆಯಲ್ಲಿ ಹರಿಯುತ್ತಿರುವ ಕಾಲುವೆಗಳಲ್ಲಿ ಎಂದಾದರೂ, ಎಲ್ಲಿಯಾದರೂ ತಾವರೆ, ನೈದಿಲೆಗಳಂಥ ನೀರಿನಲ್ಲಿ ಬೆಳೆಯುವ ಹೂವು ಕಂಡಿದ್ದೀರಾ? ನಿಮ್ಮ ವಿವರಣೆ ಊಹೆಯೋ ವಾಸ್ತವವೋ ತಿಳಿಯದು. ನೀವು ಕಂಡಿದ್ದರೆ ತಿಳಿಸಿ. ನಾನೂ ಸಾಕಷ್ಟು ಹೊಲಗದ್ದೆಗಳನ್ನೂ ಕಾಲುವೆಗಳನ್ನೂ ಕಂಡಿದ್ದೇನೆ. ಆದರೆ ಎಲ್ಲಿಯೂ ಇಂಥ ಹೂಗಳು ಬೆಳೆದಿರುವುದನ್ನು ಕಂಡಿಲ್ಲ.
"ಏರಿದವನು ಚಿಕ್ಕವನಿರಬೇಕು"
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ನಾನು ಬೆಳಗಾವಿ ಕಡೆಯವನಲ್ಲ, ಆದರೆ ನಮ್ಮ ಕನ್ನಡ ಆ ಕಡೆಯ ಕನ್ನಡಕ್ಕೆ ಹತ್ತಿರ. ಇರಲಿ, ಊರುಗಳನ್ನು ಈಗಿನ ಗಡಿಗಳಂತೆ ನೋಡಬೇಡಿ, ಆಗಿನ ಗಡಿಗಳೇ ಬೇರೆ ಇದ್ದೀತು. ಕದಂಬರ ಅರಸೂರು ಬನವಾಸಿ ಆಗಿದ್ದರಿಂದ ಪಂಪ ಬನವಾಸಿಗೆ ಬಂದು ನೆಲೆಸಿದ್ದು.. ಹೌದು, ಶಿವಮೊಗ್ಗ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ, ಸಿರಸಿಯಿಂದ ಬರೀ ೧೮ ಕಿ.ಮಿ. ದೂರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬನವಾಸಿ ಬರುತ್ತದೆ. ಪಂಪ ಬನವಾಸಿಗೆ ಬಂದು ನೆಲೆಸಿದ್ದು ಈಗಿನ ಅಂದ್ರದಲ್ಲಿರುವ ವೆಮುಳವಾಡಾ ಎಂಬ ಊರಿನಿಂದ(ಮ್ಯಾಪ್ ನೋಡಿ) ಇದರಿಂದ ಪಂಪ ಕಂಡ ಕನ್ನಡ ಬನವಾಸಿಯ ಬಡಗಣ ನಾಡಿರುವ ಸಾದ್ದೆತೆ ಹೆಚ್ಚು. ಅದಿರಲಿ ಹೊಲ-ಗದ್ದೆಗಳ ಬದುಗೊಂಟ ಮಲಿತ, ಜೊಂಡು ಬೆಳೆದ, ನಿಂತತೆಯೇ ತೋರುವ ನೀರನ್ನು ನಾನು ನೋಡಿದ್ದೇನೆ. ಅದಕ್ಕೆ ಬರೆದದ್ದು. ಆದರೆ ತಾವರೆ ಬೆಳೆದದ್ದನ್ನು ನೋಡಿಲ್ಲ, ಬೆಳೆಯುವ ಸಾದ್ದೆತೆ ಇಲ್ಲದೆ ಇಲ್ಲ.
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ಪಂಪನ ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ (ಸಿರ್ಸಿ ಮತ್ತು ಸೋಂದಾ ಬಳಿ) ಇದೆ ಅಲ್ಲವೇ? ಅಲ್ಲಿನ ಮಧುಕೇಶ್ವರ ದೇವಾಲಯ ಹೆಸರುವಾಸಿಯಾಗಿದೆ.
ಪ್ರಭು ಮೂರ್ತಿ
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ರಮೇಶಬಳಗಂಚಿ ಮತ್ತೆ ಪ್ರಭು ಅವರಿಬ್ಬರೂ ಹೇಳಿದ್ದೂ ಸರಿಯೇ. ಬನವಾಸಿ ಸುಮಾರು ಸಿರ್ಸಿಯಿಂದ ೧೫ ಕಿಲೋಮೀಟರ್ ಪೂರ್ವಕ್ಕಿದೆ - ಅಲ್ಲಿರುವ ಮಧುಕೇಶ್ವರ ದೇವಾಲಯದ ಮುಂದೆ, ವರದಾ ನದಿ ಹರಿಯುತ್ತೆ. ಈ ನದಿಯೇ ಉತ್ತರಕನ್ನಡ ಮತ್ತೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಗಡಿ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/