ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಇವತ್ತು ಅಳಬಾರದು
ಇವತ್ತು ಅಳಬಾರದು.
ಯಾರು ಹೇಳಿದರು, ಕಣ್ಗಳಿರುವುದೇ ಅಳಲೆಂದು. ಅದು ಸುಳ್ಳು. ಕಣ್ಗಳಿರುವುದು ನೋಡಲು. ಅಷ್ಟೇ.
ನೋಡಿದ ನಂತರ ಏನಾಗುತ್ತದೆ? ಅದು ಮನಸ್ಸಿನಲ್ಲಿ ದಾಖಲಾಗುತ್ತದೆ. ಸುಳ್ಳು, ಅದು ಮೆದುಳಲ್ಲಿ ದಾಖಲಾಗುತ್ತದೆ.
ಮುಂದೆ?
ಮೆದುಳು ಆ ದಾಖಲೆಯನ್ನು ಇನ್ಯಾವುದೋ ನೆನಪುಗಳೊಂದಿಗೆ ತಳುಕು ಹಾಕುತ್ತದೆ. ಅಲ್ಲೊಂದು ಪ್ರತಿಕ್ರಿಯೆ ಹುಟ್ಟುತ್ತದೆ. ಆ ಪ್ರತಿಕ್ರಿಯೆಗೆ ಇನ್ಯಾವುದೋ ಸೇರಿಕೊಂಡು ಭಾವನೆಯನ್ನು ನಿರ್ಮಿಸುತ್ತದೆ.
ಸರಿ.
ಆ ಭಾವನೆ, ಮೆದುಳಿನ ಇನ್ಯಾವುದೋ ಭಾವನೆಯೊಂದಿಗೆ ಸಂಘರ್ಷಕ್ಕೆ ಇಳಿಯುತ್ತದೆ. ಅದು ಹೊಂದಾಣಿಕೆಯಾದರೆ, ಖುಷಿ. ಇಲ್ಲದಿದ್ದರೆ ನೋವು.
ಆಗ ಕಣ್ಗಳು ಅಳುತ್ತವಂತೆ.
ಹೌದೆ?
ಗೊತ್ತಾಗುತ್ತಿಲ್ಲ. ಏಕೋ, ಸುಮ್ಮನಿರಲೂ ಆಗುತ್ತಿಲ್ಲ. ಹಳೆಯದೇನೋ ತೇಲಿ ಬಂದಂತೆ, ಪಕ್ಕಕ್ಕೆ ನಿಂತಂತೆ, ಮತ್ತಿನ್ನೇನೋ ನೆನಪಿಸಿದಂತೆ, ಎಲ್ಲಾ ತರ್ಕವನ್ನು ಸರಿಸಿ, ನಾನು ಏನಾಗಿದ್ದೆನೋ ಅದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತ ಗೊಂದಲಕ್ಕೆ ಈಡು ಮಾಡುತ್ತದೆ.
ಇದು ಖಿನ್ನತೆಯಾ? ನೋವಾ? ಗೊಂದಲವಾ? ಒಂಟಿತನವಾ? ತಬ್ಬಲಿ ಭಾವನೆಯಾ?
ಊಹೂಂ. ಒಂದೂ ಗೊತ್ತಾಗುತ್ತಿಲ್ಲ. ಬೇರೆ ಯಾರಿಗಾದರೂ ಹೀಗೆ ಆಗುತ್ತದಾ? ಆದರೆ ಅವರು ಅದನ್ನು ಹೇಗೆ ಎದುರಿಸುತ್ತಾರೆ?
ಧಾರವಾಡದಲ್ಲೀಗ ನವಿಲುಗಳು ಕುಣಿಯುತ್ತಿವೆ ಎಂದು ಸಂಪದ ಮಿತ್ರ ಹರ್ಷವರ್ಧನ ಶೀಲವಂತರ ಬರೆದಿದ್ದಾರೆ. ನಿಜ, ನವಿಲುಗಳು ಕುಣಿಯುತ್ತಿವೆ. ಆದರೆ, ಅವು ಏಕೆ ಕುಣಿಯುತ್ತವೆ ಎಂಬ ವೈಜ್ಞಾನಿಕ ಸತ್ಯ ಗೊತ್ತಿರುವುದರಿಂದ, ಅವುಗಳ ಕುಣಿತ ಆಸಕ್ತಿ ಹುಟ್ಟಿಸುತ್ತಿಲ್ಲ. ನಿಜ, ಅವು ಸಂತಸಗೊಂಡಿವೆ. ಆದರೆ, ಇದೇನು ನನ್ನ ಮನಸ್ಸಿನಲ್ಲಿ ಈ ಪರಿ ಖಿನ್ನತೆ.
ಔಷಧಗಳ ಹಂಗಿಲ್ಲದೇ ಗೆಲ್ಲಲು ಹೊರಟಿದ್ದೇನಲ್ಲ, ನಾನು ಗೆಲ್ಲುತ್ತೇನಾ? ಸೋಲುತ್ತೇನಾ? ಹೀಗೇ ನವೆಯುತ್ತ, ಬರೆದು ಹಗುರವಾಗಲು ಯತ್ನಿಸುತ್ತ ಹೋಗಿಬಿಡುತ್ತೇನಾ?
ಒಂದೂ ಗೊತ್ತಾಗುತ್ತಿಲ್ಲ.
ಮೋಡ ಬಿಗಿದುಕೊಂಡಿದೆ. ಬೆಳಕು ಮಾಯವಾಗಿದೆ. ನಾಳೆ ಗ್ರಹಣವಂತೆ. ಆಗಲೇ ಮಧ್ಯರಾತ್ರಿ. ಮನಸ್ಸಿನ ಗ್ರಹಣ ಬಿಚ್ಚಿಕೊಳ್ಳುವುದು ಯಾವಾಗ?
ಕಾಯುತ್ತಿದ್ದೇನೆ, ಹೀಗೇ. ಸುಮ್ಮನೇ.
ಇಲ್ಲ, ಇವತ್ತು ಅಳಬಾರದು. ಮೋಡ ಕಟ್ಟಿಕೊಂಡರೂ ಸರಿ, ಗ್ರಹಣ ಬಿಚ್ಚಿಕೊಂಡರೂ ಸರಿ. ಈ ತೆರೆ ಸರಿಯುತ್ತದೆ. ಈ ಮೋಡ ಚದುರುತ್ತದೆ. ಹಾಗೇ, ಈ ಖಿನ್ನತೆ.
ಹೌದು. ನಾನು ಅಳಬಾರದು. ಕನಿಷ್ಠ ಇವತ್ತಿನ ಮಟ್ಟಿಗಾದರೂ. ಅಳುವುದೇ ಆದರೆ, ಮುಂದೊಂದು ದಿನ ಅತ್ತೇನು. ಅತ್ತು ಹಗುರವಾದೇನು.
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 709 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


ಪ್ರತಿಕ್ರಿಯೆಗಳು
ಉ: ಇವತ್ತು ಅಳಬಾರದು
"ಆಗ ಕಣ್ಗಳು ಅಳುತ್ತವಂತೆ.ಹೌದೆ?"
-ಪಕ್ಕಾ ಹೌದು. ಆದರೆ ದು:ಖ ಮನಸ್ಸಿಂದು. ಅಳು,ಕಣ್ಣೀರು, ಅದರ ದೈಹಿಕ ಪ್ರತಿನಿಧಿಗಳು.
"ಬೇರೆ ಯಾರಿಗಾದರೂ ಹೀಗೆ ಆಗುತ್ತದಾ? ಆದರೆ ಅವರು ಅದನ್ನು ಹೇಗೆ ಎದುರಿಸುತ್ತಾರೆ?"
ಹೆಚ್ಚಿನ ಎಲ್ರಿಗೂ ಹೀಗಾಗತ್ತೆ. Sensitive ಆದವರು ತಮ್ಮ ಭಾವನೆಗಳ ಮೂಲ trace ಮಾಡಲು ಪ್ರಯತ್ನಿಸುತ್ತಾರೆ. ಹಾಗಾಗಿ ಅವರಿಗೆ ಅರಿವಾಗತ್ತೆ. ಉಳಿದವರಿಗೆ ಅರಿವಾಗೋದಿಲ್ಲವಾದ್ರಿಂದ ಹೀಗೆ ಆಗೋದೇ ಇಲ್ಲ ಅನ್ನಲೂಬಹುದು ಅವರು.
ಇದೊಂದು ಮನೋದೈಹಿಕ ಸಮಸ್ಯೆ. ಹಾಗೆ ನೋಡಿದ್ರೆ ಮನಸ್ಸು ದೇಹಗಳು ಹಾಸುಹೊಕ್ಕಾಗಿರೋದ್ರಿಂದ ಯಾವುದು ದೈಹಿಕ ಸಮಸ್ಯೆ ಯಾವುದು ಮಾನಸಿಕ ಅಂತ separate ಮಾಡುವುದು ಕಷ್ಟ. ಎಲ್ಲಕ್ಕೂ ಮನಸ್ಸೇ ಮೂಲ.ಅದರ ಸುಖ ದು:ಖಗಳು ದೈಹಿಕವಾಗಿ ತೋರುತ್ತವೆ.
ನಾನು ಹೀಗ್ ಮಾಡ್ತೀನಿ. ೧) ದಿನಾ ಉಸಿರಾಟ ಗಮನಿಸೋ ಅಭ್ಯಾಸಮಾಡೋದು. ಹೀಗೆ ಮಾಡೋದ್ರಿಂದ ಮನಸ್ಸು ವರ್ತಮಾನದಲ್ಲಿರತ್ತೆ. ಜೊತೆಗೆ ಮನಸ್ಸು ಎಲ್ಲೆಲ್ಲಿ ಅಲೆದಿತ್ತು ಅನ್ನೋದರ ಅರಿವಾಗತ್ತೆ. ಅಲೆದಾಡುತ್ತ ಯಾವ ಹಳೆಯ ಸುಖ-ದು:ಖದ ಜಾಡು ಹಿಡಿದಿತ್ತು ಅನ್ನೋದು ಕೂಡ ಅರಿವಾಗತ್ತೆ. ಇವೇ ನಮ್ಮ ಸುಖ-ದು:ಖಗಳ trigger-points. ಆಗ ಮೂಡೋ ಸಂತೋಷ-ದು:ಖಗಳನ್ನು ಸಮಚಿತ್ತದಿಂದ ಗಮನಿಸಿದ್ರೆ ಅವು permanent ಆಗಿ ಮರೆಯಾಗುತ್ತವೆ. ಹಳೆಯ ದು:ಖ ಸುಖಗಳಿಂದ ನಮ್ಮಲ್ಲಿ ಬೇಕು- ಬೇಡಗಳು ಮೂಡದ ಹಾಗೆ ನೋಡಿಕೊಂಡ್ರೆ ಸಾಕು. ಆಗ ಮನಸ್ಸಿನ ಹಳೆಯ ರದ್ದಿ ಕರಗಿ ಹೊಸದು ಸೃಷ್ಟಿಯಾಗದೆ ಮನಸ್ಸಿಗೆ ನಲಿವು ಮೂಡತ್ತೆ
"ಏರಿದವನು ಚಿಕ್ಕವನಿರಬೇಕು"
ಉ: ಇವತ್ತು ಅಳಬಾರದು
ಬಹಳ ಇಂಟರೆಸ್ಟಿಂಗ್ ಪ್ರತಿಕ್ರಿಯೆ. ಆಲೋಚನೆಗೆ ಹಚ್ಚಿತು. ಆದದ್ದು ಅಲ್ಲಿಯೇ ಮರೆತು ಹೋಗುವುದು ಕಷ್ಟ, ಆದರೆ ಹಾಗೆ ಮಾಡಿದೊಡನೆ ಮನಸು ನಿರಾಳ ಅನಿಸೋದೂ ನಿಜ.
ಆದರೆ ಮನಸ್ಸು ಎಲ್ಲೆಲ್ಲಿ ಅಲೆದಿತ್ತು ಅನ್ನೋದನ್ನ retrospect ಮಾಡ ಹೋದರೆ ಹಲವು exabyte ಮೆಮೋರಿ ಬೇಕಾಗಬಹುದು, ತಲೆಗೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಇವತ್ತು ಅಳಬಾರದು
"ಆದದ್ದು ಅಲ್ಲಿಯೇ ಮರೆತು ಹೋಗುವುದು ಕಷ್ಟ, ಆದರೆ ಹಾಗೆ ಮಾಡಿದೊಡನೆ ಮನಸು ನಿರಾಳ ಅನಿಸೋದೂ ನಿಜ. "
ಇಲ್ಲ ಹರಿಪ್ರಸಾದ್, ನಾನು ಯಾವುದನ್ನೂ ಮರೆಯಬೇಕೆಂದು ಹೇಳಿಲ್ಲ. ಮರೆಯಲು ಪ್ರಯತ್ನಿಸಲೂ ಬಾರದು. ಮರೆಯುವ ಪ್ರಯತ್ನ ಅದನ್ನು ಇನ್ನಷ್ಟು ನೆನಪಿಸುತ್ತದೆ. ಒಂದೊಮ್ಮೆ ನೀವು ಮರೆತರೂ ಅದು ತಾತ್ಕಾಲಿಕ. ಮನಸ್ಸಿನ ಮೇಲ್ಪದರದಡಿ ಹುದುಗಿ ಮತ್ತೆ ಮೇಲೆಬರಲು ಅಣಿಯಾಗಿರುತ್ತದೆ. ನಡೆದಿರುವುದಕ್ಕೆ ದ್ವೇಷ ಅಥವಾ ತೀವ್ರ ಬೇಡಿಕೆಗಳ ಪ್ರತಿಕ್ರಿಯೆ ಮೂಡಿಸದೆ ಇದ್ದರಾಯಿತು. ಆದರೆ ಇದಕ್ಕೆ ವರ್ಷಗಟ್ಟಳೆಯ ಶ್ರಮಪೂರ್ಣ ಅಭ್ಯಾಸ ಅಗತ್ಯ. ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.
"ಆದರೆ ಮನಸ್ಸು ಎಲ್ಲೆಲ್ಲಿ ಅಲೆದಿತ್ತು ಅನ್ನೋದನ್ನ retrospect ಮಾಡ ಹೋದರೆ ಹಲವು exabyte ಮೆಮೋರಿ ಬೇಕಾಗಬಹುದು, ತಲೆಗೆ!"
ಖಂಡಿತ ಇಲ್ಲ. ನೀವು ಕಂಪ್ಯೂಟರ್ ತಜ್ಞರಾದ್ದರಿಂದ ಅದರ ಜಾಡಿನಲ್ಲೇ ಯೋಚಿಸಿದ್ದೀರ. ಮನಸ್ಸೆಂಬ hard diskನ capacityಯನ್ನಳೆದವರು ಯಾರು? ವಾಸ್ತವವಾಗಿ ತಮ್ಮ ಮಿದುಳಿನ ಮೆಮೊರಿಯನ್ನು ಪೂರ್ತಿ ಸಮರ್ಥವಾಗಿ ಬಳಸಿಕೊಂಡ ಶೂರರೇ ಇಲ್ಲವೇನೋ (ಸಾಮಾನ್ಯರಲ್ಲಿ). ಬಳಸದೆ ಬಳಸದೆ ಎಷ್ಟೋ ಮೆಮೊರಿ unused ಆಗಿ ಉಳಿದಿರುತ್ತದೆ. ಈ ದಿಕ್ಕಿನಲ್ಲಿ ಸಂಶೋಧನೆ ನಡೆದರೆ ಕಂಪ್ಯೂಟರ್ ಕ್ಷೇತ್ರಕ್ಕೆ ಎಂದೂ ಮರೆಯಲಾರದಂಥ ಕೊಡುಗೆ ದೊರೆಯಬಹುದೆನಿಸುತ್ತದೆ. ಪ್ರಯತ್ನಿಸಿ ನೋಡಿ ನನ್ನ ಮಾತಿನ ಯಥಾರ್ಥ ನಿಮಗಾಗುತ್ತದೆ
"ಏರಿದವನು ಚಿಕ್ಕವನಿರಬೇಕು"
ಉ: ಇವತ್ತು ಅಳಬಾರದು
ಇದು ನಿಮ್ಮ ಮತ್ತು ಹರಿಪ್ರಸಾದ ನಡುವಿನ ಪ್ರತಿಕ್ರಿಯೆಯಾದರೂ, ನೀವು ಮಾಡಿದ ವಿಶ್ಲೇಷಣೆ ಸೆಳೆದಿದ್ದರಿಂದ ಪ್ರತಿಕ್ರಿಯೆ ನೀಡುತ್ತಿರುವೆ. ಮನಸ್ಸಿನ ಆಳ ಬೇಗ ತಿಳಿಯದು. ತಿಳಿದರೂ ಬಳಸಲಾಗದು. ಬಳಸಲು ಹೊರಟರೂ ಪೂರ್ತಿಯಾಗಿ ನಿಲುಕದು. ಆದ್ದರಿಂದಲೇ ಭಾವನೆಗಳ ತಾಕಲಾಟ, ಸೊಗಸು ಇನ್ನೂ ಉಳಿದಿವೆ. ಎಲ್ಲವನ್ನೂ ಫಾರ್ಮುಲಾಗಳ ರೂಪಕ್ಕೆ ಪರಿವರ್ತಿಸಿದರೆ, ರೆಡಿಮೇಡ್ ಭಾವನೆಗಳು ಹೊರಬಂದಾವು.
ಹಾಗಾಗದಿರಲಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
"ಮನಸ್ಸಿನ ಆಳ ಬೇಗ ತಿಳಿಯದು"
ನನ್ನ ಅಭಿಪ್ರಾಯವೂ ಅದೇ. ಬೇಗ ತಿಳಿಯುತ್ತದೆ ಎಂದು ನಾನೂ ಎಲ್ಲೂ ಹೇಳಿಲ್ಲ.
"ತಿಳಿದರೂ ಬಳಸಲಾಗದು. ಬಳಸಲು ಹೊರಟರೂ ಪೂರ್ತಿಯಾಗಿ ನಿಲುಕದು"
ಸಾಧನೆಯ ಹಿನ್ನೆಲೆಯಿರದೆ ಹೇಳಿರುವ ಮಾತಿದು. ಆದ್ದರಿಂದ ಇದಕ್ಕೆ ನಾನು ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ನನ್ನ ವ್ಯಕ್ತಿಗತ ಅನುಭವ ಈ ನಿಟ್ಟಿನಲ್ಲಿ ನಿಮ್ಮ ಅನುಭವಕ್ಕಿಂತ ಬೇರೆಯದೇ ಆಗಿದೆ.
"ಆದ್ದರಿಂದಲೇ ಭಾವನೆಗಳ ತಾಕಲಾಟ, ಸೊಗಸು ಇನ್ನೂ ಉಳಿದಿವೆ."
ಇದರಲ್ಲಿ ನಿಮಗೆ ಸೊಗಸು ಕಂಡರೆ ಸಂತೋಷಪಡಿ. ಆದರೆ ಎಲ್ಲರಿಗೂ ಇದು ಅನ್ವಯವಾಗುವುದಿಲ್ಲ. ಅಲ್ಲವೆ?
"ಎಲ್ಲವನ್ನೂ ಫಾರ್ಮುಲಾಗಳ ರೂಪಕ್ಕೆ ಪರಿವರ್ತಿಸಿದರೆ, ರೆಡಿಮೇಡ್ ಭಾವನೆಗಳು ಹೊರಬಂದಾವು"
ಧ್ಯಾನಸ್ಥ ಸ್ಥಿತಿಯ ಬಗ್ಗೆ ನಿಮ್ಮ ಅನುಭವ ಏನೋ ನನಗೆ ತಿಳಿಯದು. ಇಲ್ಲಿ ಯಾರೂ ಫಾರ್ಮ್ಯುಲಾಗಳ ಬಗ್ಗೆ ಮಾತನಾಡಿಲ್ಲ. ಆದರೆ ಒಂದು ವಿಶೇಷ ಇದೆ. ನಿಮಗೆ ಬರುತ್ತಿರುವ ಭಾವನೆಗಳ ಹಿನ್ನೆಲೆಯನ್ನು ಅರಿಯದೆಯೆ ಈ ಮಾತನ್ನಾಡಿದ್ದೀರಿ. ವಾಸ್ತವವಾಗಿ ನಿಮಗೆ ಬರುತ್ತಿರುವ ಭಾವನೆಗಳು ( ನಿಮಗೆ ಮಾತ್ರವಲ್ಲ ಹೆಚ್ಚಿನವರಿಗೆ) ಹೆಚ್ಚಿನವೆಲ್ಲ ರೆಡಿಮೇಡ್ ಭಾವನೆಗಳೇ.
"ಏರಿದವನು ಚಿಕ್ಕವನಿರಬೇಕು"
ಉ: ಇವತ್ತು ಅಳಬಾರದು
ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಪ್ರಾಣಾಯಾಮ ನಾನೂ ಮಾಡ್ತಿದ್ದೀನಿ. ಅದನ್ನು ಶುರು ಮಾಡಿದಾಗಿಂದ ಖಿನ್ನತೆ ಬಹಳಷ್ಟು ಹತೋಟಿಗೆ ಬಂದಿದೆ. ಹಳೆಯದರ ಗುಂಗಿನಲ್ಲಿ ಖಂಡಿತ ದಿನ ಕಳೆಯುವುದಿಲ್ಲ. ನನ್ನ ಖಿನ್ನತೆಗೆ ಭೂತಕಾಲದ ಹಂಗಿಲ್ಲ. ಭವಿಷ್ಯತ್ಕಾಲದ ಭೀತಿಯಿಲ್ಲ. ಅದರ ಬಗ್ಗೆ ವೈಜ್ಞಾನಿಕವಾಗಿ ತಲೆ ಕೆಡಿಸಿಕೊಳ್ಳಲೂ ಹೋಗಿಲ್ಲ. ಆ ಕ್ಷಣದ ಅನಿಸಿಕೆ, ಭಾವನೆ, ಸ್ಥಿತಿ ಅದು. ಅಷ್ಟೇ. ಬರುತ್ತದೆ. ಇರುತ್ತದೆ. ಹೊರಟುಹೋಗುತ್ತದೆ. ಹೋಗುವಾಗ ನನ್ನನ್ನು ಹಿಂದಿಗಿಂತ ಕೊಂಚ ಹೆಚ್ಚು ಪ್ರಜ್ಞಾವಂತೆಯನ್ನಾಗಿ ಮಾಡಿರುತ್ತದೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
"ಪ್ರಾಣಾಯಾಮ ನಾನೂ ಮಾಡ್ತಿದ್ದೀನಿ. ಅದನ್ನು ಶುರು ಮಾಡಿದಾಗಿಂದ ಖಿನ್ನತೆ ಬಹಳಷ್ಟು ಹತೋಟಿಗೆ ಬಂದಿದೆ"
ಸಂತೋಷ. ಆದರೆ ನಾನು ಇಲ್ಲಿ ಪ್ರಸ್ತಾಪ ಮಾಡಿರುವುದು ಪ್ರಾಣಾಯಾಮದ ವಿಷಯವಲ್ಲ. ವಿಪಶ್ಶನದ ಬಗ್ಗೆ. ಇದರಲ್ಲಿ ಉಸಿರನ್ನು ಗಮನಿಸುತ್ತಾ ನಿಮ್ಮ ಭಾವನೆಗಳನ್ನು ಗಮನಿಸುವುದೇ ಮುಖ್ಯ. ಉಸಿರಾಟದ ನಿಯಂತ್ರಣ ಖಂಡಿತ ಇಲ್ಲ.
"ನನ್ನ ಖಿನ್ನತೆಗೆ ಭೂತಕಾಲದ ಹಂಗಿಲ್ಲ. ಭವಿಷ್ಯತ್ಕಾಲದ ಭೀತಿಯಿಲ್ಲ"
ಎರಡೂ ಖಂಡಿತ ಇದೆ ಆದರೆ ನಿಮಗೆ ತಿಳಿದಿಲ್ಲ. ಅಷ್ಟೆ!
ಪಲ್ಲವಿ, ನನ್ನ ಅಭಿಪ್ರಾಯ ನಿಮಗೆ ಬೇಸರ ತರಿಸಿದರೆ ಕ್ಷಮಿಸಿ. ಆದರೆ ನನ್ನ ಅನುಭವದ ನೆಲೆಯಲ್ಲಿ ನಿಮ್ಮ ಪ್ರಶ್ತೆಗೆ ಉತ್ತರಿಸುವ ಒಂದು ಚಿಕ್ಕ ಪ್ರಯತ್ನ ಇದು. ಉಪದೇಶವಾಗಲಿ, ನಿಮ್ಮ ಅನುಭವ ಕಿರಿದು ಎಂದು ಹೀಯಾಳಿಸುವ ಪ್ರಯತ್ನವಾಗಲಿ ಇದಲ್ಲ. ಪ್ರತಿಯೊಬ್ಬರಿಗೂ ಅವರವರ ಬದುಕನ್ನು ರೂಪಿಸುವ, ರೂಢಿಸುವ ಹಕ್ಕು ಇದ್ದೇಇದೆ."ಏರಿದವನು ಚಿಕ್ಕವನಿರಬೇಕು"
ಉ: ಇವತ್ತು ಅಳಬಾರದು
ಹಾಗೇನೂ ಇಲ್ಲ ಸರ್. ನನ್ನ ಅನುಭವ ತುಂಬ ಕಿರಿದು. ಅನಿಸಿದ್ದನ್ನು ಹಾಗೇ ಬರೆದೆ. ಗೊತ್ತಿದೆ ಎಂದಲ್ಲ, ಅನಿಸಿತು ಎಂದು. ವಿಪಶ್ಯನದ ಬಗ್ಗೆ ಗೊತ್ತಿಲ್ಲ. ತಿಳಿದು, ಆಚರಿಸಲು ಪ್ರಯತ್ನಿಸುತ್ತೇನೆ. ನಿಮ್ಮ ಅಭಿಪ್ರಾಯ ಬೇಸರವನ್ನಲ್ಲ, ಗೌರವ ಹುಟ್ಟಿಸಿತು. ಇದ್ಯಾವುದೋ ತಿಳಿಯದ ಹುಡುಗಿ ಬರೆದಿದ್ದು ಎಂದು ನೀವು ಹಗುರವಾಗಿ ಪರಿಗಣಿಸದೇ ಪ್ರಾಮಾಣಿಕವಾಗಿ ಸಲಹೆ ನೀಡಿದ್ದೀರಿ. ಅದಕ್ಕಾಗಿ ಕೃತಜ್ಞತೆಗಳು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
"ನವಿಲುಗಳು ಕುಣಿಯುತ್ತಿವೆ. ಆದರೆ, ಅವು ಏಕೆ ಕುಣಿಯುತ್ತವೆ ಎಂಬ ವೈಜ್ಞಾನಿಕ ಸತ್ಯ ಗೊತ್ತಿರುವುದರಿಂದ, ಅವುಗಳ ಕುಣಿತ ಆಸಕ್ತಿ ಹುಟ್ಟಿಸುತ್ತಿಲ್ಲ. ನಿಜ, ಅವು ಸಂತಸಗೊಂಡಿವೆ" ಈ ಮಾತಿಗೆ ಹೇಳೋದಾದ್ರೆ ಪಲ್ಲವಿ, ವೈಜ್ಞಾನಿಕೆ ಸತ್ಯ ಗೊತ್ತಿದೆ ಅಂದ ಮಾತ್ರಕ್ಕೆ ಮಳೆಯ ತುಂತುರವನ್ನು,ಚಳಿಯ ಮುದವನ್ನು, ಚುಮುಚುಮು ಬಿಸಿಲಿನ ಹಿತವನು ಆಸ್ವಾದಿಸದೆ ಇರಲಾದೀತೆ? ತೀರ ಅಷ್ಟೆಲ್ಲ ಪ್ರ್ಯಾಕ್ಟಿಕ್ಯಾಲಿಟಿ ಬೇಡ. ಹಾಗಾದಲ್ಲಿ ಬದುಕಲ್ಲಿ ಸ್ವಾರಸ್ಯ ಉಳಿಯದು.
ನಿಮ್ಮ ಮನಸಿನ ತಾಕಲಾಟ ಅರ್ಥವಾಗುತ್ತೆ ಎನ್ನುವ ಭಂಡತನ ತೋರಲಾರೆ.ಹೀಗಾಗಿ ಹೀಗೆ ಮಾಡಿದರೆ ಸರಿ ಹೋದೀತು ಅನ್ನುವ ಸಲಹೆ ಕೊಡಲಾರೆ. ಆದರೆ... ಎಲ್ಲರ ಜೀವನದಲ್ಲೂ ಇಂಥ ಕ್ಷಣಗಳು ಬರುತ್ತಲೇ ಇರುತ್ತವೆ. ಆಗಿನ ತಾಕಲಾಟ,ತಳಮಳಗಳನ್ನು ವಿವರಿಸಲು ಶಬ್ದಗಳು ಸಾಕಾಗೋದಿಲ್ಲ. ಅನುಭವಿಸಬೆಕು. ಅಳು ಬಂದಾಗ ಅತ್ತುಬಿಟ್ಟಲ್ಲಿ ಅಷ್ಟರ ಮಟ್ಟಿಗೆ ಜೀವ ಹಗುರ. ನಂತರದ ಮನದ ಭಾರಕ್ಕೆ ಮೌನದ ಮುಸುಗು.
ಜಯಲಕ್ಷ್ಮೀ.ಪಾಟೀಲ್.
ಉ: ಇವತ್ತು ಅಳಬಾರದು
ನಿಜ ಜಯಲಕ್ಷ್ಮೀಯವರೇ, ವೈಜ್ಞಾನಿಕ ಸತ್ಯ ಗೊತ್ತಿದ್ದ ಮಾತ್ರಕ್ಕೆ ಪ್ರತಿಯೊಂದನ್ನೂ ವಾಸ್ತವದ ಒರೆಗೆ ಹಚ್ಚಿ ನೋಡಬಾರದು. ಹಾಗಾದರೆ, ಬದುಕಿನ ಸ್ವಾರಸ್ಯವೇ ಇಲ್ಲವಾಗುತ್ತದೆ. ನಾನು ಹಾಗೆ ನೋಡಲು ಇಷ್ಟಪಡುವುದೂ ಇಲ್ಲ.
ಆದರೆ, ಬರಹದಲ್ಲಿ ಪ್ರಸ್ತಾಪವಾದ ಸಂಗತಿ ಮನಸಿಗೆ ಆ ಕ್ಷಣದಲ್ಲಿ ಅನಿಸಿದ ವಿಷಯ. ಅಷ್ಟೇ. ನೀವು ಹೇಳಿದಂತೆ ಎಲ್ಲರ ಜೀವನದಲ್ಲಿಯೂ ಇಂಥ ಖಿನ್ನ ಕ್ಷಣಗಳು ಬರುತ್ತವೆ. ಅವನ್ನು ಗೆದ್ದು ನಿಲ್ಲುವುದೇ ಬದುಕು. ನನ್ನ ಮಟ್ಟಿಗಂತೂ ಅದು ನಿತ್ಯ ಸತ್ಯ.
ಪ್ರೀತಿಯಿಂದ ಬರೆದ ಪ್ರತಿಕ್ರಿಯೆಗೆ ಧನ್ಯವಾದಗಳು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಇಂಥ ಖಿನ್ನತೆಯ ಕುಲುಮೆಯಲ್ಲಿ ನಾನೂ ಅನೇಕ ದಿನಗಳನ್ನು, ರಾತ್ರಿಗಳನ್ನು ಕಳೆದಿದ್ದೇನೆ. ನನಗೆ ಕನ್‌ಸಿಸ್‌ಸ್ಟೆಂಟ್ ಆಗಿ ಇರಲು ಸಾಧ್ಯವಾಗುವುದಿಲ್ಲವಲ್ಲ ಎಂದು ನೆನೆದು ನಲುಗಿದ್ದೇನೆ. ಥೇಟ್ ನಿಮ್ಮ ಹಾಗೆಯೇ ನಾನು ಇದರಲ್ಲೇ ನವೆದುಹೋಗಿಬಿಡುತ್ತೇನಾ ಎಂದು ಗಾಬರಿಯಾಗಿದ್ದೇನೆ. ‘ಯು ಕೆನ್ ವಿನ್’ ನಂಥ ಪುಸ್ತಕಗಳ ಪುಟಗಳು ಅಕ್ಷರಗಳಲ್ಲಿನ ಜೀವ ಕಳೆದುಕೊಂಡ ದಸ್ತಾವೇಜುಗಳಾಗಿ ಕಾಣುತ್ತವೆ.
ಆದರೆ ಅದೇನೋ ತಾನಾಗಿ ಮಬ್ಬು ಸರಿಯುತ್ತದೆ. ಕೊಂಚ ಬೆಳಕು ಹರಿದಂತಾಗುತ್ತದೆ. ಬರವಣಿಗೆಗೆ ಬದುಕಿಗೆ ಹೊಸ ಒಳನೋಟಗಳು ಸಿಕ್ಕಹಾಗಾಗುತ್ತವೆ. ಇದಕ್ಕೇ ನಾನು ಖಿನ್ನತೆಯನ್ನು (ಅದು ಮಾನಸಿಕ ಅನಾರೋಗ್ಯಕ್ಕೆ ಈಡು ಮಾಡುವಷ್ಟು ಪ್ರಭಾವಶಾಲಿಯಾಗಿರದಿದ್ದರೆ) ಕುಲುಮೆ ಎಂದು ಭಾವಿಸುವೆ. ನಮ್ಮ ಪ್ರಜ್ಞೆಗೆ ಹೊಸ ಹೊಳಪು ಕೊಡುವ ಕುಲುಮೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಇವತ್ತು ಅಳಬಾರದು
ಹೌದು ಸುಪ್ರೀತ್, ಖಿನ್ನತೆ ಖಂಡಿತ ಪುಟಗೊಳಿಸುವ ಕುಲುಮೆ. ಆದರೆ, ಮೊದಲು ಅದರಲ್ಲಿ ಚೆನ್ನಾಗಿ ಬೇಯಬೇಕಾಗುತ್ತದೆ. ಅದು ನಿಜಕ್ಕೂ ಹಿಂಡಿ ಹಾಕುವಂಥದು. ಅದನ್ನು ನೆನಪಿಸಿಕೊಂಡರೇ ಮಂಕು ಕವಿದಂತಾಗುತ್ತದೆ.
ಆದರೆ, ಹಿಂದೊಮ್ಮೆ ಬರೆದಂತೆ, ಖಿನ್ನತೆ ನನ್ನ ವ್ಯಕ್ತಿತ್ವವನ್ನು ಪುಟಗೊಳಿಸಿದೆ. ಸತ್ವ ತುಂಬಿದೆ. ಹೊಸ ಜಗತ್ತನ್ನು ಪರಿಚಯಿಸಿದೆ. ಹೀಗಾಗಿ ಅದೊಂದು ಅನಿವಾರ್ಯ ಪೀಡೆ. ಅಥವಾ ಮೆಟ್ಟಿಲು. ಹಾಗಂದುಕೊಂಡಿದ್ದರಿಂದಲೇ, ಎಷ್ಟೇ ನೋವಾದರೂ, ಪ್ರತಿ ಸಾರಿ ನಾನು ಗೆದ್ದು ಎದ್ದುಬಂದಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಸ್ವಲ್ಪ ಅಳೊದು ಕಣ್ಣಿನ ಆರೊಗ್ಯದ ದೃಷ್ಟಿಯಿಂದ ಒಳ್ಳೆಯದಂತ್ತೆ..
ಉ: ಇವತ್ತು ಅಳಬಾರದು
ಎಲ ಎಲಾ, ಏನ್ ವಿಮರ್ಶೆ! ಹಾಗಿದ್ರೆ, ನಮ್ಮಂಥ ಹುಡುಗೀರೆಲ್ಲ ಖಂಡಿತವಾಗಿ ಆರೋಗ್ಯವಂತೆಯರು ಬಿಡಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಸ್ವಲ್ಪ ಅಳೊದು... ಅಂದೆ.
ಮತ್ತು ಹುಡುಗಿರ ಆರೊಗ್ಯ ಅಲ್ಲ ಕಣ್ಣಿನ ಆರೊಗ್ಯ..
ಉ: ಇವತ್ತು ಅಳಬಾರದು
ಎರಡೂ ಒಳ್ಳೇ ತಿಳಿಉಳ್ಳ ವಾಕ್ಕೆಗಳು..
..
ಉ: ಇವತ್ತು ಅಳಬಾರದು
ಏನ್ ಹುಡ್ ಗಿರೋ ಅದ್ಯಾಕ್ ಹಿ೦ಗ್ ಆಡ್ತಾರೋ
ಲವ್ವು ಲವ್ವು ಅ೦ತಾ ಕಣ್ಣೀರಿಡ್ತಾರೋ ??
ಉ: ಇವತ್ತು ಅಳಬಾರದು
ನೆನ್ನೆ ಹುಡುಗರ ಗಮನ ಸೆಳೆಯೋಕೆ ಹೋಗಿದ್ದು ಏನಾರೂ ವ್ಯತ್ಯಾಸ ಆಯ್ತಾ ಹ್ಯಾಗೆ?
ಉ: ಇವತ್ತು ಅಳಬಾರದು
ಛೇ ಛೇ, ಅಂಥದ್ದೇನೂ ಇಲ್ಲ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಅರೆರೆ, ಎಲ್ಲೆಲ್ಲಿ ಹೋಗ್ತಿದೆ ನಿಮ್ಮ ಲಹರಿ! ಖಂಡಿತ ಇಲ್ಲ ಮುರಳಿ. ಇಡೀ ಬರಹ ಅದ್ಯಾವುದೋ ನೆನಪಿನ ಸುರುಳಿ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ನನಗನ್ನಿಸುತ್ತೆ "ಅಳು" ಅಂದ್ರೆ ಸೋಲಿನ ದಿಗ್ಬ್ರಮೆ, ಅದು ಬರೀ ಕಣ್ಣಿನ ನೀರಲ್ಲ. ಮನಸ್ಸು ಕುಗ್ಗುತ್ತೆ, ಚಡಪಡಿಸುತ್ತೆ, ನರಳುತ್ತೆ,; ಇವೆಲ್ಲಾನೂ ಅಳುನೇ, ಕಾಣೊದಿಲ್ಲ ಅಷ್ಟೇ. ಇವತ್ತು "ನಾನು" ಸೊತ್ರೂನೂ ಅಳಲ್ಲ ಅಂತ ನಿರ್ದಾರ ಮಾಡಕ್ಕೆ ಆಗೋದು ತೀರಾ Low Expectation ಇದ್ದಾಗ ಅಥವಾ ಒಂಥರಾ ಭಂಡ ಧೈರ್ಯ ( ಸ್ವಲ್ಪ ಅಹ೦ or self Esteem ) ಇದ್ದಾಗ ಅಷ್ಟೇ....
ಉ: ಇವತ್ತು ಅಳಬಾರದು
ಮರೆತಿದ್ದೆ!!!
ನನಗೆ ಲೇಖನ ಇಷ್ಟ ಆಯ್ತು... ನಿಮ್ಮ ಮನಸ್ಸು ಮತ್ತಷ್ಟು ಮಾತಾಡಲಿ...
ಉ: ಇವತ್ತು ಅಳಬಾರದು
ಥ್ಯಾಂಕ್ಸ್ ಯೋಗೇಶ್. ಮನಸ್ಸು ಹೀಗೇ ಮಾತಾಡಲಿ ಎಂದು ನಾನೂ ಆಶಿಸುತ್ತೇನೆ. ಮಾತಾಡಿದಷ್ಟೂ ಅದು ಬೆಳೆಯುತ್ತದೆ. ವಿಶಾಲವಾಗುತ್ತದೆ. ಆಳವಾಗುತ್ತದೆ. ಅಲ್ವೇ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಸೋತಾಗೆಲ್ಲ ಅಳುವುದಿಲ್ಲ ನಾನು. ಅವಡುಗಚ್ಚಿ ಎದ್ದು ಬರಲು ಯತ್ನಿಸುತ್ತೇನೆ. ಆದರೆ, ಇದು ಕಾರಣವೇ ಗೊತ್ತಿಲ್ಲದ ಸಮಸ್ಯೆ. ಕಾರಣ ಇದ್ದೀತು, ಆದರೆ ಗೊತ್ತಾಗುವುದಿಲ್ಲ. ಸುಮ್ನೇ ಖಿನ್ನತೆ. ಎಲ್ಲ ಸಮಯದಲ್ಲಿ ತರ್ಕ ಸಹಾಯಕ್ಕೆ ಬರುವುದಿಲ್ಲ. ಏಕೆಂದರೆ, ಹೃದಯಕ್ಕೆ ತನ್ನದೇ ಆದ ತರ್ಕವಿರುತ್ತದೆ. ಅದನ್ನು ತರ್ಕದಿಂದ ಗೆಲ್ಲಲು ಆಗುವುದಿಲ್ಲ. ಕೊಂಚ ಸಮಯ ಬೇಕು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ತಮಾಶೆ ಅನ್ನಿಸಿದರೆ ಬಿಟ್ಟು ಬಿಡಿ, ‘ಹೃದಯ’ಕ್ಕೆ ತರ್ಕ ಇದೆ ಅನ್ನೋದನ್ನ ನಾನು ಈಗಲೇ ಮೊದಲು ಕೇಳಿದ್ದು. ನಮ್ಮ ತರ್ಕವೂ, ಅದನ್ನು ಮೀರುವ ಭಾವವೂ, ಅದನ್ನು ನಿಯಂತ್ರಿಸುವ ಸಂಯಮವೂ ಹುಟ್ಟುವುದು ನಮ್ಮ ಮೆದುಳಿನಲ್ಲೇ. ಸುಮ್ಮನೆ ಹೃದಯದ ಮೇಲೆ ಏನೇನೆಲ್ಲಾ ಆರೋಪಗಳು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಇವತ್ತು ಅಳಬಾರದು
ನಿಮ್ಮ ವಾದ ಒಪ್ಪುವುದು ಒಂದಿಷ್ಟು ಕಷ್ಟ. ಭಾವನೆಗಳನ್ನು ನಿಯಂತ್ರಿಸುವ ತಂತು ಹೃದಯದಲ್ಲಿದೆ ಎಂಬುದು ಇತ್ತೀಚಿನ ವೈಜ್ಞಾನಿಕ ಸಂಶೋಧನೆ ಎಂಬುದನ್ನು ಓದಿದ ನೆನಪು. ನಾಗೇಶ ಹೆಗಡೆಯವರು ಬರೆದಿದ್ದೋ ಏನೋ ಸರಿಯಾಗಿ ನೆನಪಾಗುತ್ತಿಲ್ಲ. ಅಂತರ್ಜಾಲ ತಾಣದಲ್ಲಿ ಹುಡುಕಿದರೆ ಸಿಗಬಹುದೇನೋ.
ಈ ವಾದದ ಹೊರತಾಗಿಯೂ, ರೂಢಿಗತವಾಗಿ ಹೃದಯ ಭಾವನೆಗಳ ಕೇಂದ್ರ ಎಂದು ಹೇಳುತ್ತಾರೆ. ಹೀಗಾಗಿ ನಾನೂ ಅದನ್ನೇ ಬಳಸಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಪಲ್ಲವಿ ಅವ್ರೆ .. ಲೇಖನ ಚೆನ್ನಾಗಿದೆ.
ಭಾವನೆಗಳಿಲ್ಲದವರು ಯಾರಿದ್ದಾರೆ ಹೇಳಿ?.....ಆದ್ರೆ ನಮ್ಮಂತವರು ಬೇರೆಯವರಿಗೆ ಗೊತ್ತು ಪಡಿಸಲ್ಲ... ಜನರ ನಡುವಿನಿಂದ ಎಸ್ಕೇಪ್ ಆಗಿ ಬಿಡ್ತೀವಿ!. ನಾನಂತೂ ಅಂತ ಕೆಲ ಸಂದರ್ಭದಲ್ಲಿ ಸಿಕ್ಕಾಬಟ್ಟೆ high beats ಇರೋ ಸಂಗೀತನ ಕಿವೀಗೆ ಹಾಕ್ಕೊಂಡ್ ಬಿಡ್ತೀನಿ!
ನಿಮ್ಮ ಈ ಪ್ರಾಬ್ಲಮ್ಮಿಗೆ ಒಂದು ಸರಳ ಸಲುಶನ್ :: ಒಂದು ಒಳ್ಳೆಯ ಹೆಗಲು ಹುಡುಕಿಕೊಳ್ಳಿ
!
ಸವಿತೃ
ಉ: ಇವತ್ತು ಅಳಬಾರದು
ಸವಿತೃ ಅದು ಲೇಖನವಲ್ಲ, ಅನುಭವ.
ಇತರರೊಂದಿಗೆ ಹಂಚಿಕೊಳ್ಳುವುದಕ್ಕಿಂತ, ಸ್ವಗತ ರೂಪದಲ್ಲಿ ಬರೆದುಕೊಂಡಿದ್ದು. ಸಂಗೀತ ಅದನ್ನು ಮರೆಸುವ, ಕಳೆಯುವ ಉತ್ತಮ ಸಾಧನ ಎಂಬುದು ನಿಜ.
ಇನ್ನು ನಿಮ್ಮ ಸಲಹೆ ಅಮೋಘವಾಗಿದೆ. ಆದರೆ, ಅಳಲೆಂದೇ ಹೆಗಲು ಹುಡುಕಿಕೊಂಡರೆ, ಆ ಹೆಗಲುಗಳನ್ನು ಹೊತ್ತ ತಲೆಗೆ ತುಂಬ ಬೇಸರವಾಗಬಹುದು ಎಂಬ ಅಳುಕು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಅಳಬೇಕು ಅತ್ತು ’ಬಿಡ’ಬೇಕು...
ಅಳಬೇಕು ಅತ್ತು ’ಮುಗಿ’ಸಬೇಕು
ಇಲ್ಲಾ ಅಂದ್ರೆ ಅತ್ತು ಅತ್ತು
ಬೋರ್ ಆಗತ್ತೆ ಮಾಯ್ಸಣ್ಣ||
ಉ: ಇವತ್ತು ಅಳಬಾರದು
http://sampada.net/blog/mahesha/12/11/2007/6252
ಪಲ್ಲವಿ ವಸಿ ಅದಂ ನೋಡಿ.
ಉ: ಇವತ್ತು ಅಳಬಾರದು
ನಿಜ. ಅತ್ತು ’ಬಿಡ’ಬೇಕು. ಇಲ್ಲಾಂದ್ರೆ ಅತ್ತು ’ಮುಗಿ’ಸಬೇಕು. ಎರಡೂ ಮಾಡದಿದ್ದರೆ ಬೋರಾಗುವುದು ಖಂಡಿತ. ಸಾಧ್ಯವಾದರೆ, ಅಳುವಿನ ಕಾರಣ ತಿಳಿಯಬೇಕು. ಅದಕ್ಕೆ ಮನಸ್ಸು ’ತಿಳಿ’ಯಾಗಬೇಕು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಪಲ್ಲವಿಯವರೆ,
ನನಗೂ ಆಗಾಗ ಹಳೆಯ ನೋವಿನ ಸಂಗತಿಗಳು ನೆನಪಾಗಿ ಮನಸ್ಸು ಖಿನ್ನವಾಗುತ್ತೆ. ಅದ್ಯಾಕೋ ಹಳೆಯ ಸಂತೋಷದ ವಿಷಯಗಳನ್ನು ಮನಸ್ಸು ಹೆಚ್ಚಾಗಿ ನೆನೆಯುವುದಿಲ್ಲ! ಮನಸ್ಸನ್ನು ಹತೋಟಿಯಲ್ಲಿಡುವ ಹಲವು ಬಗೆಗಳು ಗೊತ್ತು. ಆದರೂ ಅವನ್ನು ಮಾಡಲು ಹೋಗುವುದಿಲ್ಲ. ಇದ್ಯಾಕೆ ಹೀಗೆಂದು ವಿಶ್ಲೇಷಿಸಿದಾಗ ಅನ್ನಿಸಿದ್ದು, ನನ್ನ ಮನಸ್ಸಿಗೆ ಖಿನ್ನತೆ ಒಂಥರ ಇಷ್ಟವೇ ಇರಬೇಕು ಅಂತ. ಅದಕ್ಕೆ "ಅಯ್ಯೋ ಪಾಪ, ನೀನೆಷ್ಟು ದುಃಖಿ, ಎಷ್ಟೆಲ್ಲ ಕಷ್ಟವನ್ನು ಅನುಭವಿಸಿದ್ದೀಯ" ಎನ್ನುವ self-pity ಆಗಾಗ ಬೇಕು. ಈ ಮೂಡಿನಿಂದ ಹೊರಬರುವ ಯಾವುದೇ ಪರಿಹಾರ ಸರಿಗಾಣುವುದಿಲ್ಲ. ನನಗೆ ಹೀಗಿರುವುದೇ ಬೇಕು, ನನ್ನನ್ನು ನನ್ನ ಪಾಡಿಗೆ ಇದನ್ನು ಅನುಭವಿಸಲು ಬಿಟ್ಟುಬಿಡಿ ಎನ್ನುವ ಭಾವನೆ. ಹೆಚ್ಚಾಗಿ ಭಾವಜೀವಿಗಳಿಗೆ ಹೀಗಾಗುತ್ತೇನೋ ಅನ್ನಿಸುತ್ತೆ.
ಮೊದಮೊದಲು, ಹೀಗೆ ಮನಸ್ಸು depressionಗೆ ಜಾರುತ್ತಿರುವಾಗ ಅರಿವಾಗುತ್ತಿರಲಿಲ್ಲ. ಈ ನಡುವೆ, ಇನ್ನೇನು ಒಂದು ತರಹದ moodiness ಆವರಿಸಿಕೊಳ್ಳುತ್ತಿದೆಯೆನ್ನುವಾಗಲೇ ಜಾಗೃತವಾಗಿ ಹೊರಬರಲು ಪ್ರಯತ್ನ ಮಾಡುತ್ತೇನೆ. ಒಮ್ಮೊಮ್ಮೆ ಇದನ್ನು ಅನುಭವಿಸಲು ಇಷ್ಟವಾಗಿ ಹಾಗೆಯೇ ಅನುಭವಿಸಿ ಹೊರಬರುತ್ತೇನೆ. ಇದರಿಂದ ನನಗೆ ಒಂದು ವಿಷಯವಂತೂ ಖಾತ್ರಿಯಾಗಿದೆ. ನನ್ನ ಮನಸ್ಸನ್ನು ನನ್ನ ಹತೋಟಿಯಲ್ಲಿಡಲು ಸಾಧ್ಯವಿದೆ. ಆದರೆ, i guess, sometimes I choose not to. I simply let go and let my emotions have a field day
ಯಾಕೆ ಗೊತ್ತಾ? emotions ನಿಯಂತ್ರಿಸುವ ಮನುಷ್ಯ ಯೋಗಿಯಾದಾನು, ಆದ್ರೆ, ನನಗಿನ್ನೂ ಮನುಷ್ಯಳಾಗಿಯೇ ಉಳಿಯಲು ಇಷ್ಟ!
~ಕಲ್ಪನ
ಉ: ಇವತ್ತು ಅಳಬಾರದು
ಬ್ಯೂಟಿಫುಲ್ ಕಲ್ಪನಾ, ನನ್ನ ಮನಸ್ಸಿನಲ್ಲಿರುವ ಮಾತನ್ನೇ ಬರೆದಿದ್ದೀರಿ.
ನಾನು ಸಹ ಖಿನ್ನತೆಯನ್ನು ಒಮ್ಮೊಮ್ಮೆ ಸವಿಯುತ್ತೇನೆ. ಆದರೆ, ಅದು ಒಮ್ಮೊಮ್ಮೆ ಮಾತ್ರ. ಉಳಿದಂತೆ, ಅದರ ನೋವು ಸಹಿಸಲಸಾಧ್ಯ. ನಿಯಂತ್ರಣದಲ್ಲಿರುವ ಖಿನ್ನತೆ ನಿಜಕ್ಕೂ ಕ್ರಿಯಾಶೀಲತೆಯೇ. ಆದರೆ, ನನ್ನ ವಿಷಯದಲ್ಲಿ ತುಂಬ ಸಾರಿ ನಾನೇ ಅದರ ನಿಯಂತ್ರಣದಲ್ಲಿರುತ್ತೇನೆ.
ಆದರೆ, ಎಂದಿಗೂ ಅದು ಪೂರ್ತಿ ಗೆಲುವು ಸಾಧಿಸಲು ಬಿಟ್ಟಿಲ್ಲ. ಹೆಚ್ಚೆಂದರೆ ಒಂದೆರಡು ದಿನ ಇರುತ್ತದೆ. ಹಾಗಿದ್ದರೂ, ನಾನು ಏನಾದರೂ ಕ್ರಿಯಾಶೀಲ ಕೆಲಸ ಮಾಡಲು ಯತ್ನಿಸುತ್ತ, ಅದನ್ನು ಹತೋಟಿಯಲ್ಲಿ ಇಟ್ಟಿರುತ್ತೇನೆ.
ತೀರಾ ಉಕ್ಕಿದಾಗ ಇದ್ದೇ ಇದೆಯಲ್ಲ ಬರೆಯುವುದು. ನನಗೆ ಹಿಡಿಸಿದ ಹಲವಾರು ಬರವಣಿಗೆಗಳು ಈ ಸಮಯದಲ್ಲಿ ಬರೆದವು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಇವತ್ತು ಅಳಬಾರದು
ಯಾಕ್ರಿ... ಮೊಗ್ಗಿನ ಮನಸು ಸಿನಿಮಾ ನೋಡಿ ಬಂದು ಖಿನ್ನತೆ ಬಂತಾ??? ಮೊದಲೇ ಖಿನ್ನತೆಯಿಂದ ಬಳತಾಯಿದ್ರಾ????
ಏನೋಪ ಒಂದು ಗೊತ್ತಾಗ್ತಾಯಿಲ್ಲ....
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಇವತ್ತು ಅಳಬಾರದು
ತುಂಬ ಚೆನ್ನಾದ ಮಾತು...
... ನಾನ್ ಒಂದ್ ಸಲ ತುಂಬ ಹೊತ್ತಿನ ಮೇಲೆ ಆಕೆ ಡೆಸ್ಕ್ ಹತ್ತಿರ ಹೋದೆ, ಸುಮ್ಮನೆ ಕೂತಿದ್ದು ನೋಡಿ, ಕೇಳಿದೆ,.. ವಾಟ್ ಯಾರ್ ನೋ ಮೂಡ್ ಟು ಕ್ರೈ ಟುಡೇ?(ಯಾಕ್ರಿ ಇವತ್ತು ಅಳುವ ಮೂಡ್ ಇಲ್ಲವಾ?).. ಅಳು ಶುರು...
..
ಈ ಸೆಲ್ಫ಼್ ಪಿಟಿ ಹೆಂಗಳೆಯರಿಗೆ ಹೆಚ್ಚು.. ಗಂಡಸರಿಗೆ ಇರುವದೇ ಇಲ್ಲ ಅನ್ನಲಾಗದು, ಆದರೂ ಹೆಂಗಳೆಯರಿಗೆ ತುಸ ಹೆಚ್ಚು...
ನನ್ನ ಕೊಲಿಗ್ ಒಬ್ಬಾಕೆ.. ವಸಿ ಹೆಚ್ಚೇ ಅಳುಮುಂಜಿ..
ಹೆಣ್ಣು ಮಕ್ಕಳಿಗೆ ಎಲ್ಲಕ್ಕಿಂತ ಹೆಚ್ಚಾಗಿ ’ಕೇಳುವ ಕಿವಿ’ ಬೇಕು,.. ತನ್ನ ನೋವು, ದುಕ್ಕ-ದುಮ್ಮಾನ ಹೇಳಿಕೊಂಡರಸ್ಟೇ ಸಾಕು, ಅವರ ಮನ ಹಗುರ ಹಗುರ,.. ಅವರಿಗೆ ಹಾಗೆ ಮಾಡು, ಹೀಗೆ ಮಾಡು ಅನ್ನುವ ಸಲಹೆ ಬೇಕಿಲ್ಲ,.. ಬರೀ ಕೇಳಿದರೆ ಸಾಕು,.. ಹೌದ?.. ಅಯ್ಯೋ ಪಾಪ!!.. ಅಂತಿದ್ದರೆ ಸಾಕು,..
ಪಲ್ಲವಿ,.. ಆದಸ್ಟು ಜಲ್ದಿ ಹೆಗಲು ಹುಡುಕಿಕೊಳ್ಳಿ,.. ಕೇಳುವ ತಲೆಗೆ ಬೇಜಾರಾದರೆ,.. ಅನ್ನುವ ಚಿಂತೆ ಬೇಡ,.. ಆದರೆ ಆಗಲಿ,..
ಖಿನ್ನತೆ ತೀವ್ರಗತಿಯಲ್ಲಿದ್ದರೆ,.. ಡಾಕ್ಟರ್‍ನ ಕಾಣಿರಿ,.. ತಪ್ಪಿಲ್ಲ,..
ಟೇಕ್ ಗುಡ್ ಕೇರ್ ಆಫ಼್ ಯುವರ್‍ಸೆಲ್ಫ಼್..,,... ಅದು ತುಂಬ ಮುಕ್ಯ,.....
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಇವತ್ತು ಅಳಬಾರದು
ಸಂಗಣ್ಣೋರೆ,
ನಾವು ಹೆಂಗಸರು ಬಡಬಡನೆ ಮಾತಾಡಿ, ಮನಸ್ಸಿನಲ್ಲಿದ್ದದ್ದನ್ನು ತೋಡಿಕೊಂಡು ಹಗುರ ಮಾಡಿಕೋತೀವಿ. ನಮ್ಮ longevityಗೆ ಇದೇ ಕಾರಣವಿರಬೇಕು(ಅಥವ ನಮ್ಮ ಗೋಳು ಕೇಳುವುದಕ್ಕಿಂತ ಸಾವೇ ಮೇಲೆಂದುಕೊಳ್ಳುತ್ತೀರೋ ನೀವುಗಳು ತಿಳಿಯದು!) ಗಂಡಸರು ಎಲ್ಲವನ್ನೂ ಒಳಗೆ ಇಟ್ಟುಕೊಂಡು ಕುದ್ದುಹೋಗುತ್ತಾರೆ, ಅಥವ, ಇಲ್ಲಿ ಸಂಪದದಲ್ಲಿ ಸಿಕ್ಕ ಸಿಕ್ಕ ಟಾಪಿಕ್ ತೆಗೆದುಕೊಂಡು ಅದರ ತಿಥಿ ಮಾಡುತ್ತಾರೆ
ಪರವಾಗಿಲ್ವೆ, ಹೆಂಗೆಳೆಯರ ಮನಸ್ಸು ಚೆನ್ನಾಗಿ ಅರಿತಿದ್ದೀರಿ
~ಕಲ್ಪನ
ಉ: ಇವತ್ತು ಅಳಬಾರದು
ಅದೇನೋರೀ,.. ಕಣ್ಣಿನ ರೆಪ್ಪೆಗಳ ಮೇಲೆ ಕಣ್ಣಿನ ಚಿತ್ರ ಬರಕೊಂಡು,.. ತೂಕಡಿಸುತ್ತ, ಹೂಂಗುಟ್ಟುತ್ತ, ಕುಳಿತರು ಸಾಕು,.. ಹೆಣ್ಮಗಳೂ ಹ್ಯಾಪ್ಪಿ,.. ನರಮನ್ಸಾನೂ ಹ್ಯಾಪಿ,.. ಇದು ನನಗೆ ಹೀಗೆ ಪುಕ್ಕಟೆ ಸಿಕ್ಕ ಫಾರ್ಮುಲ..
ಉ: ಇವತ್ತು ಅಳಬಾರದು
ಸಂಗನ ಗೌಡ್ರೆ ಹಾಗಾದ್ರೆ ಒಂದು ಕೌನ್ಸಲಿಂಗ್ ಸೆಂಟರ್ ತೆರೆದು ಬಿಡ್ರೀ, ಚೆಂದಾಗಿ ನಿದ್ದೇನೂ ಮಾಡಬಹುದು, ಕಾಸೂ ಮಾಡ್ಕೋಬಹುದು, ಜೊತೆಗೆ ಸಮಾಜ ‘ಸೇವೆ’ನೂ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com