ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಯಾತಕ್ಕೆ ಮಳೆ ಹೋದವೋ...
ಮೋಡಗಳು ಮುನಿಸಿಕೊಂಡಿವೆ.
ನಾನು ತಲೆ ಎತ್ತಿ ನೋಡುತ್ತಲೇ ಇದ್ದೇನೆ. ನೀಲಿ ಆಗಸ ಒಂಚೂರೂ ಕಾಣದ ಹಾಗೆ ಮೋಡಗಳಿವೆ. ಆದರೆ, ಮಳೆ ಬರುತ್ತಿಲ್ಲ. ಆಷಾಡದ ಗಾಳಿಗೆ ಮೋಡಗಳು ಸುಮ್ಮನೇ ತೇಲಿ ಹೋಗುತ್ತಿವೆ. ಕಪ್ಪು ಮೋಡಗಳು ಅಪರೂಪವಾಗಿ, ಬಿಳಿ ಮೋಡಗಳ ತೆಳು ಸಾಮ್ರಾಜ್ಯದ್ದೇ ಕಾರುಬಾರು. ಗಾಳಿಗೆ ಸಿಕ್ಕಿ ತೇಲಿ ಹೋಗುವ ಅರಳೆ ಉಂಡೆಗಳಂತೆ ಸೆಳೆತಕ್ಕೆ ಸಿಕ್ಕವಂತೆ ಎಲ್ಲೋ ಹೊರಟಿವೆ.
ಏಕೆ ಮಳೆ ಬರುತ್ತಿಲ್ಲ?
ಹವಾಮಾನ ವೈಪರಿತ್ಯ ಎನ್ನುತ್ತದೆ ಯಾವಾಗಲೂ ಎಡವುವ ಹವಾಮಾನ ಇಲಾಖೆ. ಎಲ್ ನಿನೋ ಎಂದು ಬಡಬಡಿಸುತ್ತಾರೆ ಕೃಷಿ ವಿಶ್ವವಿದ್ಯಾಲಯದ ಒಂದಿಷ್ಟು ಬುದ್ಧಿವಂತರು. ಹಾಗಂದರೇನು ಎಂದು ಕೇಳಿದರೆ ಅವರಿಗೇ ಸರಿಯಾಗಿ ಗೊತ್ತಿಲ್ಲ. ಎಲ್ಲೋ ಅಟ್ಲಾಂಟಿಕ್ ಸಾಗರದ ಹವಮಾನದಲ್ಲಿ ಆಗಾಗ ಇಂಥ ಬದಲಾವಣೆಗಳಾಗುತ್ತವಂತೆ. ಬಿಸಿ ನೀರ ಪ್ರವಾಹದ ವೈಪರಿತ್ಯದಿಂದ ಸಮುದ್ರದ ನೀರು ಅಗತ್ಯಕ್ಕಿಂತ ಹೆಚ್ಚು ಆವಿಯಾಗುತ್ತದೆ. ಹೀಗೆ ಹುಟ್ಟಿದ ಮೋಡಗಳು ಕೆಲ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿಸಿಬಿಡುತ್ತವೆ. ಇನ್ನೊಂದೆಡೆ, ನಿಗದಿತ ಪ್ರಮಾಣದಲ್ಲಿ ಮಳೆ ಬೀಳಬೇಕಾದ ಪ್ರದೇಶಗಳತ್ತ ಹೋಗುವ ಮೋಡಗಳ ಮೈಯಲ್ಲಿ ತೇವಾಂಶವೇ ಉಳಿದಿರುವುದಿಲ್ಲವಂತೆ. ಆಗ ಇಂಥ ಪರಿಸ್ಥಿತಿ ಉಂಟಾಗುತ್ತದಂತೆ.
ಇಂಟರ್‌ನೆಟ್‌ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ಎಂದು ಅನ್ನಿಸಿದರೂ ಅತ್ತ ಮನಸ್ಸು ಹರಿಯಲಿಲ್ಲ.
ಮಾಹಿತಿ ತೆಗೆದುಕೊಂಡೇನು ಮಾಡುವುದು? ನಮ್ಮನ್ನು ಎಚ್ಚರಿಸಬೇಕಾದ ಹವಾಮಾನ ಇಲಾಖೆಯೇ ಸುಮ್ಮನೇ ಕೂತಿದೆ. ಮಾಹಿತಿಯಿಂದ ನಮಗೇನು ಉಪಯೋಗ ಈಗ? ಮಳೆ ಸರಿಯಾಗಿ ಬಂದಿಲ್ಲ. ಬರುವ ಲಕ್ಷಣಗಳೂ ಕಾಣುತ್ತಿಲ್ಲ. ಅದೊಂದೇ ವಾಸ್ತವ.
ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳ ರೈತರು ಬಿತ್ತನೆ ಮಾಡಿ ಒಂದು ತಿಂಗಳಾಯಿತು. ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ಮಾಡಿದ್ದರು. ಗುಂಡೇಟು ತಿಂದಿದ್ದರು. ರಾಸಾಯನಿಕ ಗೊಬ್ಬರ ಇಲ್ಲದಿದ್ದರೆ ಬೆಳೆಯಲು ಸಾಧ್ಯವೇ ಇಲ್ಲ ಎಂಬಂತೆ ವರ್ತಿಸಿ ಬಿತ್ತಿದ್ದರು. ಈಗ ನೋಡಿದರೆ ಮಳೆಯೇ ಇಲ್ಲ. ಮೊಳಕೆಯೊಡೆದು ಗೇಣಗಲ ಎದ್ದಿರುವ ಬೆಳೆಗಳು ನಿಧಾನವಾಗಿ ಹಳದಿಯಾಗುತ್ತಿವೆ. ಇನ್ನೊಂದಿಷ್ಟು ದಿನದಲ್ಲಿ ಅವು ಒಣಗಿ ಸಾಯುತ್ತವೆ.
ಆಗ ಮತ್ತೆ ರೈತರ ಆತ್ಮಹತ್ಯೆ ಶುರುವಾಗುತ್ತದೆ. ಗಣೇಶ ಚತುರ್ಥಿ ಹೊತ್ತಿಗೆ ಗಣೇಶನ ಬದಲಾಗಿ, ರೈತರ ಶವಗಳ ಮೆರವಣಿಗೆಯೇ ಎಲ್ಲ ಕಡೆ ಕಂಡೀತು.
ಮತ್ತೆ ತಲೆ ಎತ್ತಿ ನೋಡುತ್ತೇನೆ. ಅಂಥ ಸ್ಥಿತಿ ತರಬೇಡಿ ಎಂದು ಮೋಡಗಳನ್ನು ಬೇಡಿಕೊಳ್ಳುತ್ತೇನೆ. ಆದರೆ, ಮೋಡಗಳಿಗೆ ಮೊರೆ ಅರ್ಥವಾಗುವುದಿಲ್ಲ. ಅವಕ್ಕೆ ತಮ್ಮದೇ ಆದ ಗುರಿಯಿದೆ. ದಾರಿಯಿದೆ. ಲೆಕ್ಕಾಚಾರವಿದೆ. ಎಲ್ಲ ಮನವಿಗಳನ್ನು ನಿರ್ಲಕ್ಷ್ಯಿಸಿ ಹಾರಿ ಹೋಗುತ್ತಿವೆ.
ಈಗ ಸರ್ಕಾರ ಮೋಡ ಬಿತ್ತನೆಯ ಮಾತನ್ನಾಡುತ್ತಿದೆ. ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮಾತನ್ನಾಡುತ್ತಿದೆ. ಕೆಲಸ ಮಾಡಬೇಕೆನ್ನುವ ವಿಚಾರದ ಬಿತ್ತನೆ ರಾಜಕಾರಣಿಗಳ ಮೆದುಳಿನಲ್ಲಿ ಆಗಿದ್ದರೆ, ಉತ್ಸಾಹದ ವಿದ್ಯುತ್ ಅವರ ಮೈಯೊಳಗೆ ಇದ್ದರೆ ಈ ಪರಿಸ್ಥಿತಿಯನ್ನು ನಾವು ಚೆನ್ನಾಗಿ ನಿಭಾಯಿಸಬಹುದಿತ್ತೇನೋ. ಆದರೆ, ಶಾಸಕರ ಖರೀದಿಯಲ್ಲಿ ಅವರು ತೋರಿದ ಉತ್ಸಾಹದ ಕಾಲು ಭಾಗ ಈ ಸಮಸ್ಯೆ ಪರಿಹರಿಸುವುದರಲ್ಲಿ ಕಾಣುತ್ತಿಲ್ಲ.
ಮನಸ್ಸು ಮತ್ತೆ ಮತ್ತೆ ಮೊರೆಯಿಡುತ್ತಿದೆ: ’ಎಲ್ಲಿ ಓಡುವಿರಿ, ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ...’ ಊಹೂಂ, ಮೋಡಗಳು ನಿಲ್ಲುತ್ತಿಲ್ಲ. ಹನಿ ಚೆಲ್ಲುತ್ತಿಲ್ಲ. ಅವುಗಳ ಮುನಿಸು ಅರ್ಥವಾಗುತ್ತಿಲ್ಲ. ನಮ್ಮ ಕನಸು ಅವಕ್ಕೆ ಗೊತ್ತಾಗುತ್ತಿಲ್ಲ. ಹಾರುವ ಮೋಡಗಳ ಜೊತೆಜೊತೆಗೆ ಉತ್ಸಾಹವೂ ಹಾರಿ ಹೋದಂತಾಗಿದೆ.
ಮತ್ತೆ ಮಳೆ ಬಂದೀತೆ? ನೆಮ್ಮದಿ ತಂದೀತೆ?
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 462 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಯಾತಕ್ಕೆ ಮಳೆ ಹೋದವೋ...
ಪಲ್ಲವಿಯವರೇ, ಈ ಮಳೆತರಿಸುವುದು ಸರ್ಕಾರ, ಹವಾಮಾನ ಇಲಾಖೆ, ಯಾರ ಕೈಯಲ್ಲೂ ಇಲ್ಲ. ಅದಾಗೆ ಬರಬೇಕಷ್ಟೇ ವಿನಃ ಸರ್ಕಾರಗಳು, ಹವಾಮಾನ ಇಲಾಖೆಗಳು ಏನನ್ನೂ ಮಾಡಲಾರವು. ಹಿಂದಿನ ಎಸ್ಸೆಂ ಕೃಷ್ಣ ಸರ್ಕಾರವೂ ಮೋಡ ಬಿತ್ತನೆ ನಡೆಸಿತ್ತು. ಆದರೆ ಅಂದುಕೊಂಡಷ್ಟು ಮಳೆ ಬರಲಿಲ್ಲ.
ಉ: ಯಾತಕ್ಕೆ ಮಳೆ ಹೋದವೋ...
ನಿಜ ಮಾಧವ, ಮಳೆ ತನ್ನಷ್ಟಕ್ಕೆ ತಾನೇ ಬರಬೇಕು.
ಆದರೆ, ಬಾರದೇ ಹೋದಾಗ ಏನು ಮಾಡಬೇಕು ಎಂಬುದನ್ನು ನಿರ್ಧರಿಸುವುದು ಸರ್ಕಾರವೇ ಅಲ್ಲವೆ? ಕಡಿಮೆ ಮಳೆ ಬಂದರೆ ಏನು ಬೆಳೆಯಬೇಕು ಎಂಬುದನ್ನು ರೈತ ನಿರ್ಧರಿಸಬೇಕು ತಾನೆ? ರಸಗೊಬ್ಬರ, ಕಂಪನಿ ಬೀಜಗಳಿಲ್ಲದೇ ಕೃಷಿ ಸಾಧ್ಯವಿಲ್ಲ ಎಂಬ ಅಜ್ಞಾನ ತುಂಬಿಕೊಂಡಿರುವ ರೈತರಿಗೆ ತಿಳಿ ಹೇಳಬೇಕಾದವರು ಯಾರು? ರೈತ ಸರ್ಕಾರದ ಮೇಲೆ ಈ ಪರಿ ಅವಲಂಬಿಸಲು ಸರ್ಕಾರದ ’ಜನಪ್ರಿಯ’ ನೀತಿಗಳೇ ಕಾರಣವಲ್ಲವೆ?
ಇದೊಂದು ವಿಷ ವರ್ತುಲ. ಯಾವತ್ತಾದರೂ ನಾವು ಹೊರಬರಲೇಬೇಕು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಯಾತಕ್ಕೆ ಮಳೆ ಹೋದವೋ...
ಮಳೆ ಬರಲಿಲ್ಲವೆಂದರೆ ಸದ್ಯಕ್ಕೆ ನಾವ್ಯಾರೂ ಏನೂ ಮಾಡೋಕಾಗದಿದ್ದರೂ ಮಳೆ ಬರಲಿಲ್ಲವೆಂದರೆ ಏಕೆ ಬರಲಿಲ್ಲ ಎಂದು ತಲೆಕೆಡಿಸಿಕೊಳ್ಳುವವರು ಹೆಚ್ಚಾದರಾಯ್ತು. ಆಢಳಿತ ನಡೆಸುತ್ತಿರುವವರ ತಲೆಯಲ್ಲೂ ಈ ಪ್ರಶ್ನೆ ಎಲ್ಲರಂತೆ ಮೂಡತೊಡಗಿದರೆ ಸುಧಾರಣೆಯಾದಂತೆಯೇ ಲೆಕ್ಕ. ಮಳೆ ಏಕೆ ಬರುತ್ತಿಲ್ಲ ಎಂದು ಆಲೋಚಿಸುವವರು ಹೆಚ್ಚಾದಂತೆ ಅದರಲ್ಲಿ ಕೆಲವರಾದರೂ ಸಮಸ್ಯೆಯ ಬುಡದವರೆಗೆ ಹೋಗೋದು ಗ್ಯಾರಂಟಿ.
ಸಿಟಿಯಲ್ಲಿರುವ ಹಲವರಿಗೆ ಮಳೆ ಬರದಿದ್ದರೆ 'ಒಳ್ಳೇದು ಬಿಡು" ಅನ್ನುವಂತಹ ಮನಸ್ಥಿತಿ ಬಂದುಬಿಟ್ಟಿರುತ್ತದೆ. ಮಳೆ ಬಂದರೆ ಓಡಾಡುವುದಕ್ಕೆ ಕಷ್ಟ. ಮಳೆ ಬಂದರೆ ಎಲ್ಲ ಗಿಜಿಗಿಜಿ, ಟ್ರಾಫಿಕ್ ಜಾಮು ಮತ್ತೇನೇನೋ ಅಂತ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾತಕ್ಕೆ ಮಳೆ ಹೋದವೋ...
ಹೆಚ್ಪಿಎನ್ನರೇ, ನಿಜ ಹೇಳಲಾ ಈ ಸಿಟಿಯ ಜನ ಯಾವಾಗ ಮಳೆಗೆ ಬೊಬ್ಬೆ ಇಡುತ್ತಾರೆ ಅಂತ?
ಕ್ರಿಕೆಟ್ ಟೆಸ್ಟ್ ನಡೆಯುತ್ತಿರಬೇಕು ಅದರಲ್ಲಿ ಭಾರತ ತಂಡ ಸೋಲಿನ ದವಡೆಗೆ ಸಾಗುತ್ತಿರಬೇಕು. ಆವಾಗ !
ಉ: ಯಾತಕ್ಕೆ ಮಳೆ ಹೋದವೋ...
ಮಳೆ ಎಂದರೆ ನಗರವಾಸಿಗಳಿಗೆ ಅಷ್ಟೊಂದು ಆಪ್ಯಾಯಮಾನವಾಗುವುದಿಲ್ಲ. ಏಕೆಂದರೆ, ಅದರ ಸೊಗಸು ಅಲ್ಲಿ ತಲುಪುವುದೇ ಇಲ್ಲ. ಬಿದ್ದ ಮಳೆ (ಚರಂಡಿ ಕಟ್ಟಿಕೊಳ್ಳದಿದ್ದರೆ) ಅರ್ಧ ಗಂಟೆಯಲ್ಲಿ ಹರಿದುಹೋಗುತ್ತದೆ. ಆದರೆ ಗ್ರಾಮೀಣ ಪ್ರದೇಶ ಹಾಗೂ ಸಣ್ಣ ಪಟ್ಟಣಗಳಲ್ಲಿ ಮಳೆಗೆ ವಿಶೇಷ ಮನ್ನಣೆ. ಅವರ ಬದುಕು ಮಳೆಯನ್ನೇ ಅವಲಂಬಿಸಿರುತ್ತದೆ.
ಮಳೆ ಕಡಿಮೆ ಅಥವಾ ಅನಿಯಮಿತವಾಗಿ ಇರುವೆಡೆ ಕೃಷಿಯೇತರ ವೃತ್ತಿಗಳಿಗೆ ಪ್ರೋತ್ಸಾಹ ಕೊಡಬೇಕು. ಅದೇ ರೀತಿ ಸರ್ಕಾರದ ಮೇಲೆ ಅತಿಯಾಗಿ ಅವಲಂಬನೆಗೊಂಡಿರುವ ರೈತರಿಗೆ ಸ್ವಾವಲಂಬನೆ ಕಲಿಸಬೇಕು. ಇದು ದೀರ್ಘಕಾಲೀನ ಯೋಜನೆ. ಸರ್ಕಾರಕ್ಕೆ ಇಷ್ಟೊಂದು ವ್ಯವಧಾನ ಇದೆಯೆ?
ಕೊನೆಗೆ ವೈಯಕ್ತಿಕ ಮಟ್ಟದಲ್ಲಾದರೂ ಸಣ್ಣ ಸಣ್ಣ ಬದಲಾವಣೆಗಳನ್ನು ತಂದುಕೊಳ್ಳಬಹುದಲ್ಲವೆ? ಅಂಥದೊಂದು ಸಂದೇಶ ನೀಡುವುದಷ್ಟೇ ಇಂಥ ಲೇಖನಗಳ ಉದ್ದೇಶ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಯಾತಕ್ಕೆ ಮಳೆ ಹೋದವೋ...
ನಮಸ್ಕಾರ. ನೀವು ಹೇಳೋದು ಸರಿಯಾಗಿದೆ ಪಲ್ಲವಿ. ಎಲ್ಲಾ ಸರಿ ಇರೋವರೆಗೂ ನಮಗೆ ಏನೂ ಅನ್ಸೋಲ್ಲ. ಏನಾದ್ರೂ ಎಡವಟ್ಟಾದಾಗ ಮಾತ್ರ ನಮಗೆ ಅಯ್ಯೋ! ಮುಂಚೆ ಗೊತ್ತಿದ್ದಿದ್ದ್ರೆ ಅನ್ಸುತ್ತೆ. ಹಾಗಾಗಿದ್ರೆ, ಎಲ್ರೂ ತ್ರಿಕಾಲ ಜ್ಞಾನಿಗಳಾಗ್ಬಿಡ್ತಿದ್ರಲ್ವ? ಇದು ಕೇವಲ ಮಳೆ, ಬೆಳೆಗೆ ಮಾತ್ರ ಸಂಬಂಧಿಸಿದ್ದಲ್ಲ. ಒಂದು ಏನಂದ್ರೆ, ಎಲ್ಲಾನೂ ನಾವು ಸರ್ಕಾರದ ಮೇಲೇ ಹೇರೋಕಾಗೊಲ್ಲ. ಜನೋಪಯೋಗಿ ನೀತಿಗಳನ್ನ ರೂಪಿಸ್ಬೇಕಾದದ್ದು ಸರ್ಕಾರದ ಕರ್ತವ್ಯವಾದರೂ, ಜನರೇ ಸ್ವತಃ ಕೆಲವೊಂದು initiatives ತಗೋಬೇಕಾಗುತ್ತೆ. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗುತ್ತೆ. ಅಂತಹದ್ದರಿಂದ ಮಾತ್ರ ಜಾಗೃತ ಸಮಾಜದ ನಿರ್ಮಾಣ ಸಾಧ್ಯ.
ಎಷ್ಟೋ ದೇಶಗಳಲ್ಲಿ ಅಂತಹ ನಾಗರಿಕ ಸಮಾಜವನ್ನ ನಾವು ಕಾಣ್ತೇವೆ. ಅಂತಹ ದೇಶಗಳು ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಮೊದಲನೇ ಸಾಲಿನಲ್ಲಿ ನಿಲ್ತವೆ. ಈಗ ನಮ್ಮ ಸಮಾಜ ಸಾಕಷ್ಟು ಸುಧಾರಿಸ್ತಿದೆ ಅನ್ನಿಸ್ತಿದೆ. ಸಾಕಷ್ಟು NGOಗಳು, ಸಮಾಜಮುಖಿ ಜನ ಸಮುದಾಯಗಳು ಇಂಥ ಕೆಲ್ಸಗಳನ್ನ ಮಾಡ್ತಿವೆ. ನಮ್ಮ ನಡುವಿನ ಶ್ರೇಷ್ಟ ಚಿಂತಕರಲ್ಲೊಬ್ಬರಾಗಿದ್ದ ಜಿಡ್ಡು ಕೃಷ್ಣಮೂರ್ತಿಯವರು ಹೇಳಿದ್ದ ಹಾಗೆ, "where there is division, there is no society". ಅದಕ್ಕೆ ಸಮಾಜ ಕಟ್ಟೋ ಕೆಲಸದಲ್ಲಿ ನಾವೆಲ್ಲರೂ ಒಬ್ಬರಿಗೊಬ್ಬರು ಜವಾಬ್ದಾರರು ಎಂದುಕೊಂಡು ಮಾನವೀಯವಾಗಿ ಸ್ಪಂದಿಸಬೇಕು. ಜಾತಿ, ಭಾಷೆ, ಮತ, ಧರ್ಮಗಳಿಗೆಲ್ಲ ಎಳ್ಳುನೀರು ಬಿಡಬೇಕು.
ಅಡಿಗರಂತಹ ಕವಿಗಳು ನೀಡಿದ ಕರೆಯನ್ನ ನಾವಿಲ್ಲಿ ನೆನೆಸಿಕೊಳ್ಳುತ್ತ "ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು"ಎನ್ನುತ್ತ ಸಂಕಲ್ಪಚಿತ್ತರಾಗಿ ದುಡಿಯಬೇಕು ಅಷ್ಟೆ. ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಯಾತಕ್ಕೆ ಮಳೆ ಹೋದವೋ...
ನಿಜ ಶಶಿ ಅವರೇ, ಎಲ್ಲದಕ್ಕೂ ಸರ್ಕಾರವನ್ನು ಅವಲಂಬಿಸಬಾರದು. ಜನರೇ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ ಹಾಗಾಗಿಲ್ಲ ಎನ್ನುವ ಒಂದೇ ಕಾರಣಕ್ಕೆ ಜನ ಸರ್ಕಾರದ ಮೇಲೆ ಅತಿಯಾದ ಹಾಗೂ ಅನವಶ್ಯಕವಾದ ಅವಲಂಬನೆ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಸಮಸ್ಯೆ ಬಂದಾಗೆಲ್ಲ ಸರ್ಕಾರವನ್ನು ದೂರುವುದು, ಅದಕ್ಕೆ ಬೇಡಿಕೆ ಸಲ್ಲಿಸುವುದು ಸಾಮಾನ್ಯವಾಗಿಬಿಟ್ಟಿದೆ.
ಹಾಗೆ ನೋಡಿದರೆ ಸರ್ಕಾರವೇ ಅತಿ ದೊಡ್ಡ ಭಿಕ್ಷುಕ. ಎಲ್ಲರಿಂದಲೂ ಹಣ ಎತ್ತುವುದೊಂದೇ ಅದಕ್ಕೆ ಗೊತ್ತು. ಆದರೆ, ಅದೇ ಪ್ರಮಾಣದಲ್ಲಿ ಪಡೆದ ತೆರಿಗೆಯನ್ನು ಬಳಸುವುದು ಅದಕ್ಕೆ ಗೊತ್ತಿಲ್ಲ. ಅದಕ್ಕೆ ಸಾಕಷ್ಟು ಮಿತಿಗಳಿವೆ. ಸರ್ಕಾರವನ್ನು ಅವಲಂಬಿಸುವುದಕ್ಕಿಂತ ನಮ್ಮ ನಮ್ಮ ಮಿತಿಯಲ್ಲಿ ಬೇರೆ ಕೆಲಸಗಳನ್ನು ಮಾಡುವ ಮೂಲಕ ಸ್ವಾವಲಂಬಿಯಾಗಲು ಸಾಧ್ಯವಿದೆ.
ನನಗೆ ಗೊತ್ತಿರುವಂತೆ ಸಂಪದದಲ್ಲಿ ಇಂತಹ ವಿಷಯಗಳ ಬಗ್ಗೆ ಸಾಕಷ್ಟು ಲೇಖನಗಳು, ಮಾಹಿತಿ ಬಂದಿವೆ. ವಾಟರ್ ಪೋರ್ಟಲ್‌ನ ಬಹುತೇಕ ಲೇಖನಗಳು ಇಂತಹ ಯಶಸ್ವಿ ಸ್ವಾವಲಂಬನೆಯ ವಿವರಣೆಗಳೇ. ನಮ್ಮ ಜವಾಬ್ದಾರಿ ನಮ್ಮದೇ ಎಂಬ ಅರಿವಾದಾಗ ಮಾತ್ರ ಸ್ವಾವಲಂಬನೆ ಸಾಧ್ಯ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಯಾತಕ್ಕೆ ಮಳೆ ಹೋದವೋ...
ನಿಮ್ಮ ಬರಹದಲ್ಲಿ ಹಳ್ಳಿ ಮಕ್ಕಳ ಮನಸ್ಸಲ್ಲಿ ಮಳೆಗಾಗಿ ಕಾಣುವಂತದೇ ದುಗುಡ-ದುಮ್ಮಾನ ಕಾಣುತ್ತಿದೆ.. ನನಗೆ ’ಲಗಾನ್’ ಸಿನಿಮಾದಲ್ಲಿ ಭವಾನ್‍ನ ತಾಯಿ,.. ಹಣೆಗೆ ಕೈಯಿಟ್ಟು ಮೋಡಗಳ ಸುಳಿವೇನಾದರೂ ಇದೆಯೇ ಎಂದು ನೋಡುತ್ತಿರುವ ಸೀನ್ ನೆನಪಾಯಿತು... ಇನ್ನು ಮಂದಿ ಈ ಮಳೆಗಾಗಿ ಕಾದಿದ್ದು ಸಾಕು ಅನಿಸುತ್ತಿದೆ... ಎಲ್ಲ ಬಿತ್ತನೆಯ ಹೊಲಗಳನ್ನು ನೀರಾವರಿ ಹೊಲಗಳನ್ನಾಗಿ ಮಾಡಿ ಬಿಡಬೇಕು...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಯಾತಕ್ಕೆ ಮಳೆ ಹೋದವೋ...
ಲಗಾನ್ ಸಿನಿಮಾದಲ್ಲಿ ಆಮೀರ್ ಖಾನ್ ವಹಿಸಿರುವ ಪಾತ್ರದ ಹೆಸರು 'ಭುವನ್. ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಯಾತಕ್ಕೆ ಮಳೆ ಹೋದವೋ...
ಮನ್ನಿಸಿ,.. ಟೈಪೋ ಮಿಸ್ಟೇಕ್...
ಅದು 'ಭುವನ್',.....
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಯಾತಕ್ಕೆ ಮಳೆ ಹೋದವೋ...
ಸಂಗನಗೌಡರೆ,
"ಎಲ್ಲ ಬಿತ್ತನೆಯ ಹೊಲಗಳನ್ನು ನೀರಾವರಿ ಹೊಲಗಳನ್ನಾಗಿ ಮಾಡಿ ಬಿಡಬೇಕು" - ಹೌದು, ನಿಜ, ಹೀಗೇಕೆ ಮಾಡುತ್ತಿಲ್ಲ?
~ಕಲ್ಪನ
ಉ: ಯಾತಕ್ಕೆ ಮಳೆ ಹೋದವೋ...
ಕಲ್ಪನಾ,
ಎಲ್ಲ ಹೊಲಗಳು ನೀರಾವರಿ ಆಗಬೇಕು ಅಂದ್ರೆ ಮೊದಲು ಎಲ್ಲ ಹೊಲಗಳಲ್ಲಿ ನೀರ ಸೆಲೆ ಇರಬೇಕು,ಇಲ್ಲವೆ ನದಿಗಳಿಗೆ,ಕಾಲುವೆಗಳಿಗೆ ಹತ್ತಿರವಾಗಿ ಹೊಲಗಳಿರಬೇಕು. ಆದ್ರೆ ಅದು ಸಾಧ್ಯವಿಲ್ಲದ ಮಾತು. ಕೇವಲ ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ದಕ್ಷಿಣ ಕರ್ನಾಟಕದ ಭೂಭಾಗದಲ್ಲಿ ಸಮ್ರುದ್ಧವಾಗಿ ನೀರ ಸೆಲೆ(ಭೂಗರ್ಭದಲ್ಲಿ ) ಇದ್ದಷ್ಟು ಉತ್ತರ ಕರ್ನಾಟಕದಲ್ಲಿ ಇಲ್ಲ. ಅಲ್ಲಿಯ ರೈತರು ಹೆಚ್ಚಾಗಿ ಮಳೆಯನ್ನೆ ಆಶ್ರಯಿಸಲ್ಪಟ್ಟವರು.ಮಳೆ ಬಂದರಷ್ಟೆ ಬೆಳೆ ಅಲ್ಲೆಲ್ಲ. ಹೊಲಗಳಲ್ಲಿ ನೀರ ಸೆಲೆ ಇದ್ದಲ್ಲಿ ಭಾವಿ ತೋಡಿಯೊ,ಬೋರ್‍ವೆಲ್ ಕೊರೆದೊ ನೀರಾವರಿಯನ್ನಾಗಿಸಿಕೊಳ್ಳುತ್ತಾರೆ.ನೀರಾವರಿ ಇದ್ದ ಹೊಲ ತೋಟ ಎನಿಸಿಕೊಳ್ಳುತ್ತದೆ.
ಜಯಲಕ್ಷ್ಮೀ.ಪಾಟೀಲ್.
ಉ: ಯಾತಕ್ಕೆ ಮಳೆ ಹೋದವೋ...
ಜಯಲಕ್ಷ್ಮಿಯವರೆ,
ಹಾಗಾದರೆ ಇದು ಈವತ್ತಿನ ಸಮಸ್ಯೆಯಲ್ಲ. ಮತ್ತೇಕೆ ಒಂದು permanent solutionನತ್ತ ಯಾರೂ ಗಮನ ಹರಿಸಿಲ್ಲ? ಮಳೆ ಕೈಕೊಟ್ಟಾಗ ಏನು ಮಾಡಬೇಕೆಂಬ ಒಂದು backup ಇಲ್ಲದೆ ಇವರೆಲ್ಲ ಹೇಗಿರಲು ಸಾಧ್ಯ?
~ಕಲ್ಪನ
ಉ: ಯಾತಕ್ಕೆ ಮಳೆ ಹೋದವೋ...
ಖಂಡಿತ ಇದು ಇವತ್ತಿನ ಸಮಸ್ಯೆ ಅಲ್ಲ. ಅನಾದಿ ಕಾಲದಿಂದಲೂ ಮಳೆ ಆಧಾರಿತ ರೈತರಿಗೆ ಈ ಕಷ್ಟ ಇದ್ದದ್ದೆ. ನೀರಿನ ಅಭಾವ ಇರುವ ಕೆಲವು ಪ್ರದೇಶಗಳಿಗೆ ನದಿಗಳ ನೀರನ್ನು ಕಾಲುವೆಗಳ ಮೂಲಕ ಪೂರೈಸಲು ಯತ್ನಿಸಲಾಗುತ್ತಿದೆ. ಆದರೆ ಎಲ್ಲೆಡೆ ಕಾಲುವೆ ನೀರಿನ ಪೂರೈಕೆ ಸಾಧ್ಯವಿಲ್ಲ ಅಲ್ಲವೆ? ಹೀಗಾಗಿಯೇ ಅಂಥ ಪ್ರದೇಶದ ರೈತಾಪಿ ಜನ ಬೇಸಿಗೆಯಲ್ಲಿ ಹೆಚ್ಚಾಗಿ ಗುಳೆ ಹೋಗುವುದು. ಗುಳೆ ಹೋಗುವುದು ಅಂದರೆ ಜೀವನ ನಿರ್ವಹಣೆಗಾಗಿ ತಮ್ಮ ನೆಲ ಅಥವಾ ಊರು ತೊರೆದು ಬೇರೆ ಊರುಗಳಿಗೆ ಹೋಗಿ ಸಂಪಾದಿಸುವುದು. ಗುಳೆ ಹೋದವರೆಲ್ಲ ಮಳೆಗಾಲದ ಹೊತ್ತಿಗೆ ಮತ್ತೆ ಊರುಗಳಿಗೆ ಮರಳಿ ಹೊಲದಲ್ಲಿ ಬಿತ್ತನೆ ಮಾಡಿ ಮಳೆರಾಯನ ನಿರೀಕ್ಷೆಯಲ್ಲಿ ಮುಗಿಲಿಗೆ ಮುಖ ಮಾಡಿ ಕೂರುತ್ತಾರೆ. ಆ ವರ್ಷ ಮಳೆ ಚೆನ್ನಾಗಿ ಆದರೆ ನೆಮ್ಮದಿಯಿಂದ ಊರಲ್ಲಿರುತ್ತಾರೆ ಇಲ್ಲವಾದರೆ ಮತ್ತೆ ಗುಳೆ!ಇದು ಮಳೆ ಕೈಕೊಟ್ಟಾಗ ರೈತರು ಕಂಡುಕೊಂಡ ಒಂದು backup!
ಇತ್ತೀಚಿಗೆ ಈ ಹೊಲಸು ರಾಜಕಾರಣ ರೈತರನ್ನೂ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ತುಂಬಾ ವಿಷಾದದ ಸಂಗತಿ ಇದು. ಹಾಗಂತ ಸರಕಾರ ರೈತರಿಗೆ ಏನೂ ಮಾಡೋದೇ ಇಲ್ಲ ಅನ್ನೊ ನಿರ್ಧಾರಕ್ಕೆ ಬಂದುಬಿಡೋದು ತಪ್ಪಾಗುತ್ತೆ. ರೈತರ ಪರವಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಅದನ್ನು ಬಳಸಿಕೊಳ್ಳುವವರು ಮಾತ್ರ ಹೊಟ್ಟೆ ತುಂಬಿದವರೆ! ಬಡ, ಅಶಿಕ್ಷಿತ ರೈತನಿಗೆ ಇಂಥಿಂಥ ಯೋಜನೆಗಳಿವೆ ಅಂತ ಕೂಡ ಗೊತ್ತಿರುವುದಿಲ್ಲ.
ಜಯಲಕ್ಷ್ಮೀ.ಪಾಟೀಲ್.
ಉ: ಯಾತಕ್ಕೆ ಮಳೆ ಹೋದವೋ...
ಜಯಲಕ್ಷ್ಮಿಯವರೆ,
ವಿವರಿಸಿದ್ದಕ್ಕಾಗಿ ಧನ್ಯವಾದಗಳು.
"ರೈತರ ಪರವಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಅದನ್ನು ಬಳಸಿಕೊಳ್ಳುವವರು ಮಾತ್ರ ಹೊಟ್ಟೆ ತುಂಬಿದವರೆ! ಬಡ, ಅಶಿಕ್ಷಿತ ರೈತನಿಗೆ ಇಂಥಿಂಥ ಯೋಜನೆಗಳಿವೆ ಅಂತ ಕೂಡ ಗೊತ್ತಿರುವುದಿಲ್ಲ."
ಹೌದು, ಇದು ಸಾಮಾನ್ಯವಾಗಿ ನಡೆಯುವ ಮಾತು. ಏಕೆಂದರೆ, ಇಲ್ಲಿ ಅಮೇರಿಕದಲ್ಲಿ ನಾನು ನೋಡಿರುವಂತೆ CRY, ASHA, ILP, ಹೀಗೆ ಹಲವಾರು NGOಗಳು ಸಾವಿರಗಟ್ಟಲೆ ದುಡ್ಡು ಭಾರತದಲ್ಲಿ ಒಳ್ಳೆಯ ಯೋಜನೆಗಳಿಗೆ ಸುರಿಯುತ್ತಲೆ ಇರುತ್ತದೆ. Bills & Melinda Gates Foundation ವಿಲಿಯನ್ಗಟ್ಟಲೆ ಭಾರತದಲ್ಲಿ ಖರ್ಚು ಮಾಡುತ್ತದೆ. ಅಲ್ಲಿರುವ Infosys Foundation ಮತ್ತಿತರರೂ ಕೈಗೂಡಿಸುತ್ತಾರೆ. ಹೀಗಿದ್ದೂ ರಸ್ತೆಯಲ್ಲಿ ಭಿಕ್ಷುಕರಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಈ ದುಡ್ಡು ಹೇಗೋ ಸೇರಬೇಕಾದ ವ್ಯಕ್ತಿಗಳಿಗೆ ಸೇರುತ್ತಿಲ್ಲ. ಈ ವ್ಯವಸ್ಥೆ ಸರಿಮಾಡದಿದ್ದರೆ ಕಷ್ಟಗಳು ಪುನರಾವರ್ತನೆಯಾಗುವುದರಲ್ಲಿ ಸಂಶಯವೇ ಇಲ್ಲ.
~ಕಲ್ಪನ
ಉ: ಯಾತಕ್ಕೆ ಮಳೆ ಹೋದವೋ...
ನಿಜ. ಆದರೆ ವ್ಯವಸ್ಥೆ ಎಷ್ಟು ಹದಗೆಟ್ಟಿದೆಯೆಂದರೆ ಯಾರನ್ನು ನಂಬೇಕು, ಯಾರನ್ನು ನಂಬಬಾರದು ಎನ್ನುವುದೇ ಗೊಂದಲವಾಗುವಷ್ಟು!
ಜಯಲಕ್ಷ್ಮೀ.ಪಾಟೀಲ್.