ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › narendra ರವರ ಬ್ಲಾಗ್

ಸಂಸ್ಕಾರ ಮತ್ತು ವಂಶವೃಕ್ಷ

April 23, 2007 - 6:41pm — narendra

ಉದ್ಧಾಲಕ ಮತ್ತು ಶ್ವೇತಕೇತುವಿನ ಕತೆ ಹೇಳಿದ್ದಕ್ಕೆ ಕಾರಣವಿದೆ. ಸರಿ ಸುಮಾರು ೧೯೬೫ರಲ್ಲಿ ಕನ್ನಡದ ಎರಡು ಮಹತ್ವದ ಕಾದಂಬರಿಗಳು ಪ್ರಕಟವಾದವು. ಒಂದು ಯು.ಆರ್. ಅನಂತಮೂರ್ತಿಯವರ ಸಂಸ್ಕಾರ. ಇನ್ನೊಂದು ಎಸ್ ಎಲ್ ಭೈರಪ್ಪನವರ ವಂಶವೃಕ್ಷ. ಎರಡೂ ಕಾದಂಬರಿಗಳು ಸಿನಿಮಾ ಆಗಿರುವುದರಿಂದ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವುದರಿಂದ ಸಾಹಿತ್ಯದ ಓದುಗರಲ್ಲದವರಿಗೂ ಈ ಕಾದಂಬರಿಗಳ ಬಗ್ಗೆ ಗೊತ್ತು.

ಪ್ರಾಣೇಶಾಚಾರ್ಯರ ಧರ್ಮಸಂಕಟಗಳಿಗೆ ಸಂವಾದಿಯಾಗಿ ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಗಳಿವೆ. ನಾರಣಪ್ಪ ಒಡ್ಡುವ ಸವಾಲುಗಳಷ್ಟು ಗಾಢವಾಗಿಯಲ್ಲದಿದ್ದರೂ ಕಾತ್ಯಾಯಿನಿ ಮತ್ತು ರಾಜನ ಸಂಬಂಧ ಒಡ್ಡುವ ಸವಾಲುಗಳು ಈ ಇಬ್ಬರು ಸನಾತನಿಗಳ ಧರ್ಮಸಂಕಟದ ಎದುರು ನಿಲ್ಲುವುದು ಎರಡೂ ಕಾದಂಬರಿಗಳ ಮಹತ್ವದ ಘಟ್ಟ. ತಮಾಷೆಯೆಂದರೆ ಅನಂತಮೂರ್ತಿಯವರ ನಾರಣಪ್ಪ ಸತ್ತೂ ಜೀವಂತ ಸವಾಲಾಗಿ ಉಳಿದರೆ ಕಾತ್ಯಾಯಿನಿಯ ಸಾವು ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಕ್ಕೆ ತೆರೆಯೆಳೆಯುತ್ತದೆ. ಆ ಹೊತ್ತಿಗೆ ಅವರಿಗೆ ತಮ್ಮದೇ ಜನ್ಮರಹಸ್ಯ ಕೂಡ ತಿಳಿದಿರುತ್ತದೆ. ಕಾತ್ಯಾಯಿನಿ ಮತ್ತು ರಾಜ ಒಡ್ಡುವ ಸವಾಲು ಇವತ್ತಿನ ಸಂದರ್ಭದಲ್ಲಿ ಮಹತ್ವದ್ದಾಗಿ ಉಳಿದಿಲ್ಲ ಎಂಬುದೂ ನಿಜ. ತುಂಬ ಸುಶಿಕ್ಷಿತ ಮಾದರಿಯ ಆದರ್ಶದ ಬಣ್ಣಹೊತ್ತ ಸವಾಲದು. ಹಾಗಾಗಿಯೇ ಪ್ರಶ್ನೆಗಳು ಕಾದಂಬರಿಯ ಆಚೆ ಬೆಳೆಯದೆ ಕಾತ್ಯಾಯಿನಿಯ, ಪ್ರೊಫೆಸರ್ ಸದಾಶಿವರಾಯರ ಸಾವು ಮತ್ತು ಶ್ರೋತ್ರಿಗಳ ವಾನಪ್ರಸ್ಥದಲ್ಲಿಯೇ ಉತ್ತರ ಕಂಡುಕೊಂಡಂತೆ ಮುಗಿದು ಬಿಡುತ್ತವೆ.

ಕಾತ್ಯಾಯಿನಿ ಮತ್ತು ರಾಜನ ಮದುವೆ ಮತ್ತು ಸಂತಾನದ ವಾರಸುದಾರಿಕೆಯ ಸಮಸ್ಯೆಗೆ ಹೋಲಿಸಿದರೆ ಅನಂತಮೂರ್ತಿಯವರು ಎತ್ತಿದ ಪ್ರಾಣೇಶಾಚಾರ್ಯರ ಸಮಸ್ಯೆ ಹೆಚ್ಚು ಸಾಮಾಜಿಕವಾದದ್ದು, ಇಂದಿಗೂ ಹೆಚ್ಚು ಕಡಿಮೆ ಅಂದಿನಷ್ಟೇ ಪ್ರಸ್ತುತವಾಗಿರುವಂಥದ್ದು. ನಾರಣಪ್ಪ ಒಡ್ಡುವ ಸವಾಲಾದರೋ ಕೇವಲ ವಿಧವಾ ವಿವಾಹ ಅಥವಾ ಸಂತಾನದ ವಾರಸುದಾರಿಕೆಯಂಥ ಕೌಟುಂಬಿಕ ನೆಲೆಯ ಸವಾಲಲ್ಲ. ಅದು ಬದುಕುವ ಮನುಷ್ಯನ ಜೀವಂತಿಕೆಯ ಕುರಿತಾದ, ಬದುಕಿದರೆ ಇಲ್ಲಿ ಸಲ್ಲುವ ಹಾಗೆ ಬದುಕಬೇಕೆನ್ನುವ ಚಾರ್ವಾಕ ಸಿದ್ಧಾಂತದ ಸವಾಲು. ಆಂತರಿಕವಾಗಿ ಕಾಡುತ್ತಲೇ ಇರುವಂಥದು. ಮನುಷ್ಯನ ಆಳದ ದ್ವಂದ್ವಗಳಿಗೆ, ಇಹ ಪರಗಳೆರಡರ ನಡುವೆ ತುಯ್ಯುತ್ತಿರುವ ಅವನ ದೇಹ ಮನಸ್ಸುಗಳಿಗೆ ಸಂಬಂಧಿಸಿದ್ದು. ರಾಜ ಮತ್ತು ಕಾತ್ಯಾಯಿನಿಯ ಮದುವೆಗೆ ಭೈರಪ್ಪನವರೇ ಕೊಡುವ ಅವನ ಅಣ್ಣ ಪ್ರೊಫೆಸರ್ ಸದಾಶಿವರಾವ್ ಮತ್ತು ಕರುಣಾರತ್ನೆ ನಡುವಿನ ವಿವಾಹೇತರ ಸಂಬಂಧದ ಪರಿಪ್ರೇಕ್ಷ್ಯ ಕೂಡ ಹೊಸತೇನನ್ನೂ ಕೂಡಿಸುವುದಿಲ್ಲ. ಅಲ್ಲೂ ಸಂತಾನದ ಅಭೀಪ್ಸೆ ಮತ್ತು ಸಮಸ್ಯೆಯ ಪರಿಹಾರಾರ್ಥ ಪ್ರೊಫೆಸರ್ ಸಾವು!

ಸಂಸಾರದ ಒಂದು ಪರಿಕಲ್ಪನೆಯನ್ನು ಈ ಕಾದಂಬರಿಗಳು ತಡಕುವ ರೀತಿಯಲ್ಲೇ ಧರ್ಮದ ಪ್ರಶ್ನೆಗಳಿವೆ. ಹಾಗೆ ನೋಡಿದರೆ ಧರ್ಮ, ರಾಜಕೀಯ, ಕಲೆ, ಸಾಹಿತ್ಯ, ವಿಜ್ಞಾನ ಯಾವುದೂ ನಮ್ಮ ಬದುಕಿಗೆ ಹೊರಗಿನದ್ದಲ್ಲ. ಇವು ಒಂದನ್ನು ಬಿಟ್ಟು ಇನ್ನೊಂದಿಲ್ಲ ಮತ್ತು ಇವನ್ನು ಬಿಟ್ಟು ನಮ್ಮ ಬದುಕಿಲ್ಲ. ಹಾಗಿರುತ್ತ ಸಂಸ್ಕಾರ ಮತ್ತು ವಂಶವೃಕ್ಷ ಪ್ರತಿಪಾದಿಸುವ ವಿಭಿನ್ನವಾದ ನಿಲುವುಗಳು ನಮ್ಮ ನಿಮ್ಮ ಸಂಸಾರದಲ್ಲಿನ ಒಳಹೊರಗನ್ನು ಧರ್ಮದ ನೆಲೆಯಲ್ಲಿ ತಡಕುವಾಗ ನಮ್ಮ ಪ್ರತಿಕ್ರಿಯೆ ಏನು?

ಶ್ರೀನಿವಾಸ ಶ್ರೋತ್ರಿಗಳ ನಿಲುವು ಕಾದಂಬರಿಯ ಉದ್ದಕ್ಕೂ ಅನೇಕ ರೀತಿಗಳಲ್ಲಿ ಸ್ಪಷ್ಟವಾಗುತ್ತದೆ. ಕಾತ್ಯಾಯಿನಿಯ ಬಗ್ಗೆ ಅವರಿಗೆ ಮಾನವೀಯ ನೆಲೆಯ ಸಹಾನುಭೂತಿ ಏನಿದ್ದರೂ ಅದು ಧರ್ಮದ ಲಕ್ಷ್ಮಣರೇಖೆಗಳನ್ನು ದಾಟುವಷ್ಟರ ಮಟ್ಟಿಗೆ ಪರಿಪಕ್ವವಿಲ್ಲ. ಹೆಚ್ಚೂ ಕಡಿಮೆ ಉದ್ಧಾಲಕನ ನಿಲುವೇ ಅವರದ್ದೂ! ಆದರೆ ನಾರಣಪ್ಪನ ರೋಮಾಂಚನದ ಜಗತ್ತನ್ನು ಸ್ಪರ್ಶಿಸುವ ಪ್ರಾಣೇಶಾಚಾರ್ಯರು ವಾನಪ್ರಸ್ಥಕ್ಕೆ ಹೋಗದೆ, ದಿಢೀರ್ ಸಾಯದೆ ನಾರಣಪ್ಪನ ನಿಲುವುಗಳ ಪುನರಾವಲೋಕನಕ್ಕೆ ಮಾನಸಿಕವಾಗಿ ಸಿದ್ಧರಾಗುವ ಲಕ್ಷಣಗಳನ್ನು ತೋರುತ್ತಾರೆ. ಇಲ್ಲಿ ವೈರುಧ್ಯಗಳತ್ತ ಬೆನ್ನು ಹಾಕಿ ಪಲಾಯನ ಮಾಡುವ, ಮಾಡಿ ಸಮಸ್ಯೆಯಿಂದ ಪಾರಾಗುವ ತಂತ್ರವಿಲ್ಲ. ಬದಲಿಗೆ ಮುಖಾಮುಖಿ ಇದೆ.

ಕೃತಿಕಾರ, ಕೃತಿ ಮತ್ತು ಕೃತಿಯೊಳಗಿನ ಪಾತ್ರಗಳು ಬೇರೆ ಬೇರೆ ಎನ್ನುವ ನಿಲುವು ತೆಗೆದುಕೊಂಡು ನೋಡಿದರೆ ಭೈರಪ್ಪನವರ ನಿಲುವು ಭೈರಪ್ಪನವರಿಗೆ, ಅನಂತಮೂರ್ತಿಯವರದ್ದು ಅನಂತಮೂರ್ತಿಯವರಿಗೆ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ ಸೃಜನಶೀಲ ಕೃತಿಯೊಂದು ಅಷ್ಟು ವೈಯಕ್ತಿಕವಲ್ಲ. ಯಾಕೆಂದರೆ ಅದು ಮನೆಮನೆಯ ನಡುಮನೆಯ ಚರ್ಚೆಗೆ ತುತ್ತಾಗಲು ತಯಾರಾಗಿಯೇ ಅಚ್ಚಿನಮನೆಯಿಂದ ಹೊರಟಿರುತ್ತದೆ, ಅಲ್ಲವೆ?

~.~
  • narendra ರವರ ಬ್ಲಾಗ್
  • Login or register to post comments
  • 569 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 23, 2007 - 7:15pm — anivaasi

ಉ: ಸಂಸ್ಕಾರ ಮತ್ತು ವಂಶವೃಕ್ಷ

anivaasi's picture

೨೧ನೇ ಶತಮಾನದಲ್ಲೂ ಮನುಷ್ಯನ ಮೇಲೆ ಧರ್ಮದ ಹಿಡಿತ ಅಷ್ಟು ಬಲವಾಗಿದೆಯೇ ಎಂದು ತಲೆಯಲ್ಲಿ ಗುಂಯ್‌ಗುಡುತ್ತಿದೆ. ಧರ್ಮ ಮನುಷ್ಯನಿಗೆ ಕೊಡುವ ಚಹರೆಗಿಂತ ಭಿನ್ನವಾದ, ಹೆಚ್ಚು ಸಂಕೀರ್ಣವಾದ ಚಹರೆಗಳನ್ನು ಮನುಷ್ಯ ಬೇರೆ ಮೂಲಗಳಿಂದ ಪಡಕೊಳ್ಳುತ್ತಿದ್ದಾನೆ ಅನ್ನಿಸುವುದಿಲ್ಲವೆ? ಹಾಗೆಂದ ಮಾತ್ರಕ್ಕೆ ಧರ್ಮವು ಮನುಷ್ಯನ ಭಾವಪ್ರಪಂಚದಿಂದ ಮಾಯವಾಗಿದೆ ಎಂದು ಅರ್ಥವಲ್ಲ. ಧರ್ಮದ ಕಟ್ಟುಪಾಡು, ನೀತಿನಿಯಮ, ಆಚಾರವಿಚಾರ ಮನುಷ್ಯನನ್ನು ರೂಪಿಸುವ ಬದಲು ಹಿಂದಿಗಿಂತ ಹೆಚ್ಚು ಪ್ರಬಲವಾಗಿ ಮನುಷ್ಯ ಧರ್ಮವನ್ನು ಬೇರೆ ಬೇರೆ ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತಿದೆ. ಅಥವಾ ಇದು ಧರ್ಮ-ಮನುಷ್ಯ ಸಂಬಂಧದ ನಿರಂತರ ಒಡನಾಟದ ಹೊಸ ಮಗ್ಗುಲೆ?

ಬರಹ ವಿಚಾರಪ್ರಚೋದಕವಾಗಿದೆ. ವಂದನೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 12:10am — ವೈಭವ

ಉ: ಸಂಸ್ಕಾರ ಮತ್ತು ವಂಶವೃಕ್ಷ

ವೈಭವ's picture

ಧರಮದ ಕಟ್ಟುಪಾಡು ಕೂಡ ಅತೀ ಆದ್ರೆ ಒಳ್ಳೇದಲ್ಲ ಅಂತ ನನಗನ್ನಿಸುತ್ತೆ... ಮನುಷ್ಯ ಧರ್ಮ ಎಲ್ಲ ಧರ್ಮಕ್ಕಿಂತ ಮಿಗಿಲು ಅಂತ ನಂಬಿದರೆ ನಮ್ಮ ಹಲವು ಸಮಸ್ಯಗಳಿಗೆ ಉತ್ತರ ಸಿಗಬಹುದು. ಆದರೆ ಹೇಳದಷ್ಟು ಸುಲಭ ಅಂತಾನು ಗೊತ್ತು.

ಒಟ್ಟಿನಲ್ಲಿ ನಮ್ಮ ಧರ್ಮವನ್ನು ಬೇಗ ಸರಳೀಕರಿಸುವ ಕೆಲಸ ಕೂಡಲೆ ಆಗಬೇಕಿದೆ.  "ಬಾಳಿ, ಬಾಳದಕ್ಕೆ ಬಿಡಿ" ಎಂಬ ತತ್ವವನ್ನು ಕಾತ್ಯಾಯನಿ ಮಾವ ಅನುಸರಿಸಿದ್ದರೆ ಅಷ್ಟೆಲ್ಲ ಅನರ್ಥ ಅಗ್ತಾ ಇರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 3:01pm — narendra

ಉ: ಸಂಸ್ಕಾರ ಮತ್ತು ವಂಶವೃಕ್ಷ

narendra's picture

ನಿಮ್ಮ ಅಭಿಪ್ರಾಯ ಸರಿ. ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 3:00pm — narendra

ಉ: ಸಂಸ್ಕಾರ ಮತ್ತು ವಂಶವೃಕ್ಷ

narendra's picture

ನನ್ನ ಲೇಖನಕ್ಕಿಂತ ನಿಮ್ಮ ಪ್ರತಿಕ್ರಿಯೆಯೇ ಹೆಚ್ಚು ವಿಚಾರ ಪ್ರಚೋದಕವಾಗಿದೆ! ಇಂಥ ಓದುಗರನ್ನು ಪಡೆದ ಲೇಖನ ಧನ್ಯ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 26, 2007 - 5:12pm — ಶಿವ

ಉ: ಸಂಸ್ಕಾರ ಮತ್ತು ವಂಶವೃಕ್ಷ

ಶಿವ's picture

ಸಂಸ್ಕಾರವನ್ನು ಸುಮಾರು 10 ವರ್ಷಗಳ ಹಿಂದೆ ಓದಿದ್ದೆ..ವಂಶವೃಕ್ಷ 6 ತಿಂಗಳ ಹಿಂದೆ ಓದಿದ್ದು..ಸಂಸ್ಕಾರದಷ್ಟು ವಂಶವೃಕ್ಷ ಇಷ್ಟವಾಗ್ಲಿಲ್ಲ..ನಮ್ಮ ಜೀವನದ ಪ್ರತಿಯೊಂದು ನಿರ್ಣಯಗಳನ್ನು ಯಾರೋ ಯಾವಾಗಲೋ ಬರೆದಿಟ್ಟುದರ ಮೇಲೆ ತೆಗೆದುಕೊಳ್ಳುವುದನ್ನು ಒಪ್ಕೊಳ್ಳೋಕಾಗ್ಲಿಲ್ಲ..ಕುವೆಂಪು ಕವನವೊಂದರಲ್ಲಿ ಹೇಳಿದ್ದರು, 'ಬಾಯಾರಿದವನಿಗೆ ನೀರು ಕೊಡಲು ಮನುಶಾಸ್ತ್ರವ ಓದಿರಬೇಕೇನು?"(ಸರಿಯಾದ ಸಾಲುಗಳು ನೆನಪಾಗುತ್ತಿಲ್ಲ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ವೇತಕೇತು ಸೋತರೇ ಖುಶಿ!
  • ನನಗೂ ನಿಮಗೂ ಸಮಾನವಾದೊಂದು ಧರ್ಮ
  • ಬೆಣ್ಣೆಹೂವು ಮತ್ತು ಅಶ್ವಮೇಧ
  • ಪ್ರಾಣೇಶಾಚಾರ್ಯರು ಮತ್ತು ಚಿಮಣಾಬಾಯಿ!
  • ಪಾಪ ಮತ್ತು ಪಾಪಪ್ರಜ್ಞೆ
Syndicate content

ಲೇಖಕರು

narendra's picture

ಪೂರ್ಣ ಹೆಸರು
narendra

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 98 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator