ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › narendra ರವರ ಬ್ಲಾಗ್

ಓ ಮನಸೇ...

October 14, 2007 - 5:47pm — narendra

ಈಗಲೂ ಅವರು ಆ ಕಾಡಿನ ನಡುವೆ ಎನ್ನಬಹುದಾದ ಒಂಟಿ ಮನೆಯಲ್ಲಿ ಹೆಂಡತಿ ಮತ್ತು ಮಗನೊಂದಿಗೆ ಇದ್ದಾರೆ. ದೊಡ್ಡ ಮನೆ, ಎಕರೆಗಟ್ಟಲೆ ಅಡಿಕೆ ತೋಟ, ಆಳು ಕಾಳು, ಓಡಾಟಕ್ಕೆ ಕಾರು ಎಲ್ಲ ಇದೆ. ವಯಸ್ಸಾಯಿತು, ಸುಮಾರು ಎಪ್ಪತ್ತರ ಹತ್ತಿರ ಹತ್ತಿರ ಅನಿಸುತ್ತದೆ. ಒಮ್ಮೆ ಅವರ ಪ್ರೀತಿಯ ವ್ಯಕ್ತಿಯೊಬ್ಬರ ಜೊತೆ ಅವರ ಮನೆಗೆ ಹೋಗಿದ್ದೆ, ಒಂದು ರಾತ್ರಿ ಅವರಲ್ಲೇ ನಿಂತಿದ್ದೆ ಕೂಡ. ಹಬ್ಬದಡಿಗೆ ಮಾಡಿ, ಬಡಿಸಿ ಖುಶಿಪಟ್ಟಿದ್ದರು, ಆ ದಂಪತಿ ಮತ್ತು ಮಗ. ರಾತ್ರಿಯೆಲ್ಲ ಕೂತು ಅದೂ ಇದೂ ಹರಟಿದ್ದೆವು. ಅಂತರಂಗದಲ್ಲಿ ತೀರ ಒಂಟಿಯಾದ, ತುಂಬ ಸೂಕ್ಷ್ಮ ಸಂವೇದನೆಗಳ ಮನುಷ್ಯ, ಭಾವುಕ.

ಆನಂತರ ಹೀಗೇ, ಆಗಾಗ ಫೋನು ಮಾಡಿ ಮಾತನಾಡುವುದು, ಅವರು ಮಂಗಳೂರಿಗೆ ಬಂದಾಗ ನಾನು ಹೋಗಿ ಭೇಟಿಯಾಗುವುದು, ಮದುವೆ ಮುಂಜಿಗಳೆಂದರೆ, ಸಭೆ ಸಮಾರಂಭಗಳೆಂದರೆ ವಿಚಿತ್ರ ರೇಜಿಗೆಯಿದ್ದ ಅವರೂ ನಾನೂ ಹೊರಗೆ ಕಾರಿನಲ್ಲೇ ಕೂತು ಅದೂ ಇದೂ ಮಾತನಾಡಿ ಬರುವುದು ಎಲ್ಲ ಇತ್ತು. ಪ್ರತಿಸಲವೂ ವಿದಾಯ ಹೇಳುವ ಮೊದಲು ಕಾಗದ ಬರೆಯಿರಿ ಅಂತಲೋ ಬರೆಯುತ್ತೇನೆ ಅಂತಲೋ ಮಾತು ಮುಗಿಸುತ್ತಿದ್ದುದು ಅವರು. ಈಗ ಯಾರು ಕಾಗದ ಬರೆಯುತ್ತಾರೆ, ಅಲ್ಲವ? ಈಮೇಲ್ ಆದರೆ ಸ್ವಲ್ಪ ಸುಲಭ. ಆಫೀಸಿನ ಕೆಲಸದ ನಡುವೆಯೇ ಎರಡು ಸಾಲು ಎಳೆದು ಕಳಿಸಿಬಿಡಬಹುದು. ಪತ್ರ ಬರೆಯುವುದು ಕಷ್ಟ ಅನಿಸಹತ್ತಿದೆ. ಆದರೆ ಇವರ ಬಳಿ ಆಯ್ತು ಬರೆಯುತ್ತೇನೆ ಎಂದ ಮೇಲೆ ಬರೆಯದೇ ಇರುವುದು ಕೂಡ ಒಂದು ಸಂಕಟವಾಗಿ ಬಿಡುತ್ತದೆ. ಅದರಿಂದ ತಪ್ಪಿಸಿಕೊಳ್ಳಲಿಕ್ಕಾದರೂ ಬರೆಯಲು ಕೂರುತ್ತೇನೆ. ಆದರೆ ಎಂಥ ಕಷ್ಟ, ಬರೆಯಲಿಕ್ಕೆ ಏನೂ ಇಲ್ಲದೆ ಪತ್ರ ಬರೆಯುವುದು! ಕೊನೆಗೆ ಪತ್ರಿಕೆಯಲ್ಲಿ ಇತ್ತೀಚೆಗೆ ಓದಿದ ಕತೆಗಳು, ಲೇಖನಗಳು, ಇಷ್ಟವಾದ ಕಾದಂಬರಿ, ಪುಸ್ತಕ ಎಂದೆಲ್ಲ ಬರೆಯಲು ತೊಡಗಿದರೆ ಅದು ಅನುದ್ದಿಶ್ಯ ಉದ್ದವಾಗಿ ಬಿಡುತ್ತದೆ! ಆದರೆ ಇಲ್ಲಿ ಸಂಪಾದಕರ "ಒಂದೇ ಪುಟದ ಮಿತಿಯಲ್ಲಿರಲಿ" ಎಂಬ ನಿರ್ದೇಶವಿಲ್ಲದಿರುವುದರಿಂದ ಮತ್ತು ಅವರಿಗೂ ಇದರಲ್ಲೆಲ್ಲ ಆಸಕ್ತಿ ಇರುವುದರಿಂದ ತೊಂದರೆಯೇನಿಲ್ಲ ಬಿಡಿ.

ಹೇಳಲು ಹೊರಟಿದ್ದು ಇದನ್ನೆಲ್ಲ ಅಲ್ಲ. ಮೊನ್ನೆ ಭಾನುವಾರ, ಇನ್ನೂ ಮುಂಜಾನೆ ಎನ್ನಬಹುದಾದ ರೀತಿ ಮೋಡ ಮುಸುಕಿದ್ದ ಬೆಳಗ್ಗೆ ಇವರು ಇದ್ದಕ್ಕಿದ್ದ ಹಾಗೆ ಫೋನ್ ಮಾಡಿದರು. ಅವರ ಆತ್ಮೀಯ ಮಿತ್ರರೊಬ್ಬರು, ಬಾಲ್ಯದ ಗೆಳೆಯ, ಸರಿ ಸುಮಾರು ಅವರದೇ ವಯಸ್ಸಿನವರು, ಎಲ್ಲೋ ವಿದೇಶದಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿ ಹೊರಟು ಹೋದ ವಿಷಯ ತಿಳಿಸಿದರು. ನನಗೇನೂ ಅನಿಸದಿದ್ದರೂ ಹೌದ ಎಂದೆ. ಇಲ್ಲೇ ಇರುವಾಗ ವಾರಕ್ಕೊಮ್ಮೆಯಾದರೂ ಫೋನ್ ಮಾಡುತ್ತಿದ್ದರು, ಆಗಾಗ ಪತ್ರವನ್ನೂ ಬರೆಯುತ್ತಿದ್ದರು ಎಂದರು. ಮುಂದುವರಿದು, ಇನ್ನು ಮೇಲೆ ಅದೂ ಇಲ್ಲ ಎಂದರು. ಆ ಧ್ವನಿ ಸಣ್ಣದಾಗಿತ್ತು.

ಏನೆಲ್ಲ ಇತ್ತು ಆ ಕೊನೆಯ ಮಾತಿನಲ್ಲಿ ಎನ್ನುವುದು ನಮಗಿಬ್ಬರಿಗೇ ಗೊತ್ತು ಬಹುಷಃ. ಇನ್ನು ಮೇಲೆ ಅದೂ ಇಲ್ಲ! ಅದೊಂದೇ ಇದ್ದಿದ್ದು ಎನ್ನುವ ಅರ್ಥವಿಲ್ಲವೆ ಅದರಲ್ಲಿ? ಅಥವಾ ಆ ಮನುಷ್ಯನ ಅಸ್ತಿತ್ವ ಇವರ ಪ್ರಜ್ಞೆಗೆ ಬರುತ್ತಿದ್ದುದೇ ಅದೊಂದರಿಂದ ಎನ್ನಿ. ಇನ್ನು ಅದೂ ಇಲ್ಲವೆಂದರೆ ಏನರ್ಥ? ಇಷ್ಟಕ್ಕೂ ಇವರ ಆ ಮಿತ್ರ ಇದ್ದಿದ್ದು ಉತ್ತರ ಭಾರತದ ಒಂದು ನಗರದಲ್ಲಿ. ಆದರೂ ಅದು ಇವರಿಗೆ ಇಲ್ಲೇ ಅನಿಸಿತ್ತು! ವಿದೇಶ ಮಾತ್ರ ಇಲ್ಲೇ ಅನಿಸುವುದಿಲ್ಲ. ಯಾಕೆಂದರೆ, ಇನ್ನು ವಾರಕ್ಕೊಮ್ಮೆ ಫೋನ್ ಬರುವ ಸಂಭವವಿಲ್ಲ.

ತನ್ನ ಅಕ್ಕನನ್ನು ಕಳೆದುಕೊಂಡ ಮಧ್ಯವಯಸ್ಕರೊಬ್ಬರು ನನಗೆ ಎಸ್ಸೆಮ್ಮೆಸ್ ಬರೆದಿದ್ದರು, ಅಕ್ಕನ ಜೊತೆ ಕಳೆದ ಬಾಲ್ಯದ ಕ್ಷಣಗಳೆಲ್ಲ ಈಗ, ಬೆಂಗಳೂರಿಗೆ ಹೊರಟ ರಾತ್ರಿಯ ಸುವಿಹಾರಿ ಬಸ್ಸಿನಲ್ಲಿ ಒಬ್ಬನೇ ಕೂತ ಒಂಟಿ ಹೊತ್ತಿನಲ್ಲಿ ಮನಸ್ಸಿನ ಮೇಲೆ ಧಾಳಿ ಮಾಡುತ್ತಿವೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಒಂದು ಮಾತನ್ನೇ ಆಧಾರವಾಗಿಟ್ಟುಕೊಂಡು ನಾವೆಲ್ಲ ಅವಳನ್ನು ಮರೆತೇ ಬಿಟ್ಟವರ ಹಾಗೆ ಇದ್ದುಬಿಟ್ಟೆವು ನೋಡು, ಅದೆಲ್ಲ ಈಗ ನೆನಪಾಗಹತ್ತಿದೆ....

ಆದರೆ ವಿಚಿತ್ರ ನೋಡಿ, ನಮ್ಮ ಎಷ್ಟೋ ಆತ್ಮೀಯರು ಸದಾ ಕಾಲ ನಮ್ಮೆದುರೇ ಇರುವುದಿಲ್ಲ. ಅವರು ಎಲ್ಲೋ ನಾವೆಲ್ಲೋ ಇರುವುದೇ ಹೆಚ್ಚು. ಮತ್ತೆ ತೀರ ಜೊತೆಗೇ ಇರುವವರ ಮೇಲೆ ನಮ್ಮ ಅವಲಂಬನ ನಮಗೆ ತಿಳಿಯುವುದೂ ನಾವು ಅವರಿಂದ ದೂರ ದೂರ ಹೊರಟು ನಿಂತಾಗಲೇ. ಆದರೂ ಆ ದೂರವಿರುವ ವ್ಯಕ್ತಿ, ನಮ್ಮ ನೆನಪುಗಳಲ್ಲಿ ನಮ್ಮನ್ನು ಕಾಡುತ್ತ ಇದ್ದರೆ, ಅವನೋ ಅವಳೋ ಸದ್ಯ ಹತ್ತಿರದಲ್ಲೇ ಇಲ್ಲ ಎಂಬುದೇ ಒಂದು ನೋವಾಗಿ ಬಿಟ್ಟರೆ ಹೊರತು, ಕಣ್ಣೆದುರಿಲ್ಲದ ವ್ಯಕ್ತಿಗಾಗಿಯೇ ನಾವು ಹಂಬಲಿಸುವುದು ಕಡಿಮೆ. ಇದ್ದಾರೆ ಎಲ್ಲೋ ಎಂಬ ಸಮಾಧಾನ ಅಥವಾ ಜೊತೆಯಲ್ಲೇ ಇಲ್ಲವಲ್ಲ ಎಂಬ ನೋವು ಇಲ್ಲದಿರುವುದೇ ಅಂಥ ನಿಶ್ಚಿಂತೆಗೆ ಕಾರಣ. ಹಾಗೆ ಬರೇ ಒಂದು ಹಲೋ ಎಂಬ ಧ್ವನಿಯಾಗಿ, ಪತ್ರದ ಅಕ್ಷರಗಳಾಗಿ ನಮ್ಮ ಮಟ್ಟಿಗೆ ಜೀವಂತ ಇರುವ ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಇಲ್ಲವೆ? ಆ ವ್ಯಕ್ತಿ ನಿಜಕ್ಕೂ ಈ ಕ್ಷಣ ಜೀವಂತವಾಗಿ ಉಸಿರಾಡುತ್ತ ಇದೆಯೇ ಎಂದರೆ ಪ್ರಮಾಣ ಮಾಡಿ ಹೇಳುವಷ್ಟು ಖಾತ್ರಿ ನಮಗಿಲ್ಲದಿದ್ದರೂ ಇದ್ದಾನೆ ಎಂಬ ವಿಶ್ವಾಸ ಹುಟ್ಟಲು ಕಾರಣ ಆ ಹಲೋ, ಅಥವಾ ಆ ಪತ್ರದಲ್ಲಿನ ಅಕ್ಷರಗಳು! ವಿಚಿತ್ರ ಅನಿಸುವುದಿಲ್ಲವೇ? ಅದೇ ವ್ಯಕ್ತಿ ಸತ್ತ ಎಂದು ತಿಳಿಯಿತೆನ್ನಿ. ಆಗ ನೋವು ತಪ್ಪಿದ್ದಲ್ಲ ಅಲ್ಲವೆ? ಕಣ್ಣೆದುರಿಗಿಲ್ಲದ ಆತ್ಮೀಯ ವ್ಯಕ್ತಿ ಇನ್ನೆಲ್ಲೋ ಇದ್ದಾನೆ ಅಥವಾ ಇಲ್ಲ ಎಂಬುದನ್ನು ನಮ್ಮ ಪ್ರಜ್ಞೆ ಗುರುತಿಸುವ, ಗುರುತಿಸಿ ಅದನ್ನು ನೋವಾಗಿಸುವ ಬಗೆ ಇದು.

ಇದನ್ನೂ ಬಿಡಿ. ಮನುಷ್ಯನ ಆಳದ ಒಂಟಿತನ ನನ್ನನ್ನು, ನಿಮ್ಮನ್ನು ತಟ್ಟುತ್ತದೆ. ಒಬ್ಬರೇ ಇರುತ್ತ ಎಲ್ಲವೂ (ಎಲ್ಲರೂ) ತನ್ನಲ್ಲೇ ಇದೆ ಎಂದುಕೊಳ್ಳುವುದು ಏಕಾಂತವಂತೆ. ಯಾರೂ ಇಲ್ಲ ಯಾರೂ ಇಲ್ಲ ಎಂದು ಗೈರು ಅನುಭವಿಸುತ್ತ ಕೊರಗುವುದು ಒಂಟಿತನವಂತೆ. ಎಲ್ಲ ಇದ್ದರೂ ಈ ಒಂಟಿತನ ಮನುಷ್ಯನನ್ನು ಕಾಡುತ್ತ ಇರುವುದು ಸಾಧ್ಯ. ವಯಸ್ಸಾದಂತೆ ಇದು ಹೆಚ್ಚಾಗುವುದೆ? ಬರೇ ಮದುವೆಯಾಗದವರಲ್ಲಿ, ಮದುವೆಯಾಗಿ ಸಂಗಾತಿಯನ್ನು, ಮಕ್ಕಳನ್ನು ಕಳಕೊಂಡವರಲ್ಲಿ ಇದು ಹೆಚ್ಚು ಅಂತೇನೂ ಭಾವಿಸಬೇಕಿಲ್ಲ. ಹೇಳಿದೆನಲ್ಲ, ಎಲ್ಲ ಇದ್ದೂ...

ಮನುಷ್ಯನ ಅಸ್ತಿತ್ವ ಇರುವುದೇ ನಮ್ಮ ಭಾವನೆಗಳಲ್ಲಿ, ನೆನಪುಗಳಲ್ಲಿ ಅನಿಸುವುದಿಲ್ಲವೆ? ನಿಮ್ಮ ಮನಸ್ಸಿನಲ್ಲಿ ಇಲ್ಲದ ಮೇಲೆ ಆ ವ್ಯಕ್ತಿ ನಿಮ್ಮ ಮಟ್ಟಿಗೆ ಇದ್ದೂ ಇಲ್ಲದ ಹಾಗೇ ಅಲ್ಲವೆ? ನಿಮ್ಮ ಮನಸ್ಸಿನಲ್ಲಿ ಇದ್ದ ಮೇಲೆ ಆ ವ್ಯಕ್ತಿ ಇಲ್ಲವಾಗುವುದು ಹೇಗೆ? ಇನ್ನೂ ಇದ್ದಾನೆಂದೇ ಅರ್ಥವಲ್ಲವೆ?

ಆ ಮನುಷ್ಯ ಕೇಳುತ್ತಿರುವುದೂ ಅದೇ, ನಿಮ್ಮ ಮನಸ್ಸಿನಲ್ಲಿ ಒಂದಷ್ಟು ಜಾಗ...ಸ್ವಲ್ಪ ಸೂಕ್ಷ್ಮವಾಗಿ ಆಲಿಸಿದರೆ ನಮ್ಮೊಳಗೂ ಅಂಥ ಒಂದು ಬೇಡಿಕೆ ಇರುವಂತೆ ಅನಿಸುವುದಿಲ್ಲವೆ?

~.~
  • narendra ರವರ ಬ್ಲಾಗ್
  • Login or register to post comments
  • 416 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಮ ಸೇತು
  • ಪ್ರೀತಿಯಿಲ್ಲದ ಮೇಲೆ...
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನಿರಂತರ
  • ಮನಸ್ಸಿನ ಮನಸ್ಸೆ...
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHMYA
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:55pm
  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator