ನಗೆ ನಗಾರಿ
ನಕ್ಕು ಬಿಡು ಒಮ್ಮೆ ಹಾಗೇ ಸುಮ್ಮನೆ.. ಕಳೆಯಲಿ ಜಗದ ದುಃಖ ಆ ಕ್ಷಣ ಮಾತ್ರಕ್ಕಾದರೂ!
ನಗುವುದಕ್ಕೆ ಕಾರಣ ಬೇಕಿತ್ತಾ?
‘ಏನಿದೆ ಅಂತ ನಗು ನಗುತ್ತಾ ಇರಬೇಕು? ಈ ಬೋರು ಬದುಕಿನಲ್ಲಿ ನಗೋದಕ್ಕೆ ಏನು ಸಿಕ್ಕುತ್ತೆ?’ ಎಂಬ ಶಿಕಾಯತ್ತು ತುಂಬಾ ಮಂದಿಯದು. ಇವರ ಸಮಸ್ಯೆ ನಗುವುದಕ್ಕೆ ಇವರಿಗೆ ಕಾರಣಗಳು ಸಿಕ್ಕುವುದಿಲ್ಲ. ಓದಿದ ಜೋಕುಗಳು ಹಳೆಯವು ಅನ್ನಿಸುತ್ತವೆ, ಯಾರೋ ಮಾಡಿದ ವ್ಯಂಗ್ಯ ಕುಚೇಷ್ಟೆ ದಡ್ಡತನ ಅನ್ನಿಸುತ್ತದೆ, ನಗುವ ಅವಕಾಶಗಳು ಬಂದಾಗ ಅವುಗಳನ್ನು ಅನುಮಾನಿಸಿ ನೋಡುತ್ತಾರೆ. ನಗುವಂಥ ಸಂದರ್ಭ ಬಂದರೂ ನೋಡಿದವರಿಗೆ ತಮ್ಮದು ವಿವೇಕ ಪೂರ್ಣವಾದ ಮಂದ ಹಾಸ, ಮಿಲಿಯನ್ ಡಾಲರ್ ಸ್ಮೈಲ್ ಎನ್ನಿಸುವಂತೆ ಹಲ್ಕಿರಿಯುತ್ತಾರೆ. ಇವರಿಗೆ ಕಾರಣವಿಲ್ಲದೆ ನಗುವುದೆಂದರೆ ಏನು ಎಂಬುದು ಅರ್ಥವೇ ಆಗದ ಸಂಗತಿ.
ಇವರಿಗೆ ಹೇಳಬೇಕಾದ್ದು ಇಷ್ಟೇ, ‘ಮಹಾ ಸ್ವಾಮಿ ನೀವು ಬಹು ದೊಡ್ಡವರಾಗಿದ್ದೀರಿ. ದೊಡ್ಡ ದೊಡ್ಡದನ್ನು ಕಲಿಯುವ ಪ್ರಕ್ರಿಯೆಯಲ್ಲಿ ನಿಮ್ಮಿಡೀ ಬದುಕನ್ನು ಸವೆಸಿದ್ದೀರಿ. ಅತ್ಯುತೃಷ್ಟವಾದ ಸಿದ್ಧಾಂತಗಳು, ತತ್ವಗಳು, ಬೃಹದ್ಗ್ರಂಥಗಳನ್ನು ಅಧ್ಯಯನ ಮಾಡುವಲ್ಲಿ ನೀವು ಪೂರ್ಣ ಶಕ್ತಿಯನ್ನು ತೊಡಗಿಸಿದ್ದೀರಿ. ಬಹುಶಃ ಈ ಹಂತದಲ್ಲಿ ನೀವು ತುಂಬಾ ಹಿಂದಿನ ಅಂದರೆ ನಿಮ್ಮ ಬಾಲ್ಯದ ಗುಣಗಳನ್ನು ಕೊಂಚ ಮರೆತಿದ್ದೀರಿ. ನೆನಪಿದೆಯೇ ಆಗ ನೀವು ಬಸ್ಸಿನ ಮುಂದಿನ ಸೀಟಿನಲ್ಲಿ ನಿಮ್ಮ ತಂದೆಯ ತೊಡೆಯ ಮೇಲೆ ಕುಳಿತಿರುತ್ತಿದ್ದಿರಿ. ನಿಮ್ಮ ಹಿಂದಿನ ಸೀಟಿನಲ್ಲಿ ಕುಳಿತ ಅಂಕಲ್ಲೊ, ಆಂಟಿಯೋ ನಿಮ್ಮನ್ನು ನೋಡಿ ‘ಐ ಕಳ್ಳಾ...’ ಎಂದು ಕಣ್ಣು ಮಿಟುಕಿಸಿದರೆ ಸಾಕು ನೀವು ಕಿಲಕಿಲನೇ ನಗುತ್ತಿದ್ದಿರಿ. ಪುನಃ ಅವರು ಕಣ್ಣು ಮಿಟುಕಿಸಿದಾಗ ಮತ್ತೆ ಅಷ್ಟೇ ಲವಲವಿಕೆಯಿಂದ ನಗುತ್ತಿದ್ದಿರಿ. ಪುನಃ ಪುನಃ ಎಷ್ಟು ಬಾರಿ ನಕ್ಕರೂ ನಿಮಗೆ ಆಯಾಸವಾಗುತ್ತಿರಲಿಲ್ಲ. ಬೇಸರವಾಗುತ್ತಿರಲಿಲ್ಲ.
‘ಯೋಚಿಸಿ, ನಿಮಗೆ ಎದುರಿನ ಅಂಕಲ್ಲೋ ಆಂಟಿಯೋ ಯಾವ ಜೋಕನ್ನೂ ಹೇಳುತ್ತಿರಲಿಲ್ಲ. ಅಸಲಿಗೆ ಅವರ ಪರಿಚಯವೂ ನಿಮಗಿರುತ್ತಿರಲಿಲ್ಲ. ಅವರು ಎಂಥವರು, ಅವರ ಸಂಸ್ಕೃತಿ ಎಂಥದ್ದು, ಜಾತಿ ಯಾವುದು, ಆಸಕ್ತಿಗಳ್ಯಾವುವು ಎಂಬುದೊಂದೂ ಗೊತ್ತಿರಲಿಲ್ಲ. ಆದರೆ ಎದುರಿಗಿದ್ದವರ ಮುಖದಲ್ಲಿನ ನಿಷ್ಕಲ್ಮಶ ನಗೆಯನ್ನು ನೀವು ಗುರುತಿಸಿದ್ರಿ, ನೀವೂ ಅಷ್ಟೇ ನಿಷ್ಕಲ್ಮಶವಾಗಿ ನಗುತ್ತಿದ್ದಿರಿ. ನಿಮ್ಮ ನಗುವನ್ನು ಕಂಡು ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಭಯವಾಗುತ್ತಿರಲಿಲ್ಲ. ನಿಮ್ಮ ನಗುವಿನಲ್ಲಿನ ವಿಶ್ವಾಸದಿಂದಾಗಿ ನೋಡಿದವರೆಲ್ಲರೂ ನಿಮ್ಮನ್ನು ನಗಿಸುತ್ತಿದ್ದರು. ನೀವು ನಗುತ್ತಲೇ ಇದ್ದಿರಿ. ನಿಮಗೆ ಕಾರಣಗಳು ಬೇಕಿರಲಿಲ್ಲ ಆಗ ನಗಲು... ನಗು ನಿಮ್ಮೊಳಗಿತ್ತು, ಹೊರಹಾಕಲು ನೆಪಗಳನ್ನು ಮಾತ್ರ ಅಪೇಕ್ಷಿಸುತ್ತಿದ್ದಿರಿ. ಈಗ ಒಳಗಿನ ನಗುವನ್ನು ಬತ್ತಿಸಿಕೊಂಡಿದ್ದೀರಿ, ಕಾರಣಗಳನ್ನು ಹುಡುಕುತ್ತಿದ್ದೀರಿ. ಹೇಳಿ, ನಾವು ನಿಮ್ಮಷ್ಟು ಬುದ್ಧಿವಂತರಲ್ಲ. ಆದರೆ ನಿಮಗೆ ಇದು ವಿವೇಕ ಅನ್ನಿಸುತ್ತದೆಯೇ?’
ಏನಂತೀರಿ, ನಮ್ಮ ನಗು ಕಳುದು ಹೋದದ್ದು ಎಲ್ಲಿ ಎಂಬುದೇನಾದರೂ ನಿಮಗೆ ತಿಳಿಯಿತೇ?

- nagenagaari ರವರ ಬ್ಲಾಗ್
- Login or register to post comments
- 263 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ನಗೆಸಾಮ್ರಾಟರೆ,
ಬಹಳ ಸೊಗಸಾಗಿದೆ ನಿಮ್ಮ ಬರಹ...
ನಗುನಗುತಾ ನಲಿ ನಲಿ|
ಏನೇ ಆಗಲಿ||
ಬಂಗಾರದ ಮನುಷ್ಯ ಚಲನಚಿತ್ರದ ಈ ಹಾಡು ನೆನಪಿಗೆ ಬಂತು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ಹೌದು ಹಾಗೆ ನಗು ನಗುತಾ ನಲಿಯುವವನೇ ನಿಜವಾದ ಬಂಗಾರದ ಮನುಷ್ಯ ಅಲ್ಲವೇ?
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ಹೌದು...
>>ನಗು ನಗುತಾ ನಲಿಯುವವನೇ ನಿಜವಾದ ಬಂಗಾರದ ಮನುಷ್ಯ ಅಲ್ಲವೇ?
ಈ ಮಾತಿ ನೂರಕ್ಕೆ ನೂರು ಸರಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ಇಷ್ಟೋಂದು ಸ್ಮೈಲಿಗಳನ್ನು ಹಾಕಬೇಡ್ರಿ, ಆಮೇಲೆ ನೀವು ಚಿನ್ನದ ಮನುಷ್ಯ ಎಂಬುದು ಜಗಜ್ಜಾಹೀರಾಗಿ ಕಿಡ್ನಾಪ್ ಮಾಡಿ ಹರಾಜು ಹಾಕಿ ಬಿಟ್ಟಾರು!
-ನಗೆ ಸಾಮ್ರಾಟ್
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
>>ಏನಂತೀರಿ,ನಮ್ಮ ನಗು ಕಳೆದು ಹೋದದ್ದು ಎಲ್ಲಿ..?
ನಗು
ಅದೆಲ್ಲಿ ಹೋಗಲು ಸಾಧ್ಯ?
-ನಗೆ ಸಾಮ್ರಾಟರ ಬಳಿಯಲ್ಲೇ ಇದೆ.
ಪೋಲೀಸರಿಗಿಂತ ತಮ್ಮ ತನಿಖೆಯಲ್ಲಿ ನಮಗೆ ನಂಬಿಕೆ.
ಹುಡುಕಿ ಎಳೆದು ತನ್ನಿ.
-ಗಣೇಶ.
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ನಿಮ್ಮ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಿಬಿ ಐನವರು ‘ನಗುವನ್ನು ಎಲ್ಲೆಲ್ಲಿ ಬಚ್ಚಿಟ್ಟಿದ್ದೀರಿ ಎಂದು ಮರ್ಯಾದೆಯಿಂದ ತಿಳಿಸಿಬಿಡಿ’ ಎಂದು ಗುರಾಯಿಸಿದ್ದಾರೆ.
ನಮ್ಮ ಸಂ-ಚೋದನೆಯ ಬಗ್ಗೆ ನಂಬಿಕೆ ಇಟ್ಟಿರುವ ನಿಮ್ಮ ಬಗ್ಗೆ ಹೆಮ್ಮೆ ಇದೆ.
- ನಗೆ ಸಾಮ್ರಾಟ್
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ಮುಖ ಗಂಟಿಕ್ಕಿಕೊಳ್ಳಲು 56 ಸ್ನಾಯುಗಳು ಬೇಕಂತೆ...ನಗಲು ಬರೀ 14 ಸಾಕಂತೆ...!!
ಯಾಕೆ ಅಷ್ಟು ಎನೆರ್ಜಿ ವೇಷ್ಟ್ ಮಾಡ್ತೀರಾ...?!! ನಕ್ಕುಬಿಡ್ರಿ ಒಂದ್ಸಾರಿ
-ಸವಿತ
ಉ: ನಗುವುದಕ್ಕೆ ಕಾರಣ ಬೇಕಿತ್ತಾ?
ಅಯ್ಯೋ ಮುಖ ಗಂಟಿಕ್ಕಿಕೊಳ್ಳದಿದ್ರೆ ಉಳಿದ ೪೨ ಸ್ನಾಯುಗಳಿಗೆ ಕೆಲಸವಿಲ್ಲದೆ ಅವು ನಾಶವಾಗಿಬಿಡುತ್ತವೆ ಎಂದು ವಾದಿಸುವವರೂ ಇದ್ದಾರೆ ಬಿಡಿ!
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/