ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
ಚಂದಿರನ ನೋಡಿದವ
ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ್ಲಿ ಸರ್ವೇ ತಂಡದ ಮುಖ್ಯಸ್ಥ ಸರಕಾರದ ಆಫೀಸರ್ ಕೂಡ ಇರುತ್ತಾನೆ. ಅವನು ಡರ್ಶುವಿನಲ್ಲೂ ವಿಶಿಷ್ಟವಾದ ಗುಣವೊಂದನ್ನು ಕಾಣುತ್ತಾನೆ. ಆದರೆ ಅದು ಉಳಿದವರಿಗೆ ಬಯಲಾಗುವುದು ಡರ್ಶು ಅವರೊಂದಿಗೆ ತನಗಿರುವ ಕಾಡಿನ ಮೂಲೆ ಮೂಲೆಯ ಪರಿಚಯವನ್ನು ಹಂಚಿಕೊಳ್ಳುತ್ತ ಕಷ್ಟ ಸುಖಗಳಲ್ಲಿ ಭಾಗಿಯಾದ ಮೇಲೇನೆ. ಡರ್ಶು ಏನೂ ಬಯಸದೆ, ಕೊನೆಗೆ ಬರಬಹುದು ಎಂದೂ ಆಲೋಚಿಸದ ಒಂದು ಕೋವಿಗಾಗಿ ಎಲ್ಲ ಕೆಲಸ ಮಾಡುವುದು ಈಗಿನ ನಮ್ಮ urban ಜಗತ್ತಿಗೆ ಪರಿಚಯವೇ ಇಲ್ಲದ ಗುಣ. ಅದೆಲ್ಲ ಇರಲಿ, ಸರ್ವೇ ಉದ್ದಕ್ಕೂ ಜೊತೆ ನೀಡಿದ ಡರ್ಶು ಹೊಸ ಕೋವಿ ಹಿಡಿದು ಒಮ್ಮೆ ಕಾಡಿನಲ್ಲಿ ಬೇರೇನೋ ಹೊಡೆಯಲು ಹೋಗಿ ಹುಲಿಯೊಂದನ್ನು ಹೊಡೆದುಬಿಡುತ್ತಾನೆ. ಹುಲಿ ಹೊಡೆದಿದ್ದೇನೆಂದು ತಿಳಿದ ಕೂಡಲೆ ಅವನಲ್ಲಿ ಖಿನ್ನತೆ ಆವರಿಸಿಬಿಡುತ್ತದೆ.
ಏನು ಬೇಟೆಯಾಡಿದರೂ ಹುಲಿಯನ್ನು ಹೊಡೆಯಬಾರದು, ಹುಲಿ ಹೊಡೆದರೆ ಅದು ಪಾಪ ಎನ್ನುವ ನಂಬಿಕೆ ಅವನದು. ಕೊನೆಗೆ ಪಾಪ ಮಾಡಿದೆನೆಂಬ ಅದೇ ಕೊರಗು ಜೀವನದಲ್ಲಿನ ಆಸೆ ಹೋಗಿಸಿಬಿಡುತ್ತದೆ. ಕಾಡಿಗೆ ಹೋದರೆ ಹುಲಿರಾಯ ಬಿಡನು, ಊರ ಮನೆಯ ಜೀವನ ಒಗ್ಗದು. ಕೊನೆಗೊಂದು ದಿನ ಹೊಸ ಕೋವಿ ಹಿಡಿದು ಕಾಡಿನೆಡೆಗೆ ಹೊರಟ ಇವನು ಮತ್ತೆ ಕಾಣಿಸುವುದಿಲ್ಲ, ಅವನು ತೆಗೆದುಕೊಂಡು ಹೋದ ಕೋವಿ ಮಾತ್ರ ಪೋಲಿಸರಿಗೆ ಸಿಗುತ್ತದೆ.
ಇದೆಲ್ಲ ಇವತ್ತು ನೆನಪಾಗಿದ್ದುದು ಒಂದು ತಮಾಷೆ. ಉಲ್ಲಾಸ್ ಕಾರಂತರೊಂದಿಗೆ ರೆಕಾರ್ಡ್ ಮಾಡಿದ ಸಂದರ್ಶನ ಬಹಳ ದಿನಗಳಾದರೂ ಎಡಿಟ್ ಮಾಡಿಲ್ಲವೆಂಬುದು ನೆನಪಾಗಿ ಆ ಕೆಲಸ ಹಿಡಿದು ಕುಳಿತಿದ್ದೆ. ಹುಲಿ ಹಾಗೂ ಸುತ್ತಲಿನ ಪರಿಸರದ ನಡುವೆ ಇರುವ ಅಪೂರ್ವ ಸಂಬಂಧದ ಬಗ್ಗೆ ಉಲ್ಲಾಸ್ ಕಾರಂತರು ಹೇಳುತ್ತಿರುವ ಮಾತು ಸ್ಪೀಕರಿನಲ್ಲಿ ಕೇಳಿಬರುತ್ತಿತ್ತು. ಅಷ್ಟಕ್ಕೆ ಸರಿಯಾಗಿ ಅಮ್ಮ ಕಾಫಿಗೆ ಕರೆದದ್ದು.
ಇವತ್ತು ಹಬ್ಬವಾದ್ದರಿಂದ ಸಾಯಂಕಾಲದ ಕಾಫಿ ತಡ. ಅರಿಶಿನ ಕುಂಕುಮ ತೆಗೆದುಕೊಂಡು ಬಂದ ಮೇಲೆ ಎಲ್ಲರಿಗೂ ಕಾಫಿ ಮಾಡುತ್ತೇನೆ ಎಂದು ಹೋದವರು ವಾಪಸ್ ಬಂದಾಗ ಸಾಯಂಕಾಲವಾಗಿತ್ತು. ಕರೆದ ಕೂಡಲೆ ಬರೋದಿಲ್ಲ ಎಂದು ನಿತ್ಯ ಬೈಸಿಕೊಳ್ಳುವವ ಇವತ್ತು ಹಾಗೆ ಮಾಡಬಾರದು ಎಂದು ತಡಮಾಡದೆ ಇದನ್ನು ಹಾಗೆಯೇ ಬಿಟ್ಟು ಮೆಟ್ಟಿಲಿಳಿಯುತ್ತಾ ಕೆಳಗೆ ಓಡಿದೆ. ಎದುರಿಗೆ ಆಕಾಶದಲ್ಲಿ ಜಗಮಗಿಸುವ ಉಂಗುರದಂತಿದ್ದ ಚಂದ್ರ ಕಣ್ಣಿಗೆ ಬಿದ್ದ. ಕೆಳ ಹೋದವನು ನಾನಿದನ್ನೇ ಕಾಫಿ ಕುಡಿಯುತ್ತ ಅಮ್ಮನಿಗೆ ತಿಳಿಸಿದೆ.
ಅಮ್ಮನ ಮುಖದಲ್ಲಿ ಆಗ ಕಂಡುಬಂದದ್ದು ನನಗೆ ಬಣ್ಣಿಸಲಾಗದು. ಬಹುಶಃ ಮಗ ಅಪವಾದಕ್ಕೆ ಸಿಕ್ಕಾನು ಎಂಬ ಭಯ, ಹಾಗಾಗದಿರಲಿ ಎಂಬ ಕಾಳಜಿ, ತಾನೂ ಚಂದ್ರನ ನೋಡಿಬಿಟ್ಟೆನೇನೊ ಇವನ ಮಾತಲ್ಲೆ ಎಂಬಂತಹ ಭಾವನೆಯೆಲ್ಲ ಇತ್ತೇನೊ, ಅವರು ಹೆಚ್ಚೇನೂ ಮುಖದಲ್ಲಿ ತೋರಿಸಿಕೊಳ್ಳದೆ - "ನಡಿ, ಬೇಗ ಕಾಲು ತೊಳೆದುಕೊಂಡು ಬಂದು ಶ್ಯಮಂತಕದ ಕಥೆ ಕೇಳು. ಚಂದ್ರ ನೋಡಬಾರದು ಇವತ್ತು" ಎಂದರು. ಇದರಲ್ಲೆಲ್ಲ ಅಷ್ಟು ವಿಶ್ವಾಸವಿಲ್ಲದ ನಾನು ಛೆ, ಅದೆಲ್ಲ ಏನೂ ಬೇಡ ಎಂದು ತಲೆಯಲ್ಲಾಡಿಸಿದೆ. ಅಮ್ಮನಿಗೆ ಬೇಸರವಾಗಿರಲಿಕ್ಕೂ ಸಾಕು. ಮೇಲೆ ಬಂದು ಏನೋ ನೆನಪಾಗಿ ಮತ್ತೆ ಓಡಿ ಹೋಗಿ ಅಮ್ಮನಿಗೆ ಕಥೆ ಓದುವೆ ಎಂದು ತಿಳಿಸಿ ಬಂದು ಅಮ್ಮನಿಗೆ ಕಾಣುವಂತೆ ಒಮ್ಮೆ ಕಥೆ ಓದಿ ಮುಗಿಸಿದೆ.

- hpn ರವರ ಬ್ಲಾಗ್
- Login or register to post comments
- 671 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಚಂದಿರನ ನೋಡಿದವ
ಹ್ಹಹ್ಹ! ಮಳೆಸುರಿಯುತ್ತಿರುವ ಭಾದ್ರಪದದಲ್ಲಿಯೂ ಚಂದ್ರ ಮೋಡದ ಮರೆಯಿಂದ ಬೇಕೆಂದೇ ಬಂದು ನಿಮಗೆ ದರ್ಶನ ಕೊಟ್ಟಿರಬೇಕು
ಅಂದಹಾಗೆ, ನಾನಿರುವ ಕಡೆ ಆಗಸ್ಟ್ ಸೆಪ್ಟೆಂಬರ್ ನಲ್ಲಿ ಮಳೆಯಿರಲಿ - ಮೋಡದ ಹೆಸರೂ ಇರುವುದಿಲ್ಲ. ಹಾಗಾಗಿ ಮನೆಯಿಂದ ಹೊರಬಿದ್ದರೆ, ಕಣ್ಣಿಗೆ ಚಂದ್ರ ಕಾಣುವುದು ಗ್ಯಾರಂಟಿ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಚಂದಿರನ ನೋಡಿದವ
ನಿಮ್ಮೂರಿನಲ್ಲಿ ನಂಬಿಕೆಯಿಟ್ಟವರು ರಾತ್ರಿ ಕಣ್ಮುಚ್ಚಿಕೊಂಡು ನಡೆಯಬೇಕಷ್ಟೆ. ಅಥವ ಬೇಗನೆ ಮನೆ ಸೇರಿಕೊಳ್ಳಬೇಕು. reflectionಊ ಕಣ್ಣಿಗೆ ಹಾಕಿಕೊಳ್ಳದೆ ಓಡಾಡುವುದು ಕಷ್ಟ, ಅಲ್ವ?
ಇವತ್ತು ಮಾತಿಗೆ ಸಿಕ್ಕ ಹಲವು ಸ್ನೇಹಿತರ ಜೊತೆ ಈ ವಿಷಯದ ಮಾತು ಬಂದಾಗ ಚಂದ್ರನ ನೋಡುವ ಮೂಲಕ ನನಗೆ ಕಂಪೆನಿ ಕೊಟ್ಟವರಲ್ಲಿ ಹಲವರಿದ್ದಾರೆ ಎಂಬುದಂತೂ ತಿಳಿಯಿತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
ಬೆಳಗ್ಗೆಯಿಂದಾನೆ 3-4 ಸಲ ನನಗೆ ನಾನೇ ಹೇಳ್ಕೊಂಡಿದ್ದೆ ಈವತ್ತು ಚಂದ್ರನ್ನ ನೋಡಬಾರದು ಅಂತ..
ಸಂಜೆ ಮನೆಗೆ ಬರುವಾಗ ಮಳೆ ಬಂದು ಮೋಡವೆಲ್ಲ ಚೆದುರಿದ ಆಕಾಶನ ಆಕಸ್ಮಾತಾಗಿ ನೋಡಿದೆ...
ನಕ್ಷತ್ರಗಳು ಕಾಣಿಸಿದವು..ಸದ್ಯ ಚಂದ್ರನ್ನ ನೋಡಲಿಲ್ಲ...ಆದ್ರೆ ನನ್ನ ಯೋಚನೆ...
ಇಷ್ಟು ಹೊತ್ತಿಗೆಲ್ಲ ಚಂದ್ರ ಬಂದಿರಬೇಕಿತ್ತಲ್ಲ ಅಂತ...!!
ಮತ್ತೆ ಆಕಾಶನ ನೋಡ್ಬೇಕು ಅಂತ ತುಂಬಾ ಕುತೂಹಲ ಆಯ್ತು,
ಈವತ್ತೊಂದಿನ ನೋಡೋದು ಬೇಡ ಅಂತ ಅಂದ್ಕೊಂಡು ಮನೆಗೆ ಬಂದೆ.
-ಸವಿತ
ಉ: ಚಂದಿರನ ನೋಡಿದವ
ಈ ನಂಬಿಕೆಯ conflictನಿಂದ ತಪ್ಪಿಸಿಕೊಂಡ್ರಿ
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
ಕಳೆದ ಮೂರು ವರ್ಷಗಳಿಂದ ಚಂದ್ರನನ್ನು ನೋಡ್ತಿದ್ದೆ...
ಅದಕ್ಕೆ ಈ ಬಾರಿ ಮನೆಯಿಂದ ಹೊರಗೇ ಹೊಗಲಿಲ್ಲ...
ಆದ್ರೂ ರಾತ್ರಿ ಮನೆಯ ಹಿಂಭಾಗದಲ್ಲಿ ಗಣೇಶನನ್ನು ವಿಸರ್ಜಿಸುವಾಗ ನನ್ನ ಕಣ್ಣುಗಳು ಕುತೂಹಲದಿಂದ ಆಕಾಶದ ಕಡೆಗೆ ನೋಡಿದವು...
ಅದೃಶ್ಟವಶಾತ್, ಚಂದಿರ ಕಾಣಿಸಲಿಲ್ಲ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಚಂದಿರನ ನೋಡಿದವ
ನಿಮ್ಮ ಅದೃಷ್ಟ ಒಳ್ಳೆಯದೋ ಕೆಟ್ಟದ್ದೋ ಹೇಳುವಷ್ಟು ನನಗೆ ಈ ಕ್ಷಣ ತಿಳಿದಿಲ್ಲ. ನಂಬಿಕೆಯನುಸಾರ ಕಥೆ ಕೇಳಿರೋದರಿಂದ ಚಂದಿರನ ನೋಡಿದ್ರೂ ಅಪವಾದವಾಗದು. ನಾನು ಕಥೆ ಓದಿಲ್ಲದಿರುವಾಗ ಅಪವಾದ ಹತ್ತಿಕೊಂಡಿದ್ದ ಪಕ್ಷದಲ್ಲಿ ಇದಕ್ಕೆ attribute ಮಾಡಬಹುದಿತ್ತು. ಈಗ ಕಥೆ ಓದಿಬಿಟ್ಟಿದ್ದೇನಲ್ಲ

ಅಪವಾದವಾದರೂ ಇದರಿಂದ ಎನ್ನಲಾಗುವುದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
"ಸಿಂಹಃ ಪ್ರಸೇನಮವಧೀತ್, ಸಿಂಹೊ ಜಾಂಬವತಾ ಹತಃ, ಸುಕುಮಾರಕಮಾರೊದಿಸ್ತವ ಹ್ಯೇಶ ಶ್ಯಮಂತಕಃ" - ಹೇಳಿಸಿದ್ರಾ ?
ಉ: ಚಂದಿರನ ನೋಡಿದವ
ಹು, ಕಥೆಯ ಕೊನೆಯಲ್ಲಿದೆಯಲ್ಲವ ಈ ಶ್ಲೋಕ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
ಚಂದ್ರನನ್ನು ನೇರ ನೋಡಿದರೆನೂ ತೊಂದರೆಯೇನಿಲ್ಲ ಅಂತ ಕೇಳಿದ ನೆನಪು.
ಆದರೆ ಚಂದ್ರನ ಪ್ರತಿಬಿಂಬವನ್ನು ನೋಡಬಾರದಂತೆ. ಅಲ್ಲವೇ?
ವಂದನೆಗಳೊಂದಿಗೆ,
ಸುಧೀಂದ್ರ
ಉ: ಚಂದಿರನ ನೋಡಿದವ
ಸುಧಿ, ನಿನ್ನ ಕಾಮೆಂಟ್ ಓದಿ ಬಿದ್ದೂ ಬಿದ್ದು ನಗುವಂತಾಯ್ತು.
ಪಿ ಬಿ ಶ್ರೀನಿವಾಸ್ ಧ್ವನಿ ಮರೆಯಲಾಗದಂತೆ ಅಚ್ಚಾಗಿರುವ "ಭಾದ್ರಪದ ಶುಕ್ಲದಾ ಚೌತಿಯಂದು ಚಂದಿರನ ನೋಡಿದರೆ ಅಪವಾದ ತಪ್ಪದು" ದಲ್ಲಿ ಹೀಗೇನೂ direct ಅಥವ indirectಇನ ಕಂಡೀಶನ್ನು mention ಮಾಡಿದ ಹಾಗಿಲ್ಲ.
if(direct view) { no apavaada; } else { definitely apavaada; } ನೋ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
ನಮ್ಮ ನಂಬಿಕೆಗಳು ಏನಾದರೂ ಇರಲಿ , ಅಮ್ಮನ ಮನಸ್ಸಿಗೆ ನೋವಾಗಬಾರದೆಂಬ ಮನಸ್ಸು ಇದೆಯಲ್ಲ ಅದೇ ಸರಿಯಾದ ರೀತಿ , ನಾನು ಹೀಗೆಯೇ ಎಂಬ ಅಹಮ್ಮಿಗಿಂತ ನಮ್ಮತನವನ್ನು ಉಳಿಸಿಕೊಂಡೂ ಇನ್ನೊಂದು ಮನಸ್ಸಿಗೆ ನೋವಾಗದಂತೆ ವರ್ತಿಸುವ ರೀತಿಯೇ ಪ್ರೀತಿಯ ರೀತಿ .
ಉ: ಚಂದಿರನ ನೋಡಿದವ
ನಾಡಿಗರ ಲೇಖನ ಹಾಗೂ ಸೂಮಾಸೇಖರ ಅವರ ಪ್ರತಿಕ್ರಿಯೆ ಮೆಚ್ಚುಗೆಯಾಯಿತು.
>ಮೇಲೆ ಬಂದು ಏನೋ ನೆನಪಾಗಿ ಮತ್ತೆ ಓಡಿ ಹೋಗಿ ಅಮ್ಮನಿಗೆ ಕಥೆ ಓದುವೆ ಎಂದು ತಿಳಿಸಿ ಬಂದು ಅಮ್ಮನಿಗೆ ಕಾಣುವಂತೆ ಒಮ್ಮೆ ಕಥೆ ಓದಿ ಮುಗಿಸಿದೆ.
ಯಾಕೋ ಗೋತೀಲ್ಲ ... ಮೇಲಿನ ವಾಕ್ಯವನ್ನು ಮತ್ತೆ ಮತ್ತೆ ಮೆಲುಕು ಹಾಕಿದೆ...
ಧನ್ಯವಾದ,
ರಘು
ಉ: ಚಂದಿರನ ನೋಡಿದವ
ವಂದನೆ, ಸೋಮಶೇಖರಯ್ಯರವರಿಗೆ ಹಾಗೂ ರಘು, ನಿಮಗೆ.
ರಘು, ನೀವು ಕಳುಹಿಸಿರುವ ಹಲವು ಇ-ಮೇಯ್ಲುಗಳು ಇನ್ನೂ ಓದಲಾಗಿಲ್ಲ. ಓದಿ ಉತ್ತರ ಕಳುಹಿಸುವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
ಚಿಕ್ಕವನಾಗಿದ್ದಾಗ ಮನೇಲಿ ಚಂದ್ರನನ್ನ ನೋಡಬೇಡ ಅಂತ ಇದ್ರು.... ನೋಡ್ದೆ ಇರಕ್ಕೆ ಪ್ರಯತ್ನ ಮಾಡ್ತಾ ಇರ್ತ ಇದ್ದೆ... ಆದ್ರೆ ಹಾಳಾದ್ದು ಪ್ರತಿ ವರ್ಷನೂ ನನ್ನ ಕಣ್ಣಿಗೆ ಬೀಳ್ತಾ ಇದ್ದ ಆ ಚಂದ್ರ! ...ಆದ್ರೆ ನನಗೆ ಯಾವ ವರ್ಷನೂ ಪಾಪ ಪ್ರಜ್ಞೆ ಕಾಡಲಿಲ್ಲ... ಅದೇನೋ ನಮ್ಮಜ್ಜನ ಜೊತೆ ಕಳೀತ ಕಳೀತಾ 'ಶಿವ ಭಕ್ತರು ಇಂತ ಸಣ್ಣ ಪುಟ್ಟ ನಮ್ಬಿಕೆಗಳೆನ್ನೆಲ್ಲ ಮೀರಿದವರು .. ಅಬ್ರಿಗೆ ಏನೂ ಆಗಲ್ಲ' ಅನ್ನೋ ನಂಬಿಕೆ ಆಗ ಇತ್ತು!
ನಂತರ ಎಂದೂ ಚಂದ್ರನ ಬಗ್ಗೆ ಗಮನ ಕೊಡದಿದ್ದವನು ಅಂದು ಮಾತ್ರ ಅವನನ್ನು ಹುಡುಕಿ ನೋಡ್ತಾ ಇದ್ದೆ. ಅದೇನೋ ಒಂತರ ಹೆಮ್ಮೆ ಆವಾಗ!
ಈಗ ಆ ಕಾನ್ಸೆಪ್ಟು ಲೆಕ್ಕಕ್ಕೆ ಇಲ್ಲ. ನಾನು ಆ ನಮ್ಬಿಕೆನ ಇಗ್ನೋರ್ ಮಾಡ್ತೀನಿ. ನೋಡಕ್ಕೂ ಟ್ರೈ ಮಾಡಲ್ಲ .. ನೋಡದೆ ಇರಕ್ಕೋ ಟ್ರೈ ಮಾಡಲ್ಲ.
ಸವಿತೃ
ಉ: ಚಂದಿರನ ನೋಡಿದವ
ಆಸ್ಟ್ರಾನಮಿ ಬಗ್ಗೆ ಆಸಕ್ತಿ ಇಟ್ಟುಕೊಂಡಿರುವ ನಮ್ಮ ಹುಡುಗರು ನಿನ್ನೆ ಟೆಲಿಸ್ಕೋಪು ಹಿಡಿದು ನೋಡಿದರಂತೆ. ಈಗಷ್ಟೆ ಸುದ್ದಿ ಬಂತು.
ಒಂದು ಕಾಂಟೆಸ್ಟ್ ಇಟ್ಟು ನೋಡಬೇಕು - ಗಣಪತಿ ಹಬ್ಬದ ದಿನ ತೆಗೆದ ಚಂದ್ರನ ಫೋಟೋ ಎಂಬುದಾಗಿ. ಆಗ ಈ ನಂಬಿಕೆ ಜನರಲ್ಲಿ ಎಷ್ಟು ಧೃಡ ಎಂಬುದು ತಿಳಿದುಬರುವುದು.
ನೀವು ಹೇಳಿದ ಹಾಗೆ ಶಿವಭಕ್ತರು ಭೀತಿಯಿಲ್ಲದೆ ಭಾಗವಹಿಸಿಯಾರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಚಂದಿರನ ನೋಡಿದವ
ಮಾಡಿ ಮೇಲೆ ಹೋಗೋಣಾಪ್ಪ, ಅಜ್ಜಿ ಮಂಚದ ಕೆಳಗೆ ಮೂರು ಕಳ್ಳರು ಆ ನಕ್ಷತ್ರಾನ ನೋಡೋಣ ಅಂತನ್ನೋದು ನನ್ನ ಮಗಳ ವರಸೆ. ಊಟವಾದ ಮೇಲೆ ನನಗೂ ಅದೇ ಬೇಕಾಗಿರೋದು. ಈಗೀಗ ಯಾವ ವಿಮಾನವೂ ಇತ್ತ ಸುಳಿಯುತ್ತಿಲ್ಲ. ಎಲ್ಲಾ ದೇವನಹಳ್ಳಿಯಿಂದಾಚೇನೆ. ಅಮ್ಮ ನೀರುಣಿಸುವ ನೂರಾರು ಕುಂಡಗಳಲ್ಲಿ ತರಹೇವಾರಿ ಸಸಿಗಳು. ಮಗಳು ಬ್ರಹ್ಮಕಮಲದ ಮೊಗ್ಗುಗಳನ್ನೆಣಿಸುತ್ತಾಳೆ. ಕಳೆದ ಸಾರಿ ಹದಿನೆಂಟು ಅರಳಿದ್ವು ಆಗ ನೀನು ಇರ್ಲಿಲ್ಲಾಪ್ಪ, ಈಗ ನೋಡು ಹದಿಮೂರು ಮೊಗ್ಗು ಇವೆ, ಇನ್ನು ನಾಲ್ಕು ದಿನಕ್ಕೆ ಅರಳ್ತವೆ ಅನ್ತಾಳೆ, ಚಂದ್ರ ನಗ್ತಾನೆ ಇರ್ತಾನೆ ಮತ್ತು ನಕ್ಷತ್ರಗಳು ಕಣ್ಣು ಮಿಟುಕಿಸುತ್ತವೆ, ಅದೇನೋ ಪೀಬಿ ಶ್ರೀನಿವಾಸರು ಹಾಡೋ ಹಾಡು ಚೌತಿಯ ಚಂದ್ರ ಅಂತ, ಅದನ್ನು ಕೇಳಿದಾಗಷ್ಟೇ ಕುತೂಹಲ, ಆದರೆ ಏನಾದ್ರಾಗಲೀ ಈ ಸಾರಿ ಗಣಪತಿ ಹಬ್ಬದಂದು ಚಂದ್ರನ್ನ ನೋಡೋದೇ ಸರಿ ಅಂದ್ಕೊಳ್ಳೋದು, ಆಮೇಲೆ ಮರ್ತುಬಿಡೋದು, ಅದಾಗಿ ಮಾರನೇ ದಿನವೇ ಯಾರಾದ್ರೂ ಆ ಬಗ್ಗೆ ಮಾತಾಡಿದ್ದನ್ನು ಕೇಳಿಸಿಕೊಂಡಾಗ, ಹೌದಲ್ವೇ ನಾನು ನೋಡಿದೆನಲ್ಲ ಅಂತ ನೆನಪಿಸಿಕೊಂಡು ನನಗೆ ನಾನೇ ಹೆಮ್ಮೆ ಪಡೋದು.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಚಂದಿರನ ನೋಡಿದವ
>>>ಅಜ್ಜಿ ಮಂಚದ ಕೆಳಗೆ ಮೂರು ಕಳ್ಳರು ಆ ನಕ್ಷತ್ರಾನ ನೋಡೋಣ ಅಂತನ್ನೋದು ನನ್ನ ಮಗಳ ವರಸೆ.
ಮರಿಜೋಸೆಫರೆ,
ಇದು ಯಾವನಕ್ಷತ್ರದ ಬಗ್ಗೆ ಹೇಳ್ತಾ ಇದೀರಾ ಅಂತ ಹೊತ್ತಾ? ನಾನು ಇದನ್ನ ಯಾವತ್ತೂ ಕೇಳಿರ್ಲಿಲ್ಲ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಚಂದಿರನ ನೋಡಿದವ
ಮೃಗಶಿರಾ ನಕ್ಷತ್ರ ಪುಂಜ ಅನ್ಸತ್ತೆ......
ಮೂರು ಒಟ್ಟಿಗೆ ಇರತ್ತಲ್ಲ ಒಂದೇ ಲೈನ್ ನಲ್ಲಿ...
ಅದನ್ನ ಮೂರು ಕಳ್ಳರು ಅಂತಾ ಇರಬಹುದು ಜೋಸೆಫರು...
ನನಗೆ ಅನ್ನಿಸೋ ಪ್ರಕಾರ...ಈ ಚೌತಿ ಚಂದ್ರನ್ನ ಎಲ್ಲ ನೋಡಲಿ ಅಂತಾನೆ ಈ ಕಥೆ ಬರೆದಿದ್ದರೆ ಅನ್ಸತ್ತೆ...
ವರ್ಷ ಪೂರ್ತಿ ಚಂದ್ರನ ಬಗ್ಗೆ ಮಾತಾಡದೆ ಇರೋವ್ರು , ಇವತ್ತು ಮಾತಾಡ್ತಾರೆ, ಇಣುಕಿ ಇಣುಕಿ /ಕದ್ದು ಮುಚ್ಚಿ ನೋಡ್ತಾರೆ...ಆಲ್ವಾ?
--ಶ್ರೀ
ಉ: ಚಂದಿರನ ನೋಡಿದವ
ಹೂಂ ಅದೇ ಸ್ವಾಮಿ, ಮಹಾವ್ಯಾಧ ಅನ್ತಾರಲ್ಲ ಅದೇನೇಯ, ಇಂಗಲೀಸನಾಗೆ orion ಅನ್ತ.
ಇನ್ನು ಚಂದ್ರ ನಮ್ಮನೇಲೇ ಇದೆ ಸ್ವಾಮಿ, ಕದ್ದು ಮುಚ್ಚಿ ನೋಡಬೇಕಾದ್ದೇನಿಲ್ಲ ನನಗೆ.
ಒರಿಸ್ಸಾದಲ್ಲಿ ಕಳೆದ ದಿನಗಳಲ್ಲಿ ನಕ್ಷತ್ರವೀಕ್ಷಣೆ ಚಟ ಅಂಟಿಕೊಂಡಿತು. ಅದಕ್ಕಾಗೇ ಕೆಲ ಪುಸ್ತಕಗಳನ್ನೂ ನಕ್ಷೆಗಳನ್ನೂ ಖರೀದಿಸಿದ್ದೆ. ಅದನ್ನೇ ಮಗಳಿಗೆ ವಿವರಿಸ್ತೇನೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಚಂದಿರನ ನೋಡಿದವ
ಒಂದು ಹೊಸ ಹೆಸರು ತಿಳಿಸಿಕೊಟ್ಟಿರಿ.
ಒರೈಯನ್ - ವ್ಯಾಧ ಅಥವಾ ಮಹಾವ್ಯಾಧ ; ನೀವು ಹೇಳುವ ಒಂದೇ ಸಾಲಿನ ಮೂರು ನಕ್ಷತ್ರಗಳು ಅವನ ಸೊಂಟದ ಪಟ್ಟಿ.
ಅಂದಹಾಗೆ ಶ್ರೀನಿವಾಸ್, ಮೃಗಶಿರಸ್ ಅನ್ನುವುದು ವ್ಯಾದ್ಜನ ಸೊಂಟದ ಪಟ್ಟಿಯ ನಕ್ಷತ್ರಗಳಲ್ಲ. ಬದಲಿಗೆ ಅವನ ತಲೆಯ ಹತ್ತಿರ ಬರುವ ತ್ರಿಕೋನಾಕಾರದಲ್ಲಿರುವ ಮೂರು ನಕ್ಷತ್ರಗಳು.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಚಂದಿರನ ನೋಡಿದವ
ವ್ಯಾಧ (ಬೇಟೆಗಾರ), ಅವನ ಸೊಂಟದ ಪಟ್ಟಿ ಇವೆಲ್ಲ ಪಶ್ಚಿಮದ ಅನುಕರಣೆ. ನಮ್ಮ ಜನಪದರ ಬಾಯಲ್ಲಿ ಅದು ಅಜ್ಜಿಮಂಚ ಮತ್ತು ಮೂರು ಕಳ್ಳರು. ಆ ಮಂಚ ಸಂಪೂರ್ಣ ಆಯುತಾಕಾರವಿಲ್ಲ, ಹುರಿ ಬಿಗಿದು ಕಟ್ಟಿದ್ದಲ್ಲವೇ, ಅದಕ್ಕೆ.
ಹಂಸಾನಂದಿಗಳೇ ನಿಮಗೆ ಹೆಚ್ಚು ಹೇಳಬೇಕಿಲ್ಲ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಚಂದಿರನ ನೋಡಿದವ
ಮರಿಜೋಸೆಫರೆ,
ಹೀಗೇ ಇನ್ಯಾವುದಾರೂ ರಾಶಿಯ ಬಗ್ಗೆ ತಿಳಿಸಿಕೊಡ್ರೀ. ಅಜ್ಜಿ ಮಂಚ ಮತ್ತು ಮೂರು ಕಳ್ಳರ ವಿಷ ಕೇಳಿ ಖುಷಿಯಾಯ್ತು.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/