ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಏನೀ ಮಹಾನಂದವೇ? ಓ ಭಾಮಿನಿ!
ಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?
ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.
ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ.
ಆರೋಹಣ: ಸ ಗ೨ ಮ೧ ದ೧ ನಿ೨ ಸ
ಅವರೋಹಣ: ಸ ನಿ೨ ದ೧ ಮ೧ ಗ೨ ಸ
ಹಿಂದೂಸ್ತಾನಿಯಲ್ಲಾದರೆ, ಗಾಂಧಾರ, ಧೈವತ, ನಿಷಾದಗಳನ್ನು ಕೋಮಲವೆಂದೂ, ಮಧ್ಯಮವನ್ನು ಶುದ್ಧವೆಂದೂ ಕರೆಯುತ್ತಾರೆ. ಹಿಂದೂಸ್ತಾನಿಯ ಮಾಲಕೌಂಸ್ ರಾಗವೂ, ಕರ್ನಾಟಕ ಸಂಗೀತದ ಹಿಂದೋಳವೂ ಒಂದೇ ನಾಣ್ಯದ ಎರಡು ಮುಖಗಳು ಎನ್ನಬಹುದು. ಅಲ್ಲದೇ, ಆರೋಹಣ ಅವರೋಹಣಗಳನ್ನು ನೀರವಾಗಿ ಸೂಚಿಸಿದ್ದರೂ, ಸ-ಮ, ಗ-ದ, ಮ-ನಿ, ದ-ಸ ಮೊದಲಾದ ವರ್ಜ್ಯ ಪ್ರಯೋಗಗಳು ಈ ರಾಗಕ್ಕೊಂದು ಹೊಳಹನ್ನು ತಂದು ಕೊಡುತ್ತವೆ.
ಚಿತ್ರಗೀತೆಗಳಷ್ಟೇ ಅಲ್ಲ. ಸುಗಮಸಂಗೀತದಲ್ಲೂ ಈ ರಾಗ ಪ್ರಚಲಿತವೇ. ಡಿವಿಜಿ ಅವರ ಪ್ರಸಿದ್ಧ ಅಂತಃಪುರಗೀ ಏನೀ ಮಹಾನಂದವೇ? ಓ ಭಾಮಿನೀ ಎಂಬ ಈ ಹಾಡನ್ನು ಯಾರು ತಾನೇ ಕೇಳಿಲ್ಲ? ಕೇಳಿಲ್ಲದಿದ್ದರೆ, ಕೊಂಡಿ ಚಿಟುಕಿಸಿ, ಕೇಳಿ! ಹಿಂದೋಳಕ್ಕೊಂದೊಳ್ಳೆ ಉದಾಹರಣೆ ಇದು.
ಇನ್ನು ಶಾಸ್ತ್ರೀಯ ಸಂಗೀತಕ್ಕೆ ಬಂದರೆ, ಹಿಂದೋಳ ವಿಸ್ತರಿಸಿ ಹಾಡಬಲ್ಲಂತಹ ಒಂದು ರಾಗ.ಹಿಂದೋಳ ರಾಗದಲ್ಲಿ ರಚನೆಗಳಿಗೆ ಯಾವ ಕೊರತೆಯೂ ಇಲ್ಲ. ಕೆಲವು ಉದಾಹರಣೆಗಳನ್ನಷ್ಟೇ ಇಲ್ಲಿ ಕೊಡುವೆ.
೧೯೮೦ರ ದಶಕದಲ್ಲಿ, ಶಂಕರಾಭರಣಂ ಎಂಬ ತೆಲುಗು ಚಿತ್ರದ ದೆಸೆಯಿಂದ ಎಲ್ಲರ ಬಾಯಲ್ಲಿಯೂ ಸಾಮಜವರಗಮನ ಎಂಬ ಹಾಡು ನಲಿದಾಡಿತ್ತು. ಇದು ತ್ಯಾಗರಾಜರು ಹಿಂದೋಳದಲ್ಲಿ ಮಾಡಿರುವ ಒಂದು ರಚನೆ. ಇದನ್ನು ಇಲ್ಲಿ ಡಾ|ನಾಗವಲ್ಲಿ ನಾಗರಾಜ್ ಮತ್ತು ವಿದುಷಿ ರಂಜನಿ ನಾಗರಾಜ್ ಅವರ ಜೋಡಿಗಾಯನದಲ್ಲಿ ಇಲ್ಲಿ ಕೇಳಿ.
ಈ ಮೇಲಿನ ರಚನೆಯನ್ನು ಹಾಡಿರುವುದರಲ್ಲಿರುವ ಒಂದು ವಿಶೇಷದ ಬಗ್ಗೆ ಕೇಳುಗರ ಗಮನ ಸೆಳೆಯಬಯಸುತ್ತೇನೆ. ಅನುಪಲ್ಲವಿಯಲ್ಲಿ ಬರುವ 'ಸಾಮನಿಗಮಜಸುಧಾ' ಎಂಬ ಸಾಲಿನಲ್ಲಿ ಬರುವ ಸಾಮನಿಗಮ ಎಂಬ ಸಾಹಿತ್ಯಕ್ಕೆ ಬರುವ ಸ್ವರಗಳೂ ಕೂಡ ಸಾಮನಿಗಮ ಎಂದೇ. ಇಂದಹದ್ದಕ್ಕೆ ಸ್ವರಾಕ್ಷರ ಸಾಹಿತ್ಯವೆಂಬ ಪಾರಿಭಾಷಿಕ ಹೆಸರಿದೆ.
ಇನ್ನೇನು ದಸರಾ ಹಬ್ಬ ಬಂತಲ್ಲ? ದಸರೆಗೂ ಮೈಸೂರಿಗೂ ಬಿಡದ ನಂಟು. ಅದಕ್ಕೇ ಈ ಮುಂದಿನ ರಚನೆಯನ್ನು ಕೇಳಿಸಲು ನಾನು ಆಯ್ದುಕೊಂಡೆ. ಕೇಳಿ - ಮೇಲಿನ ಗಾಯಕಿಯರದ್ದೇ ಸ್ವರದಲ್ಲಿ ಜಯಚಾಮರಾಜೇಂದ್ರ ಒಡೆಯರ ರಚನೆ- ಚಿಂತಯಾಮಿ ಜಗದಂಬಾ.
ಇನ್ನು ದಾಸರ ರಚನೆಗಳಿಗೆ ಬಂದರೆ, ಹಲವಾರು ರಚನೆಗಳನ್ನು ಹಿಂದೋಳದಲ್ಲಿ ಹಾಡುವುದು ರೂಢಿಯಾಗಿದೆ. ಹೆಚ್ಚಿನ ದಾಸರ ರಚನೆಗಳ ಮೂಲ ಮಟ್ಟುಗಳು ಮರೆತಿರುವುದೂ, ಮತ್ತೆ ಹಿಂದೋಳ ರಾಗ ಜನರನ್ನು ರಂಜಿಸುವುದೂ ಇದಕ್ಕೆ ಕಾರಣವಿರಬಹುದು.ವಿದ್ಯಾಭೂಷಣರು ಹಾಡಿ ಪ್ರಸಿದ್ಧಗೊಳಿಸಿದ 'ಮಧುಕರ ವೃತ್ತಿ ಎನ್ನದು' ಎಂಬ ರಚನೆ ಹಿಂದೋಳರಾಗದಲ್ಲೇ ಇದೆ. ಹಾಗೇ, ಪುರಂದರ ದಾಸರ 'ಯಾರೇ ರಂಗನ, ಯಾರೇ ಕೃಷ್ಣನ' ಎಂಬ ರಚನೆಯನ್ನೂ ಕೂಡ ಹಿಂದೋಳದಲ್ಲಿ ಹಾಡುವುದೇ ರೂಢಿ. ಅದನ್ನು ಇಲ್ಲಿ ಕೀಬೋರ್ಡ್ ಸತ್ಯ ಅವರ, ಮತ್ತಿನ್ಯಾವ, ಕೀಬೋರ್ಡ್
ವಾದನದಲ್ಲಿ ಕೇಳಿ!
ಭಾರತೀಯ ಸಂಗೀತದ ವಿಶೇಷವೆಂದರೆ, ರಾಗಗಳನ್ನು ಬೆಳೆಸುವ ರೀತಿ. ಇದಕ್ಕೆ ರಾಗಾಲಾಪನೆ ಎಂದು ಹೆಸರು. ಈಗ ಇಲ್ಲಿ ನೋಡಿ: ಹಿಂದೋಳ ರಾಗದ ಆಲಾಪನೆಯ ಒಂದು ಚುಟುಕು. ಹಾಡಿರುವುದು ಶ್ರೀ ಟಿ.ಎನ್.ಶೇಷಗೋಪಾಲನ್.
ತಾನ ಎನ್ನುವುದು ಕರ್ನಾಟಕ ಸಂಗೀತದ ಒಂದು ವಿಶಿಷ್ಟ ಪರಂಪರೆ. ರಾಗವನ್ನು, ಲಯಬದ್ಧವಾಗಿ, ತಾನಂತಾನಂ (ಅಥವಾ ಅನಂತಾನಂತ) ಎಂಬ ಶಬ್ದಗಳಲ್ಲಿ ವಿಸ್ತರಿಸುವುದರಿಂದ, ಇದಕ್ಕೆ ತಾನ ಎಂಬ ಹೆಸರು ಬಂದಿದೆ. ಅದರಲ್ಲಿಯೂ, ವೀಣೆಯಲ್ಲಿ ಕೇಳುವ ತಾನದ ಸೊಗಸೇ ಸೊಗಸು. ಇಲ್ಲಿ ಕೇಳಿ; ಡಿ.ಶ್ರೀನಿವಾಸ್ ನುಡಿಸುವ ಹಿಂದೋಳರಾಗದ ತಾನ.
ಎಷ್ಟೋ ಬಾರಿ ಸಂಗೀತ ಕಚೇರಿಯನ್ನು ಒಂದು ತಿಲ್ಲಾನದೊಂದಿಗೆ ಮುಗಿಸುವುದುಂಟು. ಹಾಗಾಗಿ, ಇವತ್ತು ಈ ಬರಹವನ್ನು, ಬಾಲಮುರಳಿಕೃಷ್ಣ ಅವರ ಹಾಡಿರುವ, ಅವರೇ ರಚಿಸಿರುವ, ಹಿಂದೋಳ ರಾಗದ ತಿಲ್ಲಾನದೊಂದಿಗೆ ಮುಗಿಸುತ್ತಿದ್ದೇನೆ.
ಕೇಳಿ ಆನಂದಿಸಿದ್ದೀರಿ ಎಂದುಕೊಳ್ಳುವೆ!
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 336 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಏನೀ ಮಹಾನಂದವೇ? ಓ ಭಾಮಿನಿ!
ಪ್ರಿಯ ಹಂಸಾನಂದಿಯವರೆ,
ಹಿಂದೋಳ ರಾಗದ ವಿವರಣೆ ಮತ್ತು ಕೇಳಿಸಿದ ಸಂಗೀತ ಎಲ್ಲಾ ಮನಕ್ಕೆ ಮುದ ನೀಡಿವೆ. ಧನ್ಯವಾದಗಳು
ಶೈಲಾಸ್ವಾಮಿ
ಉ: ಏನೀ ಮಹಾನಂದವೇ? ಓ ಭಾಮಿನಿ!
ಹಂಸಾನಂದಿಯವರೆ,
ರಸದೌತಣ!! ನವರಾತ್ರಿಗೆ ಮೊದಲೇ ಹಾಡಿನ ಹಬ್ಬ ಮಾಡಿಸಿದಿರಿ. ಈ ಬಾರಿಯ ನವರಾತ್ರಿಗೆ ಮತ್ತೆ ಏನು ವಿಶೇಷ ಪ್ರಸ್ತುತ ಮಾಡಲಿದ್ದೀರ? ನಾವೆಲ್ಲ ಆತುರದಿಂದ ಕಾಯುತ್ತಿರುವೆವು.
ಧನ್ಯವಾದಗಳು
ಶಾಮಲ
ಉ: ಏನೀ ಮಹಾನಂದವೇ? ಓ ಭಾಮಿನಿ!
ಹಂಸಾನಂದಿಯವರೇ,
ಹಿಂದೋಳ ರಾಗದ ವಿವರಣೆ ಅದ್ಭುತವಾಗಿದೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಏನೀ ಮಹಾನಂದವೇ? ಓ ಭಾಮಿನಿ!
ಹಂಸಾನಂದಿಯವರೇ, ನಿಮ್ಮ ಸಂಗೀತ ಪ್ರೀತಿಗೆ ಒಂದು ಹ್ಯಾಟ್ಸ್ ಅಪ್
ಉ: ಏನೀ ಮಹಾನಂದವೇ? ಓ ಭಾಮಿನಿ!
ಶೈಲಾಸ್ವಾಮಿ ಮತ್ತು ಅನಿಲ್ ಅವರೆ,
ನಿಮಗೆ ಹಿಡಿಸಿದ್ದು ನನಗೆ ಸಂತೋಷ ತಂದಿತು.
ಶಾಮಲಾ ಅವರೆ,
ಆಗ್ತಾ ಇದೆ
ನಿಮ್ಮ ನಿರೀಕ್ಷೆ ನೋಡಿ ಒಂದು ಕಡೆ ಸಂತೋಷ, ಇನ್ನೊಂದು ಕಡೆ ದಿಗಿಲು
ಶ್ರೀದೇವಿ ಆವರೆ,
ಸಂಗೀತಗಾರ್ತಿಯೊಬ್ಬರಿಂದ ಬಂದ ಇಂತಹ ಪ್ರತಿಕ್ರಿಯೆಗೆ ನನ್ನ ಕಡೆಯಿಂದ ಭಾರೀ ಮನ್ನಣೆಯಿದೆ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಏನೀ ಮಹಾನಂದವೇ? ಓ ಭಾಮಿನಿ!
ಅದ್ಭುತವಾಗಿದೆ ನಿಮ್ಮ ಬರಹ, ಹಂಸಾನಂದಿಗಳೆ! ಒಂದು ಕುತೂಹಲದ ಪ್ರಶ್ನೆ. ನೀವು ಸಂಗೀತದ ಬಗ್ಗೆ ಇಷ್ಟೊಂದು "theory" ವಿಷಯ ಹೇಗೆ ತಿಳಿದುಕೊಂಡಿರಿ? ಈ ತರಹದ ವಿಷಯವಿರುವ ಪುಸ್ತಕಗಳೇನಾದರೂ ಇದೆಯೋ ಅಥವ ಇವು ಸಂಗೀತ ಗುರುವಿನಿಂದ ಮಾತ್ರ ಕಲಿಯಲ್ಪಡುತ್ತವೋ? ದಯವಿಟ್ಟು ತಿಳಿಸಿ.
~ಕಲ್ಪನ
ಉ: ಏನೀ ಮಹಾನಂದವೇ? ಓ ಭಾಮಿನಿ!
ಕಲ್ಪನಾ ಅವರೆ,
ಮೆಚ್ಚಿಗೆಗೆ ಧನ್ಯವಾದಗಳು.”ಕೆಲವಂ ಬಲ್ಲವರಿಂ ಕಲ್ತು, ಹಲವಂ ಹೊತ್ತಗೆಯಿಂ ಅರಿತು" ಎನ್ನುವಂತೆ, ಕೆಲವನ್ನು ಗುರುಗಳಿಂದಲೂ, ಇನ್ನೂ ಎಷ್ಟೋ ವಿಷಯಗಳನ್ನು ಪುಸ್ತಕಗಳಿಂದಲೂ, ಮತ್ತೆ ಇನ್ನಷ್ಟನ್ನು ಸಂಗೀತ ಸಂಬಂಧಿ ಸಮುದಾಯಗಳಿಂದಲೂ ಕಲಿತಿದ್ದೇನೆ ಎನ್ನಬಹುದು
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಏನೀ ಮಹಾನಂದವೇ? ಓ ಭಾಮಿನಿ!
ಹಂಸಾನಂದಿಯವರೆ,
ಇಷ್ಟೊಂದು ಹಾಡುಗಳು,ನಾಳೆ ಕೇಳೋಣ ಅಂತಿದ್ದೆ.
ಈ ತಾಯಿ,ಮಗಳು(?) ಸಾಮಜವರಗಮನ ಹೇಗೆ ಹಾಡಿದ್ದಾರೆ ಎಂದು ಕೇಳಿ,ಉಳಿದದ್ದು ನಾಳೆ..
ಅಲ್ಲಿಂದ ಚಿಂತಯಾಮಿ ಜಗದಾಂಬಾ ಸೆಳೆಯಿತು..ನಂತರ ಕೀ ಬೋರ್ಡ್..
ಸರ್. ನನ್ನಂತಹ ದಡ್ಡನನ್ನೂ ಸಂಗೀತದೆಡೆಗೆ ಸೆಳೆಯುವ ಕಲೆ ನಿಮಗೆ ಚೆನ್ನಾಗಿ ಗೊತ್ತಿದೆ.
ನಿಜಕ್ಕೂ ಮಹಾನಂದವಾಯಿತು.
ನೀನು ನೀನೆ ಅಲ್ಲಿ ನಾನು ನಾನೆ ಹಾಡು- ರವಿಚಂದ್ರನ್ (ಮತ್ತು ತಮಿಳಿನ ತಾಯ್‌ನಾಗೇಶ್-ಹಾಡಿಗೆ ಅಭಿನಯಿಸಿದ್ದು) ಅಭಿನಯಿಸಿದ ಗಡಿಬಿಡಿ ಗಂಡ ಚಿತ್ರದ್ದು.
-ಗಣೇಶ.
ಉ: ಏನೀ ಮಹಾನಂದವೇ? ಓ ಭಾಮಿನಿ!
ಗಣೇಶರೆ,
ನೀನು-ನೀನೆ ಹಾಡು ಯಾವ ಚಿತ್ರ ಅಂತ ತಿಳಿಸಿದ್ದಕ್ಕೆ ಧನ್ಯವಾದಗಳು.
ನೀವಂದುಕೊಂಡಂತೆ ಅಲ್ಲಿ ಹಾಡುತ್ತಿರುವವರು ತಾಯಿ-ಮಗಳೇ. ಬೆಂಗಳೂರಿನವರೇ ಆದ ಡಾ.ನಾಗವಲ್ಲಿ ನಾಗರಾಜ್ ಮತ್ತು ಅವರ ಮಗಳು ರಂಜನಿ ನಾಗರಾಜ್.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಏನೀ ಮಹಾನಂದವೇ? ಓ ಭಾಮಿನಿ!
ಒಳ್ಳೆಯ ಬರಹ, ಬುಕ್ಮಾರ್ಕ್ ಮಾಡಿಟ್ಟುಕೊಂಡಿರುತ್ತೇನೆ. ಈ ರಾಗ, ಆಲಾಪನೆ, ತಿಲ್ಲಾನ ಇವುಗಳ ಬಗ್ಗೆ ಮತ್ತಷ್ಟು ಹೆಚ್ಚು ತಿಳಿದಾಗ ಹಿಂದಿರುತ್ತೇನೆ