ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಸೀತೆಯ, ಭೂಮಿಜಾತೆಯ
ಮೊನ್ನೆ ತಾನೇ ಅನಿವಾಸಿ ಅವರು ದಾಸರ ಪದದಲ್ಲಿ ಹೆಣ್ಣಿನ ಚಿತ್ರಣ ಸರಿಯಾಗಿಲ್ಲ ಅನ್ನುವ ಬರಹವೊಂದನ್ನು ಹಾಕಿದ್ದರು. ಅದನ್ನು ಓದುತ್ತಾ ನನಗೂ ಸ್ವಲ್ಪ ಯೋಚನೆ ಹತ್ತಿತು. ಒಂದು ವಿಧದಲ್ಲಿ ನೋಡಿದರೆ, ಹಿಂದಿನ ಕಾವ್ಯನಾಟಕಗಳಲ್ಲಿ ಹೆಚ್ಚು ನಾಯಕ ಪಾತ್ರ ಪ್ರಧಾನವೇ. ಮೂಲದ ವ್ಯಾಸ ಭಾರತದಲ್ಲಿ ಹೇಗೋ ಗೊತ್ತಿಲ್ಲ, ಆದರೆ ಕುಮಾರವ್ಯಾಸನ ಕನ್ನಡ ಭಾರತದಲ್ಲಂತೂ ಅಂತಹ ಮುಖ್ಯವಾದ ದ್ರೌಪದಿಯ ಪಾತ್ರಕ್ಕೇ ಹೆಚ್ಚಿ ನ್ಯಾಯ ದೊರೆತಿಲ್ಲ ಎಂದು ನನ್ನ ಅಭಿಪ್ರಾಯ. ಸೀತೆ ದ್ರೌಪದಿಯರಂತಹ ಪಾತ್ರಗಳು ದು:ಖವನ್ನು ಅನುಭವಿಸಲೇ ಹುಟ್ಟಿದ ಹಾಗೆ ಕಾಣುತ್ತವೆ. ಈ ಇಬ್ಬರಿಗೂ ಉದ್ದನೆ ಕೂದಲಿತ್ತೆಂಬ ನಂಬಿಕೆ ಇರುವುದರಿಂದ, ಜಡೆಗೆ ಕತ್ತರಿ ಹಾಕದ ಹಿಂದಿನ ಕಾಲದವರು ಹೆಣ್ಣುಮಕ್ಕಳಿಗೆ ಉದ್ದ ಕೂದಲಿದ್ದರೆ ಸೀತೆಯಂತೆ, ದ್ರೌಪದಿಯಂತೆ ಕಷ್ಟ ಅನುಭವಿಸುವಳೋ ಎಂದು ಯೋಚನೆ ಮಾಡುತ್ತಿದ್ದರು.
ಅದಿರಲಿ. ಮೊನ್ನೆ ಸೀತೆಯ ಮೇಲೆ ವಿಜಯದಾಸರು ಬರೆದ ಒಂದು ರಚನೆಯನ್ನು ಮೊದಲಬಾರಿಗೆ ಕೇಳಿದೆ. ಹೆಚ್ಚಾಗಿ ಹರಿದಾಸರು ವಿಠಲನ ಮೇಲೆ, ಇಲ್ಲದಿದ್ದರೆ ರಾಮ ಕೃಷ್ಣನ ಮೇಲೆ ಬರೆದವರು. ಸೀತೆಯನ್ನು ಕೇಂದ್ರವಾಗಿಟ್ಟುಕೊಳ್ಳುವಂತಹ ಹಾಡುಗಳು ಕಡಿಮೆಯೇ. ಸರಳವಾಗಿದ್ದೂ ಸುಂದರವಾದ ಈ ಹಾಡು ನನಗೆ ಬಹಳ ಹಿಡಿಸಿತು. ಅದಕ್ಕೇ ಇಲ್ಲಿ ಬರೆಯುತ್ತಿದ್ದೇನೆ.
ಸೀತೆಯ ಭೂಮಿ ಜಾತೆಯ
ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ||
ಕ್ಷೀರವಾರಿಧಿಯ ಕುಮಾರಿಯ ತನ್ನ
ಸೇರಿದವರ ಭಯಹಾರೆಯ
ತೋರುವಳು ಮುಕ್ತಿದಾರಿಯ
ಸರ್ವಸಾರ ಸುಂದರ ಶ್ರೀ ನಾರಿಯ ||ಸೀತೆಯ||
ವಿಜಯ ವಿಠಲನ ರಾಣಿಯ
ಪಂಕಜ ಮಾಲೆ ಪಿಡಿದ ಪಾಣಿಯ
ವಿಜಯಲಕ್ಷ್ಮಿ ಗಜಗಮನೆಯ
ಸುಜನ ವಂದಿತೆ ಅಳಿವೇಣಿಯ ||ಸೀತೆಯ||
ಈ ಹಾಡಿನಲ್ಲೂ ಕೂಡ ಸೀತೆಯ ದುಂಬಿಗಳಂತೆ ಕಪ್ಪಾದ ಜಡೆಯುಳ್ಳವಳು (ಅಳಿವೇಣಿ) ಎಂದು ವಿಜಯದಾಸರು ಹೇಳುತ್ತಿರುವುದನ್ನು ಗಮನಿಸಬಹುದು. ಮತ್ತೆ ಎಲ್ಲೂ ರಾಮನ ಹೆಸರನ್ನೇ ತರದೇ, ಸೀತೆಯನ್ನು ಹೊಗಳಿರುವುದೂ ಒಂದು ಹೊಸತೇ ಎಂದು ನನ್ನ ಎಣಿಕೆ.
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 479 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸೀತೆಯ, ಭೂಮಿಜಾತೆಯ
ಹಂಸಾನಂದಿಗಳೇ,
ತುಂಬಾ ಚನ್ನಾಗಿದೆ. ವಿಶಾಲವಾಗಿದೆ ನಿಮ್ಮ ಸಂಗ್ರಹ.
ವಿಜಯವಿಠಲನಾಗಿ ಬಂದಿದ್ದಾನಷ್ಟೆ
ಅನಿಲ
ಉ: ಸೀತೆಯ, ಭೂಮಿಜಾತೆಯ
ತುಂಬಾ ಅಪರೂಪದ ಕೃತಿ. ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.
ನನ್ನದೊಂದು ವಿನಂತಿ: ದಾಸರ ಪದಗಳಲ್ಲಿ, ಕೃತಿಗಳಲ್ಲಿ, ಮಹಾ ಕಾವ್ಯಗಳಲ್ಲಿ ನಾವು ಪಕ್ಷಪಾತದ ದೃಷ್ಟಿಯಿಂದ ನೋಡದೆ (ಲಿಂಗ, ಜಾತಿ, ದೇವರು ಇತ್ಯಾದಿ) ಅವುಗಳಲ್ಲಿರುವ ಸಾರಸರ್ವಸ್ವವನ್ನು ಆಸ್ವಾಧಿಸುವುದು ಆನಂದದಾಯಕ ಹಾಗು ಜ್ಞಾನವರ್ಧಕ ಎಂಬುದು ನನ್ನ ಭಾವನೆ.
ಎ.ವಿ. ನಾಗರಾಜು
ಉ: ಸೀತೆಯ, ಭೂಮಿಜಾತೆಯ
ಶ್ರೀಯುತ ಹಂಸಾನಂದಿಯವರೆ, ವಿಜಯ ದಾಸರ ರಚನೆ ನೋಡಿ ತುಂಬಾ ಖುಶಿಯಾಯ್ತು. ಅನಿಲ್ ಜೋಶಿಯವರು ಹೇಳಿದಂತೆ ವಿಜಯವಿಠಲನ ರಾಣಿ ಸೀತೆಯಾದರೆ ರಾಮ ವಿಜಯ ವಿಠಲನೇ ಇರಬಹುದೇನೋ
ಇರಲಿ ಬಿಡಿ.ಸೀತೆಯೊಂದಿಗೆ ರಾಮನಿದ್ದರೆ ಒಳಿತೆ ತಾನೆ. ಇರಲಿ, ನಾನು ಈಹಾಡು ಕೇಳಬೇಕಲ್ಲ. ಅದಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವೇ?
ನಿಮ್ಮ ಈ ಕೊಡುಗೆಗೆ ಧನ್ಯವಾದಗಳು,
ಶೈಲಾಸ್ವಾಮಿ
ಉ: ಸೀತೆಯ, ಭೂಮಿಜಾತೆಯ
ಚೆನ್ನಾಗಿದೆ
ಉ: ಸೀತೆಯ, ಭೂಮಿಜಾತೆಯ
"ಅಳಿವೇಣಿಯ" - ಅದ್ಭುತವಾಗಿದೆ.
ನನಗೂ ಇದು ಮೊದಲನೇ ಬಾರಿಗೆ ಕೇಳುತ್ತಿರುವ ಸೀತೆಯೇ ಪ್ರಧಾನವಾಗಿರುವ ದಾಸರ ಪದ. ವಿಜಯ ವಿಠಲ ಅನ್ನೋದು ಕೂಡ ವಿಜಯ ದಾಸರದ್ದು ಅನ್ನೋದಕ್ಕೆ ಬಂದಿದೆ ಅನ್ನಿಸುತ್ತಿದೆ.
ಕೊಸರು:
ಇದನ್ನು ನಾಯಕೀ ರಾಗಕ್ಕೆ ಅಳವಡಿಸಬೇಕು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಸೀತೆಯ, ಭೂಮಿಜಾತೆಯ
ವಿಜಯ ವಿಠಲ ಅನ್ನೋದು ವಿಜಯದಾಸರ ಅಂಕಿತವೂ ಹೌದು, ಹಾಗೂ ರಾಮನೇ ವಿಜಯ ವಿಠಲ ಅನ್ನುವ ಅನ್ವರ್ಥವೂ ಹೌದು.
ಶ್ರೀನಿಧಿ ಅವರೆ, ನಿಮ್ಮ ’ನಾಯಕಿ’ ರಾಗದ ಸಲಹೆ ಚೆನ್ನಾಗಿದೆ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಸೀತೆಯ, ಭೂಮಿಜಾತೆಯ
ಏನದು ’ನಾಯಕಿ’ ರಾಗ? ಏನು ವಿಶೇಷ ಅದರದು?
ಉ: ಸೀತೆಯ, ಭೂಮಿಜಾತೆಯ
ಚೆನ್ನಾಗಿದೆ.
ಭಾಗ್ಯದಾಲಕ್ಷ್ಮೀ ಬಾರಮ್ಮಾ.. ಹಾಡಿನಲ್ಲೂ ಕೊನೆಗೆ ’ವಿಠಲನ ರಾಣಿ’ ಎಂದಿದ್ದಾರೆ. ಲಕ್ಷ್ಮಿ/ಸೀತೆ ಸ್ವರೂಪಗಳನ್ನು ಹಾಡುವಾಗ ನಾರಾಯಣಸ್ವರೂಪ ಜೊತೆಯಲ್ಲಿಯೇ ಚಿಂತನೆ ಮಾಡಿದರೆ ಸಿದ್ಧಿ ಹೆಚ್ಚು ಎಂಬುದು ಪಂಡಿತರ ಆಂಬೋಣ.
ಉ: ಸೀತೆಯ, ಭೂಮಿಜಾತೆಯ
ಹಂಸಾನಂದಿ, ಈ ಗೀತೆ ನನ್ನನ್ನು ಎರಡು ರೀತಿಯಲ್ಲಿ ಆಕರ್ಷಿಸುತ್ತಿದೆ. ಇದರಲ್ಲಿ ಎರಡನೆಯದರ ಬಗ್ಗೆ ಸಂಪದದಿಗರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಂಬಲ ನನ್ನಲ್ಲಿದೆ.
೧. ಅಳಿವೇಣಿ ಪ್ರಯೋಗ - ಇದರ ಬಗ್ಗೆ ಶ್ರೀನಿಧಿಯೂ ಮಾತನಾಡಿದ್ದಾನೆ. ಇದರ ಬಗ್ಗೆ ಹೆಚ್ಚು ಬೇಡ.
೨. ಈ ಹಾಡನ್ನು ವಿಜಯದಾಸರು ಬರೆದಿದ್ದರೂ, ಹೆಂಗಳೆಯರು ಹಾಡುತ್ತಿದ್ದರೆ ? ಎಂಬುದೇ ದೊಡ್ಡ ಪ್ರಶ್ನೆ. ಈ ಹಾಡನ್ನು, ಒಬ್ಬರು ಗಂಡಸರು, ಹೆಂಗಳೆಯರ ಮುಂದೆ ಹಾಡುವ ಧಾಟಿಯಲ್ಲಿಯೇ ಇದೆ. (ಬೇರೆಯವರಿಗೆ ಬೇರೆ ರೀತಿ ಅನ್ನಿಸಬಹುದು). ಆದರೆ ನೋಡಿ. ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಮುಂದೆ ಸೀತೆಯನ್ನು ಕುರಿತು ಹಾಡುವುದನ್ನು ಊಹಿಸಿಕೊಳ್ಳುವುದು ಕಷ್ಟ. ಹಾಗಾಗಿ, ಈ ಹಾಡು ಮೇಲುನೋಟಕ್ಕೆ ಸೀತೆಯನ್ನು ಹೊಗಳುವಂತೆ ಕಂಡರೂ, ತಮ್ಮ ತಮ್ಮ ಹೆಂಡತಿಯರು ಸೀತೆಯಂತೆ ಪತಿವ್ರತೆಯಾಗಿರಬೇಕೆಂದು ಹಂಬಲಿಸುವ ಗಂಡಂದಿರ ಹಾಡೇ ಯಾಕಾಗಿರಬಾರದು. ನನ್ನಲ್ಲಿ ಈ ಕೆಟ್ಟ (ದೂರ್ತ ಎನ್ನಬಹುದಾದರೆ) ಕುತೂಹಲ ಏಕೆಂದರೆ.
೨.೧ "ಅಹಲ್ಯಾ, ದ್ರೌಪದಿ, ಸೀತಾ..." ಶ್ಲೋಕವನ್ನು ಹೆಂಗಸರಿಗಿಂತ ಹೆಚ್ಚಾಗಿ ಗಂಡಸರೇ ಹೇಳಿಕೊಳ್ಳುವುದನ್ನು ನೋಡಿದ್ದೇನೆ.
೨.೨ ಹೆಂಗಳೆಯರು ಸೀತೆಯನ್ನು ಅಷ್ಟಾಗಿ ನೆನೆಯುವುದಿಲ್ಲ. ಬದಲಾಗಿ ದ್ರೌಪದಿಯನ್ನು ನೆನೆಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ದ್ರೌಪದಿಯಲ್ಲಿದ್ದ ಧೈರ್ಯ ಮತ್ತು ಕೆಚ್ಚು.
೨.೩ ಹೆಂಗಸರಲ್ಲಿ "ನಾವು ಸೀತೆಯಂತೆ ಅಬಲೆಯರಾಗಬಾರದು, ನಾವು ದ್ರೌಪದಿಯಂತೆ ಸಿಡಿದೇಳಬೇಕು ಎಂಬ ಸುಪ್ತಪ್ರಜ್ಞೆ ಇರುತ್ತದೆ" ಎಂಬುದು ನನ್ನ ಅನಿಸಿಕೆ.
೨.೪ ತಂದೆ, ತಾಯಿಗಳು ತಮ್ಮ ಮಗಳು ಸೀತೆಯಂತೆ ಪರದೇಸಿಯಾಗಬಾರದು ಎಂದು ಸದಾಕಾಲ ಹಂಬಲಿಸುತ್ತಿರುತ್ತಾರೆ.
೨.೫ ಈ ಕಡೆಯ ಮಾತು ತೀರಾ ಹಗುರವಾದದ್ದು ಎನಿಸಬಹುದು. ಇದು ನಿಜ ಎಂಬ ಭ್ರಮೆ ನನ್ನಲ್ಲಿ ಸ್ವಲ್ಪವೂ ಇಲ್ಲ. ತಪ್ಪಿದ್ದರೆ ತಿದ್ದಿ. "ಸೀತೆಯಲ್ಲಿ ಮೇಲುನೋಟಕ್ಕೆ ಕಾಣುವುದು, ಪಾತಿವ್ರತ್ಯವೊಂದೇ. ಆದರೆ ದ್ರೌಪದಿಯಲ್ಲಿ ಪಾತಿವ್ರತ್ಯ, ಕೆಚ್ಚು, ಧೈರ್ಯ, ದಿಟ್ಟತನ ಎಲ್ಲವೂ ಸಿಗುತ್ತದೆ".
ಇಲ್ಲಿ ನಾನು ಏನೇ ಹೇಳಿದರೂ, ಈ ಗೀತೆಯ ಬಗ್ಗೆ ಹೆಂಗಸರು ಏನು ಹೇಳುತ್ತಾರೋ, ಅದಕ್ಕೇ ತೂಕ. ಗಂಡಸರು ಈ ಗೀತೆಯನ್ನು ಎಷ್ಟೇ ವಿಶ್ಲೇಷಿಸಿದರೂ, ಅದು ಅಪೂರ್ಣವೇ.