ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಅವರವರ ಭಾವಕ್ಕೆ ಅವರವರ ಭಕ್ತಿಗೆ ಎನ್ನುವುದು ಹಳೆಯ ಮಾತಾಯಿತು. ಈಗ ಏನಿದ್ದರೂ, ಹಳೆಯದನ್ನು ಮರೆತು ಕನ್ನಡಕ್ಕೆ ಏನು ಬೇಕು ಎನ್ನುವುದನ್ನು ನೋಡುವ ಸಮಯ. ಕ್ಷಮಿಸಿ. ಸಮಯ ಎಂಬುದು ಸಂಸ್ಕೃತ ಪದ! ಇದಂತೂ ಉಪಯೋಗಿಸಲೇಬಾರದಲ್ಲ! ಸರಿ. ಹಾಗಾದರೆ ಹೀಗೆ ಹೇಳಲೇ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಕಾಲ. ಅಯ್ಯೋ! ಇದೂ ಉಪಯೋಗಿಸಬಾರದ ಪದ. ಮತ್ತಿನ್ನೇನು ಹೇಳಲಿ? ಇದು ಕನ್ನಡಕ್ಕೆ ಏನುಬೇಕು ಎಂಬುದನ್ನು ನೋಡುವ ಟೈಮು. ಈಗ ಸರಿಯಾಯಿತು. ಎಷ್ಟೇ ಎಂದರೂ ಕನ್ನಡಕ್ಕೆ ಪ್ರಪಂಚದಲ್ಲೆಲ್ಲ ಸುತ್ತಾಡುವ ಇಂಗ್ಲಿಷ್ ಭಾಷೆಯನ್ನು ಬೆರೆಸಿದರೆ ಸರಿಹೋಗಬಲ್ಲುದೇ ಹೊರತು, ನಮ್ಮ ನಾಡಿನದ್ದೇ, ನಮ್ಮ ಜೊತೆಗೇ ನಡೆದು ಬಂದಿರುವ, ನಮ್ಮ ಬರವಣಿಗೆಗೆ ತನ್ನ ಸ್ವಲ್ಪ ಕಾಣಿಕೆಯನ್ನು ಕೊಟ್ಟಿರುವ (ಹೆಸರು ಹೇಳಬಾರದ) ಸತ್ತ ಭಾಷೆ ಸರಿಯಾದೀತೇ ? ಅಪರಾಧ ಅಪರಾಧ - ಮನ್ನಿಸಿ ಮನ್ನಿಸಿ - ತಪ್ಪು ತಪ್ಪು. ನನ್ನ ಹಳೆ ಒಡನಾಡಿತನದಿಂದ ಬರಬಾರದ ಮಾತು ಹೊರಬರುತ್ತಿದೆ.
ಈಗ ಮೊದಲು ಬೇಕಾದ್ದು ನಮ್ಮ ನುಡಿದ ಸುಧಾರಣೆ. ಅದಕ್ಕಾಗಿ ನಾವು ಮೊದಲಿಗೆ ಹಕಾರವನ್ನು ಹೊರಗೆಸೆಯೋಣ. ಪಕ್ಕದ ಮನೆಯ ದ್ರಾವಿಡರಿಗೆ ಬೇಕಾಗದ ಈ ಹಕಾರ ನಮಗೇಕೆ? ನಾನು ಏನು ಏಳಲು ಬಯಸಿದ್ದೇನೆ ಎಂದು ತಿಳಿಯಿತು ಎಂದು ಭಾವಿಸಿರುವೆ. ಗೊತ್ತಾಗದಿದ್ದರೂ ಪರವಾಗಿಲ್ಲ. ಆಡು ಅಳೆಯದಾದರೇನು? ಭಾವ ನವನವೀನ. ಇಷ್ಟವಾಗಲಿಲ್ಲವಾದರೆ, ಪಾಡು ಪಳೆಯದಾದರೇನು? ಭಾವನವನವೀನ ಎನ್ನಿ. ಆಡ್ತಾ ಆಡ್ತಾ ರಾಗ ನರಳ್ತಾ ನರಳ್ತಾ ರೋಗ ಅಂತ ಗಾದೇನೇ ಇಲ್ಲವಾ? ಗಾದೆ ಅಂದಾಗ ನೆನಪಿಗೆ ಬಂದಾಗ ಒಳೀತು ನೋಡಿ ಇನ್ನೊಂದು ಗಾದೆ. ಅನುಮಂತನೇ ಅಗ್ಗ ತಿನ್ನೋವಾಗ ಪೂಜಾರಿ ಶಾವಿಗೆ ಬೇಡಿದನಂತೆ. ಇಂತ ಯಾರೋ ಕೆಲಸಕ್ಕೆ ಬಾರದ ಪೂಜಾರಿಗಳು ಮಂತ್ರ ಏಳಕ್ಕೆ ಬೆಳೆಸಿರೋ ಬೇರೆ ಭಾಷೆಯ ಮಆ ಪ್ರಾಣಗಳು, ಶಕಾರಗಳು ನಮಗ್ಯಾಕೆ ಅಂತೀರಾ? ನಾವೇನು ವಸಂತಸೇನೆ ನಾಟಕ ಮಾಡಬೇಕಾ? ಸರಿ ಮತ್ತೆ. ಮನಸ್ಸು ಅಗುರ ಆಗಬೇಕಾದ್ರೆ, ಮೊದಲು ಬೇಡದೇ ಇರೋ ಬಾರನ ಕೈ ಬಿಡಬೇಕು. ಅಲ್ಲವೇ? ಬಾರ್ ಸೋಪ್ ಅಲ್ಲ ಸ್ವಾಮೀ, ಬಾರ ಬಾರ. ನಾನು ಏಳ್ತಾ ಇರೋದು ಗೊತ್ತಾಗಿದೆ ಅಂದ್ಕೋತೀನಿ. ಕರೆ ಏಳ್ಬೇಕು ಅಂದರೆ, ಈಗ ಮಾತಾಡ್ತಿರೋ ಆಗೆ, ನನ್ನ ಅಳೆ ರೂಂ ಮೇಟ್ ಒಬ್ಬ ನೆನೆಪಿಗೆ ಬಂದ. ಅರ್ಸಕುಮಾರ ಅಂತ ಅವನ ಎಸರು. ನಮ್ಮೂರು ಆಸನ. ಆಗಾಗಿ ನಮ್ಮಲ್ಲಿ ಎಚ್ಚು ಕನ್ನಡನೇ ನಡೀತಿತ್ತು.ನನಗೋ ಮರಾಟಿ, ಇಂದಿ,ತಮಿಳು ಈ ಬಾಸೆಗಳೆಲ್ಲ ಬಾರವು. ಅವನಾದರೋ, ಕಾಸ್ಮೋಪಾಲಿಟನ್ ಸಿಟಿ ಬೆಂಗಳೂರಿನವನು. ಅವನಿಗೂ ನನಗೂ ಈ ವಿಸಯಕ್ಕೇ ಸಾವಿರಸಲ ಗರ್ಸಣೆ ಆಗಿತ್ತು. ಸುದ್ದ ಕನ್ನಡ ಮಾತಾಡು ಅಂತ ನಾನು. ಬರಿಮಾತಿಗೇನು, ಅರ್ತ ತಿಳಿದರಾಯಿತು ಅಂತ ಅವನು. ಅದಕ್ಕೇ ಅವನು ತಮಿಳರು ಸಿಕ್ಕರೆ ತಮಿಳಲ್ಲಿ, ತೆಲುಗರು ಸಿಕ್ಕರೆ ತೆಲುಗಲ್ಲಿ ಮಾತಾಡ್ತಿದ್ದ. ಅವರಿಗೂ ಕನ್ನಡ ಬರುತ್ತಲ್ಲೋ ಅಂದರೆ, ನಾವು ಪರಬಾಸೆಯವರ ಜೊತೆ ಕನ್ನಡದಲ್ಲಿ ಮಾತಾಡಿದರೆ, ನಾವು ಕನ್ನಡದವರಾಗಕ್ಕೇ ನಾಲಾಯಕ್ಕು, ಅಸ್ಟಕ್ಕೂ ಅವರಿಗೇನು ಸುದ್ದವಾಗಿ ಕನ್ನಡ ಬರಲ್ಲ ಅಂತ ವಿಪರೀತ ವಾದ ಮಾಡ್ತಿದ್ದ. ನಾನು ಸುದ್ದವೋ ಗಿದ್ದವೋ, ಅರ್ದಂಬರ್ದ ಮಾತಾಡ್ತಾರಲ್ಲ, ಅಸ್ಟು ಸಾಕಲ್ಲ ಎಂದ್ರೆ ಅವನು ಕೇಳ್ತಾನಾ? ಈಗೆ ಅವನ ಜೊತೆ ಮಾತಾಡಿದ್ರೇ ಒಂದು ಪಜೀತಿಗೆ ತಂದು ಇಟ್ಟುಬಿಡ್ತಾನಲ್ಲ ಅಂತ, ನಾನೂ ವಾದ ಮಾಡೋದು ಬಿಟ್ಟೆ ಅನ್ನಿ.
ಇಂಗೇ ಬಾಸೆನ ಸುಲಬ ಮಾಡಕ್ಕೆ ಎಸ್ಟೋ ಲೇಕಕರು ಪುಸ್ತಕಗಳನ್ನೇ ಬರೆದಿದಾರಂತೆ. ನಾನು ಓದಿಲ್ಲ. ಒಂದು ದಿನ ಲೈಬ್ರರಿಗೆ ಓಗಿ ನೋಡಬೇಕು. ಯಾವುದಾದರೂ ಸಿಕ್ಕತ್ತೋ ಅಂತ. ಈಗ ನೋಡಿ, ಐ ಔ ಅನ್ನೋದೇ ನಮ್ಮ ಬಾಸೆಯಲ್ಲಿಲ್ಲದ ಸಬ್ದ. ಅದನ್ನ ಅಯ್ ಅವ್ ಅಂತ ಬರೆದರೇ ಚಂದ ಅಂತ ನನ್ನ ಗೆಳೆಯರು ಒಬ್ಬರು ಸ್ವಲುಪ ದಿನದ ಇಂದೆ ಏಳಿಕೊಟ್ಟರು. ಇರಲಿ; ಒಂದು ಅಯ್ದು ಆರು ಸಲ ನಮ್ಮೂರಿನ್ಸ್ ಲಯ್‍ಬ್ರರಿಗೆ ಪೋನ್ ಮಾಡಿ ಕೇಳ್ದೆ. ಅವ್ರೋ ಎದ್ರಿಗೆ ಬಂದರೆ ನೋಡಿ ಏಳಬಉದು. ಪೋನಲ್ಲಿ ಅದೆಲ್ಲ ಡಿಟಯ್ಲ್ಸ್ ಎಲ್ಲ ಏಳಕ್ಕಾಗಲ್ಲ ಅಂದರು. ಅವ್‍ದು. ಅವರಾದ್ರೂ ನನ್ನ ತರದವರು ಪೋನ್ ಮಾಡ್ತಾ ಇದ್ದರೆ ಎಸ್ಟು ಜನಕ್ಕೆ ಏಳಕ್ಕಾಗತ್ತೇ? ಬೆಳಗ್ಗೆ ಕೆಲಸ ಅಚ್ಕೊಂಡು ಕೂತರೆ ಸಂಜೆ ಏಳೋ ತನಕ ಅವರಿಗೆ ಇಂತ ಎಸ್ಟು ಜನ ಪೋನ್ ಮಾಡ್ತಾರೋ? ಅದೆಲ್ಲ ನೋಡಿ ಏಳತಾ ಓದರೆ, ಸಂಜೆ ಕೆಲಸ್ ಮುಗಿಸಿ ಏಳೋ ಒತ್ತಿಗೆ ಅವರು ಬಾಯಿ ನೋವು ಬಂದು ಏನಾದ್ರೂ ಅವ್‍ಸದ ಕುಡೀಬೇಕಾಗುತ್ತೆ ಅಸ್ಟೇ.
ನನ್ನ ಕೆಲವು ತಮಿಳು ಗೆಳೆಯರು ಎಸ್ಟೋ ಸಲ ಏಳಿದಾರೆ. ಅವರ ಬಾಸೆಲಿ ಒತ್ತಕ್ಸರನೇ ಇಲ್ಲ. ಅದಕ್ಕೆ ಅದು ಓದೋದು ಬಅಳ ಸುಲಬ ಅಂತ. ಇಂದೇ ಎಸ್ಟೋ ದೊಡ್ಡವರೆಲ್ಲ ಈ ಮಾತನ್ನ ಏಳಿದಾರೆ. ನಾವು ಕೇಳಿಲ್ಲ ಅಸ್‍ಟೇ. ಇನ್‍ನು ಮೇಲಾದರೂ ಕೇಳಿದರೆ ಒಳ್‍ಳೇದಲ್‍ಲವೇ? ಯಾವುದಕ್‍ಕೂ ಒಂದು ದಿನ ಸುರು ಅಚ್‍ಕೊಳ್‍ಳಲೇ ಬೇಕಲ್‍ಲ? ಇಂದಿನ ದಿನವೇ ಸುಬದಿನವು ಇಂದಿನ ವಾರ ಸುಬವಾರ ಇಂದಿನ ಯೋಗ ಸುಬ ಯೋಗ ಇಂದಿನ ಕರಣ ಸುಬಕರಣ ಅಂತ ಪುರಂದರ ದಾಸರಂತಆ ದಾಸರೇ ಏಳಿರೋವಾಗ ಪ್‍ರಯತ್‍ನ ಮಾಡದೇ ಇರೋದು ನ್ನ್‍ನ ತಪ್‍ಪ್ಪೇ ಒರತು ಮತ್‍ತೇನೂ ಅಲ್‍ಲ ಅನ್ನ್‍ನೋದು ಇವತ್‍ತು ಮನವರಿಕೆ ಆಗಿ, ಆ ದಾರಿಯಲ್‍ಲಿ ಮೊದಲ ಎಜ್‍ಜೆ ಆಕ್‍ತಾ ಇದೀನಿ. ಎಸ್ಟು ದೂರ ಓಗ್‍ತೀನೋ ಅರಿಯೆ. ನಾ ಏಳಿದ್‍ರಲ್‍ಲಿ ತಪ್‍ಪಿದ್‍ರೆ ಒಟ್‍ಟೆಗೆ ಆಕಿಕೊಂಡು ನಿಮ್‍ಮ ಮನೆಯಂಗಳದ ಕೂಸು ನಾನು ಅಂದುಕೊಳ್‍ತೀರಾ ಅಂತ ನನ್‍ನ ಬಾವನೆ.
ಸ್‍ನೇಅದಲ್‍ಲಿ ನಿಮ್‍ಮ
ಅಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 935 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಸಮಯ=ಕಾಲ=ಹೊತ್ತು
Re:ಕನ್ನಡ ಸುಲಭ ಮಾಡಬೇಕೇ?
ಮಹಾಪ್ರಾಣ,ಒತ್ತಕ್ಷರ ತೆಗೆದು ಕನ್ನಡ ಸುಲಭಗೊಳಿಸಬಹುದೆಂಬ ಭ್ರಮೆ ದೂರವಾಗಿಸುತ್ತದೆ ಈ ನಿಮ್ಮ ಬರಹ. ವರ್ಷದ ಹಿಂದೆ ಇಂಗ್ಲಿಷ್‍ನಲ್ಲಿ ಸ್ಪೆಲಿಂಗ್ ಹೇಗೆ ಬರೆದರೂ ಅಂಕ ಕೊಡಬೇಕೆಂಬ ವಾದ ಬಂದಾಗ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದ ಲೇಖನವನ್ನು ನೆನಪಿಸಿತು.
Re:ಕನ್ನಡ ಸುಲಭ ಮಾಡಬೇಕೇ?
"ವೇಳೆ".. ಇದು ಸಂಸ್ಕೃತವೇ?
ವೇಳೆ
ವೇಳೆ ಸಕ್ಕದವೋ, ಕನ್ನಡವೋ... ( ನನಗೆ ತಿಳಿದಂತೆ ಇದು ದ್ರಾವಿಡ ಒರೆ )
ನಮ್ಮ ಕಡೆ, 'ವೇಳೆ'ಯ ಬಳಕೆ ಬಹಳ ಕಡಮೆ.
ನಾವೇನಿದ್ದರು
"ಹೊತ್ತಾಯ್ತು ಮನೆಗೆ ವೋಗೂಮ"
"ಸರ್ ವೊತ್ತಲ್ಲಿ ಏನ್ ಮಾತು"
"ಹೊತ್ತು ನೋಡು ಏಟಾಯ್ತು!"
"ಹೊತ್ತಾರೆ ಬರೀನ್ ಏಳ್ ಬೇಕು"
"ಹೊತ್ವೊತ್ಗೆ ಊಟ ತಿಂಡಿ ಸರಿಯಾಗ್ ಮಾಡಕ್ಕೆ ಏನ್ ದಾಡಿ!"
"ಕಂಡ್ ಕಂಡ್ ವೊತ್ತಲ್ಲಿ, ತಿನ್ನಾದೆ ಕೇಮೆ ನಿಂಗೆ :)"
ಹಿಂಗೆ "ಹೊತ್ತು" ಇದನ್ನೇ ಹೆಚ್ಚು ಬಳಸೋದು. ಈಗೀಗ "ಟೇಮು" ಮಂದಿ ಬಾಯಿಗೆ ಬಂದೈತೆ.
ಈ "ಹೊತ್ತು" ಅದ್ಯಾವ ಹೊತ್ತಿಂದ ನಮ್ ಮಂದಿ ಬಾಯಾಗೆ ಐತೋ ಆ ಗರಳಪ್ಪಂಗೇ ಗೊತ್ತು !
===========================================
Re: ವೇಳೆ
ಸುಮ್ಮನೆ ಕೇಳಿದೆ. "ವೇಳೆ" ಅನ್ನೋದು ಕನ್ನಡ ಪದ ವಾದರೆ.. ತುಂಬಾ ಚೆನ್ನ ಅಲ್ಲವೇ?
ನಾವೂ ಕೂಡ "ಹೊತ್ತು" ಹೆಚ್ಚು ಬಳಸ್ತೆವಿ..
ನಾವು ಚಿಕ್ಕವರಿರುವಾಗ.. ಶಾಲೆ ಬಿಟ್ಟಮೇಲೆ.. "ಸಾಲಿ ಬಿಟ್ಟು ಸರವೊತ್ತಾಯ್ತು.. ಮಂಗ್ಯಾ ಬಂದು ಬಾಳೊತ್ತಾಯ್ತು" ಅಂತ ಹಾಡ್ಕೊಂಡು ಮನೆಗೆ ಬರ್ತಿದ್ವಿ.. ಇದರ ಅರ್ಥ "ಸಾಲಿ ಬಿಟ್ಟು ತುಂಬಾ ಹೊತ್ತು ಆದ ಮೇಲೆ.. ಮಾಸ್ತರ ಸಾಲಿಗೆ ಬಂದ ಅಂತ" .. ಆದರೆ... ಅದರ ಅರ್ಥ ಗೊತ್ತಿಲ್ಲದೇ.. ಹಾಡ್ತಿದ್ವಿ.. ಅಷ್ಟೆ..
Re: ವೇಳೆ
ನೋಡಿ Khavi!
ನಂನಂತ 'ಅ'ಳ್ಳಿಮುಕ್ಕಂಗೂ, ನಿಮಗೂ ಗೊತ್ತಿರೋ ಈ ಪಡ್ಡೇ-ತದ್ದು "ಹೊತ್ತು", ನಮ್ ದೊಡ್ಡಬುದ್ದಿ "ಅಂಸಾನಂದಿ"ಯವರ್ಗೆ ಬರೆಯೊವಾಗ ವೊಳೀದೇ ವೋಯ್ತು.
ಪಾಪ! ಅವರು ಕನ್ನಡದಾಗೆ ಸಮಯ/ಕಾಲ/ಟೈಮು ಅನ್ನಕ್ಕೆ ಒರೆ ಹುಡುಕಿ ಹುಡುಕಿ ಏಟ್ ದಣಿದ್ರೋ, ಆ 'ಮದ್ದೂರು ನರಸಿಂಮ ಸಾಮಿ'ಗೇ ಗೊತ್ತು!
ಅಂಸಾನಂದಿ ಅವರೇ, ನಾನ್ ನಿಮ್ನ ಆಡ್ಕತಿಲ್ಲ ಬುದ್ದಿ, ನೀವ್ ಪಟ್ಟ ಪಾಡ್ ಕಂಡು ನನ್ನ ಅಳಲು!
ನಮ್ಮ "ಪೊತ್ತು" ಇಂಗೆ ನಮ್ ಬಾಯಲ್ಲಿ ನಲಿತಾ ಇರ್ಲಿ, ಅಲ್ವರಾ!
======================================
ಉ: Re:ಕನ್ನಡ ಸುಲಭ ಮಾಡಬೇಕೇ?
ಹೌದು ವೇಲಾ=ಅಲೆಯ ಚಲನೆ. ಸಮುದ್ರದ ಅಲೆಯ ಚಲನೆಯಂತೆ ಸಮಯ ಕೂಡ ಚಲನಶೀಲವಾದ್ದಱಿಂದ ಅಥವಾ ಸಮುದ್ರದ ಅಲೆಯ ಚಲನೆಯನ್ನೇ ಕಾಲವನ್ನು ಅಳೆಯಲು ಉಪಯೋಗಿಸಿದ್ದರೇನೋ ಹಿಂದಿನ ಜನರು. ಹಾಗಾಗಿ ವೇಳೆ=ಸಮಯ(ಕಾಲ)
Re:ಕನ್ನಡ ಸುಲಭ ಮಾಡಬೇಕೇ?
'ತಮಿಳು ತಲೆಗಳ ನಡುವೆ' ಪುಸ್ತಕದಲ್ಲಿ ಕನ್ನಡದ ಅಕ್ಷರಮಾಲೆಯನ್ನು ಸರಳಗೊಳಿಸಲು ಮಹಾಪ್ರಾಣ, ಒತ್ತಕ್ಷರ, ಅನುಸ್ವಾರ, ವಿಸರ್ಗಗಳನ್ನು ಕೈಬಿಡಬೇಕೆಂಬ ಪ್ರಸ್ತಾಪದ ಬಗ್ಗೆ ಬರೆದಿದ್ದಾರೆ. ಈ ಪ್ರಸ್ತಾಪವನ್ನು ಮುಂದಿಟ್ಟಿದ್ದವರು ಯಾರು ಗೊತ್ತಾ? ನೀವೇ ಸಮಯ ಸಿಕ್ಕಾಗ ಓದಿ ನೋಡಿ!
'ಶ್' ಮತ್ತು 'ಷ್' ಇವುಗಳಲ್ಲಿ ಶ್ ಅನ್ನು ಬಹುಪಾಲು ಜನ ತಾಲವ್ಯವಾಗಿ (ಪಲೇಟಲ್) ಉಚ್ಚರಿಸುವುದಿಲ್ಲ. ಎರಡನ್ನೂ ಮೂರ್ಧನ್ಯವಾಗಿಯೇ (ಸೆರೆಬ್ರಲ್) ಅಂದರೆ 'ಷ್' ತರಹವೇ ಉಚ್ಚರಿಸುತ್ತೇವೆ. ಲಿಪಿಯಲ್ಲಿ ಕಾಣಬರುವ ಭೇದ ಉಚ್ಚಾರಣೆಯಲ್ಲಿ ತೋರುವುದಿಲ್ಲ.
ಇತ್ತೀಚೆಗೆ ಕನ್ನಡ 'ಋ'ಣಮುಕ್ತವಾಗಿದೆ ಎಂದು ಕೇಳಿದೆ. ಹೌದೆ?
ಪ್ರಭು ಮೂರ್ತಿ
ಶಂಕರಬಟ್ಟರ ಹೊತ್ತಗೆಗಳು!
Prabhu Murthy
ನಿಮಗೆ ಈ ಸಂಗತಿಯಲ್ಲಿ ಆಸಕ್ತಿ ಇದ್ರೆ,
ಶಂಕರ ಬಟ್ಟರ
"ಕನ್ನಡ ಬರಹವನ್ನು ಸರಿಪಡಿಸೋಣ"( ಬಹಳ ಚೆನ್ನಾಗಿದೆ )
"ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ"
.. ಮುಂತಾದವನ್ನು
ಓದಬಹುದು.
ನಾನು ಶಂಕರಬಟ್ಟರ ಹೊತ್ತಗೆಯಿಂದ ಕೆಲವು ಸಂಗತಿಗಳು ಹೆಕ್ಕಿ ಬರೆದಿರುವ ಈ "ಬ್ಗಾಗು" ನೋಡಬಹುದು.
ನನ್ನಿ!
======================================
Re: ಶಂಕರಬಟ್ಟರ ಹೊತ್ತಗೆಗಳು!
ಒಳ್ಳೇ ಕೆಲಸ ಮಾಡಿದ್ದಾರೆ ಶಂಕರ್ ಭಟ್ರು. ಕನ್ನಡಕ್ಕೆ ತನ್ನದೇ ವ್ಯಾಕರಣ ಬೇಕು ಮತ್ತದನ್ನ ಬರ್ದ ಮೇಲೆ ಬಹುಮುಖ್ಯವಾಗಿ ಬಳಕೇಗೆ ತರ್ಬೇಕು.
Re: ಶಂಕರಬಟ್ಟರ ಹೊತ್ತಗೆಗಳು!
ಹವುದು ಬುದ್ದಿ. ತಂದೇ ತರೂಮ..
ನೀವು ನಾವು ಎಲ್ರು ಸೇರ್‌ಕೊಂಡು ತರೂಮ...
ಮೊದಲು ಅವರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಮತ್ತೆ " ಕನ್ನಡ ಬರಹವನ್ನು ಸರಿಪಡಿಸೋಣ" ನಾವೆಲ್ಲ ಓದಲೇ ಬೇಕು.
ನಿಮಗೂ ಇದರಾಗೆ ಹುರುಪೈತೆ ಅಂತ ಆಯ್ತು..
ಆ ಬೆಟ್ಟದ ಬಯ್ರವೇಸ್ವರ ನಿಮಗೆ, ನಮಗೆ, ನಮ್ ಕಂನಡಕ್ಕೆ ಒಳ್ಳೇದು ಮಾಡ್ಲಿ.
ನಂನಿ!
======================================
Re:ಕನ್ನಡ ಸುಲಭ ಮಾಡಬೇಕೇ?
ಪ್ರಭು ಅವರೆ,
ತಮಿಳು ತಲೆಗಳ ನಡುವೆ - ಕೆಲವು ವರ್ಷಗಳ ಹಿಂದೆ ಓದಿದ್ದೆ. ಬಿ ಎಂ ಶ್ರೀ ಅಲ್ಲವೇ ಈ ಮಹಾಪ್ರಾಣ ವಿಸರ್ಗಗಳನ್ನು ತೆಗೆಯುವ ಸಲಹೆ ಮಾಡಿದ್ದು?
ಶ ಸುಮಾರಾಗಿ ಇದ್ದಿದ್ದರಲ್ಲಿ ತಾಲವ್ಯವಾಗಿ ತೆಲುಗಿನಲ್ಲಿ ಬಳಕೆಯಾಗುತ್ತದೆ ( ಕೆಲವೆಡೆ ಅವರು ದಂತವ್ಯವಾಗಿ ಅದನ್ನು ಸ ಮಾಡಿಯೂ ಬಿಡುತ್ತಾರೆ).
-ಹಂಸಾನಂದಿ
ಉ: Re:ಕನ್ನಡ ಸುಲಭ ಮಾಡಬೇಕೇ?
ಸಂಸ್ಕೃತದ ಋಣ ಕನ್ನಡೀಕರಿಸಿದಾಗ ರಿಣ. ಹಾಗೆಯೇ ಋಷಿ=ರಿಸಿ (ಇಸಿ). ಆದರೆ ಈ ತೆಱ ಕನ್ನಡೀಕರಿಸುವ ಸ್ವೋಪಜ್ಞತೆ ಕನ್ನಡಿಗರು ತೋಱುತ್ತಿಲ್ಲ. ಸ್ಟೇಷನ್=ಟೇಸನ್(ನ್ನು) ಇತ್ಯಾದಿ ಇತ್ಯಾದಿ. ಆದರೆ ಹೀಗೆ ಅಕ್ಷರಗಳನ್ನು ತೆಗೆದಾಗ ಮೂಲದ ಪದ ನಮಗೆ ಗೊತ್ತಿರುವುದಿಲ್ಲ. ಸಾಮಾನ್ಯವಾಗಿ ಪ್ರಾರಂಭದ ’ವ್’ ನಾವು ಬಳಸುವುದಿಲ್ಲ. ಒಂದೋ ವಕಾರ ನುಂಗಿಬಿಡುತ್ತೇವೆ. ಇಲ್ಲೋ ’ಬ’ಕಾರ ಮಾಡಿಕೊಳ್ಳುತ್ತೇವೆ. ವೀರ=ಈರ, ವೇಮಾಱು=ಏಮಾಱು. ಆದರೂ ಕೆಲವು ವಕಾರವಿರುವ ಕನ್ನಡ ಶಬ್ದಗಳು ವಂದರಿ, ವರಸೆ, ವಾಡಿಕೆ. ಕೆಲವರು ಒಂದರಿ, ಒರಸೆ ಎನ್ನಬಹುದೆನ್ನುತ್ತಾರೆ. ವಾಡಿಕೆ ಮಾತ್ರ ವಾಡಿಕೆಯೇ.
ಉ: Re:ಕನ್ನಡ ಸುಲಭ ಮಾಡಬೇಕೇ?
ನಿಂತವನ ಸಕುತಿಯುಡುಗೆ ಅವನೇಂ ಬೀೞನೇ?
ಯಪ್ಪ, ಆಸನದೋರ್ ಇಂಗ ಮಾತಾಡುಕ್ಕೇ ಇಲ್ಲ!!
ಸಕ್ಕತಾಗೈತೆ, ಇಂಗೇ ಬರೀರಿ.
ನಂಗಂತೂ ಸಾನೆ ಸೇರ್‍ತು!!
ನನ್ನಿ!
ಅದ್ ಸರಿ "ಇಂದಿನ ಕರಣ" ಅಂದ್ರೆ? ಅದೇನೋ "ವಸಂತ ಸೇನೆ" ಅಂದ್ರೆ, ಒಸಿ ಕನ್ನಡದಾಗೆ ಏಳ್ರಪ್ಪೋ!!
ಅದೆಲ್ಲ ಸರಿ ಸಾಮಿ..
ಸಮಯ = ಹೊತ್ತು
ಭಾರ = ತೂಕ
ಉಪಯೋಗ = ಬಳಕೆ
ನವನವೀನ - ಹೊಸಹೊಸದು
ಗರ್ಸಣೆ - ಗುದ್ದಾಟ
ಇನ್ನೂ ಕಂಡಾಪಟ್ಟೆ ಪದಗೊಳು ಕನ್ನಡದಾಗೆ ಅವೆ. ನಿಮ್ಗೆ ಗೊತ್ತಿರ್ನಿಲ್ಲ ಅಂತ ಕಾಣ್ತೈತೆ. ಪರವಾಗ್ನಿಲ್ಲ ಬುಡಿ.
ನೀವು 'ನಮ್ಮೂರ' ಆಸನದ ಕನ್ನಡ ಅಂತ ಯಾವುದೋ ನುಡಿ ಆಡ್ತಿವ್ರಿ. ಒಸಿ ಸರಿಯಾಗಿ ಹೇಳ್ರಿ ಸಾಮಿ.
. ಏಮಾವತಿ ಬಯಲ್ಲಂತೂ ಇಂಗೆ ಆಡಾಕೇ ಇಲ್ಲ.
ಆಸನದೋರು ಇಂಗೆ ಮಾತಾಡುಕ್ಕಿಲ್ಲ.( ಗವನ ಮಾತಾಡುಕ್ಕಿಲ್ಲ )
ನೀವ್ ಬಳಸಿರೋ ಸಾನೆ ಪದಗೊಳು ಆಸನದ್ ಅಳ್ಳಿ ಜನ ಬಳಸಾದೇ ಇಲ್ಲ ಸಾಮಿ. ಅವ್ರ್‍ಗೆ ಪುರಂದರ ದಾಸ್ನ ಪದಗೊಳು, 'ವಸಂತ ಸೇನೆ' ಇವೆಲ್ಲ ಯಾರ್ ಕಲ್ಸೋರು. ಪಾಪ ಅವು ತಮ್ ಪಾಡಿ ಬೀಸೊಕಲ್ ಪದ, ಸೋಮನ ಪದ, ಡೊಳ್ಳಿನ್ ಪದ ಆಡ್ಕೊಂಡ್ ಅವ್ರೆ.
ಒಂದೇ ಮಾತಲ್ಲಿ ಏಳೋದಾದ್ರೆ "ಅಡ್ಡೋಣಿ ಅಯ್ಯಂಗಾರ್ರು, ದೊಡ್ಡಿ ಗೌಡನಂಗೆ ಮಾತಾಡ್ದಂಗೆ" ಆಯ್ತು.
ಯಾರೋ ಸಿಕ್ಕಾಪಟ್ಟೆ ಕಸ್ಟಪಟ್ಕೊಂಡು, ಆಸನದೋರಂಗೇ ಮಾತಾಡಕ್ಕೆ ಒಂಟಿರೋ ತರ ಕಾಣತೈತೆ. ಅವ್ರು ದಿಟವಾಗ್ಲೂ ಆಸನದ್ ಕನ್ನಡಾನೇ ಮಾತಾಡ್ತಿರೋದಾ ಅಂತ ಗುಮಾನಿ ಬತ್ತೈತೆ. ಇರ್ಲಿ!
ಅಂದ್ರು ಮೊಗಸು ಮೋಜಾಗಿತ್ತು.
ಇದು ನಮ್ಮ ಆಡುನುಡಿಯ(dialect) ಅಣಕ ಅಲ್ಲ ಅಂತ ಅಂದುಕೊತೀನಿ
======================================
ಆಸನ ಮತ್ತು ಹಾಸನ :)
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಇಲ್ಲ ಸ್ವಾಮೀ, ನಾನು ಹದಿನಾರಾಣೆ ಹಾಸನದವನೇ. ಹೇಮಾವತಿ ನೀರು ಕುಡಿದು (ಎಷ್ಟೋ ಬಾರಿ, ನಲ್ಲ್ಲಿಯಲ್ಲಿನ ಹೇಮಾವತಿ ಒಣಗಿದಾಗ, ಬಾಇ ನೀರು ಸೇದುತ್ತಾ ಹಪಹಪಿಸಿ) ಬೆಳೆದವನೇ. ಕರ್ನಾಟಕದ ಎಲ್ಲೆಡೆಗಳಿಗಿಂತ ನನ್ನೂರು ಹಾಸನವೇ ನನಗೆ ಅಚ್ಚುಮೆಚ್ಚು. ಎಂದೋ ಯಾರೋ ಹೇಳಿದ್ದ ನೆನಪು ಅದುವೆಕನ್ನಡಡಾಟ್‍ಕಾಮ್ ನಲ್ಲಿ. ನಮ್ಮ ತಾಯಿ ಮಾಸಿದ ಬಟ್ಟೆ ಉಟ್ಟರೆ ಅವಳು ನಮಗೆ ಕಡಿಮೆ ಪ್ರೀತಿಯವಳಾಗುತ್ತಾಳಾ ಅಂತ. ಹಾಸನದಲ್ಲಿ ನೀರು ಇರಲಿ ಅಥವಾ ಇಲ್ಲದಿರಲಿ, ಹಾಸನಕ್ಕೂ ನನಗೂ ಅದೇ ನಂಟು.
ದೇವರ ದಯವೋ, ಅಥವ ನಮ್ಮ ಕನ್ನಡ ಪಂಡಿತರ ದಯವೋ, ಈ ಪದಗಳು ನನಗೆ ಗೊತ್ತಿವೆ
ಹಾಡು ಹಳೆಯದಾದರೇನು ಭಾವ ನವನವೀನ ಎಂಬುದು ಶ್ರೀ ಜಿ.ಎಸ್.ಶಿವರುದ್ರಪ್ಪನವರ ಗೀತೆ. ತಿಥಿ ವಾರ ನಕ್ಷತ್ರ ಯೋಗ ಕರಣ ಎಂಬುವು ಪಂಚಾಂಗದ ಐದು ಅಂಗಗಳೆಂದು ನಾನೇನೂ ಹೊಸದಾಗಿ ಹೇಳಬೇಕಾಗಿಲ್ಲ.
ವಸಂತಸೇನಾ ನಾಟಕ (ಮೃಚ್ಚಕಟಿಕದ ರೂಪಾಂತರ) ದ ಶಕಾರ, ಸಕಾರಕ್ಕೆ ಶಕಾರ ಹೇಳುತ್ತಾ "ವಸಂತಶೇನೇ, ನಾನು ನಿನ್ನನ್ನು ಪ್ರೀತಿಶುತ್ತೇನೆ" ಅನ್ನುತ್ತಾ ನಗಿಸುತ್ತಾನೆ. ಸಿಕ್ಕರೆ ಪರ್ವತವಾಣಿಯವರ ಅನುವಾದ ಓದಿ. ಬಹಳ ಸೊಗಸಾಗಿದೆ.
-ಹಂಸಾನಂದಿ
ಮಣ್ಣಿನ ಬಂಡಿ
ನಾನೂ "ಮೃಚ್ಛಕಟಿಕಾ" ಓದಿದ್ದೀನಿ. ಆದರೆ ಅದು ನನಗೆ ಹಿಡಿಸಲಿಲ್ಲ.
1. ಯಾವೋಳೋ ಸೂಳೆಗೋಸ್ಕರ, ಹೆಂಡ್ರು ಮಕ್ಕಳನ್ನು ಹಸಿಸಿ, ಮನೆ-ಮಟ ಮಾರೋ ಚಾರುದತ್ತ,
2. ಒಲ್ಲೆ ಅನ್ನೂ ಹೆಂಗಸನ್ನು ಕಾಡಿಸಿ ಬೇಟಕ್ಕೆ ಕರೆಯೋ ಶಕಾರ,
3. ಹೆಂಡ್ರು ಮಕ್ಕಳು ಚಾರುದತ್ತಂಗೆ ಐತೇ ಅಂತ ಗೊತ್ತಿದ್ರೂ, ತನ್ನ ಬುಟ್ಟಿಗೆ ಹಾಕಿಕೊಳ್ಳೋ ವಸಂತಸೇನಾ,
4. ಇನ್ನೂ ತನ್ ಗಂಡ ಆ ಸೂಳೆ ಹಿಂದೆ ಬಿದ್ದು ಮನೆಯಲ್ಲಿ ಇರೋ ನಗ-ನಾಣ್ಯಯೆಲ್ಲ ಗುಡಿಸಿ-ಗಂಡಾಂತರ ಮಾಡ್ತಿದ್ರು ತೆಪ್ಗಿರೂ ಆ ಚಾರುದತ್ತನ ಹೆಂಡ್ತಿ( ಅವರ ಹೆಸರು ಮರೆತೋಗೈತೆ ).
5. ಇದರ ನಡುವೇ ಅವರ ಮಗಂಗೆ ಚಿನ್ನದ ಬಂಡೀಲಿ ಆಡೋ ಬಯಕೆ; ನಾಡಲ್ಲಿ ದಂಗೆ; ಏನ್ ಕತೆಯೋ..
ಕತೆಯ ತಿರುಳು ಗಬ್ಬು. !!
ಆದರೆ ಬರಹದ ಹದ ಚೆನ್ನಾಗಿದೆ. ಸನ್ನಿವೇಶಗಳು ಚೆನ್ನಾಗಿವೆ.
ಹಿಂದಿ 'ಉತ್ಸವ್' ಸಿನಿಮಾ ನೋಡಿ, ಇದೇ ಕತೆ( ರೇಖಾ ವಸಂತಸೇನ
).
".... ಬರಸಾ ರೇ ಬರಸಾ ಆಧಿ ರಾತ್ ಕೋ"
======================================
( 'ವೈಶ್ಯೆ' ಬೇರೆ ಒರೆ ಸಭ್ಯ ಅಂತ ನನಗೆ ನಂಬಿಕೆಯಿಲ್ಲ)
ಪ್ರೀತಿ ಏಕೆ ಭೂಮಿ ಮೇಲೆ.....
ಹಂಸಾನಂದಿಯವರೇ, ನಿಮ್ಮ ಈ ಬರಹಕ್ಕಾಗಿ ಸವಿಯೊದಗು. ನೀವು ಈ ಲೇಖನವನ್ನು ಕೊಂಕಿಗಾಗಿಯಲ್ಲದೆ, ತೆಳುನಗು ಬರಿಸುವ ಧಾಟಿಯಲ್ಲಿ ಬರೆದಿರುವಿರೆಂದು ನಂಬುವೆ. ಈ ಹೊತ್ತಿನಲ್ಲಿ ಕಳೆದ ತಿಂಗಳ ಒಂದು ನಲ್ಗಲೆತದಲ್ಲಿ ನಡೆದ ಒಂದು ಸನ್ನಿವೇಶ ನೆನಪಿಗೆ ಬರುತ್ತದೆ.
ಪ್ರೀತಿ ಏಕೆ ಭೂಮಿ ಮ್ಯಾಲೆ ಹಾಡಿನಲ್ಲಿ, ೦೨:೧೦-೩:೨೦ರ ಸಾಗದಲ್ಲಿ ಈ ಸಾಲು ಬರುತ್ತದೆ, "ನಿನಗ್ ಏಳದೆ, ನಿನ್ನ ಪ್ರೀತಿಯ ನಾ ಮಾಡಿದೆ, ಕಾರಣ ನೀ ಕೇಳಲು ಇನ್ನೇಕೆ ಬರದೆವೋದೆ. ಅನಿಸಿದೆ ನನಗ್ ಅನಿಸಿದೆ, ನೀ ಒಪ್ಪಿದೆ ಇನ್ನೇನಿದೆ, ಕಾಯದೆ ತಡಮಾಡದೆ ಬಾ ನಿನ್ನ ದಾರಿಕಾದೆ, ಕೂಗಿ ಕೂಗಿ ಕರೆದರು ನಾನು, ಕೇಳಲಿಲ್ಲವೇ, ಒಮ್ಮೆ ಬಂದುವೋಗೆ ನೀನು ಕರುಣೆಯಿಲ್ಲವೇ...ಆಆಆಆಆಆ..ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ.....ಮಣ್ಣಾದರೆ ಈ ಪ್ರೀತಿ ಇಲ್ಲೇ...ಹ್ಮ್‌ಹ್ಮ್‌ಹ್ಮ್‌ಹ್ಮ್...."
ಈ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಹಾಡುಗಳ ಬಗ್ಗೆ ಮಾತು ಬಂದಾಗ, ಅದೇನೋ ಈ ಬರದೆವೋದೆ, ಬಂದುವೋಗೆ ಅಂಥ "ಕೆಟ್ಟದಾಗಿ" ಹಾಡಿರುವ ಬಗ್ಗೆ ಒಂದು ಚರ್ಚೆ ಜೋರಾಗಿ ನಡೆಯುತ್ತಿತ್ತು. ಈ ಬಂದುವೋಗೆ ಎಂಬ ಬಳಕೆಗಳನ್ನು ಏನೂ ಓದದ ಇಲ್ಲಿಟರೇಟ್ಸ್ ಮಾತನಾಡುವ ಬಗೆ ಅಂತ ವಾದ ಸರಿ ಆಯ್ತು ಕಣ್ರಪ್ಪಾ ನಾವುಗಳು ಓದಿಕೊಂಡ ಲಿಟರೇಟ್ಸೇ ? ಎಂದರೆ ಹೌದು ಎನ್ನೋದೇ? "ಮುಂದುವರಿದ" ಹಳ್ಳಕ್ಕೆ ಆ ಚಣದಲ್ಲಿ ನಾವೆಲ್ಲರೂ ಬಿದ್ದದ್ದು ಯಾರಿಗೂ ಹೊಳೆಯಲೇ ಇಲ್ಲ. ನೀವುಗಳು ಇನ್ನೂ ಬಿದ್ದಿಲ್ಲವಾದರೆ,
ಮುಂದು + ಪರಿ(ಹೊಸಗನ್ನಡದಲ್ಲಿ ಹರಿ) = ಮುಂದುವರಿ, ಮುಂದೆ + ಪೋಗು(ಹೊಸಗನ್ನಡದಲ್ಲಿ ಹೋಗು) = ಮುಂದೆವೋಗು, ನನೆ + ಬಿಲ್ಲ = ನನೆವಿಲ್ಲ, ಪರುಮೆ + ಮರಿ = ಪರುಮೆವರಿ.
ಈ ಮುಂದುವರಿ ಪದವನ್ನು ಮುಂದಿಟ್ಟುಕೊಂಡು ಬರದೆವೋದೆ ಎನ್ನುವವರು ಹಿಂದುಳಿದವರಲ್ಲ ಎಂದು ಸಾರಬೇಕಾಯಿತು
ಮುಂದುವರಿ, ಮುಂದುವೋಗು, ಮಳವಳ್ಳಿ ಹ=>ವ
ಸುನಿಲ್...
ನೋಡು ನೀನು ಏಟ್ ಚಂದಾಗಿ ಹೇಳ್ದಿ.
ಇದನ್ನೇ ಶಬ್ದಮಣಿದರ್ಪಣವೂ ಹೇಳೈತೆ.
"ಪವರ್ಗಕ್ಕೆ ವಕಾರಾದೇಶ ಕನ್ನಡದೊಳ್"
ಮುಂದು + ಪರಿ => ಮುಂದುವರಿ; ಪ=>ವ
ನನೆ + ಬಿಲ್ಲ => ನನೆವಿಲ್ಲ; ಬ=>ವ
ಪರುಮೆ + ಮರಿ => ಪರುಮೆವರಿ; ಮ=>ವ
"ನನೆವಿಲ್ಲಬಲ್ಲಹಂ ನಿನಗೆ ಸಿರಿಯಂ ಈಗೆ ಆವಗಂ"
ಇದಲ್ಲದೆ.
ಹೇಗೆ
ಇರ್ದನು => ಇದ್ದನು
ಹಾಗೆ
ಬರ್ತೀಯ => ಬತ್ತೀಯ ( ನಮ್ಮ ಹಳ್ಳಿಯವರ ನುಡಿ )..
ಇವೂ "ವ್ಯಾಕರಣ ಬದ್ಧ ಶುದ್ಧ ಕನ್ನಡ"
======================================
"ಅರಿಯದೆ ಪೊಗರಿಂದ ಸರಿಯನ್ನು ತಪ್ಪೆಂಬುವರಯ್ಯ,
ತಿಳಿಮಜ್ಜಿಗೆಯನು ನೋಡಿ ಹುಳಿ ಹೆಂಡವೆಂಬಂತೆ..
ಅಕಟಕಟಾ ಬಸವನಗುಡಿ ದೊಡ್ಡಬಸವಣ್ಣ!!"
Re: ಪ, ಹ, ವ, ಅ
ನನ್ನ ಹಾಸನದ ಗೆಳೆಯನೊಬ್ಬನನ್ನು ಕೇಳಿದೆ, ನೀವು 'ಹ' ಗ್ಯಾಕೆ 'ಅ' ಅಂತೀರಾ ಅಂತ. ಅಂವ ಅಂದ, ಯಾವಾಗಲೂ ಹಾಗೇನು ಅನ್ನಲ್ಲಾ, 'ಹಲ್ಲಿ' ಅನ್ನಬೇಕಾದರೆ ಅದನ್ನು 'ಹಲ್ಲಿ'ನೇ ಅಂತಿವಿ, ಅಂದರೆ 'ಹ್', ಪದದ ನಡುವೆ ಯೆಲ್ಲಾದರು ಬಂದಾಗ ಅದನ್ನು 'ಅ' ಅಂತೀವಿ ಅಂದ. ಪ=>ಹ ಆದಂತೆ ಅದೇ ಹೊತ್ತಲ್ಲೇ ಪ=>ವ ಆಗಿದ್ದೀತು. ಆದರೆ ನುಡಿತಿಳಿದವರು ಮಟ್ಟ(standard) ಅಂತ ಗುರುತು ಮಾಡಿರೋದು ಪ=>ಹ ಆದದ್ದನ್ನು.
Re: ಪ, ಹ, ವ, ಅ
ಸಂಗನ,
ನಿಮ್ಮ ಮಾತು ದಿಟ. ನೀವ್ ಪೇಳೋದು ಬಹಳ ಸರಿ.
ಇದೇ ಸರಿಮಟ್ಟ( standard) ಅಂತ ಮಾಡಿದೋರು, ತಮ್ಮ ಮೂಗಿನ ನೇರಕ್ಕೆ ಮಾಡಿಕೊಂಡ ಅವ್ರೆ ಆಟೇ. ಅವರಿಗೆ ಬೇರೆಯೋರು ಹೆಂಗೆ ಅಂತ ನೋಡೋದಕ್ಕೂ ಮನವಿಲ್ಲ. ತಾವೇ ಪೇಳೂದು ಯಾವಾಗಲೂ ಸರಿ, ಮಿಕ್ಕವೆಲ್ಲ 'ದಡ್ ಬಡ್ಡಿ ಹೈಕಳು' ಅಂತ ಎಣಿಕೆ.
ಈ ಸಂಗತಿ "ಕನ್ನಡ ಬರಹವನ್ನು ಸರಿಪಡಿಸೋಣ" ಹೊತ್ತಗೆಯಾಗೆ ಬಂದೈತೆ. ಬಿಡುವಾದಾಗ ಒಸಿ ನೋಡಬೋದು.
ನನ್ನಿ!
========================================
Re: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಸಂಸ್ಕ್ರುತವನ್ನು ಬದುಕಿಸಿಕೊಳ್ಳಬೇಕೆಂಬ ಆಸೆ, ನಮ್ಮ ದೊಡ್ಡ ಸರಕಾರಕ್ಕಿದ್ದರೆ, ಉತ್ತರ ಭಾರತದ ಯಾವುದಾದರೂ ಹಿಂದಿ ರಾಜ್ಯವನ್ನು ತೆಗೆದುಕೊಂಡು, ಅದನ್ನು ನೆರೆತ ಸಕ್ಕದ(ಸಂಪೂರ್ಣ ಸಂಸ್ಕ್ರುತ) ರಾಜ್ಯವನ್ನಾಗಿ ಮಾಡಲಿ. ಅದು ಬಿಟ್ಟು ಕನ್ನಡದಂತ ನುಡಿಯನ್ನೆತ್ತಿಕೊಂಡು, ಒತ್ತಾಯವಾಗಿ ಒರೆಗಳನ್ನು ತುರುಕೋದೇಕೆ??
---------------------------------------------------- ನಡೆವವ ಬಿದ್ದಾನಲ್ಲದೇ, ನಿಂತವ ಬೀಳಲಾರ
ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
http://thatskannada.oneindia.in/column/humor/2008/0711-kannada-grammer-d...
ಈ ಅಳೇ ಬರಅ ಈಗ ದಟ್ಸ್‌ಕನ್ನಡದಾಗೆ ಬಂದಯ್ತೆ....! ಯೆಸರು ಚೇಂಚಾಗಯ್ತೆ.
ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಮಹೇಶರೆ,
ಹೆಸ್ರು ಬದ್ಲಾಯ್ಸಿದ್ರಲ್ಲಿ ನನ್ನ ಕೈವಾಡವಿಲ್ಲ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಅಂಸಾನಂದಿಯವರೆ,
ಇನ್ನು ತಡ್ಕಳಾಯಕ್ಕಿಲ್ಲ. ನೀವು ಹೀಗೆಲ್ಲ ನಮ್ಮ ಆಡುನುಡಿಯನ್ನು ಹೀಗಳದು ಬರೆದುದು ನಾನು 'ಕನ್ನಡಿಗ' ಎಂದು ಹೇಳಿಕೊಳ್ಳುವ ನೀವು ಮತ್ತು ನಿಮ್ಮ ಗನತೆಗೆ ಒಂದು ಚೂರು ಸರಿವೊಂದಲ್ಲ.
ಈಗ ನಾವು ನಿಮ್ಮ ದೇವನಾಗರಿಯಲ್ಲಿ ನಮ್ಮ ಗಾದೆಯಾದ 'ಕೆರೆಗೆ ನೀರನು ಕೆರೆಗೆ ಚೆಲ್ಲಿ' ಬರೆದರೆ ಹೀಗಾಗುತ್ತದೆ.
'ಕೇರೇಯ ನೀರನು ಕೇರೇಗೇ ಚೇಲ್ಲೀ'.
:)
ಅದರಲ್ಲೂ ತೆಂಕ್-ಕನ್ನಡಿಗರು(ಆಸನ) ಎಂದು ಹೇಳಿಕೊಳ್ಳುವ ತಾವು ನಮ್ಮ ಕನ್ನಡದಲ್ಲಿ 'ಹ'ಕಾರ ಬಿದ್ದುವೋಗಿರುವಂತೆ ನಿಮ್ಮ ಸಕ್ಕದದಲ್ಲಿ 'ಎ','ಮತ್ತು ಹಳೆಗನ್ನಡದ ಱ್','ೞ್ ' ಬಿದ್ದುವೋಗಿದಿಯಲ್ಲ ಏನಂತೀರಿ ಇದಕ್ಕೆ. ....ಇವೆಲ್ಲ ಬೇಕಾಗಿತ್ತ ನಿಮಗೆ.
ನಿಮ್ಮ ಸಕ್ಕದದ ಬರಹವನ್ನೇ(ದೇವನಾಗರಿ) ನೆಚ್ಚಿಕೊಂಡರೆ ನಾವು ಪಂಪ, ಸಿರಿವಿಜಯ ಇವರ ಬರಹಗಳನ್ನೆಲ್ಲ ಓದಬೋದೆ?
ಇನ್ನಾದರೂ ನಿಮ್ಮ ಗನತೆಗೆ ತಕ್ಕಂತ ಬರಹಗಳನ್ನು ಬರೆಯುವಿರೆಂದು ಎಣಿಸೋಣವೆ?
ಪಾಪ, ಮಾಯ್ಸ, ತನ್ನ ಮಾತನ್ನು ಮುರಿದು ತಮಗೆ ಮರುಲಿ ಬರೆಯಬೇಕಾಯಿತು
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಈ ಬರಹವನ್ನು ಸಂಪದದಲ್ಲಿ ಹಂಸಾನಂದಿಯವರು ಬರೆದಾಗ, ಅದು "ತೆಳುಹಾಸ್ಯದ ಧಾಟಿಯಲ್ಲಿ" ಇತ್ತು. ಈ ದಿನ ದಟ್ಸಕನ್ನಡದಲ್ಲಿ ಬಂದಿರುವ ಕಾಮೆಂಟುಗಳನ್ನು ನೋಡಿದರೆ, ಅದು "ಹಾಸ್ಯವನ್ನು ಮೀರಿ ಸುಪ್ತಗಟ್ಟಿದ ಭಾವನೆಗಳನ್ನು ಹೊರದಬ್ಬಲು" ಪ್ರಚೋದಿಸಿದ ವೇದಿಕೆಯಾಗಿದೆ. "ಕನ್ನಡದಿಂದ ಏನೋ ಕಳ್ದೋಗತ್ತೆ" ಅನ್ನೋ ಧಾಟಿಯಲ್ಲಿಯೇ ಬಹುತೇಕರು ಬರೆದಿದ್ದಾರೆ. ಪಾಪ ಆ ಎಳೆಯಲ್ಲಿ ಕಮೆಂಟಿರುವವರಿಗೆ ಗೊತ್ತಿದೆಯೋ ಇಲ್ಲವೋ, ಕನ್ನಡದಲ್ಲಿದ್ದ ಱಳಕುಳಗಳು ಈಗಾಗಲೇ ಯಾವ್ದೋ ರಭಸಕ್ಕೆ ಎಗರಿಕೊಂಡು ಹೋಗಿವೆ.
ಸಧ್ಯ, ಕನ್ನಡದ ಪುಣ್ಯ "ಎ, ಒ" ಗಳು ಇನ್ನೂ ಕನ್ನಡದಲ್ಲಿ ಉಳಿದುಕೊಂಡಿವೆ. ಇಲ್ಲಾ ಅಂದಿದ್ರೆ, ಈ ಸಂಸ್ಕೃತದ ಅತಿವ್ಯಾಮೋಹವಿರುವವರು "ನಮ್ಮ ದೇವಭಾಷೆ ಸಂಸ್ಕೃತದಲ್ಲಿಯೇ 'ಎ,ಒ' ಇಲ್ಲ ಇನ್ನು ನಿಮ್ಮ ಕೀಳು ನುಡಿ ಕನ್ನಡಕ್ಕೆ ಏಕೆ ಅಂತ"!!!!! ಅದನ್ನೂ ಕೀಳಿಸಿಬಿಡ್ತಿದ್ರು. ಇದು ಸುಳ್ಳಲ್ಲ. ಒಬ್ಬ ದೊಡ್ಡ ವಿದ್ವಾಂಸರು "ಸಂಸ್ಕೃತವಿಲ್ಲದ ಕನ್ನಡ ಕೀಳು" ಅಂತ ದೊಡ್ಡ ಪೇಪರ್ ಸ್ಟೇಟಮೆಂಟ್ ಕೊಟ್ಟಿದ್ರು. ಸಂಪದದಲ್ಲಿಯೇ ದೊಡ್ಡ ಚರ್ಚೆಯಾಗಿದೆ ಇದರ ಬಗ್ಗೆ.
ಇರಲಿ ಬಿಡಿ, ದಟ್ಸಕನ್ನಡದವರಿಗೆ ಭರ್ಜರಿ ಹಿಟ್ಸ್ ಸಿಕ್ಕಿರತ್ತೆ
ಅದರಿಂದ ಅವರ ಜಾಹೀರಾತುಗಳೂ ಬೆಳೆಯಲಿ. ಒಂದಂತೂ ಸ್ಪಷ್ಟ. ಈ "ಕನ್ನಡ-ಸಂಸ್ಕೃತ" ಚರ್ಚೆ ತಾತ್ವಿಕ ಮಟ್ಟವನ್ನು ಮೀರಿ ಇಂತಹವುಗಳನ್ನೂ ಹೇಗೆ ವೆಬ್ಸೈಟ್ ಪಬ್ಲಿಸಿಟಿಗೆ ಬಳಸಬಹುದು ನಗ್ನ ಸತ್ಯವನ್ನು ತೋರಿಸುತ್ತಿದೆ.
ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ಈಗಲೂ ಹಾಗೇ ಇರಬೇಕಿತ್ತು ಅನ್ನುವುದು ನನ್ನ ಅನಿಸಿಕೆ.
ನಾನು ಹೇಳದೇ ಇರುವುದನ್ನು ನನ್ನ ಬಾಯಲ್ಲಿ ಹೇಳಿಸುವ ಪ್ರಯತ್ನವನ್ನು ನಾನು ಕೆಲವು ಟಿಪ್ಪಣಿಗಳಲ್ಲಿ ಕಂಡೆ - ನಾನು ಎಲ್ಲೂ ದೇವನಾಗರಿಯಲ್ಲಿ ಕನ್ನಡವನ್ನು ಬರೀಬೇಕು ಅನ್ನೋ ಮಾತು ಹೇಳಿಲ್ಲ. ಅಲ್ವಾ? ’ಕೇರೆಯ ನೀರನು ಕೇರೆಗೆ ಚೇಲ್ಲಿ’ ಅಂತ ಬರೆದರೆ ಸೊಗಸು ಅಂತ ನಾನನ್ನೋದಿಲ್ಲ! ಅದು ಕೂಡ ’ಹಗ್‍ಗ ಮಗ್‍ಗವ ನುನ್‍ಗಿ ಮಗ್‍ಗವ ಲಾಳಿ ನುನ್‍ಗಿ’ ಅಂತ ಬರೆಯೋ ಅಷ್ಟೇ ಕೆಟ್ಟದಾಗಿರುತ್ತೆ.
ಒಟ್ಟಲ್ಲಿ - ಕನ್ನಡ ಬರೆಯೋದಕ್ಕೆ ದೇವನಾಗರಿ ಆಗಲಿ, ಸ್ವಾಹಿಲಿ ಆಗಲಿ ಅಲ್ಲದೇ ಸಿಂಹಳೀ ಆಗಲೀ ಬಳಸೋಣ ಅನ್ನೋವ್ನು ನಾನಲ್ಲ. ಅಷ್ಟೇ.
ಆ ಹುಚ್ಚುಹುಚ್ಚಾದ ಮಾತು ಸ್ವಲ್ಪ ಬೇರೆಯಾಗಿತ್ತು ಅಂತ ನನ್ನ ನೆನಪು - ಕೀಳಲ್ಲ, ಜಾಳು ಅಂತ ಕಾಣತ್ತೆ.
ದಟ್ಸ್ ಕನ್ನಡದಲ್ಲಿ ಬರೋ ಟಿಪ್ಪಣಿಗಳಿಗೇನೂ ನಾನು ಬದಲು ಕೊಡಬೇಕಿಲ್ಲ; ಅವರು ಅದನ್ನು ಭರ್ಜರಿ ಹಿಟ್ ಗಳಿಗೋಸ್ಕರ ಬಳಸುವರೇ? ಅದೂ ನನಗೆ ಗೊತ್ತಿಲ್ಲ. ಆದರೆ ಸಂಪದಿಗನಾಗಿ ಇಲ್ಲಿ ಉತ್ತರ ಕೊಡಬೇಕೆನಿಸಿತು. ಬರೆದಿರುವೆ ಅಷ್ಟೇ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಇಂದಿನ ಯೋಗ ಸುಬಯೋಗ ಇಂದಿನ ಕರಣ ಸುಬಕರಣ
ನನ್ನ ಅನಿಸಿಕೆಯಲ್ಲಿ ಇದು ಒಂದು ಚೀಪ್ ಬರಹ.
ಕಾರಣಗಳು
೧) ಒಂದು ಪ್ರದೇಶದ ಒಂದು ವರ್ಗದ ಮಂದಿಯ ಉಲಿಕೆಯನ್ನು ಮೂದಲಿಸಿ ನಗುವುದು ಸಣ್ಣತನ... ಅದೇ ಈ ಬರಹದ ಜೀವಾಳ, ಸಾರ, ಸಾರಂಶ, ಹುರುಳು ತಿರುಳು. ಅದೂ ಇವರು ಹುಟ್ಟಿಬೆಳದ ಜಾಗದ ಇತರವರ್ಗದ ಉಲಿಕೆಯನ್ನೇ ಆಡಿಕೊಂಡಿದ್ದಾರೆ.
೨) ಕನ್ನಡ ಎತ್ನಿಕ್ ಮಂದಿಯ ಉಲಿಕೆ ಅವರ ವಿಶೇಶ ಗುರುತು.. ಹಾಗೆ ’ಹ’ಕಾರ ಉಲಿಯದೇ ಇರುವುದು ಆ ಪ್ರದೇಶದ ಮಂದಿಯ ವಿಶೇಶ ಗುರುತು..
ಇಂಗ್ಲೇಂಡಲ್ಲೂ ಒಂದು ಡಯ್ಲೆಕ್ಟ್ ಮಂದಿ ’ಹ’ ಉಲಿಯಲ್ಲ.. ( ಜಪ್ರೆ ಆರ್ಚರ್‍ರ A prison by birth ಕಾದಂಬರಿಯಲ್ಲಿ ಆಗಿರುವ ಆ ಡಯ್ಲೆಕ್ಟ್‌ನ ಬಳಕೆ ನೋಡಿ ) ಗ್ರೀಸ್ ಅಲ್ಲೂ ಹೀಗೆ.. ಓಕೆ ಅನ್ನು ಹೋಕೆ ಎಂದು ಅನ್ನುವ ಮಂದಿ ಇದ್ದಾರೆ.
ಇದು ಎಶ್ಟು ಚೀಪ್ ಅಂದ್ರೆ, ಒಬ್ಬ ನಾರ್ತ್ ಇಂಡಿಯದವನ್ನು ಕರೆದು ’ಹೇಳು’ ಅನ್ನು ಎಂದು ಉಲಿಸಿ ಅವನು ’ಹೇಲು’ ಎಂದಾಗ ಚಪ್ಪಳೆ ಹೊಡೆದು ಎಲ್ಲರ ಮುಂದೆ ಹೊಟ್ಟೆ ಹಿಡಿದು ನಗುವಶ್ಟು ಸಣ್ಣಬುದ್ದಿಯ ಬರಹ.
ಇದಕ್ಕೆ ನಾನು ವಯ್ಬವ ಯಾಕೆ ಎದುರು ಬರಿಯಬೇಕು?ಯಾಕೆಂದರೆ ನಮ್ಮಿಬ್ಬರ ಉಲಿಕೆ/phonology ಇದೇ. ನಮ್ಮ ಮನೆಯಲ್ಲಿ ನಾವು ಮೂರೊತ್ತು, ಬಂದೋಗು, ಬಿದ್ದೋಗು, ಅಲ್ಲಾಗು ಹಿಂಗೆ ಮಾತಾಡೋದು.. ನಮ್ಮ ಮನೆಯ ಉಲಿಕೆಯ ಆಡುಮಾತನ್ನು ಜಗಜ್ಜಾಹಿರಾಗಿ ನಗೆಪಾಟಲು ಮಾಡಿದ್ದು, ನಮ್ಮನ್ನು ಕೀಳುತೋರಿಸಶ್ಟೇ ಅಪಮಾನವೆಸಗಿದಂತೆ.
ಇನ್ನೊಂದು... ’ಹಂಸಾನಂದಿ’ಗಳು ತಮ್ಮ ಮೂಲ ಬಗ್ಗೆ ಬರೆಯುತ್ತಾ ’ತಾವು ತಪ್ಪು ಮತ್ತು ಬೆರೆಕ ಮಾತಾಡುವ ತಮಿಳು ಜನಾಂಗ’ ಎಂದು ಹೇಳಿಕೊಂಡಿದ್ದಾರೆ.. ಹಾಗೆ ಹೇಳಿಸಿಕೊಳ್ಳುವುದರಲ್ಲಿ, ಹೇಳುವುದರಲ್ಲಿ ಅವರಿಗೆ ಸಕ್ಕತ್ ನಲಿರಬಹುದು.. ಆದರೆ ಅಪ್ಪಟ,ತಲತಲೆಮಾರುಗಳಿಂದ ಕನ್ನಡ ಎತ್ನಿಕ್ಗುಂಪಿಗೆ/ಜನಾಂಗಕ್ಕೆ ಸೇರಿದ ನಾವು ’ಹ’ ಬಿಡುವ ಉಲಿಕೆಯನ್ನು ’ತಪ್ಪು ಕನ್ನಡ’ ಎಂದು ಒಪ್ಪುವುದಿಲ್ಲ.. ಅದು ನಮಗೆ ಅವಮಾನ. ಏಕೆಂದರೆ ನಮ್ಮ ತಾತ, ಅವರ ತಾತ, ತಾತರ ತಾತರೂ ನಮ್ಮ ಪ್ರದೇಶದಲ್ಲಿ ’ಹ’ಅನ್ನು ಎಲ್ಲೆಡೆ ಉಲಿದಿದ್ದಿಲ್ಲ... ಇದು ಕನ್ನಡದ ಒಂದು ಡಯ್ಲೆಕ್ಟ್ ಎಂದೇ ಎಣಿಸಬೇಕು.. ( ದಾರವಾಡ, ಮಂಗಳೂರು ಕನ್ನಡವನ್ನು ಎಣಿಸಿದಂತೆ ) .. ನಮ್ಮ ಪ್ರದೇಶದ ಹಲಕಲ್ಬರಹಗಳಲ್ಲೇ(ಶಾಸನ ಅಂತ ಸಂಸ್ಕೃತದಲ್ಲಿ ಹೇಳಬೋದು) ಹೀಗೆ ಹಕಾರ ಬಿಟ್ಟೋಗಿದೆ
ಕೆಳಗಿನದು ಜನರಲ್ ಆದ ಸಂಗತಿ ಇದು ಹಂಸಾನಂದಿಗೆ ನೇರ ಹೇಳಿದ್ದೆಂದು ಭಾವಿಸಕೂಡದು.
"ಇನ್ನೊಂದು ಸಂಗತಿ ಹೇಳಲೇ ಬೇಕೆನಿಸಿದ್ದು ತಮಿಳುಮೂಲದವರು ಬಂದು ಕನ್ನಡಮೂಲವದರು ಕನ್ನಡವನ್ನು ಹೇಗೆ ಉಲಿಯಬೇಕೆಂದು ಹೇಳಬೇಕಿಲ್ಲ.... ಹಾಗೆ ಸಂಸ್ಕೃತ ಪಂಡಿತರು ಕನ್ನಡವನ್ನು ಹೇಗೆ ಬರೆದು ಉಲಿಯಬೇಕೆಂದು ನಿರ್ಧರಿಸಬೇಕಿಲ್ಲ.. ಕನ್ನಡಮೂಲವರು ಉಲಿಕೆಯೇ ಸರಿಯುಲಿಕೆ. "English is what an English men speaks" ಎಂದು ಬ್ರಿಟನ್ನಿನ prime minister ಹೇಳಿದಂತೆ. ಎಂದು ನಮಗೆ ಅನ್ನಿಸಿದ್ದಂತೂ ದಿಟ. ಏಕೆಂದರೆ ಬೇರಿನ ವಾಸನೆ ಗಿಡದ ಚಿಗುರಲ್ಲೂ ಇದ್ದೇ ಇರತ್ತೆ. ನಾಳೆ ಒಬ್ಬ ನಾರ್ತಿ ಬಂದು ’ಭೀಭತ್ಸ’ ಎಂದು ಮಾಪ್ರಾಣಗಳನ್ನು ಉಲಿದು ನಮ್ಮ ಹುಡುಗ "ಬೀಬತುಸ" ಅಂದಾಗ ಬೆಟ್ಟಮಾಡಿ ನಗಬೋದು"
ತೆಂಕಣಕನ್ನಡದಲ್ಲಿ ’ಹ’ ಇರದೇ ಇರುವುದಕ್ಕೆ ತಕ್ಕ ಕಾರಣಗಳನ್ನು ಬಲ್ಲವರು ಹೇಳಿದ್ದಾರೆ.. ಹಲವಾರು ಹಳೆಗನ್ನಡದ ’ಪ’ಕಾರದ ಒರೆಗಳು ತುಂಗೆಯ ಮೇಲಿನ ಕನ್ನಡನಾಡಿಲ್ಲಿ ನಡುಗನ್ನಡದ ಕಾಲದಲ್ಲಿ ’ಹ’ಕ್ಕೆ ಹೊರಳಿತು.. ಆದರೆ ತೆಂಕಣಕನ್ನಡದಲ್ಲೂ/ಕೊಡವ ಮುಂತಾದ ಕನ್ನಡದ ಬಗೆಗಳಲ್ಲಿ ’ಪ’ಕಾರ ಹಲವು ಕಡೆ ಹಾಗೆ ಉಳಿಯಿತು ( ಪಳ್ಳಿ, ಪಲ್ಲಿ, ಪುಡಿ, ಪಿಂಡಿ ಮುಂತಾದವು ).. ಹಲವು ವಕಾರಕ್ಕೆ ಹೊರಳಿತು..( ಮನೆಗೆ ವೋಗು ) ಬಳಿಕ ವೋಗು ಮುಂತಾದವು ಓಗು ಆಯಿತು.
ಇದನ್ನೆಲ್ಲ ತಿಳಿದೂ ತಿಳಿದೂ ನಮ್ಮ ಪ್ರದೇಶದ ಉಲಿಕೆಯನ್ನು ಅಣಕ ಆಡಿಕೊಂಡಿತ್ತು ಸರಿಯಿಲ್ಲ......
ನಾನು ಕನ್ನಡಿಗ ಅಂದು ಹೇಳಿಕೊಳ್ಳುವುದು ಬೇರೆ.. ತಲೆಮಾರುಗಳಿಂದಾ ಕನ್ನಡಿಗರು ಎಂದು ಹೇಳಿಕೊಳ್ಳದೇ ಕನ್ನಡಿಗರಾಗಿರುವುದು ಬೇರೆ.. ( ಒಕ್ಕಲಿಗರ ಹಲವರು ಗುಂಪುಗಳಲ್ಲೂ ಹ ಇಲ್ಲ.. ಆದರೆ ಅವರು ಯಾವ ಕಾಲದಿಂದ ಕನ್ನಡವನ್ನು ಮಾತಾಡ್ತಾ ಇದ್ದಾರೆ ಅಂತ ಅವರಿಗೇ ಗೊತ್ತಿಲ್ಲ.. ನಮ್ಮ ಕನ್ನಡನೆಲಕ್ಕೆ ಇಂದು ವಲಸೆ ಬರುವ ನಾರ್ತಿಗಳು ಅಚ್ಚುಕಟ್ಟಾಗಿ ’ಹಕ್ಕಿಅಕ್ಕಿಹೆಕ್ಕಿಹಾರಿತು’ಎಂದು ಉಲಿಯಬೋದು.ಅದಕ್ಕೆ ಅವರು ಕನ್ನಡಜನಾಂಗ ಎನ್ನುಲುಬರುವುದೇ? ).
ದಯವಟ್ಟು(ದಯ+ಪಟ್ಟು) ಬೇಸರಗೊಂಡಿದ್ದರೆ ಮನ್ನಿಸಿರಿ.. ನಮ್ಮ ಜನಾಂಗದ/ಪ್ರದೇಶದ ನಮ್ಮ ಎತ್ನಿಕ್ತನದ ಗುರುತನ್ನು ನಗೆಪಾಟಲು ಮಾಡಿದ್ದು ಆ ಪ್ರದೇಶದ ಮಂದಿಯಾದ ನಮಗೆ ಅವಮಾನ ಮತ್ತು ನೋವು.!!
ಇದನ್ನು ನಾನೂ ದಟ್ಸ್‌ಕನ್ನಡದಲ್ಲಿ ಹಾಕಿಲ್ಲ..