ಹಂಸ ನಾದ
ಹಂಸ ನುಡಿದರೆ, ಹಂಸನಾದ!
ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಸೂರ್ಯ ಸಿದ್ಧಾಂತ ಅನ್ನೋದು ಭಾರತದಲ್ಲಿನ ಹಳೆಯ ಖಗೋಳ ಶಾಸ್ತ್ರದ ಬಗ್ಗೆ ಬರೆದಿರುವ ಹೊತ್ತಗೆಗಳಲ್ಲೊಂದು.
ಅದರಲ್ಲಿ ಏನು ಹೇಳ್ತಾರೆ ಗೊತ್ತಾ?
ಭೂಮಿಯ ಉತ್ತರಾರ್ಧ ಗೋಳ ದೇವತೆಗಳ ಕಡೆ, ದಕ್ಷಿಣಾರ್ಧ ಗೋಳ ಅಸುರರದ್ದಂತೆ. ದೇವತೆಗಳಿಗೆ ಆರುತಿಂಗಳು ಹಗಲಾದಾಗ, ರಾಕ್ಷಸರಿಗೆ ಆರು ತಿಂಗಳು ರಾತ್ರಿ.
ಅಂದ್ರೆ ದೇವತೆಗಳು ಆರ್ಕ್ಟಿಕ್ ಪ್ರದೇಶದಲ್ಲೂ, ರಾಕ್ಷಸರು ಅಂಟಾರ್ಕ್ಟಿಕ್ ಪ್ರದೇಶದಲ್ಲೂ ಇದ್ದಿರಬೇಕು
:)
ಅದಿರ್ಲಿ. ಇದೆಲ್ಲ ಬರೀ ಸಿಂಬಾಲಿಕ್ ಅಷ್ಟೇ. ಸೂರ್ಯ ಸಿದ್ಧಾಂತದಲ್ಲಿ ನಾವು ತಿಳೀಬೇಕಾದ ಎಷ್ಟೋ ಅಂಶಗಳಿವೆ. ಅವುಗಳ ಮೇಲೆ ಆದಾದಹಾಗೆ ಬರೆಯುತ್ತಾ ಹೋಗುವೆ.
ಮೊದ್ಲಿಗೆ ಇದು ಕೇಳಿ: ಲಂಕೆ ಅಂದ್ರೆ ರಾವಣನ ಊರು ಅಂತ ನಾವೆಲ್ಲ ಸಾಧಾರಣವಾಗಿ ಅಂದ್ಕೊಳೋದು ಅಲ್ವಾ? ಆದರೆ, ಖಗೋಳ ಶಾಸ್ತ್ರದಲ್ಲಿ ಇನ್ನೊಂದು ಲಂಕೆ ಇದೆ.
ಇದು ಲೆಕ್ಕಾಚಾರಕ್ಕೆ ಮಾಡಿಕೊಂಡಿದ್ದ ಒಂದು ಬಿಂದು ಅಷ್ಟೇ. ಉಜ್ಜಯಿನಿಯ ರೇಖಾಂಶ (longitude) ಎಲ್ಲಿ ಭೂಮಧ್ಯ ರೇಖೆಯನ್ನ ಮುಟ್ಟುತ್ತೋ ಅದೇ ಲಂಕೆ.ಎಲ್ಲಾ ಲೆಕ್ಕಾಚಾರಗಳನ್ನೂ ಉಜ್ಜಯಿನಿಯ ರೇಖಾಂಶಕ್ಕೆ ಸಾಪೇಕ್ಷವಾಗಿ ಮಾಡ್ಕೋತಿದ್ರು ಆಗ.
ಈಗ ನಾವು ಭಾರತದ standard time ಅನ್ನ ಹೇಗೆ ೮೨.೫ ರೇಖಾಂಶಕ್ಕೆ ಮಾಡ್ಕೊಂಡಿದೀವೋ, ಅಥವಾ ಪ್ರಪಂಚದಲ್ಲೆಲ್ಲ ಗ್ರೀನ್ವಿಚ್ ಅನ್ನ ಸೊನ್ನೆ ಡಿಗ್ರಿ ಅಂದ್ಕೋತೀವೋ, ಹಾಗೆ ಉಜ್ಜಯಿನಿಯಲ್ಲಿ ಹಾದು ಹೋಗುವ ರೇಖಾಂಶ ಅಂದಿನ ಭಾರತಕ್ಕೆ prime meridian ಆಗಿತ್ತು.
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 482 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಹಂಸಾನಂದಿಗಳೆ,
ಸೂರ್ಯ ಸಿದ್ಧಾಂತ ಬರೆದವರ್ಯಾರು? ಮತ್ತು ಇದು ಯಾವಾಗ ಬರೆದದ್ದು?
~ಕಲ್ಪನ
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ರಾಕ್ಷಸರು ಕರ್ರಗೆ, ದಪ್ಪಗೆ ಇದ್ದರೆಂದು ಪ್ರತೀತಿಯಲ್ಲವೆ? ಆದರೆ, ಬಿಸಿಲೇ ಬೀಳದ, ಹಿಮವತ್ಪ್ರದೇಶವಾದ ಅಂಟಾರ್ಟಿಕದಲ್ಲಿ tan ಆಗದ ಬಿಳಿ ತೊಗಲಿರುವ ಜನರಿರುತ್ತಾರಲ್ಲವೆ? ಇವರು ರಾಕ್ಷಸರು ಹೇಗಾದಾರು?
~ಕಲ್ಪನ
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಅದು ಬರೀ ಪ್ರತೀಕ ಅಂತ ಹೇಳಿದ್ನಲ್ಲ
ನಾವಿರೋಕಡೆ ಸರಿ, ಇನ್ನೊಂದು ಕಡೇವ್ರದ್ದೇ ತಪ್ಪು ಅನ್ನೋದು ಮನುಷ್ಯನ ಹುಟ್ಟುಗುಣ ಅನ್ಸತ್ತೆ !
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
>ನಾವಿರೋಕಡೆ ಸರಿ, ಇನ್ನೊಂದು ಕಡೇವ್ರದ್ದೇ ತಪ್ಪು ಅನ್ನೋದು ಮನುಷ್ಯನ ಹುಟ್ಟುಗುಣ ಅನ್ಸತ್ತೆ !
ಹಂಸ ನಂದಿಯವ್ರೆ ನಿಮ್ಮ ಮಾತು ಸರಿಗಿಂತ ಹೆಚ್ಸರಿ!
ತುಂಬ ದೊಡ್ದೊವ್ರು ಅಂತ ನಾವು ಇವತ್ತು ನಮ್ಬಿರೋರೂ ಈ ತಪ್ಪನ್ನು ಮಾಡಿದ್ದಾರೆ ಅನ್ಸುತ್ತೆ..
ಸವಿತೃ
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಕಲ್ಪನ, ನೀವು ಭಕ್ತ ಪ್ರಹ್ಲಾದ ನೋಡಿಲ್ಲ, ಅನ್ಸತ್ತೆ
ಯಾಕೆ ಇದನ್ನು ಹೇಳ್ತಾ ಇದ್ದೀನಿ ಅಂದ್ರೆ, ನೋಡಿದ ಮೇಲೆ ನಿಮಗೆ ತಿಳಿಯತ್ತೆ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಸುನಿಲರೇ,
ಅಣ್ಣಾವ್ರ ಹಿರಣ್ಯಕಷಿಪು ಪಾತ್ರದ ಬಗ್ಗೆ ತಾನೆ ನೀವು ಹೇಳ್ತಾ ಇರೋದು? ಅದ್ಸರಿ, ರಾಕ್ಷಸರು=evil=ಕಪ್ಪು ಬಣ್ಣ, ಇದು ಅಮರ್ ಚಿತ್ರ ಕಥೆಯಿಂದಾಗಿ ನನ್ನ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ
~ಕಲ್ಪನ
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಅಯ್ಯೋ, ಇಲ್ಲಿ ಬೇಡಿ. ಚರ್ಚೆಗೆ ಸರಿಹೊಂದಲ್ಲ, ಬೇರೊಂದು ಎಳೆಯಲ್ಲಿ ಹಾಕ್ತೀನಿ. ಇಲ್ಲಿ ಸೂರ್ಯಸಿದ್ಧಾಂತವಷ್ಟೇ ಇರಲಿ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಇಲ್ಲಿ ಓದಿ ನೋಡಿ:
http://en.wikipedia.org/wiki/Surya_Siddhanta
ಲಾಟನೆಂಬವನು ಇದನ್ನು ಬರೆದದ್ದೆಂದು ಪ್ರತೀತಿ. ಅತಿ ತಡ ಎಂದರೆ, ಆರ್ಯಭಟ ವರಾಹ ಮಿಹಿರರಿಗಿಂತ ಮುಂಚೆ ಇದು ರಚನೆ ಆಗಿದ್ದಿರಬೇಕು (ಅಂದರೆ, ಸುಮಾರು ಕ್ರಿ.ಶ ನಾಕನೇ ಶತಮಾನ). ಆದರೆ, ಇದರಲ್ಲಿರುವ ಒಳಗಿನ ಸಾಕ್ಷಿಗಳನ್ನು ನೋಡಿದರೆ, ಅದಕ್ಕೂ ಬಹಳ ಮೊದಲೇ ( ಕ್ರಿಸ್ತಪೂರ್ವದಲ್ಲೇ) ಆಗಿದ್ದಿರಬೇಕು ಎನಿಸುತ್ತೆ.
ಬೆನಕರು ಇಂತಹ ವಿಷಯಗಳನ್ನು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತಾರೆ - ಅವರು ನೋಡಿದರೆ, ಖಂಡಿತ ಟಿಪ್ಪಣಿ ಹಾಕುತ್ತಾರೆ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಲಾಟದೇವನು ಆರ್ಯಭಟನ ಶಿಷ್ಯ ಎಂದು ಈ ಕೊಂಡಿಯಲ್ಲಿರುವ ಪುಸ್ತಕ ಹೇಳತ್ತೆ ( ಕ್ರಿ.ಶ ೫೦೦)
http://books.google.com/books?id=W0Uo_-_iizwC&printsec=frontcover&sig=AC...
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಪ್ರಿಯ ಹಂಸಾನಂದಿ,ಕಲ್ಪನಾ,
ಸೂರ್ಯಸಿದ್ಧಾಂತದಲ್ಲಿ ನಂಬತಕ್ಕ ಹಾಗೂ ನಂಬಲಾಗದ ಎಷ್ಟೋ ಸಂಗತಿಗಳಿವೆ. ಇದನ್ನು ಬರೆದವರಾರೋ ತಿಳಿಯದು!
ಈ ಮೇಲಿನ ರಾಕ್ಷಸ-ದಕ್ಷಿಣ ವಿಚಾರಕ್ಕೆ ಬಂದರೆ, ಇದೊಂದೇ ಗ್ರಂಥದಿಂದ ತಿಳಿಯಲು ಅಸಾಧ್ಯವೆನಿಸುತ್ತದೆ.
ಆದರೆ, ಸಮಕಾಲೀನವಿರಬಹುದೆಂದು ತಿಳಿದುಕೊಂಡಿರುವ ಇತರ ಸಿದ್ಧಾಂತ (ವಿಶೇಷವಾಗಿ ರೋಮಕ ಸಿದ್ಧಾಂತ)ಗಳ ತುಲನಾತ್ಮಕ ಅಧ್ಯಯನದಿಂದ ಕೆಲವು ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ, ಬೀಳುತ್ತಿವೆ.
ತಮಾಷೆಯೋ, ಅಚ್ಚರಿಯೋ, ಇದಕ್ಕೂ ತಮಿಳು-ಕನ್ನಡದ ಹುಟ್ಟಿಗೂ ಸಂಬಂಧವಿದೆಯೆಂದರೆ ಅದ್ಭುತವೆನಿಸದಿರದು! ದಕ್ಷಿಣ ಎಂಬುದನ್ನು ಅಂಟಾರ್ಟಿಕ ಎಂದಷ್ಟೇ ಅಲ್ಲದೆ ’ಲೆಮೂರಿಯಾ’ ಖಂಡವೆನ್ನುವವರಿದ್ದಾರೆ.
ಭಾರತದ ಥಿಯೋಸಾಫಿಕಲ್ ಸೊಸೈಟಿಯ ಆಧಾರಸ್ತಂಭವಾಗಿದ್ದ ಮೇಡಂ ಬ್ಲಾವಾತ್‍ಸ್ಕೀ ಈ ತುಲನಾತ್ಮಕ ಅಧ್ಯಯನದಿಂದ ಹೊರತಂದ ’ಡಿಝೈನ್’(ಧ್ಯಾನದ ಅಪಭ್ರಂಶ) ನಲ್ಲಿ ಲೆಮೂರಿಯಾ ಅಥವಾ ’ಕುಮಾರೀಖಂಡ’ದ ಬಗ್ಗೆ ವಿವರಿಸುತ್ತಾರೆ! ಕನ್ಯಾಕುಮಾರಿಯ ದಕ್ಷಿಣದಲ್ಲಿತ್ತೆಂದು ನಂಬಲಾದ ಈ ಕುಮಾರೀಖಂಡವನ್ನೇ ತಮಿಳರು ತಮ್ಮ ಜನಾಂಗದ ಮೂಲನೆಲವೆಂದೂ, ತಾಯ್ನಾಡೆಂದೂ ತಿಳಿದಿರುವುದು!
ಇದಕ್ಕೆ ಹೌದೆನ್ನಬೇಕೋ, ಇಲ್ಲವೆನ್ನಬೇಕೋ ತಿಳಿಯದು; ಆದರೆ ಇದು ಅರ್ಧಸತ್ಯವೆಂದು ಮಾತ್ರ ಹೇಳಬಲ್ಲೆ. ಈ ತೆಂಕಣನಾಡಿಗೂ, ಸೂರ್ಯಸಿದ್ಧಾಂತಕ್ಕೂ ಇರುವ ಸಂಬಂಧವನ್ನು ಮೇಡಂ ಬ್ಲಾವಾತ್‍ಸ್ಕೀ ಚೆನ್ನಾಗಿ ವರ್ಣಿಸುತ್ತಾರೆ! ಆದ್ದರಿಂದ ಸೂರ್ಯಸಿದ್ಧಾಂತದ ’ದಕ್ಷಿಣ’ದ ಜನಾಂಗಕ್ಕೂ, ಕುಮಾರೀಖಂಡಕ್ಕೂ, ಮೇಡಂ ಬ್ಲಾವಾತ್‍ಸ್ಕೀ ಅವರ ’ಸಪ್ತಜನಾಂಗ’ ವಾದಕ್ಕೂ, ’ಸಪ್ತದ್ವೀಪಾ ವಸುಂಧರಾ’ ಎಂಬ ವೇದ ಮಂತ್ರಕ್ಕೂ ನಂಟಿದೆ!
ಸೂರ್ಯಸಿದ್ಧಾಂತದ ಕಾಲ ಅದರಲ್ಲೇ ಹೇಳಿರುವಂತೆ ಕೃತಯುಗದ ಕೊನೆ! 2,164,960 ವರ್ಷಗಳ ಹಿಂದೆ ಸೂರ್ಯನಿಂದ ಮಯ ಎಂಬ ಅಸುರನಿಗೆ ಕೊಡಲ್ಪಟ್ಟದ್ದಂತೆ. ಈ ಮಯನೇ ರಾವಣನ ಮಾವ, ಮಂಡೋದರಿಯ ತಂದೆ! ಸುತ್ತಿ ಬಳಸಿ ಮತ್ತೆ ತೆಂಕಣದ ಲಂಕೆಗೇ ಬರುತ್ತದೆ ಬೇರು! ಆಸಕ್ತರು ಮೇಡಂ ಬ್ಲಾವಾತ್‍ಸ್ಕೀಯವರ ಪುಸ್ತಕಗಳನ್ನು ಓದಿನೋಡಿ ಎಂದು ಹೇಳಬಹುದಿತ್ತು; ಆದರೆ ಇಲ್ಲಿಂದ ಆರಂಭಿಸಿದರೆ, ಸತ್ಯವೇ ತಿಳಿಯದೆ ಕಳೆದುಹೋಗುವ ಅಪಾಯವಿದೆ! ಆದ್ದರಿಂದ ಭಾರತೀಯ ಭಾಷ್ಯಕಾರರಿಂದ ಆರಂಭಿಸುವುದು ಒಳ್ಳೆಯದು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಬೆನಕರೆ,
ಸೂರ್ಯ ಸಿದ್ಧಾಂತವನ್ನು ಒಂದಷ್ಟು ಓದಿದೆ. ಅದು ಕೃತಯುಗಾಂತ್ಯದಲ್ಲಿ ರಚಿತವಾದದ್ದು, ಸೂರ್ಯನೇ ಮಯಾಸುರನಿಗೆ ಹೇಳಿದ್ದು ಅನ್ನುವುದೆಲ್ಲ ಬಿಟ್ಟುಬಿಡೋಣ
ಒಂದು ಸಂಗತಿ ಮಾತ್ರ ನನಗೆ ಇನ್ನೂ ಬಿಡಿಸಲಾಗಿಲ್ಲ - ನಕ್ಷತ್ರಗಳ ಮುಳಗುಹುಟ್ಟುಗಳ ವಿಷಯ ಹೇಳುವಾಗ ಅಭಿಜಿತ್ (Vega), ಸ್ವಾತಿ(Arcturus), ಬ್ರಹ್ಮಹೃದಯ(Capella) ಮೊದಲಾದ ತಾರೆಗಳನ್ನೆಲ್ಲ, ಇವು ಹುಟ್ಟುವುದೂ ಇಲ್ಲ, ಮುಳುಗುವುದೂ ಇಲ್ಲ ಎಂದು ಹೇಳಲಾಗಿದೆ.
ಈಗ ಅಭಿಜಿತ್ circumpolar ಆಗಬೇಜಾದರೆ ಸುಮಾರು ೫೦ ಡಿಗ್ರಿ ಉತ್ತರ ರೇಖಾಂಶಕ್ಕೆ ಹೋಗಬೇಕಾಗುತ್ತೆ. ಅಯನಾಂಶದ ಕಾರಣದಿಂದ, ಹಿಂದೆ ಇದು ವ್ಯತ್ಯಾಸವಾಗಿದ್ದಿರಬಹುದಾದರೂ, ಭಾರತದ ಅಕ್ಷಾಂಶಗಳಲ್ಲಿ, ಕರ್ಕಾಟಕ ವೃತ್ತದ ಆಚೀಚೆ ಇದು ಸರ್ಕಮ್ ಪೋಲಾರ್ ಆಗಬೇಕಾದರೆ, ಬಹಳಷ್ಟು ಸಾವಿರ ವರ್ಷಗಳ ಹಿಂದೆ ಹೋಗಬೇಕಾಗುತ್ತಲ್ಲವೇ? ನಿಮಗೆ ಇದನ್ನು ಪರೀಕ್ಷಿಸಲು ಯಾವುದಾದರೂ ಮುಕ್ತ ತಂತ್ರಾಂಶವಿರುವುದರ ಬಗ್ಗೆ ಗೊತ್ತಿದೆಯೇ? ಅಥವಾ ಲೆಕ್ಕಾಚಾರ ಹಾಕಲು ನಿಮಗೇ ಗೊತ್ತಿದ್ದರೆ ಖಂಡಿತ ತಿಳಿಸಿ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಪ್ರಿಯ ಹಂಸಾನಂದಿ,
ಇಂತಹ ವಿಚಾರಗಳು ಮಹಾ ಪಂಡಿತೋತ್ತಮರಿಗೂ ಕಗ್ಗಂಟೇ ಸರಿ! ಇದನ್ನು ಬಿಡಿಸಹೊರಟು ತಾವೇ ಸಿಲುಕಿಕೊಂಡ ಘಟಾನುಘಟಿಗಳೂ ಇದ್ದಾರೆ.
ಹಿಂದೆ ಬಾಲಗಂಗಾಧರ ತಿಲಕರು, ಸೂರ್ಯಸಿದ್ಧಾಂತದ ಇದೇ ಉದಯಾಸ್ತವಿಲ್ಲದ ನಕ್ಷತ್ರಗಳ(ಸರ್ಕಂಪೋಲಾರ್) ಆಧಾರದ ಮೇಲೆ ಆಳವಾದ ಅಧ್ಯಯನ ನಡೆಸಿ, 'ಉತ್ತರಧ್ರುವದಲ್ಲಿ ವೇದಗಳ ತವರು' ಎಂಬಂಥ ಪುಸ್ತಕವನ್ನು ಪ್ರಕಟಿಸಿದರು(೧೯೦೩); ಇದು ೧೮೯೩ರಲ್ಲಿ ಪ್ರಕಟವಾದ ಅವರದೇ ಆದ 'ಒರೈಯನ್' ಪುಸ್ತಕದ ಮುಂದುವರಿಕೆಯೆಂದರೆ ತಪ್ಪಿಲ್ಲ. ವಿಚಿತ್ರವೆಂದರೆ, ಅವರ ವಾದಕ್ಕೆ ಮಣೆಹಾಕಿದರೆ ವೇದಗಳ ಕಾಲ ೪೦,೦೦೦ ವರ್ಷ ಹಿಂದೆಹೋಗುತ್ತದೆ! ಆದರೆ ಹಾರ್ವರ್ಡ್ ವಿವಿಯ ಸಂಶೋಧಕರು ತಿಲಕರ ಪುಸ್ತಕದ ಧೂಳನ್ನು ಮತ್ತೆ ಕೊಡವಿದ್ದಾರೆ! ಬೆಂಕಿಯುಂಡೆ ಭೂಮಿಯ ಧ್ರುವಪ್ರದೇಶಗಳು ಸಮಭಾಜಕವೃತ್ತಕ್ಕಿಂತ ಮೊದಲು ತಣ್ಣಗಾಗಹೊರಟಿದ್ದರಿಂದ, ಭೂಮಧ್ಯರೇಖೆಗೂ ಮುನ್ನವೇ ಸಂಸ್ಕೃತಿಯ ತವರಾಗಿದ್ದಿರಲು ಸಾಧ್ಯವೆನ್ನತೊಡಗಿದ್ದಾರೆ! ಸಾಲದ್ದಕ್ಕೆ 'ಧ್ರುವಚಲನೆ'ಗೂ ಮರುಜೀವ ಬಂದಿದೆ! ತಾಣ ಮರೆತುಹೋದೆ, ಮತ್ತೊಮ್ಮೆ ಕೊಂಡಿ ನೀಡುತ್ತೇನೆ.
ನನಗೆ(ನಿಮಗೂ) ತಿಳಿದಿರುವಂತೆ ಲಭ್ಯವಿರುವ ಎಂತಹ ತಂತ್ರಾಂಶವೇ ಆಗಲಿ, ಕ್ರಿ.ಪೂ೪೦೦೦ಕ್ಕಿಂತ ಹಿಂದೆ ಸರಿಯಾಗಿ ಗ್ರಹಗಣಿತ ಮಾಡಲು ಅಶಕ್ತವಾಗಿವೆ. ಎಲ್ಲೋ ೧೦೦೦೦ ಕ್ರಿ.ಪೂ ವರೆಗೂ ಸಾಧ್ಯವೆಂದು ಓದಿದ ನೆನಪು; ನನಗಂತೂ ತಿಳಿದಿಲ್ಲ!!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ನೀವ್ ಹೇಳುವದು ದಿಟ. ಬೂಮಿ ಸುತ್ತ ಇರುವ ಅಯಸ್ಕಾಂತೀಯ ವಲಯ ಕಳೆಯ ೧೫೦ ವರುಶಗಳಲ್ಲಿ ೧೦% ಕುಂದಿದೆ ಅಂತೆ. ಅಲಸ್ಕಾದಲ್ಲಿ ಉಂಟಾಗುವ ಈ ಈ ಸೊಬಗು ಬೆರಗು ಇನ್ನು ಐವತ್ತು ವರುಶಗಳಲ್ಲಿ ಕಣ್‍ಮರೆಯಾಗಲಿದೆ.
ಇದೇ ವೇಗದಲ್ಲಿ ಇದು ಮುಂದುವರೆದರೆ ೩೦೦೦ ನೇ ಇಸವಿಯ ಹೊತ್ತಿಗೆ ಬೂಮಿಯ ’ಅಯಸ್ಕಾಂತೀಯ ದ್ರುವ’ಗಳು ಅದಲು ಬದಲಾಗಲಿವೆ ಅಂತೆ. ಇದರಿಂದ ಎನೇನು ಬೇರೆತನಗಳು/ಬದಲಾವಣೆಗಳು ಉಂಟಾಗಲಿವೆಯೋ?
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಈ ಕೊಂಡಿಗಳನ್ನು ನೋಡಿ,
http://news.bbc.co.uk/1/hi/sci/tech/4520982.stm
ಮತ್ತು
http://www.scienceblog.com/cms/time_to_adjust_the_compass
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಸಂಗನಗೌಡರೆ,
ನಾನು ಹೇಳುತ್ತಿರುವುದು ಭೂಧ್ರುವಚಲನೆ! ಅಯಸ್ಕಾಂತೀಯ ಧ್ರುವ ಚಲನೆಯಲ್ಲ!
ತುಲನಾತ್ಮಕವಾಗಿ ಬರೆದ ಭೂವೈಜ್ಞಾನಿಕ ಲೇಖನವೊಂದು ಇಲ್ಲಿದೆ; ಆದರೆ ಇಲ್ಲಿರುವುದೆಲ್ಲ ೧೦೦% ಸತ್ಯವೆಂದು ನಾನು ನಂಬಿಲ್ಲ!
ಹಂಸಾನಂದಿಯವರಿಗೆ ನಾನು ಕೊಡಬೇಕೆಂದಿದ್ದ ಕೊಂಡಿಯ ವಿಷಯವೂ ಇಲ್ಲಿ ಅಡಗಿದೆ; ಓದಿನೋಡಿ:
http://www.matrixofcreation.co.uk/JGB/systematics-vol1-no3-203-232.htm
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಆಸಕ್ತರಿಗೆ,
ಬಾಲಗಂಗಾಧರ ಟಿಳಕರ "Arctic Home in the Vedas" ಪುಸ್ತಕದ ಪಿಡಿಎಫ್ ಪ್ರತಿ ಇಲ್ಲಿ ಇದೆ:
http://cakravartin.com/wordpress/wp-content/uploads/2007/02/tilak.pdf
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
" ಭೂಮಿಯ ಉತ್ತರಾರ್ಧ ಗೋಳ ದೇವತೆಗಳ ಕಡೆ, ದಕ್ಷಿಣಾರ್ಧ ಗೋಳ ಅಸುರರದ್ದಂತೆ. ದೇವತೆಗಳಿಗೆ ಆರುತಿಂಗಳು ಹಗಲಾದಾಗ, ರಾಕ್ಷಸರಿಗೆ ಆರು ತಿಂಗಳು ರಾತ್ರಿ." ಇದು ಭಾರತದಲ್ಲಿನ ಹಳೆಯ ಖಗೋಳ ಶಾಸ್ತ್ರದದಲ್ಲಿ ಬರೆದಿರುವುದೆಂದರೆ ಈ ಮಾತು ಕೇವಲ ಭಾರತಕ್ಕೆ ಸೀಮಿತವಾಗಿಲ್ಲವಷ್ಟೆ? ಯಾಕೆ ಈ ಪ್ರಶ್ನೆ ಅಂದರೆ ಮೊದಲಿನಿಂದಲೂ ಪಠ್ಯಪುಸ್ತಕಗಳಲ್ಲಿ ಭಾರತದ ಉತ್ತರ ಭಾಗದಲ್ಲಿರುವವರು ಆರ್ಯರೆಂದೂ ದಕ್ಷಿಣದವರು ದ್ರಾವಿಡರೆಂದೂ( ಆರ್ಯ- ದೇವತಾ ಕುಲ! ದ್ರಾವಿಡ-ರಾಕ್ಷಸ ಕುಲ!) ಇದೆ.
ಜಯಲಕ್ಷ್ಮೀ.ಪಾಟೀಲ್.