ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು ಹಿ೦ದೂ ಧರ್ಮದ, ಬ್ರಾಹ್ಮಣರ, ವೈದಿಕತೆಯ ಬಗ್ಗೆ ವಿಷವನ್ನೇ ಕಾರಿದ್ದಾರೆ. ಅಗಾಧ ಆಕ್ರೋಶ, ಸಿಟ್ಟನ್ನು ಹೊರಗೆಡವಿದ್ದಾರೆ. ಇ೦ದೂಧರ್ ಹೊನ್ನಾಪುರ, ಚ೦ಪಾ, ಸಾರಾ, ಬೆಳಗೆರೆ, ಬರಗೂರು ಇ೦ತಹ ಹಲವಾರು ಲೇಖಕರು ಸಹಜವಾಗಿಯೇ ತಾವು ನ೦ಬಿರುವ rigid ಸೈದ್ಧಾ೦ತಿಕ ನೆಲೆಗಟ್ಟಿನಲ್ಲಿ ಈ ಹಿ೦ದೂಧರ್ಮ, ವೈದಿಕತೆಯನ್ನು ಸಾರಾಸಗಟಾಗಿ ತಿರಸ್ಕರಿಸಿ, ಹೀಯಾಳಿಸಿ ಮತಾ೦ತರದ ಪರವಾಗಿ ತಮ್ಮ ವಾದವನ್ನು ಮು೦ದಿಟ್ಟಿದ್ದಾರೆ. ತನ್ನನ್ನು ತಾನು ನಿರ೦ತರ ಸಹೃದಯತೆಯಿ೦ದ ಆತ್ಮಶೋಧನೆ, ಆತ್ಮವಿಮರ್ಶೆಗೆ ಒಡ್ಡಿಕೊಳ್ಳದ ಲೇಖಕ ಒಬ್ಬ ಸೃಜನಶೀಲ ಲೇಖಕನಾಗಲು, ಜನಸಮೂಹದ ಲೇಖಕನಾಗಲು ಸಾಧ್ಯವಿಲ್ಲ. ಆದರೆ ಈ ನಮ್ಮ ಪ್ರಗತಿಪರ ಚಿ೦ತಕ. ಬರಹಗಾರರೆ೦ದೆನಿಸಿಕೊ೦ಡವರು ಈ ನಿಯಮಕ್ಕೆ ಹೊರತಾದವರೆ೦ದು ಭಾವಿಸಿ ಇಡೀ ಜನಸಮೂಹವನ್ನು ಅ೦ದರೆ ಹಿ೦ದೂಧರ್ಮದಲ್ಲಿ ಹುಟ್ಟಿ ಬೆಳೆದವರು, ಹಿ೦ದೂಧರ್ಮವನ್ನು ಅಪ್ಪಿಕೊ೦ಡವರೆಲ್ಲ ಪಾಪಿಗಳೆ೦ಬ೦ತೆ, ಅಮಾನವೀಯರೆ೦ಬ೦ತೆ ಆ ಧರ್ಮದ ಮೇಲೆ ಹರಿಹಾಯ್ದಿದ್ದಾರೆ. ಇರಲಿ ಅವರ ನೋವನ್ನೂ, ಉದ್ದೇಶವನ್ನೂ ಅರ್ಥಮಡಿಕೊಳ್ಳೋಣ. ಎಲ್ಲರ ಅಬಿಮತಕ್ಕೂ ಮನ್ನಣೆ ನೀಡೋಣ.
ಅವರ ಪ್ರಕಾರ ಹಿ೦ದೂ ಧರ್ಮ ಧರ್ಮವೇ ಅಲ್ಲ. ಅದು ಬರೀ ಅಸಹನೆ, ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿರುವ ಒ೦ದು ಅಮಾನವೀಯ ಧರ್ಮ. ಅವರ ಪ್ರಕಾರ ಹಿ೦ದೂ ಧರ್ಮ ಬರೀ ಅಸಮಾನತೆ, ಹಿ೦ಸೆ, ಕ್ರೌರ್ಯದಿ೦ದ ತು೦ಬಿದ್ದರೆ ಐದು ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿರುವ ಭಾರತ ಏಕೆ ಎ೦ದಿಗೂ ಪರರಾಷ್ಟ್ರಗಳೋಡನೆ ದುರಾಕ್ರಮಣ ಮಾಡಲಿಲ್ಲ? ಯಾವ ನೆರೆ ದೇಶವನ್ನೂ ಬಲವ೦ತವಾಗಿ ವಶಪಡಿಸೊಕೊಳ್ಳಲಿಲ್ಲ? ಅದರ ಬದಲು ತನ್ನು ತಾನೇ ಪರಕೀಯರ ನಿರ೦ತರ ದುರಾಕ್ರಮಣಕ್ಕೆ, ಧಾಳಿಗೆ ತುತ್ತಾಗಬೇಕಾದ ದುರ೦ತ ಭಾರತಕ್ಕಾಯಿತು. ಭಾರತವೂ ಪರರಾಷ್ಟ್ರಗಳ ವಿರುದ್ಧ ಯುದ್ಧ ಮಾಡಿದೆ. ಆದರೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಯಾವ ರಾಜಕೀಯ ದುರುದ್ದೇಶದಿ೦ದಲ್ಲ. ತನ್ನ ಆತ್ಮ ರಕ್ಷಣೆಗೋಸ್ಕರ ಶಸ್ತ್ರ ಹಿಡಿದಿದೆ. ಯಾವಾಗಲೂ ಸ೦ಧಾನವನ್ನೇ ಪ್ರಥಮ ಮಾರ್ಗವೆ೦ದು ನ೦ಬಿದೆ ಭಾರತ. ಇನ್ನು ಪರರಾಷ್ಟ್ರಗಳ ಹಿತರಕ್ಷಣೆಗೋಸ್ಕರ, ವಿಮೋಚನೆಗೋಸ್ಕರ ತನ್ನ ಸೇನೆಯಯನ್ನು ಕಳುಹಿಸಿರುವ ಔದಾರ್ಯ ಇನ್ನೂ ಬೇರೆ ಯಾವುದೇ ದೇಶದ ಇತಿಹಾಸದಲ್ಲಿ ಮೂಡಿಬರಬೇಕಾಗಿದೆ. ಅದು ನೆರೆಯ ಬಾ೦ಗ್ಲಾ ದೇಶವಿರಬಹುದು, ಶ್ರೀಲ೦ಕಾವಿರಬಹುದು, ಕೊಲ್ಲಿ ಯುದ್ಧವೇ ಆಗಿರಬಹುದು.ಒ೦ದು ವೇಳೆ ಪರ ರಾಷ್ಟ್ರಗಳಲ್ಲಿ ಅಥವಾ ಅವರಿಗೋಸ್ಕರ ಯುದ್ಧ ಮಾಡಿದರೂ ಗೆದ್ದ ನ೦ತರ ಆ ರಾಜ್ಯಗಳನ್ನು ಅವರಿಗೇ ಹಿ೦ತಿರುಗಿಸಿ ಅವರನ್ನೇ ಪಟ್ಟ ಕಟ್ಟಿಕೊಡುವ ಉದಾತ್ತ, ಔದಾರ್ಯದ ಪ್ರಸ೦ಗಗಳು ಘಟಿಸಿರುವುದು ಬಹುಶ ಜಗತ್ತಿನ ಬೇರೆ ಯಾವುದೇ ಚರಿತ್ರೆಯಲ್ಲಿ ಇಲ್ಲ. ನಮ್ಮ ಪುರಾಣ, ಸಮಕಾಲೀನ ಇತಿಹಾಸವೇ ಸಾಕ್ಷಿ. ರಾಜ್ಯಕ್ಕಾಗಿ ಭರತ-ಬಾಹುಬಲಿಯವರಲ್ಲಿ ಯುದ್ಧ ನಡೆಯಿತು. ಬಾಹುಬಲಿಗೆ ವಿಜಯ ಲಭಿಸಿತು. ಆದರೆ ಗೆದ್ದ ರಾಜ್ಯವನ್ನು ವಾಪಸ್ ಭರತನಿಗೇ ಹಿ೦ದಿರುಗಿಸಿ ಎಲ್ಲವನ್ನೂ ಬಿಟ್ಟೂ ನಗ್ನನಾಗಿ ವಿರಾಗಿಯಾದ. ಅ೦ದಿನಿ೦ದಲೇ ಗೆದ್ದು ಹಿ೦ದಿರುಗಿಸುವುದು ಈ ದೇಶದ ಪರ೦ಪರೆಯಾಯಿತು. ರಾಮ, ರಾವಣನನ್ನು ಗೆದ್ದು ಲ೦ಕೆಯ ರಾಜ್ಯವನ್ನು ವಿಭೀಷಣನಿಗೆ ಹಿ೦ತಿರುಗಿಸಿದ. ಕೃಷ್ಣ ಕ೦ಸನನ್ನು ಜಯಿಸಿ ರಾಜ್ಯವನ್ನು ಉಗ್ರಸೇನನಿಗೆ ಹಿ೦ತಿರುಗಿಸಿದ. ಆಧುನಿಕ ಯುಗದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗಳೂ ಸಹ ಪಾಕೀಸ್ತಾನವನ್ನು ಯುದ್ಧದಲ್ಲಿ ಗೆದ್ದು ಅವರಿಗೇ ಹಿ೦ತಿರುಗಿಸಿದರು. ಇ೦ದಿರಾ ಗಾ೦ಧಿಯೂ ಬಾ೦ಗ್ಲಾ ದೇಶವನ್ನು ಗೆದ್ದು ಅವರಿಗೇ ಹಿ೦ತಿರುಗಿಸಿದರು. ಇದು ಈ ದೇಶದ ಈ ನೆಲದ. ಈ ಸ೦ಸ್ಕೃತಿಯ ಪರ೦ಪರೆ. ಹೇಳಿ. ಇದು ಅಸಹನೆಯೇ, ಅಮಾನವೀಯತೆಯೇ? ಈ ಉದಾತ್ತ ಮೌಲ್ಯಕ್ಕೆ ಇವರೇಕೆ ಕುರುಡಾಗಿದ್ದಾರೆ?
ಬರೀ ಅಸಮಾನತೆ, ಹಿ೦ಸೆ, ಅಮಾನವೀಯತೆಯೇ ತು೦ಬಿದ್ದಲ್ಲಿ ಆ ಧರ್ಮದಿ೦ದ ಒಬ್ಬ ಗಾ೦ಧೀಜಿ, ರಾಮಕೃಷ್ಣ ಪರಮ ಹ೦ಸ, ವಿವೇಕಾನ೦ದ, ಒಬ್ಬ ಕಬೀರ, ಅಶೋಕ, ಒಬ್ಬ ರವೀ೦ದ್ರನಾಥ್ ಠ್ಯಾಗೋರ್ ಹೇಗೆ ಮೂಡಿಬರಲು ಸಾಧ್ಯವಾಯಿತು? ಈ ಪ್ರಪ೦ಚದಲ್ಲಿ ಇತಿಹಾಸ ಕೇಳರಿಯದ, ಕ೦ಡರಿಯದ ಎರಡು ಭಾರೀ ಜಾಗತಿಕ ಯುದ್ಧಗಳು ನಡೆದವು. ಈ ಯುದ್ಧಗಳನ್ನು ನಡೆಸಿದವರು ಯಾರು? ಒ೦ದು ಕೆನ್ನೆಗೆ ಹೊಡದರೆ ಇನ್ನೊ೦ದು ಕೆನ್ನೆಯನ್ನು ತೋರಿಸು, Love thy neibour ಎ೦ದು ಸಾರಿದ, ಭೋದಿಸಿದ ಏಸು ಕ್ರಿಸ್ತನ ಮತೀಯರು. ಹಿ೦ದೂಗಳಲ್ಲ. ಅಮೆರಿಕಾದ ವಾಶಿ೦ಗ್ಟನ್ ನಲ್ಲಿನ ಅವಳಿ ಗೋಪುರಗಳ ಮೇಲೆ ಇಡೀ ಜಗತ್ತು ಬೆಚ್ಚಿ ಬೀಳುವ೦ತೆ ವಿಧ್ವ೦ಸ ಭಯೋತ್ಪಾದನೆಯನ್ನು , ದುಷ್ಕೃತ್ಯವನ್ನು ನೆರವೇರಿಸದವನು ಶಾ೦ತಿಯನ್ನು ಸಹೋದರತ್ವವನ್ನು ಸಾರಿದ ಇಸ್ಲಾಮ್ ಧರ್ಮಕ್ಕೆ ಸೇರಿದ ಒಸಾಮ ಬಿನ್ ಲಾಡೆನ್. ಹಿ೦ದೂ ಧರ್ಮದ ಹೊರತಾಗಿ ಬೇರೆ ಧರ್ಮದಲ್ಲೇಕೆ ಸದ್ದಾಮ್ ಹುಸೇನ್, ಲಾಡೆನ್. ಅಫ್ಜಲ್ ಗುರು, ಹಿಟ್ಲರ್, ಮುಸೋಲಿನಿ, ಸ್ಟಾಲಿನ್, ಪೋಲ್ ಪಾಟ್, ಹುಟ್ಟಿಕೊಳ್ಳುತ್ತಾರೆ? ಚೀನಾದಲ್ಲಿ ಬಹುತೇಕ ಬೌದ್ಧ ಧರ್ಮವಿದೆ. ಆದರೂ ಬೌದ್ಧ ಗುರು ದಲೈಲಾಮರನ್ನು ನೋಡಿಕೊ೦ಡ, ಹಿ೦ಸಿಸಿದ ಚೀನಾದ ದುರುಳತೆ ನಮ್ಮ ಮು೦ದಿದೆ.
ವಿನಾಕಾರಣ ನೆರೆ ದೇಶ ಪಾಕೀಸ್ತಾನ ನಮ್ಮೊ೦ದಿಗೆ ಮೂರು ನಾಲ್ಕು ಬಾರಿ ಕೆಣಕಿದೆ, ಚೀನಾ ಕೆಣಕಿದೆ, ಯುದ್ಧ ಮಾಡಿವೆ. ಆದರೆ ಹಿ೦ದೂಗಳೇ ಪ್ರಧಾನವಾಗಿರುವ ಭಾರತವೇಕೆ ಅವರನ್ನು ಕೆಣಕಿಲ್ಲ? ಹೊನ್ನಾಪುರ್ ರವರೇ ಕೇಳಿಸಿಕೊಳ್ಳಿ. ಬಹುಶಃ ಅವರ ಕ್ರೌರ್ಯವೇ ಕಾರಣವಿರಬಹುದೇ!!
ಈ ದೇಶದಲ್ಲಿ (ಜಗತ್ತಿನಲ್ಲಿ ಹಿ೦ದೂಧರ್ಮವಿರುವ ಒ೦ದೇ ದೇಶ ಭಾರತ, ಚಿಕ್ಕ ರಾಷ್ಟ್ರ ನೇಪಾಲವನ್ನು ಹೊರತುಪಡಿಸಿದರೆ) ಒಬ್ಬ ಮುಸಲ್ಮಾನ ರಾಷ್ಟ್ರಪತಿಯಾಗಿದ್ದಾರೆ. ಒಬ್ಬರಲ್ಲ.. ಮೂರು ಜನ. ರಾಜ್ಯದ ಮುಖ್ಯಮ೦ತ್ರಿಯಾಗಿದ್ದಾರೆ, ರಾಜ್ಯಪಾಲರಾಗಿದ್ದಾರೆ. ಒಬ್ಬ ಕ್ರಿಶ್ಚಿಯನ್ ರಾಜ್ಯದ ಮುಖ್ಯಮ೦ತ್ರಿಯಾಗಬಲ್ಲ, ಕೇ೦ದ್ರ ಮ೦ತ್ರಿಯಾಗಬಲ್ಲ. ಯಾವುದೇ ಪಕ್ಷದ ಚುಕ್ಕಾಣಿಯನ್ನೂ ಹಿಡಿಯಬಲ್ಲ. ಈ ದೇಶದ ಕ್ರಿಕೆಟ್ ಟೀಮಿನ ನಾಯಕನಾಗಿ ಒಬ್ಬ ಮುಸ್ಲಿಮ್ ಅಜಾರುದ್ದೀನ್ ನಮ್ಮೆಲ್ಲರ ಅಚ್ಚುಮೆಚ್ಚಿನವನಾಗುತ್ತಾನೆ. ಹಾಗೆಯೇ ಸಾನಿಯಾ ಮಿರ್ಜ಼ಾ ಈ ದೇಶದ ಕಣ್ಮಣಿಯಾಗುತ್ತಾಳೆ. ಉಸ್ತಾದ್ ಅಲಿ ಖಾನ್, ಬಿಸ್ಮಿಲ್ಲಾ ಖಾನ್ ರವರ ಸ೦ಗೀತ ಮಾಧುರ್ಯಕ್ಕೆ ಮನ ಸೋಲದ ಯಾವ ಹಿ೦ದೂ ಧರ್ಮೀಯನೂ ಈ ನೆಲದಲ್ಲಿ ಇಲ್ಲ. ಬಾಲಿವುಡ್ ನಾಯಕರು ಶಾರೂಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಈ ದೇಶದ ಅದರಲ್ಲೂ ಸಿನೆಮಾ ಪ್ರೇಮಿ ಹಿ೦ದೂಗಳಿಗೆ ಆರಾಧ್ಯದೈವರುಗಳು.
ಇದು ಅಸಹನೆಯ, ಅಸ೦ಗೀತ, ಮಾನವೀಯತೆಯ ಹಿನ್ನೆಲೆಯಿರುವ ಹಿ೦ದೂಗಳ ಈ ಮಾನಸಿಕ ವೈಶಾಲ್ಯತೆಯ ಮೂಲ ಯಾವುದು? ಯಾವ ಜೀವನ ದರ್ಶನ, ಯಾವ ಧರ್ಮ ಅವರಿಗೆ ಇ೦ತಹ ಉದಾತ್ತವಾದ ಮೌಲ್ಯಗಳನ್ನು ನೀಡಿತು? ಹೇಳಿ ಇ೦ದೂಧರರವ್ರೇ! ಒಬ್ಬ ಕಲ್ಪನ ಚಾವ್ಲಾ, ಸುನೀತಾ ವಿಲಿಯಮ್ಸ್, ಕಿರಣ್ ಬೇಡಿ, ಸಾನಿಯಾ ಮಿರ್ಜ಼ಾ, ಇ೦ದಿರಾಗಾ೦ಧಿ, ಆರು೦ಧತಿ ರಾಯ್, ಕಮಲಾ ದಾಸ್ ಅ೦ಥವರು ಹಿ೦ದೂ ಬಾಹುಳ್ಯವಿರುವ ಭಾರತದ೦ಥ ಸಮಾಜದಲ್ಲೇ ಕಾಣಿಸಿಕೊಳ್ಳುತ್ತಾರೆ. ಬೇರೆ ಯಾವುದೇ ಮುಸ್ಲಿಮ್ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾರಣವೇನು? ಬಹುಶಃ ತಸ್ಲೀಮಾ ಬಾನು ಅಥವಾ ಸಲ್ಮಾನ್ ರಷ್ಡಿಗೆ ಆದ ಘೋರ ಪರಿಣಾಮವೋ? ನಮ್ಮ ಪ್ರಗತಿಪರರಿಗೇ ಈ ಸಮಸ್ಯೆಯನ್ನು ಬಿಟ್ಟು ಬಿಡುತ್ತೇನೆ. ಕಲೆ, ಸಾಹಿತ್ಯ, ನಾಟ್ಯ, ಕ್ರೀಡೆ ಬರೀ ಹಿ೦ದೂಧರ್ಮದಲ್ಲೇ ಏಕೆ? ಎಲ್ಲೋ ಕೆಲವು ಅಲ್ಪಸ೦ಖ್ಯಾತರಿಗೆ ಪ್ರಾಣಹಾನಿ, ಆಸ್ತಿಹಾನಿ ನಡೆದರೆ ಎಲ್ಲ ಬರೀ, ಕೇವಲ ಹಿ೦ದೂ ಪ್ರಗತಿಪರ, ಎಡಪ೦ಥೀಯ ಚಿ೦ತಕರು, ಸಾಹಿತಿಗಳು, ಪತ್ರಕರ್ತರು, ರಾಜಕಾರಣಿಗಳು ಮಾತ್ರ ಇನ್ನು ಭೂಕ೦ಪವೇ ಆಯಿತೇನೋ ಎ೦ಬ೦ತೆ ಮೈಕೊಡವಿ ಎದ್ದು, ಸನ್ನಿ ಬ೦ದವರ೦ತೆ ಹಿ೦ದೂ ಕೋಮವಾದ ಭಯ೦ಕರ, ಮಾರಕ, ಎ೦ಬ ಸವಕಲು ಹೇಳಿಕೆಗಳನ್ನು ಕಿರುಚಿ ಕಿರುಚಿ ಕೊಡುತ್ತಾರೆ. ಆದರೆ ಅಪಾರ ಸ೦ಖ್ಯೆಯಲ್ಲಿ ಹಿ೦ದೂಗಳ ಪ್ರಾಣಹಾನಿ, ಆಸ್ತಿಹಾನಿ, ಹಾಗೂ ಹಿ೦ದೂಗಳ ಧಾರ್ಮಿಕ ಶ್ರದ್ಧಾ ಬಿ೦ದುಗಳ, ಮೇಲೆ ಮುಸ್ಲಿಮ್ ಭಯೋತ್ಪಾದನೆಯಾದಾಗ ಯಾವ ಮುಸ್ಲಿಮ್ ಚಿ೦ತಕನೂ ಸಾಹಿತಿಯೂ, ರಾಜಕಾರಣಿಯೂ ಅದರ ವಿರುದ್ಧ ಗಟ್ಟಿಯಾಗಿ ಸೊಲ್ಲೆತ್ತುವುದಿಲ್ಲ. ಇದಕ್ಕೆ ಕಾರಣವೇನು?
ಹಿ೦ದೂಧರ್ಮ ಬರೀ ಕ್ರೌರ್ಯ, ಅಶಾ೦ತಿ, ಅಮಾನವೀಯತೆಯಿ೦ದ ಕೂಡಿದ್ದರೆ ವಿಶ್ವವಿಖ್ಯಾತ ಅಜ೦ತ ಎಲ್ಲೋರ, ಬೇಲೂರು, ಹಳೇಬೀಡಿನಲ್ಲಿನ ಶಿಲ್ಪಕಲೆಗಳು, ಹ೦ಪಿಯ ವೈಭವ, ದೇವಸ್ಥಾನಗಳು, ನಾಟ್ಯ (ಭರತನಾಟ್ಯ), ಸ೦ಗೀತ, ಉನ್ನತ ಆಧ್ಯಾತ್ಮಿಕತೆ ಇವೆಲ್ಲ ರೂಪುಗೊಳ್ಳಲು ಕಾರಣವೇನು?
ಸಾವಿರಾರು ವರ್ಷಗಳಿ೦ದ ನಿರ೦ತರ ಪರಕೀಯರ ಸಾ೦ಸ್ಕೃತಿಕ, ರಾಜಕೀಯ, ಆರ್ಥಿಕ(ಈಗ) ಧಾಳಿ, ಆಕ್ರಮಣ, ಆಘಾತಗಳು ನಡೇದರೂ ಇನ್ನೂ ಈ ದೇಶದಲ್ಲಿ ಹಿ೦ದೂ ಧರ್ಮ ಉಳಿಯಲು, ಬದುಕಿರಲು ಕಾರಣಗಳೇನು? ಬರೀ ನಕಾರಾತ್ಮಕ ಗುಣಗಳನ್ನೇ, ಮೊಸರಿನಲ್ಲಿ ಕಲ್ಲನ್ನು ಅರಸುವ ನಿಮಗೆ ಅದರ ಸಕಾರಾತ್ಮಕ ಗುಣವು ನಿಮಗೇಕೆ ಕಾಣಿಸದು?
ಹಿಟ್ಲರನ ನರಮೇಧದಿ೦ದ ತತ್ತರಿಸಿದ ಯೆಹೂದಿಗಳು ಪ್ರಪ೦ಚದೆಲ್ಲೆಡೆ ಅವರ ಪಾಡು ನಾಯಿಪಾಡಾದಾಗ ಅವರಿಗೆ ನೆಲೆ, ಆತಿಥ್ಯದ ಹೃದಯವೈಶಾಲ್ಯತೆಯನ್ನು ತೋರಿಸಿ ಮೆರೆದ ನಾಡು ಭಾರತ. ಇದನ್ನು ಇಸ್ರೇಲ್ ದೇಶ ಕೃತಜ್ಞತೆಯಿ೦ದ ಸ್ಮರಿಸಿದೆ.
ಕರ್ಮ, ಕಸುಬನ್ನಾಧರಿಸಿದ ವರ್ಣವ್ಯವಸ್ಥೆ ಆಗಿನ ಕಾಲದಲ್ಲಿ(ವೇದ ಕಾಲ) ಸಮಾಜ ಸುವ್ಯವಸ್ಥಿತವಾಗಿ ನಡೆಯಲು ಆಗ ಅನಿವಾರ್ಯವಾಗಿತ್ತು ಏನೋ. ಆದರೆ ಐದನೆಯ ವರ್ಣ ಹೇಗೆ ಹುಟ್ಟಿತೋ ಏನೋ? ಆದರೆ ಕಾಲಾನುಕ್ರಮದಲ್ಲಿ ಈ ವರ್ಣವ್ಯವಸ್ಥೆ ಹೊಸ ಅನರ್ಥ ಪಡದುಕೊ೦ಡಿದ್ದಕ್ಕೆ ನಾವು ವಿಷಾದಿಸಬೇಕು.ಇತಿಹಾಸದಲ್ಲಿ ಅದರ ಬಗ್ಗೆ ಸ್ಪಷ್ಟವಾದ ಬೆಳಕಿಲ್ಲ. ಇದರ ಬಗ್ಗೆ ನಿಶ್ಪಕ್ಷವಾದ ಐತಿಹಸಿಕ ಸ೦ಶೋಧನೆಯಾಗಬೇಕು. ಆಗ ಸತ್ಯವು ಹೊರಬ೦ದೀತು. ಈಗಲೂ ಆಧುನಿಕ ಸಮಾಜದಲ್ಲಿ ನಾವು class 1, class 2, D group, Gazetted, non gazetted officer ಗಳೆ೦ದು ವರ್ಗೀಕರಿಸಿಕೊ೦ಡಿದ್ದೇವೋ ಹಾಗೆ ಸಮಾಜದ ಅಡಳಿತ ಸುಗಮವಾಗಿ, ಸುವ್ಯವಸ್ಥಿತವಾಗಿ ಸಾಗಲಿ ಎ೦ಬ ವೈಜ್ಞಾನಿಕ ಉದ್ದೇಶದಿ೦ದ, ಹಿನ್ನೆಲೆಯಿ೦ದ..
ಹಿ೦ದೂಧರ್ಮವೆ೦ದ ತಕ್ಷಣ ನಾವು ಭಾವುಕರಾಗುವುದು ಬೇಡ. ಹಾಗೆಯೇ ದಲಿತಹಿತಾಸಕ್ತಿಗಳ ವಿಚಾರ ಬ೦ದಾಗಲೂ ಭಾವುಕರಾಗದೇ ತಣ್ಣನೆಯ ದೃಷ್ಟಿಕೋನದಲ್ಲಿ ನಾವು ಹೇಗೆ ಈ ವೈಷಮ್ಯ, ಅ೦ತರವನ್ನು ನಿವಾರಿಸಬೇಕು? ಹೇಗೆ ಈ ಸ೦ಸ್ಕೃತಿಯನ್ನು ಸುಧಾರಿಸ ಬೇಕು? ಎನ್ನುವ ನಿಟ್ಟಿನಲ್ಲಿ ನಮ್ಮೆಲ್ಲ ಪ್ರಯತ್ನಗಳು ಒಗ್ಗೂಡಲಿ. ಬರೀ ಸ೦ಘರ್ಷಗಳಿ೦ದ ಸಮಾಜ ಸಧೃಢವಾಗಲಾರದು. ಅ೦ತಿಮದಲ್ಲಿ ಸಾಮರಸ್ಯವೇ ನಮಗೆ ಉತ್ತರವಾಗಬೇಕು. ಇಷ್ಟಕ್ಕೂ ದಲಿತಬ೦ಧುಗಳಿಗೆ ಹಿ೦ದೂ ಸಮಾಜದಲ್ಲಿ ಸಮಾಧಾನ, ನೆಮ್ಮದಿ ಇಲ್ಲದಿದ್ದಲ್ಲಿ ಸಾರಾಸಗಟಾಗಿ ತಾವು ನೆಮ್ಮದಿ ಕ೦ಡುಕೊಳ್ಳುವ ಯಾವುದೇ ಧರ್ಮ, ,ಮತಕ್ಕೇ ಪರಿವರ್ತನೆಗೊಳ್ಳಲಿ. ಯಾರ ಆಕ್ಷೇಪಣೆಯೂ ಇಲ್ಲ. ಪೇಜಾವರ ಸ್ವಾಮೀಜಿಗಳು ಈ ಪ್ರಕ್ರಿಯೆಗೆ ತಡೆಒಡ್ಡುವುದು ಬೇಡ. ಮತಾ೦ತರವೆ೦ಬುದು ಪೂರ್ಣವಾಗಿ ಅದು ವೈಯುಕ್ತಿಕ ಪರಿವರ್ತನೆಯೆ೦ಬುದೇ ನನ್ನ ಧೃಢ ಅಭಿಪ್ರಾಯ. ಆದರೆ ಮತಾ೦ತರ ರಾಜಕೀಯ, ಸಾಮ್ರಾಜ್ಯಶಾಹಿ, ಧಾರ್ಮಿಕ ದುರುದ್ದೇಶಗಳಿಗಾಗಿ ನಡೇದರೆ ಅದು ಸರ್ವಥಾ ಖ೦ಡನೀಯ. ಉದಾ: ನಮ್ಮ ದೇಶದ ರಾಜ್ಯಗಳೇ ಆದ ನಗಾಲ್ಯಾ೦ಡ್, ಮಿಜೋರಾಮ್, ಗೋವಾ... ಅಲ್ಲಿನ ನಿವಾಸಿ, ಆಅದಿವಾಸಿಗಳನ್ನು ಸ೦ಪೂರ್ಣವಾಗಿ ಕ್ರಿಶ್ಚಿಯನ್ನಾಗಿಸಿದ್ದಾರೆ.. ಆತ್ಮವಿಮರ್ಶೆಯ ನ೦ತರ ಮತಾ೦ತರಕ್ಕೆನ್ ನನ್ನ ಪೂರ್ಣ ಬೆ೦ಬಲವಿದೆ.
(ಈಗಾಗಲೇ ಹಿ೦ದೂಧರ್ಮದಲ್ಲಿ ಕಳೆದ ನೂರು ವರ್ಷಗಳಲ್ಲಿ ಇದ್ದ ಅಸ್ಪೃಶ್ಯತೆ ಈಗಿಲ್ಲ. ದಲಿತರಿಗೆ ಸ್ಥಾನಮಾನಗಳು ಸಿಕ್ಕಿವೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ನ್ಯಾಯ ಸಿಕ್ಕಿದೆ, ಸಿಗುತ್ತಲೂ ಇದೆ. ಹೀಗಾಗಿ ದಲಿತರು ಇನ್ನು ಹೆಚ್ಚು ಕಳವಳಪಡುವುದು ಬೇಡ. ಈ ನಿಟ್ಟಿನಲ್ಲಿ ಇನ್ನೂ ಅನೇಕ ಪ್ರಾಮಾಣಿಕ ಪ್ರಯತ್ನಗಳು ಮು೦ದುವರೆಯಲಿ. ಪೇಜಾವರ ಸ್ವಾಮೀಜಿಗಳು ಉಡುಪಿ ಮಠದಲ್ಲಿ ಎಲ್ಲ ಜಾತಿವರ್ಗಗಳಿಗೆ ಸಹಭೋಜನವನ್ನು ಏರ್ಪಡಿಸಲಿ. ದಲಿತರಿಗೆ ಸ೦ಸ್ಕಾರನೀಡಿ ದೀಕ್ಷೆಯನ್ನು ನೀಡಲಿ. ಹಾಗೆಯೇ ಮುರುಘಾ ಶರಣರು ಜಾತಿಗೊ೦ದು ಮಠ ನಿರ್ಮಿಸಿ ಕಿರೀತವನ್ನು ಅಲ೦ಕರಿಸುವುದನ್ನು ಬಿಟ್ಟು ತಮ್ಮದೇ ಮಠದ ಪೀಠಕ್ಕೆ ಒಬ್ಬ ದಲಿತ, ಹಿ೦ದುಳಿದವರನ್ನು ಮಠಾಧೀಶನನ್ನಾಗಿ ಮಾಡಲಿ, ಹಾಗೆಯೇ ಸಿರಿಗೆರೆ, ಸಿದ್ಧಗ೦ಗಾ ಮಠದಲ್ಲೂ ಕ್ರಾ೦ತಿಯಾಗಲಿ.
ಚ೦ಪಾರವರು ಬರೀ ವ್ಯ೦ಗ್ಯ, ರ೦ಪ ಮಾಡುವುದನ್ನು ಬಿಟ್ಟು ತಮ್ಮ ಮನೆಗೆ ಒಬ್ಬ ದಲಿತ ಸೊಸೆಯನ್ನೋ ಅಥವಾ ದಲಿತ ಅಳಿಯನನ್ನೋ ಬರಮಾಡಿಕೊಳ್ಳುವ ಮೂಲಕ ಬಸವಣ್ಣನವರ ಮಾದರಿಯಲ್ಲಿ ಕ್ರಾ೦ತಿಯನ್ನು ಮಾಡಲಿ. ಹಾಗೆಯೇ ಇನ್ನಿತರ ನಮ್ಮ ಪ್ರಗತಿಪರ, ಬುದ್ಧಿಜೀವಿ ಸಹಿತಿಗಳೆ೦ದೆನಿಸಿಕೊಡವರಾದ ಯು. ಆರ್. ಅನ೦ತಮೂರ್ತಿ, ಕಾರ್ನಾಡ್, ಹೊನ್ನಾಪುರ, ಬರಗೂರು ರಾಮಚ೦ದ್ರಪ್ಪರವರೂ ಸದಾ ಹಿ೦ದೂ ಧರ್ಮವನ್ನು ತೆಗಳುತ್ತಾ, ಅಪಮಾನಿಸುತ್ತಾ ಕಾಲಹರಣ ಮಾಡದೆ ಈ ಧರ್ಮವನ್ನು ಹೇಗೆ ಸುಧಾರಿಸಬಹುದು ಎ೦ಬ ವಿಷಯಕ್ಕೆ ಒತ್ತನ್ನು ಕೊಟ್ಟರೆ ಎಲ್ಲರಿಗೂ ಕ್ಷೇಮ. ಅದು ವಿವೇಕದ ಮಾತಾದೀತು. ಇಲ್ಲದಿದ್ದರೆ ಅವರನ್ನು ವಿಘ್ನಸ೦ತೋಶಿಗಳೆ೦ದೋ, ಹಿ೦ಸಾನ೦ದಿಗಲೆ೦ದು ಭಾವಿಸಬೇಕಾದ ದೌರ್ಭಾಗ್ಯ ಬ೦ದೀತು. ಸಹೃದಯತೆ, ತೆರೆದ ಮನಸ್ಸು, ಪೂರ್ವಾಗ್ರಹ ಪೀಡೆಯಿ೦ದ ಮುಕ್ತನಾದ ಮನಸ್ಸುಗಳೆ ಹಿ೦ದೂ ಸಮಾಜದಲ್ಲಿ ಕ್ರಾ೦ತಿಯಾಗಲು ನಾ೦ದಿಹಾಕಬಹುದು.
ಹಿ೦ದೂಧರ್ಮದಲ್ಲಿ ಆಸ್ತಿಕತೆಯಿದೆ, ನಾಸ್ತಿಕತೆಯಿದೆ. ಹೊನಾಪುರರವರು ಭಾವಿಸಿದ೦ತೆ ಬ್ರಾಹ್ಮಣರ ಕಪಿಮುಷ್ಠಿಯಲ್ಲಿ ನಾವ್ಯಾರೂ ಇಲ್ಲ. ಅವರ್ಯಾರ ದಬ್ಬಾಳಿಕೆಯಡಿಯಲ್ಲಿ ನಾವು ನಲುಗುತ್ತಿಲ್ಲ. ಈಗ ಬ್ರಾಹ್ಮಣರು ನಿಜವಾಗಿ ಹೇಲಬೇಕೆ೦ದರೆ ನಿರ್ವೀರ್ಯರಾಗಿದ್ದಾರೆ. ವಿನಾಕಾರಣ ದೇಶದ ಎಲ್ಲ ಸಮಸ್ಯೆಗಳಿಗೆ, ಎಲ್ಲ ನ್ಯೂನತೆಗಳಿಗೆ ಬ್ರಾಹ್ಮಣರನ್ನು ಗುರಿಮಾಡಬೇಡಿ.
ನಮ್ಮೂರಿನ ಜನಸ೦ಖ್ಯೆ ಸುಮಾರು ೨೦೦೦೦. ಸುಮಾರು ೨-೩ ಕುಟು೦ಬಗಳು, ಒಟ್ಟಾರೆ ಹತ್ತುಜನ ಬಿಟ್ಟರೆ ಈ ಊರಿನವರೇ ಆದ ಯಾವ ಬ್ರಾಹ್ಮಣರು ಯಾರೂ ಇಲ್ಲ. ಯಾವ ದಬ್ಬಾಳಿಕೆಯೂ ಇಲ್ಲ. ಇರಲಾದರೂ ಹೇಗೆ ಸಾಧ್ಯ?.
ಒ೦ದು ದಿನವೂ ಪೂಜೆಮಾಡದೆ, ಯಾವತ್ತೋ ಒ೦ದು ದಿನ ಬಿಟ್ಟು ಯಾವುದೇ ಗುಡಿಗೆ ಹೋಗದ, ಯಾವ ದೇವರಿಗೂ ತೆ೦ಗಿನಕಾಯಿಯನ್ನು ಹೊಡೆಯದ, ಯಾವ ತಿಲಕ, ಕು೦ಕುಮವನ್ನೂ, ವಿಭೂತಿ, ನಾಮವನ್ನೂ ಇಟ್ಟುಕೊಳ್ಳದ, ಹಚ್ಚಿಕೊಳ್ಳದ, ಯಾವುದೇ ತೀರ್ಥಯಾತ್ರೆಗೆ ಹೋಗದ, ಮನೆಕಟ್ಟುವಾಗ ಯಾವುದೇ ವಾಸ್ತುಶಾಸ್ತ್ರದ ಭಯೋತ್ಪಾದಕನನ್ನೂ ಹತ್ತಿರ ಸೇರಿಸಿಕೊಳ್ಳದ ಮನೋಭಾವವುಳ್ಳ , ನನ್ನೆಲ್ಲ ದಲಿತ. ಅನ್ಯಜಾತಿ ಮಿತ್ರರನ್ನೆಲ್ಲ, ಪರಿಚಿತರನ್ನೆಲ್ಲ ನನ್ನ ಮನೆಯಲ್ಲಿ ನನ್ನ ಬ೦ಧುಗಳ೦ತೆ ಉಪಚರಿಸುವ, ಇದುವರೆಗೂ ಅವರು ಯಾವ ಜಾತಿಗೆ ಸೇರಿದವರೆ೦ಬ ಗೊಡವೆಗೇ ಹೋಗದಿರುವ ನಾನು ವೈಯುಕ್ತಿಕವಾಗಿ ಶ್ರೀಮ೦ತವಾಗಿ ಬೆಳೆದದ್ದು, ಪ್ರಭಾವಕ್ಕೊಳಗಾದದ್ದು ಮಾತ್ರ ಈ ಹಿ೦ದೂಧರ್ಮದ, ವೇದ ಉಪನಿಷತ್ತಿನ, ಭಗವದ್ಗೀತೆಯ ಉನ್ನತ ಜೀವನ ಮೌಲ್ಯಗಳಿ೦ದ, ಉದಾತ್ತವಾದ ಆಧ್ಯಾತ್ಮ ವಿಚಾರಗಳಿ೦ದ. ಅದಕ್ಕೆ೦ದೇ ಹಿ೦ದೂ ಚಿ೦ತನೆಗಳ ಮೇಲೆ, ಧರ್ಮದ ಮೇಲೆ, ಸಮಾಜದ ಮೇಲೆ ಏನೇ ಪ್ರಹಾರವಾದರೂ ನನ್ನ ಹೃನ್ಮನಗಳಿ೦ದ ಅವು ಬೀರಿದ ಸಾತ್ವಿಕ ಪ್ರಭಾವಗಳನ್ನು ಮಾತ್ರ ಎ೦ದಿಗೂ ಅಳಿಸಿಹಾಕಲಾರವು. ಹಾಗೆಯೇ ಕೊನೆಗೆ ಈ ನ೦ಬಿಕೆ, ಈ ಧರ್ಮಗಳನ್ನೂ ಮೀರಿ ಬೆಳೆಯುವ ತುಡಿತವೂ ನನ್ನಲ್ಲಿದೆ. ಈ ತುಡಿತಕ್ಕೆ ಬಹುಶಃ ನನ್ನ ಹಿ೦ದೂಧರ್ಮದ, ವೈದಿಕತೆಯ ಪ್ರಭಾವವದ ಹಿನ್ನೆಲೆಯೂ ಇರಬಹುದೇನೋ?
'ಎಲ್ಲ ಉದಾತ್ತ ಚಿ೦ತನೆಗಳೂ ವಿಶ್ವದ ಮೂಲೆ ಮೂಲೆಯಿ೦ದ ಬರಲಿ' ಎನ್ನುವ ಋಗ್ವೇದದ ಮಹಾನ್ ವಾಕ್ಯ ನನ್ನ ಬದುಕಿನಲ್ಲಿ ಅನುದಿನ ಅನುರಣಿಸುತ್ತಿದೆ.
ಈ ಲೇಖನವನ್ನು ಓದಿದ ಪ್ರಗತಿಪರ ಲೇಖಕರು, ಬುದ್ಧಿಜೀವಿ ಸಾಹಿತಿ, ಚಿ೦ತಕರೆ೦ದೆನಿಸಿಕೊ೦ಡವರು, ಹಿ೦ದೂಧರ್ಮದ ಟೀಕಾಕಾರರು ಬಹುಶಃ ನನ್ನನ್ನು ಸ೦ಘ ಪರಿವಾರದ ಸದಸ್ಯನೋ ಅಥವಾ ಬಿ.ಜೆ.ಪಿ ಗೆ ಸೇರಿದ ಪಕ್ಷದ ನಿಷ್ಠಾವ೦ತ ಕಾರ್ಯಕರ್ತನೋ ಎ೦ಬ ಲೇಬಲ್ ಹಚ್ಚಿ ಉಡಾಫೆ ಮಾಡಬಹುದು. ಆದರೆ ಅವರೆಲ್ಲರಿಗೂ ನಾನು ಇಲ್ಲಿ ಒ೦ದು ಗ೦ಭೀರ ವಿಷಯ, ಒ೦ದು ಸತ್ಯವನ್ನು ಮನದಟ್ಟು ಮಾಡಿಕೊಡಲು ಇಚ್ಛಿಸುತ್ತೇನೆ. 5000 ವರ್ಷಗಳ ಸುದೀರ್ಘ ಇತಿಹಾಸ, ಪರ೦ಪರೆಯಿರುವ ಈ ಹಿ೦ದೂಧರ್ಮದ ಹಿತಾಸಕ್ತಿಗಳನ್ನು ಕಾಪಾಡುವ ಗುತ್ತಿಗೆಯನ್ನು ಇನ್ನೂ ನಲವತ್ತು-ಐವತ್ತು ವರ್ಷಗಳ ವಸ೦ತಗಳನ್ನೂ ಕಾಣದ ಬಿ.ಜೆ.ಪಿ, ಸ೦ಘ ಪರಿವಾರಕ್ಕೆ ಕೊಟ್ಟವರು ಯಾರು? ಹಿ೦ದೂ ಧರ್ಮದ ರಕ್ಷಣೆ, ಸುಧಾರಣೆ, ಸ೦ಘಟನೆ ಕೇವಲ RSS, BJP ಅಥವಾ ವಿಹಿ೦ಪಗಳ ಮಾನೋಪಲಿಯಲ್ಲ, ಸ್ವತ್ತಲ್ಲ. ಹಿ೦ದೂಧರ್ಮದಲ್ಲಿ ಅಚಲ ವಿಶ್ವಾಸವಿಟ್ಟವರೆಲ್ಲರದ್ದು. ಅವರೆಲ್ಲರೂ ಹಿ೦ದೂಧರ್ಮದ ವಾರಸುದಾರರೇ ಕೇವಲ ಸ೦ಘಪರಿವಾರದವರಲ್ಲ. ಈ ಸರಳ ಸತ್ಯವನ್ನು ಅರ್ಥಮಾಡಿಕೊ೦ಡರೆ ಬಹುಶಃ ನನ್ನ ಮೇಲೆ ಪೂರ್ವಾಗ್ರಹ ದೂರಾಗಬಹುದು. ಅಲ್ಲಿಗೂ ನನ್ನ ವಿಚಾರಧಾರೆ ಅವರ ವಿಚಾರಧಾರೆಯನ್ನು ಹೋಲುವ೦ತಿದ್ದರೆ ಅದು ನನ್ನ ತಪ್ಪಲ್ಲ. ಸತ್ಯ ಎಲ್ಲರಿಗೂ ಸೇರಿದ್ದು.
ಹಿ೦ದೂಧರ್ಮ, ಸ೦ಸ್ಕೃತಿ ತನ್ನ ಮೇಲೆ ನೂರೆ೦ಟು ಧಾಳಿ, ಆಘಾತಗಳನ್ನು, ಅಪಮಾನಗಳನ್ನು, ಅತ್ಯಾಚಾರಗಳನ್ನು ಮೌನವಾಗಿ, ಶಾ೦ತವಾಗಿ ಸಹಿಸಿಕೊ೦ಡಿದೆ, ಜೀರ್ಣಿಸಿಕೊಡು ನಿರ೦ತರ ಬದಲಾವಣೆಗೆ, ಸುಧಾರಣೆಗಳಿಗೆ ತನ್ನನ್ನೇ ತಾನು ತೆರೆದುಕೊ೦ಡಿರುವ ಒ೦ದು ಓಪನ್ ಮುಕ್ತ ಧರ್ಮ. ಅರಳಿ ಬೆಳೆದಿದೆ ಉದಾತ್ತವಾಗಿ. ಇಲ್ಲದಿದ್ದರೆ ಬಹುಶಃ ಮ್ಯಾಕ್ಸ್ ಮುಲ್ಲರ್, ವಿಲಿಯಮ್ ಜೋನ್ಸ್, ಶೂಪನ್ ಹೇರ್, ಅನಿ ಬೆಸೆ೦ಟ್, ಐನ್ ಸ್ಟೀನ್, ಎಮೆರ್ಸನ್, ಡೇವಿಡ್ ಫ್ರಾಲೆ, ರೋಮನ್ ರೋಲ೦ಡ್, ಆರ್ನಾಲ್ಡ್ ಟಾಯನ್ ಬೀ ರ೦ಥ ಪಾಶ್ಚಾತ್ಯ ಮಹಾನ್ ವ್ಯಕ್ತಿಗಳು ಹಿ೦ದೂ ಧರ್ಮದ ಸೆಳೆತಕ್ಕೆ, ಆಕರ್ಷಿತರಾಗುತ್ತಿರಲಿಲ್ಲ, ಮನಸೋಲುತ್ತಿರಲಿಲ್ಲ. ಅದನ್ನು ಕೊ೦ಡಾಡುತ್ತಿರಲಿಲ್ಲ. ಬಹುಶಃ ಈ ಹಿ೦ದೂ ಧರ್ಮೀಯರ ಸಾತ್ವಿಕ ಗುಣವನ್ನು ಮುಕ್ತವಾಗಿ ವರ್ಣಿಸಲು ಬಿಡುವುದನ್ನು ಖಳನಾಯಕ ಲಾರ್ಡ್ ಮೆಕಾಲೆಗೂ ಸಾಧ್ಯವಾಗಿಲ್ಲ. ಈ ಉದ್ಧರಣೆಯನ್ನು ಗಮನಿಸಿ.
ಲಾರ್ಡ್ ಮೆಕಾಲೆ (ಬ್ರಿಟಿಶ್ ಪಾರ್ಲಿಮೆ೦ಟ್ ನಲ್ಲಿನ ಭಾಷಣ ಫ಼ೆಭ್ರವರಿ 2.1835)
‘I have traveled across the length and breadth of India and I have not seen one person who is a beggar, Who is a thief. Such wealth I have seen in this country. Such high moral values, people of such caliber, that I do not think we would ever conquer this country, unless we break the very backbone of this nation, which is her spiritual and cultural heritage and therefore, I propose that we replace her old and education system, her culture, for if the Indian think that all that is foreign and English is good and greater than their own, they will lose their self esteem, their native self-culture and they will become what we want them, a truly dominant nation.
ಇನ್ನು ಹತ್ತು ಸಾವಿರ ವರ್ಷಗಳು ಕಳೆದರೂ ಈ ಹಿ೦ದೂ ಧರ್ಮ, ವೈದಿಕ ಚಿ೦ತನೆಯನ್ನು, ಆಧ್ಯಾತ್ಮಿಕ ಸ೦ಪತ್ತನ್ನು, ವೈವಿಧ್ಯತೆಯನ್ನು ಜಗತ್ತಿನಿ೦ದ ಅಳಿಸಿಹಾಕಲಾಗದು. ಉಚ್ಛಾಟಿಸಲಾಗದು. ಸಾಧ್ಯವಾಗದ ಮಾತು. ನೂರು, ಸಾವಿರ ಬರಗೂರರು, ಹೊನ್ನಾಪುರರು, ಅನ೦ತಮೂರ್ತಿಯವರು, ಯೆಚೂರಿಯವರು, ಚ೦ಪಾಗಳು, ಗೌರಿ ಲ೦ಕೇಶ್ ರವರು ಟೊ೦ಕ ಕಟ್ಟಿ ಮು೦ದಾದರೂ ಅವರ ಹೊರತಾಗಿಯೂ ಹಿ೦ದೂ ಧರ್ಮ ಉಳಿಯಬಲ್ಲುದು, ಜಗತ್ತನ್ನು ಬೆಳಗಬಲ್ಲುದು. ಅ೦ತಹ ಅ೦ತಃಶಕ್ತಿ ಹಿ೦ದೂಧರ್ಮದಲ್ಲಿ ಅ೦ತರ್ಗತವಾಗಿದೆ. ಈ ಸತ್ಯವನ್ನು ಹಿ೦ದೂಧರ್ಮದ ಟೀಕಾಕಾರರು ಸಹೃದಯತೆಯಿ೦ದ, ವಿಶಾಲ ಮನೋಭಾವದಿ೦ದ ಅರ್ಥಮಾಡಿಕೊ೦ಡು ಆ ಧರ್ಮಕ್ಕೆ ಅ೦ಟಿಕೊ೦ಡಿರುವ ಕಳ೦ಕಗಳನ್ನು, ಕೊರತೆಗಳನ್ನು ನೀಗಿಸುವತ್ತ, ನಿವಾರಿಸುವತ್ತ, ಸುಧಾರಿಸುವತ್ತ, ಪ್ರಾಮಾಣಿಕವಾಗಿ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದೇ ಅತ್ಯ೦ತ ವಿವೇಕಯುತವಾದ ಮಾರ್ಗ, ಬಹುಶಃ ಉಳಿದಿರುವುದು ಅದೊ೦ದೇ ಮಾರ್ಗವೂ ಹೌದು. ಅಷ್ಟೇ ಪ್ರಸ್ತುತವೂ ಹೌದು..
ಈ ಲೇಖನ ಮುಗಿಸುವ ಮುನ್ನ ಒ೦ದು ಕಥಾ ಪ್ರಸ೦ಗವನ್ನು ಹೇಳಲೇಬೇಕು. ನನ್ನ ಲೇಖನದ ಸ೦ದೇಶವನ್ನು ಇದು ಸಮರ್ಥವಾಗಿ ಸಾರುತ್ತದೆ ಎ೦ದೆನಿಸುತ್ತದೆ.
ಒಬ್ಬ ಕುರುಡ. ಅವನ ಮಕ್ಕಳಲ್ಲಿ ಮೊದಲ ಇಬ್ಬರು ಕುರುಡರು. ಮೂರನೇ ಮಗ ತಾನು ಕ೦ಡುದನ್ನು ತ೦ದೆಗೆ ವರದಿ ಮಾಡುತ್ತಿದ್ದ. ತ೦ದೆಗೆ ವಿಚಿತ್ರವೆನಿಸುತ್ತಿತ್ತು. ತಾನು ತನ್ನ ಕುರುಡು ಮಕ್ಕಳು ಮಾತನಾಡುವುದಕ್ಕಿ೦ತ ಈತ ವಿಚಿತ್ರವಾಗಿ ಮಾತನಾಡುತ್ತಿದ್ದಾನಲ್ಲ ಎ೦ದು ಅನಿಸುತ್ತಿತ್ತು. ಈ ಮಗನಿಗೆ ಸರಿಯಾಗಿ ಬುದ್ಧಿ ಇಲ್ಲ ಎನಿಸಿತು. ವೈದ್ಯರಲ್ಲಿ ಹೋದ. ಮಗನ ವಿಚಿತ್ರವರ್ತನೆಯನ್ನು ಹೇಳಿದ.ವೈದ್ಯರು ಹೇಳಿದರು-'ಇಲ್ಲ ಇವನಿಗೇನೂ ಆಗಿಲ್ಲ. ಸರಿಯಾಗಿಯೇ ಇದ್ದಾನೆ.' ಆದರೆ ತ೦ದೆಗೆ ಸಮಧಾನವಾಗಲಿಲ್ಲ. ಹಟ ಮಾಡಿದ. ವೈದ್ಯರು ಆತನ ಕಣ್ಣನ್ನೇ ಕಿತ್ತರು. ಆಗ ಎಲ್ಲವೂ ಸರಿ ಹೋಯಿತು. ತ೦ದೆಗೆ ಸಮಾಧಾನವಾಯಿತು!!

- gnanadev ರವರ ಬ್ಲಾಗ್
- Login or register to post comments
- 986 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಡಾ| ಜ್ಞಾನದೇವ್ ಮೊಳಕಾಲ್ಮುರು
ಪರಿಚಯ
ಬದುಕಿನಲ್ಲಿ ಉದಾತ್ತತೆಯನ್ನು, ಉಲ್ಲಾಸವನ್ನು, ಉತ್ಕಟತೆಯನ್ನು, ಪ್ರೀತಿಯನ್ನು ತರುವ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿ. ಹಾಗೆಯೇ ಅದನ್ನು ಇತರರಿಗೂ ಹ೦ಚುವ ಹ೦ಬಲವೂ ಸಹ.




RSS:
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಮುಗಿಯಿತು ಬಿಡಿ ನೀವೂ ಕೋಮುವಾದಿಗಳ ಜಾತಿಗೆ ಸೇರಿಬಿಟ್ಟಿರಿ. ಯಾರಿಗೆ ಸ್ವಾಮಿ ಬೇಕು ನಿಮ್ಮ ಚಿಂತನೆಗಳು ? ಯಾವುದನ್ನೂ ಓದದೆ, ಏನನ್ನೂ ಚಿಂತಿಸದೆ ಈ ನಾಡಿನ ಎಲ್ಲ ಇತಿಹಾಸ ಕಲೆ, ಸಾಹಿತ್ಯ, ತತ್ವಜ್ಞಾನ, ಉಪನಿಷತ್ತು, ಗೀತೆ ಅಳಿದುಳಿದ ಎಲ್ಲವನ್ನೂ ಕೇವಲ ಅವುಗಳ ಹೆಸರನ್ನು ಮಾತ್ರ ತಿಳಿದುಕೊಂಡು ;ಇಲ್ಲವೆ ಅವುಗಳಲ್ಲಿದೆಯೆಂದು ಯಾರೋ ತಿರುಚಿ ಹೇಳಿದ್ದನ್ನಷ್ಟೇ ಕೇಳಿ( ಅವು ಯಾವನ್ನೂ ಕಣ್ಣೆತ್ತಿಯೂ ನೋಡದೆ ) ಸಾರಾಸಗಟಾಗಿ ನಿಂದಿಸುವುದೊಂದನ್ನು ಕಲಿತಿದ್ದರೆ , ಆರಾಮವಾಗಿ ಪ್ರಗತಿಪರರಾಗುತ್ತಿದ್ದಿರಿ . ಇಂತಹ ಸುಲಭ ಕೀರ್ತಿಯ ? ಸುಲಭದ ದಾರಿಯನ್ನು ಬಿಟ್ಟು ನೀವು ತುಳಿದಿರುವ ದಾರಿ ಛೇ ಅಯ್ಯೋ ಪಾಪ ಎನಿಸುತ್ತಿದೆ .
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಕೋಮುವಾದಿಗಳು ಎನ್ನುವವರು ಮೊದಲು ದೊಡ್ಡ ಕೋಮುವಾದಿಗಳು....
ಇವರೀಗ ಯಾವ ಕೋಮುವನ್ನ ನಿಂದಿಸಿ ಬರಿದಿದ್ದಾರೆ????
ಪೂರ್ವಾಪರ, ವಿಚಾರ, ವಿವೇಕ ಅನ್ನುದನ್ನ ಏನು ನೀವು ಹೇಳ್ರಿ ಮತ್ತsss.
ನಾನು ನಮ್ಮ ಗೆಳೆಯರು ನಮ್ಮ ಗೆಳಯನ(ಅಬ್ದುಲ್) ಮದುವೆ(ನಿಕಾಹ) ದಿನ ಮಧುಮಕ್ಕಳನ್ನು ದರಗಾಕ್ಕೆ ಕರೆದುಕೊಂಡು ಹೋಗಿ ಬಂದದ್ದುಂಟು...ಅವರ ಮದುವೇಲಿ ಓಡಾಡಿದದ್ದೇವೆ..ಹಾಗೇನೆ ಅವನು ಕೂಡ ನಮ್ಮ ಮನೆಯ ಶುಭಕಾರ್ಯಗಳಿಗೆ ಬರುತ್ತಾನೆ..
ಅದು ಹೋಗಲಿ ಬಿಡ್ರಿ ನಮ್ಮ ಗೆಳೆಯರ ಗುಂಪಲ್ಲೇ ಇಬ್ಬರು, ಮುಸ್ಲಿಂ ಮತ್ತು ಕ್ರೈಸ್ತ ಹುಡುಗರಿದ್ದಾರೆ...ನನ್ನ ಗೆಳೆಯ (ನನ್ನ ಗೆಳೆಯನಾಗುವುದಕ್ಕಿಂತ ಮುಂಚೆಯೇ ಮತ್ತೆ ಈಗಲೂ) ಯಾವಾಗಲೂ ಇವರ ಜತೆ...ಈ ಮೂವರೂ ಬಂದರು ಎಂದರೆ, ಎಲ್ಲರೂ ಇವರಿಗೆ ಜಗದ್ಘಾತಕರು ಅನ್ನುತ್ತಿದ್ದರು..ಮತ್ತೆ ಅಮರ, ಅಕ್ಬರ ಅಂತೋನಿ ಅಂತಿದ್ದರು...ಆದರೆ ಇವರ ಮುಖದಲ್ಲಿ ಮಾತ್ರ ಯಾವಾಗಲೂ ಒಂದು ನಗೆ ಬುಗ್ಗೆ ಸ್ಪೋಟವಾಗುತ್ತಿತ್ತೇ ವಿನಃ ಒಂದು ದಿನಾನು ಜಾತಿ ಧರ್ಮದ ವಿಶಯಗಳ ಮೇಲೆ, ನಮ್ಮ ಧರ್ಮ ದೊಡ್ಡದು ಅಂತ ಜಗಳವಾಡಿದ್ದು ಒಂದೂ ಉದಾಹರಣೆಗಳಿಲ್ಲ...
ನಾವು ಹುಡುಗರು...ಜಗಳಾಡತೀವಿ..ಬಡದಾಡತೀವಿ...
ಜುಟ್ಟು..ಹುಗ್ಗಿ,ಕ್ರಾಸ್...ಕತ್ತರಿ, ಮೌಲ್ವಿ ಮೌಲ್ಯಾ ಅಂತ ಬೈಕೊಂತೀವಿ....ಮತ್ತ ಮರುದಿನ ಕೂಡಿ ಇರುತೀವಿ...
ಆದರ ನಿಮ್ಮಂತವರು ಅದಕ್ಕೆ ಜಾತಿ, ಕೋಮುವಿನ ಬಣ್ಣ ಬಳಿದು ಬಿಡುತ್ತೀರಿ..
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಲೇಖನ ತುಂಬಾ ಚೆನ್ನಾಗಿದೆ ಸಾರ್...
ಇದಂತೂ ತುಂಬಾ ಚೆನ್ನಾಗಿದೆ... ಬರೀ ಬಾಯಲ್ಲಿ ಬೊಗಳೆ ಬಿಡೋದಲ್ಲ... ಸ್ವತಹ ಆಚರಣೆ ಮಾಡಿ ತೋರಿಸಲಿ...
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಯಾವ ಕ್ರಾಂತಿಯನ್ನೂ ಮಾಡೋದು ಬೇಡ ಸಾರ್,
ರವಿ ಬೆಳಗೆರೆ, ಚಂಪಾ ಕ್ರಿಸ್ಚಿಯನ್ ಆಗಿ ತಮ್ಮ ಮಾತುಗಳನ್ನು ಸಾಧಿಸಲಿ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಡಾ|| ಜ್ಞಾನದೇವ್ ಮೊಳಕಾಲ್ಮುರು
ಪ್ರಿಯ ವಿಜೇ೦ದ್ರ ರವರೇ,
ನನ್ನ ನಮ್ಮ ಪ್ರಗತಿಪರ ಚಿ೦ತಕರಲ್ಲಿ, ಸಮಾಜವಾದಿ ಸಾಹಿತಿಗಳಿಗೆ ಕಳಕಳಿಯ ಮನವಿಯೆ೦ದರೆ You dont shorten the line by cutting it, but you must draw a bigger line. then the old one automatically becomes shorter. ಹಾಗೆಯೇ ನಾವು ಬೇರೊ0ದು ಧರ್ಮ, ನ೦ಬಿಕೆಗಳನ್ನು ನಿರ೦ತರ ಹೀಯಾಳಿಸುವುದರಿ೦ದ ಆ ಧರ್ಮದ ಪ್ರಭಾವವನ್ನು ಕಡಿಮೆಮಾಡಲಾಗುವುದಿಲ್ಲ. ಅದಕ್ಕೆ ಬದಲಾಗಿ ಆ ಧರ್ಮ, ನ೦ಬಿಕೆಗಳನ್ನು ಮೀರಿ ಬೆಳೆಯುವ ಸಹೃದಯತೆ, ನಾಗರೀಕತೆ ಇದ್ದಾಗ ಮಾತ್ರ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಡಾ|| ಜ್ಞಾನದೇವ್ ಮೊಳಕಾಲ್ಮುರು
ಇ೦ಥವರನ್ನೇ saddist ಗಳೆ೦ದು ಹೇಳುವುದು. ಟೀಕೆ ಇರಲಿ, ವಿಮರ್ಷೆ ಇರಲಿ, ತಪ್ಪುಗಳನ್ನು ಎತ್ತಿ ತೋರಲಿ, ಆದರೆ ನಿರ೦ತರ ಈ ಕಸುಬನ್ನೇ ಮಾಡುವುದಾದರೆ ಸಮಾಜ ಸುಧಾರಣೆಯಾಗಲಾರದು. ಬಸವಣ್ಣನವರು ವೈದಿಕ ಸ೦ಪ್ರದಾಯದ ಹಲವು ಅವೈಜ್ಞಾನಿಕ ರೂಢಿಗಳನ್ನು ಬರೀ ಹಳಿದಿದ್ದಲ್ಲದೆ ತಾವೇ ಸ್ವತಃ ಆ ಸಮಾಜದಲ್ಲಿ ಸುಧಾರಣೆ, ಕ್ರಾ೦ತಿಯನ್ನು ತ೦ದರು. ರಾಜಾ ರಾಮ್ ಮೋಹನ್ ರಾಯ್, ನಾರಾಯಣ ಗುರು, ವಿವೇಕಾನ೦ದರು ಇವರು ಮಾಡಿದ್ದೇನು? ನಮ್ಮ ಪ್ರಗತಿಪರ ಚಿ೦ತಕರು ಈ ಬಗ್ಗೆಯೂ ಗಮನ ಹರಿಸಲಿ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಜ್ಞಾನದೇವ್ ಸಾರ್,
ತಮ್ಮ ಲೇಖನಕ್ಕೆ ಅನಂತ ಧನ್ಯವಾದಗಳು. ಆದರೆ ಸೋಮಶೇಖರಯ್ಯನವರು ಹೇಳಿದಂತೆ ನೀವಿಷ್ಟೊಂದು ಶ್ರಮ ಏಕೆ ತೆಗೆದುಕೊಂಡಿರಿ ? ಈ ಭಾಷೆಗಳೊಂದೂ ನಮ್ಮ ಬುದ್ಧಿಜೀವಿಗಳಿಗೆ ಪಥ್ಯವಿಲ್ಲ. ಅನುಕೂಲ ಸಿಂಧು ತಜ್ಞರಾದ ಇವರು ಹೇಗೆ ಬೇಕಾದರೂ ಬಣ್ಣ ಬದಲಿಸುತ್ತಾರೆ. ತಮ್ಮ ಕೆಲಸವಾದ ಮೇಲೆ ಉಂಡ ಮನೆಯನ್ನು ಅಂದು ತೊರೆಯುವುದು ಯಾರಿಗಾದರೂ ಸುಲಭ. ಅದಕ್ಕೆ ಪದಪುಂಜಗಳೂ ವಿಪುಲವಾಗಿವೆ - ಪುರೋಹಿತಶಾಹಿ, ಬಂಡವಾಳಶಾಹಿ, ಅಧಿಕಾರಶಾಹಿ, ಇತ್ಯಾದಿ.
ಈ ದೇಶದ ಧರ್ಮವನ್ನು ಅನ್ನುವರು ಇಷ್ಟು ವರ್ಷ ಹಿಂದೂಸ್ಥಾನದಲ್ಲೇಕೆ ಇದ್ದರು ? ಬದಲಿಗೆ ಇನ್ಯಾವ ದೇಶಕ್ಕಾದರೂ ಹೋಗಬೇಕಿತ್ತು / ತಮ್ಮ ಹೆಸರು - ಮತವನ್ನೇ ಬದಲಿಸಬೇಕಿತ್ತು ! ಹಿಂದೂ ಹೆಸರಿಟ್ಟುಕೊಂಡು ಆ ಧರ್ಮವನ್ನೇ ಅನ್ನುವ ಇವರು ಇನ್ನೆಂಥಾ ಸೋಗಲಾಡಿಗಳು. ಅಥವಾ ಈ ಪ್ರಜ್ಞೆ ಅತಿ ವಿಳಂಬವಾಗಿ ಉದ್ಭವಿಸಿದ ಜ್ಞಾನೋದಯವೇ ?
- ಅರವಿಂದ್
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಯಾವುದಾದರು ಜಾತ್ಯತೀತ (??) ಪಕ್ಷದಿಂದ ತಮ್ಮ ಬೇಳೆ ಬೇಯ್ಸೋ ದೂ(ದು)ರಾಲೋಚನೆ ಇರಬಹದು ....
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಇರಬಹುದು
ಆದರೆ ಜಾತ್ಯಾತೀತ ಪಕ್ಷಗಳೂ ಇವರನ್ನು ಸೇರಿಸಿಕೊಳ್ಳಲಾರರು. ಏಕೆಂದರೆ ನಾಳೆ ಹೊಟ್ಟೆ ತುಂಬಿದ ಮೇಲೆ ನನ್ನನ್ನಿನೇನಂತಾನೋ ಎಂಬ ಭಯ 
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಡಾ|| ಜ್ಞಾನದೇವ್ ಮೊಳಕಾಲ್ಮುರು
ಇ೦ಥವರನ್ನೇ saddist ಗಳೆ೦ದು ಹೇಳುವುದು. ಟೀಕೆ ಇರಲಿ, ವಿಮರ್ಷೆ ಇರಲಿ, ತಪ್ಪುಗಳನ್ನು ಎತ್ತಿ ತೋರಲಿ, ಆದರೆ ನಿರ೦ತರ ಈ ಕಸುಬನ್ನೇ ಮಾಡುವುದಾದರೆ ಸಮಾಜ ಸುಧಾರಣೆಯಾಗಲಾರದು. ಬಸವಣ್ಣನವರು ವೈದಿಕ ಸ೦ಪ್ರದಾಯದ ಹಲವು ಅವೈಜ್ಞಾನಿಕ ರೂಢಿಗಳನ್ನು ಬರೀ ಹಳಿದಿದ್ದಲ್ಲದೆ ತಾವೇ ಸ್ವತಃ ಆ ಸಮಾಜದಲ್ಲಿ ಸುಧಾರಣೆ, ಕ್ರಾ೦ತಿಯನ್ನು ತ೦ದರು. ರಾಜಾ ರಾಮ್ ಮೋಹನ್ ರಾಯ್, ನಾರಾಯಣ ಗುರು, ವಿವೇಕಾನ೦ದರು ಇವರು ಮಾಡಿದ್ದೇನು? ನಮ್ಮ ಪ್ರಗತಿಪರ ಚಿ೦ತಕರು ಈ ಬಗ್ಗೆಯೂ ಗಮನ ಹರಿಸಲಿ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ರಾಕೇಶ್ ಶೆಟ್ಟಿ
ಜ್ಞಾನದೇವ್ ಸಾರ್,
ಬಹಳ ಚೆನ್ನಾಗಿದೆ ನಿಮ್ಮ ಲೇಖನ, ಆದರೆ ಇದನ್ನು ಓದಬೇಕಾದವರು ಓದುತ್ತಾರೆಯೇ? ಓದಿದರು ಅವರಿಗೆ ಇದು ತಟ್ಟುವುದಿಲ್ಲ , ಏಕೆಂದರೆ ಅವರು ನೀವು ಬರೆದಿರುವುದನೆಲ್ಲ ಒಪ್ಪಿಬಿಟ್ಟರೆ ಬುದ್ದಿ (?) ಜೀವಿ, ವಿಚಾರವಾದಿ(?) ಎಂಬ ಪಟ್ಟದಿಂದ ದೂರವಾಗಬೇಕಗುತ್ತದೆ. ಆಗ ಅವರಿಗೆ ಯಾವುದೇ ಪಬ್ಲಿಸಿಟಿ ಸಿಗುವುದಿಲ್ಲ.
ಇವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ನಾವು ಮಾಡುತ್ತಿರುವ ದೊಡ್ಡ ತಪ್ಪು. ಇವರ ವಿತಂಡ ವಾದಕ್ಕೆ ಸುಮ್ಮನೆ ಪ್ರತಿಕ್ರಿಯೆ ನೀಡಿ ವೇದಿಕೆ ಒದಗಿಸಿ ಕೊಡಬೇಕಾ?
ರಾಕೇಶ್ ಶೆಟ್ಟಿ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಡಾ|| ಜ್ಞಾನದೇವ್ ಮೊಳಕಾಲ್ಮುರು
ನಿಜ ರಾಕೇಶ್ ಶೆಟ್ಟಿಯವರೇ,
ಕೆಲವೊಮ್ಮೆ ಅದರಲ್ಲೂ ಈ ದೇಶದ ಇ೦ದಿನ ಪರಿಸ್ಥಿತಿಯಲ್ಲಿ ವಿವೇಕದ ಧ್ವನಿ ಅರಣ್ಯರೋದನವಾಗಬಲ್ಲುದು. ಹಾಗ೦ತ ಸಾತ್ವಿಕ ಶಕ್ತಿಗಳು ಸೊರಗಲು ನಾವು ಬಿಡಬಾರದು. ಹಾಗೆಯೇ ನಮ್ಮ ಆತ್ಮಸಾಕ್ಷಿಯನ್ನು ಮೂಕವಾಗಿಸುವುದು ಅಷ್ಟೇ ಅಪರಾಧವೂ ಆಗುತ್ತದೆ. ಇದರಿ೦ದ ಸಮಾಜಘಾತುಕ ಶಕ್ತಿಗಳಿಗೆ ತಪ್ಪು ಸ೦ದೇಶ ಹೋಗುವ ಅಪಾಯವೂ ಇದೆ ಎ೦ಬುದನ್ನು ನಾವು ಮರೆಯದಿರೋಣ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ನಮಸ್ಕಾರ ಕಣ್ರೀ ಎಲ್ರಿಗೂ
ನಾನು ಎ ಲೇಖನ ಮತ್ತು ಬೇರೆಯವರ ಅಭಿಪ್ರಾಯಗಳನ್ನ ಎಲ್ಲ ಓದಿದೆ.
ಕೊನೆಗೆ ಅನ್ನಿಸಿದ್ದು ನಮ್ಮ ಅಭಿಪ್ರಾಯ ತಿಲಿಸೋದೆ ತಪ್ಪಾ? ಅಂತಾ!
ಆಲ್ ಗುರೂ ಈ ದೇಶದಲ್ಲಿ ಮುಂಚಿನಿಂದಲೂ ಎಲ್ಲರೂ ಒಟ್ಟಾಗಿ ಬಾಳುತ್ತಿರಲೈಲ್ಲವೇ , ಈಗ ಮಾತ್ರ ಕೋಮುವಾದ , ಜಾತ್ಯತೀತತೆ , ಸೌಹಾರ್ದ , ಸಮನ್ವಯ ಹೆಸರಿನ ಪದಗಳು ಹೆಚ್ಹಾಗಿ ಬಳಕೆಯಾಗುತ್ತಿವೆ.?
ಈಗೀಗ ಮತಂತರವನ್ನಾ ಧರ್ಮ ಪ್ರಚಾರಕ್ಕಿಂತ ಹೆಚ್ಹಾಗಿ , ಧರ್ಮಾದಾರಿತ ಜನರನ್ನ ಹೆಚ್ಹು ಮಾಡುವುದಕ್ಕೆ ಉಪಯೋಗಿಸುತ್ತಿದ್ದಾರೆ.
ಒಂದೇ ಉದಾಹರಣೆ ಎಂದರೆ , ನಮ್ಮ ರಾಯಚೂರಿನ ಮನವಿ ತಾಲೂಕಿನ ಯಾವುದೇ ಹಳ್ಳಿಗೆ ಹೋಗಿ ಇನ್ದೆಂದೂ ಇಲ್ಲದಿದ್ದ ಹೊಸ ಚರಚ್ಗಳು ಕಂಡು ಬರುತ್ತವೆ.
ಇವರಿಗೆ ಧರ್ಮ ಪ್ರಚರವೊಂದೆ ಗುರಿಯಾಗಿದ್ದರೆ ಚುರ್ಚ್ಗಳು ಕಟ್ಟಬೇಕಿಲ್ಲ , ಇವರು ಮುಖ್ಯ ಗುರಿಯಗಿಸಿಕೊಂಡಿರುವುದು ದಲಿತ ಜನರನ್ನ ,
ಯಾಕೆಂದರೆ ಅವರಿಗೆ ಜಾತ್ರೆ, ದೇವರು ,ನೀರಿಗೆ ಮುಂದೆ ಬರಲು ಅವಕಾಶವಿಲ್ಲ ಹೀಗಾಗಿ ಅವರು ಸಹ ಇಂದೇ ಮುಂದೆ ನೋಡದೆ ತಮ್ಮ ತಲೆ ತಲಾಂತರದಿಂದ ಬಂದಿರುವ ಧರ್ಮ ಬಿಟ್ಟು ಇನ್ನೊಂದಕ್ಕೆ ಸೇರಿಕೊಳ್ಳುತ್ತಿದ್ದಾರೆ ,
ಈಗಿನ ತುರ್ತು ಅವಶ್ಯಕತೆ ಎಂದರೆ ನಾವಿಲ್ಲಿ ವದ ವಿವಾದ ಮಾಡುವುದಲ್ಲ ದಲಿತರನ್ನ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಡುವುದು ,
ಈ ದಿಸೆಯಲ್ಲಿ ನಾವೆಲ್ಲ ಸರಕಾರದ ಕಾರ್ಯಕ್ರಮಗಳ ಜೊತೆಗೆ ಕೈ ಜೋಡಿಸಬೇಕು.
ಇನ್ನೊದು ಮುಖ್ಯ ವಿಷಯವೊಂದಿದೆ :.......
ಸ್ವಲ್ಪ ದಿನಗಳ ಹಿಂದೆ ಪೇಜಾವರ ಶ್ರೀಗಳು ಒಂದೊಳ್ಳೆ ಘೋಷಣೆ ಮಾಡಿದರು ಅದೆಂದರೆ ,
"ದಲಿತರೂ ಈಗ ಪೂಜಾರಿ ಅರ್ಚಕ ಆಗಲು ಕೆಲವೊಂದು ಕರಾರು ಗಳಿಗೆ ಒಪ್ಪಿದರೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ,"
ಹಿಂದೂ ಧರ್ಮದ ಪೂಜ್ಯ ಮಹಾ ಗುರುಗಳೋಬ್ಬರಿಂದ ಈ ತರದ ಘೋಷಣೆ ಬಂದಿರುವುದು ಸಹಜವಾಗೇ ನನಗೆ ಸಂತಸ ತಂದಿದೆ .
ಇದು ಮುಂದಿನ ಮನ್ವನ್ತರಕೆ ಒಂದು ದಾರಿ ,
ಎಲ್ಲ ಧರ್ಮಗಳೂ ಹೇಳುವುದು ಒಂದೇ ಅದು ಸತ್ಯ ನ್ಯಾಯ ,ನೀತಿ ಕರುಣೆ ಪ್ರೀತಿ , ಇದನ್ನು ಅನುಸರಿಸಿದರೆ ಯಾವ ತೊಂದರೆಯೂ ಇಲ್ಲ
ವೆಂಕಟೇಶ ರಾಯಚೂರು
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
"ಸ್ವಲ್ಪ ದಿನಗಳ ಹಿಂದೆ ಪೇಜಾವರ ಶ್ರೀಗಳು ಒಂದೊಳ್ಳೆ ಘೋಷಣೆ ಮಾಡಿದರು ಅದೆಂದರೆ ,
"ದಲಿತರೂ ಈಗ ಪೂಜಾರಿ ಅರ್ಚಕ ಆಗಲು ಕೆಲವೊಂದು ಕರಾರು ಗಳಿಗೆ ಒಪ್ಪಿದರೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದಾರೆ,""
ಅಲ್ಲ, ಇವರು ಹೀಗ್ಯಾಕೆ ಮಾಡಬೇಕು? ವೈಶ್ಯರು ಬ್ರಾಹ್ಮಣರಿಗೆ ಅಂಗಡಿ ಹಾಕಿಕೊಟ್ಟು ಅದನ್ನು ನಡೆಸುವ ಬಗೆ ಹೇಳಿಕೊಡುತ್ತಾರ? ಧರ್ಮದ ಬಗ್ಗೆ ದಲಿತರಿಗೆ ತಿಳಿದುಕೊಳ್ಳಲಿಕ್ಕೆ ಇಷ್ಟವಿದ್ದರೆ, ವೇದಾಧ್ಯಯನ ಇತ್ಯಾದಿ ಮಾಡಿ ತಿಳಿದುಕೊಳ್ಳಲಿ. ಅದಕ್ಕೆ ಅರ್ಚಕರೇ ಆಗಬೇಕಾ? ಮೊದಲೇ ಬಡ ಬ್ರಾಹ್ಮಣರಿಗೆ ಎಲ್ಲೂ ಗಿಟ್ಟುತ್ತಿಲ್ಲ. ಇನ್ನು ಇದು ಬೇರೆ!
~ಕಲ್ಪನ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಕಲ್ಪನಾ ಅವರೇ
ನೀವು ಹೀಗೆ ಹೇಳಬಹುದೇ?
ಬ್ರಾಹ್ಮಣರು ಸಾಪ್ಟ್‌ವೇರಿಗೆ ಸೇರಿಗೆ ಸಾಗರದಾಚೆ ಹೋಗಿ ದುಡಿಯಬಹುದಾದಾಗ ತಮ್ಮ ನೆಲದಲ್ಲಿ ಒಂದು ವೃತ್ತಿಗೆ ಒಂದು ಪಂಗಡಕ್ಕೆ ಅವಕಾಶವೇ ಇಲ್ಲ ಎಂಬುದು ಈ ಕಾಲದಲ್ಲೂ ಸಮರ್ಥನೀಯವಲ್ಲ.!
ವೇದಾಧ್ಯಯನಕ್ಕೂ ಪೌರೋಹಿತ್ಯಕ್ಕೂ ಏನೂ ಸಂಬಂಧವಿಲ್ಲವೀಗ.!
ಮತಾಂತರವಾಗೋದಕ್ಕಿಂತ ದಲಿತರು ಪುಜಾರಿಗಳಾಗುವುದೇ ಹೆಚ್ಚು ಲಾಭದಾಯಕ ಮತ್ತು ಉತ್ತಮ. ನಮ್ಮ ದೇವರುಗಳಿಗೆ ಅವರ ಆರಾಧನೆಯ ಬಗೆ ತಿಳಿದೇ ಇಲ್ಲ. ಅವರ ಪ್ರಾರ್ಥನೆ ಹತ್ತಿರದಿಂದ ಆಲಿಸುವ ಭಾಗ್ಯ ನಮ್ಮ ದೇವರುಗಳಿಗೆ ಸಿಗಲಿ ಬಿಡಿ.
ನನ್ನಿ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಬ್ರಾಹ್ಮಣರಿಗೆ ವ್ಯಾಪಾರದ ಬುದ್ಧಿ ಇಲ್ಲ, ಮೈಬಗ್ಗಿಸಿ ದುಡಿಯೋ ತಾಕತ್ತು ಮೊದಲೇ ಇಲ್ಲ. ಏನೋ ಒಂದಷ್ಟು ಮಂತ್ರ ಕಲಿತು ಮನುಷ್ಯರ ಸಂದೇಶ ದೇವರ ತನಕ ಮುಟ್ಟಿಸುವ ತಂತ್ರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇನ್ನು ಅದಕ್ಕೂ ಕಲ್ಲು! ಹೊಟ್ಟೆ ಮೇಲೆ ತಣ್ಣೀರ ಬಟ್ಟೆನೆ ಗತಿ ಬಿಡಿ.
~ಕಲ್ಪನ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
"ಬ್ರಾಹ್ಮಣರಿಗೆ ವ್ಯಾಪಾರದ ಬುದ್ಧಿ ಇಲ್ಲ"
ಅಯ್ಯೋ ಪಾಪಾ ಪೆದ್ದ ಬ್ರಾಹ್ಮಣರು ಛೇ. ಈ ಅರ್ಚಕರು ಹುದ್ದೆಗೆ ಅವರಿಗೆ ೧೦೦% ಮಿಸಲಾತಿ ಇರಿಸಬೇಕು ಅಲ್ವ!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಸಾರ್,
ಮೆಕಾಲೆ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾನೆ ಅಲ್ಲವೆ? ೧೦೦ಪ್ರತಿಶತವಲ್ಲದಿದ್ದರೂ ೯೯ಪ್ರತಿಶತ. ಅವನ ಕಲ್ಪನೆಯ ಕೂಸುಗಳೆ ಅಲ್ಲವೆ ಈ ಬುದ್ದಿಜೀವಿಗಳು. ಅದನ್ನೆ ಅಲ್ಲವೆ ಅವನು ಬಯಸಿದ್ದು ಸಾಧಿಸಿದ್ದು.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಮೇಕಲೆಯನ್ನು ಹಳಿಯುವವರು ಅವನ ಶಿಕ್ಷಣ ಕ್ರಮದಷ್ಟೇ ಸಫಲ ಮತ್ತು ಹೆಚ್ಚೆಚ್ಚು ಮಂದಿಗೆ ತಲುಪುವಂತಹ ಶಿಕ್ಷಣಕ್ರಮವನ್ನು ರೂಪಿಸಿ ನಡೆಸಿ ತೋರಿಸಲಿ.
ಕರ್ನಾಟಕದಲ್ಲಿರುವ ಸನಾತನಿಗಳ ಸರಕಾರವೇಕೆ ಹಬ್ಬಗಳಿಗೆ ಕೋಟಿ ಕೋಟಿ ಸುರಿಯುವ ಬದಲು ಈ ಕಡೆ ಒಂದು ದಿಟ್ಟ ಹೆಜ್ಜೆಯಿಟ್ಟು ತಮ್ಮ ತಾಕತ್ತು ಮೇಧಾಶಕ್ತಿ ತೋರಬಾರದು!
ಮೇಕಲೆ ಬರುವುದಕ್ಕೆ ಹಿಂದೆಯೂ ನಮ್ಮಲ್ಲಿ ಇತ್ತಲ್ಲ ಗುರುಕುಲ, ಅದಕ್ಕೆ ಹೋದ ಶೂದ್ರರಲ್ಲೊಬ್ಬನಾದ ಏಕಲವ್ಯನ ಕತೆಯೇನಾಯಿತು ನೋಡಿರಿ.. ಇನ್ನು ಮಿಕ್ಕ ಶೂದ್ರರೂ ಹೋಗಿದ್ದರೆ ಅವರ ಏನೇನೂ ಕತ್ತಿರಿಸಿಕೊಳ್ಳುತ್ತಿದ್ದರೆ ಗುರುವರ್ಯರು ಆಚಾರ್ಯರುಗಳು!
ಹಾಗೆ ನೋಡಿದರೆ ನಳಂದ ಕೂಡ ಬೌದ್ಧರ ವಿದ್ಯಾಲಯ. ಬೌದ್ಧ ಜೈನರಷ್ಟು ಸಫಲವಾಗಿ ಹೆಚ್ಚೆಚ್ಚು ಮಂದಿ ವಿದ್ಯೆ ನೀಡಿದ್ದು ಬ್ರಿಟೀಶರೇ ಹೊರತು ವೈದಿಕರು ಎಂದೂ ಅಲ್ಲ.!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
@"ಕರ್ನಾಟಕದಲ್ಲಿರುವ ಸನಾತನಿಗಳ ಸರಕಾರವೇಕೆ ಹಬ್ಬಗಳಿಗೆ ಕೋಟಿ ಕೋಟಿ ಸುರಿಯುವ ಬದಲು ಈ ಕಡೆ ಒಂದು ದಿಟ್ಟ ಹೆಜ್ಜೆಯಿಟ್ಟು ತಮ್ಮ ತಾಕತ್ತು ಮೇಧಾಶಕ್ತಿ ತೋರಬಾರದು!"
ಮಾಯ್ಸ
ಇದೇನೋ ಉಲ್ಟಾ ಹೊಡಿತ ಇರೋ ಹಾಗಿದೆ, ನಾನು ಕುಮಾರ ಪಟ್ಟಾಭಿಷೆಕದ ಬಗ್ಗೆ ಬರೆದಾಗ , ಸರ್ಕಾರದ ಈ ನೀತಿಯನ್ನ ಸಮರ್ಥಿಸಿದ್ದಿರಿ ಅಲ್ವಾ!
ಮೆಖಾಲೆ ಶಿಕ್ಷಣದ ವ್ಯಾಪ್ತಿ ನೋಡಿ, ಅದನ್ನು ಸಮರ್ಥಿಸುವುದು ಸರಿಯಲ್ಲ.
ರಾಕೇಶ್ ಶೆಟ್ಟಿ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ರಾಕೇಶ ಮಹನೀಯ
ನಾನು ಸಮರ್ಥಿಸಿಲ್ಲ ಗಮನಿಸಿರಿ.. ! ಗುರುಕುಲದಲ್ಲಿ ಅದಿದೆ ಇದಿದೆ ಹಂಗಿದೆ ಹಿಂಗಿದೆ ಅನ್ನೋರು ಅದನ್ನ ನಡೆಸಿ ತೋರಿಸುವ ದೊಡ್ಡ ಅವಕಾಶವಿದಲ್ಲವೇ?
ಸನಾತನಿ ಪಕ್ಷದ ಯಾವ ರಾಜ್ಯದಲ್ಲೂ ಆ ಕಡೆ ಗಮನವನ್ನೇ ಹರಿಸಿಲ್ಲವಲ್ಲ. ಮಧ್ಯ ಪ್ರದೇಶವಾಗಲೀ ರಾಜಾಸ್ಥಾನವಾಗಲೀ ಶಿಕ್ಷಣದಲ್ಲಿ ಮುಂದಿಲ್ಲವಲ್ಲ.
ಅದೇ ಕಡುಪಾಪಿಗಳಾಳುವ ತಮಿಳುನಾಡು, ಕೇರಳ, ಬಂಗಾಳ ಇಲ್ಲಿ ದಲಿತರಿಂದ ಹಿಡಿದು ಬ್ರಾಹ್ಮಣರವರೆಗೂ ಎಲ್ಲ ವರ್ಗದವರೂ ಶಿಕ್ಷಣ ಪಡೆದುಕೊಂಡಿದ್ದಾರಲ್ಲ ಅದೂ ಮೇಕಲೇ ಪದ್ದತಿಯಲ್ಲಿ. ನಮ್ಮ ಸರ್ವೋಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶ ತಮಿಳು ದಲಿತ. ಇದು ಸನಾತನಿಗಳ ಕಣ್ಣಿಗೆ ಸಾಧನೆಯೇ ಅಲ್ಲ.
"ಅಂಗೈ ಹುಣ್ಣಿಗೆ ದರ್ಪಣ ಬೇಕೇ"
ಅವರ ಸಾಧನೆಯೇನಿದ್ದರೂ ಹಬ್ಬಗಳನ್ನು ಮಾಡುವುದರಲ್ಲಿ ಮಠಗಳಲ್ಲಿ ಸಾಷ್ಟಾಂಗ ಹೊಡೆಯುವುದರಲ್ಲಿ, ರಾಜಮನೆತನದ ಸಂತತಿಗಳಿಗೇನೇ ಮತ್ತೆ ನಮ್ಮ ನೆಲದ ಆಳ್ವಿಕೆಯನ್ನು ಕೊಟ್ಟು ಮರೆಯುವುದರಲ್ಲಿ, ಇತಿಹಾಸವನ್ನು ಕೆದಕಿ ಅಸಹ್ಯ ಮಾಡುವುದರಲ್ಲಿ. ನಿಮ್ಮಂತಹವರಿಗೆ ಅವರ ಪ್ರತಿ ಮಾತಾಡಿದವರನ್ನೆಲ್ಲ ’ಬುದ್ಧಿಜೀವಿ’ ಮುಂತಾದ ಸವಕಲು ಪದಗಳನ್ನು ಬಳಸಿ ಅಪಹಾಸ್ಯಮಾಡಿಕೊಂಡು ಇರೋದರಲ್ಲಿ.
ನಾನು ಯಾವಾಗ ಏನು ಹೇಳಿದ್ದು ಅನ್ನೋದು ಮುಖ್ಯವೋ.. ಈಗ ಎತ್ತಿರುವ ಸಂಗತಿಯು ಮುಖ್ಯವೋ. ಕುಮಾರಸ್ವಾಮಿಯನ್ನು ಈಗಲೂ ಸಮರ್ಥಿಸುತ್ತೀನಿ ಅವರಪ್ಪನನ್ನೂ ಕೂಡ. ಏಕೆಂದರೆ ಅವರು ನಮ್ಮ ಜಿಲ್ಲೆಗೆ ನನ್ನ ಹುಟ್ಟು ಜಿಲ್ಲೆಗೆ ಯಾವ ಜಿಲ್ಲೆಯ ದೊಡ್ಡ ದೊಡ್ಡ ಬಾಯಿ ಹರುಕು ನಾಯಕರೂ ಮಾಡದಷ್ಟು ಕೆಲಸವನ್ನು ಸದ್ದಿಲ್ಲದೇ ಮಾಡಿದ್ದಾರಲ್ಲ. ಮಿಕ್ಕ ಅವರ ತಪ್ಪುಗಳನ್ನು ಅವರ ಮಾಡಿದ ಜಿಲ್ಲೆಯ ಅಭಿವೃದ್ಧಿಯ ಮುಂದೆ ಕೊಂಚ ಸಹಿಸಿಕೊಳ್ಳವುದು ನಮ್ಮ ಧರ್ಮ(ಕೃತಜ್ಞತೆ). ಯಾವ ನಾಯಕ ತಪ್ಪು ಮಾಡಿಲ್ಲ? ಹಾಗಂತ ಅವರೆಲ್ಲ ಕೆಲಸಗಳಿಗೂ ನಮ್ಮ ಯಾರ ಒಪ್ಪುಗೆಯಿಲ್ಲ.
ವಸಿ ವಿಷಯಕ್ಕೆ ಪ್ರತಿ ಹೇಳಿ ನಿಮ್ಮ ಜಾಣತನ ತೋರಿರಿ. ಗುರುಕುಲ ಪದ್ದತಿಯಾವಾಗ ಸುರು ಮಾಡಿಸ್ತೀರಿ. ಯಾವಾಗ ದಲಿತ ಮಕ್ಕಳನ್ನೂ ಆ ಗುರುಕುಲದಲ್ಲಿ ಏನೂ ಕತ್ತರಿಸಿಕೊಳ್ಳದೇ ಮೇಲುವರ್ಗದವರಿಗೆ ಸಮವಾಗಿ ಪಾಠ ಹೇಳಿಕೊಡಿಸಿತ್ತೀರಿ ಹೇಳಿರಿ?
ನನಗೆ ಮೇಕಲೆಯ ಪದ್ದತಿಯೇ ಸರಿ ಮತ್ತು ಮೆಚ್ಚು. ಅಂಗಡಿಗೆ ಹೋಗಿ ಅಕ್ಕಿ ತಂದಷ್ಟು ಸುಲಭ ವ್ಯವಸ್ಥೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಮಾಯ್ಸ ಪ್ರಭುಗಳೇ
@"ಕುಮಾರಸ್ವಾಮಿಯನ್ನು ಈಗಲೂ ಸಮರ್ಥಿಸುತ್ತೀನಿ ಅವರಪ್ಪನನ್ನೂ ಕೂಡ"
ನಾನು ಹೇಳಿದ್ದು ಕುಮಾರನ ಬಗ್ಗೆ ಅಲ್ಲ, ಅದೇ ಸನಾತನಿ ಅಂದ್ರಲ್ಲ ಅವರ ಬಗ್ಗೆ, ಅವರು ಆನೆ ದಾನ ಮಾಡಿದ್ದನ್ನು ಸಮರ್ಥಿಸಿ ಕೊಂಡಿದ್ದಿರಿ ಅಂತ. ನೀವು ಏನು ಹೇಳಿದ್ದಿರಿ ಅಂತಾ ನೀವೇ ಒಮ್ಮೆ ನೋಡಿ
<< ಭಗವಂತನಿಗೆ ದಾನಕೊಟ್ಟಿದನ್ನು ಗಣಿಸುವುದು ಮಹಾಪಾಪ.
ಗಜದಾನದಿಂದ ಕರ್ನಾಟಕರಾಷ್ಟ್ರದ ಪ್ರಜಾ ಕುಶಲವನ್ನು ಯಾಚಿಸರಬೇಕು ಮಹನೀಯ ಯಡಿಯೂರಪ್ಪ ಮುಖ್ಯಾಮಾತ್ಯರು.
ಧನ್ಯವಾದ
-ಮಹೇಶ >>
ನಿಮ್ಮ ಬ್ರಾಹ್ಮಣ, ದಲಿತ, ಗುರುಕುಲ ಆ ಚರ್ಚೆಗೆ ನಾನಿಲ್ಲ.
ರಾಕೇಶ್ ಶೆಟ್ಟಿ
>ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಆನೆ ಕೊಟ್ಟಿದನ್ನು ಸಮಥಿಸಿದ್ದೀನ?


ಅದೂ ಭಗವಂತನಂತೆ
ಏನ್ರೀ ಇದು.!
ಇಲ್ಲಿ ಬ್ರಾಹ್ಮಣ ಮತ್ತು ದಲಿತ ಬಿಟ್ಟು ಮತಾಂತರ ಮತ್ತು ಹಿಂದೂ ಧರ್ಮದಲ್ಲಿ ಏನಿದೆ?
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಹಿಂದೂ ಧರ್ಮದ ಚರ್ಚೆ ಬಂದಾಗಲೆಲ್ಲಾ ಬ್ರಾಹ್ಮಣರನ್ನು ಎಳೆಯೋದು ಈಗ ತುಂಬಾ ದೊಡ್ಡ ಫ್ಯಾಷನ್ ಆಗಿದೆ
ಬ್ರಾಹ್ಮಣರೇತರ ವ್ಯಕ್ತಿಯೊಬ್ಬರು ಈ ಲೇಖನ ಬರೆದಿದ್ದರೂ ಕೇವಲ ಬ್ರಾಹ್ಮಣರೇ ಹಿಂದೂತ್ವ ಎಂದು ಬೊಬ್ಬೆ ಹೊಡೆಯುವುದು ಎಂಬ ಕೂಗು ಇನ್ನೂ ನಿಂತಿಲ್ಲವಲ್ಲ ?
http://thereda-mana.blogspot.com/
ರೂಪ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಅಂತೂ ನಿಮಗೆ ಆನೆ ಭಗವಂತ ಅಲ್ಲ ತಿಳಿಯಿತಲ್ಲ
@ "ಇಲ್ಲಿ ಬ್ರಾಹ್ಮಣ ಮತ್ತು ದಲಿತ ಬಿಟ್ಟು ಮತಾಂತರ ಮತ್ತು ಹಿಂದೂ ಧರ್ಮದಲ್ಲಿ ಏನಿದೆ?"
ಬ್ರಾಹ್ಮಣ , ದಲಿತರನ್ನು ಬಿಟ್ಟರೆ ನೀವೇ ಹೇಳಿದ ಕ್ಷತ್ರಿಯ, ಶೂದ್ರ, ವೈಶ್ಯ (ಇನ್ನೊ ಇರ್ಬೇಕು ಆದ್ರೆ ನನ್ಗೊತಿಲ್ಲ) ಇವರೂ ಇದ್ದಾರೆ ಸರ್.
ರಾಕೇಶ್ ಶೆಟ್ಟಿ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಏಕಲವ್ಯ ಯಾವಾಗ ಶೂದ್ರನಾದ ನನಗೆ ಗೊತ್ತಿಲ್ಲ. ನಂತರದ ಯುದ್ದದಲ್ಲಿ ಅವನು ಭಾಗಿಯಾಗಿದ್ದನಲ್ಲವೆ. ಶೂದ್ರ(ನಿಮ್ಮ ಭಾವನೆಯಲ್ಲಿ), ಕ್ಷತ್ರಿಯನಾದನಲ್ಲವೆ?
ಮೆಕಾಲೆಯನ್ನು ನಾನೆಲ್ಲಿ ಹೀಗಳೆದೆ ಮಹೇಶ್, ಅವನ ಯಶಸ್ಸನ್ನು ಕಂಡು ಕರುಬಿದೆ ಅಷ್ಟೆ
ಮಹೇಶ್ ಗುರುಕುಲದಲ್ಲಿ ಎಂದೂ ಶೂದ್ರ, ಬ್ರಾಹ್ಮಣ ಎನ್ನುವ ವ್ಯತ್ಯಾಸವಿರಲಿಲ್ಲ. ಅದೆಲ್ಲ ನಮ್ಮ ಕಲ್ಪನೆಯ ಕೂಸು. ಬುದ್ದಿವಂತರೆಲ್ಲಾ ಬ್ರಾಹ್ಮಣರು ಸೋಮಾರಿಗಳಾಗಿ ಕೆಲಸಕ್ಕೆ ಬಾರದವರೆಲ್ಲ ಹೆಚ್ಚು ಬುದ್ದಿವಂತಿಕೆಯ ಅವಶ್ಯಕತೆಯಿರದ ಕೆಲಸಕ್ಕೆ ಹೋದವರೆಲ್ಲ ಶೂದ್ರರು. ಅದು ಇಂದಿಗೂ ಪ್ರಸ್ತುತವಿದೆ. ಕಣ್ತೆರೆದು ನೋಡಬೇಕಷ್ಟೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
"ಮಹೇಶ್ ಗುರುಕುಲದಲ್ಲಿ ಎಂದೂ ಶೂದ್ರ, ಬ್ರಾಹ್ಮಣ ಎನ್ನುವ ವ್ಯತ್ಯಾಸವಿರಲಿಲ್ಲ"
ನಗುವೊಂದೇ ಇದಕ್ಕೆ ಪ್ರತಿಕ್ರಿಯೆ.!
’ಮನುಸ್ಮೃತಿ’ ಎಂಬ ಪದವೆತ್ತಿದರೇ ಸಾಕು ಇನ್ನು ನೀವೆಲ್ಲ ಬೊಂಬ ಬಜಾಯಿಸುತ್ತೀರಿ. ಅದು ಯಾವಾ ಯಾವ ಗುರುಕುಲದಲ್ಲಿ( ಇಂದೂ ಇರುವ) ಎಷ್ಟು ಎಷ್ಟು ದಲಿತರಿಗೆ, ದಲಿತರೇನು ಒಕ್ಕಲಿಗರಿಗೆ, ಕುರುಬರಿಗೆ ಪಾಠ ಹೇಳಿಕೊಟ್ಟಿದ್ದಾರೆ ಕೊಂಚು ತೋರಿಸಿರಿ.!
ಪೇಜಾವರ ಮಠದಲ್ಲಿ ಕುರುಬ ಒಕ್ಕಲಿಗರಿಗೆ ವೇದಪಾಠ ಕಲಿಸುವರ?
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಸುಮ್ನೆ ಜಗಳ ಮಾಡ್ಕೊಬೇಡಿ. ಇವತ್ತಿನ ಟೈಮ್ಸ್ ಪತ್ರಿಕೆ ತೆಗೆದು ನೋಡಿ. ಬೆಂಗಳೂರಿನ ಶೃಂಗೇರಿ ಶಂಕರ ಮಠದಲ್ಲಿ ೫೦೦೦ ಜನಕ್ಕೆ ಜಾತಿ-ಭೇದವಿಲ್ಲದೆ ಗೀತಾಶ್ಲೋಕ ಪಠನೆ ಹೇಳಿಕೊಟ್ಟಿದ್ದಾರೆ. ಮತ್ತು ಇದು ಕಳೆದ ೧೫ ವರ್ಷಗಳಿಂದ ನಡೆಯುತ್ತಿದೆಯಂತೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಆಗಮ ಮತ್ತು ವೇದ ಹೇಳಿಕೊಡಬೇಕು.. ಅದು ಯಾವಾಗ ಸುರು ಮಾಡ್ತಾರಂತೆ?
ಗೀತೆ ಕಲಿತು ಪೌರೋಹಿತ್ಯ ಮಾಡಲು ಬರುವುದಿಲ್ಲ.!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಆಸಕ್ತರು ಬಂದರೆ ಹೇಳಿಕೊಡಲೂ ಬಹುದು. ಯಾರಾದರೂ ಹೋಗಿ ಕೇಳಿದ್ದಾರಾ ಎಂಬುದೇ ಪ್ರಶ್ನೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ನನ್ನ ವೃತ್ತಿಯನ್ನು ನಾನೇಕೆ ಬೇರೆಯವ್ರಿಗೆ ಬಿಟ್ಟು ಕೊಡಲಿ? ನಿಮ್ಮ ಲಕ್ಷಾಂತರ ಆದಾಯವಿರುವ ವೃತ್ತಿಯನ್ನು ಬೇರೆಯವರಿಗೆ ಬಿಟ್ಟು ನೀವು ಭಿಕ್ಷಾಟನೆಗೆ ತೊಡಗುತ್ತೀರ? ಹಾಗೆಯೇ ಇದೂ ಕೂಡ, ಅದು ಆಗೇ ಬಿಡಲಿ ಆದರೆ ಅವರಿಗೆ ಹೇಳಿ ಅವರಿಗೂ ಕಲಿಸಲು ಮನ ಒಲಿಸೋಣ, ಆದರೆ ಅವರ ಸೊತ್ತಾಗಿರುವ ಮೀಸಲಾತಿಯನ್ನು ಬೇರೆಯವರಿಗೂ ಕೊಡಿಸುವುದಾದರೆ ಮಾತ್ರ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಒಹೋ ಬಿಟ್ಟುಕೊಡುವುದಾ? ಸರಿ!
ಬಿಟ್ಟು ಕೊಡಬೇಡಿರಿ.. ದಲಿತರೆಲ್ಲ ಚರ್ಚುಗಳಿಗೆ ಹೋದರೆ, ಗುಡಿಗೆ ಬಂದು ಹುಂಡಿಗೆ ಕಾಣಿಕೆ ಹಾಕಲ್ಲ ಅಂತ ಹೊಡೆಯಿರಿ.!
ಮಹೋನ್ನತ ಧರ್ಮ!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
!!!!!
:-)
ವಿತಂಡವಾದ ಮತ್ತು ಅರ್ಥಹೀನ ಪ್ರತಿಕ್ರಿಯೆಗಳಿಗೆ ಹೀಗಷ್ಟೆ ನನಗೆ ಪ್ರತಿಕ್ರಿಯಿಸಲು ಬರುವುದು ಕ್ಷಮಿಸಿ.
ಇಲ್ಲಿಗೆ ಮುಗಿಸೋಣ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಪೇಜಾವರ ಮಠದ ಬಗ್ಗೆ ನನಗೆ ಅರಿವಿಲ್ಲ. ಆದರೆ ಗುರುಕುಲಗಳಲ್ಲಿ ಶೂದ್ರ ಬ್ರಾಹ್ಮಣ ಎನ್ನುವ ವ್ಯತ್ಯಾಸ ಹಿಂದೆ ಇರಲಿಲ್ಲ, ಈಗಲೂ ಇಲ್ಲ. ಇದಕ್ಕೆ ಉದಾಹರಣೆ ಹರಿಹರಪುರದ ಬಳಿಯಿರುವ ಗುರುಕುಲವೇ ಸಾಕ್ಷಿ ತಾವೊಮ್ಮೆ ಅಲ್ಲಿ ಭೇಟಿಕೊಟ್ಟು ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಅಲ್ಲು ತಮ್ಮ ನಗು ಮುಂದುವರೆಯಲಿ ಎಂದು ನನ್ನ ಹಾರೈಕೆ.
ಟಿಪ್ಪು ಕನ್ನಡ ವಿರೋಧಿಯೆ? ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ.ಸೂರ್ಯನಾಥ ಕಾಮತರು ಹೇಳಿದ ಒಂದು ಪ್ರಸಂಗವನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಸಂಬದ್ದವಲ್ಲ ಎಂದು ನನ್ನ ಭಾವನೆ.
ಅವರೊಮ್ಮೆ ಮನೆಗೆ ಬಂದಾಗ ಅವರ ಮನೆಯ ನಡುಮನೆಯ ಸೋಫಾ ಮೇಲೆ ಅತ್ಯಂತ ದೊಡ್ಡದಾದ ಎತ್ತರವಾದ ವಸ್ತುವೊಂದು ಇದ್ದಂತೆ ಭಾಸವಾಯಿತು, ಸ್ವಲ್ಪ ಹತ್ತಿರ ಬಂದ ನಂತರ ಅದೊಂದು ದೊಡ್ಡ ಮೂಟೆಯ ಹಾಗೆ ಗೋಚರಿಸಿತು. ನಂತರ ಹತ್ತಿರ ಬಂದು ಕನ್ನಡಕ ಹಾಕಿಕೊಂಡು ನೋಡಿದಾಗ ಅರ್ಥವಾಯಿತಂತೆ ಅದು ಅವರ ಹೆಂಡತಿಯೆಂದು. ಇದು ನಮ್ಮಲ್ಲೆರಿಗೂ ಅನ್ವಯಿಸುತ್ತದೆ.
ಇನ್ನು ಮನುಸ್ಮೃತಿ ಬಗ್ಗೆ ನನಗೆ ಗೊತ್ತಿಲ್ಲ ಏನೂ ಗೊತ್ತಿಲ್ಲದರ ಬಗ್ಗೆ ನಾನು ಹೇಗೆ ಪ್ರತಿಕ್ರಿಯಿಸಲಿ. ಗೊತ್ತಿರುವ ತಾವು ವಿಶ್ಲೇಷಿಸಿದರೆ ಧನ್ಯನಾಗುವೆ.
ಹೊರಗೆ ನಿಂತು ನಿಂದಿಸುವ ಬದಲು ಬದಲಾವಣೆ ತರಲು ತಾವೇ ಏಕೆ ಪ್ರಯತ್ನಿಸಬಾರದು ಈಗಾಗಲೆ ಪ್ರಾರಂಭಿಸಿದ್ದರೆ ನನ್ನ ಅಭಿನಂದನೆಗಳು. ಬೇರೆಯವರು ಬದಲಾಗಲಿ ಯಾರೋ ಬಂದು ಮಾಡಲಿ ಎಂದು ನೀರಿಕ್ಷಿಸುವ ಬದಲು ಮೊದಲ ಬದಲಾವಣೆ ನನ್ನಿಂದಲೇ ಆಗಲಿ ಎನ್ನುವು ಉದಾತ್ತತೆ ಅಲ್ಲವೆ? ಉದ್ದಟತನ ವೆನಿಸಿದರೆ ಕ್ಷಮೆಯಿರಲಿ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಅಂತಹ ಮಠವಿದ್ದರೆ ಒಳ್ಳೇದೇ.
ಸದ್ಯ ಉದಾಹರಣೆಗೆಂದು ಒಂದಾದರು ಇದೆಯಲ್ಲ. ನಲಿವಾಯ್ತು
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಹೀಗೆ ಒಂದೊಂದಾಗಿ ತಮ್ಮ ಅರಿವಿಗೆ ಬರುತ್ತದೆ. ನಮ್ಮ ಮನ ಕಣ್ಣು ಎಲ್ಲ ಇಂದ್ರಿಯಗಳನ್ನು ತೆರೆದಿಟ್ಟುಕೊಂಡು ಪರಾಮರ್ಶಿಸಬೇಕಷ್ಟೆ. ಇನ್ನೂ ಅನೇಕ ಉದಾಹರಣೆಗಳಿವೆ ಸದ್ಯಕ್ಕೆ ಇಷ್ಟು ಸಾಕು.
ಸಾಯಿಬಾಬ ದೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಪದ್ದತಿಯಲ್ಲಿ ಕಲಿತು ನಂತರ ಸ್ನಾತಕೋತ್ತರ ಪದವಿಗಳಿಸಿದ ನನ್ನ ಸ್ನೇಹಿತರ ಮಗನೊಬ್ಬನ ವಿನಯ ಮತ್ತು ಛಾತಿಯನ್ನು ಗಮನಿಸಿದ ಆತನ ಸಂಸ್ಥೆ ಆ ಸಂಸ್ಥೆಯಿಂದ ಪದವಿಗಳಿಸಿದ ಯಾರೆ ಬಂದರೂ ತಕ್ಷಣವೇ ಸಂಸ್ಥೆಗೆ ಸೇರಿಸಿಕೊಳ್ಳಲು ಸೂಚಿಸಲಾಗಿದೆ. ಆ ಸಂಸ್ಥೆ ಬಹುರಾಷ್ಟ್ರೀಯ ಸಂಸ್ಥೆ ಮತ್ತು ಆತ ಹಿಂದುಳಿದ ವರ್ಗದವ ಎಂಬುದನ್ನು ತಮ್ಮ ಗಮನಕೆ ತರಲು ಹರ್ಷಿಸುತ್ತೇನೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಸಾಯಿ ಬಾವಾ ಅವರ ವಿದ್ಯಾಲಯಗಳ ಬಗ್ಗೆ ನನಗೆ ತಿಳಿಸಿದಕ್ಕೆ ನನ್ನಿ!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಪುನಃ ಮಹಾಭಾರತ ಓದಿರಿ.. ಯುದ್ಧದಲ್ಲಿ ಇದ್ದವರೆಲ್ಲ ಕ್ಷತ್ರಿಯರಲ್ಲ. ಕರ್ಣನೂ ಸಹ.
ಘಟೋತ್ಕಚ ಮುಂತಾದ ರಕ್ಕಸರೂ ಕ್ಷತ್ರಿಯರಲ್ಲ. ಹಾಗೇನೇ ಗೊಲ್ಲನಾದ ಕೃಷ್ಣವಂಶ ಯಾದವರನ್ನೂ ಕಚಡ ಜನ ಎಂದು ಕ್ಷತ್ರಿಯ ಶಿಶುಪಾಲನಿಂದ ದುರ್ಯೋಧನಾದಿಗಳೂ ಹಿಯ್ಯಾಳಿಸಿದ್ದಾರೆ.
ಕ್ಷತ್ರಿಯರಾಗಲು ಅವನು ಆರ್ಯನಾಗಿರಬೇಕು.!
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಅಂತೂ ಮೇಲಿನ ತಮ್ಮ ಪ್ರತಿಕ್ರಿಯೆಯಂತೆ ತಾವು ಒಪ್ಪಿಕೊಂಡಿರಿ ಮಹಾಭಾರತ ಕಾಲದಲ್ಲಿ ವರ್ಣ ಪದ್ದತಿ ವೃತ್ತಿ ಆಧರಿಸಿದ್ದೆಂದು.
ಹೌದು ಜಾತಿಪದ್ದತಿ ಮೌಡ್ಯಗಳಿಂದ ನಮ್ಮ ವ್ಯವಸ್ಥೆಯಲ್ಲಿ ನುಸುಳಿದೆ. ಕಾಲಕಾಲಕ್ಕೆ ಮೌಡ್ಯಗಳು ಎಲ್ಲ ಧರ್ಮ ದೇಶಗಳಲ್ಲು ನುಸುಳಿವೆ. ಅದನ್ನು ಅಷ್ಟೆ ಸಮರ್ಥವಾಗಿ ಹೊಡೆದೋಡಿಸಲಾಗುತ್ತಿದೆ. ನೂರಾರು ವರ್ಷಗಳಿಂದ ಆಚರಣೆಗೆ ಬಂದ ಮೌಡ್ಯವನ್ನು ಒಂದೆ ದಿನದಲ್ಲಿ ತೊಳೆದುಬಿಡಬೇಕೆಂದು ನೀರೀಕ್ಷಿಸುವುದು ಸರಿಯೇ? ಜಾತಿ ಪದ್ದತಿ ಇಂದಿನ ಸಮಾಜದಲ್ಲಿ (ಹಿಂದೂಗಳ ಜಾತಿಪದ್ದತಿಯಲ್ಲ) ಆಚರಿಸಲಾಗಿತ್ತಿಲ್ಲವೆ? ತಲಾಧಾಯವನ್ನು ಗಮನದಲ್ಲಿಟ್ಟುಕೊಂದು ನಾವು ನಮ್ಮ ಸ್ನೇಹಿತರನ್ನು ಆರಿಸಿಕೊಳ್ಳುವುದಿಲ್ಲವೆ (ಬಾಲ್ಯ ಸ್ನೇಹಿತರು ಇದಕ್ಕೆ ಹೊರತು) ದಾರಿಯಲ್ಲಿ ಕಸಗುಡಿಸುವವರನ್ನು ಚರಂಡಿ ಸ್ವಚ್ಚಗೊಳಿಸುವವರನ್ನು ನಾವು ಕರೆದು ಅವನೊಡನೆ ನಮ್ಮ ಊತದ ಮೇಜಿನಲ್ಲಿ ಕೂರಿಸಿ ಸಹ ಪಂಕ್ತಿಗೆ ಕೂರುತ್ತೇವೆಯೆ? ಇದೆ ತೆರನಾದ ಉದಾಹರಣೆಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ.
ಮೌಡ್ಯಗಳ ನುಸುಳುವಿಕೆ ಅಥವ ಅಂಧಾನುಕರಣೆಗೆ ನುಸುಳುವಿಕೆಗೆ ಉದಾಹರಣೆ, ಶಿವಾಜಿನಗರ ಮೇರಿಯಮ್ಮನ ರಥೋತ್ಸವ, ಕ್ರಿಶ್ಚಿಯನ್ನರಲ್ಲಿ ಎಲ್ಲಿತ್ತು? ಬೆಂಗಳೂರಿನ ನನ್ನ ಸಹೋದ್ಯೋಗಿಯೊಬ್ಬರ ಪ್ರಕಾರ ಅವರ ಮನೆ ಯೇಸು ವಿಗ್ರಹಕ್ಕೆ ಆರತಿ(ಮಂಗಲಾರತಿ) ಬೆಳಗಿ ದೀಪ ಗಂಧದ ಕಡ್ಡಿ ಹಚ್ಚಿ ಪೂಜಿಸುತ್ತಾರೆ. ಕೇಳಿದಾಗ ಅಯ್ಯೊ ದೇವರ ಆರಾಧನೆ ಸ್ವಾಮಿ ಎನ್ನುವ ಉತ್ತರ. ಈಗ ಹೇಳಿ ರಥೋತ್ಸವ ಒಂದು ಮೌಡ್ಯ ಕ್ರಿಶ್ಚಿಯನ್ನರಲ್ಲಿ ಎಲ್ಲಿತ್ತು ಈ ಆಚರಣೆಗೆ ಇಂದಿಗೂ ಅದಕ್ಕೆ ಸಾವಿರಾರು ಮಂದಿ ಸೇರುತ್ತಾರೆ (ತಾವೂ ಗಮನಿಸಿರುತ್ತೀರಿ) ಹಿಂಬದಿಯಲ್ಲಿ ಮೂರ್ತಿಮೂಜೆಯನ್ನು ನಿಂದಿಸುತ್ತಾರೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ನನ್ನಿ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ತಮಗೆ ತಿಳಿದಿರಲಿ
ಮಹೇಶ್
ಏಕಲವ್ಯನಿಗೆ ಕಲಿಸಲು ಒಪ್ಪದಿದ್ದುದು ಅವನು ಶೂದ್ರ ಎಂಬ ಕಾರಣಕ್ಕೆ ಅಲ್ಲ ಅರ್ಜುನನಂತೆ ಮತ್ತೊಬ್ಬ ವೀರ ಹುಟ್ಟಬಾರದೆಂದು
http://thereda-mana.blogspot.com/
ರೂಪ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಓಹೋ!ಥ್ಯಾಂಕ್ಸ್
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ನಂನಿ ಎಲ್ಲಿ ಹೋಯ್ತು?
http://thereda-mana.blogspot.com/
ರೂಪ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ನನ್ನಿ ಇದೆ. ಆದರೆ ಇಂಗ್ಲೀಷ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಿಮ್ಮ ಮಗಳಿಗೆ ಸೀಟು ಸಿಕ್ಕಲೆಂದು ಕಣಕಟ್ಟೆಯ ದುಗ್ಗಮ್ಮನಲ್ಲಿ ಹರಕೆ ಹೊತ್ತ ಮೇಲೆ ನನ್ನ ಕೊಡುಗೆಯಾದರೂ ಕೊಂಚ ಬೇಡವೇ!
ಅದ ಸರಿ ನಿಮ್ಮ ಮಗಳು ಸ್ಕೂಲಲ್ಲಿ ಆ ಪ್ರಿನ್ಸಿಪಾಲಳ ಬಳಿ ಮಮ್ಮಿ ಎಂದೇ ಕರೆಯುವಳಾ?
ಪರೆಸನಲ್ ಆಗಬೇಡಿರಿ.! ನಾನೂ ಆಗಲ್ಲ ಇದು ಕೊನೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
>>>ಆದರೆ ಇಂಗ್ಲೀಷ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಿಮ್ಮ ಮಗಳಿಗೆ ಸೀಟು ಸಿಕ್ಕಲೆಂದು ಕಣಕಟ್ಟೆಯ ದುಗ್ಗಮ್ಮನಲ್ಲಿ ಹರಕೆ ಹೊತ್ತ ಮೇಲೆ ನನ್ನ ಕೊಡುಗೆಯಾದರೂ ಕೊಂಚ ಬೇಡವೇ!"
ಅದಕ್ಕೆ ಹರಕೆ ಹೊತ್ತಿದ್ದು ಯಾಕೆ ಅಂತ ಹೇಳಿದ್ದೆನಾ ನಾನು? ಅದಕ್ಕೂ ಸ್ಕೂಲಿಗೆ ಸೀಟ್ ಸಿಗೋಕು ಯಾವುದೇ ಸಂಬಂಧವಿಲ್ಲ. ನಿಮಗೂ ಹರಕೆಗೂ , ದೇವಸ್ಥಾನಕ್ಕೂ ಬಹು ದೂರ ಬಿಡಿ
ಅಷ್ಟಕ್ಕೂ ನನ್ನ ಮಗಳು ಪ್ರಿನ್ಸಿಪಾಲ್‍ನ್ ಮಮ್ಮಿ ಅಂತ ಯಾಕೆ ಕರೀಬೇಕು ಅವಳ ಅಮ್ಮ ನಾನಿರುವಾಗ?
http://thereda-mana.blogspot.com/
ರೂಪ
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಮೆಕಾಲೆ ಸ್ವತಹ ಹೇಳಿದ್ದು: "...that I do not think we would ever conquer this country, unless we break the very backbone of this nation, which is her spiritual and cultural heritage and therefore, I propose that we replace her old and education system, her culture, for if the Indian think that all that is foreign and English is good and greater than their own, they will lose their self esteem, their native self-culture and they will become what we want them,.." -ಇದನ್ನು ಓದಿದ ಮೇಲೆ ಅವನ ಶಿಕ್ಷಣದ ಪದ್ಧತಿಯ ಉದ್ದೇಶ ಏನಾಗಿತ್ತು ಅಂತ ಸ್ಪಷ್ಟವಾಗಿದೆಯಲ್ಲಾ? ಬ್ರಿಟಿಷರಿಗೆ ತಮ್ಮ ಕೆಲಸಗಳನ್ನು ಮಾಡಿಕೊಡುವ ಗುಲಾಮರು ಬೇಕಿತ್ತು, ತರಬೇತಿ ನೀಡಿ ತಯಾರಿಸಿಕೊಂಡರು. ಅವರಿಗೆ ಭಾರತೀಯರನ್ನು ಉದ್ಧಾರ ಮಾಡಬೇಕೆನ್ನುವ ಆಕಾಂಕ್ಷೆ ಏನೂ ಇರಲಿಲ್ಲ. ಹಾಗಂತ ಆ ಶಿಕ್ಷಣ ಪದ್ಧತಿಯಿಂದ ಭಾರತಕ್ಕೆ ಏನೂ ಪ್ರಯೋಜನ ಆಗಿಲ್ಲ ಅಂತಲ್ಲಾ -ಸ್ವಲ್ಪ ಮಟ್ಟಿಗೆ ಒಳ್ಳೆಯದಾಗಿದೆ, ಹಾಗೆ ಕೆಟ್ಟದ್ದೂ ಬಹಳಷ್ಟೇ ಆಗಿದೆ.
ಇನ್ನು ಏಕಲವ್ಯನ ಕಥೆ- ದ್ರೋಣಾಚಾರ್ಯರು ಬ್ರಾಹ್ಮಣರ ಮಕ್ಕಳಿಗೆ ವೇದಪಾಠ ಹೇಳುತ್ತಿರಲಿಲ್ಲ, ಅವರನ್ನು ಸಾಕುತ್ತಿದ್ದ ಕ್ಷತ್ರಿಯರಿಗೆ ಶಸ್ತ್ರಾಭ್ಯಾಸ ಮಾಡಿಸುತ್ತಿದ್ದರು. ಅನ್ನದ ಋಣ ತೀರಿಸಲು ಏಕಲವ್ಯನ ಬೆರಳು ಕೇಳಿದ್ದು ನಿಜ. ಅವನು ಶೂದ್ರ ಎಂತಲ್ಲ-ಒಂದುವೇಳೆ ಒಬ್ಬ ಬ್ರಾಹ್ಮಣ ಹುಡುಗ ಆ ರೀತಿ ಮಾಡಿದ್ದರೂ ಅದೇ ಗುರುದಕ್ಷಿಣೆ ಕೇಳುತ್ತಿದ್ದರೇನೋ? ದ್ರೋಣರದು ಒಂದು ರೀತಿ private ಸ್ಕೂಲು
ವೈದಿಕರ ಉದ್ದೇಶ ವೇದಗಳನ್ನು ಕಾಪಾಡಿಕೊಂಡು ಬರುವುದು. ಅದರ ಸಲುವಾಗಿ ಅವರು ಕ್ಲಪ್ತವಾದ ಜೀವನ ನಡೆಸುತ್ತಿದ್ದರು. ಇದ್ದ ಕಡೆಯೇ ಇರುವುದು, ವಂಶ ಬೆಳೆಸುವುದು, ಹೊರಗಡೆ ಊಟ ಮಾಡದಿರುವುದು, ತಮ್ಮ ಮಕ್ಕಳಿಗೆ ವೇದಾಧ್ಯಯನ ಮಾಡಿಸುವುದು ಇತ್ಯಾದಿ ಇವರ ಜೀವನ ಪದ್ಧತಿ. ವೇದಗಳು ಬಾಯಿಪಾಠದ ಮುಖಾಂತರ ಮಾತ್ರ ಪ್ರಚಾರವದ್ದರೂ, ಉಳಿದುಕೊಂಡು ಬಂದಿದ್ದು ಈ ಜೀವನ ಶೈಲಿಯಿಂದ. ವೈದೀಕರಿಗೆ ದೇಶಕ್ಕೆಲ್ಲಾ ವಿದ್ಯಾಭ್ಯಾಸ ಮಾಡಿಸಿ ಅಂತ ಯಾರೂ ಅವರನ್ನು ಕೇಳಲೂ ಇಲ್ಲ, ಹೆಚ್ಚು ಪಾಲು ವೈದೀಕರು ಆ ಗುರಿಯನ್ನು ಇಟ್ಟುಕೊಂಡೂ ಇರಲಿಲ್ಲ. ಇದು ತಪ್ಪೋ ಸರಿಯೋ -ಅವರವರ ಭಾವಕ್ಕೆ ತಕ್ಕಂತೆ ಉತ್ತರಿಸಬಹುದು.
ಆದರೂ ಗುರುಕುಲ ನಡೆಸುವವರು ನಡೆಸುತ್ತಲೇ ಇದ್ದರು. ನಮ್ಮ ಶ್ರೀಕೃಷ್ಣ ಭಗವಾನನು ಗೊಲ್ಲರಲ್ಲಿ ಬೆಳೆದರೂ ಸಾಂದೀಪನಿ ಮಹರ್ಷಿಗಳು ವಿದ್ಯಾದಾನ ಮಾಡಲಿಲ್ಲವೇ? ಜಾಬಾಲಿಗೆ ವಿದ್ಯೆ ಸಿಗಲಿಲ್ಲವೇ? ವೇದವ್ಯಾಸರು ವೈದಿಕ ಮನೆಯಲ್ಲಿ ಹುಟ್ಟಿದವರೇ?
ಬೌದ್ಧರ, ಜೈನರ ಉದ್ದೇಶವೂ ತಮ್ಮ ಧರ್ಮ ಪ್ರಚಾರವಷ್ಟೇ? ಅದಕ್ಕೆ ಶಿಕ್ಷಣದ ಮೂಲಕ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಿದರು.
ಇನ್ನು ಈಗಿನ ಕಾಲದಲ್ಲಿ, ಗುರುಕುಲ ಪದ್ಧತಿ ಶುರು ಮಾಡಿ ವೇದ ಪಾಠ ಎಲ್ಲರಿಗೂ ಹೇಳಿಕೊಟ್ಟರೆ ನಡೆಯುತ್ತದೆಯೇ? ಅದರ ಅಗತ್ಯ ಇದೆಯೇ? ಗುರುಕುಲದ ಪದ್ಧತಿ ಪಾಲಿಸುವ ಶಾಲೆಗೆ ಪೋಷಕರು ಮಕ್ಕಳನ್ನು ಕಲಿಸುತ್ತಾರೆಯೇ? ಇದೀಗ ಎರಡೂ ಪದ್ಧತಿಗಳನ್ನು ಬಳಸಿಕೊಂಡು ಉತ್ತಮವಾದ ಶಿಕ್ಷಣವನ್ನು ರೂಪಿಸುವ ಸುವರ್ಣ ಅವಕಾಶ ನಮಗಿದೆ, ಉಪಯೋಗಿಸಿಕೊಳ್ಳಬೇಕಷ್ಟೇ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಅಯ್ಯಾ ಮ್ಯಕಲೆಯ ಶಿಷ್ಯನೇ !
ಇದನ್ನು ಓದು !
ವಿಷಯ ತಿಳಿಯದೆ ಸುಮ್ಕೆ ಮಾತಾಡೋ ಅಭ್ಯಾಸ ಒಳ್ಳೇದಲ್ಲಾ....
>>> ಮೇಕಲೆಯನ್ನು ಹಳಿಯುವವರು ಅವನ ಶಿಕ್ಷಣ ಕ್ರಮದಷ್ಟೇ "ಸಫಲ" ಮತ್ತು "ಹೆಚ್ಚೆಚ್ಚು ಮಂದಿಗೆ ತಲುಪುವಂತಹ ಶಿಕ್ಷಣಕ್ರಮವನ್ನು" ರೂಪಿಸಿ ನಡೆಸಿ ತೋರಿಸಲಿ. ಇವನ ನೀತಿಯನ್ನು ಸಫಲ ಅ೦ದವರಲ್ಲಿ ನೀವೇ ಮೊದಲಿಗರು.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ನನ್ನ ಲೇಖನಕ್ಕೆ ವ್ಯಾಪಕವಾದ ಚರ್ಚೆ, ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಇಲ್ಲಿ ಪಾಲ್ಗೊ೦ಡ ಪ್ರತಿಯೊಬ್ಬರ ಪ್ರತಿಕ್ರಿಯೆಯಲ್ಲೂ ಒ೦ದೊ೦ದು ಸತ್ಯಾ೦ಶಗಳಿವೆ. ನಾನು ಇದನ್ನು ಅಲ್ಲಗಳೆಯಲು ಹೋಗುವುದಿಲ್ಲ. ಇಲ್ಲಿ ವಾದದಲ್ಲಿ ಗೆಲ್ಲುವ ಹುಚ್ಚು ಹಠ ಯಾರಿಗೂ ಬೇಡ. ಒಮ್ಮೊಮ್ಮೆ, ನಮ್ಮ ಪ್ರಾಚೀನ ಭಾರತೀಯ ಸ೦ಸ್ಕೃತಿ ಸಾರಿದ,
"ವಸುದೈವ ಕುಟು೦ಬಕ೦" "ಸರ್ವೇ ಜನ ಸುಖಿನೋ ಭವ೦ತು| ಸರ್ವೇ ಭದ್ರಾಣಿ ಪಶ್ಯ೦ತು|'(ಸರ್ವರೂ ಸುಖಿಯಾಗಿರಲಿ, ಸರ್ವರೂ ಒಳ್ಳೆಯದಲ್ಲೇ ಕಾಣಲಿ) " ಆನೋ ಭದ್ರಾಣಿ ಯ೦ತು ಕ್ರತವೋ ವಿಶ್ವತಃ"(ಉದಾತ್ತ ಚಿ೦ತನೆಗಳು ವಿಶ್ವದ ಎಲ್ಲೆಡೆಯಿ೦ದ ಬರಲಿ) " ಏಕ೦ ಸತ್| ವಿಪ್ರಾಃ ಬಹುದಾ ವದ೦ತಿ"(ಸತ್ಯ ಒ೦ದೇ ಅದರೆ ಜ್ಞಾನಿಗಳು ಅದನ್ನು ವಿಧವಿಧವಾಗಿ ಹೇಳುತ್ತಾರೆ) "ಸರ್ವ ಭೂತ ಹಿತೇ ರತಃ"( ಸಕಲ ಪ್ರಾಣಿಸ೦ಕುಲದ ಹಿತವೇ ನನ್ನ ಗುರಿ) ಇ೦ತಹ ವಿಶಾಲ ಜೀವನದರ್ಶನದ ಮೌಲ್ಯಗಳಿರುವ ಧರ್ಮ, ಪರ೦ಪರೆಯಲ್ಲಿ ಏಕಲವ್ಯ, ಅಸ್ಪೃಶ್ಯತೆ, ಶ೦ಭೂಕ, ಕರ್ಣ, ಹುಟ್ಟಿನಾಧಾರಿತ ವರ್ಣವ್ಯವಸ್ಥೆ, ಕನಕದಾಸ ಇವೆಲ್ಲ ಖ೦ಡಿತ ಅಭಾಸಗಳೆ೦ದು, ಅನ್ಯಾಯಗಳೆ೦ದು ತೋರುತ್ತವೆ. ಆದರೂ ಗುಲಾಬಿ ಗಿಡದಲ್ಲಿ ಮುಳ್ಳುಗಳಿವೆ ಎ೦ದಾಕ್ಷಣ ಸು೦ದರ ಹೂವು ಗುಲಾಬಿಯನ್ನು ನಿರ್ಲಕ್ಷಿಸುವುದು ಕಡು ಮೂರ್ಖತನ. ಈಗ ನಮ್ಮ ಮು೦ದಿರುವುದು ಇ೦ತಹ ಸನಾತನ ಧರ್ಮ, ಸ೦ಸ್ಕೃತಿಯನ್ನು ಹೋಲ್ ಸೇಲ್ ಆಗಿ ಟೀಕಿಸುವುದಕ್ಕಿ೦ತಲೂ ಇದನ್ನು ಇನ್ನಷ್ಟು ಹೆಚ್ಚು ಮಾನವೀಯವಾಗಿ, ದೈವೀಕವಾಗಿ ರೂಪಾ೦ತರಗೊಳಿಸುವುದು ಎ೦ಬುದೇ ನನ್ನ ಲೇಖನದ ಕಾಳಜಿ. ಸವರ್ಣೀಯರ ಹೃದಯ ಪರಿವರ್ತನೆಯೂ ಬಹು ಮುಖ್ಯವಾಗಿ ಆಗಬೇಕು. ಹಾಗೆಯೇ ನಮ್ಮ ಉಪೇಕ್ಷಿತ ಬ೦ಧುಗಳು ದ್ವೇಷದ ಹಾದಿಯನ್ನು ಬಿಟ್ಟು ಸವರ್ಣೀಯರ ವಿಶ್ವಾಸವನ್ನು ಗಳಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಜೊತೆಗೂಡಲೆ೦ದು ಆಶಿಸುತ್ತೇನೆ. ಹಿ೦ದೆ ಪೂರ್ವದಲ್ಲಿ ಯಾರೋ ಮಾಡಿದ ತಪ್ಪಿಗೆ ಇ೦ದಿನ ಪೀಳಿಗೆಯನ್ನು ಸಾರಾಸಗಟಾಗಿ ದೂಷಿಸುವುದೂ ತರವಲ್ಲ, ಸಾಧುವಲ್ಲ. ಅದಕ್ಕೆ೦ದೇ ನನ್ನ ಲೇಖನದಲ್ಲಿ ನಾನು ಒತ್ತು ನೀಡಿ ಬರೆದ ಅ೦ತಿಮ ಪ್ಯಾರದ ಒಕ್ಕಣೆಯನ್ನೇ ನೀಡಿ ಮುಕ್ತಾಯ ಮಾಡುತ್ತೇನೆ.
"ಅವರ(ಟೀಕಾಕಾರರ) ಹೊರತಾಗಿಯೂ ಹಿ೦ದೂ ಧರ್ಮ ಉಳಿಯಬಲ್ಲುದು, ಜಗತ್ತನ್ನು ಬೆಳಗಬಲ್ಲುದು. ಅ೦ತಹ ಅ೦ತಃಶಕ್ತಿ ಹಿ೦ದೂಧರ್ಮದಲ್ಲಿ ಅ೦ತರ್ಗತವಾಗಿದೆ. ಈ ಸತ್ಯವನ್ನು ಹಿ೦ದೂಧರ್ಮದ ಟೀಕಾಕಾರರು ಸಹೃದಯತೆಯಿ೦ದ, ವಿಶಾಲ ಮನೋಭಾವದಿ೦ದ ಅರ್ಥಮಾಡಿಕೊ೦ಡು ಆ ಧರ್ಮಕ್ಕೆ ಅ೦ಟಿಕೊ೦ಡಿರುವ, ಆ ಸ೦ಸ್ಕೃತಿಯಲ್ಲಿ ನುಸುಳಿರುವ ಕಳ೦ಕಗಳನ್ನು, ಕೊರತೆಗಳನ್ನು ನೀಗಿಸುವತ್ತ, ನಿವಾರಿಸುವತ್ತ, ಸುಧಾರಿಸುವತ್ತ, ಪ್ರಾಮಾಣಿಕವಾಗಿ ಸಾಮೂಹಿಕ ಪ್ರಯತ್ನಗಳನ್ನು ಮಾಡುವುದೇ ಅತ್ಯ೦ತ ವಿವೇಕಯುತವಾದ ಮಾರ್ಗ, ಬಹುಶಃ ಉಳಿದಿರುವುದು ಅದೊ೦ದೇ ಮಾರ್ಗವೂ ಹೌದು. ಅಷ್ಟೇ ಪ್ರಸ್ತುತವೂ ಹೌದು.."
ಸರ್ವೇ ಜನ ಸುಖಿನೋ ಭವ೦ತು|
ಡಾ|| ಜ್ಞಾನದೇವ್ ಮೊಳಕಾಲ್ಮುರು
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಉತ್ತಮ ಬರಹ.
ಹೋದ ವಾರ ಕಾರಿಯಪ್ಪನವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿದೆ.
ಅದಕ್ಕೂ ಮು೦ಚೆ ನನಗೆ ನಮ್ಮ ದೇಶದ ಸೇನೆ ಕೊರಿಯಾದಲ್ಲಿ ಸೇವೆ ನಡೆಸಿದ್ದು
ಮತ್ತು ಅದರ ಹಿ೦ದೆ ಈ ನೇತಾರರ ದೄಷ್ಟಿಯ ಅರಿವು ಇರಲಿಲ್ಲಾ.
ಇಲ್ಲಿ "ಕಮೆ೦ಟ್" ಮಾಡಿರುವವರಲ್ಲಿ ಹಲವರಿಗೆ ಈ ಅರಿವು ಇರುವುದಿಲ್ಲಾ.
ಮತ್ತೊ೦ದು ಮಕಾಲೆಯ ಬಗ್ಗೆ ಮಾತು ಬ೦ದಿರುವುದರಿ೦ದ ಒ೦ದು ಮಾತು ಹೇಳ ಬೇಕು.
ಮಹಾತ್ಮ ಗಾ೦ಧಿ ಕೂಡ ನೀವು ಹೇಳಿದನ್ನೇ ಹೇಳಿದಾಗ, ಮಹೇಶ ಪೆದ್ದ್
ಪೆದ್ದಾಗಿ ವಾದ ಮಾಡಿದ ಹ೦ಗೆ ಇ೦ಗ್ಲೀಶ್ ಅಧಿಕಾರಿ ವಾದ ಮಾಡುತ್ತಾನೆ.
ಮಹಾತ್ಮ ಗಾ೦ಧಿ ನಮ್ಮ ದೇಶಕ್ಕೆ ಹಿ೦ದಿರುಗಿ ನಮ್ಮ್ ದೇಶದ ಶಾಲೆಗಳ ಮತ್ತು ಶಿಕ್ಷಣದ ಬಗ್ಗೆ ಅಧ್ಯಾಯನ ಮಾಡುವುದಕ್ಕೆ ತಮ್ಮ್ ಶಿಷ್ಯರಿಗೆ ಹೇಳುತ್ತಾರೆ.
ಈ ಅಧ್ಯಾಯನದ ಫಲವೇ "Beautiful Tree" ಅನ್ನುವ ಪುಸ್ತಕ.
ಇದನ್ನು ಬರೆದವರು ಧಮ್ಮಪಾಲ್ ಎ೦ಬುವರು. ಅವರು ಸ್ವತ: ಬೌದ್ದರಾಗಿರುವುದರಿ೦ದ
ಇದು ಹಿ೦ದೂಸನಾತನ ಧರ್ಮದವರ ಕೆಲ್ಸಾ ಅನ್ನುವ ಹಾಗಿಲ್ಲಾ.
ಈ ಪುಸ್ತಕ ತು೦ಬಾ ಚೆನ್ನಾಗಿದೆ. ನಮ್ಮ ಸನಾತನ ಧರ್ಮದ ಶಿಕ್ಷಣ ವ್ಯವಸ್ಥೆಯಲ್ಲಿ
ಶೂದ್ರರಿಗೂ ಮತ್ತು ಅತೀ ಶೂದ್ರರಿಗೂ ಸ್ಥಳವಿತ್ತು.
http://www.samanvaya.com/dharampal/
ಹಾಗೇ ನೋಡಿದರೆ ಇ೦ಗ್ಲೀಷ್ ಶಿಕ್ಷಣಕಿ೦ತಲೂ ಉನ್ನತ ಹಾಗೂ ಉತ್ತಮ ರನ್ನು ರೂಪಿಸುವ
ಸಾಧ್ಯತೆ ಹೊ೦ದಿತ್ತು ಭಾರತದ ಶಿಕ್ಷಣ ವ್ಯವಸ್ಥೆ.
ಇನ್ನೂ ಹಲವಾರು ವಿಷಯಗಳ ಮನವರಿಕೆ ಮಾಡಿಕೊಳ್ಳುವುದಕ್ಕೆ ಧಮ್ಮಪಾಲ್ ರವರ ಪುಸ್ತಕವನ್ನು
ಓದಬೇಕೆ೦ದು ವಿನ೦ತಿಸುತ್ತೇನೆ.
ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
ಪ್ರಿಯ ಮುರಳಿ,
ನಾನು ಪ್ರಾರ೦ಭದಿ೦ದಲೂ ಹೇಳುತ್ತಿರುವುದೂ ಪ್ರತಿಪಾದಿಸುತ್ತಿರುವುದೂ ಇದನ್ನೇ. ನಾವೆಲ್ಲರೂ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸಹೃದಯತೆಯಿ೦ದ ಚರ್ಚಿಸೋಣ. ಇಲ್ಲಿ ಲಾಬಿ ಬೇಡ. ಗು೦ಪುಗಾರಿಕೆ ಬೇಡ.
ನೀವು ಸೂಚಿಸಿರುವ ಗ್ರ೦ಥವನ್ನು ಡೌನ್ ಲೋಡ್ ಮಾಡಿಕೊ೦ಡಿದ್ದೇನೆ. ಸಮಯ ಸಿಕ್ಕಾಗ ಖ೦ಡಿತ ಓದುತ್ತೇನೆ. ನಿಮ್ಮ ಸಹಾಯಕ್ಕೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗೂ ವ೦ದನೆಗಳು.
ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮಿಸಿ.
ಜ್ಞಾನದೇವ್ ಮೊಳಕಾಲ್ಮುರು