ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Chamaraj ರವರ ಬ್ಲಾಗ್

ಚಾಮರಾಜ ಸವಡಿ

ಸತ್ಯದ ಹಸಿ ದರ್ಶನ

ಮಧ್ಯಮದಲ್ಲೇ ಉಳಿದ ಮಾಧ್ಯಮ

August 9, 2008 - 10:18pm — Chamaraj
images.jpg

(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಶಶಿಕುಮಾರ್‌ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.

ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.

ಮಾಧ್ಯಮ ವರ್ತಿಸುತ್ತಿರುವ ರೀತಿಯ ಬಗ್ಗೆ ನನಗೆ ಸಾಕಷ್ಟು ಆಕ್ಷೇಪಣೆಗಳಿವೆ.

ಜನಾಕರ್ಷಣೆಯೇ ಮಾಧ್ಯಮದ ಮುಖ್ಯ ಗುರಿಯಾಗಿರುವುದು ಮೊದಲನೇ ಆಕ್ಷೇಪಣೆ. ಏನಾದರೂ ಸರಿ, ಓದುಗರನ್ನು/ವೀಕ್ಷಕರನ್ನು ಸೆಳೆಯಬೇಕು ಎಂಬುದು ಇವತ್ತಿನ ಮಾಧ್ಯಮದ ಅಲಿಖಿತ ನಿಯಮ. ಬದ್ಧತೆ, ಸಾಮಾಜಿಕ ಜವಾಬ್ದಾರಿ, ವಿವೇಚನೆ ಮುಂತಾದ ವಿಷಯಗಳು ಅಥವಾ ಭಾವನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡಿದ್ದು ಅತಿ ವಿರಳ ಎಂದೇ ಹೇಳಬಹುದು. ಒಂದು ವಿಷಯವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕಿಂತ, ಹೇಗೆ ಪ್ರಸ್ತುತಪಡಿಸಿದರೆ ಇತರರಿಗಿಂತ ಹೆಚ್ಚು ವೀಕ್ಷಕರು/ಓದುಗರನ್ನು ಅದು ಆಕರ್ಷಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಇದೊಂದು ರೋಗದಂತೆ ಮಾಧ್ಯಮ ಕಚೇರಿಗಳನ್ನು ಆವರಿಸಿದ್ದು, ಇಂಥದೇ ರೀತಿಯಲ್ಲಿ ಸುದ್ದಿ ಬರೆಯಿರಿ ಎಂದು ತಮ್ಮ ಆಧೀನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಪತ್ರಿಕೋದ್ಯಮ ಕೇವಲ ವೃತ್ತಿಯಾಗುತ್ತಿರುವ ಈ ದಿನಗಳಲ್ಲಿ, ಹಿರಿಯ ಪತ್ರಕರ್ತರ ಆಜ್ಞೆಯನ್ನು ಉಲ್ಲಂಘಿಸಲು ಆದೀತೆ? ಒಂದು ವೇಳೆ ಉಲ್ಲಂಘಿಸಿದರೂ, ಅವನು ಬಹುಕಾಲ ಆ ಸಂಸ್ಥೆಯಲ್ಲಿ ಇರಲಾರ. ಇರುವಂತಹ ವಾತಾವರಣವೂ ಅವನ ಪಾಲಿಗೆ ಉಳಿಯುವುದಿಲ್ಲ. ಹಲವಾರು ಪತ್ರಿಕಾ ಕಚೇರಿಗಳಲ್ಲಿ, ಟಿವಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುವಂತಾಗಲು ಇಂತಹ ಉಲ್ಲಂಘನೆಯೂ ಒಂದು ಮುಖ್ಯ ಕಾರಣ.

ಹೀಗಿರುವಾಗ, ಸುದ್ದಿಯ ಔಚಿತ್ಯ ಹಾಗೂ ಅದನ್ನು ಪ್ರಸ್ತುತಪಡಿಸುವ ಔಚಿತ್ಯದ ಬಗ್ಗೆ ಯಾರು ಯೋಚಿಸಬೇಕು? ಯಾರು ಅದನ್ನು ಸಮದೃಷ್ಟಿಯಿಂದ ಜಾರಿಗೊಳಿಸಬೇಕೋ, ಅವರೇ ರಂಜನೀಯವಾಗಿ ಅದನ್ನು ಬಿಂಬಿಸಲು ಮುಂದಾಗಿರುವಾಗ, ತೀರ ಕೆಳ ಹಂತದಲ್ಲಿರುವ ವಿವೇಚನೆಯುಳ್ಳ ಪತ್ರಕರ್ತ ತನ್ನ ಹೃದಯದ ಮಾತನ್ನು ನಡೆಸಲು ಹೇಗೆ ಸಾಧ್ಯವಾದೀತು?

ಮಾಧ್ಯಮ ಕಚೇರಿಯಲ್ಲಿ ನಿತ್ಯ ಹಲವಾರು ರೀತಿಯ ಸುದ್ದಿಗಳು ಬರುತ್ತಿರುತ್ತವೆ. ಎಲ್ಲವನ್ನೂ ಹೃದಯಕ್ಕೆ ಹತ್ತಿರವಾಗಿ ತೆಗೆದುಕೊಂಡು ವಿಶ್ಲೇಷಿಸುವುದು ಸಾಧ್ಯವಾಗದು. ಅಲ್ಲಿ ಭಾವನೆಗಿಂತ, ಕರ್ತವ್ಯಪ್ರಜ್ಞೆಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಜ. ಹಾಗಂತ, ನಿರ್ಭಾವುಕರಾಗಿ ಕೆಲಸ ಮಾಡಲಾಗದು. ವೃತ್ತಿ ಪ್ರಜ್ಞೆಯೊಂದಿಗೆ ವಿವೇಚನೆಯಿಂದಲೂ ಕೆಲಸ ಮಾಡುವುದು ನಿಜವಾದ ವೃತ್ತಿಪರತೆ. ಆದರೆ, ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ಆ ಬದ್ಧತೆ ತೀರಾ ವಿರಳವಾಗುತ್ತಿದೆ.

ನಾನೂ ತುಂಬ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರನ್ನು ನೋಡಿದ್ದು ಬಲು ಅಪರೂಪ. ಸಮದೃಷ್ಟಿ ಇರುವ ಹಿರಿಯ ಪತ್ರಕರ್ತರು ಸಾಕಷ್ಟಿದ್ದರೂ, ಮ್ಯಾನೇಜ್‌ಮೆಂಟ್‌ನ ಒತ್ತಡಗಳಿಗೆ ಸಿಲುಕಿ ಅವರ ಸಮದೃಷ್ಟಿ ಹೊರಟುಹೋಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಆಗದು.

ಇದಕ್ಕೆ ಪರಿಹಾರ ಎಂದರೆ, ನಮ್ಮ ನಮ್ಮ ಮಿತಿಯಲ್ಲಿ ಸುದ್ದಿಯನ್ನು ರಂಜನೀಯ ಮಾಡಲು ಹೋಗದಿರುವುದು. ಅದನ್ನು ನಾನು ವೃತ್ತಿ ಜೀವನದುದ್ದಕ್ಕೂ ಪಾಲಿಸುತ್ತ ಬಂದಿದ್ದೇನೆ. ಅದಕ್ಕಾಗಿ ಕೆಲ ಬಾರಿ ನೌಕರಿಯನ್ನೂ ಕಳೆದುಕೊಂಡಿದ್ದೇನೆ. ಆದರೂ, ನನ್ನ ಮಿತಿಯಲ್ಲಿ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿಲ್ಲ. ಬಹಳಷ್ಟು ಸಾರಿ, ಅಂತಹ ವಿವೇಚನೆಯುಳ್ಳ ಬರವಣಿಗೆಗಾಗಿ ಹಿರಿಯ ಸಹೋದ್ಯೋಗಿಗಳಿಂದ ಬೈಸಿಕೊಂಡಾಗಿದೆ. ಬರೆದಿದ್ದನ್ನು ರಂಜನೀಯವಾಗುವಂತೆ ತಿದ್ದಿಕೊಡುವ ಅನಿವಾರ್ಯತೆಗೂ ಸಿಲುಕಿದ್ದಾಗಿದೆ. ಆದರೂ, ಮೊದಲ ಬರವಣಿಗೆ ರಂಜನೀಯವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಶಶಿಕುಮಾರ್‌ ಬರೆದಂತೆ, ಮಾಧ್ಯಮಗಳು ಸುದ್ದಿಸೂಳೆಯ ಬೆನ್ನತ್ತಿ ಹೊರಟಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಬೆನ್ನು ಹತ್ತುವ ಭರದಲ್ಲಿ ಅವು ಎಲ್ಲರನ್ನೂ ಸೂಳೆಯರು ಎಂಬಂತೆ ನೋಡುತ್ತಿರುವುದು ನಿಜಕ್ಕೂ ಅಪಾಯಕಾರಿ. ಕಂಡ ಪ್ರತಿಯೊಂದು ಹೆಣ್ಣೂ ಬೆಲೆವೆಣ್ಣು ಇರಬಹುದೆ ಎಂಬ ಅನುಮಾನ ಖಂಡಿತ ಆರೋಗ್ಯಕರವಲ್ಲ. ಇದು ಇಡೀ ಸಮಾಜವನ್ನು ಹಾದಿ ತಪ್ಪಿಸುವ ಬೆಳವಣಿಗೆ. ಇದಕ್ಕೆ ಬೇಕಾದಷ್ಟು ಕಾರಣಗಳಿರಬಹುದು, ಬೇಕಾದಷ್ಟು ಅನಿವಾರ್ಯತೆಗಳಿರಬಹುದು. ಆದರೆ, ಅವ್ಯಾವೂ ಈ ದೃಷ್ಟಿಕೋನಕ್ಕೆ ಸಮರ್ಥನೆಗಳಲ್ಲ ಹಾಗೂ ಅಂತಹ ವಿವರಣೆಯನ್ನು ಒಪ್ಪುವುದು ಸಾಧ್ಯವೂ ಇಲ್ಲ.

ದುರಂತವೆಂದರೆ, ರಂಜನೀಯ ಸುದ್ದಿಗಳನ್ನು ಕೊಡದ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವಲ್ಲಿ, ಓದುಗರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿವೆ. ಮಾಧ್ಯಮ ಕೂಡಾ ಒಂದು ವೃತ್ತಿ. ಅಲ್ಲಿ ಹಣ ಹಾಕಿ ಹಣ ಗಳಿಸಬೇಕಿದೆ. ಹೀಗಾಗಿ, ಹೆಚ್ಚು ಲಾಭ ಬರುವ ಸರಕನ್ನು ಮಾರಲು ಮಾಧ್ಯಮ ಸಂಸ್ಥೆಗಳು ಯತ್ನಿಸುತ್ತಿವೆ. ಇದು ತಪ್ಪಬೇಕೆಂದರೆ, ಓದುಗರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜೊತೆಜೊತೆಗೆ ಮಾಧ್ಯಮಗಳಿಗೂ ಒಂದು ಮಟ್ಟದ ಅಂಕುಶ ಬೇಕೇಬೇಕು. ಎರಡೂ ಕಡೆಯಿಂದ ಈ ಕ್ರಿಯೆ ನಡೆದಾಗ ಮಾತ್ರ, ಮಾಧ್ಯಮ ಕೊಂಚ ಜವಾಬ್ದಾರಿ ಕಲಿಯಲು ಸಾಧ್ಯ. ಇಲ್ಲದಿದ್ದರೆ, ಬಲುಬೇಗ ಇಡೀ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ.

ಒಂದಂತೂ ನಿಜ. ಸಮಾಜದಲ್ಲಿ ಏನು ನಡೆಯುತ್ತಿದೆಯೋ, ಮಾಧ್ಯಮದಲ್ಲಿ ಅದೇ ಬರುತ್ತದೆ. ಸಮಾಜಕ್ಕೆ ಹೊರತಾದ ಯಾವುದನ್ನೂ ಮಾಧ್ಯಮ ನೀಡಲು ಹೋಗುವುದಿಲ್ಲ. ಸಮಾಜದಲ್ಲಿರುವ ಅನಾಚಾರ, ಕೊಳಕು, ದುಷ್ಟತನದ ಚಿತ್ರಣವೇ ಮಾಧ್ಯಮದಲ್ಲಿಯೂ ಕಾಣುತ್ತಿದೆ. ಆದರೆ, ಕೇವಲ ಈ ಚಿತ್ರಣ ಮಾತ್ರ ಕಾಣುವಂತಾಗಿರುವುದು ಅಪಾಯಕಾರಿ. ಈ ಕೊಳಚೆಯ ಹೊರತಾಗಿಯೂ ಸಮಾಜದಲ್ಲಿ ಉತ್ತಮವಾದ ವಿಷಯಗಳು ಬೇಕಾದಷ್ಟಿವೆ. ಅವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕು. ಅದೇ ರೀತಿ, ಅಂತಹ ವಿಷಯಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಓದುಗ/ವೀಕ್ಷಕರೂ ಬೆಳೆಸಿಕೊಳ್ಳಬೇಕಿದೆ.

ಇಷ್ಟೆಲ್ಲ ಹೇಳಿದ ನಂತರವೂ, ಮಾಧ್ಯಮ ಇವತ್ತು ತುಳಿಯುತ್ತಿರುವ ಹಾದಿ ಸರಿಯಲ್ಲ ಎಂದು ಮತ್ತೆ ಒಪ್ಪಿಕೊಳ್ಳುತ್ತೇನೆ. ಇದಕ್ಕೊಂದು ಅಂಕುಶ ಇರಲಿ. ಸ್ವಯಂ ಸಂಯಮ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ, ಕಾನೂನು ಅಂಕುಶ ಸ್ವಲ್ಪಮಟ್ಟಿಗೆ ಕೆಲಸ ಮಾಡಬಲ್ಲುದು. ಆದರೆ, ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳದಿರಲಿ. ಗಾಳಿಪಟದ ಸೂತ್ರದಂತೆ, ಪಟವನ್ನು ಹಿಡಿದಿಟ್ಟಿರಲಿ. ಆದರೆ, ಅದರ ಹಾರಾಟಕ್ಕೆ ಧಕ್ಕೆ ತಾರದಿರಲಿ.

ಬಹುಶಃ ಶಶಿಕುಮಾರ್‌ ಹಾಗೂ ಅವರಂಥ ಸಾವಿರಾರು ಮಿತ್ರರ, ಸಹೃದಯಿ ಓದುಗ/ವೀಕ್ಷಕರ ಬಯಕೆಯೂ ಇದೇ ಇರಬಹುದು.

- ಚಾಮರಾಜ ಸವಡಿ

  • ಪತ್ರಕರ್ತ
  • ಪತ್ರಿಕೋದ್ಯಮ
  • ಮಾಧ್ಯಮ
  • ಸಾಮಾಜಿಕ ಜವಾಬ್ದಾರಿ
~.~
  • Chamaraj ರವರ ಬ್ಲಾಗ್
  • Login or register to post comments
  • 216 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2008 - 11:06pm — Balaraj DK

ಉ: ಮಧ್ಯಮದಲ್ಲೇ ಉಳಿದ ಮಾಧ್ಯಮ

Balaraj DK's picture

- ಬಾಲರಾಜು ಡಿ.ಕೆ.
ಮಾಧ್ಯಮವನ್ನು ಬೆಲೆವೆಣ್ಣು ಎಂದು ಕರೆಯುವುದು ಲೇಸು. ಪತ್ರಿಕೋದ್ಯಮ ಇಂದು ಸಾಮಾಜಿಕ ಜವಾಬ್ದಾರಿ ಹೊರವುದರ ಜೊತೆ ಅಡಳಿತ ಮಂಡಳಿಯ ನಿಯಮಗಳನ್ನು ಪತ್ರಕರ್ತ ಮೀರುವುದು ಕಷ್ಟ ಸಾಧ್ಯ. ಲಕ್ಷ್ಮಣ ರೇಖೆ ದಾಟಿದರೆ ಅದು ಸುದ್ದಿ ಮನೆ ಅಗುವುದಿಲ್ಲ. ಒಡೆದ ಮನೆಯಾಗುವುದಂತು ಸತ್ಯ. ಇರುವ ಸ್ವಾತಂತ್ರ ದಲ್ಲಿ ತಮ್ಮದೇ ಛಾಪು ಮೂಡಿಸುವುದಷ್ಟೇ ಮಾಡಬೇಕಿರುವುದು. ಆದರೂ ಮಾದ್ಯಮವಿಂದು ಸಾಕಷ್ಟು ಅಭಿವ್‌ಋದ್ದಿ ಹಾಗೂ ಸಾಮಾಜಿಕ ಕಳಕಳಿ ಉಳಿಸಿಕೊಂಡು ಬಂದಿದೆ. ನನ್ನ ವಿಚಾರ ಚಾಮರಾಜ ಅವರ ಲೇಖನಕ್ಕೆ ಸಮರ್ಥನೆ ಅಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 9:51am — Chamaraj

ಉ: ಮಧ್ಯಮದಲ್ಲೇ ಉಳಿದ ಮಾಧ್ಯಮ

Chamaraj's picture

ಹಾಗೆ ಸಾರಾಸಗಟಾಗಿ ಯಾವುದೇ ಕ್ಷೇತ್ರವನ್ನು ಅಲ್ಲಗಳೆಯಲಾಗದು ಬಾಲರಾಜ್‌ ಅವರೇ. ನೀವು ಹೇಳಿದಂತೆ, ಇರುವ ಸ್ವಾತಂತ್ರದಲ್ಲೇ ಉದ್ಯಮವನ್ನು ಸಹನೀಯ ಹಾಗೂ ಉಪಯುಕ್ತ ಮಾಡಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ಪತ್ರಕರ್ತನೂ ಹೀಗೆ ಯೋಚಿಸಿದರೆ ಸಾಕು, ಎಷ್ಟೋ ಉತ್ತಮ ಫಲಿತಾಂಶ ದೊರೆಯುತ್ತದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 2:39pm — uniquesupri

ಉ: ಮಧ್ಯಮದಲ್ಲೇ ಉಳಿದ ಮಾಧ್ಯಮ

uniquesupri's picture

ಚಾಮರಾಜ ಸರ್,
ನಿಮ್ಮ ವಿಚಾರಗಳು ನಿಜಕ್ಕೂ ಚಿಂತನಾರ್ಹವಾದವು. ಪತ್ರಕರ್ತರು ಸಹ ವ್ಯವಸ್ಥೆಗೆ ಬಾಧಿತರು ಎಂಬುದನ್ನು ಅರ್ಥ ಮಾಡಿಕೊಂಡು ನಾವು ವಿಮರ್ಶೆಗೆ ಕೈಹಾಕಬೇಕು. ವ್ಯವಸ್ಥೆಯನ್ನು ಸರಿ ಪಡಿಸಲು ಅದರೊಳಗಿನ ಜನರ ಬೆಂಬಲ ಹಾಗೂ ಹೊರಗಿನವರ ಒತ್ತಾಯ ಆವಶ್ಯಕ ಅನ್ನಿಸುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 8:33pm — Chamaraj

ಉ: ಮಧ್ಯಮದಲ್ಲೇ ಉಳಿದ ಮಾಧ್ಯಮ

Chamaraj's picture

ಎಂಥದೇ ಬಂಧನವಿರಲಿ, ಕಟ್ಟುಪಾಡುಗಳಿರಲಿ, ನಮ್ಮ ನಮ್ಮ ಮಿತಿಯಲ್ಲಿ ಒಂದಿಷ್ಟು ಉತ್ತಮ ಕೆಲಸಗಳನ್ನು ಮಾಡುವುದು ಖಂಡಿತ ಸಾಧ್ಯವಿದೆ. ಅಷ್ಟು ಮಾಡಿದರೂ ಸಾಕು, ಸಮಾಜ ಈಗಿರುವುದಕ್ಕಿಂತ ಎಷ್ಟೋ ಪಟ್ಟು ಚೆನ್ನಾಗಿ ಆಗುತ್ತದೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಧ್ಯಮದಲ್ಲೇ ಉಳಿದ ಮಾಧ್ಯಮ
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 462 ಅತಿಥಿಗಳು ಆನ್ಲೈನ್ ಇರುವರು.


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator