ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಚಾಮರಾಜ ಸವಡಿ
ಸತ್ಯದ ಹಸಿ ದರ್ಶನ
ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
(ಭಾಗ-೨)
ಕೊಪ್ಪಳದ ಆ ಹೆರಿಗೆ ಆಸ್ಪತ್ರೆಯೂ ಈ ಸಿದ್ಧಾಂತಕ್ಕೆ ಹೊರತಾಗಿರಲಿಲ್ಲ. ಗರ್ಭಿಣಿ ಹೆಂಗಸು ಏನು ತಿನ್ನಬೇಕು, ಯಾವ್ಯಾವ ದೈಹಿಕ ಚಟುವಟಿಕೆಗಳನ್ನು ಮಾಡಬೇಕು, ಮಗು ನಿರೀಕ್ಷಿಸುವ ಆಕೆಯ ಮನಸ್ಸು ಹೇಗಿರಬೇಕು, ಎಂಥ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂಬ ಸೂಕ್ಷ್ಮ ಅಂಶಗಳತ್ತ ಅವರ ಗಮನವೇ ಇಲ್ಲ. ಬಹುಶಃ ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಮಿಕ ಬಂದಿದೆ. ಬಲೆಗೆ ಹಾಕಿಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳಬೇಕು ಎಂಬ ವ್ಯಾಪಾರಿ ಮನೋಭಾವ. ಅದನ್ನು ಸಾಧಿಸಲು ವೈಜ್ಞಾನಿಕ ಕಾರಣಗಳ ನೆವ. ನೀವೇನಾದರೂ ಈ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ಮುಂದೆ ಏನಾದರೂ ತೊಂದರೆಯಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಎಚ್ಚರಿಕೆ ಬೇರೆ.
ಯಾರು ತಾನೆ ಅಂಥ ರಿಸ್ಕ್ ತೆಗೆದುಕೊಂಡಾರು?
ಹೀಗಾಗಿ, ಮನಸ್ಸಿಲ್ಲದಿದ್ದರೂ ಅವರು ಬರೆದುಕೊಟ್ಟ ಔಷಧಿಗಳನ್ನು ಕೊಳ್ಳಬೇಕು. ಪ್ರತಿ ತಿಂಗಳು ಚೆಕಪ್‌ಗೆ ಹೋಗಬೇಕು. ಗಂಟೆಗಟ್ಟಲೇ ಕಾಯಬೇಕು. ಅಲ್ಲಿ ಕಾಯುತ್ತ ಕೂತ ಪ್ರತಿಯೊಬ್ಬ ಗರ್ಭಿಣಿಯ ಮನಸ್ಸಿನಲ್ಲೂ ಮಗು ಪಡೆಯುವ ಸಂಭ್ರಮಕ್ಕಿಂತ ಹೆಚ್ಚಾಗಿ ಈ ಅವಧಿ ಹೇಗಾದರೂ ಕಳೆದರೆ ಸಾಕಪ್ಪಾ ಎಂಬ ಭಾವ. ಹೋದರೆ ಹಣ ಹೋದೀತು, ಹುಟ್ಟುವ ಮಗು ಆರೋಗ್ಯದಿಂದ ಇದ್ದರೆ ಸಾಕು ಎಂಬ ಹಾರೈಕೆ.
ಅಂಥ ಹತ್ತಾರು ಚೆಕಪ್‌ಗಳನ್ನು ಮುಗಿಸಿ, ಸಾವಿರಾರು ಮಾತ್ರೆಗಳನ್ನು ನುಂಗಿ, ಸಾವಿರಾರು ರೂಪಾಯಿಗಳ ಜೊತೆಗೆ ಅದುವರೆಗೆ ಇದ್ದ ನಮ್ಮ ಆರೋಗ್ಯಕರ ಮನಃಸ್ಥಿತಿಯನ್ನೂ ಕಳೆದುಕೊಂಡ ನಂತರ ಹೆರಿಗೆಯ ದಿನ ನಿರ್ಧಾರವಾಗುತ್ತದೆ. ’ನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬಂದು ಬಿಡಿ’ ಎಂದು ಸಲಹೆ ಕೊಡುತ್ತಾರೆ. ಆಸ್ಪತ್ರೆಯ ವೇಟಿಂಗ್ ರೂಮ್‌ನಲ್ಲಿಯೂ ಅಂಥವೇ ಪೋಸ್ಟರ್‌ಗಳು. ’ಆಸ್ಪತ್ರೆಯಲ್ಲಾಗುವ ಹೆರಿಗೆ, ಸುರಕ್ಷಿತ ಹೆರಿಗೆ’ ಎಂಬ ಘೋಷಣೆಗಳು. ಔಷಧ ಕಂಪನಿಗಳ ಜಾಹಿರಾತು ಪೋಸ್ಟರ್‌ಗಳಲ್ಲಿ ಕೂಡ ಅಂಥವೇ ಎಚ್ಚರಿಕೆಗಳು. ಹೆಸರೇ ಕೇಳಿರದ, ಯಾವತ್ತೋ ಪೇಪರ್‌ನಲ್ಲಿ ಮಾತ್ರ ಓದಿದ ರೋಗಗಳ ಬಗ್ಗೆ, ಅವುಗಳ ಭೀಕರ ಲಕ್ಷಣಗಳ ಬಗ್ಗೆ ಚಿತ್ರವತ್ತಾದ ಮಾಹಿತಿ ನೀಡುವ ಅವು, ’ಹುಟ್ಟುವ ಮಗು ಚೆನ್ನಾಗಿರಬೇಕೆಂದರೆ ಈ ಔಷಧಿಗಳ ಸೇವನೆ ಅಗತ್ಯ’ ಎಂದು ಘೋಷಿಸುತ್ತಿರುತ್ತವೆ. ಅತ್ತ ವೈದ್ಯರು, ಇತ್ತ ಪೋಸ್ಟರ್‌ಗಳು- ಗರ್ಭಿಣಿಯಾಗುವುದೆಂದರೆ ಹಲವಾರು ಮಾರಕ ರೋಗಗಳನ್ನು ಪಡೆಯಲು ದಾರಿ ಎಂಬಂತೆ ಬಿಂಬಿಸುವಾಗ ಗಾಬರಿ ಹುಟ್ಟದೇ ಇದ್ದೀತೆ? ಆಗ ವೈದ್ಯರ ಸಲಹೆ ತಿರಸ್ಕರಿಸುವ ಧೈರ್ಯ ಯಾರಿಗೆ ತಾನೇ ಸಾಧ್ಯ?
ಈಗ ನಾವು ಸುಲಿಗೆಯ ಅಂತಿಮ ಹಂತ ತಲುಪಿದ್ದೆವು. ಹೆರಿಗೆ ನೋವು ಕಾಣಿಸಿಕೊಂಡಿದೆ. ಚೊಚ್ಚಲ ಹೆರಿಗೆ ಬೇರೆ. ಅಲ್ಲೆಲ್ಲೋ ಹೆರಿಗೆ ಕೋಣೆಯೊಳಗಿಂದ ರೇಖಾಳ ನರಳುವ ಧ್ವನಿ ಕೇಳಿಸುತ್ತಿದೆ. ಹೊರಗೆ ತಳಮಳಿಸುತ್ತ ಅತ್ತೆ-ಮಾವ ನಿಂತಿದ್ದಾರೆ. ಭೂಕಂಪವಾಗುತ್ತಿದೆಯೇನೋ ಎಂಬಂತೆ ವೈದ್ಯರು, ಇಂಥ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅವರಿಂದ ಚೆನ್ನಾಗಿ ತರಬೇತಿ ಪಡೆದಿರುವ ದಾದಿಯರು ಅವಸರವಸರವಾಗಿ ಓಡಾಡುತ್ತಿದ್ದಾರೆ. ಇಡೀ ಆಸ್ಪತ್ರೆಯಲ್ಲಿ ’ಒಂದು ಬಾಲ್, ಒಂದು ರನ್, ಕೊನೆಯ ವಿಕೆಟ್’ ಎಂಬಂಥ ಕ್ರಿಕೆಟ್ ಟೆನ್ಷನ್ ವಾತಾವರಣ. ಅದನ್ನು ಇನ್ನಷ್ಟು ಹೆಚ್ಚಿಸುವಂತೆ, ’ಚೊಚ್ಚಲ ಹೆರಿಗೆಯಾ? ಕೂಸು ಅಡ್ಡ ಕೂತಿದೆಯಾ? ಹೊಕ್ಕಳ ಬಳ್ಳಿ ಸುತ್ತು ಹಾಕಿಕೊಂಡಿದೆಯಾ? ನೋವು ಶುರುವಾಗಿ ಎಷ್ಟೊತ್ತು ಆಯ್ತು? ಡಾಕ್ಟರ್ ಏನು ಹೇಳಿದ್ರು?’ ಎಂಬ ಪ್ರಶ್ನೆಗಳನ್ನು ಕೇಳುವ ಚೆಕಪ್‌ಗೆ ಬಂದ ದಿನ ತುಂಬಿರದ ಗರ್ಭಿಣಿಯರು.
ಮನುಷ್ಯ ಮಾನಸಿಕವಾಗಿ ಮೆತ್ತಗಾಗಲು ಇನ್ನೇನು ಬೇಕು?
ಅಷ್ಟರಲ್ಲಿ ವೈದ್ಯರು ಧಾವಿಸಿ ಬಂದು ಉದ್ದನೆಯ ಪಟ್ಟಿ ಕೈಗಿತ್ತು, ’ತಕ್ಷಣ ಇವನ್ನೆಲ್ಲ ತಗೊಂಬನ್ನಿ’ ಎಂದವರೇ ರಭಸದಿಂದ ಹೆರಿಗೆ ರೂಮ್‌ಗೆ ವಾಪಸ್ಸಾಗುತ್ತಾರೆ. ಆಗ ಅಲ್ಲಿರುವ ಗರ್ಭಿಣಿಯರ ಮುಖದಲ್ಲಿ ಎಂಥದೋ ಕಳವಳ. ದಿನ ತುಂಬಿರದಿದ್ದರೂ ಆಗಲೇ ಹೆರಿಗೆ ನೋವು ಶುರುವಾದಂತೆ ಚಡಪಡಿಕೆ. ಎಂಟು ಜನ ಸದಸ್ಯರಿರುವ ಕುಟುಂಬದ ಆರು ತಿಂಗಳ ರೇಶನ್ ಪಟ್ಟಿಯೂ ಅಷ್ಟು ಉದ್ದ ಇರಲಿಕ್ಕಿಲ್ಲ. ಹಾಗಂತ ಅದನ್ನು ಪರೀಕ್ಷಿಸುತ್ತ ಅಲ್ಲಿಯೇ ನಿಲ್ಲಲಾದೀತೆ? ಅಷ್ಟಕ್ಕೂ ಡಾಕ್ಟರ್‌ಗಳ ಕೈಬರಹ ಯಾರಿಗೆ ತಾನೆ ಅರ್ಥವಾದೀತು, ಹತ್ತಿರದಲ್ಲಿಯೇ ಇರುವ ಔಷಧ ಅಂಗಡಿಯ ವ್ಯಕ್ತಿಯನ್ನು ಬಿಟ್ಟು?
ಕಾಲುಗಳು ಈಗ ನಮ್ಮ ಮಾತು ಕೇಳುವುದಿಲ್ಲ. ಡಾಕ್ಟರ್‌ಗಿಂತ ಸ್ಪೀಡಾಗಿ ಅತ್ತ ಓಡುತ್ತವೆ. ಪಟ್ಟಿಯನ್ನು ನೋಡಿಯೇ ಆತ ಚುರುಕಾಗುತ್ತಾನೆ. ’ಡೆಲಿವರಿಯಾ?’ ಎನ್ನುತ್ತಾನೆ, ನಾವೇ ಹಡೆಯಲು ಸಿದ್ಧರಾಗಿದ್ದೇವೇನೋ ಎಂಬಂತೆ. ಔಷಧಿಗಳು, ಕೊಳವೆಗಳು, ಪ್ಲಾಸ್ಟಿಕ್ ಸಾಧನಗಳು, ನ್ಯಾಪ್‌ಕಿನ್‌ಗಳು, ಸಿರಿಂಜ್‌ಗಳು, ಔಷಧಿಗಳು- ದೇವರೇ ಒಂದೇ ಎರಡೇ, ಇಡೀ ಆಸ್ಪತ್ರೆಯ ಅಷ್ಟೂ ಗರ್ಭಿಣಿಯರಿಗೆ ಒಂದೇ ಸಾರಿ ಹೆರಿಗೆ ಮಾಡಿಸುವಷ್ಟು ಪ್ರಮಾಣದ ಔಷಧಿಗಳು ದಡ ದಡ ಕೌಂಟರ್ ಮೇಲೆ ಬೀಳುತ್ತವೆ. ಟೆನ್ಷನ್, ಗಾಬರಿಯಿಂದ ನಾವು ಜೇಬನ್ನು ಮುಟ್ಟಿಮುಟ್ಟಿ ನೋಡಿಕೊಳ್ಳಬೇಕು ಹಾಗೆ.
ಅವನ್ನೆಲ್ಲ ಹೊತ್ತುಕೊಂಡು ಹಿಂತಿರುಗಿದ ನಮ್ಮನ್ನು ಎದುರುಗೊಳ್ಳುವುದು ಅತ್ಯವಸರದ ನರ್ಸ್ ಒಬ್ಬಳು. ಲಬಕ್ಕನೇ ಅವನ್ನೆಲ್ಲ ಕಿತ್ತುಕೊಂಡು ಹೆರಿಗೆ ಕೋಣೆಗೆ ಓಡಿ ಬಾಗಿಲು ಹಾಕಿಕೊಳ್ಳುತ್ತಾಳೆ. ಮತ್ತೆ ಅದೇ ವೇಟಿಂಗ್ ಪಿರಿಯಡ್. ಗರ್ಭಿಣಿ ಹೆಂಗಸರ ಕಳವಳ, ಕಾಳಜಿ ಬೆರೆತ ನೋಟಗಳು. ಗೋಡೆಯ ಮೇಲಿನ ಪೋಸ್ಟರ್‌ಗಳಲ್ಲಿ ನಗುವ ಆರೋಗ್ಯವಂತ ಮಕ್ಕಳು, ಅವರ ಕೆಳಗೆ ಮರಣ ಶಾಸನದಂತೆ ಅಚ್ಚಾಗಿರುವ ಭಾರಿ ಭಾರಿ ಮಾರಕ ರೋಗಗಳ ಲಕ್ಷಣಗಳು. ಒಂದು ವೇಳೆ ನಾವೇ ಗರ್ಭಿಣಿಯರಾಗಿದ್ದರೆ, ಆ ಒತ್ತಡಕ್ಕೆ, ಆ ವಾತಾವರಣದಲ್ಲಿ, ಡಾಕ್ಟರ್‌ಗಳ ಅಥವಾ ಒಂದೇ ಒಂದು ಔಷಧಿಯ ಅಗತ್ಯವೇ ಇಲ್ಲದೆ ತಕ್ಷಣ ಹೆರಿಗೆ ಆಗುವುದೇನೋ!
’ಒಂದೇ ಬಾಲ್, ಒಂದೇ ರನ್, ಒಂದೇ ವಿಕೆಟ್’ ಎಂಬಂತೆ ನಿಂತ ನಮ್ಮತ್ತ ಅಂಪೈರ್ ಬಂದಂತೆ ವೈದ್ಯರು ಬರುತ್ತಾರೆ. ಈಗ ಅವರ ಮುಖದಲ್ಲಿ ಮೊದಲಿನ ಧಾವಂತವಿಲ್ಲ. ನಡಿಗೆಯಲ್ಲಿ ಮೊದಲಿನ ರಭಸವಿಲ್ಲ. ಕೈಯಲ್ಲಿ ಕ್ಲಿಪ್ ಪ್ಯಾಡ್, ಒಂದಿಷ್ಟು ಫಾರ್ಮ್‌ಗಳು.
’ಪೇಷಂಟ್ (ಗರ್ಭಿಣಿ ಅಲ್ಲ!) ಕಡೆಯವರು ಯಾರು?’ ಎಂದು ಆ ಕಡೆ ಈ ಕಡೆ ನೋಡುತ್ತ ಕೇಳುತ್ತರಾದರೂ ಅವರು ಸೀದಾ ಬರುವುದು ನಮ್ಮ ಕಡೆಯೇ. ನಮ್ಮ ಮುಖಭಾವ, ನಿಂತರೂ ನಿಂತಂತಿರದ ಚಡಪಡಿಸುವ ಭಂಗಿ, ಪೇಷಂಟ್‌ನ ಸಂಬಂಧಿಕರಾಗಿದ್ದರಿಂದ ಮಹಾ ಪೇಷಂಟ್‌ಗಳಂತಾಗಿರುವ ನಮ್ಮತ್ತ ಬಂದವರೇ, ’ನೋಡಿ ಮಿಸ್ಟರ್. (ನಾನೇ ತಾನೇ ಆ ಮಿಸ್ಟರ್!). ಚೊಚ್ಚಲ ಹೆರಿಗೆ. (ಗೊತ್ತು ಹೇಳ್ರೀ). ಲೇಬರ್ ಶುರುವಾಗಿ ಆಗಲೇ ತುಂಬ ಹೊತ್ತಾಯ್ತು. (ನಮ್ಮದು ಕೂಡಾ!). ಕೂಸು ಅಡ್ಡ ಕೂತುಬಿಟ್ಟಿದೆ. (ನಿಮ್ಮನ್ನೆಲ್ಲ ನೋಡಿ ಗಾಬರಿಯಾಗಿರಬೇಕು!). ತಡ ಆದ್ರೆ ಪ್ರಾಬ್ಲಮ್ ಆಗುತ್ತೆ. (ನಿಮ್ಮ ಪ್ರಾಬ್ಲಮ್ ಅರ್ಥವಾಗ್ತಿದೆ ಹೇಳ್ರೀ). ಕೂಸು ಕಕ್ಕಸ್ಸು ಮಾಡಿಕೊಂಡ್ರೆ ಕಷ್ಟ. ಆಗ ಆಕ್ಸಿಜನ್ ಕೊರತೆ ಆಗುತ್ತೆ. (ಸಹಜವಾಗಿ. ಜನ ಮೂಗು ಮುಚ್ಕೊಂಡ್ರೆ ಇನ್ನೇನಾಗುತ್ತೆ?). ಅದರಿಂದ ಮೆದುಳಿಗೆ ಹಾನಿ. (ನಮ್ಮ ಮೆದುಳು ಆಗಲೇ ಹಾನಿಯಾಗಿದೆ). ತಕ್ಷಣ ಸೀಸೇರಿಯನ್ ಮಾಡ್ಬೇಕು. (ಓಹೋ, ಇದಾ ವಿಷಯ!). ಇಲ್ಲಿ ಸೈನ್ ಮಾಡಿ’ ಎಂದು ರೆಡಿಮೇಡ್ ಕಾಲಮ್ ತೋರಿಸುತ್ತಾರೆ.
ಚೆಕ್‌ಗೆ ಸಹಿ ಮಾಡುವಾಗ ಯೋಚಿಸಬಹುದು, ರಾಜೀನಾಮೆ ಪತ್ರಕ್ಕೆ ಸಹಿ ಮಾಡುವಾಗ ಇನ್ನಷ್ಟು ಯೋಚಿಸಬಹುದು. ಆದರೆ, ಹೆರಿಗೆ ಆಸ್ಪತ್ರೆಯ ಲೇಬರ್ ವಾರ್ಡ್‌ನಲ್ಲಿ ಡಾಕ್ಟರ್ ಕೈಗಿಡುವ ಫಾರ್ಮ್‌ಗೆ ಸಹಿ ಮಾಡುವಾಗ ಯೋಚಿಸುವುದು ಕಷ್ಟ. ಅಷ್ಟೊತ್ತಿಗೆ ಮೆದುಳು ವಿಚಾರ ಮಾಡುವುದನ್ನು ನಿಲ್ಲಿಸಿ, ಕೇವಲ ಆಜ್ಞೆ ಪಾಲಿಸುವುದನ್ನು ಮಾತ್ರ ಮಾಡುತ್ತಿರುತ್ತದೆ. ಸರಸರ ಸಹಿ ಮಾಡುತ್ತೇವೆ. ನಮ್ಮ ಇಡೀ ಆಸ್ತಿ ಬರೆಸಿಂಡರೇನೋ ಎಂಬಂತೆ ವೈದ್ಯರು ನಿರಾಳವಾಗಿ ಹೆರಿಗೆ ಕೋಣೆಯೊಳಕ್ಕೆ ಹೋಗುತ್ತಾರೆ.
ಐದೇ ನಿಮಿಷ. ಕೂಸೊಂದು ಅಳುವುದು ಕೇಳುತ್ತದೆ. ಕೊನೆಯ ಬಾಲ್ ಎದುರಿಸಿ, ಬೇಕಿದ್ದ ಒಂದು ರನ್ ಗಳಿಸಿದ ಕೂಡಲೇ ಕ್ರಿಕೆಟ್ ಮೈದಾನದಲ್ಲಿ ಸ್ಫೋಟಿಸುವಂಥ ಸಂಭ್ರಮ ಹೊರಗೆ ನಿಂತವರಲ್ಲಿ. ಮಗು ಇನ್ನೂ ಜೋರಾಗಿ ಅಳುತ್ತದೆ. ವೈದ್ಯರು, ದಾದಿಯರು, ಆಪರೇಶನ್ ಥೇಟರ್‌ನ ಆ ಭೀಕರ ವಾತಾವರಣ ನೋಡಿದ ಗಾಬರಿಗೆ ಇರಬೇಕು. ವೇಟಿಂಗ್ ರೂಮ್‌ನಲ್ಲಿ ಕೂತ ಗರ್ಭಿಣಿಯರ ಮುಖದಲ್ಲಿ ತಮಗೇ ಹೆರಿಯಾಯಿತೇನೋ ಎಂಬ ಹರ್ಷ. ಮ್ಯಾಚ್ ಗೆಲ್ಲಿಸಿಕೊಟ್ಟ ಎಂಬಂತೆ ಅತ್ತೆ-ಮಾವ ಥರ್ಡ್ ಅಂಪೈರ್‌ಗೆ (ದೇವರಿಗೆ) ಕೈ ಮುಗಿಯುತ್ತಾರೆ. ಈ ಎಲ್ಲದಕ್ಕೂ ಕಾರಣಕರ್ತನಾದ ನಾನು ಮಾತ್ರ ಸುಮ್ಮನೇ ನಿಲ್ಲುತ್ತೇನೆ. ವ್ಯಕ್ತಿಯ ಅಸಹಾಯಕತೆ, ಬಾಣಂತಿಯ ನೋವನ್ನು ಹಣವನ್ನಾಗಿ ಪರಿವರ್ತಿಸಿಕೊಂಡ ವ್ಯವಸ್ಥೆಯಲ್ಲಿ ನನ್ನ ಮಗು ಹುಟ್ಟಿದ್ದಕ್ಕೆ ಹರ್ಷ ಪಡಬೇಕೋ, ಬೇಸರಿಸಿಕೊಳ್ಳಬೇಕೋ ಗೊತ್ತಾಗದೇ ಸುಮ್ಮನಾಗುತ್ತೇನೆ.
ಈಗ ಹೆರಿಗೆ ಕೋಣೆಯ ಬಾಗಿಲು ಇಷ್ಟೇ ಇಷ್ಟು ತೆರೆದುಕೊಂಡು ದಾದಿಯೊಬ್ಬಳು ಇಣುಕಿ ಕೂಗುತ್ತಾಳೆ: ಹೆಣ್ಣು ಮಗು! ’ಓ’ ಎಂಬ ಸಾಮೂಹಿಕ ಉದ್ಗಾರ ವೇಟಿಂಗ್ ರೂಮ್‌ನಿಂದ.
ಗೌರಿ ಜನಿಸಿದ್ದು ಹೀಗೆ!
- ಚಾಮರಾಜ ಸವಡಿ

- Chamaraj ರವರ ಬ್ಲಾಗ್
- Login or register to post comments
- 515 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ಯಾಕಿಷ್ಟು ನೆಗೇಟಿವ್ ಆಗಿ ಯೋಚಿಸ್ತೀರಿ ಚಾಮರಾಜ್? ಒಪ್ಪುತ್ತೇನೆ ಇತ್ತೀಚಿಗೆ ಹೆರಿಗೆ ಆಸ್ಪತ್ರೆಗಳಲ್ಲಿ ಸುಲಿಗೆ ಹೆಚ್ಚಾಗಿದೆ. ಸರಿಯಾಗೇ ಸುಲೀತಾರೆ. ನಮ್ಮ ಅನಿವಾರ್ಯತೆಯನ್ನ ತಮ್ಮ ಅನುಕೂಲ ಮಾಡ್ಕೊಳ್ತಾರೆ . ನಿಜ. ಆದ್ರೆ ಅವರೂ ಬದುಕಲಿಕ್ಕೆಂದೇ ಅಲ್ಲವೆ ಆ ವೃತ್ತಿಯನ್ನ ಅವಲಿಂಬಿಸುವುದು?(ನಾನು ಹೀಗೆ ಹೇಳುತ್ತೇನೆ ಅಂದ ಮಾತ್ರಕ್ಕೆ ಸುಲಿಗೆಯನ್ನ ಪ್ರೋತ್ಸಾಹಿಸುತ್ತಿದ್ದೇನೆ ಅಂತ ತಪ್ಪು ಭಾವಿಸಬೇಡಿ.)ಎಲ್ಲರು ಧರ್ಮಕ್ಕೆ ಎಂಬಂತೆ ಕೆಲಸ ಮಾಡಲು ಸಾಧ್ಯವೆ? ಯಾಕೆ ಅಸ್ಪತ್ರೆಗಳನ್ನು ವಾಕರಿಕೆ ಬರುವಷ್ಟು ಬರೀ ನೆಗೇಟಿವ್ ಆಗಿ ಬಿಂಬಿಸಿದೀರೋ ಅರ್ಥ ಆಗ್ಲಿಲ್ಲ. ಪತ್ರಕರ್ತರು ನೀವು ಜೊತೆಗೆ ಪ್ರಭಾವಶಾಲಿ ಬರವಣಿಗೆ ನಿಮ್ಮದು.ನಿಮ್ಮ ಬರಹಗಳನ್ನು ಪತ್ರಿಕೆಗಳಲ್ಲಿ ಓದಿ ನಿಮ್ಮ ಬರಹದೆಡೆಗೆ ಮೆಚ್ಚುಗೆ ಬೆಳಿಸಿಕೊಂಡವಳು ನಾನು.
ಸೂಕ್ಷ್ಮತೆ ಎಂದರೆ ಎಲ್ಲ ರೀತಿಯಿಂದಲೂ ಯೋಚಿಸುವುದು ಅಲ್ಲವೆ?
ನಿಮ್ಮ ಲೇಖನ ಓದಿದ ಗರ್ಭಿಣಿ ಹೆಣ್ಣುಮಕ್ಕಳು ಆಸ್ಪತ್ರೆಗೆ ಹೋಗಲು ಹೆದರಿ,"ನನಗೆ ವಾಕಿಂಗ್, ಒಳ್ಳೆ ಆಹಾರ ಅಷ್ಟು ಸಾಕು,ಆಸ್ಪತ್ರೆಯ ಸಹವಾಸವೆ ಬೇಡ ಮನೆಯಲ್ಲೆ ಹೆರಿಗೆಯಾಗಲಿ" ಅಂತ ಹಟ ಹಿಡಿದು ಕೂತರೆ ಗತಿ ಏನು?
'ಕೂಸು ಕಕ್ಕಸ್ಸು ಮಾಡಿಕೊಂಡ್ರೆ ಕಷ್ಟ. (ನಾವು ಮಾಡಿಕೊಂಡ್ರೆ ಪರವಾಗಿಲ್ವಾ?)' ಈ ಸಾಲಂತೂ ಎಷ್ಟೂ ಇಷ್ಟ ಆಗ್ಲಿಲ್ಲ.
ಪುಟ್ಟ ಗೌರಿಗೆ ನನ್ನ ಅಕ್ಕರೆ.
ಜಯಲಕ್ಷ್ಮೀ.ಪಾಟೀಲ್.
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ನೀವು ಆಕ್ಷೇಪಿಸಿದ ಸಾಲನ್ನು ತೆಗೆದು ಹಾಕುತ್ತೇನೆ.
ಉಳಿದಂತೆ ಆಸ್ಪತ್ರೆ ವಿಷಯಗಳಲ್ಲಿ ನಾನು ನೆಗಟಿವ್ ಆಗಿ ಯೋಚಿಸಿಲ್ಲ. ವಾಸ್ತವ ಬರೆದಿದ್ದೇನೆ. ನಾನು ಹಾಗೆ ಬರೆದ ಮಾತ್ರಕ್ಕೆ ಹೆಣ್ಮಕ್ಕಳು ಆಸ್ಪತ್ರೆಗೆ ಹೋಗುವುದನ್ನು ಬಿಡಲು ಆದೀತೆ? ನಾವೆಲ್ಲ ಆಸ್ಪತ್ರೆಗೆ ಹೋಗುವುದು ಅನಿವಾರ್ಯ ಕಾರಣಗಳಿಗಾಗಿ. ಅಲ್ಲವೆ?
ಇದು ಅನುಭವದ ಒಂದು ಮುಖ ಮಾತ್ರ. ಸಾರ್ವತ್ರಿಕ ಅಭಿಪ್ರಾಯವಂತೂ ಆಗದು. ಆದರೆ, ಬಹಳಷ್ಟು ಆಸ್ಪತ್ರೆಗಳು ಹೀಗೇ ಇವೆ ಎಂಬುದನ್ನು ಮಾತ್ರ ಖಂಡಿತ ಹೇಳಬಲ್ಲೆ. ನಿಮಗೆ ಅಂತಹ ಅನುಭವ ಆಗಿರದಿದ್ದರೆ ನೀವು ಪುಣ್ಯವಂತೆ ಬಿಡಿ.
ಆಸ್ಪತ್ರೆಗಳವರು ಧರ್ಮಕ್ಕೆ ಕೆಲಸ ಮಾಡಲಿ ಎಂದು ನಾನು ಹೇಳುತ್ತಿಲ್ಲ. ಆದರೆ, ಇನ್ನೊಬ್ಬರ ನೋವನ್ನು ಹೆಚ್ಚಿಸಿ ದುಡ್ಡು ಮಾಡಿಕೊಳ್ಳುವುದಕ್ಕೆ ನನ್ನ ಆಕ್ಷೇಪ ಇದೆ. ಸೇವೆ ಕೊಟ್ಟು ಅದಕ್ಕೆ ತಕ್ಕ ದುಡ್ಡು ತಗೊಂಡರೆ ಪರವಾಗಿಲ್ಲ. ಆದರೆ, ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡರೆ, ಅವರು ಯಾವ ವೃತ್ತಿಯಲ್ಲಿದ್ದರೂ, ಅದು ತಪ್ಪು.
ನಾವೆಲ್ಲ ಪೊಲೀಸ್ ಸ್ಟೇಶನ್, ಆಸ್ಪತ್ರೆ ಹಾಗೂ ವಕೀಲರ (ನ್ಯಾಯಾಲಯ ಸಹ) ಹತ್ತಿರ ತೀರಾ ಸಂಕಷ್ಟದಲ್ಲಿದ್ದಾಗ ಹೋಗುತ್ತೇವೆ. ಇಲ್ಲಿ ಆಗುವ ಅನ್ಯಾಯ, ಸುಲಿಗೆ ತೀರಾ ನೋವುಂಟು ಮಾಡುತ್ತದೆ ಎಂಬುದನ್ನು ನಾನು ನೆನಪಿಸಬೇಕಿಲ್ಲ. ಎಲ್ಲ ವೈದ್ಯರೂ ಸುಲಿಯುತ್ತಾರೆ ಎಂದಲ್ಲ. ಆದರೆ ಬಹಳಷ್ಟು ಜನ ಅಂಥವರು ಎಂಬುದರ ಬಗ್ಗೆ ಈ ಕ್ಷಣಕ್ಕೂ ನನ್ನ ಅಭಿಪ್ರಾಯ ಹಾಗೇ ಇದೆ.
- ಚಾಮರಾಜ ಸವಡಿ
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ನಿಜ ನಾನು ಈ ವಿಷಯದಲ್ಲಿ ಪುಣ್ಯವಂತೆ ಒಪ್ಪಿಕೊಳ್ಳುತ್ತೇನೆ.. ನನಗೆ ಅವಳಿ ಮಕ್ಕಳು ಮತ್ತು ಸಹಜ ಹೆರಿಗೆ. ಆದರೆ ಒಡಲಲ್ಲಿ ಅವಳಿ ಕಂದಮ್ಮಗಳು ಕುಡಿಯೊಡದಿವೆ ಎಂದು ಗೊತ್ತಾದ ಕ್ಷಣದಿಂದ ಬೆಡ್‍ರೆಸ್ಟ್‍ನಲ್ಲಿದ್ದಾಕೆ.
ನೀವು ಬರೆದದ್ದು ವಾಸ್ತವ ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ಅದರೆ ನಿಮ್ಮ ಈ ಲೇಖನದಲ್ಲಿ ಪ್ರತಿಯೊಂದನ್ನೂ ನೀವು ಬರೀ ದುಡ್ಡಿನ ಅಥವಾ ಮೋಸದ ಹಿನ್ನಲೆಯಲ್ಲಿ ನೋಡಿದ್ದು ನನಗೆ ಸರಿ ಅನಿಸಲಿಲ್ಲ. ಅದಕ್ಕೇ ಹಾಗೆ ಹೇಳಿದ್ದು. ಉದಾಹರಣೆಗೆ ಆಸ್ಪತ್ರೆಯಲ್ಲಿನ ಪೋಸ್ಟರ್ಸ್, ಸುಸೂತ್ರ ಹೆರಿಗೆಯಾಗದಿದ್ದಲ್ಲಿ ವದಗುವ ಅಪಾಯದ ಕುರಿತು ವೈದ್ಯರ ವಿವರಣೆ ಇತ್ಯಾದಿ. ಒಂದು ವೇಳೆ ಮಗು(ಯಾರದ್ದಾದರೂ ಅಷ್ಟೆ) ಗರ್ಭದಲ್ಲೆ ವೈದ್ಯರು ಹೇಳಿದ ತೊಂದರೆ ಅನುಭವಿಸುವಂತಾಗಿ ಅದಕ್ಕೆ ಪ್ರಾಣಾಪಾಯ ಆದರೆ...? ಆಗಲೂ ನಾವು ದೂರುವುದು ವೈದ್ಯರನ್ನೆ ಅಲ್ಲವೆ? "ಇವರೇನು ಮಣ್ಣು ಹೊತ್ತು ಬಂದಿದ್ದಾರಾ ೫ ವರ್ಷ ಕಾಲೆಜಿನಲ್ಲಿ?" ಎಂದು. ನಿಜ ಪೋಲಿಸು, ವೈದ್ಯ ಮತ್ತು ವಕೀಲರ ಬಳಿ ನಾವೆಲ್ಲ ಹೋಗುವುದು ಅನಿವಾರ್ಯವಾದಾಗಲೆ. 'ಆದರೆ ಬಹಳಷ್ಟು ಜನ ಅಂಥವರು' ಎಂಬ ವೈದ್ಯರ ಕುರಿತ ನಿಮ್ಮ ಅಭಿಪ್ರಾಯ ಬಹುತೇಕರದ್ದು ಸಹ.
ಜಯಲಕ್ಷ್ಮೀ.ಪಾಟೀಲ್.
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ಜಯಲಕ್ಷ್ಮೀಯವರೇ, ನಿಮ್ಮ ಕಾಳಜಿಗೆ ಧನ್ಯವಾದ.
ಇಡೀ ಲೇಖನದಲ್ಲಿ ತಮಾಷೆ ಇತ್ತು ಎಂಬುದನ್ನು ನೀವು ಗುರುತಿಸಲಿಲ್ಲ ಎಂಬುದೇ ತಮಾಷೆಯಾಗಿದೆ. ನಾನು ಅದನ್ನು ಲಘುವಾಗಿ ಬರೆದಿದ್ದೇನೆ. ವ್ಯಂಗ್ಯವೂ ಇದೆ. ವಾಸ್ತವ ಹೇಳಬೇಕಾದಾಗ, ಕೊಂಚ ವಿಡಂಬನೆ ಅಗತ್ಯವಾಗುತ್ತದೆ. ಇಲ್ಲದಿದ್ದರೆ ಅದು ಕ್ರೈಮ್ ವರದಿಯಾಗುವ ಅಪಾಯವಿದೆ.
ತಮಾಷೆಯನ್ನು ಗ್ರಹಿಸಿಕೊಂಡು ಇನ್ನೊಮ್ಮೆ ಓದಿ ನೋಡಿ?
ಅಂದ್ಹಾಗೆ, ನಿಮ್ಮ ಮಕ್ಕಳು ಹೇಗಿವೆ?
- ಚಾಮರಾಜ ಸವಡಿ
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ತಮಾಷೆ ನನಗೂ ಅರ್ಥವಾಗುತ್ತೆ ಚಾಮರಾಜ್. ಆದರೆ ನಿಮ್ಮ ಲೇಖನದಲ್ಲಿ ನನಗೆ ತಮಾಷೆಗಿಂತ ವ್ಯಂಗ್ಯ ಜಾಸ್ತಿ ಕಾಣಿಸಿತು.(ಬಹುಶಃ ನನ್ನ ದೃಷ್ಟಿ ದೋಷ ಇದ್ದೀತೆ?! ಹ್ಹಾ ಹ್ಹಾ ಹ್ಹಾ ಇರಬಹುದು!) ವಿಡಂಬನೆಗೆ ನನ್ನ ಆಕ್ಷೇಪವಿಲ್ಲ. ಆದರೆ ಪ್ರತೀಯೊಂದು ಕ್ರೀಯೆಯನ್ನೂ ವಿಡಂಬನಾ ದೃಷ್ಟಿಯಿಂದ ಬರೆದರೆ ಬರಹ ಹೇಳಬೇಕಾದುದನ್ನು ಹೇಳದೆ ಓದುಗರನ್ನು ಹಳಿ ತಪ್ಪಿಸುತ್ತದೆ. ನಿಮ್ಮ ನ್ಯಾಯಪರತೆ ಅಥವಾ ಅದರೆಡೆಯ ಕಾಳಜಿ,ಅನ್ಯಾಯದ ವಿರುದ್ಧದ ಆಕ್ರೋಶ ನನಗರ್ಥವಾಗಿಲ್ಲವೆಂದಲ್ಲ, ಖಂಡಿತ ಅದನ್ನು ನಾನು ಗ್ರಹಿಸಿದ್ದೇನೆ. ಜೊತೆಗೆ ನಾನೇನು ವೈದ್ಯರ ಸುಲಿಗೆಯ ಪರ ವಹಿಸಿ ಮಾತಾಡುತ್ತಲೇ ಇಲ್ಲ ಮತ್ತು ಯಾವತ್ತೂ ಮಾತಾಡುವುದೂ ಇಲ್ಲ(ಅದು ಕೇವಲ ವೈದ್ಯರೆ ಆಗಬೇಕೆಂದೂ ಇಲ್ಲ). ನಿಮ್ಮ ಹಾಗೆ ನಾವೂ ಮನೆಯಲ್ಲಿ ಒಂದು ಅಹಿತ ಘಟನೆ ನಡೆದ ಕೆಲವು ದಿನಗಳ ನಂತರ ಹೀಗೇ ತಮಾಷೆಯಾಗಿ ಮಾತಾಡಿಕೊಳ್ಳುತ್ತಿರುತ್ತೇವೆ.
ನನ್ನ ಮಗ ಅಮೋಲ್ ಮತ್ತು ಮಗಳು ಅದಿತಿ. ಪರಸ್ಪರ ಜಗಳಾಡಿಕೊಂಡು ನನ್ನ ತಲೆ ತಿನ್ನುತ್ತಾ ಚೆನ್ನಾಗಿದ್ದಾರೆ ! ಅವಳಿ ಮಕ್ಕಳಾದರೂ ರೂಪ,ಸ್ವಭಾವ,ಅಭಿರುಚಿಗಳಲ್ಲಿ ಒಂಚೂರೂ ಹೋಲಿಕೆಯಿಲ್ಲ.
ಪುಟ್ಟ ಗೌರಕ್ಕಂಗೆ ಅಕ್ಕರೆ.
ಜಯಲಕ್ಷ್ಮೀ.ಪಾಟೀಲ್.
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ಚಾಮರಾಜರ ಮಾತುಗಳಲ್ಲಿ ಉತ್ಪ್ರೇಕ್ಷೆ ಇಲ್ಲ ಅನ್ನಿಸುತ್ತದೆ. ಈಗಿನ ಆಸ್ಪತ್ರೆಗಳು ಸುಲಿಗೆ ಕೇಂದ್ರಗಳಾಗಿವೆ. ಮುಟ್ಟಿದ್ದಕ್ಕೆ ಮೂಸಿದ್ದಕ್ಕೆ ದುಡ್ಡು. ಎಂ.ಬಿ.ಬಿ.ಎಸ್ ಮೊದಲಾದ ಕೋರ್ಸುಗಳಿಗೆ ಶುಲ್ಕ ತೆಗೆದುಹಾಕಿದರೆ ಸರಿಯಾಗಬಹುದೇನೋ. ಒಂದು ಸಣ್ಣ ಜ್ವರ ವಾಸಿ ಮಾಡಲು ಇವತ್ತು ಯಾವುದೇ ಆಸ್ಪತ್ರೆ ತಗೊಳ್ಳಿ ೩೦೦-೪೦೦ ರೂಪಾಯಿ ತಗೋತಾರೆ. ಕನ್ಸಲ್ಟೇಶನ್ನು, ಒಂದಕ್ಕೆ ಹತ್ತು ಮಾತ್ರೆಗಳು ಇತ್ಯಾದಿ. ಇಲ್ಲಿ ವೈದ್ಯರ ತಪ್ಪೇನಿಲ್ಲ್ ಅನ್ನಿಸುತ್ತೆ. ಏಕೆಂದರೆ ವಸೂಲಿಗಿಳಿಯುವವರು ಆಸ್ಪತ್ರೆ ಅಥವಾ ನರಸಿಂಗ ಹೋಮ (ನರ್ಸಿಂಗ್ ಹೋಂ) ಗಳ ಆಡಳಿತ ಮಂಡಲಿಯವರು.
ಇದನ್ನೆಲ್ಲಾ ಭರಿಸಲಾಗದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷದಿಂದ ಬಡರೋಗಿಗಳು ಸಾವು ನೋವು ಅನುಭವಿಸುವುದನ್ನು ಕೇಳಿದಾಗ ಕರುಳು ಕಿವುಚುತ್ತದೆ.
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ತುಂಬ ಜನ ಬಡರೋಗಿಗಳು ವೈದ್ಯಕೀಯ ನಿರ್ಲಕ್ಷ್ಯದಿಂದ ಸಾಯುತ್ತಾರೆ. ಅನಾರೋಗ್ಯಪೀಡಿತರಾದರೆ ಅವರ ದುಡಿಮೆಯ ಮುಖ್ಯ ಪಾಲು ಚಿಕಿತ್ಸೆಗೇ ಹೋಗುತ್ತದೆ. ಅನಕ್ಷರಸ್ಥರೇ ಹೆಚ್ಚಿರುವುದರಿಂದ ಯಾವ ಔಷಧಿಗಳನ್ನು ನೀಡುತ್ತಾರೆ ಎಂಬುದು ಇವರಿಗೆ ಗೊತ್ತಾಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಚಿಕಿತ್ಸೆಯ ಕೊರತೆ ಇರುವುದೂ ಶೋಷಣೆಗೆ ಮುಖ್ಯ ಕಾರಣ. ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ದುಃಸ್ಥಿತಿಯಲ್ಲಿರುವುದು ವ್ಯವಸ್ಥೆ ಹದಗೆಡಲು ಕಾರಣ.
ಆದರೆ, ವೈದ್ಯರ ಈ ನಿರ್ಲಿಪ್ತ ಹಾಗೂ ಲಾಭಕೋರತನ ಕೇವಲ ಬಡವರಿಗೆ ಮಾತ್ರ ಸೀಮಿತವಾಗಿಲ್ಲ. ಅನಿವಾರ್ಯತೆಗೆ ಸಿಲುಕಿದ ಎಲ್ಲರನ್ನೂ ಅವರು ಸುಲಿಯುತ್ತಾರೆ.
- ಚಾಮರಾಜ ಸವಡಿ
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ವೈದ್ಯರದ್ದು ಅತಿಯಾಯಿತು..
ಮೊನ್ನೆ ಊರಿಗೆ ಹೋಗಿದ್ದಾಗ, ನಮ್ಮ ಓಣಿ ಅಂಚಿನಲ್ಲಿನ ಒಬ್ಬ ಹೆಣ್ಣು ಮಗಳಿಗೆ ಮನೆಯಲ್ಲಿಯೇ ಹೆರಿಗೆ ಆಯಿತು. ಮಗು ತೂಕ ೩.೫ ಕೆಜಿ.
ಆದರೆ ಅದೇ ಒಂದು ಆಸ್ಪತ್ರೆಯಲ್ಲಾಗಿದ್ದರೆ ಸಿಸೇರಿಯನ್ನು ಅದು ಇದು ಅಂತ ದುಡ್ಡು ತಗೊಂಡು ಬೆಂಡೆತ್ತಿರೋರು..
ಇದು ಒಂದರಲ್ಲೇ ಇಲ್ಲ..ಎಲ್ಲ ರೀತಿಯಲ್ಲೂ..
ಉದಾಹರಣೆಗೆ..ಬಿಪಿ ಒಂದೇ ತಗೋಳ್ಳೋಣ..
ನಾರ್ಮಲ್ಲಾಗಿ ೮೦-೧೨೦ ಅಂತ ಇದೆ..
ಸಾಮಾನ್ಯವಾಗಿ ಒಬ್ಬ ಹೆಚ್ಚು ಹೊತ್ತು ಕೆಲಸ ಮಾಡಿದಾಗ ಅಥವಾ ಓಡಿದಾಗ ಅವನ ಬಿಪಿ ಹೆಚ್ಚಾಗುವುದು ಸಾಮಾನ್ಯ...
ಯಾವುದೋ ಚಿಕ್ಕ ಕಾರಣಕ್ಕೆ ಅವನು ಆಸ್ಪತ್ರೆಗೆ ಹೋದಾ ಅಂತ ಇಟ್ಕೊಳ್ಳಿ ವೈದ್ಯರು ನಿಮಗೆ ಬಿಪಿ ಇದೆ ಅಂತ ಹೇಳಿ ಅವರಿಗೆ ಭಯ ಹುಟ್ಟಿಸುತ್ತಾರೆ(ನಿಜವಾಗಿಯೂ ಬಿಪಿ ಇರದೇ ಇದ್ರೂ)ಯಾಕಂದ್ರೆ ಬಿಪಿ ಅಂದ್ರೆ ಗೊತ್ತಲ್ಲ ಖಾಯಂ ಗಿರಾಕಿ. ಮತ್ತು ಔಷಧಿ ಕಂಪನಿಗಳಿಗೆ ಎಷ್ಟೊಂದು ಲಾಭ ನೋಡಿ..ವರ್ಷಾನುಗಟ್ಟಲೇ ಮತ್ತು ದಿನಕ್ಕೆ ಎರಡು ಹೊತ್ತು ತಗೊಳ್ಳಲೇ ಬೇಕು..ಇಂತಹ ಪರಿಸ್ತಿತಿ ತಂದಿಟ್ಟು ಬಿಟ್ಟಿದ್ದಾರೆ..
ಬಿಪಿ ಇಲ್ಲದವರೂ ಸಹ ಇದೆ ಅಂತ ಹೆದರಿಕೆಯಿಂದ ಮಾತ್ರೆ ಔಷಧಿಗಳನ್ನು ಶುರುಮಾಡುತ್ತಾರೆ.
ಇದು ಕೂಡ ಸುಲಿಯೋ ಸೂತ್ರನೇ...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ವೈದ್ಯರ ಅತಿರೇಕಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯ ಭ್ರಷ್ಟಾಚಾರವೂ ಕಾರಣ. ದುಡ್ಡು ಕೊಟ್ಟು ಸೀಟು ಪಡೆಯಬೇಕಾದ ಅಥವಾ ದುಬಾರಿ ಶುಲ್ಕ ನೀಡಬೇಕಾದ ಅನಿವಾರ್ಯತೆ ಎದುರಿಸಿರುವ ಜನ, ವೃತ್ತಿಗೆ ಬಂದ ತಕ್ಷಣ ಕೊಟ್ಟಿದ್ದನ್ನು ಪಡೆದುಕೊಳ್ಳುವ, ಅದಕ್ಕೆ ಮತ್ತಷ್ಟು ಸೇರಿಸುವ ತುಡಿತದಲ್ಲಿರುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಹೊರಬರುತ್ತಿರುವುದು ಕೂಡ ದುಡ್ಡು ಮಾಡಿಕೊಳ್ಳುವ ಹಪಾಹಪಿಗೆ ಕಾರಣ.
ಆದರೆ, ಇದು ಕಾರಣ ಮಾತ್ರ. ಇದನ್ನು ನಾವು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ವೈದ್ಯ ಜಗತ್ತಿನ ಅನಾಚಾರ ರಾಜಕೀಯ ಅನಾಚಾರದಷ್ಟೇ ತೀವ್ರ ಹಾಗೂ ಕೊಳಕು. ಇದು ನಮಗೆ ಇತರ ವಿಷಯಗಳಿಗಿಂತ ನೇರವಾಗಿ ತಾಕುವುದರಿಂದ, ಇದರ ಬಗ್ಗೆ ಹೆಚ್ಚು ಸಂವೇದನಾಶೀಲರಾಗುತ್ತೇವೆ.
- ಚಾಮರಾಜ ಸವಡಿ
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ಚಾಮರಾಜರೆ,
ನೀವು ಒಬ್ಬ ತಂದೆಯ ದೃಷ್ಟಿಕೋನದಿಂದ ಬರೆದಿದ್ದೀರ. ನನಗೆ ಹಿಡಿಸಿತು.
ಈ ತರಹದ ಸುಲಿಗೆ ವ್ಯಕ್ತಿ ಹುಟ್ಟಿದಾಗ ಸರಿ, ಸಾಯುವಾಗ ಮತ್ತು ಸತ್ತ ಮೇಲೂ ನಡೆಯುತ್ತೆ.
ಅಮೇರಿಕದಲ್ಲಿ, ಹೆರಿಗೆ ಸಮಯದಲ್ಲಿ, ಗಂಡ ಮತ್ತು ಮನೆಯವರು ಬೇಕಾದರೆ ಹೆರಿಗೆ ಕೋಣೆಯಲ್ಲಿರಬಹುದು. ಏನು ನಡೆಯುತ್ತಿದೆಯೆಂದು ಸ್ವಲ್ಪ ಮಟ್ಟಿಗೆ ಸ್ಪಷ್ಟವಾಗಿರುತ್ತೆ. ಆದರೆ, ಬೇರೆಲ್ಲ ವಿಷಯದಲ್ಲಂತೂ ಅಮೇರಿಕದ ವೈದ್ಯಕೀಯ ಸಿಷ್ಟಮ್ ಏನೇನೂ ಸರಿಯಿಲ್ಲ. ಇಲ್ಲಿ, ನಮಗೆ ಸಿಗುವ ಚಿಕಿತ್ಸೆಯ ಕ್ರಮ ವೈದ್ಯರಿಗಿಂತ ಹೆಚ್ಚಾಗಿ ನಮ್ಮ ಇನ್ಸೂರೆನ್ಸ್ ಕಂಪೆನಿಯನ್ನು ಅವಲಂಬಿಸಿರುತ್ತೆ. ಒಟ್ಟಿನಲ್ಲಿ ನೊಂದಿರುವ ಜೀವಗಳ ಜೊತೆ ಚೆಲ್ಲಾಟ ನಡೆಸುತ್ತಿರುತ್ತಾರೆ.
~ಕಲ್ಪನ
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ಕಲ್ಪನಾ ಅವರೇ,
ಮನುಷ್ಯರಾಗಿರುವುದರಿಂದ ನಾವೆಲ್ಲ ಕಾಯಿಲೆ ಬೀಳುತ್ತೇವೆ. ಉತ್ತಮ ಚಿಕಿತ್ಸೆ ದೊರೆಯಲಿ ಎಂದು ಬಯಸುವುದು ಖಂಡಿತ ತಪ್ಪಲ್ಲ. ಉಚಿತ ಸೇವೆಯನ್ನಂತೂ ನಾವು ನಿರೀಕ್ಷಿಸುವುದಿಲ್ಲವಲ್ಲ? ಆದರೆ, ದೈಹಿಕ ಅನಿವಾರ್ಯತೆಯನ್ನು ಬಳಸಿಕೊಂಡು ಶೋಷಿಸುವುದಕ್ಕೆ ನನ್ನ ಆಕ್ಷೇಪ ಇದೆ. ಕೇವಲ ತಂದೆಯಾಗಿ ನಾನು ಆ ಲೇಖನ ಬರೆದಿಲ್ಲ. ನನ್ನ ಅನುಭವ ಬಹಳಷ್ಟು ಜನರಿಗೆ ಆಗಿರುತ್ತದೆ ಎಂಬ ಪ್ರಜ್ಞೆ ಆ ಬರವಣಿಗೆಗೆ ಕಾರಣ.
ಅಮೆರಿಕದಲ್ಲಿ ಚಿಕಿತ್ಸೆಗೂ ವಿಮೆಗೂ ಹತ್ತಿರದ ನಂಟಿರುವುದನ್ನು ಕೇಳಿ ಬಲ್ಲೆ. ಮಾನವೀಯ ಚಿಕಿತ್ಸೆ ಎಲ್ಲರಿಗೂ ದೊರೆಯುವಂತಾಗಲಿ ಎಂಬುದೇ ನನ್ನ ಆಸೆ. ವೈದ್ಯರೂ ಅಂತಹ ಮನಃಸ್ಥಿತಿ ಬೆಳೆಸಿಕೊಳ್ಳಲಿ ಎಂಬುದೇ ಲೇಖನದ ಆಶಯ.
- ಚಾಮರಾಜ ಸವಡಿ
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ನನ್ನ ಬ್ಲಾಗ್ 'ತಿಳಿಗೊಳದ ತಳ' ಓದಿದೀರಾ? ಯಾಕೊ ಯಾರೂ ಪ್ರತಿಕ್ರೀಯಿಸುತ್ತಿಲ್ಲ.
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ಸುಲಿಗೆಯ ಜೊತೆಗೆ ಅವರ ನಿರ್ಲಕ್ಷ್ಯವು ಇತ್ತೀಚೆಗೆ ತುಂಬ ಜಾಸ್ತಿಯಾಗಿದೆ. ನನ್ನ ಅಕ್ಕನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದಾಗ ನೋವು ತುಂಬ ಬರುತ್ತೆ, ಆದ್ದರಿಂದ ಸಿಸೇರಿಯನ್ (ಆಪರೇಟ್) ಮಾಡುತ್ತೇವೆ. ನಿಮಗ ನೋವು ಕೂಡ ಇರುವುದಿಲ್ಲ ಅಂತ ಬಗೆ ಬಗೆಯಾಗಿ ಹೇಳಿದ್ರು, ಅವಳು ಅದಕ್ಕೆ ವಿರೋಧಿಸಿ ನಾನು ಬೇರೆ ಆಸ್ಪತ್ರೆಗೆ ಹೋಗುತ್ತೀನಿ ಅಂತ ಹೇಳ್ದ್ಮೇಲೆ ಸುಮ್ಮನಾದರು. ನಮ್ಮ ತಂದಗೆ ವೈದ್ಯರು ಮಾಡಿದ ನಿರ್ಲಕ್ಷ್ಯವನ್ನು ನಾನು ಜೀವನ ಪರ್ಯಂತ ನೆನಪಿಸಿಕೊಳ್ಳಬೇಕು. ಆಗೊಮ್ಮೆ ಈಗೊಮ್ಮೆ ಕಾಣುವ ಒಳ್ಳೆ ವೈದ್ಯರಿಂದ ಅವರು ಬದುಕುಳಿದರು.ನನಗೆ ಮೂಡ್ ಬಂದಾಗ ಈ ಘಟನೆಯನ್ನು ಬ್ಲಾಗ್ನಲ್ಲಿ ಬರೆಯುತ್ತೇನೆ.
ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
ದಯವಿಟ್ಟು ನಿಮಗೆ ಬೇಗ ಬರೆಯುವ ಮೂಡ್ ಬರಲಿ. ಆ ಘಟನೆ ಓದಲು ನಾನು ಕಾತರನಾಗಿದ್ದೇನೆ.
- ಚಾಮರಾಜ ಸವಡಿ