ಸಂಬಂಧಗಳು! ಸಂಬಂಧಗಳು!

ಸಂಬಂಧಗಳು! ಸಂಬಂಧಗಳು!

ಈಚೆಗೆ ಏನೋ ಯೋಚಿಸುತ್ತಾಗ ಕನ್ನಡದಲ್ಲಿ ಹತ್ತಿರದ ಸಂಬಂಧಗಳನ್ನು ತೋರಿಸುವ ಪದಗಳನ್ನು ನೋಡುತ್ತಿದ್ದಾಗ ಹೊಳೆದಿದ್ದಿದು:
 
ಕನ್ನಡದಲ್ಲಿ ಗಂಡು ಸಂಬಂಧಗಳಿಗಿರುವ ಪದಗಳನ್ನು ನೋಡಿ:- ಅಪ್ಪ, ಅಣ್ಣ, ತಮ್ಮ, ಮೈದುನ, ಮಾವ, ಚಿಕ್ಕಪ್ಪ, ಗಂಡ, ಮಗ, ಅಜ್ಜ - ಇವೆಲ್ಲವೂ ’ಅ’ಕಾರದಲ್ಲಿ ಕೊನೆಗೊಳ್ಳುತ್ತವೆ.ಇನ್ನು ಹೆಣ್ಣು ಸಂಬಂಧಿಗಳಿಗೆ ತಂಗಿ, ನಾದಿನಿ, ಓರಗಿತ್ತಿ , ಹೆಂಡತಿ, ನೆಗೆಣ್ಣಿ, ಚಿಕ್ಕಿ (ಚಿಕ್ಕಮ್ಮನಿಗೆ) - ಇವೆಲ್ಲವೂ ಇಕಾರದಲ್ಲಿ ಮುಗಿಯುತ್ತವೆ. ಎಲ್ಲವೂ ಹೀಗೇ ಇದ್ದರೆ ಎಷ್ಟು ಸೊಗಸಲ್ಲವೇ ? ಕನ್ನಡವನ್ನು ಕಲಿಯುವವರಿಗೆ, ಕನ್ನಡ ಒಂದೇ ಏಕೆ, ಯಾವ ಭಾಷೆಯನ್ನಾದರೂ ಕಲಿಯುವವರಿಗೆ ಇಂತಹ ಸರಳವಾದ ಕಟ್ಟುಪಾಡುಗಳು ಇದ್ದರೆ ಎಷ್ಟು ಸಲೀಸು ಅಂತ ಅನ್ನಿಸೋದೇನೋ ನಿಜ. 
 
ಆದರೆ ನಾವು ಬಯಸಿದ್ದೊಂದಾದರೆ ದೈವ ಬಗೆದದ್ದೊಂದು ಅನ್ನೋಲ್ವೇ? ಹಾಗೆ ಒಂದೇ ತೊಂದರೆ -  ಅಮ್ಮ, ಅಕ್ಕ, ಮಗಳು, ಅತ್ತಿಗೆ, ಅತ್ತೆ, ಮಗಳು, ದೊಡ್ಡಮ್ಮ - ಇಂತಹ ಹೆಣ್ಣು ಸಂಬಂಧಿ ಪದಗಳು, ಈ ನಿಯಮಕ್ಕೆ ಹೊಂದೋಲ್ವಲ್ಲ? ಅದೇನೋ ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು ಅನ್ನೋ ತರಹ ಆಯ್ತು, ಅಲ್ವೇ?
 
ಅದರಿಂದೇನಾಯ್ತು? ಠರಾವು ಹೊರಡಿಸೋಣ, ಈಗ ಇಂಥದ್ದೇಕೇನೂ ಕೊರತೆ ಇಲ್ಲವಲ್ಲ?
 
ಇನ್ನು ಮೇಲೆ ಅಮ್ಮ, ಅಕ್ಕ, ಮಗಳು, ಅತ್ತಿಗೆ, ದೊಡ್ಡಮ್ಮ ಇಂತಹ ಸಂಬಂಧಗಳನ್ನ  ಅಮ್ಮಿ, ಅಕ್ಕಿ, ಮಗಿ, ಅತ್ತಿಗಿ, ಅತ್ತಿ, ದೊಡ್ಡಿ ಎಂದೇ ಕರೆಯಬೇಕು - ಅಂದ ಹೇಳಿದ್ರಾಯ್ತಪ್ಪ. ಇನ್ನು ಹೇಗಿದ್ದರೂ, ಅತ್ತಿಗಿ, ಅತ್ತಿ ಇವೆಲ್ಲ ಉತ್ತರ ಕರ್ನಾಟಕದಲ್ಲಿ ಈಗಾಗಲೇ ಬಳಕೆಯಲ್ಲಿದ್ದೇ ಇವೆ. ಇನ್ನು ಮುಸ್ಲಿಮರು ತಾಯಿಯನ್ನು ಅಮ್ಮಿ ಅಂತಲೇ ಕರೆಯುತ್ತಾರೆ. ಆದ್ದರಿಂದ ಪರವಾಗಿಲ್ಲ! ಅವರ ಬೆಂಬಲ ಸಿಕ್ಕೇ ಸಿಕ್ಕುತ್ತೆ. ಇನ್ನು ಕನ್ನಡವನ್ನು ಸುಲಭ ಮಾಡಬೇಕು, ಇದರಲ್ಲಿರೋ ಬೇಡದ ಅಕ್ಷರಗಳನ್ನ ತೆಗೀಬೇಕು ಅಂತ ಒಂದೇ ಸಮ ಹೇಳ್ತಾ ಇರೋವ್ರೂ ಎಷ್ಟೋ ಜನರಿದ್ದಾರೆ. ಅವರಿಂದ ಬೆಂಬಲ ಸಿಕ್ಕೋದೂ ಖಾತ್ರಿಯೇ.
 
ಹಿಂದಿ ತಮಿಳು ತೆಲುಗು ಮೊದಲಾದ ಮಂದಿ ತುಂಬಿರುವ ಮಹಾನಗರಗಳಲ್ಲಿ ಇದು ಒಂದು ಹೊಸ ಕ್ರಾಂತಿಯನ್ನೇ ತಂದೀತು. ಪಾಪ, ಬೇರೆ ಭಾಷೆಯವರಾದರೂ ಎಷ್ಟು ಹೊಸಹೊಸ ಭಾಷೆಗಳನ್ನು ಕಲಿತುಕೊಳ್ಳಲು ಸಾಧ್ಯ? ನಾವಾದರೂ ಅದನ್ನು ಸುಲಭ ಮಾಡಿಕೊಟ್ಟರೆ ಅವರು ಕನ್ನಡವನ್ನೂ ಅಪ್ಪಿಕೊಂಡಾರು, ಒಪ್ಪಿಕೊಂಡಾರು? ನಾವು ನಮ್ಮ ಭಾಷೆಯನ್ನು  ಹೇಗೆ ಹೇಗೋ ಇಟ್ಟುಕೊಂಡೂ, ಬೇರೆಯವರಿಗೆ ಎಷ್ಟೆಲ್ಲ ತೊಂದರೆ ಕೊಡ್ತೀವಿ ಅನ್ನೋದು ಮನವರಿಕೆ ಆಯ್ತು, ಅಲ್ವಾ? 
 
ತಡೆ ಏಕೆ? ಬೇಗ ಈ ಕಂಪ್ಯೂಟರ್ ಮುಂದಿಂದ ಎದ್ದು ಹೋಗಿ ನಿಮ್ಮ ಅಮ್ಮಿ , ಅಕ್ಕಿ ಅಥವಾ ಮಗಿ, ಯಾರು ಹತ್ತಿರದಲ್ಲಿದ್ದಾರೋ, ಅವರಿಗೆ ಈ ಶುಭ ಸಮಾಚಾರ ತಿಳಿಸಿ!
 
-ಹಂಸಾನಂದಿ
 
ಕೊ: ನನಗೆ ತಲೆಗಿಲೆ ಕೆಟ್ಟಿದೆಯೋ ಅನ್ನುವ ಯೋಚನೆ ಬಂದಿದ್ದರೆ ಅದನ್ನು ಕೂಡಲೇ ಮನಸ್ಸಿನ ಮೂಲೆಯಿಂದ ಕಿತ್ತು ಕಾಕಿ. ಅದರ ಬದಲು ಒಮ್ಮೆ "ಎಣಿಕೆ ಕ್ರಮ ಹೀಗಾದರೆ ಸರಿಯಲ್ಲವೇ" ಎಂದು ಗೂಗಲಿಸಿ ನೋಡಿ! 
 
ಕೊ.ಕೊ: ಇದು ಎರಡು ವರ್ಷಗಳ ಹಿಂದೆ ಬರೆದಿದ್ದು ಅಂತ  ಫೇಸ್ ಬುಕ್ ನೆನಪಿಸಿತು.  ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಇಲ್ಲಿಯೂ ಬರೆದೆ. 
 
ಕೊ.ಕೊ.ಕೊ: ಇದರಿಂದ ನಿಮ್ಮ ಸಂಬಂಧಿಗಳ ನಡುವೆ ಮನಸ್ತಾಪವಾದರೆ ನಾನು ಜವಾಬ್ದಾರನಲ್ಲ ! 
 
ಚಿತ್ರಕೃಪೆ:www.kaverionline.org
 

Rating
No votes yet

Comments